
ಪ್ರಾತಿನಿಧಿಕ ಚಿತ್ರ
ಎಐ ಚಿತ್ರ: ಕಣಕಾಲಮಠ
ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳ ಬದಲಾಗಿ ಖಾಸಗಿ ಶಾಲೆಗಳಿಗೆ ಸೇರಿಸಲು ಇಚ್ಛಿಸುತ್ತಾರೆ ಎಂಬ ಮಾತು ಕೇಳಿಬರುತ್ತಿರುವ ಹೊತ್ತಿನಲ್ಲಿ ರಾಜ್ಯದ ಎಲ್ಲ ಶೈಕ್ಷಣಿಕ ಜಿಲ್ಲೆಗಳಲ್ಲಿ 14,149 ಪೋಷಕರನ್ನು ಸಂಪರ್ಕಿಸಿ ನಡೆಸಲಾದ ಅಧ್ಯಯನವು ಇದಕ್ಕೆ ಭಿನ್ನವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ
ಪೋಷಕರು ಸರ್ಕಾರಿ ಶಾಲೆಗಳನ್ನು ಬಿಟ್ಟು ಖಾಸಗಿ ಶಾಲೆಗಳತ್ತ ವಾಲುತ್ತಿದ್ದಾರೆ ಎಂಬ ಚರ್ಚೆಯು ಸಾರ್ವಜನಿಕ ಶಿಕ್ಷಣ ವಲಯದಲ್ಲಿ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಶಾಲಾ ದಾಖಲಾತಿಯನ್ನು ಗಮನಿಸಿದಾಗ ಮೇಲ್ನೋಟಕ್ಕೆ ಇದು ಸತ್ಯ ಎಂದು ಕಂಡುಬರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಜತೆಗೆ, ಮಾಧ್ಯಮ ವರದಿಗಳು, ಶಿಕ್ಷಣ ಅಧಿಕಾರಿಗಳು ಮತ್ತು ಸಾರ್ವಜನಿಕ ಚರ್ಚೆಗಳಲ್ಲಿ ಆಗಾಗ್ಗೆ ಈ ಮಾತು ಕೇಳಿಬರುತ್ತಲೇ ಇರುತ್ತದೆ. ಹೀಗೆ ಪದೇ ಪದೇ ಹೇಳಿ, ಕೇಳಿ ಇದೊಂದು ಸಾಬೀತಾದ ಸತ್ಯದಂತೆ ಭಾಸವಾಗುತ್ತಿದೆ.
ಆದರೆ, ಕರ್ನಾಟಕದ 34 ಶೈಕ್ಷಣಿಕ ಜಿಲ್ಲೆಗಳಾದ್ಯಂತ 14,149 ಪೋಷಕರನ್ನು ಒಳಗೊಂಡ ಅಧ್ಯಯನವು ಈ ನಿರೂಪಣೆಯು ವಾಸ್ತವವಲ್ಲ ಎಂದು ಹೇಳುತ್ತದೆ. ಹೆಚ್ಚಿನ ಪೋಷಕರು ಇನ್ನೂ ಸರ್ಕಾರಿ ಶಾಲೆಗಳನ್ನೇ ಬಯಸುತ್ತಿದ್ದಾರೆ ಮತ್ತು ಕೆಲವು ನಿರ್ದಿಷ್ಟ ಪರಿಸ್ಥಿತಿಗಳ ಒತ್ತಡದಿಂದ ಮಾತ್ರ ಖಾಸಗಿ ಶಾಲೆಗಳ ಮೊರೆಹೋಗುತ್ತಿದ್ದಾರೆ ಎಂದು ಈ ಅಧ್ಯಯನದ ಫಲಿತಾಂಶಗಳು ಸ್ಪಷ್ಟವಾಗಿ ತಿಳಿಸುತ್ತವೆ.
