ಎರಡು ಭಿನ್ನ ಪ್ರಶ್ನಾವಳಿಗಳ ಮೂಲಕ ಈ ವಿವರಗಳನ್ನು ಸಂಗ್ರಹಿಸಲಾಗುತ್ತದೆ. ಒಟ್ಟಾರೆ ರಾಜ್ಯದ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಅರಿಯಲು ಸಾಧ್ಯವಾಗಲು ಎಲ್ಲ ಸ್ವರೂಪದ ವಿವರಗಳನ್ನು ಸುಮಾರು 50 ಪ್ರಶ್ನೆಗಳ ಮೂಲಕ ಪಡೆಯಲಾಗುತ್ತದೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ(ಜಾತಿವಾರು ಸಮೀಕ್ಷೆ) ಪ್ರತಿ ವ್ಯಕ್ತಿಯ ವೈಯಕ್ತಿಕ ಹಾಗೂ ಕೌಟುಂಬಿಕ ವಿವರಗಳನ್ನು ಕಲೆಹಾಕಲಾಗುತ್ತದೆ.
ಎರಡು ಭಿನ್ನ ಪ್ರಶ್ನಾವಳಿಗಳ ಮೂಲಕ ಈ ವಿವರಗಳನ್ನು ಸಂಗ್ರಹಿಸಲಾಗುತ್ತದೆ. ಒಟ್ಟಾರೆ ರಾಜ್ಯದ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಅರಿಯಲು ಸಾಧ್ಯವಾಗಲು ಎಲ್ಲ ಸ್ವರೂಪದ ವಿವರಗಳನ್ನು ಸುಮಾರು 50 ಪ್ರಶ್ನೆಗಳ ಮೂಲಕ ಪಡೆಯಲಾಗುತ್ತದೆ.
ಪ್ರತಿಯೊಬ್ಬರೂ ಲಿಂಗ, ವಯಸ್ಸು, ವೈವಾಹಿಕ ಮಾಹಿತಿ, ಧರ್ಮ, ಜಾತಿ, ಉಪಜಾತಿಯ ವಿವರದ ಜತೆಗೆ ಅವರು ಪ್ರತಿನಿಧಿಸುವ ಜಾತಿಗೆ ಸಮಾನಾರ್ಥಕವಾದ ಬೇರೊಂದು ಹೆಸರು ಇದ್ದರೆ ಅದನ್ನು, ಮಾತೃಭಾಷೆ ಮತ್ತು ಅಂಗವೈಕಲ್ಯವಿದ್ದರೆ ಆ ಎಲ್ಲ ವಿವರಗಳನ್ನು ಒದಗಿಸಬೇಕು. ವೈವಾಹಿಕ ವಿವರದಲ್ಲಿ ಅಂತರ್ಜಾತಿ, ಅಂತರಧರ್ಮೀಯ ವಿವಾಹಗಳು, ವಿಧವಾ ಪುನರ್‌ವಿವಾಹ, ವಿಚ್ಛೇದನದ ವಿವರಗಳನ್ನೂ ದಾಖಲಿಸಬೇಕಿದೆ. ಕೃಷಿ ಜಮೀನು, ಮನೆ, ವಾಹನ, ಕೊಳವೆಬಾವಿ, ಸಾಲದ ವಿವರಗಳನ್ನೂ ಸಮೀಕ್ಷಾದಾರರು ಸಂಗ್ರಹಿಸುತ್ತಾರೆ.
ಪ್ರತಿಯೊಬ್ಬರೂ ತಮ್ಮ ಶಿಕ್ಷಣಕ್ಕೆ ಸಂಬಂಧಿಸಿದ ವಿವರಗಳನ್ನೂ ಸಮೀಕ್ಷಾದಾರರಿಗೆ ನೀಡಬೇಕಾಗುತ್ತದೆ. ಅನಕ್ಷರಸ್ಥರಾಗಿದ್ದರೆ, ಶಿಕ್ಷಣ ಪಡೆಯದೇ ಇರಲು ಕಾರಣಗಳೇನು ಎಂಬುದನ್ನು ನಮೂದಿಸಬೇಕಾಗುತ್ತದೆ. ಬಡತನ ಅಥವಾ ಶಾಲೆ ಲಭ್ಯವಿಲ್ಲದೇ ಇರುವುದು ಅಥವಾ ಜಾತಿ ಭೇದದ ಕಾರಣಕ್ಕೆ ಅಥವಾ ಕುಟುಂಬದ ವಲಸೆ ಅಥವಾ ಕುಟುಂಬದ ಜವಾಬ್ದಾರಿ ಹೊರಲು ಶಿಕ್ಷಣ ಪಡೆಯಲಾಗಲಿಲ್ಲ ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕಾಗುತ್ತದೆ. ಶಿಕ್ಷಣದ ಮಧ್ಯೆಯೇ ಶಾಲೆ ಬಿಟ್ಟಿದ್ದರೆ, ಅದಕ್ಕೂ ಕಾರಣಗಳನ್ನು ನಮೂದಿಸಬೇಕಿದೆ.
