ADVERTISEMENT

ಆಳ-ಅಗಲ | ಬೆಂಗಳೂರು: ಮಹಿಳೆಯರಿಗೆ ಸುರಕ್ಷಿತವೇ?

ಆದಿತ್ಯ ಕೆ.ಎ
Published 20 ಏಪ್ರಿಲ್ 2025, 23:30 IST
Last Updated 20 ಏಪ್ರಿಲ್ 2025, 23:30 IST
ಬೆಂಗಳೂರು ನಗರದ ನೋಟ
ಬೆಂಗಳೂರು ನಗರದ ನೋಟ   

ಘಟನೆ 1: ಬಿಹಾರದ ಯುವತಿ, ಕೇರಳದಲ್ಲಿ ಏಲಕ್ಕಿ ಬಿಡಿಸುವ ಕೆಲಸಕ್ಕೆ ಸೇರಿಕೊಂಡಿದ್ದರು. ಕೆಲಸ ಇಷ್ಟವಿಲ್ಲದೇ ವಾಪಸ್ ಊರಿಗೆ ಹೋಗಲು ನಿರ್ಧರಿಸಿದ್ದರು. ಕೇರಳದ ಎರ್ನಾಕುಲಂನಿಂದ ಬಿಹಾರದ ಬಾಕಾಕ್ಕೆ ನೇರ ರೈಲು ಸಂಪರ್ಕ ಇರಲಿಲ್ಲ. ಬೆಂಗಳೂರಿಗೆ ಬಂದು, ತನ್ನ ಸ್ವಂತ ಗ್ರಾಮಕ್ಕೆ ಹೋಗಲು ಮುಂದಾಗಿದ್ದರು. ನಗರದಲ್ಲಿದ್ದ ದೊಡ್ಡಮ್ಮನ ಮಗನಿಗೆ ಮಾಹಿತಿ ನೀಡಿದ್ದರು. ಏಪ್ರಿಲ್‌ 2ರ ರಾತ್ರಿ ತಂಗಿಗಾಗಿ ರೈಲು ನಿಲ್ದಾಣದಲ್ಲಿ ಸಹೋದರ ಕಾದು ಕುಳಿತಿದ್ದ. ರೈಲು ಮಧ್ಯರಾತ್ರಿ ನಿಲ್ದಾಣ ತಲುಪಿತ್ತು. ಹಸಿವಿನಿಂದ ಬಳಲುತ್ತಿದ್ದ ಇಬ್ಬರೂ ಊಟ ಹುಡುಕಿಕೊಂಡು ಕೆ.ಆರ್.ಪುರ ಮಾರ್ಗದ ರಸ್ತೆಯಲ್ಲಿ ತೆರಳುತ್ತಿದ್ದರು. ಆಗ ಆಟೊ ಚಾಲಕರಿಬ್ಬರು ಸಹೋದರನಿಗೆ ಥಳಿಸಿ ಯುವತಿಯನ್ನು ಎಳೆದೊಯ್ದು ಅತ್ಯಾಚಾರ ಎಸಗಿದ್ದರು. 

ಘಟನೆ 2: ಏಪ್ರಿಲ್‌ 3ರಂದು ಸುದ್ದಗುಂಟೆಪಾಳ್ಯದ ಭಾರತಿ ಲೇಔಟ್‌ನ ಒಂದನೇ ಕ್ರಾಸ್‌ನ ಅಡ್ಡರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಯನ್ನು ತಬ್ಬಿಕೊಂಡು ಲೈಂಗಿಕ ಕಿರುಕುಳ ನೀಡಿದ್ದ ಆರೋಪಿ ಪರಾರಿ ಆಗಿದ್ದ. ಇದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.

