ADVERTISEMENT

ಆಳ–ಅಗಲ| ನಿರಂತರ ಮಳೆ: ಬೆಳೆಗಳಿಗೆ ರೋಗ, ಕೀಟ ಬಾಧೆ; ನಷ್ಟದ ಭೀತಿಯಲ್ಲಿ ರೈತರು

ನಿರಂತರ ಮಳೆ; ಬೆಳೆಗಳಿಗೆ ಕೊಳೆ ರೋಗ, ಕೀಟ ಬಾಧೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 22:36 IST
Last Updated 6 ಆಗಸ್ಟ್ 2025, 22:36 IST
ಕೊಳೆರೋಗದಿಂದ ಉದುರಿ ಬಿದ್ದಿರುವ ಅಡಿಕೆ
ಕೊಳೆರೋಗದಿಂದ ಉದುರಿ ಬಿದ್ದಿರುವ ಅಡಿಕೆ   

ರಾಜ್ಯದ ಕರಾವಳಿ, ಮಲೆನಾಡು, ಉತ್ತರ ಒಳನಾಡು, ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಿವಿಧ ಬೆಳೆಗಳಿಗೆ ರೋಗ ತಗುಲಿದ್ದು, ರೈತರಲ್ಲಿ ನಷ್ಟದ ಭೀತಿ ಮೂಡಿದೆ. 

ಕರಾವಳಿ, ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆ ಕೊಳೆರೋಗದಿಂದ ತತ್ತರಿಸಿದ್ದರೆ, ಕೊಡಗು, ಚಿಕ್ಕಮಗಳೂರು, ಅರೆಮಲೆನಾಡು ಪ್ರದೇಶದಲ್ಲಿ ಕಾಫಿಗೆ ಕೊಳೆರೋಗ ತಗುಲಿ ಕಾಯಿಗಳು ಉದುರಿ ಹೋಗುತ್ತಿವೆ. ರಾಜ್ಯದ ಹಲವು ಕಡೆಗಳಲ್ಲಿ ಕಾಳು ಮೆಣಸಿನ ಫಸಲಿನ ಮೇಲೂ ವರ್ಷಧಾರೆ ಪರಿಣಾಮ ಬೀರಿದೆ. 

ಹಲವು ಜಿಲ್ಲೆಗಳಲ್ಲಿ ಮೆಕ್ಕೆಜೋಳವನ್ನು ಬಿಳಿಸುಳಿ ರೋಗ ಕಾಡುತ್ತಿದ್ದರೆ, ಶುಂಠಿಗೆ ಬೆಂಕಿ ರೋಗ, ಎಲೆಮಚ್ಚೆ ರೋಗಗಳು ಬಾಧಿಸಿವೆ. ಉತ್ತರ ಕರ್ನಾಟಕ ಭಾಗದಲ್ಲಿ ತೊಗರಿಗೆ ಬೇರು ಕೊಳೆ ರೋಗ ಹಾಗೂ ಹೆಸರು ಬೆಳೆಗೆ ಹಳದಿ ನಂಜು ರೋಗ ಕಾಣಿಸಿಕೊಂಡಿವೆ.

ADVERTISEMENT

ಈಗ ಮಳೆಯಾಗುತ್ತಿರುವ ಪ್ರದೇಶಗಳಲ್ಲಿ ಇನ್ನಷ್ಟು ದಿನ ಮಳೆ ಮುಂದುವರಿಯಲಿದ್ದು, ರೋಗ, ಕೀಟಗಳ ಬಾಧೆ ಮತ್ತಷ್ಟು ತೀವ್ರ ಸ್ವರೂಪ ಪಡೆಯುವ ಆತಂಕವನ್ನು ರೈತರು ವ್ಯಕ್ತಪಡಿಸಿದ್ದಾರೆ. ಆಗಿರುವ ಬೆಳೆನಷ್ಟಕ್ಕೆ ಸರ್ಕಾರ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕೊಳೆರೋಗಕ್ಕೆ ನೆಲಕಚ್ಚಿದ ಅಡಿಕೆ

