ADVERTISEMENT

ಆಳ-ಅಗಲ| ಅಮೆರಿಕದಲ್ಲಿ ಶಿಕ್ಷಣ: ಭಾರತೀಯರ ಹಿಂದೇಟು

ಬಿ.ವಿ. ಶ್ರೀನಾಥ್
ಸೂರ್ಯನಾರಾಯಣ ವಿ.
Published 21 ಏಪ್ರಿಲ್ 2025, 22:30 IST
Last Updated 21 ಏಪ್ರಿಲ್ 2025, 22:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭಾರತದ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಅಮೆರಿಕದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿ ನಂತರ ಅಲ್ಲಿಯೇ ಕೆಲಸ ಮಾಡುವ ಅವಕಾಶ ಪಡೆದು ನೆಲೆ ಕಂಡುಕೊಳ್ಳುವ ಕನಸು ಕಾಣುತ್ತಾರೆ. ಅದಕ್ಕಾಗಿ ಅಪಾರ ಶ್ರಮ ವಹಿಸಿ ಓದುವುದರ ಜತೆಗೆ ಕೋಟ್ಯಂತರ ರೂಪಾಯಿ ಖರ್ಚು ಕೂಡ ಮಾಡುತ್ತಿದ್ದಾರೆ. 2023–24ರಲ್ಲಿ ಅಮೆರಿಕದ ವಿದೇಶಿ ವಿದ್ಯಾರ್ಥಿಗಳಲ್ಲಿ ಭಾರತೀಯರೇ ಮೊದಲ ಸ್ಥಾನದಲ್ಲಿದ್ದರು. ನಂತರದ ಸ್ಥಾನದಲ್ಲಿ ಚೀನಾ ಮತ್ತಿತರ ದೇಶಗಳಿದ್ದವು. ಆದರೆ, ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೇರಿದ ನಂತರ ಬದಲಾಗುತ್ತಿರುವ ವೀಸಾ ನೀತಿ, ಉದ್ಯೋಗ ಪರಿಸ್ಥಿತಿಗಳು ಮತ್ತು ವಲಸಿಗರ ವಿರುದ್ಧದ ಆಕ್ರಮಣಕಾರಿ ಧೋರಣೆಗಳಿಂದ ಇತ್ತೀಚೆಗೆ ಭಾರತದ ವಿದ್ಯಾರ್ಥಿಗಳು ಅಮೆರಿಕಕ್ಕೆ ಹೋಗುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. 

2025ರ ಮಾರ್ಚ್‌ವರೆಗಿನ ದತ್ತಾಂಶವನ್ನು ಪರಿಶೀಲಿಸಿದರೆ ಉನ್ನತ ಅಧ್ಯಯನಕ್ಕೆಂದು ಅಲ್ಲಿಗೆ ಹೋಗುತ್ತಿದ್ದ ದೇಶದ ವಿದ್ಯಾರ್ಥಿಗಳ ಪ್ರಮಾಣದಲ್ಲಿ ಶೇ 28ರಷ್ಟು ಕುಸಿತವಾಗಿದೆ. ಆಗಸ್ಟ್‌–ಸೆಪ್ಟೆಂಬರ್‌ನಲ್ಲಿ ಅಮೆರಿಕದಲ್ಲಿ ಶೈಕ್ಷಣಿಕ ವರ್ಷ ಆರಂಭವಾಗುತ್ತದೆ. 2024ರ ಜುಲೈ ತಿಂಗಳಲ್ಲಿ ಅಮೆರಿಕದಲ್ಲಿ 3,48,446 ಭಾರತೀಯ ವಿದ್ಯಾರ್ಥಿಗಳು ಇದ್ದರು. ಆಗಸ್ಟ್‌ ತಿಂಗಳ ಹೊತ್ತಿಗೆ ಇದು 2,55,447ಕ್ಕೆ ಕುಸಿದಿದೆ. 2025ರ ಮಾರ್ಚ್‌ ಅಂತ್ಯದ ಅಂಕಿ ಅಂಶ ಪ್ರಕಾರ, ಅಲ್ಲಿ 2,55,442 ವಿದ್ಯಾರ್ಥಿಗಳಿದ್ದಾರೆ. 

