
‘ಇಂದು ನಾವು ಹಳೆಯದರಿಂದ ಹೊಸದಕ್ಕೆ ಕಾಲಿಡುತ್ತಿದ್ದೇವೆ...’
1947, ಆ.15ರ ಮಧ್ಯರಾತ್ರಿ, ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಗೊಂಡ ದಿನ, ಜವಾಹರಲಾಲ್ ನೆಹರೂ ಅವರು ಹೇಳಿದ್ದ ಮಾತುಗಳಿವು. ಆ ದಿನದ ನೆಹರೂ ಅವರ ಭಾಷಣ ಜಗದ್ವಿಖ್ಯಾತವಾಗಿತ್ತು. ಅಮೆರಿಕದ ನ್ಯೂಯಾರ್ಕ್‌ನಲ್ಲೂ ಅದು ಪ್ರತಿಧ್ವನಿಸಿತ್ತು.
ಚರಿತ್ರೆ ಈಗ ತಿರುವು ಪಡೆದಿದೆ. ನ್ಯೂಯಾರ್ಕ್ ನಗರದ ಹೊಸ ಮೇಯರ್ ಆಗಿ ಆಯ್ಕೆಯಾಗಿರುವ ಜೋಹ್ರಾನ್ ಮಮ್ದಾನಿ, ನೆಹರೂ ಅವರ 1947ರ ಪ್ರಸಿದ್ಧ ಸಾಲುಗಳನ್ನು ಉಲ್ಲೇಖಿಸಿ ಆಡಿರುವ ಮಾತುಗಳು ಭಾರತದಲ್ಲಿ ಪ್ರತಿಧ್ವನಿಸುತ್ತಿವೆ.
34 ವರ್ಷ ವಯಸ್ಸಿಗೇ ಅಮೆರಿಕದ ಅತ್ಯಂತ ದೊಡ್ಡ ನಗರವಾದ ನ್ಯೂಯಾರ್ಕ್‌ನ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ಮಮ್ದಾನಿ ಅಚ್ಚರಿ ಮೂಡಿಸಿದ್ದಾರೆ. ಜೋಹ್ರಾನ್, ನ್ಯೂಯಾರ್ಕ್‌ನ ಮೊದಲ ಮುಸ್ಲಿಂ ಮೇಯರ್ ಆಗಿದ್ದಾರೆ. ಅವರ ಬೇರುಗಳು ಭಾರತದಲ್ಲಿವೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ರಿಪಬ್ಲಿಕನ್ ಪಕ್ಷದ ಎಲ್ಲ ರೀತಿಯ ಬೆದರಿಕೆ, ಎಚ್ಚರಿಕೆಗಳನ್ನು ಬದಿಗಿಟ್ಟು ನ್ಯೂಯಾರ್ಕ್ ಮತದಾರರು ಮಮ್ದಾನಿ ಅವರನ್ನು ಮೇಯರ್ ಸ್ಥಾನಕ್ಕೆ ಆರಿಸಿದ್ದಾರೆ. ಈ ಮೂಲಕ ಅಮೆರಿಕ ಮತ್ತು ಜಾಗತಿಕ ರಾಜಕಾರಣದಲ್ಲಿ ಪ್ರಬಲವಾಗಿರುವ ಬಲಪಂಥೀಯ ಅಲೆಯ ನಡುವೆಯೇ ಎಡಪಂಥದ (ಡೆಮಾಕ್ರಟಿಕ್ ಸೋಷಿಯಲಿಸ್ಟ್) ಅಸ್ತಿತ್ವದ ಸೂಚನೆ ನೀಡಿದ್ದಾರೆ. ಮಮ್ದಾನಿಗೆ ಭಾರತದಲ್ಲಿಯೂ ಬೇರುಗಳಿರುವುದರಿಂದ ಅವರ ಚುನಾವಣಾ ಯಶಸ್ಸಿನ ಬಗ್ಗೆ, ಅವರ ನಿಲುವುಗಳ ಬಗ್ಗೆ ಭಾರತದಲ್ಲಿಯೂ ಚರ್ಚೆ, ಮೆಚ್ಚುಗೆ, ಟೀಕೆಗಳು ವ್ಯಕ್ತವಾಗುತ್ತಿವೆ.
