ADVERTISEMENT

ಆಳ-ಅಗಲ | ಗಿಗ್ ಕಾರ್ಮಿಕರು: ತ್ವರಿತ ಸೇವೆ, ಬಸವಳಿದ ಬದುಕು

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 0:25 IST
Last Updated 14 ಜನವರಿ 2026, 0:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕ್ರಿಸ್‌ಮಸ್ ಹಬ್ಬದಂದು ಮತ್ತು ಹೊಸ ವರ್ಷದ ಆಚರಣೆಯ ವೇಳೆ (2025 ಡಿ.31) ಇ–ಕಾಮರ್ಸ್‌ ವಲಯದಲ್ಲಿ ತೊಡಗಿಕೊಂಡಿರುವ ಕಾರ್ಮಿಕರು (ಗಿಗ್‌ ಕಾರ್ಮಿಕರು) ರಾಷ್ಟ್ರವ್ಯಾಪಿ ಹೋರಾಟಕ್ಕೆ ಮುಂದಾಗಿದ್ದರು. ಉತ್ತಮ ವೇತನ, ಸುರಕ್ಷಿತ ಕೆಲಸದ ವಾತಾವರಣ, ಸಾಮಾಜಿಕ ಭದ್ರತಾ ಸೌಲಭ್ಯ ನೀಡುವುದು, 10 ನಿಮಿಷಗಳಲ್ಲಿ ಗ್ರಾಹಕರಿಗೆ ಸರಕು ಪೂರೈಸುವುದನ್ನು ನಿಲ್ಲಿಸುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮುಷ್ಕರಕ್ಕೆ ಇಳಿದಿದ್ದರು. ಕೆಲವು ನಗರಗಳಲ್ಲಿ ಮಾತ್ರ ಮುಷ್ಕರ ಯಶಸ್ವಿಯಾಗಿತ್ತು. ಹೊಸ ವರ್ಷದ ವ್ಯಾಪಾರಕ್ಕೆ ಧಕ್ಕೆಯಾಗದಿರಲಿ ಎಂದು ಕೆಲವು ಕ್ವಿಕ್–ಕಾಮರ್ಸ್ ಕಂಪನಿಗಳು ಕಾರ್ಮಿಕರ ವೇತನದಲ್ಲಿ ಅಲ್ಪ ಹೆಚ್ಚಳ ಮಾಡಿದ್ದವು.

ತ್ವರಿತವಾಗಿ ಅಂದರೆ 10ರಿಂದ 30 ನಿಮಿಷಗಳಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಅಥವಾ ಅವರು ಇದ್ದಲ್ಲಿಗೇ ಸರಕುಗಳನ್ನು ಪೂರೈಸುವ ಉದ್ಯೋಗದಲ್ಲಿ ತೊಡಗಿರುವ ಕೋಟಿಗೂ ಹೆಚ್ಚು ಮಂದಿ ಗಿಗ್ ಕಾರ್ಮಿಕರು ದೇಶದಲ್ಲಿದ್ದಾರೆ. ಇ–ಕಾಮರ್ಸ್ ವಲಯದಲ್ಲಿ ಕ್ವಿಕ್ ಕಾಮರ್ಸ್ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಬ್ಲಿಂಕಿಟ್, ಸ್ವಿಗ್ಗಿ, ಇನ್‌ಸ್ಟಾಮಾರ್ಟ್, ಜೆಪ್ಟೊ, ಬಿಗ್ ಬ್ಯಾಸ್ಕೆಟ್ ಸೇರಿದಂತೆ ಹಲವು ಕಂಪನಿಗಳು ಇಂಥ ಸೇವೆಯನ್ನು ಒದಗಿಸುತ್ತಿವೆ. ಮಳೆ, ಗಾಳಿ, ಬಿಸಿಲು ಮುಂತಾದ ವ್ಯತಿರಿಕ್ತ ಸನ್ನಿವೇಶಗಳಲ್ಲಿಯೂ ಗಿಗ್ ಕಾರ್ಮಿಕರು ಅತ್ಯಂತ ವೇಗವಾಗಿ ಸರಕುಗಳನ್ನು ಪೂರೈಸಲು ಸಾಹಸವನ್ನೇ ಮಾಡುತ್ತಿದ್ದಾರೆ. ನಗರಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವ ಸಂದರ್ಭಗಳಲ್ಲಿ ಅವರು ಭಾರಿ ಒತ್ತಡ ಎದುರಿಸುತ್ತಾರೆ. ತ್ವರಿತ ಸೇವೆ ಒದಗಿಸುವುದಕ್ಕಾಗಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಬೇಕಾಬೆಟ್ಟಿ ದ್ವಿಚಕ್ರವಾಹನಗಳನ್ನು ಓಡಿಸುವುದು, ಅಪಘಾತಕ್ಕೀಡಾದ ಉದಾಹರಣೆಗಳು ಇವೆ. ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರಲ್ಲಿ ಡೆಲಿವರಿ ಬಾಯ್‌ಗಳ ಸಂಖ್ಯೆಯೇ ಅಧಿಕವಾಗಿದ್ದು, ಮೂರು ವರ್ಷದಲ್ಲಿ 1.46 ಲಕ್ಷ ಪ್ರಕರಣಗಳು ಅವರ ವಿರುದ್ಧ ದಾಖಲಾಗಿವೆ ಎಂದು ಕಳೆದ ವರ್ಷದ ನವೆಂಬರ್‌ನಲ್ಲಿ ಸಂಚಾರ ಪೊಲೀಸರು ಮಾಹಿತಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.  

