ಪೋಷಕರು ಮತ್ತು ಹಿರಿಯ ನಾಗರಿಕರ ಜೀವನ ನಿರ್ವಹಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ‘ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ ಅನುಸಾರ ತಿಂಗಳ ಪಾಲನಾ ಭತ್ಯೆಯ ಮೊತ್ತ ₹10 ಸಾವಿರಕ್ಕೆ ಮೀರಬಾರದು ಎಂಬ ಕಲಂ 9ರ ಮಿತಿಯನ್ನು ತೆಗೆದು ಹಾಕಲು ಇದು ಸಕಾಲ’ ಎಂದು ತೀರ್ಪು ಪ್ರಕಟಿಸಿದೆ. ದೇಶದ 25 ಹೈಕೋರ್ಟ್‌ಗಳು ಈವರೆವಿಗೂ ಉಲ್ಲೇಖಿಸದ ಕಾನೂನು ಮಾರ್ಪಾಡುಗಳ ಅಗತ್ಯವನ್ನು ಕರ್ನಾಟಕದ ಹೈಕೋರ್ಟ್ ಪ್ರತಿಪಾದಿಸಿದೆ. ಈ ಮೂಲಕ ಜೀವನದ ಮುಸ್ಸಂಜೆಯಲ್ಲಿರುವವರಿಗೆ ಆಸರೆಯಾಗುವಂಥ ನಿಯಮ ಬದಲಾವಣೆಯ ಭರವಸೆ ಮೂಡಿಸಿದೆ
ಕರ್ನಾಟಕದ ಹೈಕೋರ್ಟ್, ಹಿರಿಯ ನಾಗರಿಕರಿಗೆ ಸಂತಸ ತರುವಂತಹ ಉಲ್ಲೇಖವೊಂದನ್ನು ಮಾಡಿದೆ. ಹಿರಿಯರು ಅಥವಾ ಪೋಷಕರಿಗೆ ನೀಡಲಾಗುವ ಮಾಸಿಕ ಭತ್ಯೆಗೆ ಸಂಬಂಧಿಸಿದ ಪ್ರಕರಣವೊಂದನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು, ‘ಈಗಿರುವ ₹10 ಸಾವಿರದ ಮಿತಿಯನ್ನು ಯಥೋಚಿತವಾಗಿ ಆಯಾ ಪ್ರಕರಣಗಳಿಗೆ ಅನುಗುಣವಾಗಿ ವಾಸ್ತವಾಂಶಗಳ ಆಧಾರದಡಿ ಏರಿಕೆ ಮಾಡಲು 2007ರ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆಗೆ ಅಗತ್ಯ ಬದಲಾವಣೆ ತರಬೇಕು’ ಎಂದು ಕೇಂದ್ರ ಸರ್ಕಾರಕ್ಕೆ ಜಬರ್‌ದಸ್ತ್ ಶಿಫಾರಸು ಮಾಡಿದೆ.
‘ಹಿರಿಯರ ಅಗತ್ಯಗಳು 2007ರಲ್ಲಿ ಇದ್ದಂತೆಯೇ ಇಲ್ಲ. 18 ವರ್ಷಗಳ ಅಂತರದ ಆಧುನಿಕ ಜೀವನದಲ್ಲಿ ಇಂದು ಜೀವನವೆಚ್ಚ ಅಪಾರ ಏರಿಕೆ ಕಂಡಿದೆ. 2007ರಲ್ಲಿ ₹10 ಸಾವಿರ ಸಾಕಾಗುತ್ತಿದ್ದರೂ ಇಂದಿನ ದಿನಗಳಲ್ಲಿ ಅದು ವೈದ್ಯಕೀಯ ವೆಚ್ಚಕ್ಕೂ ಸಾಲದಾಗಿದೆ’ ಎಂಬ ಕಳಕಳಿಯ ಮೂಲಕ ಸರ್ಕಾರದ ಗಮನ ಸೆಳೆದಿದೆ.
