
ಹುಬ್ಬಳ್ಳಿಯ ಚನ್ನಮ್ಮ ವೃತ್ತದ ಸುತ್ತ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯು ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರ. ಚನ್ನಮ್ಮ ವೃತ್ತವು ಹುಬ್ಬಳ್ಳಿಯ ಹೃದಯ ಭಾಗ. ಅತ್ಯಂತ ವೈಶಿಷ್ಟ್ಯಪೂರ್ಣವಾದ ಈ ವೃತ್ತವು ಪ್ರಸ್ತುತ ತನ್ನ ಮಹತ್ವ ಮತ್ತು ಅಂದ ಕಳೆದುಕೊಂಡು ಕಳಾಹೀನವಾಗಿರುವುದಲ್ಲದೇ, ಜನರು ಹಾಗೂ ವಾಹನ ಸವಾರರಿಗೆ ಸಮಸ್ಯೆಯೂ ಆಗಿ ಪರಿಣಮಿಸಿದೆ. ಅದಕ್ಕೆ ಕಾರಣ, ಚನ್ನಮ್ಮ ವೃತ್ತದಲ್ಲಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ. ನಾಲ್ಕು ವರ್ಷದ ಹಿಂದೆ ಆರಂಭವಾದ ಮೇಲ್ಸೇತುವೆ ಕಾಮಗಾರಿ ವರ್ಷದ ಹಿಂದೆಯೇ ಪೂರ್ಣಗೊಳ್ಳಬೇಕಿತ್ತು; ಆದರೆ, ಹಾಗಾಗಿಲ್ಲ. ಇದು ಉತ್ತರ ಕರ್ನಾಟಕದ ಅಭಿವೃದ್ಧಿ ಕಾಮಗಾರಿಗಳ ಸ್ಥಿತಿಗತಿಗೆ ಹಿಡಿದ ಕನ್ನಡಿಯಾಗಿದೆ ಎನ್ನುವ ವಿಶ್ಲೇಷಣೆಗಳು ಕೇಳಿಬಂದಿವೆ
‘ಆಕಸ್ಮಿಕ’ ಚಿತ್ರಕ್ಕಾಗಿ ಡಾ.ರಾಜಕುಮಾರ್ ಹಾಡಿರುವ ‘ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು..’ ಕನ್ನಡಿಗರ ಅತ್ಯಂತ ಪ್ರೀತಿಯ ಗೀತೆಗಳಲ್ಲೊಂದಾಗಿದೆ. ಅದನ್ನು ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಚಿತ್ರೀಕರಿಸಲಾಗಿತ್ತು. 1993ರಲ್ಲಿ ‘ಆಕಸ್ಮಿಕ’ ಬಿಡುಗಡೆಯಾದ ನಂತರ ಚನ್ನಮ್ಮ ವೃತ್ತವು ಅಪಾರ ಜನಪ್ರಿಯತೆ ಗಳಿಸಿತ್ತು. ಆನಂತರ ಅನೇಕ ಸಿನಿಮಾಗಳು ಇಲ್ಲಿ ಚಿತ್ರೀಕರಣಗೊಂಡಿವೆ. ಚನ್ನಮ್ಮ ವೃತ್ತ ಮತ್ತು ಅಲ್ಲಿರುವ ವೀರರಾಣಿ ಚನ್ನಮ್ಮ ವಿಗ್ರಹವು ‘ಐಕಾನ್’ಗಳಾಗಿ ಬೆಳೆದಿವೆ.
ಧಾರವಾಡವೂ ಸೇರಿದಂತೆ ಈ ಭಾಗದ ಹಲವು ಜಿಲ್ಲೆಗಳ ಜನರ ಪ್ರತ್ಯಕ್ಷ ಮತ್ತು ಪರೋಕ್ಷ ವ್ಯಾಪಾರ, ವ್ಯವಹಾರ, ಸಂಚಾರದ ತಾಣವಾಗಿದ್ದ ಹುಬ್ಬಳ್ಳಿಯ ಚನ್ನಮ್ಮ ವೃತ್ತವು, ನಿರ್ಮಾಣ ಹಂತದ ಮೇಲ್ಸೇತುವೆಯಿಂದ ತನ್ನ ಮಹತ್ವ ಕಳೆದುಕೊಂಡಿರುವುದಷ್ಟೆ ಅಲ್ಲದೇ, ಜನರಿಗೆ ತಲೆನೋವಾಗಿ ಪರಿಣಮಿಸಿದೆ.