ದತ್ತಾಂಶವು ಸ್ಪಷ್ಟವಾಗಿದೆ; ತಿಂಗಳಿಗೆ ₹10,000ಕ್ಕಿಂತ ಕಡಿಮೆ ಆದಾಯವಿರುವ ಕುಟುಂಬಗಳು ಸರ್ಕಾರಿ ಶಾಲೆಗಳತ್ತ ಬಲವಾದ ಒಲವು ತೋರುತ್ತಿವೆ. ಮಧ್ಯಮ ಆದಾಯದ ಕುಟುಂಬಗಳು ಸಹ– ಕೆಲವು ನಿರ್ದಿಷ್ಟ ಆತಂಕಗಳು ಹೆಚ್ಚಾಗಿ ಕಾಡುವವರೆಗೆ– ಸರ್ಕಾರಿ ಶಾಲೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತವೆ. ಉನ್ನತ ಆದಾಯದ ಕುಟುಂಬಗಳು ಮಾತ್ರ ಬಹುತೇಕ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತವೆ. ಪೋಷಕರು ಸರ್ಕಾರಿ ಶಾಲಾ ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂಬ ಕಲ್ಪನೆಯನ್ನು ಈ ಅಂಕಿಅಂಶಗಳು ಸುಳ್ಳಾಗಿಸುತ್ತವೆ. ಬದಲಾಗಿ, ಪೋಷಕರಿಗೆ ಸರ್ಕಾರಿ ಶಾಲಾ ಶಿಕ್ಷಣದ ವ್ಯವಸ್ಥೆ ಮೇಲೆ ಇನ್ನೂ ಬಲವಾದ ನಂಬಿಕೆ ಇದೆ; ಆದರೆ ಅದು ಸ್ವಲ್ಪ ದುರ್ಬಲವಾಗಿದೆ ಎಂದು ಅಧ್ಯಯನವು ಹೇಳುತ್ತದೆ.
ಪೋಷಕರು ಖಾಸಗಿ ಶಾಲೆಗಳನ್ನು ಆಯ್ಕೆ ಮಾಡಲು ಇರುವ ಪ್ರಬಲ ಕಾರಣಗಳಲ್ಲಿ ಒಂದು, ಇಂಗ್ಲಿಷ್ ಮಾಧ್ಯಮದ ಬೋಧನೆಗೆ ಇರುವ ಬೇಡಿಕೆ. ಈ ಆಯ್ಕೆಯು ಕೇವಲ ಸ್ಥಾನಮಾನ ಅಥವಾ ತೋರಿಕೆಯ ಆಧಾರದ ಮೇಲೆ ಇರುವುದಿಲ್ಲ. ಭವಿಷ್ಯದ ಅವಕಾಶಗಳಿಗೆ ಇಂಗ್ಲಿಷ್ ಅತ್ಯಗತ್ಯ ಎನ್ನುವುದು ಪೋಷಕರ ಅಭಿಪ್ರಾಯವಾಗಿದೆ. ಸರ್ಕಾರಿ ಶಾಲೆಗಳ ಹಲವು ಅಂಶಗಳ ಬಗ್ಗೆ ತೃಪ್ತರಾಗಿರುವ ಪೋಷಕರು ಕೂಡ ಇಂಗ್ಲಿಷ್ ಮಾಧ್ಯಮದ ಆಯ್ಕೆಗಳು ಲಭ್ಯವಿಲ್ಲದಿದ್ದರೆ ಶಾಲೆ ಬದಲಾಯಿಸಬೇಕು ಎಂದು ಭಾವಿಸುತ್ತಾರೆ.
ಮತ್ತೊಂದು ಅಂಶವೆಂದರೆ, ಬೋಧನೆಯ ಗುಣಮಟ್ಟದ ಬಗೆಗಿನ ಗ್ರಹಿಕೆ. ಸರ್ಕಾರಿ ಶಾಲಾ ಶಿಕ್ಷಕರು ಉತ್ತಮ ಅರ್ಹತೆ ಹೊಂದಿದ್ದರೂ ನಿಯಮಿತ ತರಬೇತಿ ಪಡೆಯುತ್ತಿದ್ದರೂ ಮತ್ತು ರಾಷ್ಟ್ರೀಯ ಮೌಲ್ಯಮಾಪನಗಳಲ್ಲಿ ಉತ್ತಮ ಸಾಧನೆ ತೋರುತ್ತಿದ್ದರೂ ಖಾಸಗಿ ಶಾಲೆಗಳಲ್ಲಿ ಉತ್ತಮ ಬೋಧನೆ ಇದೆ ಎಂದು ಅನೇಕ ಪೋಷಕರು ನಂಬಿದ್ದಾರೆ. ಪರಿಸ್ಥಿತಿ ಏಕೆ ಹೀಗಿದೆ ಎಂದರೆ, ಸರ್ಕಾರಿ ಶಾಲೆಗಳ ಸಾಮರ್ಥ್ಯಗಳು ಪೋಷಕರಿಗೆ ಗೋಚರಿಸುತ್ತಿಲ್ಲ. ಅವರು ತಮ್ಮ ಕಣ್ಣಿಗೆ ಕಾಣುತ್ತಿರುವುದರ ಆಧಾರದಲ್ಲಿ ಮಾತ್ರವೇ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದಾರೆ; ಅವರು ಸಮಯಪಾಲನೆ, ನೋಟ್‌ಬುಕ್ ಪರಿಶೀಲನೆ, ಹೋಮ್‌ವರ್ಕ್, ತರಗತಿಯಲ್ಲಿನ ಸುವ್ಯವಸ್ಥೆ ಮತ್ತು ನಿಯಮಿತ ಸಂವಹನವನ್ನು ಹೆಚ್ಚಾಗಿ ಗಮನಿಸುತ್ತಾರೆ.