ಕೊಳೆರೋಗದ ಪರಿಣಾಮ ನೆಲಕಚ್ಚಿದ ಅಡಿಕೆ

ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಅಡಿಕೆ ತೋಟಗಳು ಕೊಳೆ ರೋಗದಿಂದ ನಲುಗಿವೆ. ಕರಾವಳಿ ಜಿಲ್ಲೆಗಳಲ್ಲಿ ಅಡಿಕೆ ಬಲಿಯುವ ಮುನ್ನವೇ ಉದುರಿ ಇಡೀ ತೋಟದಲ್ಲಿ ಹಾಸಿಕೊಂಡಿದೆ.  

ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ 1.02 ಲಕ್ಷ ಹೆಕ್ಟೇರ್‌ನಲ್ಲಿ ಅಡಿಕೆ ಬೆಳೆ ಇದೆ. ಇದು ಕೃಷಿಕರ ಮುಖ್ಯ ಆರ್ಥಿಕ ಶಕ್ತಿಯೂ ಆಗಿದೆ. ಶೇ 95ರಷ್ಟು ತೋಟಗಳಿಗೆ ಕೊಳೆರೋಗ ವ್ಯಾಪಿಸಿದೆ ಎನ್ನುವುದು ಬೆಳೆಗಾರರ ಅಂಬೋಣ.

‘ನಿರಂತರ ಸುರಿದ ಮಳೆ ಅಡಿಕೆ ಬೆಳೆಯ ಮೇಲೆ ನೇರ ಪರಿಣಾಮ ಬೀರಿದೆ. ನಮ್ಮ ಸಮೀಕ್ಷೆ ಪ್ರಕಾರ ಶೇ 95ರಷ್ಟು ತೋಟಗಳಿಗೆ ಕೊಳೆರೋಗ ವ್ಯಾಪಿಸಿದೆ. ಬೆಳೆಗಾರರು ಶೇ 40ಕ್ಕಿಂತ ಹೆಚ್ಚು ಫಸಲು ಕಳೆದುಕೊಂಡಿದ್ದಾರೆ. ಬೆಳೆಗಾರರು ಸಂಕಷ್ಟದಲ್ಲಿದ್ದಾರೆ’ ಎನ್ನುತ್ತಾರೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ.

ಸಾಧ್ಯವಾಗದ ಸಿಂಪಡಣೆ: ‘ಈ ಬಾರಿ ಮೇ ತಿಂಗಳ ಕೊನೆಯಲ್ಲೇ ಮಳೆಗಾಲ ಪ್ರಾರಂಭವಾಗಿದ್ದರಿಂದ ಮತ್ತು ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಕೆಲವು ಬೆಳೆಗಾರರಿಗೆ ಅಡಿಕೆಗೆ ಮೊದಲನೇ ಹಂತದ ಬೋರ್ಡೊ ದ್ರಾವಣ (ಮೈಲುತುತ್ತ ಮತ್ತು ಸುಣ್ಣ ಬೆರೆಸಿದ ದ್ರಾವಣ) ಸಿಂಪಡಣೆ ಕೂಡ ಸಾಧ್ಯವಾಗಿಲ್ಲ. ಹಾಗಾಗಿ, ಶೇ 90ರಷ್ಟು ಬೆಳೆ ನಷ್ಟವಾಗಿದೆ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಮಂಜುನಾಥ ಡಿ.

ಉಡುಪಿ ಜಿಲ್ಲೆಯ ಕಾರ್ಕಳ, ಬ್ರಹ್ಮಾವರ, ಕುಂದಾಪುರ, ಹೆಬ್ರಿ ತಾಲ್ಲೂಕುಗಳಲ್ಲಿ ಅಡಿಕೆ ಕೃಷಿಗೆ ಈ ರೋಗ ವ್ಯಾಪಿಸಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಜಿಲ್ಲೆಯಲ್ಲಿ 32 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಅಡಿಕೆ ಬೆಳೆಯಿದೆ. ಕೆಲವೆಡೆ ಕೊಳೆ ರೋಗಕ್ಕೆ ಶೇ 40ರಷ್ಟು ಬೆಳೆ ನೆಲಕಚ್ಚಿದೆ. ಬಹುತೇಕ ತೋಟ ಪಟ್ಟಿಗಳಲ್ಲಿ ಶೇ 20ರಷ್ಟು ಕೊಳೆ ಆವರಿಸಿದ್ದು, ಉಲ್ಬಣದ ಹಂತದಲ್ಲಿದೆ.

‘ಎರಡು ಬಾರಿ ಬೋರ್ಡೊ ಸಿಂಪಡಿಸಿದ್ದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಅಡಿಕೆಗೆ ಕೊಳೆ, ಎಲೆಚುಕ್ಕಿ ರೋಗ ವ್ಯಾಪಕವಾಗಿದ್ದು, ನಿಯಂತ್ರಣಕ್ಕೆ ಸೂಕ್ತ ಔಷಧಿ ಇಲ್ಲ. ಸಂಶೋಧನೆ ನಡೆಯದೆ ಕೊಳೆಗೆ ಬೋರ್ಡೋ ದ್ರಾವಣವನ್ನೇ ಅವಲಂಬಿಸಬೇಕಾಗಿದೆ' ಎನ್ನುತ್ತಾರೆ ರೈತರು.

ಶಿವಮೊಗ್ಗ ಜಿಲ್ಲೆಯಲ್ಲಿ 1.37 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗಿದೆ. ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಹೋಬಳಿ ಹಾಗೂ ಹೊಸನಗರ ತಾಲ್ಲೂಕಿನ ನಗರ ಹೋಬಳಿಯಲ್ಲಿ ಕೊಳೆ ರೋಗ ಬಾಧೆ ಹಾನಿ ಮಾಡಿದ್ದು, ಅಡಿಕೆ ಕುಚ್ಚು ಒಣಗಿ ಉದುರಿಬಿದ್ದಿವೆ. ಜೂನ್ ಮೊದಲ ವಾರದಲ್ಲಿ ಬೋರ್ಡೊ ದ್ರಾವಣ ಸಿಂಪಡಣೆ ಮಾಡಿದ್ದು, ಅದರ ತೀವ್ರತೆ ತಗ್ಗಲು ನೆರವಾಗಿದೆ. 

ಪರಿಹಾರಕ್ಕೆ ಮನವಿ

‘ಈ ವರ್ಷ ನಿರಂತರವಾಗಿ ಸುರಿದ ಮಳೆಯಿಂದಾಗಿ ಕೊಳೆರೋಗದಿಂದ ಅಡಿಕೆ ಬೆಳೆ ಭಾಗಶಃ ನಾಶವಾಗಿದ್ದು, ಇದೇ ರೀತಿ ಮಳೆ ಮುಂದುವರಿದರೆ ಬೆಳೆ ಇನ್ನಷ್ಟು ನಾಶವಾಗಲಿದೆ. ಬೆಳೆ ನಾಶದ ಬಗ್ಗೆ ಸಮೀಕ್ಷೆ ನಡೆಸಿ, ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ನೀಡಬೇಕು’ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

‘ಅಡಿಕೆ ಬೆಳೆಯುವ ಜಿಲ್ಲೆಗಳಲ್ಲಿ ವಾಡಿಕೆಗಿಂತಲೂ ಜಾಸ್ತಿ ಮಳೆ ಸುರಿದಿದೆ. ಔಷಧಿ ಸಿಂಪಡಿಸಿದರೂ ಎಡೆಬಿಡದ ಮಳೆಯ ಪರಿಣಾಮ ಕೊಳೆರೋಗ ವ್ಯಾಪಕವಾಗಿದೆ. ರೈತರು ಪರಿಹಾರಕ್ಕಾಗಿ ಸರ್ಕಾರದ ಕಡೆ ನೋಡುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಗಿಡದಲ್ಲೇ ಕಪ್ಪಾಗಿ ಉದುರುತ್ತಿದೆ ಕಾಫಿ

ನಿರಂತರವಾಗಿ ಸುರಿಯುತ್ತಿರುವ ಮಳೆ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಫಿ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಗಿಡಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದ್ದು, ಕಾಫಿ ಕಾಯಿಗಳು ಕಪ್ಪಾಗಿ ಉದುರುತ್ತಿವೆ.  

