ADVERTISEMENT

ಆಳ–ಅಗಲ| ಜಗತ್ತಿನ 4ನೇ ಆರ್ಥಿಕತೆಯತ್ತ ಭಾರತ

​ಪ್ರಜಾವಾಣಿ ವಾರ್ತೆ
Published 28 ಮೇ 2025, 23:30 IST
Last Updated 28 ಮೇ 2025, 23:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
ಭಾರತವು ವಿಶ್ವದ ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯಾಗಿದೆ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಬಿ.ವಿ.ಆರ್.ಸುಬ್ರಹ್ಮಣ್ಯಂ ಅವರು ಪ್ರಕಟಿಸಿದ್ದಾರೆ. ಪ್ರಧಾನಿ ಮೋದಿ ಕೂಡ ಇದೇ ಮಾತನ್ನು ಪುನರಾವರ್ತಿಸಿದ್ದಾರೆ. ಆದರೆ, ವಾಸ್ತವವಾಗಿ ಸುಬ್ರಹ್ಮಣ್ಯಂ ಅವರೇ ಉಲ್ಲೇಖಿಸಿರುವ ಐಎಂಎಫ್‌ನ ಜಾಗತಿಕ ಆರ್ಥಿಕ ಮುನ್ನೋಟ–2025ರ ಪ್ರಕಾರ, ಭಾರತವು ನಾಲ್ಕನೇ ದೊಡ್ಡ ಆರ್ಥಿಕತೆಯ ದೇಶವಾಗುವುದು 2025–26ರ ಆರ್ಥಿಕ ವರ್ಷದ ಅಂತ್ಯಕ್ಕೆ. ಹಲವು ರೀತಿಯ ಜಾಗತಿಕ ವಿದ್ಯಮಾನಗಳು, ಸವಾಲುಗಳ ನಡುವೆಯೂ ಇದೊಂದು ಸಾಧನೆಯೇ. ಆದರೆ, ತಲಾವಾರು ಜಿಡಿಪಿ, ತಲಾ ಆದಾಯದ ವಿಚಾರದಲ್ಲಿ ಭಾರತವು ಹಿಂದುಳಿದಿದ್ದು, ದೇಶದ ಅಭಿವೃದ್ಧಿಯ ಅಸಮಾನತೆಯನ್ನು ಸೂಚಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ  

‘ನಾವು ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯಾಗಿದ್ದೇವೆ. ನಮ್ಮದೀಗ 4 ಲಕ್ಷ ಕೋಟಿ ಡಾಲರ್‌ ಗಾತ್ರದ ಆರ್ಥಿಕತೆ. ಇದು ನನ್ನ ದತ್ತಾಂಶ ಅಲ್ಲ. ಐಎಂಎಫ್‌ನ ದತ್ತಾಂಶ. ಭಾರತವು ಇವತ್ತು ಜಪಾನ್‌ಗಿಂತ ದೊಡ್ಡ ಆರ್ಥಿಕತೆಯಾಗಿದೆ’

– ನಾಲ್ಕು ದಿನಗಳ ಹಿಂದೆ ನೀತಿ ಆಯೋಗದ ಸಿಇಒ ಬಿ.ವಿ.ಆರ್.ಸುಬ್ರಹ್ಮಣ್ಯಂ ಅವರು ಸುದ್ದಿಗೋಷ್ಠಿಯಲ್ಲಿ ನೀಡಿದ ಹೇಳಿಕೆ.  