‘ಸಲಾಂ ಬಾಂಬೆ’ ಖ್ಯಾತಿಯ ಸಿನಿಮಾ ನಿರ್ದೇಶಕಿ ಮೀರಾ ನಾಯರ್ ಮತ್ತು ಭಾರತ (ಗುಜರಾತ್) ಸಂಜಾತ ಮಹಮೂದ್ ಮಮ್ದಾನಿ ಅವರ ಮಗ ಈ ಜೋಹ್ರಾನ್ ಮಮ್ದಾನಿ. ಉಗಾಂಡದಲ್ಲಿ ನೆಲಸಿ, ಅಲ್ಲಿನ ಶೈಕ್ಷಣಿಕ ಮತ್ತು ರಾಜಕೀಯ ಆಂದೋಲನಗಳಲ್ಲಿ ಸಕ್ರಿಯರಾಗಿದ್ದ ಮಹಮೂದ್ ಮಮ್ದಾನಿ ಮತ್ತು ಸಾಮಾಜಿಕ ಕಾರ್ಯಕರ್ತೆಯೂ ಆಗಿರುವ ಮೀರಾ ನಾಯರ್ ಅವರಿಂದ ಎಡಪಂಥೀಯ ರಾಜಕಾರಣದ ತಾತ್ವಿಕತೆಯನ್ನು ದಕ್ಕಿಸಿಕೊಂಡವರು ಜೋಹ್ರಾನ್. ನ್ಯೂಯಾರ್ಕ್‌ನ ವಲಸೆ, ಬಡತನ ಸೇರಿದಂತೆ ಅಮೆರಿಕದ ಹಾಗೂ ಜಗತ್ತಿನ ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಬಗ್ಗೆ ಸದಾ ಜಾಗೃತವಾಗಿದ್ದು, ಪ್ರತಿಕ್ರಿಯಿಸುತ್ತಿದ್ದರು.
ಮೋದಿ ವಿರೋಧಿ: ಜೋಹ್ರಾನ್, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ತಾತ್ವಿಕತೆಯ ಕಟು ಟೀಕಾಕಾರರು. ಗುಜರಾತ್‌ನ ಗಲಭೆಗಳ ಸಂಬಂಧ ಮೋದಿ ಅವರನ್ನು ‘ಯುದ್ಧ ಅಪರಾಧಿ’ ಎಂದು ಟೀಕಿಸಿದ್ದರು. ಮೋದಿ ಅವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದಾಗ, ಅದನ್ನು ವಿರೋಧಿಸಿ ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಪ್ರತಿಭಟನೆಯನ್ನು ಆಯೋಜಿಸಿದ್ದರು. ‘ಹಿಂದೂ ಆಗಿದ್ದ ನನ್ನ ತಾತ ಉರ್ದು ಕಾವ್ಯ ಓದುತ್ತಿದ್ದರು ಮತ್ತು ಮುಸ್ಲಿಂ ಆಗಿದ್ದ ಅಜ್ಜಿ ಗುಜರಾತಿನಲ್ಲಿ ಭಜನೆಗಳನ್ನು ಹಾಡುತ್ತಿದ್ದರು. ಅಂಥ ಬಹುತ್ವದ ಭಾರತದಲ್ಲಿ ಬಿಜೆಪಿಯು ರಾಜಕೀಯ ಧ್ರುವೀಕರಣಕ್ಕಾಗಿ ಸಮುದಾಯಗಳ ನಡುವೆ ಹಿಂಸೆಯನ್ನು ಬಿತ್ತುತ್ತಿದೆ’ ಎಂದು ವ್ಯಾಖ್ಯಾನಿಸಿದ್ದರು. ಹಿಂದೂ ರಾಷ್ಟ್ರೀಯವಾದವು ಅಮೆರಿಕದ ಸಾಮಾಜಿಕ ರಾಜಕೀಯ ರಂಗಗಳಿಗೂ ವ್ಯಾಪಿಸುತ್ತಿದೆ ಎಂದು ಅವರು ಇತ್ತೀಚೆಗೆ ದೀಪಾವಳಿಯ ಸಂದರ್ಭದಲ್ಲಿ ಹೇಳಿದ್ದರು.