ಶಿಕ್ಷಣ ಪಡೆದವರು ಸರ್ಕಾರಿ ಶಾಲೆಯಲ್ಲಿ ಅಥವಾ ಖಾಸಗಿ ಶಾಲೆಯಲ್ಲಿ ಪಡೆಯಲಾಯಿತೇ, ಎಲ್ಲಿಯವರೆಗೆ ಶಿಕ್ಷಣ ಪಡೆಯಲಾಗಿದೆ, ಶಿಕ್ಷಣದ ಸ್ವರೂಪ, ಕಲಿಕೆ ಮಾಧ್ಯಮದ ವಿವರವನ್ನೂ ನೀಡಬೇಕು. ಇದರ ಜತೆಯಲ್ಲಿಯೇ ಉದ್ಯೋಗದ ವಿವರಗಳನ್ನು ಒದಗಿಸಬೇಕು. ಸರ್ಕಾರಿ ಉದ್ಯೋಗವೇ, ಖಾಸಗಿ ಉದ್ಯೋಗವೇ, ಅರೆಕಾಲಿಕ, ಸ್ವಂತ ಉದ್ಯೋಗ, ವ್ಯಾಪಾರ, ಕೃಷಿ, ದಿನಗೂಲಿ, ಕುಲಕಸುಬು ಮಾಡಲಾಗುತ್ತಿದೆಯೇ ಎಂಬುದನ್ನು ಸಮೀಕ್ಷೆದಾರರಿಗೆ ತಿಳಿಸಬೇಕಾಗುತ್ತದೆ. ಕುಲಕಸುಬಿನ ಕಾರಣಕ್ಕೆ ಅನಾರೋಗ್ಯದ ಉಂಟಾಗಿದ್ದರೆ, ಆ ವಿವರಗಳನ್ನೂ ಒದಗಿಸಬೇಕಾಗುತ್ತದೆ.
ಇದರ ಜತೆಯಲ್ಲಿ ಮೀಸಲಾತಿ ನೀತಿಯ ಕಾರಣದಿಂದ ಶಿಕ್ಷಣ, ಉದ್ಯೋಗ, ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ, ವಿದ್ಯಾರ್ಥಿ ವೇತನ, ಬಡ್ತಿ, ಗುತ್ತಿಗೆ ಮತ್ತು ಇತರೆ ಸವಲತ್ತುಗಳನ್ನು (ಗಂಗಾ ಕಲ್ಯಾಣ, ಹೈನುಗಾರಿಕೆ ಮತ್ತಿತರ ಚಟುವಟಿಕೆಗಳಿಗೆ ಸಹಾಯಧನ ಇತ್ಯಾದಿ) ಪಡೆದಿದ್ದರೆ, ಆ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಬೇಕಾಗುತ್ತದೆ. ಕಡೆಗೆ ವಾರ್ಷಿಕ ಆದಾಯ, ಆದಾಯ ತೆರಿಗೆ ಪಾವತಿಸುತ್ತಿದ್ದರೆ ಅದರ ವಿವರ, ಬ್ಯಾಂಕ್ ಖಾತೆ, ಜೀವ ವಿಮೆಯ ವಿವರಗಳನ್ನು ಒದಗಿಸಬೇಕಾಗುತ್ತದೆ. ವ್ಯಕ್ತಿಯು ಚುನಾಯಿತ ಅಥವಾ ನಾಮನಿರ್ದೇಶಿತ ಪ್ರತಿನಿಧಿಯಾಗಿದ್ದರೆ ಆ ವಿವರಗಳನ್ನೂ ನೀಡಬೇಕಾಗುತ್ತದೆ.