ಅಷ್ಟೆಲ್ಲ ಶ್ರಮ ಪಟ್ಟರೂ ತಮಗೆ ಸಿಗುವ ವೇತನ ತೀರಾ ಕಡಿಮೆ. ದಿನಕ್ಕೆ 12ರಿಂದ 16 ಗಂಟೆ ದುಡಿದರೂ ದುಡಿಮೆ ಸಾವಿರದ ಆಸುಪಾಸಿನಲ್ಲಿಯೇ ಇರುತ್ತದೆ ಎನ್ನುವುದು ಅವರ ಅಳಲು. ಗಿಗ್ ಕಾರ್ಮಿಕರ ದುಡಿಮೆಯಲ್ಲಿ ಒಂದು ಪಾಲು ವಾಹನದ ಪೆಟ್ರೋಲ್‌ಗೆ ಮೀಸಲಿಡಬೇಕು. ಜತೆಗೆ, ಮಳೆ, ಗಾಳಿ ತಡೆಯಲು ರೈನ್‌ ಕೋಟ್ ಇತ್ಯಾದಿ ಕೊಂಡುಕೊಳ್ಳಬೇಕು. ಇಂಥ ಹಲವು ವೆಚ್ಚಗಳನ್ನು ಅವರು ಕೈಯಿಂದಲೇ ಭರಿಸಬೇಕು. ಹೀಗೆ ತಿಂಗಳು ಪೂರ್ತಿ ದುಡಿದ ಹಣ ಬೈಕ್ ರಿಪೇರಿ, ಫೋನ್ ರಿಪೇರಿ ಇತ್ಯಾದಿಗಳಿಗೆ ವೆಚ್ಚವಾದ ಉದಾಹರಣೆಗಳೂ ಹೇರಳವಾಗಿವೆ. ಒಂದು ಕಡೆ ಅಸುರಕ್ಷಿತ ಕೆಲಸದ ವಾತಾವರಣ. ಮತ್ತೊಂದು ಕಡೆ ಕಂಪನಿಗಳ ಕಡೆಯಿಂದಾಗಲಿ, ಸರ್ಕಾರದ ಕಡೆಯಿಂದಾಗಲಿ ತಮಗೆ ಯಾವ ಸೌಲಭ್ಯಗಳೂ ಸಿಗುತ್ತಿಲ್ಲ. ವೈದ್ಯಕೀಯ ವಿಮೆ, ಇಎಸ್‌ಐ, ಪಿಎಫ್ ಸೌಲಭ್ಯಗಳನ್ನು ಕಲ್ಪಿಸಬೇಕು ಎನ್ನುವುದು ಅವರ ಬೇಡಿಕೆ. ಕೇಂದ್ರ ಸರ್ಕಾರ ಹಾಗೂ ಕೆಲವು ರಾಜ್ಯ ಸರ್ಕಾರಗಳು ಗಿಗ್‌ ಕಾರ್ಮಿಕರನ್ನು ಈಗ ಸಾಮಾಜಿಕ ಭದ್ರತಾ ಯೋಜನೆಗಳ ವ್ಯಾಪ್ತಿಗೆ ಸೇರಿಸಿದ್ದರೂ, ಅವರಿಗೆ ಅದರ ಪ್ರಯೋಜನ ಸಿಕ್ಕಿಲ್ಲ. 

ADVERTISEMENT

ಗಿಗ್ ಕಾರ್ಮಿಕರು ಯಾರು?