ಒಪಿಟಿ ರದ್ದು ಮಸೂದೆ: ಇತ್ತೀಚೆಗೆ ಅಮೆರಿಕದ ಸಂಸತ್ತಿನಲ್ಲಿ ನ್ಯಾಯಯುತ ಕೌಶಲಗಳ ಅಮೆರಿಕನ್ ಕಾಯ್ದೆ–2025 (ಫೇರ್‌ನೆಸ್ ಫಾರ್ ಹೈ ಸ್ಕಿಲ್ಡ್ ಅಮೆರಿಕನ್ ಆ್ಯಕ್ಟ್) ಮಂಡಿಸಲಾಗಿದೆ. ಅದರಲ್ಲಿ ಆಪ್ಷನಲ್ ಪ್ರಾಕ್ಟಿಕಲ್ ಟ್ರೈನಿಂಗ್ (ಒಪಿಟಿ) ರದ್ದುಪಡಿಸಬೇಕು ಎನ್ನುವುದೂ ಸೇರಿದೆ. ಒಪಿಟಿ ಎಂದರೆ, ಶೈಕ್ಷಣಿಕ ಪದವಿಗೆ ಮುನ್ನ ಅಥವಾ ಶೈಕ್ಷಣಿಕ ಪದವಿಯ ನಂತರ ಕೆಲಸ ಮಾಡುವ ಮೂಲಕ ಗಳಿಸುವ ಅನುಭವ. ವಿದೇಶಿ ವಿದ್ಯಾರ್ಥಿಗಳು ಪದವಿ ಪಡೆದ ನಂತರ ಮೂರು ವರ್ಷ ಅಮೆರಿಕದಲ್ಲಿರಲು ಒಪಿಟಿ ಅವಕಾಶ ನೀಡುತ್ತದೆ. ಭಾರತವೂ ಸೇರಿದಂತೆ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಇದೊಂದು ಆಕರ್ಷಣೆಯಾಗಿತ್ತು. ನಂತರ ಬಹುತೇಕರು ಕಾಯಂ ಕೆಲಸ ಗಿಟ್ಟಿಸಿ, ಅಲ್ಲಿಯೇ ನೆಲಸುತ್ತಿದ್ದರು. ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 2023 ಮತ್ತು 2024ರ ನಡುವೆ ಗಣನೀಯವಾಗಿ ಹೆಚ್ಚಾಗಲು ಒಪಿಟಿಯೇ ಕಾರಣವಾಗಿತ್ತು. ಈ ಒಪಿಟಿಯಿಂದಾಗಿ ಅಮೆರಿಕದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎನ್ನುವ ಕೂಗೆದ್ದಿತ್ತು. ಈಗ ಟ್ರಂಪ್ ಸರ್ಕಾರವು ಅದನ್ನು ರದ್ದುಪಡಿಸಲು ಮುಂದಾಗಿದೆ. ಒಪಿಟಿ ಆಯ್ಕೆ ಮಾಡಿಕೊಂಡ ಭಾರತದ ಲಕ್ಷ ವಿದ್ಯಾರ್ಥಿಗಳು ಅಮೆರಿಕದಲ್ಲಿದ್ದಾರೆ. ಈ ಕಾರ್ಯಕ್ರಮ ರದ್ದಾದರೆ ಅಷ್ಟೂ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ADVERTISEMENT

ವೀಸಾ ರದ್ದು ಕಾರ್ಯಾಚರಣೆ: ಅಮೆರಿಕದ ವಿದೇಶಾಂಗ ಇಲಾಖೆ ಮತ್ತು ವಲಸೆ ಮತ್ತು ಸುಂಕ ಜಾರಿ ಇಲಾಖೆ (ಐಸಿಇ) ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ತೀವ್ರ ಕಾರ್ಯಾಚರಣೆ ಆರಂಭಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳ ಪೋಸ್ಟ್‌ಗಳನ್ನು ಎಐ ಟೂಲ್‌ ಮೂಲಕ ಪರಿಶೀಲಿಸಲಾಗುತ್ತಿದೆ. ಅದರ ಆಧಾರದಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎನ್ನುವ ನೆಪ ಒಡ್ಡಿ ವಿದೇಶಿ ವಿದ್ಯಾರ್ಥಿಗಳ ವೀಸಾಗಳನ್ನು ರದ್ದು ಮಾಡಲಾಗುತ್ತಿದೆ. ಇದೇ ಮಾರ್ಚ್‌ ನಂತರದಲ್ಲಿ ಈ ರೀತಿ 1,024 ವೀಸಾಗಳನ್ನು ರದ್ದು‍ಪಡಿಸಲಾಗಿದೆ.