ಮಮ್ದಾನಿ ಅವರ ಬಿಜೆಪಿ ಟೀಕೆಯು ಅಮೆರಿಕದ ಒಳಗೆ ಮತ್ತು ಹೊರಗೆ ಹಿಂದೂಗಳನ್ನು ಕೆರಳಿಸಿತ್ತು. ದಕ್ಷಿಣ ಅಮೆರಿಕದ ಹಿಂದೂ ಒಕ್ಕೂಟವು (ಸಿಒಎಚ್‌ಎನ್‌ಎ) ಅವರ ಉಮೇದುವಾರಿಕೆಯನ್ನು ವಿರೋಧಿಸಿತ್ತು. ಅಮೆರಿಕದ ಸುಮಾರು 20ಕ್ಕೂ ಹೆಚ್ಚು ಹಿಂದೂಪರ ಸಂಘಟನೆಗಳು ಮಮ್ದಾನಿ ವಿರುದ್ಧ ಹಲವು ರೀತಿಯ ಪ್ರತಿಭಟನೆ ದಾಖಲಿಸಿದ್ದವು. ‘ಮಮ್ದಾನಿ ತಿರಸ್ಕರಿಸಿ, ನ್ಯೂಯಾರ್ಕ್ ರಕ್ಷಿಸಿ’ ಎಂಬ ಆಂದೋಲನ ನಡೆಸಿದ್ದವು.
ಇಸ್ರೇಲ್‌ನಿಂದ ಜನಾಂಗೀಯ ಹತ್ಯೆ: ಮಮ್ದಾನಿ ಅವರ ಇಸ್ರೇಲ್ ಕುರಿತ ನಿಲುವುಗಳೂ ಚರ್ಚೆ ಹುಟ್ಟುಹಾಕಿವೆ. ಗಾಜಾದಲ್ಲಿ ಇಸ್ರೇಲ್ ಜನಾಂಗೀಯ ಹತ್ಯೆ ನಡೆಸುತ್ತಿದೆ ಎಂದು ಮಮ್ದಾನಿ ಹಲವು ಬಾರಿ ಟೀಕಿಸಿದ್ದಾರೆ. ಯಾವುದೇ ಧರ್ಮ ಅಥವಾ ವರ್ಣದ ಆಧಾರದಲ್ಲಿ ದೇಶವೊಂದು ತನ್ನ ಅಸ್ತಿತ್ವ ಪ್ರತಿಪಾದಿಸುವುದನ್ನು ತಾನು ಒಪ್ಪುವುದಿಲ್ಲ ಎಂದಿದ್ದರು.
ಭಾರತ, ಉಗಾಂಡ ಮತ್ತು ಅಮೆರಿಕದ ಬಹು ಜನಾಂಗೀಯತೆ ಹಾಗೂ ತಾತ್ವಿಕತೆಗಳ ಸಮ್ಮಿಶ್ರಣವಾಗಿರುವ ಜೋಹ್ರಾನ್ ಮಮ್ದಾನಿ ಅವರು ನ್ಯೂಯಾರ್ಕ್ ಮೇಯರ್ ಆಗಿ ಆಯ್ಕೆಯಾಗಿರುವುದು ಅಮೆರಿಕದ ಚರಿತ್ರೆಯಲ್ಲಿ ಒಂದು ಅನಿರೀಕ್ಷಿತವಾದ ಮತ್ತು ಕುತೂಹಲಕಾರಿಯಾದ ಘಟ್ಟವಾಗಿದೆ.
ಉಮರ್ ಖಾಲಿದ್‌ಗೆ ಬೆಂಬಲ
2023ರಲ್ಲಿ ಜೋಹ್ರಾನ್ ಮಮ್ದಾನಿ ಅವರು, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಮುಖಂಡರಾಗಿದ್ದ ಉಮರ್ ಖಾಲಿದ್ ಅವರ ಪತ್ರವೊಂದನ್ನು ಓದಿದ್ದರು. ಶ್ವೇತಭವನಕ್ಕೆ ನರೇಂದ್ರ ಮೋದಿ ಅವರು ಭೇಟಿ ನೀಡುವ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ‘ಹೌಡಿ ಡೆಮಾಕ್ರಸಿ’ ಕಾರ್ಯಕ್ರಮದಲ್ಲಿ ಅವರು ಖಾಲಿದ್ ಅವರ ‘ಜೈಲು ಡೈರಿ’ಯನ್ನು ಓದಿದ್ದರು.