ಜನರ ಕಣ್ಣಿಗೆ ಅಷ್ಟಾಗಿ ಕಾಣದ ಸರ್ಕಾರಿ ಶಾಲೆಗಳ ಸಕಾರಾತ್ಮಕ ಅಂಶಗಳನ್ನೂ ಅಧ್ಯಯನವು ದಾಖಲಿಸಿದೆ. ಬಹುತೇಕ ಪೋಷಕರು ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಹೆಚ್ಚು ಪ್ರಶಂಸಿಸುತ್ತಾರೆ. ಕ್ರೀಡಾ ಸೌಲಭ್ಯಗಳು ಮತ್ತು ಅವಕಾಶಗಳನ್ನು ಸಹ ಅವರು ಅಮೂಲ್ಯವೆಂದು ಪರಿಗಣಿಸುತ್ತಾರೆ. ಸರ್ಕಾರಿ ಶಾಲೆಗಳು ಪಠ್ಯಕ್ರಮವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುತ್ತವೆ ಎಂದು ಮೂರನೇ ಎರಡರಷ್ಟು ಪೋಷಕರು ಹೇಳಿದ್ದಾರೆ. ಶಾಲೆಯ ಸಾಮೀಪ್ಯ ಮತ್ತು ಸುಲಭ ಲಭ್ಯತೆಯು ತಮ್ಮ ನಿರ್ಧಾರದ ಮೇಲೆ ಪ್ರಭಾವ ಬೀರಿದೆ ಎಂದು ಶೇ 34ರಷ್ಟು ಪೋಷಕರು ತಿಳಿಸಿದ್ದಾರೆ. ತರಬೇತಿ ಪಡೆದ ಶಿಕ್ಷಕರ ಉಪಸ್ಥಿತಿ ಮತ್ತು ಸುರಕ್ಷಿತ ವಾತಾವರಣ ಸಹ ಪೋಷಕರ ಗಮನ ಸೆಳೆದಿದೆ. ಈ ಸಕಾರಾತ್ಮಕ ಅಂಶಗಳ ಹೊರತಾಗಿಯೂ ಸರ್ಕಾರಿ ಶಾಲೆಗಳನ್ನು ಗುಣಮಟ್ಟದ ಸಾರ್ವಜನಿಕ ಸೇವೆಗಳ ಸಂಸ್ಥೆ ಎನ್ನುವುದಕ್ಕಿಂತ ಹೆಚ್ಚಾಗಿ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಭಾಗವಾಗಿರುವ ಸಂಸ್ಥೆಗಳೆಂದೇ ಪರಿಗಣಿಸಲಾಗುತ್ತದೆ.
ಶಿಕ್ಷಕರ ಕೊರತೆ: ಶಿಕ್ಷಕರ ಲಭ್ಯತೆಯು ಸರ್ಕಾರಿ ಶಾಲೆಗಳ ಮತ್ತೊಂದು ಪ್ರಮುಖ ಸಮಸ್ಯೆಯಾಗಿದೆ. ಶಿಕ್ಷಕರ ಕೊರತೆ, ಆಗಾಗ್ಗೆ ಶಿಕ್ಷಕರ ವರ್ಗಾವಣೆ ಅಥವಾ ಶಿಕ್ಷಕರ ನೇಮಕಾತಿಯಲ್ಲಿನ ಅನಿಶ್ಚಿತ ಸ್ಥಿತಿಯ ಬಗ್ಗೆ ಹತ್ತರಲ್ಲಿ ಏಳು ಪೋಷಕರು ಚಿಂತಿತರಾಗಿದ್ದಾರೆ. ಸರ್ಕಾರಿ ಶಿಕ್ಷಕರು ಗಮನಾರ್ಹ ಪ್ರಮಾಣದ ಬೋಧಕೇತರ ಕೆಲಸಗಳನ್ನು ನಿರ್ವಹಿಸುತ್ತಾರೆ. ಇದು ಬೋಧನೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹಲವರು ನಂಬಿದ್ದಾರೆ.
