ADVERTISEMENT

ಹಸಿರು ಪಟಾಕಿಗಷ್ಟೇ ಅವಕಾಶ: ಪರಿಷ್ಕೃತ ಆದೇಶ ಜಾರಿಗೆ ಹೈಕೋರ್ಟ್‌ ನಿರ್ದೇಶನ

ಪರಿಷ್ಕೃತ ಆದೇಶ ಜಾರಿಗೊಳಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 19:31 IST
Last Updated 13 ನವೆಂಬರ್ 2020, 19:31 IST
ಕರ್ನಾಟಕ ಹೈಕೋರ್ಟ್‌
ಕರ್ನಾಟಕ ಹೈಕೋರ್ಟ್‌   

ಬೆಂಗಳೂರು: ‘ಹಸಿರು ಪಟಾಕಿ’ ಮಾರಾಟ ಮತ್ತು ಬಳಕೆಗೆ ಮಾತ್ರ ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಇದೇ 12ರಂದು ಹೊರಡಿಸಿರುವ ಪರಿಷ್ಕೃತ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಗೃಹ ಇಲಾಖೆ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ಹೈಕೋರ್ಟ್‌ ಶುಕ್ರವಾರ ನಿರ್ದೇಶನ ನೀಡಿದೆ.

ಪಟಾಕಿಗಳ ಮಾರಾಟ ಮತ್ತು ಬಳಕೆ ನಿರ್ಬಂಧಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯು, ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ನೇತೃತ್ವದ ಪೀಠದಲ್ಲಿ ನಡೆಯಿತು. ‘ಹಸಿರು ಪಟಾಕಿ’ಯನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿ ಗುರುವಾರ ಹೊರಡಿಸಿರುವ ಪರಿಷ್ಕೃತ ಆದೇಶವನ್ನು ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದರು.

‘ಪಟಾಕಿ ಬಳಕೆಯು ಶಬ್ಧ ಮಾಲಿನ್ಯ (ನಿಯಂತ್ರಣ ಮತ್ತು ನಿರ್ಬಂಧ) ನಿಯಮಗಳ ಅನುಷ್ಠಾನದ ವ್ಯಾಪ್ತಿಗೂ ಬರುತ್ತದೆ. ಕೋವಿಡ್‌ ಸೋಂಕು ವ್ಯಾಪಿಸುತ್ತಿರುವ ಸಂದರ್ಭದಲ್ಲಿ ದೀಪಾವಳಿ ಆಚರಣೆಯಲ್ಲಿ ಪಟಾಕಿಗಳನ್ನು ಸಿಡಿಸುವುದರಿಂದ ಉಂಟಾಗುವ ಅಪಾಯಕಾರಿ ಮಾಲಿನ್ಯವು ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಅರ್ಜಿದಾರರು ಕೊನೆಯ ಹಂತದಲ್ಲಿ ನ್ಯಾಯಾಲಯಕ್ಕೆ ಬಂದಿದ್ದಾರೆ. ಈ ಕಾರಣದಿಂದ ಕಠಿಣವಾದ ಆದೇಶ ಹೊರಡಿಸುವುದು ಕಷ್ಟ’ ಎಂದು ನ್ಯಾಯಪೀಠ ಹೇಳಿತು.

ADVERTISEMENT

ಸಂಬಂಧಿಸಿದ ಎಲ್ಲ ಇಲಾಖೆಗಳು ಪಟಾಕಿ ಮಾರಾಟ ಮಳಿಗೆಗಳಲ್ಲಿ ಪರಿಶೀಲನೆ ನಡೆಸಬೇಕು. ‘ಹಸಿರು ಪಟಾಕಿ’ಗಳನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಹಸಿರು ಪಟಾಕಿ ಬಳಕೆಗೆ ಮಾತ್ರ ಅವಕಾಶ ಕಲ್ಪಿಸಿ ಹೊರಡಿಸಿರುವ ಆದೇಶದ ಕುರಿತು ರಾಜ್ಯ ಸರ್ಕಾರ ವ್ಯಾಪಕವಾಗಿ ಪ್ರಚಾರ ಮಾಡಬೇಕು. ಹಸಿರು ಲೋಗೊ ಇಲ್ಲದ ಪಟಾಕಿಗಳನ್ನು ಸುಡದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿತು.