ಕೊಡಗು ಜಿಲ್ಲೆಯೊಂದರಲ್ಲೇ 1.07 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ಮೇ ಅಂತ್ಯದಲ್ಲಿ ಆರಂಭವಾದ ಮಳೆ ನಿಂತಿದ್ದೇ ಜುಲೈ ಅಂತ್ಯಕ್ಕೆ. ಈ ವೇಳೆ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಗೆ ಕಾಫಿ ಫಸಲು ನಷ್ಟವಾಗಿದೆ. ಗಿಡಕ್ಕೆ ಗೊಬ್ಬರ ಹಾಕುವುದಕ್ಕೂ ಮಳೆ ಅವಕಾಶವನ್ನೇ ನೀಡಲಿಲ್ಲ. ಮಳೆ ಇಲ್ಲದ ದಿನಗಳು ಬೆರಳೆಣಿಕೆಯಷ್ಟಿದ್ದುದ್ದರಿಂದ ಸಕಾಲದಲ್ಲಿ ಗಿಡಗಳಿಗೆ ಗೊಬ್ಬರವೂ ಲಭಿಸಿಲ್ಲ. ಇದರಿಂದಲೂ ಮುಂದೆ ಇಳುವರಿ ಕಡಿಮೆಯಾಗಲಿದೆ ಎಂಬ ಆತಂಕ ಇದೆ.

ಮಳೆಗಾಲ ಇನ್ನೂ ಇದ್ದು, ಹೆಚ್ಚು ಮಳೆ ಬೀಳುವ ಸಾಧ್ಯತೆಗಳಿರುವುದರಿಂದ ಮಳೆಗಾಲ ಮುಗಿದ ನಂತರ ಇಲ್ಲವೇ ಆಗಸ್ಟ್ ಬಳಿಕ ಕಾಫಿ ಮಂಡಳಿ, ತೋಟಗಾರಿಕಾ ಇಲಾಖೆ, ಕಂದಾಯ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಲಿವೆ. ಆಗ ಎಷ್ಟು ನಷ್ಟವಾಗಿದೆ ಎಂಬುದು ಖಚಿತವಾಗಲಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದು ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದ್ದು, ಕೊಳೆರೋಗ ಕಾಡುತ್ತಿದೆ. ಮೇ 15ರಿಂದ ಆರಂಭವಾದ ಮಳೆ ನಿರಂತರವಾಗಿ ಸುರಿದು, ಈಗ ಆಗಾಗ ಕೊಂಚ ಬಿಡುವು ನೀಡುತ್ತಿದೆ. ಆರಂಭದಲ್ಲಿ ಮಳೆಗಾಗಿ ಕಾದಿದ್ದ ರೈತರು, ಮಳೆ ನಿಂತರ ಸಾಕು ಎನ್ನುವಷ್ಟು ರೋಸಿ ಹೋಗಿದ್ದಾರೆ. ಮಳೆಯಿಂದಾಗಿ ಗಿಡದಲ್ಲೇ ಕಾಫಿ ಕಪ್ಪು ಬಣ್ಣಕ್ಕೆ ತಿರುಗಿ ಉದುರುತ್ತಿರುವುದು ಬೆಳೆಗಾರರನ್ನು ಕಂಗೆಡಿಸಿದೆ.