ಶೇ 71ರಷ್ಟು ಪೋಷಕರು ಬೋಧನೆಯ ಗುಣಮಟ್ಟವನ್ನು ಸಮಸ್ಯೆಯೆಂದು ಪಟ್ಟಿ ಮಾಡಿದ್ದಾರೆ. ಹೆಚ್ಚಿನವರಿಗೆ ಬೋಧನಾ ತಂತ್ರಗಳನ್ನು ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಅವರು ಶಾಲಾ ಕಟ್ಟಡ, ತರಗತಿಯ ಸುವ್ಯವಸ್ಥೆ, ಹೋಮ್‌ವರ್ಕ್ ಮತ್ತು ಶಿಸ್ತಿನಂತಹ ಮೇಲ್ನೋಟದ ಅಂಶಗಳ ಮೇಲೆ ಅವಲಂಬಿತರಾಗುತ್ತಾರೆ. ಈ ದೃಷ್ಟಿಗೋಚರ ಸುಳಿವುಗಳು, ಅವು ಯಾವಾಗಲೂ ಆಳವಾದ ಶೈಕ್ಷಣಿಕ ಗುಣಮಟ್ಟವನ್ನು ಪ್ರತಿಬಿಂಬಿಸದಿದ್ದರೂ ನಂಬಿಕೆಯನ್ನು ರೂಪಿಸುತ್ತಿವೆ.
ದೈನಂದಿನ ಕಾರ್ಯನಿರ್ವಹಣೆಯೂ ಮುಖ್ಯವಾಗಿದೆ. ಖಾಸಗಿ ಶಾಲೆಗಳು ವೇಗವಾಗಿ ಸ್ಪಂದಿಸುತ್ತವೆ, ನಿಯಮಿತವಾಗಿ ಮಾಹಿತಿಯನ್ನು ಹಂಚಿಕೊಳ್ಳುತ್ತವೆ ಮತ್ತು ಸಂವಹನವನ್ನು ಸರಳವಾಗಿ ಇರಿಸುತ್ತವೆ ಎಂದು ಪೋಷಕರು ಭಾವಿಸುತ್ತಾರೆ. ಈ ವರ್ತನೆಯು ಪೋಷಕರನ್ನು ಸೆಳೆಯುತ್ತಿದ್ದು, ಇತರ ಪರಿಗಣನೆಗಳಿಗಿಂತ ಹೆಚ್ಚು ಮಹತ್ವದ್ದಾಗಿದೆ.
ಸುಮಾರು ಅರ್ಧದಷ್ಟು ಪೋಷಕರು, ಸರ್ಕಾರಿ ಶಾಲೆಗಳಲ್ಲಿ ಸಿಬಿಎಸ್‌ಇ ಅಥವಾ ಐಸಿಎಸ್‌ಇ ಆಯ್ಕೆಗಳ ಕೊರತೆಯು ತಮ್ಮ ನಿರ್ಧಾರದ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಿದ್ದಾರೆ. ಅನೇಕ ಪೋಷಕರು ಈ ಬೋರ್ಡ್‌ಗಳು ಎನ್‌ಸಿಇಆರ್‌ಟಿ ಪಠ್ಯಕ್ರಮವನ್ನೇ ಅನುಸರಿಸಿದರೂ ಅವುಗಳು ಉತ್ತಮ ಅವಕಾಶಗಳನ್ನು ನೀಡುತ್ತವೆ ಎಂದು ಭಾವಿಸುತ್ತಾರೆ. ಈ ಸಂಬಂಧದ ಜನರ ಗೊಂದಲ, ಆತಂಕವನ್ನು ನಿವಾರಿಸುವ ಕೆಲಸ ನಡೆದಿಲ್ಲ.
ಖಾಸಗಿ ಶಾಲೆಗಳಲ್ಲಿ ತಮ್ಮ ಮಾತಿಗೆ ಬೆಲೆ ಇದೆ ಎಂದು ಪೋಷಕರು ಭಾವಿಸುತ್ತಾರೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಪೋಷಕರ ಮಾತಿಗೆ ಎಷ್ಟರ ಮಟ್ಟಿಗೆ ಬೆಲೆ ಇದೆ ಎಂಬುದರ ಬಗ್ಗೆ ಅನೇಕರಿಗೆ ಅನಿಶ್ಚಿತತೆಯಿದೆ. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಂತಹ (ಎಸ್‌ಡಿಎಂಸಿ) ವ್ಯವಸ್ಥೆಗಳು ಅಸ್ತಿತ್ವದಲ್ಲಿದ್ದರೂ ಅವು ಯಾವಾಗಲೂ ಸಕ್ರಿಯ ಅಥವಾ ಅರ್ಥಪೂರ್ಣ ವೇದಿಕೆಗಳಾಗಿ ತೋರುತ್ತಿಲ್ಲ. ಪೋಷಕರಿಗೆ ತಮ್ಮ ಮಾತು ಕೇಳುವವರಿಲ್ಲ ಎಂದು ಅನಿಸಿದಾಗ, ಸರ್ಕಾರಿ ಶಾಲೆಗಳ ಕುರಿತ ಅವರ ನಂಬಿಕೆ ದುರ್ಬಲಗೊಳ್ಳುತ್ತದೆ.