ಇತಿಹಾಸದ ಕಾಲದಿಂದಲೂ ವಾಣಿಜ್ಯ ಚಟುವಟಿಕೆಗಳಿಗೆ ಹೆಸರಾದ ಹುಬ್ಬಳ್ಳಿ, ಉತ್ತರ ಕರ್ನಾಟಕದ ಹೆಬ್ಬಾಗಿಲು. ನಗರದಲ್ಲಿ ಜನರ ಓಡಾಟ, ವಾಹನಗಳ ಸಂಖ್ಯೆ ಹೆಚ್ಚಾದಂತೆ ಸಂಚಾರ ದಟ್ಟಣೆಯು ಹೆಚ್ಚುತ್ತಿದೆ. ಇವೆಲ್ಲದಕ್ಕೂ ಪರಿಹಾರವೆಂದು ನಾಲ್ಕು ವರ್ಷದ ಹಿಂದೆ, ಚನ್ನಮ್ಮ ವೃತ್ತವನ್ನು ಕೇಂದ್ರವಾಗಿ ಇಟ್ಟುಕೊಂಡು ಮೇಲ್ಸೇತುವೆ ನಿರ್ಮಾಣದ ಬೃಹತ್ ಯೋಜನೆ ಕೈಗೊಳ್ಳಲಾಯಿತು.
ಕಾಮಗಾರಿಯು 2024ರ ಜೂನ್‌ನಲ್ಲಿ ಮುಗಿಯಬೇಕಿತ್ತು. ಆದರೆ, ಕೆಲಸವು ಆಮೆಗತಿಯಲ್ಲಿ ಸಾಗುತ್ತಿದ್ದು, ಮುಗಿಯಲು ಇನ್ನು ಎರಡು ವರ್ಷವಾದರೂ ಹಿಡಿಯಬಹುದು. ಕೋವಿಡ್, ಕಾರ್ಮಿಕರ ಕೊರತೆ, ಮಳೆ, ಪೊಲೀಸ್ ಪ್ರಕರಣಗಳಿಂದ ವಿಳಂಬವಾಗುತ್ತಿದೆ ಎನ್ನುವ ಕಾರಣಗಳನ್ನು ನೀಡಲಾಗುತ್ತಿದೆ. ಎರಡು ತಿಂಗಳಿನಿಂದ ಈಚೆಗೆ ಕಾಮಗಾರಿ ತುಸು ವೇಗ ಪಡೆದಿದ್ದರೂ, ನಿರೀಕ್ಷಿತ ಗುರಿ ಮುಟ್ಟಿಲ್ಲ.
ಕಾಮಗಾರಿಯಿಂದ ನೀಲಿಜಿನ್ ರಸ್ತೆ, ಕೊಪ್ಪಿಕರ್ ರಸ್ತೆಗಳು ಸಹ ವಾಹನಗಳ ಸಂಚಾರ ದಟ್ಟಣೆಯಿಂದ ಕೂಡಿರುತ್ತವೆ. ವಾಹನಗಳನ್ನು ಪಾರ್ಕ್ ಮಾಡಲು ಸಹ ಜಾಗವಿಲ್ಲದಂತಾಗಿದೆ.