ಮೆಕ್ಕೆಜೋಳಕ್ಕೆ ಬಿಳಿಸುಳಿ ರೋಗ

ಶಿರಸಿಯ ದಾಸನಕೊಪ್ಪದಲ್ಲಿ ಮೆಕ್ಕೆಜೋಳದ ಕಾಳುಗಳು ಮಳೆಗೆ ಮೊಳಕೆ ಒಡೆದಿವೆ

ಹಾಸನ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತೀವ್ರ ಮಳೆಯಿಂದಾಗಿ ಮೆಕ್ಕೆಜೋಳಕ್ಕೆ ಬಿಳಿಸುಳಿ ರೋಗ ತಗುಲಿದೆ. ಹಾಸನ ಜಿಲ್ಲೆಯೊಂದರಲ್ಲೇ 13ಸಾವಿರ ಹೆಕ್ಟೇರ್‌ನಲ್ಲಿ ರೋಗ ಕಾಣಿಸಿಕೊಂಡಿದೆ. 

‘ಜೂನ್‌ನಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 164ರಷ್ಟು ಹೆಚ್ಚು ಮಳೆಯಾಗಿದೆ. ವಾಡಿಕೆಗಿಂತ ಮೊದಲೇ ಹೆಚ್ಚಿನ ಮಳೆ ಆಗಿರುವುದರಿಂದ ರೋಗ ತಗುಲಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ತಜ್ಞರ ತಂಡ ಅಭಿಪ್ರಾಯಪಟ್ಟಿದೆ. ಸತತ 21 ದಿನ ಮಳೆ ಆಗಿರುವುದೂ ರೋಗ ಹರಡಲು ಕಾರಣವಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್‌ಕುಮಾರ್ ತಿಳಿಸಿದ್ದಾರೆ. 

ಶಿರಸಿ, ಮುಂಡಗೋಡ ಭಾಗದಲ್ಲಿ ಮೆಕ್ಕೆಜೋಳ ಕಟಾವು ಮಾಡಿದ ಸಂದರ್ಭದಲ್ಲಿ ಮುಂಗಾರುಪೂರ್ವ ಮಳೆ ಸುರಿದ ಕಾರಣ ಕೊಯ್ಲು ಮಾಡಿ ಒಣಹಾಕಿದ್ದ 90 ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳದ ಕಾಳುಗಳು ಮೊಳಕೆಯೊಡೆದು ನಷ್ಟ ಉಂಟಾಗಿದೆ. ಶಿರಸಿ, ಮುಂಡಗೋಡದಲ್ಲಿ ಒಟ್ಟು 253 ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ನಾಶವಾಗಿದೆ. 

ಕಲಬುರಗಿ ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಸುರಿದ ಮಳೆಗೆ ‘ಕಸ್ಕುಟ’ ಕಳೆಬಾಧೆ ಕಾಣಿಸಿದೆ. ಅಲ್ಲಲ್ಲಿ ತೇವಾಂಶ ಹೆಚ್ಚಳದಿಂದ ತೊಗರಿಗೆ ಬೇರು ಕೊಳೆರೋಗ ಹಾಗೂ ಹೆಸರು ಬೆಳೆಗೆ ಹಳದಿ ನಂಜು ರೋಗ ಬಾಧಿಸಿದೆ. ತಗ್ಗು ಪ್ರದೇಶ, ಮಳೆ ನೀರು ನಿಲ್ಲುವ ಪ್ರದೇಶಗಳಲ್ಲಿ ರೋಗ ಕಾಣಿಸಿದೆ. 