ಪೋಷಕರು ಖಾಸಗಿ ಶಾಲೆಗಳನ್ನು ಏಕೆ ಆಯ್ಕೆ ಮಾಡುತ್ತಾರೆ ಎಂಬುದರ ಸುತ್ತಲಿನ ಕೆಲವು ಗ್ರಹಿಕೆಗಳು ಬಹುತೇಕ ತಪ್ಪಾಗಿ ಅರ್ಥೈಸಲ್ಪಟ್ಟಿವೆ ಎಂಬುದನ್ನು ಸಹ ಅಧ್ಯಯನ ಹೇಳುತ್ತದೆ. ಕೇವಲ ಸಣ್ಣ ಪ್ರಮಾಣದ ಪೋಷಕರು ಖಾಸಗಿ ಶಾಲಾ ಶಿಕ್ಷಣವನ್ನು ಸ್ಥಾನಮಾನದ ಆಯ್ಕೆ ಎಂದು ಪರಿಗಣಿಸುತ್ತಾರೆ. ಆದರೆ, ಹೆಚ್ಚಿನವರು ಇದನ್ನು ಒಪ್ಪುವುದಿಲ್ಲ. ಖಾಸಗಿ ಶಾಲೆಗಳತ್ತ ವಾಲುವುದು ಈ ಪೋಷಕರಿಗೆ ಇಮೇಜ್‌ಗಿಂತ ಹೆಚ್ಚಾಗಿ ವಾಸ್ತವಿಕ ಅಂಶಗಳ ವಿಚಾರವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಪೋಷಕರು ವಾಸ್ತವಿಕ ಪರಿಸ್ಥಿತಿಗಳ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಅಧ್ಯಯನದ ಫಲಿತಾಂಶಗಳು ತೋರಿಸುತ್ತವೆ. ಅವರು ಸರ್ಕಾರಿ ಶಾಲೆಗಳ ಸಾಮರ್ಥ್ಯಗಳನ್ನು ಗುರುತಿಸುತ್ತಾರೆ. ಆದರೆ ಸ್ಥಿರತೆ, ಭಾಷಾ ಅವಕಾಶಗಳು, ಸ್ಪಂದನೆ ಮತ್ತು ಬೋಧನೆಯ ಬಗ್ಗೆ ಚಿಂತಿತರಾಗಿದ್ದಾರೆ. ದೈನಂದಿನ ಜೀವನದಲ್ಲಿ ಸ್ಥಿರ ಮತ್ತು ಮೇಲ್ನೋಟದ ಅಂಶಗಳ ಆಧಾರದಲ್ಲಿ ಅವರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
ಕರ್ನಾಟಕದ ಸರ್ಕಾರಿ ಶಾಲೆಗಳು ಸಾರ್ವಜನಿಕ ವಿಶ್ವಾಸವನ್ನು ಉಳಿಸಿಕೊಂಡಿವೆ ಎಂದು ಅಧ್ಯಯನವು ತೋರಿಸುತ್ತದೆ. ಆದರೆ, ಜನರ ಗ್ರಹಿಕೆ, ನಂಬಿಕೆ ಮತ್ತು ಮೇಲ್ನೋಟಕ್ಕೆ ಕಾಣುವ ಕೆಲವು ವಿಚಾರಗಳಲ್ಲಿ ವ್ಯತ್ಯಾಸಗಳಿವೆ. ಸೂಕ್ತ ಕ್ರಮಗಳನ್ನು ಅಳವಡಿಸಿಕೊಂಡು ಇವುಗಳನ್ನು ಪರಿಹರಿಸುವ ಮೂಲಕ ರಾಜ್ಯದಾದ್ಯಂತ ಪೋಷಕರಲ್ಲಿ ವಿಶ್ವಾಸವನ್ನು ಬಲಪಡಿಸಬಹುದು. ಪೋಷಕರು ಸರ್ಕಾರಿ ಶಾಲೆಗಳನ್ನು ತೊರೆಯುತ್ತಿದ್ದಾರೆ ಎಂಬ ಜನಪ್ರಿಯ ನಂಬಿಕೆಯು ಮೇಲ್ನೋಟಕ್ಕೆ ಕಾಣುವುದಕ್ಕಿಂತ ಹೆಚ್ಚು ಸಂಕೀರ್ಣವಾಗಿದೆ. ಸರ್ಕಾರಿ ವ್ಯವಸ್ಥೆಯು ಪೋಷಕರಲ್ಲಿ ವಿಶ್ವಾಸ ಮೂಡಿಸುವ ಈ ಕೆಲಸವನ್ನು ಸ್ಪಷ್ಟವಾಗಿ ಮತ್ತು ಸತತವಾಗಿ ಮಾಡುವುದೇ ಎನ್ನುವುದು ನಮ್ಮ ಮುಂದೆ ಇರುವ ಪ್ರಶ್ನೆಯಾಗಿದೆ.