‘ಲೇಖಕ, ಸಾಮಾಜಿಕ ಕಾರ್ಯಕರ್ತರಾಗಿದ್ದ ಖಾಲಿದ್ ಅವರು ದ್ವೇಷ ಮತ್ತು ಗುಂಪು ಹಲ್ಲೆ ವಿರೋಧಿಸಿ ಪ್ರತಿಭಟನೆಗಳನ್ನು ನಡೆಸಿದ್ದರು. ಅವರನ್ನು ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ ಅಡಿ ಬಂಧಿಸಲಾಗಿದ್ದು, ಜೈಲಿನಲ್ಲಿ ಅವರು ಒಂದು ಸಾವಿರಕ್ಕೂ ಹೆಚ್ಚು ದಿನ ಕಳೆದಿದ್ದಾರೆ. ಅವರ ವಿರುದ್ಧ ಹತ್ಯೆ ಪ್ರಯತ್ನವೂ ನಡೆದಿದೆ’ ಎಂದಿದ್ದರು.
ಕೈ ಹಿಡಿದ ಭಿನ್ನ ಪ್ರಚಾರ
ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೊಹ್ರಾನ್ ಮಮ್ದಾನಿ ಅವರು ಡೆಮಾಕ್ರಟಿಕ್ ಸೋಷಿಯಲಿಸ್ಟ್ಸ್ ಆಫ್ ಅಮೆರಿಕದ (ಡಿಎಸ್‌ಎ) ಸದಸ್ಯರೂ ಹೌದು. ಪ್ರಗತಿಪರ ಮತ್ತು ಎಡಪಂಥೀಯ ನಿಲುವನ್ನು ಹೊಂದಿರುವ ಈ ರಾಜಕೀಯ ಸಂಘಟನೆಯು ಮಮ್ದಾನಿ ಅವರ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತಿದ್ದ ಡೆಮಾಕ್ರಟಿಕ್ ಪಕ್ಷಕ್ಕೆ ಮಮ್ದಾನಿ ಅವರ ಗೆಲುವು ಹೊಸ ಚೈತನ್ಯ ನೀಡಿದೆ. ಟ್ರಂಪ್ ಅವರ ಗೆಲುವು ಮತ್ತು ಅವರ ‘ಅಮೆರಿಕ ಮೊದಲು’ ನೀತಿಯ ಅಬ್ಬರದ ನಡುವೆಯೇ ಮಮ್ದಾನಿ ಮತ್ತು ಅವರ ತಂಡ ವಿಭಿನ್ನವಾದ ಪ್ರಚಾರದ ಮೊರೆ ಹೋಗಿದ್ದು ಮತ್ತು ನ್ಯೂಯಾರ್ಕ್ ನಿವಾಸಿಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆಗೊಳಿಸುವ ಜನಸ್ನೇಹಿ ಭರವಸೆಗಳನ್ನು ಘೋಷಣೆ ಮಾಡಿದ್ದು ಅವರ ಗೆಲುವಿಗೆ ಕೊಡುಗೆ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
* ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದರೂ ಮಮ್ದಾನಿ ಪರವಾಗಿ ಹೆಚ್ಚು ಕೆಲಸ ಮಾಡಿದ್ದು ಡಿಎಸ್‌ಎ. ಸಮಾಜವಾದಿ ನಿಲುವನ್ನು ಹೊಂದಿರುವ ಅವರ ಜೊತೆ ದೊಡ್ಡ ಸ್ವಯಂಸೇವಕರ ಪಡೆಯೇ ಇತ್ತು. ಈ ಚುನಾವಣೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಮ್ದಾನಿ ಪರ ಪ್ರಚಾರ ನಡೆಸಿದರು. ಅವರ ಪ್ರತಿಸ್ಪರ್ಧಿಗಳು ಪ್ರಚಾರಕ್ಕಾಗಿ ಹಣ ನೀಡಿ ಜನರನ್ನು ನಿಯೋಜಿಸಿದ್ದರು. ನ್ಯೂಯಾರ್ಕ್‌ನ ಇತಿಹಾಸದಲ್ಲಿ ಮೇಯರ್ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರ ಪರ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸ್ವಯಂಸೇವಕರು ಭಾಗವಹಿಸಿದ್ದು ಇದೇ ಮೊದಲು