ಘಟನೆ 3: ದೆಹಲಿ ಮೂಲದ ಮಹಿಳೆಯೊಬ್ಬರು ಬೆಂಗಳೂರಿನ ವ್ಯಕ್ತಿಯೊಬ್ಬರನ್ನು ಮದುವೆಯಾಗಿ ಕೋರಮಂಗಲದಲ್ಲಿ ನೆಲಸಿದ್ದರು. ಇವೆಂಟ್‌ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಆಕೆ ಕೆಲಸ ಮಾಡುತ್ತಿದ್ದರು. ಫೆಬ್ರುವರಿ 20ರಂದು ಕೆಲಸ ಮುಗಿಸಿಕೊಂಡು ಮನೆಗೆ ನಡೆದು ತೆರಳುತ್ತಿದ್ದರು. ಗೃಹಿಣಿಯನ್ನು ಅಡ್ಡಗಟ್ಟಿದ ನಾಲ್ವರು ಆರೋಪಿಗಳು ಬಾಗಿಲು ಮುಚ್ಚಿದ್ದ ಹೋಟೆಲ್‌ ಕಟ್ಟಡದ ಮಹಡಿಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಈ ಘಟನೆಯೂ ನಗರದ ನಿವಾಸಿಗಳನ್ನು ಬೆಚ್ಚಿ ಬೀಳಿಸಿತ್ತು.  

ADVERTISEMENT

ಈ ಮೂರು ಪ್ರಕರಣಗಳೂ ಎರಡು ತಿಂಗಳ ಅಂತರದಲ್ಲಿ ನಡೆದಿವೆ. ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ, ಈ ಘಟನೆಗಳು ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳ ಸೃಷ್ಟಿಸಿವೆ. ರಾತ್ರಿ ವೇಳೆ ಹೆಣ್ಣು ಮಕ್ಕಳ ಓಡಾಟಕ್ಕೆ ನಗರ ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ.

ಬೀಳದ ಕಡಿವಾಣ

ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿಲ್ಲ. ಮನೆಗಳ್ಳತನ, ವಾಹನ ಕಳ್ಳತನ ಪ್ರಕರಣಗಳು ನಿತ್ಯ ವರದಿ ಆಗುತ್ತಲೇ ಇವೆ. ರೌಡಿಗಳ ಚಟುವಟಿಕೆಗಳ ನಿಯಂತ್ರಣವೂ ಸಾಧ್ಯವಾಗುತ್ತಿಲ್ಲ. ಅತ್ಯಾಚಾರ ಪ್ರಕರಣಗಳು, ಲೈಂಗಿಕ ದೌರ್ಜನ್ಯ ಪ್ರಕರಣಗಳು ಆಗಾಗ್ಗೆ ಸದ್ದು ಮಾಡುತ್ತಲೇ ಇವೆ. ಕಳೆದೆರಡು ತಿಂಗಳಲ್ಲಿ ಈ ರೀತಿಯ ಐದು ಪ್ರಕರಣಗಳು ರಾಜಧಾನಿಯಲ್ಲಿ ವರದಿ ಆಗಿವೆ.

ಹೆಣ್ಣುಮಕ್ಕಳ ಸುರಕ್ಷತೆಗಾಗಿ ಮೂರು ವರ್ಷಗಳ ಹಿಂದೆ ನಗರದಲ್ಲಿ ‘ಸೇಫ್‌ ಸಿಟಿ’ ಯೋಜನೆ ಜಾರಿಗೆ ತರಲಾಗಿತ್ತು. ಯೋಜನೆ ಅಡಿ ಹಲವು ಸೌಲಭ್ಯಗಳೂ ನಗರಕ್ಕೆ ಸಿಕ್ಕಿವೆ. ಯೋಜನೆ ಅಡಿ ಸುರಕ್ಷತಾ ಕೇಂದ್ರಗಳನ್ನು (ಸೇಫ್ಟಿ ಐಲ್ಯಾಂಡ್‌) ಸ್ಥಾಪಿಸಲಾಗಿದೆ. ತಂತ್ರಜ್ಞಾನ ಬಳಸಿಕೊಂಡು ಆರೋಪಿಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದೆ. ವಾರಾಂತ್ಯದಲ್ಲಿ ಜನ ದಟ್ಟಣೆ ಹೆಚ್ಚಿರುವ ಮಹಾತ್ಮ ಗಾಂಧಿ ರಸ್ತೆ, ಚರ್ಚ್‌ ಸ್ಟ್ರೀಟ್, ಬ್ರಿಗೇಡ್ ರಸ್ತೆಗಳಲ್ಲಿ ಅಶ್ವಾರೋಹಿ ದಳ ಗಸ್ತು ನಡೆಸುತ್ತಿರುತ್ತದೆ. ಆದರೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿ ಆಗುತ್ತಲೇ ಇವೆ. ರಾತ್ರಿ ಪಾಳಿಯ ಕೆಲಸ, ಸಮಾರಂಭ, ಪಾರ್ಟಿ ಮುಗಿಸಿಕೊಂಡು ಮನೆಗೆ ತೆರಳುವ ಯುವತಿಯರನ್ನು ಅಡ್ಡಗಟ್ಟಿ ಅವರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. 