ಸುಬ್ರಹ್ಮಣ್ಯಂ ಅವರ ಹೇಳಿಕೆಯನ್ನೇ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಗುಜರಾತ್‌ನ ಗಾಂಧಿನಗರದಲ್ಲಿ, ಬುಧವಾರ ದೆಹಲಿಯಲ್ಲಿ ಪುನರಾವರ್ತಿಸಿದ್ದಾರೆ. ಈವರೆಗೂ ನಾಲ್ಕನೇ ಸ್ಥಾನದಲ್ಲಿದ್ದ ಜಪಾನ್‌ ಅನ್ನು ಆರ್ಥಿಕತೆಯಲ್ಲಿ ಭಾರತ ಹಿಂದಿಕ್ಕಿದೆ ಎಂದು ಅವರು ಹೇಳಿದ್ದಾರೆ. 2014ರಲ್ಲಿ ತಾವು ಅಧಿಕಾರಕ್ಕೆ ಬಂದಾಗ ಭಾರತದ ಆರ್ಥಿಕತೆಯು ಜಾಗತಿಕ ಮಟ್ಟದಲ್ಲಿ 11ನೇ ಸ್ಥಾನದಲ್ಲಿತ್ತು. ಅದು ಈಗ ನಾಲ್ಕನೇ ಸ್ಥಾನಕ್ಕೆ ಏರಿದೆ ಎಂದು ಮೋದಿ ಅವರು 11 ವರ್ಷಗಳ ತಮ್ಮ ಸಾಧನೆಯ ಬಗ್ಗೆ ಹೇಳಿಕೊಂಡಿದ್ದಾರೆ.  

ADVERTISEMENT

ಈ ವಿಚಾರದ ಬಗ್ಗೆ ದೇಶದಲ್ಲಿ ಈಗ ಪರ– ವಿರೋಧ ಚರ್ಚೆ ನಡೆಯುತ್ತಿದೆ. ವಾಸ್ತವದಲ್ಲಿ ಭಾರತ ಇನ್ನೂ ನಾಲ್ಕನೇ ಸ್ಥಾನಕ್ಕೆ ಏರಿಲ್ಲ. ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್‌) ಈ ವರ್ಷದ ಏಪ್ರಿಲ್‌ 22ರಂದು ಜಾಗತಿಕ ಆರ್ಥಿಕ ಮುನ್ನೋಟ–2025 ಅನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ಭಾರತವು, ಜಗತ್ತಿನ ಆರ್ಥಿಕತೆಗಳ ಪಟ್ಟಿಯಲ್ಲಿ ಸದ್ಯ ಐದನೇ ಸ್ಥಾನದಲ್ಲಿದೆ. ದೇಶದ ಆರ್ಥಿಕ ಬೆಳವಣಿಗೆ ನಿರೀಕ್ಷೆಯಂತೆ ಸಾಗಿದರೆ, ಈ ಹಣಕಾಸು ವರ್ಷದ ಅಂತ್ಯಕ್ಕೆ ಭಾರತದ ಆರ್ಥಿಕತೆಯ ಗಾತ್ರ (ಜಿಡಿಪಿ ಗಾತ್ರ) ಜಪಾನ್‌ಗಿಂತ ದೊಡ್ಡದಾಗಲಿದೆ. ಆಗ ನಾಲ್ಕನೇ ಸ್ಥಾನಕ್ಕೆ ಏರಲಿದೆ.‌ 

ಐಎಂಎಫ್‌ ಅಂದಾಜಿಸಿರುವ ಪ್ರಕಾರ, ಭಾರತದ ಜಿಡಿಪಿ ಗಾತ್ರ (ಪ್ರಸ್ತುತ ಮಾರುಕಟ್ಟೆ ದರದ ಆಧಾರದಲ್ಲಿ) 2025–26ರ ಅಂತ್ಯದ ಹೊತ್ತಿಗೆ ₹357.49 ಲಕ್ಷ ಕೋಟಿ  (4.187 ಲಕ್ಷಕೋಟಿ ಡಾಲರ್) ಆಗಲಿದೆ. ಇದೇ ಸಮಯಕ್ಕೆ ಜಪಾನ್‌ನ ಜಿಡಿಪಿ ಗಾತ್ರ ₹357.40 ಲಕ್ಷ ಕೋಟಿ ಇರಲಿದೆ. ಅಂದರೆ, ತೀರಾ ಅಲ್ಪ ಅಂತರದಿಂದ ಭಾರತವು ಮೇಲೇರಲಿದೆ. ನೀತಿ ಆಯೋಗದ ಸದಸ್ಯ ಅರವಿಂದ್ ವೀರಮಣಿ ಅವರ ಪ್ರಕಾರ, ಭಾರತವು ಈ ಸಾಧನೆಯನ್ನು 2025ರ ಅಂತ್ಯಕ್ಕೆ ಮಾಡಲಿದೆ.