* ಮಮ್ದಾನಿ ಪ್ರತಿಸ್ಪರ್ಧಿಗಳು ಚುನಾವಣೆಗೆ ದೇಣಿಗೆ ಸಂಗ್ರಹಿಸುವುದಕ್ಕಾಗಿ ಶ್ರೀಮಂತರು, ಕಾರ್ಪೊರೇಟ್ ಕಂಪನಿಗಳನ್ನು ಎಡತಾಕಿದರೆ, ಇವರು ಬಡವರು, ಮಧ್ಯಮ ವರ್ಗದವರನ್ನು ಸಂಪರ್ಕಿಸಿದರು
* ಜನರು ನಿರೀಕ್ಷೆಗೂ ಮೀರಿ ಮಮ್ದಾನಿ ಮನವಿಗೆ ಸ್ಪಂದಿಸಿದರು. ಬೇಗ ಅವರಿಗೆ ಬೇಕಾದಷ್ಟು ದೇಣಿಗೆಯೂ ಸಂಗ್ರಹವಾಯಿತು
* ಬಡವರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದಕ್ಕಾಗಿ ಶ್ರೀಮಂತರು ಹಾಗೂ ಕಾರ್ಪೊರೇಟ್ ಕಂಪನಿಗಳಿಗೆ ಹೆಚ್ಚು ತೆರಿಗೆ ವಿಧಿಸಬೇಕು ಎಂಬುದು ಡಿಎಸ್‌ಎಯ ನಿಲುವು. ಮಮ್ದಾನಿ ಅವರು ತಮ್ಮ ಚುನಾವಣಾ ಅಭಿಯಾನದಲ್ಲಿ, ತಾವು ಗೆದ್ದರೆ ಶ್ರೀಮಂತರು ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ಹೆಚ್ಚು ತೆರಿಗೆ ವಿಧಿಸುವ ಭರವಸೆಯನ್ನು ನೀಡಿದರು
ಜನಮನ ಸೆಳೆದ ಭರವಸೆಗಳು
* ವಲಸಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವ ನ್ಯೂಯಾರ್ಕ್‌ನಲ್ಲಿ ಜೀವನ ವೆಚ್ಚ ದುಬಾರಿ. ಮನೆ ಬಾಡಿಗೆ ಸೇರಿದಂತೆ ಇತರೆ ಖರ್ಚುಗಳಿಗಾಗಿ ಜನರು ಹೆಚ್ಚು ಹಣ ತೆರಬೇಕು. ಸ್ವತಃ ವಲಸಿಗರಾಗಿರುವ ಮಮ್ದಾನಿ ಅವರು ಜನರ ಆರ್ಥಿಕ ಹೊರೆಯನ್ನು ಇಳಿಸುವ ವಾಗ್ದಾನ ನೀಡಿದರು. ಪೂರಕವಾಗಿ ಜನಸ್ನೇಹಿ ನೀತಿಗಳನ್ನು ಘೋಷಿಸಿದರು
* ನ್ಯೂಯಾರ್ಕ್‌ನ ಬಹುಪಾಲು ನಿವಾಸಿಗಳಿಗೆ ಸ್ವಂತ ಮನೆಗಳಿಲ್ಲ. ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಅಂದಾಜಿನ ಪ್ರಕಾರ 20 ಲಕ್ಷ ಜನರು ಬಾಡಿಗೆ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸ ಮಾಡುತ್ತಿದ್ದಾರೆ. ತಾವು ಅಧಿಕಾರಕ್ಕೆ ಬಂದರೆ ಮನೆ ಬಾಡಿಗೆಯನ್ನು ಹೆಚ್ಚಿಸುವುದಕ್ಕೆ ನಿಯಂತ್ರಣ ಹೇರುವುದಾಗಿ ಮತ್ತು ನ್ಯೂಯಾರ್ಕ್ ನಿವಾಸಿಗಳಿಗೆ ಕೈಗೆಟುಕುವ ದರದಲ್ಲಿ ವಸತಿ ಕಲ್ಪಿಸುವ ಘೋಷಣೆ ಮಾಡಿದರು