ಮೇಲ್ಸೇತುವೆ ನಿರ್ಮಾಣಕ್ಕೂ ಮುನ್ನ ಹುಬ್ಬಳ್ಳಿ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ದೃಶ್ಯ
ಕಾಮಗಾರಿ ವಿಳಂಬದ ಕುರಿತು ವಾಹನ ಸವಾರರು, ಸಾರ್ವಜನಿಕರು ಹಾಗೂ ವ್ಯಾಪಾರಸ್ಥರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ತಾತ್ಕಾಲಿಕ ಪರಿಹಾರವಾಗಿ ₹7 ಕೋಟಿ ವೆಚ್ಚದ ಡಾಂಬರು ರಸ್ತೆ ನಿರ್ಮಿಸಲು ಚಿಂತನೆ ನಡೆದಿದ್ದು, ತಾತ್ಕಾಲಿಕ ರಸ್ತೆಗೆ ಕೋಟಿಗಟ್ಟಲೆ ಹಣ ವೆಚ್ಚ ಮಾಡುವ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಗೋಕುಲ ರಸ್ತೆಯ ಬನ್ನಿಗಿಡ, ವಾಣಿವಿಲಾಸ ವೃತ್ತ, ಹೊಸೂರು ವೃತ್ತ, ಭಗತ್ ಸಿಂಗ್ ವೃತ್ತ, ಬಸವವನ, ಹಳೇ ಕೋರ್ಟ್ ವೃತ್ತ ಬಳಿ ಕಾಮಗಾರಿ ಶೇ 70ರಷ್ಟು ಮುಕ್ತಾಯವಾಗಿದೆ. ಚನ್ನಮ್ಮ ವೃತ್ತದ ಬಳಿ ರೋಟರ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಮೇಲ್ಸೇತುವೆಗಾಗಿ 30–40 ವರ್ಷದ 99 ಮರಗಳನ್ನು ಕಡಿಯಲಾಗಿದೆ. ಕಾಮಗಾರಿ ವಿಳಂಬದ ಕುರಿತು ವಾಹನ ಸವಾರರು, ಸಾರ್ವಜನಿಕರು ಹಾಗೂ ವ್ಯಾಪಾರಸ್ಥರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ವೈಜ್ಞಾನಿಕವಾಗಿ ಅಧ್ಯಯನ ನಡೆಸದೆ ಯೋಜನೆ ಅನುಷ್ಠಾನಗೊಳಿಸಿದ್ದು ಇಷ್ಟೆಲ್ಲ ಸಮಸ್ಯೆಗಳಿಗೆ ಕಾರಣ ಎನ್ನುವ ಆರೋಪ ಕೇಳಿಬರುತ್ತಿದೆ. ಭೂಸ್ವಾಧೀನಕ್ಕೊಳಗಾದ ಖಾಸಗಿ ಆಸ್ತಿಗಳಿಗೆ ಪರಿಹಾರ ನೀಡಲಾಗಿದೆ. ಆದರೆ, ಸರ್ಕಾರಿ ಆಸ್ತಿಗಳಿಗೆ ಪರಿಹಾರ ಕೇಂದ್ರ ಸರ್ಕಾರ ನೀಡಬೇಕೋ, ರಾಜ್ಯ ಸರ್ಕಾರ ನೀಡಬೇಕೋ ಎನ್ನುವ ಗೊಂದಲವಿದೆ. ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆಗೆ ಸೇರಿದ ಸರ್ಕಾರಿ ಆಸ್ತಿಗಳಿಗೆ ₹62 ಕೋಟಿ ಪರಿಹಾರ ನೀಡಬೇಕಿದೆ.
ಮೇಲ್ಸೇತುವೆ ನಿರ್ಮಾಣ ರಾಜ್ಯ ಸರ್ಕಾರದ ಯೋಜನೆಯಾಗಿದ್ದರೂ ಕೇಂದ್ರ ಸರ್ಕಾರ ವಿಶೇಷ ಅನುದಾನ ನೀಡಿದೆ. ಕಾಮಗಾರಿ ಶೀಘ್ರ ಮುಗಿಸುವುದು ರಾಜ್ಯ ಸರ್ಕಾರದ ಹೊಣೆಪ್ರಲ್ಹಾದ ಜೋಶಿ ಕೇಂದ್ರ ಸಚಿವ