ಸರ್ಕಾರಿ ಶಾಲೆಗಳ ಸುಧಾರಣೆ ಹೇಗೆ?
ಈ ಅಧ್ಯಯನವು ಸರ್ಕಾರಿ ಶಾಲೆಗಳನ್ನು ಬಲಪಡಿಸಲು ಮತ್ತು ಪೋಷಕರ ವಿಶ್ವಾಸವನ್ನು ಹೆಚ್ಚಿಸಲು ಕೈಗೊಳ್ಳಬಹುದಾದ ನಿರ್ದಿಷ್ಟ ಕ್ರಮಗಳನ್ನು ಸೂಚಿಸುತ್ತದೆ.
ಮೊದಲನೆಯದು, ಇಂಗ್ಲಿಷ್ ಮಾಧ್ಯಮದ ಬೇಡಿಕೆಗೆ ಪ್ರಾಯೋಗಿಕ ವಿಧಾನವನ್ನು ಅನುಸರಿಸುವುದು. ಭಾಷೆಯ ಆಯ್ಕೆಯನ್ನು ಸಾಂಸ್ಕೃತಿಕ ಸಂಘರ್ಷವಾಗಿ ಬಿಂಬಿಸುವ ಬದಲು, ರಾಜ್ಯ ಸರ್ಕಾರವು ಆರಂಭಿಕ ತರಗತಿಗಳಲ್ಲಿ ಗಣಿತ ಮತ್ತು ವಿಜ್ಞಾನ ಪಠ್ಯಪುಸ್ತಕಗಳನ್ನು ದ್ವಿಭಾಷಾ ರೂಪದಲ್ಲಿ ನೀಡುವುದನ್ನು ಪರಿಗಣಿಸಬಹುದು. ಇದು ಮಕ್ಕಳಿಗೆ ಕನ್ನಡದಲ್ಲಿ ಪರಿಕಲ್ಪನಾ ಸ್ಪಷ್ಟತೆಯನ್ನು ನೀಡುತ್ತದೆ. ಅದೇ ಸಮಯದಲ್ಲಿ ಇಂಗ್ಲಿಷ್ ಪರಿಭಾಷೆಯನ್ನೂ ಪರಿಚಯಿಸುತ್ತದೆ. ಪ್ರೌಢಶಾಲೆಯಿಂದ, ವಿಶೇಷವಾಗಿ 9 ಮತ್ತು 10ನೇ ತರಗತಿಗಳಲ್ಲಿ, ಈ ವಿಷಯಗಳನ್ನು ಸಂಪೂರ್ಣವಾಗಿ ಇಂಗ್ಲಿಷ್‌ನಲ್ಲಿ ನೀಡಬಹುದು. ಈ ಹಂತಹಂತದ ವಿಧಾನವು ಪೋಷಕರಿಗೆ ಸರ್ಕಾರಿ ವ್ಯವಸ್ಥೆಯೊಳಗೇ ವಿಶ್ವಾಸಾರ್ಹ ಪರ್ಯಾಯವನ್ನು ಒದಗಿಸುತ್ತದೆ.