ಪ್ಲಾಟ್‌ಫಾರ್ಮ್ (ಆ್ಯಪ್‌) ಆಧಾರಿತ ಸೇವೆಗಳಾದ ಸ್ವಿಗ್ಗಿ, ಜೊಮಾಟೊ, ಜೆಪ್ಟೊ, ಓಲಾ, ಉಬರ್‌, ಇ–ಕಾಮರ್ಸ್‌ ಸಂಸ್ಥೆಗಳಾದ ಅಮೆಜಾನ್‌, ಪ್ಲಿಪ್‌ಕಾರ್ಟ್‌, ಬಿಗ್‌ ಬ್ಯಾಸ್ಕೆಟ್‌ ಮತ್ತಿತರ ಕ್ಷೇತ್ರಗಳಲ್ಲಿ ಪೂರ್ಣಕಾಲಿಕ ಅಥವಾ ಅರೆಕಾಲಿಕ ಡೆಲಿವರಿ ನೌಕರರಾಗಿ ಕಾರ್ಯ ನಿರ್ವಹಿಸುತ್ತಿರುವವರು

ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ಕಾನೂನು

ಗಿಗ್‌ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವುದಕ್ಕಾಗಿ ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳು ಕಾನೂನನ್ನು ರೂಪಿಸಿವೆ.   

ರಾಜ್ಯದಲ್ಲಿ ‘ಕರ್ನಾಟಕ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್‌ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ–2025’ಗೆ ಕಳೆದ ವರ್ಷದ ಆಗಸ್ಟ್‌ನಲ್ಲಿ ವಿಧಾನಮಂಡಲ ಅಂಗೀಕಾರ ನೀಡಿತ್ತು. ಇದು ಕಾನೂನು ಕೂಡ ಆಗಿದೆ.

ಇದರಡಿ ಗಿಗ್‌ ಕಾರ್ಮಿಕರು ಕೂಡ ಭವಿಷ್ಯ ನಿಧಿ, ಅಪಘಾತ ವಿಮೆ ಸೌಲಭ್ಯ, ವಸತಿ, ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ, ಕಾರ್ಮಿಕ ಕೌಶಲಾಭಿವೃದ್ಧಿ, ಅಂತ್ಯಸಂಸ್ಕಾರ ಧನ ಸಹಾಯ ಸೌಲಭ್ಯಕ್ಕೆ ಅರ್ಹರಾಗಲಿದ್ದಾರೆ. ಇದಕ್ಕಾಗಿ ಪ್ರತಿ ವಹಿವಾಟಿನ ಮೇಲೆ ಶೇ 1ರಿಂದ ಶೇ 2 ಮೀರದಂತೆ ಕ್ಷೇಮಾಭಿವೃದ್ಧಿ ಶುಲ್ಕವನ್ನು ಸರ್ಕಾರ ಸಂಗ್ರಹಿಸಲಿದೆ. 

ನಿಧಿ ಸಂಗ್ರಹಣೆ, ನಿರ್ವಹಣೆ ಹಾಗೂ ಫಲಾನುಭವಿಗಳಿಗೆ ಮತ್ತು ಅವರ ಅವಲಂಬಿತರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳ ‘ಕರ್ನಾಟಕ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್‌ ಕಾರ್ಮಿಕ ಕಲ್ಯಾಣ ಮಂಡಳಿ’ ಸ್ಥಾಪಿಸಲಾಗುವುದು ಎಂದೂ ಸರ್ಕಾರ ಹೇಳಿತ್ತು. ಆದರೆ ಮಂಡಳಿ ಸ್ಥಾಪನೆ ಇನ್ನೂ ಆಗಿಲ್ಲ.  

ರಾಜಸ್ಥಾನ: ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಕಾನೂನು ರೂಪಿಸಿದ ಮೊದಲ ರಾಜ್ಯ ರಾಜಸ್ಥಾನ. 2023ರಲ್ಲೇ ಕಾನೂನು ಜಾರಿಗೆ ಬಂದಿದ್ದರೂ ಅನುಷ್ಠಾನವಾಗಿಲ್ಲ. ಹೊಸ ಸರ್ಕಾರ ಬಂದ ನಂತರ ಈ ಕಾನೂನು ನನೆಗುದಿಗೆ ಬಿದ್ದಿದೆ