ಬೃಹತ್ ಕಾಮಗಾರಿ ಆಗಿರುವುದರಿಂದ ತುಸು ವಿಳಂಬವಾಗಿದೆ. ಇದೀಗ ಕಾಮಗಾರಿ ವೇಗ ಪಡೆದಿದ್ದು ತ್ವರಿತವಾಗಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆದಿವ್ಯಪ್ರಭು ಜಿಲ್ಲಾಧಿಕಾರಿ ಧಾರವಾಡ
ಮೇಲ್ಸೇತುವೆಯನ್ನು 2026ರ ಮಾರ್ಚ್‌ಲ್ಲಿ ಸಾರ್ವಜನಿಕರಿಗೆ ಮುಕ್ತಗೊಳಿಸಲು ನಿರ್ಧರಿಸಲಾಗಿದೆ. ಶೇ 20ರಷ್ಟು ಕಾಮಗಾರಿ ಮಾತ್ರ ಬಾಕಿಯಿದೆಸತೀಶ ನಾಗನೂರು ಸಹಾಯಕ ಎಂಜಿನಿಯರ್ ರಾಷ್ಟ್ರೀಯ ಹೆದ್ದಾರಿ ಲೋಕೋಪಯೋಗಿ ಇಲಾಖೆ
ಎರಡು–ಮೂರು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಗ್ರಾಹಕರಿಲ್ಲದೆ ಬೇಕರಿ ಅಂಗಡಿಗೆ ಬಾಡಿಗೆ ನೀಡಲು ಕಷ್ಟವಾಗುತ್ತಿದೆನಿಜಗುಣಸ್ವಾಮಿ ಬೇಕರಿ ಅಂಗಡಿ ಮಾಲೀಕ
₹349.49 ಕೋಟಿ ಯೋಜನಾ ವೆಚ್ಚ
3.9 ಕಿ.ಮೀ. ಮೇಲ್ಸೇತುವೆ ಒಟ್ಟು ಉದ್ದ
2021 ಜೂನ್ 4, ಕಾಮಗಾರಿಗೆ ಕಾರ್ಯಾದೇಶ
2024 ಜೂನ್ 4 ಗುತ್ತಿಗೆ ಅವಧಿ ಮುಕ್ತಾಯ
10 ವರ್ಷ ನಿರ್ವಹಣಾ ಅವಧಿ
9222 ಚದರ ಅಡಿ ಮೀಟರ್ ಮೇಲ್ಸೇತುವೆ
₹2.71 ಕೋಟಿ ವೆಚ್ಚ ಇಲೆಕ್ಟ್ರಿಕಲ್ ಕೇಬಲ್ ಸ್ಥಳಾಂತರ
₹2.86 ಕೋಟಿ ವೆಚ್ಚ ನೀರಿನ ಪೈಪ್‌ಲೈನ್ ಸ್ಥಳಾಂತರ
₹1.73 ಲಕ್ಷ ಡಿಪಿಆರ್ ಸಿದ್ಧಪಡಿಸಿದ ಸ್ಪೆಕ್ಟ್ರಂ ಕಂಪನಿಗೆ ನೀಡಿದ ಮೊತ್ತ
18 ಸಾವಿರ ವಾಹನಗಳ ಸಂಚಾರ ಚನ್ನಮ್ಮ ವೃತ್ತದಲ್ಲಿ ಸಂಜೆ ಒಂದು ಗಂಟೆಯಲ್ಲಿ
ಕಾಲಮಿತಿಯಲ್ಲಿ ಕಾಮಗಾರಿ ಮುಗಿಯದ ಕಾರಣ ಚನ್ನಮ್ಮ ವೃತ್ತದ ಸುತ್ತಮುತ್ತಲಿನ ವಾಣಿಜ್ಯ ಚಟುವಟಿಕೆಗಳಿಗೆ ಭಾರಿ ಪೆಟ್ಟು ಬಿದ್ದಿದೆ. ಇದೇ ವರ್ಷ ಏಪ್ರಿಲ್ 19ರಿಂದ 135 ದಿನ (ನಾಲ್ಕೂವರೆ ತಿಂಗಳು) ಚನ್ನಮ್ಮ ವೃತ್ತ ಕೇಂದ್ರವಾಗಿಟ್ಟುಕೊಂಡು ಬಸವವನದಿಂದ ಹಳೇ ಕೋರ್ಟ್ ವೃತ್ತದವರೆಗೂ ವಾಹನಗಳ ಸಂಚಾರ ಬಂದ್ ಮಾಡಿ, ಕಾಮಗಾರಿ ನಡೆಸಲಾಯಿತು. ಆಗಷ್ಟೇ ನಿರ್ಮಾಣವಾಗಿ ಉದ್ಘಾಟನೆಯಾಗಿದ್ದ ಹಳೇ ಬಸ್ ನಿಲ್ದಾಣ ಸಹ ಈ ವೇಳೆ ಬಂದ್ ಆಗಿತ್ತು.