ಭಾರತವು ಜಾಗತಿಕ ಆರ್ಥಿಕತೆಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಲಿರುವ ಬಗ್ಗೆ ಅಮಿತಾಭ್ ಬಚ್ಚನ್, ಆನಂದ್ ಮಹೀಂದ್ರಾ, ಹರ್ಷ್ ಗೋಯೆಂಕಾ, ಕುನಾಲ್ ಬಹ್ಲ್ ಸೇರಿದಂತೆ ದೇಶದ ಖ್ಯಾತನಾಮರು ಹರ್ಷ ವ್ಯಕ್ತಪಡಿಸಿದ್ದಾರೆ. ‘ನವಭಾರತದ ಪ್ರಾಧಾನ್ಯ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವುದನ್ನು ಇದು ತೋರುತ್ತಿದೆ; ಜಗತ್ತಿನ ಮೂರನೇ ಆರ್ಥಿಕತೆಯಾಗುವ ಮತ್ತು ವಿಕಸಿತ ಭಾರತ–2047ರ ಸಾಧನೆಯ ದಿಸೆಯಲ್ಲಿ ಇದು ನಿರ್ಣಾಯಕ ಹೆಜ್ಜೆಯಾಗಿದೆ’ ಎಂದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹೇಳಿದ್ದಾರೆ.

ಆದರೆ, ಐಎಂಎಫ್ ವರದಿಯ ಬಗ್ಗೆಯೇ ಹಲವರು ಆಕ್ಷೇಪಣೆ ಎತ್ತಿದ್ದಾರೆ. ಭಾರತ ಸರ್ಕಾರ ನೀಡಿರುವ ದತ್ತಾಂಶ ಆಧರಿಸಿ ಐಎಂಎಫ್ ಆರ್ಥಿಕತೆಯ ಅಂದಾಜು ಮಾಡಿದೆಯೇ ಹೊರತು ತಾನೇ ದತ್ತಾಂಶ ಸಂಗ್ರಹಿಸಿಲ್ಲ. ಜತೆಗೆ, ಟ್ರಂಪ್ ಅವರ ತೆರಿಗೆ ಸಂಬಂಧಿ ನೀತಿಗಳಿಂದ ಜಗತ್ತಿನ ವ್ಯಾಪಾರ ವಲಯದಲ್ಲಿ ಭಾರಿ ಅಸ್ಥಿರತೆ ಉಂಟಾಗಿದ್ದು, ಅದು ಮುಂದಿನ ದಿನಗಳಲ್ಲಿ ಯಾವ ದೇಶದ ಆರ್ಥಿಕತೆಯ ಮೇಲೆ ಎಂಥ ಪರಿಣಾಮ ಬೀರಲಿದೆ ಎನ್ನುವುದು ಅನಿಶ್ಚಿತವಾಗಿದೆ. 2008ರಲ್ಲಿ ಆರ್ಥಿಕ ಹಿಂಜರಿತ ಉಂಟಾಗಿದ್ದಾಗ ಐಎಂಎಫ್ ಅಂದಾಜುಗಳು ಸುಳ್ಳಾಗಿದ್ದವು. ದೇಶದ ಜಿಡಿಪಿ ಅಂದಾಜಿನ ಬಗ್ಗೆಯೂ ಕೆಲವು ತಕರಾರುಗಳಿವೆ. ಈ ಎಲ್ಲ ಅಂಶಗಳನ್ನು ಗಮನಿಸಿದರೆ, ಭಾರತ ನಾಲ್ಕನೇ ದೊಡ್ಡ ಆರ್ಥಿಕತೆ ಆಗಲಿದೆ ಎಂದು ಸಂಭ್ರಮಿಸಲಾಗದು ಎನ್ನುವ ಮಾತುಗಳೂ ಕೇಳಿಬಂದಿವೆ.