ಎರಡನೆಯದು, ಸರ್ಕಾರಿ ಶಾಲೆಗಳ ಸಾಮರ್ಥ್ಯಗಳನ್ನು ಮರುರೂಪಿಸುವುದು. ಉಚಿತ ಶಿಕ್ಷಣ, ಮಧ್ಯಾಹ್ನದ ಬಿಸಿ ಊಟ, ಕ್ರೀಡಾ ಸೌಲಭ್ಯಗಳು, ಸುಲಭ ಲಭ್ಯತೆ ಮತ್ತು ಪಠ್ಯಕ್ರಮ ಪೂರ್ಣಗೊಳಿಸುವುದನ್ನು ಕೇವಲ ಕಲ್ಯಾಣ ಕಾರ್ಯಕ್ರಮದ ಭಾಗವಾಗಿ ನೋಡದೇ, ಗುಣಮಟ್ಟದ ಮಾನದಂಡಗಳಾಗಿ ಪ್ರಸ್ತುತಪಡಿಸಬೇಕು. ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಕಲ್ಯಾಣ ಕಾರ್ಯಕ್ರಮದ ಭಾಗ ಎಂದು ನೋಡಿದಾಗ, ಪೋಷಕರು ಅವುಗಳ ಮೌಲ್ಯವನ್ನು ಕಡಿಮೆ ಅಂದಾಜುಮಾಡುತ್ತಾರೆ. ಉತ್ತಮ ಪೌಷ್ಟಿಕಾಂಶ ಕಾರ್ಯಕ್ರಮವು ಕಲಿಕೆಯನ್ನು ಬೆಂಬಲಿಸುತ್ತದೆ. ಸೌಲಭ್ಯಗಳ ಸುಲಭ ಲಭ್ಯತೆಯು ಸುರಕ್ಷತೆ ಮತ್ತು ಹಾಜರಾತಿಯನ್ನು ಖಚಿತಪಡಿಸುತ್ತದೆ. ಪಠ್ಯಕ್ರಮ ಪೂರ್ಣಗೊಳಿಸುವಿಕೆಯು ಶಿಸ್ತನ್ನು ಪ್ರತಿಬಿಂಬಿಸುತ್ತದೆ. ಇವು ಸವಲತ್ತುಗಳಲ್ಲ, ಪ್ರಯೋಜನಗಳು.
ಶಿಕ್ಷಕರ ಲಭ್ಯತೆ ವಿಚಾರದಲ್ಲಿ ಸುಧಾರಣೆಯ ಅಗತ್ಯವಿದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಮುಖ್ಯ. ವರ್ಷವಿಡೀ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಅಷ್ಟೇ ಮುಖ್ಯ. ಅತಿಥಿ ಶಿಕ್ಷಕರನ್ನು ವರ್ಷ ಪ್ರಾರಂಭವಾಗುವ ಮೊದಲೇ ನೇಮಿಸಲಾಗಿದೆಯೇ ಎಂದು ಖಚಿತಪಡಿಸುವುದು ಮತ್ತು ಅರ್ಹತಾ ಪರೀಕ್ಷೆಗಳಲ್ಲಿ (ಟಿಇಟಿ) ತೇರ್ಗಡೆಯಾದ ಅಭ್ಯರ್ಥಿಗಳಿಗೆ ಆದ್ಯತೆ ನೀಡುವುದರಿಂದ ಸ್ಪಷ್ಟ ವ್ಯತ್ಯಾಸವನ್ನು ತರಬಹುದು. ಶಾಲಾ ಮಟ್ಟದಲ್ಲಿ ಶಿಕ್ಷಕರ ಲಭ್ಯತೆಯ ಬಗ್ಗೆ ಸಾರ್ವಜನಿಕ ಪ್ರಕಟಣೆ ನೀಡುವ ಮೂಲಕ ಪೋಷಕರಿಗೆ ಪ್ರಗತಿಯನ್ನು ಮನದಟ್ಟು ಮಾಡಿಸಬಹುದು.
ದಿನನಿತ್ಯ ಜನರ ಕಣ್ಣಿಗೆ ಕಾಣುವ ಅಂಶಗಳು ಅವರ ಗ್ರಹಿಕೆಯನ್ನು ಬಲವಾಗಿ ರೂಪಿಸುತ್ತವೆ. ಸ್ವಚ್ಛ ತರಗತಿಗಳು, ಸಮರ್ಪಕ ಶೌಚಾಲಯಗಳು ಮತ್ತು ಮೂಲಭೂತ ಬೋಧನಾ ಸಾಮಗ್ರಿಗಳು ಪೋಷಕರಿಗೆ ಮುಖ್ಯ. ಸಿಎಸ್‌ಆರ್ (ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ) ನಿಧಿಯು ಕೆಲವೇ ಶಾಲೆಗಳಿಗೆ ಸಿಗುವ ಬದಲಿಗೆ ಹಲವು ಶಾಲೆಗಳಲ್ಲಿ ಕನಿಷ್ಠ ಮೂಲಸೌಕರ್ಯ ಕಲ್ಪಿಸಲು ಬಳಕೆ ಯಾಗಬೇಕು.