ಹೋಟೆಲ್ , ಆಟೊಮೊಬೈಲ್, ಕೃಷಿ ಯಂತ್ರೋಪಕರಣ ಮಳಿಗೆ, ಬಟ್ಟೆ ಅಂಗಡಿ, ವಸತಿ ಗೃಹ, ಮೊಬೈಲ್ ಮಳಿಗೆ, ಬೇಕರಿ, ಔಷಧ ಅಂಗಡಿಯ ವ್ಯಾಪಾರಸ್ಥರು ನಷ್ಟದ ಹಾದಿಯಲ್ಲಿ ಇದ್ದಾರೆ. ಪ್ರತಿನಿತ್ಯ ನೂರಾರು ಕೋಟಿ ವ್ಯವಹಾರ ನಡೆಯುತ್ತಿತ್ತು. ಕಾಮಗಾರಿ ಆರಂಭವಾದಂದಿನಿಂದ ಶೇ 70ರಷ್ಟು ವ್ಯಾಪಾರ ವಹಿವಾಟು ಕುಂಠಿತವಾಗಿದೆ. ಸಣ್ಣ ವ್ಯಾಪಾರಸ್ಥರು ಅಂಗಡಿಗಳ ಬಾಡಿಗೆ ಹಣ ಸಹ ನೀಡಲಾಗದೆ, ಖಾಲಿ ಮಾಡಿಕೊಂಡು ಹೋಗಿದ್ದಾರೆ ಎಂದು ನವಲೆ ಬಟ್ಟೆ ಅಂಗಡಿ ಮಾಲೀಕ ಉಮೇಶ ನವಲೆ ಅಳಲು ತೋಡಿಕೊಂಡರು.
ಚನ್ನಮ್ಮ ವೃತ್ತಕ್ಕೆ ಭಾರಿ ಮಹತ್ವವಿದೆ. ನಾಲ್ಕು ರಾಷ್ಟ್ರೀಯ ಹೆದ್ದಾರಿಗಳು (ಎನ್‌ಎಚ್-4 ಎರಡು ಕಡೆ, ಎನ್‌ಎಚ್-63, ಎನ್‌ಎಚ್-218) ಮತ್ತು ಮೂರು ರಾಜ್ಯ ಹೆದ್ದಾರಿಗಳು ಈ ವೃತ್ತದ ಮೂಲಕ ಸಾಗಿಹೋಗುತ್ತವೆ. ಸದಾ ಜನಜಂಗುಳಿ, ವಾಹನಗಳ ಸಂಚಾರದಿಂದ ಕೂಡಿರುವ ಈ ವೃತ್ತದ ಮಧ್ಯೆ ಅಶ್ವಾರೂಢ ರಾಣಿ ಚನ್ನಮ್ಮ ಪ್ರತಿಮೆ ಇದೆ. ಇದು ಹುಬ್ಬಳ್ಳಿಯ ಪಾಲಿಗೆ ಶೌರ್ಯ ಮತ್ತು ಹೆಮ್ಮೆಯ ಸಂಕೇತ. ಆದರೆ, ಈಗ ಕಾಮಗಾರಿಯಿಂದ ಪ್ರತಿಮೆ ಕಾಣದಂತಾಗಿದೆ. ವೃತ್ತವು ತನ್ನ ವೈಶಿಷ್ಟ್ಯ ಕಳೆದುಕೊಂಡಿದೆ.
ಕಾಮಗಾರಿ ಪೂರ್ಣಗೊಂಡ ಬಳಿಕ ಚನ್ನಮ್ಮ ಪ್ರತಿಮೆಯನ್ನು ಎತ್ತರಕ್ಕೇರಿಸಿ, ಪ್ರತಿಷ್ಠಾಪಿಸಲಾಗುವುದು ಎಂದು ಹೇಳಲಾಗುತ್ತಿದೆ. ಆದರೆ, ಇದರ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ. ಮೇಲ್ಸೇತುವೆ ಪ್ರಮುಖ ವರ್ತುಲ ಇದೇ ವೃತ್ತ ಆಗಿರುವುದರಿಂದ, ಚನ್ನಮ್ಮ ಪ್ರತಿಮೆ ವರ್ತುಲದ ಮಧ್ಯಭಾಗದಲ್ಲಿ ಇರಲಿದೆ. ಈಗಿನ ಸ್ಥಿತಿಯ ಲೆಕ್ಕಾಚಾರ ಹಾಕಿದರೆ, ಕಾಮಗಾರಿ ಮುಗಿದ ಬಳಿಕ ಪ್ರತಿಮೆಯ ತಲೆಭಾಗ ಮಾತ್ರ ಕಾಣಿಸಲಿದೆ. ‘ಮೊದಲು ಕಾಮಗಾರಿ ಮುಗಿಯಲಿ. ನಂತರ ಅದರ ಬಗ್ಗೆ ನಿರ್ಧರಿಸಿದರಾಯಿತು’ ಎನ್ನುವುದು ಸದ್ಯದ ಲೆಕ್ಕಾಚಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.