ರಾಯಚೂರು ಜಿಲ್ಲೆಯ 99,781 ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆ ನಡೆದಿದ್ದು, ಶೇಕಡ 1ರಷ್ಟು ಪ್ರದೇಶದಲ್ಲಿ ಬೆಳೆಗೆ ಕೀಟಬಾಧೆ ಕಂಡು ಬಂದಿದೆ. ಗಿಡಗಳನ್ನು ಬುಡ ಸಮೇತ ಕಿತ್ತು ತೆಗೆದು ಹಾಕುವಂತೆ ಅಧಿಕಾರಿಗಳು ರೈತರಿಗೆ ಸಲಹೆ ನೀಡಿದ್ದಾರೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಕರಮುಡಿ ಗ್ರಾಮದ ರೈತ ಭೀಮಪ್ಪ ಬಂಡಿ ಎಂಬುವರ ಜಮೀನಿನಲ್ಲಿ ತೇವಾಂಶ ಹೆಚ್ಚಾಗಿ ಹಳದಿ ನಂಜು ರೋಗ ಬಾಧಿಸಿದ್ದ ಬೆಳೆಯಲ್ಲಿ ಕುರಿ ‌ಮೇಯಿಸಲಾದ ದೃಶ್ಯ

ಶುಂಠಿಗೆ ಬೆಂಕಿ ರೋಗ

ಸಾಗರ ತಾಲ್ಲೂಕಿನ ಆನಂದಪುರ ಬಳಿ ಬೆಂಕಿ ರೋಗ ಬಾಧೆಗೆ ತುತ್ತಾದ ಶುಂಠಿ ತಾಕು

ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಶುಂಠಿ ಬೆಳೆಗೆ ರೋಗ ತಗುಲಿದ್ದು, ರೈತರನ್ನು ಕಂಗೆಡಿಸಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾವೇರಿ, ದಾವಣಗೆರೆ, ಉತ್ತರ ಕನ್ನಡ, ಬೀದರ್, ಹಾಸನ, ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ 65 ಸಾವಿರದಷ್ಟು ಎಕರೆ ಪ್ರದೇಶದಲ್ಲಿ ಶುಂಠಿ ಬೆಳೆಯುತ್ತಾರೆ. ಈ ಬಾರಿ ಬೆಂಕಿ ರೋಗ (ಫ್ರಾಕ್ಷಿ ಪೈರಿಕ್ಯುಲೇರಿಯಾ), ದುಂಡಾಣು ಎಲೆ ಮಚ್ಚೆ ರೋಗ ಮತ್ತು ಎಲೆ ಚುಕ್ಕೆ ರೋಗಗಳು (ಕೊಲೆಟೋಟ್ರೆಂಕೊಮ್) ಕಾಣಿಸಿಕೊಂಡಿವೆ.  

ರಾತ್ರಿ ಹಸಿರಾಗಿದ್ದ ತಾಕು ಬೆಳಗಾಗುವ ಹೊತ್ತಿಗೆ ಸುಟ್ಟಂತೆ ಕಾಣುತ್ತಿದೆ. ಅದಕ್ಕೆ ಔಷಧ ಕೊಡುವಷ್ಟರಲ್ಲೇ ಇನ್ನೂ ಎರಡು ಬಾಧೆಗಳು ಕಾಡುತ್ತಿವೆ. 

‘ಶುಂಠಿ ಗಡ್ಡೆ ಆಗಿ ರೂಪುಗೊಳ್ಳುವ ಮುನ್ನವೇ ವ್ಯಾಪಕ ಮಳೆಯಾಗಿದೆ. ಅದು ಈ ಬಾರಿ ರೋಗಬಾಧೆ ಉಲ್ಬಣಗೊಳ್ಳಲು ಕಾರಣ’ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಸ್ಯರೋಗಶಾಸ್ತ್ರ ವಿಭಾಗದ ಸಹಾಯಕ ಪ‍್ರಾಧ್ಯಾಪಕರಾದ ಶ್ರೀಶೈಲ ಸೊನ್ಯಾಳ ಹೇಳುತ್ತಾರೆ.