ಮತ್ತೊಂದು ಮುಖ್ಯ ಆಕ್ಷೇಪಣೆ ಎಂದರೆ, ಭಾರತವು ಜಿಡಿಪಿ ಆಧಾರದಲ್ಲಿ ಆರ್ಥಿಕ ಪ್ರಗತಿ ಸಾಧಿಸುತ್ತಿದೆ. ಆದರೆ, ದೇಶದ ಸಂಪತ್ತು ಕೆಲವೇ ಶತಕೋಟ್ಯಧಿಪತಿಗಳಲ್ಲಿ ಕ್ರೋಡೀಕರಣವಾಗುತ್ತಿದ್ದು, ಸರಾಸರಿ ಮಾಪನಗಳಿಂದ ದೇಶದ ಅಸಮಾನತೆ ಕಣ್ಣಿಗೆ ಕಾಣುತ್ತಿಲ್ಲ ಎಂದು ಕೆಲವರು ಟೀಕಿಸಿದ್ದಾರೆ. ದೇಶದ ಶ್ರೀಮಂತರ ಸಂಪತ್ತನ್ನು ಹೊರತುಪಡಿಸಿದರೆ, ಭಾರತ ಸ್ಥಾನಮಾನ ತೀರಾ ಕೆಳಕ್ಕೆ ಕುಸಿಯುತ್ತದೆ; ತಲಾ ಆದಾಯ ಮತ್ತು ಬಡವರು ಹಾಗೂ ಶ್ರೀಮಂತರ ನಡುವಿನ ಅಂತರ ಅರಿಯದ ಆರ್ಥಿಕ ಪ್ರಗತಿ ಅಪೂರ್ಣ ಎನ್ನುವ ವಿಶ್ಲೇಷಣೆಯೂ ಕೇಳಿಬಂದಿದೆ.

ಭಾರತದ ಜಿಡಿಪಿ

ಗಣನೀಯ ಸಾಧನೆ
30 ವರ್ಷಗಳಲ್ಲಿ ಭಾರತವು ಜಿಡಿಪಿ ಬೆಳವಣಿಗೆಯಲ್ಲಿ ಅದ್ಭುತ ಪ್ರಗತಿ ಸಾಧಿಸಿದೆ ಎಂದು ಹೇಳಲಾಗಿದೆ. 2000ದಲ್ಲಿ ಭಾರತವು ಜಗತ್ತಿನ ಮೊದಲ ಹತ್ತು ಆರ್ಥಿಕತೆಗಳ ಸನಿಹವೂ ಇರಲಿಲ್ಲ . ನಂತರದಲ್ಲಿ ದೇಶದ ಆರ್ಥಿಕತೆ ವೇಗವಾಗಿ ಬೆಳೆಯತೊಡಗಿತು. ಬ್ರೆಜಿಲ್, ಇಟಲಿ ಮತ್ತು ಕೆನಡಾ ದೇಶಗಳನ್ನು ಹಿಂದಿಕ್ಕಿ 2015ರಲ್ಲಿ 7ನೇ ಸ್ಥಾನಕ್ಕೆ ಏರಿತು. ನಂತರ 2022ರಲ್ಲಿ ಫ್ರಾನ್ಸ್ ಮತ್ತು ಬ್ರಿಟನ್ ಅನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೆ ಏರಿತ್ತು. ಐಎಂಎಫ್‌ ಮುನ್ನೋಟದ ಪ್ರಕಾರ, ಮುಂದಿನ ವರ್ಷ ನಾಲ್ಕನೇ ಸ್ಥಾನಕ್ಕೆ ಏರಲಿರುವ ಭಾರತವು 2028–29ರ ಹೊತ್ತಿಗೆ 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆಯಾಗಲಿದೆ. ಜರ್ಮನಿಯನ್ನು ಹಿಂದಿಕ್ಕಿ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ. 