ರಾತ್ರಿ ವೇಳೆ ಒಂಟಿಯಾಗಿ ತೆರಳುವ ಸಂದರ್ಭಗಳಲ್ಲಿ ದುಷ್ಕರ್ಮಿಗಳು ಕೆಟ್ಟ ದೃಷ್ಟಿಯಿಂದ ನೋಡುವುದು, ಹತ್ತಿರ ಬಂದು ಕಿರುಕುಳ ನೀಡುವುದು ಮಾಡಿದ್ದಾರೆ ಎಂದು ನೊಂದ ಯುವತಿಯರು ನೋವು ತೋಡಿಕೊಂಡಿದ್ದಾರೆ.

ಶೇ 9ರಷ್ಟು ಏರಿಕೆ

ಕಳೆದ ವರ್ಷವೂ (2024) ನಗರದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಕಿರುಕುಳ ಪ್ರಕರಣಗಳು ಹೆಚ್ಚಾಗಿದ್ದವು. 2023ಕ್ಕೆ ಹೋಲಿಸಿದರೆ, 2024ರಲ್ಲಿ ಪ್ರಕರಣಗಳು ಶೇ 9ರಷ್ಟು ಏರಿಕೆಯಾಗಿದ್ದವು. 2023ರಲ್ಲಿ 1,139 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿ, 1,040 ಆರೋಪಿಗಳನ್ನು ಬಂಧಿಸಲಾಗಿತ್ತು. 2024ರಲ್ಲಿ 1,247 ಪ್ರಕರಣಗಳು ವರದಿ ಆಗಿದ್ದವು. 1,085 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

‘ಸದ್ಯ ಬೆಂಗಳೂರಿನ ಜನಸಂಖ್ಯೆ 1.40 ಕೋಟಿಯಿದೆ. ಅದಕ್ಕೆ ತಕ್ಕಂತೆ ಪೊಲೀಸ್‌ ಸಿಬ್ಬಂದಿ ಇಲ್ಲ’ ಎಂದು ಮೂಲಗಳು ಹೇಳಿವೆ.

‘ಸೂಕ್ಷ್ಮ ಪ್ರದೇಶಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಮಹಿಳೆಯರು, ಮಕ್ಕಳ ಸುರಕ್ಷತೆಗೆ ಮತ್ತಷ್ಟು ಕ್ಯಾಮೆರಾ ಅಳವಡಿಕೆ ಮಾಡುವಂತೆ ಬಿಬಿಎಂಪಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಜಾಗವನ್ನೂ ಗುರುತಿಸಲಾಗಿದೆ. ಪ್ರಖರವಾದ ಬೆಳಕು ಹೊರಸೂಸುವ ಬೀದಿ ದೀಪಗಳನ್ನು ಅಳವಡಿಸುವಂತೆಯೂ ಕೋರಲಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಸಲಹಾ ಕೇಂದ್ರ’

ದೌರ್ಜನ್ಯಕ್ಕೆ ಒಳಗಾದವರಿಗೆ ಆಪ್ತ ಸಮಾಲೋಚನೆ ಹಾಗೂ ಚಿಕಿತ್ಸೆಗೆಂದು ಸೇಫ್‌ ಸಿಟಿ ಯೋಜನೆ ಅಡಿ ನಗರದ ಎಂಟು ಆಸ್ಪತ್ರೆಗಳಲ್ಲಿ ಸಲಹಾ ಕೇಂದ್ರ ಸ್ಥಾಪಿಸಲಾಗಿದೆ. ವಿಕ್ಟೋರಿಯಾ, ಬೌರಿಂಗ್‌,
ಕೆ.ಸಿ.ಜನರಲ್‌, ವಾಣಿ ವಿಲಾಸ ಆಸ್ಪತ್ರೆ, ರಾಜಾಜಿನಗರದ ಇಎಸ್‌ಐ ಹಾಗೂ ಯಲಹಂಕದ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಘಟಕಗಳನ್ನು ತೆರೆಯಲಾಗಿದೆ. ಇಲ್ಲಿ ಸಂತ್ರಸ್ತರಿಗೆ ಸಲಹೆ, ಮಾರ್ಗದರ್ಶನ ಹಾಗೂ ಧೈರ್ಯ ತುಂಬುವ ಕೆಲಸ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