* ಬಾಡಿಗೆದಾರರ ಸುರಕ್ಷತೆ ಖಾತರಿ ಪಡಿಸದ ಮತ್ತು ಕನಿಷ್ಠ ಸೌಲಭ್ಯಗಳನ್ನು ನೀಡದ ಮನೆ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಘೋಷಣೆಯೂ ಅವರ ಭರವಸೆಗಳ ಪಟ್ಟಿಯಲ್ಲಿತ್ತು
* ನ್ಯೂಯಾರ್ಕ್ ನಗರದ ಭದ್ರತೆಗೆ ವಿಶೇಷ ಗಮನ ನೀಡುವುದು, ಜನರ ಜೇಬಿಗೆ ಹೊರೆಯಾಗದಂತೆ ಸ್ಥಳೀಯ ಆಡಳಿತ ಮಾಲೀಕತ್ವದ ದಿನಸಿ ಮಳಿಗೆಗಳ ಸ್ಥಾಪನೆ, ಸಾರ್ವಜನಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ, ಕಾರ್ಪೊರೇಟ್ ಶೋಷಣೆಗೆ ಕಡಿವಾಣ ಹಾಕುವುದು... ಈ ಘೋಷಣೆಗಳು ಜನರನ್ನು ಸೆಳೆದವು
* 5 ವಾರಗಳಿಂದ ಐದು ವರ್ಷ ವಯಸ್ಸಿನ ಮಕ್ಕಳ ಉಚಿತ ಆರೈಕೆಗೆ ಯೋಜನೆ ರೂಪಿಸುವುದು, ಮಕ್ಕಳು ಜನಿಸಿದ ನಂತರ ಅವರ ಪಾಲನೆ ಪೋಷಣೆಗಾಗಿ ಪೋಷಕರಿಗೆ ಅಗತ್ಯವಿರುವ ದಿನಸಿ ಹಾಗೂ ಇನ್ನಿತರ ಸಾಮಗ್ರಿಗಳನ್ನು ಉಚಿತವಾಗಿ ನೀಡುವ ಘೋಷಣೆ, ಸರ್ಕಾರಿ ಶಾಲೆಗಳಿಗೆ ಸಾಕಷ್ಟು ಅನುದಾನ ಮತ್ತು ಸಂಪನ್ಮೂಲಗಳನ್ನು ಹಂಚಿಕೆ ಮಾಡುವುದು, ಶಿಕ್ಷಕರ ನೇಮಕಾತಿ, ಅದಕ್ಕೆ ಪೂರಕವಾಗಿ ಅವರಿಗೆ ತರಬೇತಿ ನೀಡುವುದು ಸೇರಿದಂತೆ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ನೀತಿಗಳು ಕೂಡ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿವೆ
ನ್ಯೂಯಾರ್ಕ್‌ಗೆ ಏಕೆ ಮಹತ್ವ?
ಅಮೆರಿಕದ ಅತ್ಯಂತ ದೊಡ್ಡ ನಗರ. ವಾಣಿಜ್ಯ ರಾಜಧಾನಿಯೂ ಹೌದು. ನ್ಯೂಯಾರ್ಕ್ ರಾಜ್ಯದಲ್ಲಿರುವ ನಗರ ನ್ಯೂಯಾರ್ಕ್. 85 ಲಕ್ಷದಷ್ಟು ಜನಸಂಖ್ಯೆ ಹೊಂದಿದೆ. ಇದರ ವಾರ್ಷಿಕ ಬಜೆಟ್ 11,590 ಕೋಟಿ ಡಾಲರ್. ಅಮೆರಿಕದ ಕೈಗಾರಿಕೆಗಳ ಹೃದಯ ಈ ನಗರ, ನ್ಯೂಯಾರ್ಕ್ ಷೇರು ಪೇಟೆ/ವಾಲ್‌ಸ್ಟ್ರೀಟ್ ಇಲ್ಲೇ ಇದೆ. ಹಾಗಾಗಿ, ವಾಣಿಜ್ಯ ವಹಿವಾಟು ಇಲ್ಲಿ ಹೆಚ್ಚು. ಅಮೆರಿಕದ ಆರ್ಥಿಕತೆಗೆ ದೊಡ್ಡ ಕೊಡುಗೆಯನ್ನೇ ಇದು ನೀಡುತ್ತದೆ.