ಬಿಹಾರ: ಕಳೆದ ವರ್ಷ ಬಿಹಾರದಲ್ಲೂ ಪ್ಲಾಟ್‌ಫಾರ್ಮ್‌ ಆಧಾರಿತ ಗಿಗ್ ಕಾರ್ಮಿಕರ (ನೋಂದಣಿ, ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆಗೆ ಶಾಸನ ಸಭೆ ಅಂಗೀಕಾರ ನೀಡಿದೆ. ಇದರ ಅಡಿಯಲ್ಲಿ ಪಿಂಚಣಿ, ವಿಮೆ, ಅಪಘಾತ ವಿಮೆ ಸೇರಿದಂತೆ ವಿವಿಧ ಸೌಲಭ್ಯಗಳು ಗಿಗ್‌ ಕಾರ್ಮಿಕರಿಗೆ ಲಭ್ಯವಿವೆ. ಆದರೆ, ಅನುಷ್ಠಾನ ನಿಧಾನವಾಗಿದೆ. 

ಜಾರ್ಖಂಡ್‌:  ಕಳೆದ ವರ್ಷದ ಆಗಸ್ಟ್‌ನಲ್ಲಿ ಜಾರ್ಖಂಡ್‌ ವಿಧಾನಸಭೆಯು ಪ್ಲಾಟ್‌ಫಾರ್ಮ್‌ ಆಧಾರಿತ ಗಿಗ್‌ ಕಾರ್ಮಿಕರ (ನೋಂದಣಿ ಮತ್ತು ಕಲ್ಯಾಣ) ಮಸೂದೆಯನ್ನು ಅಂಗೀಕರಿಸಿತ್ತು. ಡಿಸೆಂಬ್‌ 19ರಂದು ರಾಜ್ಯಪಾಲರೂ ಮಸೂದೆಗೆ ಸಹಿ ಹಾಕಿದ್ದರು. ಕಾಯ್ದೆಯು ಕಡ್ಡಾಯ ನೋಂದಣಿ, ಕನಿಷ್ಠ ವೇತನ ಹಾಗೂ ಇತರ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಗಿಗ್‌ ಕಾರ್ಮಿಕರಿಗೆ ನೀಡುತ್ತದೆ. 

ಸೌಲಭ್ಯಕ್ಕೆ 90 ದಿನ ಕೆಲಸ ಕಡ್ಡಾಯ 

ಕಳೆದ ವರ್ಷದ ಬಜೆಟ್‌ನಲ್ಲಿ ದೇಶದಲ್ಲಿರುವ ಗಿಗ್‌ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಲಾಗಿತ್ತು. ‘ಇ–ಶ್ರಮ್‌ ಪೋರ್ಟಲ್‌ನಲ್ಲಿ ಅವರ ನೋಂದಣಿಗೆ ಅವಕಾಶ ನೀಡುವುದರ ಜೊತೆಗೆ, ಎಲ್ಲ ಕಾರ್ಮಿಕರಿಗೂ ಗುರುತಿನ ಚೀಟಿ ಹಾಗೂ ಪ್ರಧಾನಮಂತ್ರಿ ಆರೋಗ್ಯ ಯೋಜನೆಯ ಅಡಿಯಲ್ಲಿ ಆರೋಗ್ಯ ಸೇವೆಯನ್ನು ನೀಡಲಾಗುವುದು’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದರು. 

ಕಾರ್ಮಿಕ ಸಂಹಿತೆ ವ್ಯಾಪ್ತಿಗೆ: ಅಸಂಘಟಿತ ವಲಯದಲ್ಲಿ ಬರುವ ಗಿಗ್‌ ಕಾರ್ಮಿಕರನ್ನು ಕೇಂದ್ರ ಸರ್ಕಾರವು ಕಳೆದ ವರ್ಷದ ನವೆಂಬರ್‌ನಲ್ಲಿ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳಲ್ಲಿ ಒಂದಾದ ಸಾಮಾಜಿಕ ಭದ್ರತೆ ಕುರಿತ ಸಂಹಿತೆ –2020 ವ್ಯಾಪ್ತಿಗೆ ಸೇರಿಸಲಾಗಿದೆ. 

ಗಿಗ್‌ ಕಾರ್ಮಿಕರು ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಪಡೆಯಬೇಕಾದರೆ ಅವರು ಆರ್ಥಿಕ ವರ್ಷವೊಂದರಲ್ಲಿ ನಿರ್ದಿಷ್ಟ ಕಂಪನಿಯಲ್ಲಿ ಕನಿಷ್ಠ 90 ದಿನ ಕೆಲಸ ಮಾಡಬೇಕು ಎಂದು ಕೇಂದ್ರದ ಹೊಸ ಕರಡು ನಿಯಮ ಹೇಳುತ್ತದೆ.