ಒಟ್ಟಾರೆಯಾಗಿ ಜನರ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪ್ರಾತಿನಿಧ್ಯದ ವಿವರಗಳನ್ನು ಕೋಡ್‌ಗಳ ರೂಪದಲ್ಲಿ ಸಂಗ್ರಹಿಸಲಾಗುತ್ತದೆ. ಸಮೀಕ್ಷೆ ವೇಳೆ ಸಮೀಕ್ಷಾದಾರರು ಒದಗಿಸುವ ಕೈಪಿಡಿಯಲ್ಲಿ ಈ ಕೋಡ್‌ಗಳು ಮತ್ತು ಅವುಗಳಿಗೆ ಸಂಬಂಧಿಸಿದ ವಿವರಗಳು ಇರುತ್ತವೆ. ಅವುಗಳನ್ನು ಸಾವಧಾನವಾಗಿ ಪರಿಶೀಲಿಸಿ, ಕೋಡ್ ಆಯ್ಕೆ ಮಾಡಬೇಕು ಎಂದು ಹಿಂದುಳಿದ ವರ್ಗಗಳ ಆಯೋಗವು ಕರೆ ನೀಡಿದೆ.
ಎಂಟು ಹಂತಗಳ ಪ್ರಕ್ರಿಯೆ
ಒಟ್ಟು ಎಂಟು ಹಂತಗಳಲ್ಲಿ ಸಮೀಕ್ಷೆಯನ್ನು ನಡೆಸಲು ಹಿಂದುಳಿದ ವರ್ಗಗಳ ಆಯೋಗವು ಯೋಜನೆ ರೂಪಿಸಿದೆ. ಒಂದು ಹಂತದ ಕಾರ್ಯ ಪೂರ್ಣಗೊಂಡ ನಂತರವೇ ಮತ್ತೊಂದು ಹಂತದ ಕಾರ್ಯ ಆರಂಭವಾಗಲಿದೆ. ಹಿಂದಿನ ಹಂತಗಳಲ್ಲಿ ಗುರುತಿಸಲಾದ, ಸಂಗ್ರಹಿಸಲಾದ ಮಾಹಿತಿ ಮತ್ತು ದತ್ತಾಂಶಗಳನ್ನು ಪ್ರತಿಹಂತದಲ್ಲೂ ಖಚಿತಪಡಿಸಿಕೊಂಡು ಮುಂದುವರಿಯಲಾಗುತ್ತದೆ. ಆ ಹಂತಗಳ ವಿವರ ಇಲ್ಲಿದೆ.
1. ಫೀಲ್ಡ್ ಲಿಸ್ಟಿಂಗ್/ಜಿಪಿಎಸ್ ಕ್ಯಾಪ್ಚರ್/ಮನೆ ಗುರುತಿಸುವುದು
ಎಸ್ಕಾಂಗಳ ಮೀಟರ್ ರೀಡರ್‌ಗಳು, ಗ್ರಾಮ ಆಡಳಿತಾಧಿಕಾರಿ ಹಾಗೂ ಇತರ ಸಿಬ್ಬಂದಿ ತಮಗೆ ವಹಿಸಲಾದ ವ್ಯಾಪ್ತಿಯಲ್ಲಿರುವ ಪ್ರತಿ ಮನೆಗೂ ಈಗಾಗಲೇ ಭೇಟಿ ನೀಡಿ, ಅವುಗಳ ಜಿಯೋ ಟ್ಯಾಗಿಂಗ್ ಮಾಡಿದ್ದಾರೆ. (ಜಿಪಿಎಸ್ ಕೋಆರ್ಡಿನೇಟ್ಸ್– ಅಕ್ಷಾಂಶ ಮತ್ತು ರೇಖಾಂಶವನ್ನು ನಿಖರವಾಗಿ ಗುರುತಿಸಬೇಕು).