ಅನುಕೂಲ ಏನು? 

  • ಜಾಗತಿಕ ಮಟ್ಟದಲ್ಲಿ ಪ್ರಭಾವ ಹೆಚ್ಚಳ, ಪ್ರಭಾವಿ ಕಂಪನಿಗಳು ಭಾರತದತ್ತ ಮುಖಮಾಡುವ ಸಾಧ್ಯತೆ

  • ದೇಶದಲ್ಲಿ ಬಂಡವಾಳ ಹೂಡಿಕೆ ಜಾಸ್ತಿಯಾಗಲಿದೆ

  • ಉದ್ಯೋಗಾವಕಾಶ ಹೆಚ್ಚಳ, ಉದ್ಯಮಿಗಳಿಗೆ ಹೆಚ್ಚು ಅವಕಾಶ 

  • ಜನರ ಆದಾಯವೂ ಏರಿಕೆಯಾಗಬಹುದು

ಜಗತ್ತಿನ 10 ದೊಡ್ಡ ಆರ್ಥಿಕ ಶಕ್ತಿಗಳ ಜಿಡಿಪಿ ಗಾತ್ರ ತಲಾವಾರು ಜಿಡಿಪಿ

ಸಾಗಬೇಕಿದೆ ಇನ್ನೂ ದೂರ

ಜಗತ್ತಿನ ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯಾಗಿ ಭಾರತ ಹೊರಹೊಮ್ಮಿದರೂ ಅರ್ಥ ವ್ಯವಸ್ಥೆಗೆ ಸಂಬಂಧಿಸಿದಂತೆ ದೇಶದ ಮುಂದೆ ಹಲವು ಸವಾಲುಗಳಿವೆ. ಅಮೆರಿಕ, ಚೀನಾ ಸೇರಿದಂತೆ ಜಗತ್ತಿನ ಇತರ ಒಂಬತ್ತು ದೊಡ್ಡ ಆರ್ಥಿಕತೆಗಳಿಗೆ ಹೋಲಿಸಿದರೆ, ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ ತಲಾವಾರು ಜಿಡಿಪಿ ತುಂಬಾ ಕಡಿಮೆ ಇದೆ. ಐಎಂಎಫ್‌ ಪ್ರಕಾರ, ಸದ್ಯ ಭಾರತದ ತಲಾವಾರು ಜಿಡಿಪಿ 2,711 ಡಾಲರ್‌ (₹2.31 ಲಕ್ಷ). ಮುಂದಿನ ವರ್ಷ ಅದು 2,878 ಡಾಲರ್‌ಗೆ (₹2.46 ಲಕ್ಷ) ಏರಲಿದೆ. ಚೀನಾದ ತಲಾವಾರು ಜಿಡಿಪಿ 13,312 ಡಾಲರ್‌ (₹11.37 ಲಕ್ಷ) ಇದ್ದರೆ, ಜಪಾನ್‌ನದ್ದು 32,498 ಡಾಲರ್‌ (₹27.74 ಲಕ್ಷ) ಇದೆ. ಅಮೆರಿಕದ ತಲಾವಾರು ಜಿಡಿಪಿ 85,105 ಡಾಲರ್‌ (₹72.66 ಲಕ್ಷ). ಭಾರತದ ತಲಾವಾರು ಜಿಡಿಪಿ ಎಷ್ಟು ಕಡಿಮೆ ಎಂದರೆ, ಪಟ್ಟಿಯಲ್ಲಿ ಅದರ ಸ್ಥಾನ 100ರ ಒಳಗಡೆಯೂ ಇಲ್ಲ. ಜನಸಂಖ್ಯೆ ಹೆಚ್ಚಿರುವುದು ತಲಾವಾರು ಜಿಡಿಪಿಯ ಮೇಲೆ ಪರಿಣಾಮ ಬೀರುತ್ತಿದೆ.  