‌ವಿದ್ಯಾರ್ಥಿ ವಿನಿಮಯ ಮತ್ತು ಮಾಹಿತಿ ವ್ಯವಸ್ಥೆಯಲ್ಲಿ (ಎಸ್‌ಇವಿಐಎಸ್) ವಿದ್ಯಾರ್ಥಿಗಳ/ಒಪಿಟಿ ಅಡಿ ಉದ್ಯೋಗ ಮಾಡುತ್ತಿರುವವರ ವಲಸೆಯ ಸ್ಥಿತಿಯನ್ನು ತೆಗೆದುಹಾಕುವ ಮೂಲಕವೂ ಕ್ರಮ ಜರುಗಿಸಲಾಗುತ್ತಿದೆ (ಎಸ್‌ಇವಿಐಎಸ್ ಎನ್ನುವುದು ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಬಗ್ಗೆ ಅಲ್ಲಿನ ಗೃಹ ಇಲಾಖೆ ನಿರ್ವಹಿಸುವ ಮಾಹಿತಿ ವ್ಯವಸ್ಥೆ). ಇದರಿಂದಾಗಿ ಸಾವಿರಾರು ವಿದ್ಯಾರ್ಥಿಗಳು/ಉದ್ಯೋಗಸ್ಥರು ರಾತ್ರೋರಾತ್ರಿ ಅಕ್ರಮ ನಿವಾಸಿಗಳಾಗಿ ಬದಲಾಗುತ್ತಿದ್ದಾರೆ. ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ವಿರುದ್ಧದ ಈ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಅಮೆರಿಕನ್ ಸಿವಿಲ್ ಲಿಬರ್ಟೀಸ್ ಯೂನಿಯನ್ (ಎಸಿಎಲ್‌ಯು) ಸೇರಿದಂತೆ ಹಲವು ಸಂಘಟನೆಗಳು ಒತ್ತಾಯಿಸಿವೆ. 2025 ಜ.20ರ ನಂತರ ಈ ರೀತಿ 4,736 ಎಸ್‌ಇವಿಐಎಸ್ ದಾಖಲೆಗಳನ್ನು ತೆಗೆದುಹಾಕಲಾಗಿದೆ ಎಂದು ಅಮೆರಿಕದ ವಲಸೆ ವಕೀಲರ ಸಂಘ ತಿಳಿಸಿದೆ. 

ಇಂಥ 327 ಪ್ರಕರಣಗಳ ವಿವರಗಳನ್ನು ಕಲೆಹಾಕಿದ್ದ ಸಂಘವು, ಅದರಲ್ಲಿ ಶೇ 50ರಷ್ಟು ವಿದ್ಯಾರ್ಥಿಗಳು ಭಾರತೀಯರು ಎಂದು ಹೇಳಿದೆ. ನಂತರದ ಸ್ಥಾನದಲ್ಲಿ ಚೀನಾ, ದಕ್ಷಿಣ ಕೊರಿಯಾ, ಬಾಂಗ್ಲಾದೇಶ ಮುಂತಾದ ದೇಶಗಳ ವಿದ್ಯಾರ್ಥಿಗಳಿದ್ದಾರೆ. ಅದಕ್ಕೆ ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಪ್ಯಾಲೆಸ್ಟೀನ್ ಪರ ಘೋಷಣೆ ಕೂಗಿದ್ದು, ರಾಜಕೀಯ ಪ್ರತಿಭಟನೆಗಳಲ್ಲಿ ತೊಡಗಿದ್ದು, ಚಾಲನಾ ನಿಯಮ ಮೀರಿದ್ದು, ಪೊಲೀಸರೊಂದಿಗೆ ಸಂಘರ್ಷದಲ್ಲಿ ತೊಡಗಿದ್ದು ಹೀಗೆ ಹಲವು ರೀತಿಯ ಕಾರಣ ನೀಡಲಾಗಿದೆ. ಆದರೆ, ಈ ಬಗ್ಗೆ ಬಹುತೇಕ ವಿದ್ಯಾರ್ಥಿಗಳಿಗೆ ನೋಟಿಸ್ ಕೂಡ ನೀಡದೇ ಕ್ರಮ ಜರುಗಿಸಲಾಗಿದೆ. ಅನೇಕ ವಿದ್ಯಾರ್ಥಿಗಳು ತಮ್ಮ ವಿರುದ್ಧ ಹೊರಿಸಲಾದ ಆರೋಪಗಳಿಗೂ ತಮಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದು, ಮನಸೋಇಚ್ಛೆ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎನ್ನುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳು ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲು ಹತ್ತಿ ಆರೋಪಮುಕ್ತರಾಗಿದ್ದಾರೆ.   