ಸಂವಹನವು ಕೂಡ ಸುಧಾರಣೆ ಕಾಣಬೇಕಾದ ಮತ್ತೊಂದು ಕ್ಷೇತ್ರವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಅಸ್ತಿತ್ವದಲ್ಲಿರುವ ಉಪಕ್ರಮಗಳು ಮತ್ತು ವಿದ್ಯಾರ್ಥಿ ಸಾಧನೆಗಳ ಬಗ್ಗೆ ಅನೇಕ ಪೋಷಕರಿಗೆ ಮಾಹಿತಿಯೇ ಇರುವುದಿಲ್ಲ. ಸಮುದಾಯ ಸಭೆಗಳ ಮೂಲಕ ಪೋಷಕರ ಗ್ರಹಿಕೆಯನ್ನು ಮರು ರೂಪಿಸ ಬಹುದು.
ಎಲ್ಲದರಲ್ಲೂ ಪೋಷಕರ ಪಾಲ್ಗೊಳ್ಳುವಿಕೆ ಮುಖ್ಯ. ಔಪಚಾರಿಕ ಪೋಷಕ–ಶಿಕ್ಷಕ ಸಭೆಗಳ ಹೊರತಾಗಿ, ಅನುಕೂಲಕರವಾದ ಪೋಷಕ–ಶಿಕ್ಷಕ ಸಭೆ ರೂಪಿಸಬಹುದು. ಪೋಷಕರಿಗೆ ಸೂಕ್ತ ತರಬೇತಿ ಮತ್ತು ಹೆಚ್ಚು ರಚನಾತ್ಮಕ ಒಳಗೊಳ್ಳುವಿಕೆಯ ಮೂಲಕ ಎಸ್‌ಡಿಎಂಸಿಗಳನ್ನು ಸಶಕ್ತಗೊಳಿಸಬಹುದು.
ಕರ್ನಾಟಕದ ಸರ್ಕಾರಿ ಶಾಲೆಗಳು ಸಾರ್ವಜನಿಕ ವಿಶ್ವಾಸವನ್ನು ಉಳಿಸಿಕೊಂಡಿವೆ ಎಂದು ಅಧ್ಯಯನವು ತೋರಿಸುತ್ತದೆ. ಆದರೆ, ಜನರ ಗ್ರಹಿಕೆ, ನಂಬಿಕೆ ಮತ್ತು ಮೇಲ್ನೋಟಕ್ಕೆ ಕಾಣುವ ಕೆಲವು ವಿಚಾರಗಳಲ್ಲಿ ವ್ಯತ್ಯಾಸಗಳಿವೆ. ಸೂಕ್ತ ಕ್ರಮಗಳನ್ನು ಅಳವಡಿಸಿಕೊಂಡು ಇವುಗಳನ್ನು ಪರಿಹರಿಸುವ ಮೂಲಕ ರಾಜ್ಯದಾದ್ಯಂತ ಪೋಷಕರಲ್ಲಿ ವಿಶ್ವಾಸವನ್ನು ಬಲಪಡಿಸಬಹುದು. ಪೋಷಕರು ಸರ್ಕಾರಿ ಶಾಲೆಗಳನ್ನು ತೊರೆಯುತ್ತಿದ್ದಾರೆ ಎಂಬ ಜನಪ್ರಿಯ ನಂಬಿಕೆಯು ಮೇಲ್ನೋಟಕ್ಕೆ ಕಾಣುವುದಕ್ಕಿಂತ ಹೆಚ್ಚು ಸಂಕೀರ್ಣವಾಗಿದೆ. ಸರ್ಕಾರಿ ವ್ಯವಸ್ಥೆಯು ಪೋಷಕರಲ್ಲಿ ವಿಶ್ವಾಸ ಮೂಡಿಸುವ ಈ ಕೆಲಸವನ್ನು ಸ್ಪಷ್ಟವಾಗಿ ಮತ್ತು ಸತತವಾಗಿ ಮಾಡುವುದೇ ಎನ್ನುವುದು ನಮ್ಮ ಮುಂದೆ ಇರುವ ಪ್ರಶ್ನೆಯಾಗಿದೆ.
(ಲೇಖಕರು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ದಿಸೆಯಲ್ಲಿ ಕೆಲಸ ಮಾಡುತ್ತಿರುವ ಇಂಡಿಯಾ ಲಿಟರೆಸಿ ಪ್ರಾಜೆಕ್ಟ್‌ನ ಭಾಗವಾಗಿದ್ದಾರೆ)