ತಲಾ ಆದಾಯವೂ ಕಡಿಮೆ:

ಅಮೆರಿಕ, ಜಪಾನ್‌, ಜರ್ಮನಿ, ಫ್ರಾನ್ಸ್‌, ಚೀನಾ ಸೇರಿದಂತೆ ಆರ್ಥಿಕವಾಗಿ ಪ್ರಗತಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ತಲಾ ಆದಾಯವೂ ತೀರಾ ಕಡಿಮೆ. 

ವಿಶ್ವಬ್ಯಾಂಕ್‌ನ ‘ವಿಶ್ವ ಅಭಿವೃದ್ಧಿ ವರದಿ–2024 ಮಧ್ಯಮ ಆದಾಯದ ಬಲೆ’ ವರದಿಯ ಪ್ರಕಾರ, ಅಮೆರಿಕದ ತಲಾ ಆದಾಯ ₹67.42 ಲಕ್ಷ ಇದ್ದರೆ, ಜಪಾನ್‌, ಫ್ರಾನ್ಸ್‌, ಬ್ರಿಟನ್‌ಗಳಲ್ಲಿ ನಾಗರಿಕರ ತಲಾ ಆದಾಯ ಕ್ರಮವಾಗಿ ₹32.77 ಲಕ್ಷ, ₹37.84 ಲಕ್ಷ, ₹40.13 ಲಕ್ಷ ಇದೆ. ಚೀನಾದ ತಲಾ ಆದಾಯ ₹11.25 ಲಕ್ಷ ಇದ್ದರೆ, ಭಾರತದ್ದು ಕೇವಲ ₹2.13 ಲಕ್ಷ.

ಯಾವ ದೇಶದ ತಲಾ ಆದಾಯವು ₹11,95,746 ಕ್ಕಿಂತ ಹೆಚ್ಚು ಇರುತ್ತದೆಯೋ, ಅದು ಹೆಚ್ಚು ಆದಾಯದ ದೇಶ ಎಂದು ವಿಶ್ವಬ್ಯಾಂಕ್ ಹೇಳಿದೆ.

ದಶಕದಲ್ಲಿ ತಲಾ ಆದಾಯ ದುಪ್ಪಟ್ಟು ಆಗಿದ್ದರೂ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ತುಂಬಾ ಕಡಿಮೆ ಇರುವುದನ್ನು ಐಎಂಎಫ್‌ ಅಂಕಿ ಅಂಶಗಳು ಹೇಳುತ್ತಿವೆ. ದೇಶವು ಜಾಗತಿಕವಾಗಿ ದೊಡ್ಡ ಆರ್ಥಿಕ ಶಕ್ತಿಯಾಗುತ್ತಿದೆ ಎಂಬುದನ್ನು ಸಂಭ್ರಮಿಸಲು ಇನ್ನೂ ದೂರ ಸಾಗಬೇಕಿದೆ. ನಿರುದ್ಯೋಗ, ಬಡತನ, ಅನಕ್ಷರತೆ, ಆರೋಗ್ಯ ಕ್ಷೇತ್ರದ ಸಮಸ್ಯೆಗಳು, ಮೂಲಸೌಕರ್ಯಗಳ ಕೊರತೆ, ಸಾಮಾಜಿಕ– ಆರ್ಥಿಕ ಅಸಮಾನತೆ ಸೇರಿದಂತೆ ಹಲವು ಸಮಸ್ಯೆಗಳು ದೇಶವನ್ನು ಈಗಲೂ ಕಾಡುತ್ತಿವೆ. ಭಾರತವು ಇವುಗಳನ್ನೆಲ್ಲ ಮೆಟ್ಟಿನಿಂತಾಗ ದೇಶ ನಿಜವಾಗಿಯೂ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಎಂದು ಹೇಳುತ್ತಾರೆ ಆರ್ಥಿಕ ತಜ್ಞರು.

ಆಧಾರ: ಐಎಂಎಫ್‌ನ ‘ಜಾಗತಿಕ ಆರ್ಥಿಕ ಮುನ್ನೋಟ–2025’, ಪಿಟಿಐ, ಮಾಧ್ಯಮ ವರದಿಗಳು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.