ಆ ವಿವರಗಳನ್ನು ಆ್ಯಪ್‌ನಲ್ಲಿ ದಾಖಲಿಸಿದ ಕೂಡಲೇ, ಆ ಮನೆಗೆಂದೇ ಪ್ರತ್ಯೇಕ ವಿಶಿಷ್ಟ ಗುರುತಿನ ಸಂಖ್ಯೆಯನ್ನು (ಯೂನಿಕ್ ಹೌಸ್‌ಹೋಲ್ಡ್ ಐಡಿ–ಯುಎಚ್‌ಐಡಿ) ಸೃಷ್ಟಿಯಾಗುತ್ತದೆ. ಜತೆಗೆ ಕುಟುಂಬದ ಮುಖ್ಯಸ್ಥ, ವಿಳಾಸ, ವಿದ್ಯುತ್ ಸಂಪರ್ಕದ ಕೆಟಗರಿ ಇತ್ಯಾದಿ ಮಾಹಿತಿಗಳನ್ನ ದಾಖಲಿಸುತ್ತದೆ
2. ಮನೆಗೆ ಸ್ಟಿಕರ್ ಅಂಟಿಸುವುದು
ಯುಎಚ್‌ಐಡಿ ಸಂಖ್ಯೆ ಬರೆಯಲು ಅವಕಾಶವಿರುವ ಸ್ಟಿಕರ್ ಒಂದನ್ನು ಮನೆಯ ಮುಂಬಾಗಿಲಿಗೆ ಅಂಟಿಸಲಾಗುತ್ತದೆ. ಒಂದು ಕಟ್ಟಡದಲ್ಲಿರುವ ಎಲ್ಲ ಮನೆಗಳಿಗೂ ಪ್ರತ್ಯೇಕ ಸ್ಟಿಕರ್ ಅಂಟಿಸಲಾಗುತ್ತದೆ. ವಸತಿ ಸಮುಚ್ಚಯದ ಒಂದು ಕಟ್ಟಡಕ್ಕೆ ಒಂದು ಜಿಪಿಎಸ್ ಕೋಆರ್ಡಿನೇಟ್ಸ್ ಸೃಜಿಸಲಾಗುತ್ತದೆ. ಆದರೆ, ಪ್ರತಿ ಫ್ಲ್ಯಾಟ್‌ಗೆ ಪ್ರತ್ಯೇಕ ಯುಎಚ್‌ಐಡಿ ನೀಡಲಾಗುತ್ತದೆ ಮತ್ತು ಪ್ರತ್ಯೇಕ ಸ್ಟಿಕರ್ ಅಂಟಿಸಲಾಗುತ್ತದೆ
3. ಮನೆಪಟ್ಟಿಯ ರಚನೆ
ಜಿಯೋಟ್ಯಾಗ್ ವಿವರ ಮತ್ತು ಯುಎಚ್‌ಐಡಿ ವಿವರಗಳನ್ನು ಸಂಯೋಜಿಸಿ, ಒಂದು ಪ್ರದೇಶದಲ್ಲಿ ಇರುವ ಎಲ್ಲ ಮನೆಗಳ ವಿವರ ಇರುವ ಪಟ್ಟಿಯನ್ನು ರಚಿಸಲಾಗುತ್ತದೆ. ಅಗತ್ಯವಾದಲ್ಲಿ, ಮನೆಗೆ ಭೇಟಿ ನೀಡಿ ವಿವರಗಳನ್ನು ಪರಿಷ್ಕರಿಸಲಾಗುತ್ತದೆ
4. ಸಮೀಕ್ಷಾ ಬ್ಲಾಕ್‌ಗಳ ರಚನೆ
ಪ್ರತಿ 100ರಿಂದ 150 ಮನೆಗಳಿಗೆ (ಕಟ್ಟಡಗಳಲ್ಲ. ಒಂದು ಕಟ್ಟಡದಲ್ಲಿ ಒಂದೇ ಮನೆ ಇರಬಹುದು ಅಥವಾ ಹಲವು ಮನೆಗಳು ಇರಬಹುದು) ಒಂದರಂತೆ ಸಮೀಕ್ಷಾ ಬ್ಲಾಕ್‌ಗಳನ್ನು ರಚಿಸಲಾಗಿದೆ. ಪ್ರತಿ ಸಮೀಕ್ಷಾ ಬ್ಲಾಕ್‌ಗೂ ಪ್ರತ್ಯೇಕ ಕೋಡ್ ನೀಡಲಾಗಿದೆ
5. ಸಮೀಕ್ಷಾ ಅನುಸೂಚಿ ಸಿದ್ಧತೆ