‘ಶಬ್ಧ ಮಾಲಿನ್ಯ ತಡೆ ನಿಯಮಗಳ ಉಲ್ಲಂಘನೆ ಕುರಿತು ಸಾರ್ವಜನಿಕರಿಂದ ಬರುವ ದೂರುಗಳಿಗೆ ತಕ್ಷಣವೇ ಸ್ಪಂದಿಸಿ ಕ್ರಮ ಕೈಗೊಳ್ಳುವುದು ಪೊಲೀಸರು ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಕರ್ತವ್ಯ. ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಪೊಲೀಸರಿಗೆ ಲಭ್ಯವಾಗುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯು ಡೆಸಿಬಲ್‌ ಮೀಟರ್‌ಗಳನ್ನು ಒದಗಿಸ
ಬೇಕು. ಹಸಿರು ಪಟಾಕಿ ಆದೇಶ ಮತ್ತು ಶಬ್ಧ ಮಾಲಿನ್ಯ ತಡೆ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ರಾಜ್ಯ ಸರ್ಕಾರ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಕರ್ತವ್ಯ’ ಎಂದು ನ್ಯಾಯಪೀಠ ಹೇಳಿದೆ.

ಹಸಿರು ಲೋಗೊ ಇರುವ ಪಟಾಕಿ

ಹಸಿರು ಪಟಾಕಿ ಎಂದರೇನು, ಅದನ್ನು ಪತ್ತೆ ಮಾಡುವುದು ಹೇಗೆ ಎಂದು ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ಸಲ್ಲಿಸಿರುವ ಆದೇಶದಲ್ಲಿ ವಿವರಿಸಿದೆ.

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್‌) ಹಾಗೂ ರಾಷ್ಟ್ರೀಯ ಪರಿಸರ ಮತ್ತು ಎಂಜಿನಿಯರಿಂಗ್‌ ಸಂಶೋಧನಾ ಸಂಸ್ಥೆ (ನೀರಿ) ಮಾನದಂಡಗಳ ಪ್ರಕಾರ ಉತ್ಪಾದಿಸಿದ್ದು, ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯಿಂದ ಪ್ರಮಾಣಪತ್ರ ಪಡೆದಿರುವ ‘ಹಸಿರು ಪಟಾಕಿ’ಗಳನ್ನು ಮಾತ್ರ ಬಳಸಲು ಅವಕಾಶವಿದೆ.

ಈ ಪಟಾಕಿಗಳ ಬಾಕ್ಸ್‌ ಮೇಲೆ ಕ್ಯೂಆರ್‌ ಕೋಡ್‌ ಮತ್ತು ಪ್ರಮಾಣೀಕೃತ ಸಂಸ್ಥೆಗಳು ಅನುಮೋದಿಸಿರುವ ಹಸಿರು ಲೋಗೊ ಪ್ರಕಟಿಸುವುದನ್ನೂ ಕಡ್ಡಾಯಗೊಳಿಸಿ ನ.12ರಂದು ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ.

ಪಟಾಕಿ ಸಿಡಿಸಿದರೆ ಕ್ರಮ

ರಾಜ್ಯದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಹಚ್ಚಲು ಅವಕಾಶ ನೀಡಲಾಗಿದ್ದು, ನಿಯಮ ಉಲ್ಲಂಘಿಸಿ ಹೆಚ್ಚಿನ ಶಬ್ದ ಮತ್ತು ಮಾಲಿನ್ಯ ಉಂಟು ಮಾಡುವ ಪಟಾಕಿಗಳನ್ನು ಸಿಡಿಸಿದರೆ ಅಂತಹವರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳಲಿದ್ದಾರೆ.

ನಿಯಮ ಉಲ್ಲಂಘಿಸುವವರ ವಿರುದ್ಧ ಸಹಾನುಭೂತಿ ತೋರಬಾರದು. ಶಬ್ದ ಮಾಲಿನ್ಯ ತಡೆಗಟ್ಟಲು ಪೊಲೀಸರ ಜತೆಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯೂ ಕ್ರಮ ತೆಗೆದುಕೊಳ್ಳಲಿದೆ ಎಂದು ಸರ್ಕಾರ ಹೊಸದಾಗಿ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.