ಬೆಂಕಿ ರೋಗಕ್ಕೆ ತುತ್ತಾಗಿದ್ದ ಶುಂಠಿ ಬೆಳೆಯ ಎಲೆಗಳ ಮೇಲೆ ಕಪ್ಪು ಚುಕ್ಕೆಗಳಾಗಿ ನಂತರ ಎಲೆಗಳು ಹಳದಿಯಾಗಿ ಪೂರ್ತಿ ಸುಟ್ಟಂತೆ ಭಾಸವಾಗುತ್ತವೆ. ದುಂಡಾಣು ಎಲೆ ಮಚ್ಚೆ ರೋಗ ಬಾಧಿತ ಶುಂಠಿ ಗಿಡದ ಎಲೆ ಮತ್ತು ಕಾಂಡದ ಮೇಲೆ ನೀರಿನಿಂದ ಆವೃತವಾದ ಚಿಕ್ಕ ಗಾತ್ರದ ಮಚ್ಚೆಗಳು ಕಾಣಿಸುತ್ತವೆ. ಎಲೆಚುಕ್ಕೆ ಬಾಧಿತ ಗಿಡಗಳ ಎಲೆ ಹಾಗೂ ಕಾಂಡದ ಮೇಲೆ ಚಿಕ್ಕ ಗಾತ್ರದ ಚುಕ್ಕೆಗಳು ಕಾಣಿಸಿಕೊಂಡು ನಂತರ ತಿಳಿ ಹಳದಿ ಬಣ್ಣಗಳಿಂದ ಆವೃತವಾಗಿ ಮಧ್ಯದಲ್ಲಿ ಚಿಕ್ಕ ಗಾತ್ರದ ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ಗಿಡಗಳು ಸಾಯುತ್ತಿವೆ.

ಮುದುಡಿದ ಕಾಳುಮೆಣಸು

ಶಿರಸಿ ತಾಲ್ಲೂಕಿನ ಮಂಜುಗುಣಿ ತೋಟವೊಂದರಲ್ಲಿ ಕಾಳುಮೆಣಸು ಬಳ್ಳಿಗೆ ಸೊರಗು ರೋಗ ಬಾಧಿಸಿದೆ

ಭಾರಿ ಮಳೆಯಿಂದಾಗಿ ಕಾಳುಮೆಣಸು ಹಾನಿಗೀಡಾಗಿದೆ. ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಸೊರಗು ರೋಗ ಕಂಡುಬಂದಿದೆ. ಕಾಯಿಕಚ್ಚಿದ ಕರಿಮೆಣಸು ಉದುರುತ್ತಿವೆ. ಕೊಡಗು, ಚಿಕ್ಕಮಗಳೂರಿನಲ್ಲೂ ಇದೇ ಪರಿಸ್ಥಿತಿ ಇದೆ.  ಉತ್ತರ ಕನ್ನಡ ಜಿಲ್ಲೆಯ 150 ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಕಾಳುಮೆಣಸಿನ ಎಲೆಗಳ ಮೇಲೆ ಕಪ್ಪು ಚುಕ್ಕೆಗಳು ಕಂಡುಬಂದಿದೆ. ನೆಲದಲ್ಲಿ ಹರಡಿ ಬೆಳೆಯುವ ಕವಲು ಬಳ್ಳಿಗಳೂ ರೋಗಕ್ಕೆ ಒಳಗಾಗಿವೆ.

ಗಿಡದಲ್ಲೇ ಕಪ್ಪಾಗಿ ಉದುರುತ್ತಿದೆ ಕಾಫಿ

ನಿರಂತರವಾಗಿ ಸುರಿಯುತ್ತಿರುವ ಮಳೆ ಕೊಡಗು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಫಿ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಗಿಡಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದ್ದು ಕಾಫಿ ಕಾಯಿಗಳು ಕಪ್ಪಾಗಿ ಉದುರುತ್ತಿವೆ.   ಕೊಡಗು ಜಿಲ್ಲೆಯೊಂದರಲ್ಲೇ 1.07 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತದೆ. 