‘ಹಣಕಾಸು ಸಚಿವಾಲಯವು ಕಾಲಕಾಲಕ್ಕೆ ಸಿಐಐ (Cost Inflation Index–ಹಣದುಬ್ಬರದಿಂದಾಗಿ ಹೆಚ್ಚಳವಾದ ವೆಚ್ಚದ ಸೂಚ್ಯಂಕ) ಪ್ರಕಟಿಸಿರುವುದನ್ನು ನೋಡಿದಾಗ, 2007-08ರಲ್ಲಿ ಸೂಚ್ಯಂಕ 129 ಆಗಿದ್ದರೆ, ಇಂದಿಗೆ ಅದು 363 ಇದೆ. ಅಂದರೆ, 2007ರಲ್ಲಿ ₹100ಗೆ ದೊರಕುತ್ತಿದ್ದ ವಸ್ತು, 2025ರಲ್ಲಿ ₹1 ಸಾವಿರಕ್ಕೆ ಏರಿಕೆಯಾಗಿದೆ. ಆಹಾರ, ವಾಸ ಸ್ಥಳ, ಔಷಧಿ ಬೆಲೆಗಳು ಗಗನಕ್ಕೇರಿವೆ. ಆದರೆ, ಪೋಷಕರ ಪಾಲನೆಯ ಭತ್ಯೆಯ ಮಿತಿ ₹10 ಸಾವಿರದಲ್ಲೇ ಅಚಲವಾಗಿ ನಿಂತಿದೆ. ಇಷ್ಟು ಕಡಿಮೆ ಭತ್ಯೆಯು ಈ ಕಾಯ್ದೆಯ ಉದ್ದೇಶಗಳನ್ನು ಸಾಧಿಸಬಲ್ಲದೇ’ ಎಂದು ಪ್ರಶ್ನಿಸಿರುವ ನ್ಯಾಯಪೀಠ, ‘ಕಲಂ 9ರ ವ್ಯಾಪ್ತಿಯಲ್ಲಿ ಒಬ್ಬ ಹಿರಿಯ ವ್ಯಕ್ತಿ ಗೌರವಯುತ ಜೀವನ ನಡೆಸಲು, ವೈದ್ಯಕೀಯ ನೆರವು ಪಡೆಯಲು ₹10 ಸಾವಿರ ಭತ್ಯೆಯಿಂದ ಮಾತ್ರ ಸಾಧ್ಯವೇ ಎಂಬ ಪ್ರಶ್ನೆಯನ್ನು ಕಡೆಗಣಿಸಿದ್ದೇ ಆದರೆ ಹಿರಿಯರ ಜೀವನವನ್ನು ‘ಪ್ರಾಣಿಗಳ ಅಸ್ತಿತ್ವ’ಕ್ಕೆ ಇಳಿಸಿದಂತಾಗುತ್ತದೆ’ ಎಂದು ಎಚ್ಚರಿಸಿದೆ.
‘ವೃದ್ಧಾಪ್ಯದ ಮುಸ್ಸಂಜೆಯ ಬಾಳ್ವೆ ಇಂದು ದೇಶದ ಸಾಮಾಜಿಕ ಸವಾಲಾಗಿ ಪರಿಣಮಿಸಿದೆ. ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ–1860ರ (ಐಪಿಸಿ) ಅಡಿಯಲ್ಲಿ ವೃದ್ಧರು ತಮ್ಮ ಪೋಷಣೆ ಹಾಗೂ ನಿರ್ವಹಣೆಗಾಗಿ ಮಾಹೆಯಾನ ಭತ್ಯೆಗೆ ಹಣದ ಬೇಡಿಕೆ ಇಡಬಹುದಾಗಿದ್ದರೂ ಈ ನ್ಯಾಯಿಕ ಪ್ರಕ್ರಿಯೆ ದುಬಾರಿ ಹಾಗೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ’ ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ.
‘ಇಂದಿನ ಉಗ್ರರೂಪದ ದರ ಏರಿಕೆ ಹಾಗೂ ಜೀವನ ವೆಚ್ಚದ ಸೂಚ್ಯಂಕವನ್ನು ದಿಟ್ಟಿಸಿದರೆ ಪ್ರತಿಯೊಬ್ಬ ಹಿರಿಯರಿಗೆ, ಪೋಷಕರಿಗೆ ತಿಂಗಳ ₹10 ಸಾವಿರ ಪಾಲನೆ ಭತ್ಯೆಯನ್ನೂ ಗಮನಾರ್ಹವಾಗಿ ಏರಿಕೆ ಮಾಡುವುದು ಅತ್ಯಂತ ಸಮಂಜಸ. ಈ ತೀರ್ಪನ್ನು ಕೇವಲ ಈ ಪ್ರಕರಣವನ್ನು ಇತ್ಯರ್ಥ ಮಾಡಲು ನೀಡಿಲ್ಲ. ನಿರ್ಲಕ್ಷ್ಯಕ್ಕೊಳಗಾದ ಹಿರಿಯರ ಕುರಿತಾದ ವ್ಯಾಜ್ಯಗಳು ಕೋರ್ಟ್ ಮೆಟ್ಟಿಲು ತುಳಿದು ಬಂದಾಗ ನಮ್ಮ ಅಂತಃಕರಣ ಕಲಕುತ್ತದೆ. ಅದಕ್ಕೆಂದೇ ಅತೀವವಾಗಿ ಕಾಡುವ ವಿಷಾದದಲ್ಲಿ ಈ ತೀರ್ಪು ನೀಡಲಾಗಿದೆ. ನಮ್ಮ ಪೋಷಕರನ್ನು, ವೃದ್ಧರನ್ನು ನಾವು ಅಪಮಾನಗಳಿಗೆ ಈಡು ಮಾಡಬಾರದು. ಯಾವೊಬ್ಬ ಹಿರಿಯರ ಇಳಿಬಾಳು ಬಯಕೆಗಳ ಬುಟ್ಟಿಯಲ್ಲಿ ಬಾಡಬಾರದು. ನಮ್ಮ ಕಾಳಜಿಯ ಕಾವಿನಲ್ಲಿ ಅವರ ಜೀವಗಳು ಹೊಳೆಯಬೇಕು. ಈ ಮಾತುಗಳನ್ನು ಶಾಸಕಾಂಗ ಸಂವೇದನಾಶೀಲತೆಯಿಂದ ಸ್ವೀಕರಿಸಬೇಕು’ ಎಂದು ಸೂಚಿಸಿದೆ.