ಮುಂದಿದೆ ಸವಾಲು
ಮಮ್ದಾನಿ ನೀಡಿರುವ ಭರವಸೆಗಳನ್ನು ಈಡೇರಿಸುವುದು ಸುಲಭವೇನಲ್ಲ. ಹಲವು ಸವಾಲುಗಳು ಅವರ ಮುಂದಿವೆ:
* ಮಮ್ದಾನಿ ಅವರನ್ನು ಬೆಂಬಲಿಸಿದರೆ ಸರ್ಕಾರದ ಅನುದಾನ ಕಡಿತಗೊಳಿಸುವುದಾಗಿ ಅಧ್ಯಕ್ಷ ಟ್ರಂಪ್ ಅವರು ಚುನಾವಣೆಗೂ ಮುನ್ನವೇ ಎಚ್ಚರಿಸಿದ್ದರು. ಕಳೆದ ವರ್ಷ ಸರ್ಕಾರವು ನ್ಯೂಯಾರ್ಕ್ ನಗರಕ್ಕೆ 850 ಕೋಟಿ ಡಾಲರ್ ಅನುದಾನ ನೀಡಿತ್ತು
* ಮಮ್ದಾನಿ ಅವರು ನೀಡಿರುವ ಭರವಸೆಯಂತೆ ಶ್ರೀಮಂತರು, ಕಾರ್ಪೊರೇಟ್ ಕಂಪನಿಗಳ ಮೇಲೆ ಹೆಚ್ಚುವರಿ ತೆರಿಗೆ ಹಾಕಿ ಹಣ ಸಂಗ್ರಹಿಸಬಹುದು. ಆದರೆ, ಇದಕ್ಕೆ ಗವರ್ನರ್ ಒಪ್ಪಿಗೆ ಬೇಕು
* ಲಾಸ್ ಏಂಜಲೀಸ್ ಸೇರಿದಂತೆ ಅಮೆರಿಕದ ಪ್ರಮುಖ ನಗರಗಳಲ್ಲಿ ಅಪರಾಧ ಕೃತ್ಯಗಳನ್ನು ಹತ್ತಿಕ್ಕಲು ಟ್ರಂಪ್ ಅವರು ನ್ಯಾಷನಲ್ ಗಾರ್ಡ್ಸ್‌ಗಳನ್ನು ನಿಯೋಜಿಸಿದ್ದಾರೆ. ಆದರೆ, ನ್ಯೂಯಾರ್ಕ್‌ನಲ್ಲಿ ಇನ್ನೂ ನಿಯೋಜಿಸಿಲ್ಲ. ಟ್ರಂಪ್ ಅವರು ನ್ಯೂಯಾರ್ಕ್ ಮೇಲೆ ನಿಯಂತ್ರಣ ಸಾಧಿಸಲು ಇದನ್ನು ಮಾಡಬಹುದು
* ವಲಸೆ ವಿರೋಧಿ ನೀತಿಯನ್ನು ಜಾರಿಗೆ ತಂದಿರುವ ಟ್ರಂಪ್ ಆಡಳಿತ, ದೇಶದಾದ್ಯಂತ ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದು ನ್ಯೂಯಾರ್ಕ್‌ಗೂ ಅದನ್ನು ವಿಸ್ತರಿಸಬಹುದು
* ಮಮ್ದಾನಿ ಆಯ್ಕೆಯಾಗುತ್ತಲೇ ಅವರ ಬಗ್ಗೆ ಅಸಮಾಧಾನ ಹೊಂದಿರುವ ಕೆಲವು ಪೊಲೀಸರು ಹುದ್ದೆ ತೊರೆಯುತ್ತಿದ್ದಾರೆ
ಆಧಾರ: ಪಿಟಿಐ, ಜೋಹ್ರಾನ್‌ಫಾರ್‌ಎನ್‌ವೈಸಿ.ಕಾಮ್, ಮಾಧ್ಯಮ ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.