ಜಿಲ್ಲೆಯಲ್ಲಿ ಮೇ ಅಂತ್ಯದಲ್ಲಿ ಆರಂಭವಾದ ಮಳೆ ನಿಂತಿದ್ದೇ ಜುಲೈ ಅಂತ್ಯಕ್ಕೆ. ಈ ವೇಳೆ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಗೆ ಕಾಫಿ ಫಸಲು ನಷ್ಟವಾಗಿದೆ. ಗಿಡಕ್ಕೆ ಗೊಬ್ಬರ ಹಾಕುವುದಕ್ಕೂ ಮಳೆ ಅವಕಾಶವನ್ನೇ ನೀಡಲಿಲ್ಲ. ಮಳೆ ಇಲ್ಲದ ದಿನಗಳು ಬೆರಳೆಣಿಕೆಯಷ್ಟಿದ್ದುದ್ದರಿಂದ ಸಕಾಲದಲ್ಲಿ ಗಿಡಗಳಿಗೆ ಗೊಬ್ಬರವೂ ಲಭಿಸಿಲ್ಲ. ಇದರಿಂದಲೂ ಮುಂದೆ ಇಳುವರಿ ಕಡಿಮೆಯಾಗಲಿದೆ ಎಂಬ ಆತಂಕ ಇದೆ. ಮಳೆಗಾಲ ಇನ್ನೂ ಇದ್ದು ಹೆಚ್ಚು ಮಳೆ ಬೀಳುವ ಸಾಧ್ಯತೆಗಳಿರುವುದರಿಂದ ಮಳೆಗಾಲ ಮುಗಿದ ನಂತರ ಇಲ್ಲವೇ ಆಗಸ್ಟ್ ಬಳಿಕ ಕಾಫಿ ಮಂಡಳಿ ತೋಟಗಾರಿಕಾ ಇಲಾಖೆ ಕಂದಾಯ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಲಿವೆ. ಆಗ ಎಷ್ಟು ನಷ್ಟವಾಗಿದೆ ಎಂಬುದು ಖಚಿತವಾಗಲಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದು ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದ್ದು ಕೊಳೆರೋಗ ಕಾಡುತ್ತಿದೆ. ಮೇ 15ರಿಂದ ಆರಂಭವಾದ ಮಳೆ ನಿರಂತರವಾಗಿ ಸುರಿದು ಈಗ ಆಗಾಗ ಕೊಂಚ ಬಿಡುವು ನೀಡುತ್ತಿದೆ. ಆರಂಭದಲ್ಲಿ ಮಳೆಗಾಗಿ ಕಾದಿದ್ದ ರೈತರು ಮಳೆ ನಿಂತರ ಸಾಕು ಎನ್ನುವಷ್ಟು ರೋಸಿ ಹೋಗಿದ್ದಾರೆ. ಮಳೆಯಿಂದಾಗಿ ಗಿಡದಲ್ಲೇ ಕಾಫಿ ಕಪ್ಪು ಬಣ್ಣಕ್ಕೆ ತಿರುಗಿ ಉದುರುತ್ತಿರುವುದು ಬೆಳೆಗಾರರನ್ನು ಕಂಗೆಡಿಸಿದೆ.

ಕೆಲವೆಡೆ ಮಳೆ ಕೊರತೆ

ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆ ತೀವ್ರವಾಗಿದ್ದರಿಂದ ಬೆಳೆ ಹಾನಿಗೀಡಾದರೆ, ಕೆಲವು ಕಡೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗದೆ ಬೆಳೆ ಬೆಳೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜಧಾನಿ ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳು, ಚಿತ್ರದುರ್ಗ, ದಾವಣಗೆರೆ, ಬೀದರ್‌ ಸೇರಿದಂತೆ ಕೆಲವು ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ನಿರೀಕ್ಷೆಯಷ್ಟು ಮಳೆಯಾಗಿಲ್ಲ. ಇದರಿಂದ ಮಳೆಯಾಶ್ರಿತ ರೈತರಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ಸಾಧ್ಯವಾಗಿಲ್ಲ.   

ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಕೊಳೆರೋಗದಿಂದ ಕಾಫಿ ಬೆಳೆ ಹಾಳಾಗಿದೆ

ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಕೊಳೆರೋಗದಿಂದ ಕಾಫಿ ಬೆಳೆ ಹಾಳಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.