ನೋಂದಣಿ ಕಡಿಮೆ

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಇ–ಶ್ರಮ್‌ ಪೋರ್ಟಲ್‌ನಲ್ಲಿ ನೋಂದಣಿಗೆ ಗಿಗ್‌ ಕಾರ್ಮಿಕರಿಗೆ ಅವಕಾಶ ನೀಡಿದ್ದರೂ ರಾಷ್ಟ್ರ ಮಟ್ಟದಲ್ಲಿ 2025ರ ಡಿ. 2ರವರೆಗೆ 5.14 ಲಕ್ಷ ಮತ್ತು ಕರ್ನಾಟಕದಲ್ಲಿ 17,124 ಮಂದಿ ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ‌.

ಗೋಯಲ್ ಹೇಳಿದ್ದೇನು?

ತ್ವರಿತ ಸೇವೆ ಆಧಾರಿತ ಗಿಗ್‌ ಮಾದರಿಯು ಕಾರ್ಮಿಕರಿಗೆ ಹೆಚ್ಚು ಒತ್ತಡ ಹೇರುವುದಿಲ್ಲ ಎನ್ನುವುದು ಗಿಗ್‌ ಉದ್ಯಮಿಗಳ ವಾದ. 

ಇತ್ತೀಚೆಗೆ ಇದೇ ವಿಚಾರದ ಬಗ್ಗೆ ಮಾತನಾಡಿದ್ದ ಜೊಮಾಟೊ ಮತ್ತು ಬ್ಲಿಂಕಿಟ್‌ನ ಮಾಲೀಕತ್ವ ಹೊಂದಿರುವ ಎಟೆರ್ನಲ್‌ ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್‌ ಗೋಯಲ್‌, ‘ಸಮಯದಲ್ಲಿ ಮಾಡಬಹುದಾದ ಹೊಂದಾಣಿಕೆ ಮತ್ತು ಗಿಗ್‌ ಕಾರ್ಮಿಕರಿಗೆ ಕಂಪನಿಗಳು ನೀಡುವ ಸೌಲಭ್ಯಗಳು ಹಲವು ಕಾರ್ಮಿಕರಿಗೆ ಭರವಸೆದಾಯಕ ಆದಾಯದ ಮೂಲವಾಗಿದೆ’ ಎಂದು ಹೇಳಿದ್ದರು. 

‘2025ರಲ್ಲಿ ಜೊಮಾಟೊ ಮತ್ತು ಬ್ಲಿಂಕಿಟ್‌ಗಳು ವಿತರಣೆ ಪಾಲುದಾರರ (ಗಿಗ್‌ ಕಾರ್ಮಿಕರು) ವಿಮಾ ಸೌಲಭ್ಯಕ್ಕಾಗಿ ₹100 ಕೋಟಿ ವ್ಯಯಿಸಿವೆ. ಕಳೆದ ವರ್ಷ ಇವರ ಒಂದು ಗಂಟೆಯ ಸರಾಸರಿ ಗಳಿಕೆ (ಟಿಪ್ಸ್‌ ಹೊರತುಪಡಿಸಿ) ₹102 ಇತ್ತು. 2024ರಲ್ಲಿ ಅದು ₹92 ಆಗಿತ್ತು’ ಎಂದು ಗೋಯಲ್‌ ಹೇಳಿದ್ದರು. 

ಅವರ ಪ್ರಕಾರ, ‘ದಿನಕ್ಕೆ 10 ಗಂಟೆ, ತಿಂಗಳಿಗೆ 26 ದಿನ ದುಡಿದರೆ ತಿಂಗಳಿಗೆ ₹26,500 ಸಂಪಾದಿಸಬಹುದು. ಇಂಧನ ಮತ್ತು ನಿರ್ವಹಣಾ ವೆಚ್ಚ (ಶೇ 20) ಕಳೆದರೆ, ತಿಂಗಳಿಗೆ ಅವರ ಬಳಿ ₹21 ಸಾವಿರ ಇರುತ್ತದೆ.’ 

ಆಧಾರ: ಪಿಟಿಐ, ಪಿಐಬಿ, ಸಂಸತ್ತಿನಲ್ಲಿ ಸಚಿವರ ಉತ್ತರ, ಏಷ್ಯನ್‌ ಲೇಬರ್‌ ರಿವೀವ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.