4ನೇ ಹಂತದಲ್ಲಿ ರಚಿಸಲಾದ ಸಮೀಕ್ಷಾ ಬ್ಲಾಕ್‌ಗಳ ಆಧಾರದಲ್ಲಿ, ಆ ಬ್ಲಾಕ್‌ನ ನಕ್ಷೆಯನ್ನು ಸಿದ್ದಪಡಿಸಲಾಗುತ್ತದೆ. ನಕ್ಷೆಯು ಡಿಜಿಟಲ್ ಮತ್ತು ಮುದ್ರಿತ ಸ್ವರೂಪ, ಎರಡೂ ರೀತಿ ಲಭ್ಯವಿರಲಿದೆ. ಆಯಾ ಬ್ಲಾಕ್‌ನಲ್ಲಿರುವ ಮನೆಗಳ ಪಟ್ಟಿ, ಅವುಗಳ ಯುಚ್‌ಐಡಿ ಸಂಖ್ಯೆ, ಜಿಪಿಎಸ್ ಕೋಆರ್ಡಿನೇಟ್ಸ್ ಇರುವ ಸಮೀಕ್ಷಾ ಸಾಮಗ್ರಿಯನ್ನು ರೂಪಿಸಲಾಗುತ್ತದೆ. ಅವುಗಳನ್ನು ಸಮೀಕ್ಷಾದಾರರಿಗೆ ಒದಗಿಸಲಾಗುತ್ತದೆ
6. ಪ್ರಶ್ನಾವಳಿಗೆ ಅನುಗುಣವಾಗಿ ಕುಟುಂಬಗಳ (ಮನೆಗಳ) ಪರಿಶೀಲನೆ, ಸಮೀಕ್ಷಾ ಐಡಿ ಸೃಜನೆ
ಸಮೀಕ್ಷಾದಾರರು ತಮಗೆ ವಹಿಸಲಾದ ಬ್ಲಾಕ್‌ನ ಪ್ರತಿ ಮನೆಗೆ ಭೇಟಿ ನೀಡಿ, ಅಲ್ಲಿ ಅಂಟಿಸಿರುವ ಸ್ಟಿಕರ್ ಅನ್ನು ಪರಿಶೀಲಿಸಬೇಕು. ಅದರಲ್ಲಿರುವ ಯುಎಚ್‌ಐಡಿಯನ್ನು ಆ್ಯಪ್‌ನಲ್ಲಿ ಎಂಟ್ರಿ ಮಾಡಬೇಕು. ಈ ಹಿಂದಿನ ಹಂತಗಳಲ್ಲಿ ಯಾವುದಾದರೂ ಮನೆಗಳು ಬಿಟ್ಟುಹೋಗಿದ್ದರೆ, ಅವುಗಳನ್ನು ಆ್ಯಪ್‌ನಲ್ಲಿ ಸೇರಿಸಬೇಕು
ಪರಿಶೀಲನೆಯ ವಿವರಗಳನ್ನು ದಾಖಲಿಸಿದ ನಂತರ ಪ್ರತಿ ಮನೆಯ ಯುಎಚ್‌ಐಡಿಯ ಜತೆಗೆ, ಹೊಸದಾಗಿ ‘ಸಮೀಕ್ಷಾ ಐಡಿ’ ಸಹ ಜನರೇಟ್ ಆಗಲಿದೆ. ಈ ಹಂತದಲ್ಲಿಯೇ ಪ್ರಶ್ನಾವಳಿಗಳಿಗೆ ಅನುಗುಣವಾಗಿ ಕುಟುಂಬದ ಸದಸ್ಯರ ವಿವರಗಳನ್ನು ದಾಖಲಿಸಿಕೊಳ್ಳುತ್ತಾರೆ
7. ಅಂತಿಮ ದೃಢೀಕರಣ
ಪ್ರಶ್ನಾವಳಿ ಆಧರಿಸಿದ ವಿವರ ದಾಖಲಿಸುವ ಕಾರ್ಯ ಪೂರ್ಣಗೊಂಡ ನಂತರ, ಮನೆಯ ಮುಂಬಾಗಿಲಿಗೆ ಅಂಟಿಸಲಾಗಿರುವ ಸ್ಟಿಕರ್‌ನಲ್ಲಿರುವ ಯುಎಚ್‌ಐಡಿ ಮತ್ತು ಸಮೀಕ್ಷಾ ಐಡಿಯನ್ನು ದೃಢಪಡಿಸಿಕೊಳ್ಳಬೇಕು. ಮೇಲ್ವಿಚಾರಣೆ ಮತ್ತು ಮರುಪರಿಶೀಲನೆಯಲ್ಲಿ ಇದು ನೆರವಿಗೆ ಬರಲಿದೆ