ನ್ಯಾಯಾಲಯವು ಸ್ವತಃ ತಾನೇ ಕಾನೂನು ಬರೆಯಲು ಸಾಧ್ಯವಿಲ್ಲ. ಆದರೆ, ಸರ್ಕಾರಕ್ಕೆ ಅರಿವು ಮೂಡಿಸುವ ಗುರುತರ ಜವಾಬ್ದಾರಿಯನ್ನಂತೂ ಹೊಂದಿದೆ. ಹೀಗಾಗಿ, 2007ರಲ್ಲಿ ಅರ್ಥಪೂರ್ಣವೆಂದು ಭಾವಿಸಲಾದ ಮಸೂದೆಯ ನಿಬಂಧನೆಗಳು 2025ರಲ್ಲಿ ಬದಲಾಗಬೇಕಾದ ಅನಿವಾರ್ಯ ಇದೆ ಎಂಬುದನ್ನು ನಾವು ಈ ಹಂತದಲ್ಲಿ ಎದೆಗೊತ್ತಿಕೊಳ್ಳಬೇಕು. ಪೋಷಕರ ಪಾಲನೆಯ ಭತ್ಯೆ ಕೇವಲ ಭ್ರಮೆ ಎನಿಸಬಾರದು. ವಾಸ್ತವದಲ್ಲಿ ಅದು ಅವರ ನೆರವಿಗೆ ಬರಬೇಕು. ಇಲ್ಲದಿದ್ದರೆ ‘ಮರಳಿನ ಕಂಬ’ದಂತೆಯೇ ಉಳಿದು ಬಿಡುತ್ತದೆ.– ನ್ಯಾಯಮೂರ್ತಿ ಎಂ.ನಾಗಪ್ರಸನ್ನ
ಕೇಂದ್ರ ಸರ್ಕಾರಕ್ಕೆ ಶಿಫಾರಸು
ಕೇಂದ್ರ ಸರ್ಕಾರವು ಕಲಂ 9ರ ಮಿತಿಯನ್ನು ಮರು ಪರಿಶೀಲಿಸಬೇಕು. ಜೀವನ ವೆಚ್ಚದ ಸೂಚ್ಯಂಕಕ್ಕೆ ಅನುಗುಣವಾಗಿ ಗಣನೀಯವಾಗಿ ಏರಿಸಲು ಮಾಸಿಕ ಪಾಲನೆಯ ಭತ್ಯೆಯ ಮಿತಿಗೆ ಅಗತ್ಯ ತಿದ್ದುಪಡಿ ತರಬೇಕು. ಆಗ ಮಾತ್ರ ಈ ಕಾಯ್ದೆ ಹಿರಿಯರ ಪಾಲಿಗೆ ಗೌರವಯುಕ್ತ ಭರವಸೆಯಾಗಿ ಉಳಿಯುತ್ತದೆ. ದೇಶದ ಆಸ್ತಿಯನ್ನು ಅಳೆಯುವುದು, ಅಲ್ಲಿನ ಭೌತಿಕ ವಸ್ತುಗಳ ಪ್ರಗತಿಯಿಂದ ಮಾತ್ರವಲ್ಲ. ಬದಲಿಗೆ ಅಲ್ಲಿನ ಹಿರಿಯರ, ಮಕ್ಕಳ ಪೋಷಣೆ ಹಾಗೂ ಕಲ್ಯಾಣ ಎಷ್ಟರ ಮಟ್ಟಿಗಿದೆ ಎಂಬುದೂ ಅಷ್ಟೇ ಪ್ರಧಾನವಾದುದು.
ಯಾವುದೀ ಪ್ರಕರಣ?