ವೀಸಾ ಪಡೆಯಲು ಹಲವು ರೀತಿಯ ತೊಡಕು; ವರ್ಷದಿಂದ ವರ್ಷಕ್ಕೆ ದುಬಾರಿಯಾಗುತ್ತಿರುವ ಶಿಕ್ಷಣ; ಟ್ರಂಪ್ ಸರ್ಕಾರದ ವಿಚಿತ್ರ ನಿಯಮಗಳಿಂದ ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕದ ಬಗ್ಗೆ ಇದ್ದ ಮೋಹ ಕಡಿಮೆಯಾಗುತ್ತಿದೆ. ಒಪಿಟಿ ರದ್ದತಿ, ದಿಢೀರ್ ವೀಸಾ ರದ್ದು ಕಾರ್ಯಾಚರಣೆಗಳಿಂದ ಮುಂದಿನ ದಿನಗಳಲ್ಲಿ ಅಮೆರಿಕದಲ್ಲಿನ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಮತ್ತಷ್ಟು ಕುಸಿಯಲಿದೆ ಎನ್ನಲಾಗುತ್ತಿದೆ.

ಶಿಕ್ಷಣ ವೆಚ್ಚವೂ ದುಬಾರಿ

ಅಮೆರಿಕದಲ್ಲಿ ಶಿಕ್ಷಣ ಪಡೆಯಲು ಭಾರತೀಯ ವಿದ್ಯಾರ್ಥಿಗಳು ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕು. ಇತ್ತೀಚಿನ ವರ್ಷಗಳಲ್ಲಿ ಅಮೆರಿಕದಲ್ಲಿ ಜೀವನ ನಿರ್ವಹಣೆ ವೆಚ್ಚ ಹೆಚ್ಚಾಗಿದ್ದು, ದೇಶದ ವಿದ್ಯಾರ್ಥಿಗಳು ಅಮೆರಿಕದಿಂದ ವಿಮುಖರಾಗಲು ಇದು ಕೂಡ ಒಂದು ಕಾರಣ ಎಂದು ಹೇಳಲಾಗುತ್ತಿದೆ. 

ಪ್ರವೇಶ ಪಡೆದಿರುವ ಕಾಲೇಜು, ವಿಶ್ವವಿದ್ಯಾಲಯ ಸರ್ಕಾರಿ ಆಗಿದ್ದರೆ ಶುಲ್ಕ ಸ್ವಲ್ಪ ಕಡಿಮೆ ಇರುತ್ತದೆ. ಖಾಸಗಿ ಕಾಲೇಜು, ವಿಶ್ವವಿದ್ಯಾಲಯ ಆಗಿದ್ದರೆ ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ. ಪದವಿ ಕೋರ್ಸ್‌ಗಳಿಗೆ ಕಡಿಮೆ ಶುಲ್ಕವಿದ್ದರೆ, ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಹೆಚ್ಚು ಶುಲ್ಕ ಇದೆ. ಕೋರ್ಸ್‌ ಶುಲ್ಕವಲ್ಲದೇ, ವಸತಿ ಸೇರಿದಂತೆ ಇತರ ವೆಚ್ಚಗಳಿಗಾಗಿಯೂ ವಿದ್ಯಾರ್ಥಿಗಳು ಲಕ್ಷಾಂತರ ರೂಪಾಯಿ ವ್ಯಯಿಸಬೇಕಾಗುತ್ತದೆ. ಪ್ರಮುಖ ನಗರ, ಪಟ್ಟಣಗಳಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ಸೇರ್ಪಡೆಯಾದರೆ, ವಸತಿ, ಆಹಾರ ಸೇರಿದಂತೆ ಇತರ ಉದ್ದೇಶಗಳಿಗೆ ಹೆಚ್ಚು ವೆಚ್ಚ ಬರುತ್ತದೆ.

ವಿದೇಶದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ನೆರವಾಗುವ ವಿವಿಧ ಕನ್ಸಲ್ಟೆನ್ಸಿ ಸಂಸ್ಥೆಗಳ ಪ್ರಕಾರ, ಅಮೆರಿಕದಲ್ಲಿ ಶಿಕ್ಷಣ ಪಡೆಯಲು ವಿದ್ಯಾರ್ಥಿಯೊಬ್ಬನಿಗೆ ವರ್ಷಕ್ಕೆ ಕನಿಷ್ಠ ₹25 ಲಕ್ಷದಿಂದ (30 ಸಾವಿರ ಡಾಲರ್‌) ₹70 ಲಕ್ಷದವರೆಗೂ (80 ಸಾವಿರ ಡಾಲರ್‌) ಖರ್ಚಾಗುತ್ತದೆ.