‘ಕ್ಯಾಬ್‌ ಪ್ರಯಾಣದ ವೇಳೆ ಕೆಟ್ಟ ಅನುಭವ’

ರಾತ್ರಿ ಪಾಳಿ ಕೆಲಸ ಮುಗಿಸಿಕೊಂಡು ಅಥವಾ ದೂರದ ಊರಿನಿಂದ ನಗರಕ್ಕೆ ಬಂದು ಕ್ಯಾಬ್‌, ಆಟೊದಲ್ಲಿ ಮನೆಗೆ ತೆರಳುವಾಗ ಆಗಿರುವ ಕೆಟ್ಟ ಅನುಭವಗಳನ್ನು ಕೆಲವು ಯುವತಿಯರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

‘ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕ್ಯಾಬ್‌ನಲ್ಲಿ ಪ್ರಯಾಣಿಸಿದ್ದು ಭಯಾನಕವಾಗಿತ್ತು. ಪ್ರಯಾಣ ಪ್ರಾರಂಭವಾದ ಕೂಡಲೇ ಚಾಲಕ, ನನ್ನನ್ನು ಕೆಟ್ಟ ದೃಷ್ಟಿಯಿಂದ ನೋಡಲು ಆರಂಭಿಸಿದ್ದ. ಜೋರಾಗಿ ಸಂಗೀತ ಹಾಕಿ ನನ್ನ ತೊಡೆಗಳನ್ನು ಸ್ಪರ್ಶಿಸಲು ಪ್ರಯತ್ನಿಸಿದ. ಕಾರಿನಲ್ಲಿ ಸಿಗರೇಟ್ ಸೇದಿದ. ಆ ಸಮಯದಲ್ಲಿ ನಾನು ಒಂಟಿಯಾಗಿದ್ದೆ’ ಎಂದು ಯುವತಿಯೊಬ್ಬರು ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ.

ಪರಿಣಾಮಕಾರಿಯಾಗದ ಗಸ್ತು ವ್ಯವಸ್ಥೆ

ಪೊಲೀಸ್‌ ಗಸ್ತು ವ್ಯವಸ್ಥೆ ಪರಿಣಾಮಕಾರಿ ಆಗುತ್ತಿಲ್ಲ. ಅದರ ಬದಲಿಗೆ ಪ್ರತಿ ಪೊಲೀಸ್‌ ಠಾಣಾ ವ್ಯಾಪ್ತಿಯ 10 ಸ್ಥಳಗಳಲ್ಲಿ ಸ್ಥಿರ ಪೊಲೀಸ್‌ ವ್ಯವಸ್ಥೆಯನ್ನು ಜಾರಿಗೆ ತರಬೇಕು. ರಾತ್ರಿ ವೇಳೆ ನಿಗದಿತ ಸ್ಥಳಗಳಲ್ಲಿ ಪೊಲೀಸರು ಕಾಣಿಸಿಕೊಳ್ಳುವಂತೆ ಇರಬೇಕು. ಆಗ ದುಷ್ಕರ್ಮಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಲಿದೆ. ಈ ವ್ಯವಸ್ಥೆಯನ್ನು ಮಹಾರಾಷ್ಟ್ರದಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಸ್ಥಿರ ಪೊಲೀಸ್ ವ್ಯವಸ್ಥೆ ಜಾರಿಗೆ ತಂದರೆ ರಾತ್ರಿ ವೇಳೆ ನಡೆಯುವ ಅಪರಾಧ ಚಟುವಟಿಕೆಗಳನ್ನು ನಿಯಂತ್ರಣಕ್ಕೆ ತರಲು ಸಾಧ್ಯ ಆಗಲಿದೆ. 