8. ಮೇಲ್ವಿಚಾರಣೆ ಮತ್ತು ಗುಣಮಟ್ಟ ನಿಯಂತ್ರಣ
ಪ್ರತಿ ಬ್ಲಾಕ್‌ನಲ್ಲಿರುವ ಮನೆಗಳ ಪೈಕಿ ಶೇ 5ರಿಂದ ಶೇ 10ರಷ್ಟು ಮನೆಗಳನ್ನು ಆಯ್ಕೆ ಮಾಡಿಕೊಂಡು ಮರುಪರಿಶೀಲನೆ ನಡೆಸಲಾಗುತ್ತದೆ. ಈ ಕೆಲಸವನ್ನು ಸಮೀಕ್ಷಾದಾರರ ಮೇಲ್ವಿಚಾರಕರು ಮಾಡುತ್ತಾರೆ. ಈ ಹಂತದಲ್ಲಿ ತಪ್ಪುಗಳನ್ನು ಸರಿಪಡಿಸಲಾಗುತ್ತದೆ
ವಿದ್ಯುತ್ ಸಂಪರ್ಕವೇ ಇಲ್ಲದ ಕುಗ್ರಾಮ, ಗುಡ್ಡಗಾಡು ಪ್ರದೇಶಗಳಲ್ಲಿ ಮನೆ–ಮನೆಗೆ ಭೇಟಿ ನೀಡಲಾಗುತ್ತದೆ. ಆ ಸ್ಥಳದಲ್ಲಿ ನಿಂತು ಜಿಪಿಎಸ್ ಕೋಆರ್ಡಿನೇಟ್‌ಗಳನ್ನು ಪತ್ತೆಮಾಡಿ, ಅದರ ಆಧಾರದಲ್ಲಿ ಯುಎಚ್‌ಐಡಿಗಳನ್ನು ಸೃಜಿಸಲಾಗುತ್ತದೆ.
ಗಮನಿಸಬೇಕಾದ ಅಂಶಗಳು
ಒಂದೇ ಮನೆಯಲ್ಲಿ ಇದ್ದು, ಪ್ರತ್ಯೇಕವಾಗಿ ಅಡುಗೆ ಮಾಡಿಕೊಳ್ಳುತ್ತಿದ್ದರೆ ಅಂತಹವರನ್ನು ಪ್ರತ್ಯೇಕ ಕುಟುಂಬ ಎಂದೇ ಪರಿಗಣಿಸಿ ಸಮೀಕ್ಷೆ ನಡೆಸಬೇಕು
ತಾತ್ಕಾಲಿಕ ಕೆಲಸ, ಶಿಕ್ಷಣ, ಚಿಕಿತ್ಸೆ ಮತ್ತಿತರ ಕಾರಣಗಳಿಗಾಗಿ ವಸತಿ ನಿಲಯಗಳು, ಹೋಟೆಲ್‌ಗಳು, ಪಿಜಿಗಳಲ್ಲಿ ವಾಸವಿರುವವರ ಸಮೀಕ್ಷೆ ನಡೆಸಬಾರದು. ಕುಟುಂಬದ ಸಮೀಕ್ಷೆ ನಡೆಸುವ ವೇಳೆಯೇ ಅವರ ಕುಟುಂಬದವರು, ಅಂತಹವರ ವಿವರ ನೀಡಬೇಕು
ಅನಾಥಾಲಯ, ವೃದ್ಧಾಶ್ರಮ, ಭಿಕ್ಷುಕರ ಪುನರ್ವಸತಿ ಕೇಂದ್ರಗಳಲ್ಲಿ ಇರುವವರನ್ನು ಸಮೀಕ್ಷೆಗೆ ಒಳಪಡಿಸಬೇಕು
ಅನಾಥಾಲಯಗಳಲ್ಲಿ ವಾಸವಿರುವ ಮಕ್ಕಳಿಗೆ ಅವರ ಜಾತಿ ಮತ್ತು ಉಪಜಾತಿ ಗೊತ್ತಿಲ್ಲದೇ ಇರುವ ಸಾಧ್ಯತೆ ಹೆಚ್ಚು. ಜಾತಿ ಉಪಜಾತಿ, ವಿವರ ನೀಡಲು ಒತ್ತಾಯಿಸಬಾರದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.