ಎರಡು ವಿಧದ ವೀಸಾ

ಅಮೆರಿಕದಲ್ಲಿ ಪೂರ್ಣಾವಧಿ ವಿದ್ಯಾರ್ಥಿಯಾಗಿ ಶಿಕ್ಷಣ ಪಡೆಯಬೇಕಾದರೆ ಅಭ್ಯರ್ಥಿಗಳು ವಲಸೆಯೇತರ ವಿದ್ಯಾರ್ಥಿ ವೀಸಾ ಹೊಂದಿರಬೇಕು. 

ಅಮೆರಿಕ ಸರ್ಕಾರವು ವಿದ್ಯಾರ್ಥಿಗಳಿಗಾಗಿ ಎರಡು ರೀತಿಯ ವೀಸಾಗಳನ್ನು ನೀಡುತ್ತದೆ. ‘ಎಫ್‌–1’ ವಿದ್ಯಾರ್ಥಿ ವೀಸಾ ಮತ್ತು ‘ಎಂ–1’ ವಿದ್ಯಾರ್ಥಿ ವೀಸಾ (ಸಾಮಾನ್ಯವಾಗಿ ಇವುಗಳನ್ನು ಎಫ್‌ ವೀಸಾ ಮತ್ತು ಎಂ ವೀಸಾ ಎಂದು ಕರೆಯಲಾಗುತ್ತದೆ).

ಎಫ್‌–1 ವಿದ್ಯಾರ್ಥಿ ವೀಸಾ: ಅಮೆರಿಕದಲ್ಲಿರುವ ಮಾನ್ಯತೆ ಪಡೆದ ಶಾಲಾ– ಕಾಲೇಜುಗಳು ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳು ಅಥವಾ ಭಾಷಾ ತರಬೇತಿ ಕೋರ್ಸ್‌ಗೆ ಸೇರಲು ಬಯಸುವ ವಿದ್ಯಾರ್ಥಿಗಳು ಎಫ್‌–1 ವೀಸಾ ಪಡೆಯಬೇಕಾಗುತ್ತದೆ. ಈ ವೀಸಾ ಪಡೆಯಲು ವಿದ್ಯಾರ್ಥಿಗಳು ಅಮೆರಿಕದ ಯಾವುದೇ ಶಿಕ್ಷಣ ಸಂಸ್ಥೆ ಅಥವಾ ಕೋರ್ಸ್‌ಗೆ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.    

ಎಂ–1 ವಿದ್ಯಾರ್ಥಿ ವೀಸಾ: ಭಾಷಾ ತರಬೇತಿ ಹೊರತಾದ ವೃತ್ತಿಪರ/ ಇತರ ಶೈಕ್ಷಣಿಕಯೇತರ ಕಾರ್ಯಕ್ರಮಗಳಿಗೆ ನೋಂದಣಿ ಮಾಡಲು ವಿದ್ಯಾರ್ಥಿಗಳು ಎಂ–1 ವಿದ್ಯಾರ್ಥಿ ವೀಸಾ ಹೊಂದಿರಬೇಕು.

ಆಧಾರ: ಅಮೆರಿಕನ್ ಇಮಿಗ್ರೇಷನ್ ಲಾಯರ್ಸ್ ಅಸೋಸಿಯೇಷನ್ ವರದಿ, ಡಿಡಬ್ಲ್ಯು ವರದಿ, ಹೋಮ್‌ಲ್ಯಾಂಡ್‌ ಸೆಕ್ಯೂರಿಟಿ ಇಲಾಖೆ, ಎಸ್‌ಇವಿಐಎಸ್ ದತ್ತಾಂಶಗಳು

ಭಾರತದ ವಿದ್ಯಾರ್ಥಿಗಳ ಸಂಖ್ಯೆ ಕುಸಿತ
ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿಗಳು

ಒಪಿಟಿ ಆಯ್ಕೆ ಮಾಡಿಕೊಂಡ ಭಾರತದ ಲಕ್ಷ ವಿದ್ಯಾರ್ಥಿಗಳು ಅಮೆರಿಕದಲ್ಲಿದ್ದಾರೆ. ಈ ಕಾರ್ಯಕ್ರಮ ರದ್ದಾದರೆ ಅಷ್ಟೂ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.