ಬೆಂಗಳೂರಿನ ಪ್ರತಿ ಠಾಣೆಯಲ್ಲಿ ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯ ಸಂಖ್ಯೆ 15ಕ್ಕಿಂತ ಕಡಿಮೆಯಿದೆ. ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಬೇಕು. ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಕೆಲವು ಕೃತ್ಯಗಳನ್ನು ತಡೆಯುವುದು ಪೊಲೀಸರಿಗೂ ಕಷ್ಟ. ಆದರೆ, ಆರೋಪಿಗಳನ್ನು ಬಂಧಿಸಿದ ಮೇಲೆ ಅವರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಪ್ರಬಲ ಸಾಕ್ಷ್ಯಾಧಾರ ಕಲೆ ಹಾಕಿ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಬೇಕು.
-ಎಸ್‌.ಕೆ.ಉಮೇಶ್‌, ನಿವೃತ್ತ ಪೊಲೀಸ್ ಅಧಿಕಾರಿ
ಎಸ್‌.ಕೆ.ಉಮೇಶ್ಬೆಂಗಳೂರಿನಲ್ಲಿರುವ ವಲಸೆ ಕಾರ್ಮಿಕರು ಅಪರಾಧ ಕೃತ್ಯಗಳಲ್ಲಿ ಭಾಗಿ ಆಗುತ್ತಿದ್ದಾರೆ ಎಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ. ಕಾರ್ಮಿಕ ಇಲಾಖೆಯ ಜತೆಗೆ ಶೀಘ್ರದಲ್ಲೇ ಸಭೆ ನಡೆಸಲಾಗುವುದು
-ಜಿ.ಪರಮೇಶ್ವರ, ಗೃಹ ಸಚಿವ
112ಕ್ಕೆ ಕರೆ ಮಾಡಿ ; ಮಹಿಳೆಯರ ತುರ್ತು ಸ್ಪಂದನೆಗಾಗಿ ‘ಸೇಫ್ ಸಿಟಿ’ ಯೋಜನೆ ಅಡಿ ಸುರಕ್ಷತಾ ಕೇಂದ್ರ ಸ್ಥಾಪಿಸಲಾಗಿದೆ. 250 ಹೊಯ್ಸಳ ವಾಹನಗಳು 24X7 ತಾಸು ಗಸ್ತು ತಿರುಗುತ್ತಿವೆ. ಅಪಾಯಕ್ಕೆ ಸಿಲುಕಿದವರು ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು. ತಕ್ಷಣವೇ ಸಿಬ್ಬಂದಿ ಸ್ಪಂದಿಸಲಿದ್ದಾರೆ
-ಬಿ.ದಯಾನಂದ, ನಗರ ಪೊಲೀಸ್‌ ಕಮಿಷನರ್‌
ಸೇಫ್‌ ಸಿಟಿ ಯೋಜನೆಯಡಿ ಏನೇನು ಸೌಲಭ್ಯ?
ದೌರ್ಜನ್ಯ ಪ್ರಕರಣಗಳೂ
ಗೃಹ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳು

ರಾಜ್ಯ ಗೃಹ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳು 26168  ಖಾಲಿಯಿರುವ ಒಟ್ಟು ಹುದ್ದೆಗಳು  ‌‘ಎ’ ದರ್ಜೆ;465  ‘ಬಿ’ ದರ್ಜೆ;731    ‘ಸಿ’ ದರ್ಜೆ;23076    ‘ಡಿ’ ದರ್ಜೆ;1896 

‘ಸೇಫ್‌ ಸಿಟಿ’ ಯೋಜನೆಯಡಿ ಏನೇನು ಸೌಲಭ್ಯ 7500 ಬೆಂಗಳೂರಿನಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳ ಸಂಖ್ಯೆ 50 ಮಹಿಳಾ ಹೊರ ಠಾಣೆಗಳ ಸಂಖ್ಯೆ 50 ಸುರಕ್ಷಾ ಕೇಂದ್ರಗಳು (ಸೇಫ್ಟಿ ಐಲ್ಯಾಂಡ್‌) 800 ನಗರದ ವಿವಿಧೆಡೆ ಅಳವಡಿಸಿರುವ ಜೂಮ್‌ ಕ್ಯಾಮೆರಾಗಳು 400 ಹೈ–ರೆಸಲ್ಯೂಷನ್‌ ಕ್ಯಾಮೆರಾಗಳು

ನಗರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು 2023;2024 ಲೈಂಗಿಕ ದೌರ್ಜನ್ಯ;1139;1247 ಅತ್ಯಾಚಾರ;172;178

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.