ಬೆಂಗಳೂರಿನ ಜಯನಗರದ ವೃದ್ಧ ದಂಪತಿ ಮತ್ತು ಅವರ ಮಕ್ಕಳಿಗೆ ಸಂಬಂಧಿಸಿದ ಈ ಪ್ರಕರಣವನ್ನು ಮೊದಲಿಗೆ ಸಕ್ಷಮ ಪ್ರಾಧಿಕಾರವಾದ ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ವಿಚಾರಣೆ ನಡೆಸಿದ್ದರು. ಪತಿ–ಪತ್ನಿಯ ಅಹವಾಲಿಗೆ ಕಿವಿಯಾಗಿದ್ದ ಪ್ರಾಧಿಕಾರ, ‘₹5 ಲಕ್ಷ ಮೊತ್ತವನ್ನು ಈ ಆದೇಶ ತಲುಪಿದ 15 ದಿನಗಳ ಒಳಗಾಗಿ ಅರ್ಜಿದಾರರಾಗಿರುವ 66 ವರ್ಷದ ಪತಿ ಮತ್ತು ಅವರ 60 ವರ್ಷದ ಪತ್ನಿಗೆ ನೀಡಬೇಕು ಮತ್ತು ಅವರ ವಾಸಸ್ಥಳಕ್ಕೆ ಸಂಬಂಧಿಸಿದಂತೆ ಅವರು ಕೇಳುತ್ತಿರುವ ಸ್ಥಿರಾಸ್ಥಿಯನ್ನು ಅವರ ಅನುಭೋಗಕ್ಕೆ ಬಿಟ್ಟುಕೊಡಬೇಕು’ ಎಂದು ಅವರ ಮಕ್ಕಳಿಗೆ ಆದೇಶಿಸಿತ್ತು.
ನಾಲ್ವರು ಗಂಡು ಮಕ್ಕಳು ಹಾಗೂ ಒಬ್ಬ ಸೊಸೆ ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತಾದ ರಿಟ್ ಅರ್ಜಿಯನ್ನು (ಡಬ್ಲ್ಯು.ಪಿ ಸಂಖ್ಯೆ:13448/2025–ಜಿಎಂ–ಆರ್‌ಇಎಸ್) ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈಗ ವಿಲೇವಾರಿ ಮಾಡಿದೆ. ವೃದ್ಧ ದಂಪತಿ ಪರವಾಗಿ ಹೈಕೋರ್ಟ್ ವಕೀಲ ಎಂ.ವಿನೋದ್ ಕುಮಾರ್ ವಾದ ಮಂಡಿಸಿದ್ದರು.
ಆದೇಶ: ಉಪ ವಿಭಾಗಾಧಿಕಾರಿ ಆದೇಶವನ್ನು ರದ್ದುಗೊಳಿಸಿರುವ ನ್ಯಾಯಪೀಠ, ಪೋಷಕರ ಮನವಿಯನ್ನು ಮರುಪರಿಶೀಲನೆ ಮಾಡಬೇಕು. ವಿಚಾರಣೆ ಸಮಯದಲ್ಲಿ ಉಪ ವಿಭಾಗಾಧಿಕಾರಿಯು ಕೋರ್ಟ್ ಈ ತೀರ್ಪಿನಲ್ಲಿ ಅವಲೋಕಿಸಿರುವ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು ನ್ಯಾಯಿಕ ಪ್ರಕ್ರಿಯೆ ಮುಂದುವರಿಸಿ ಸೂಕ್ತ ಆದೇಶ ಹೊರಡಿಸಬೇಕು. ಉಪವಿಭಾಗಾಧಿಕಾರಿ ಆದೇಶ ಹೊರಡಿಸುವ ತನಕ ಪ್ರತಿವಾದಿ (ಪತಿ–ಪತ್ನಿ) ಪೋಷಕರಿಗೆ ಪ್ರತಿ ತಿಂಗಳೂ ₹10 ಸಾವಿರ ನಿರ್ವಹಣಾ ವೆಚ್ಚವನ್ನು 2021ರ ಏಪ್ರಿಲ್ 16ರಿಂದಲೇ ನೀಡಬೇಕು. ಈ ತೀರ್ಪು ಪ್ರಕಟವಾದ ದಿನದಿಂದ ₹10 ಸಾವಿರ ನಿರ್ವಹಣಾ ವೆಚ್ಚವನ್ನು ₹30 ಸಾವಿರಕ್ಕೆ ಏರಿಕೆ ಮಾಡಿ ಐವರೂ ಅರ್ಜಿದಾರರು ನೀಡಬೇಕು. ಈ ತೀರ್ಪಿನ ಪ್ರತಿಯನ್ನು ರಿಜಿಸ್ಟ್ರಾರ್ ಜನರಲ್ ಅವರು ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರಿಗೆ ಮತ್ತು ಕೇಂದ್ರ ಹಣಕಾಸು ಸಚಿವಾಲಯಕ್ಕೆ ರವಾನಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ.
ಕಾಯ್ದೆ ಅನುಷ್ಠಾನ
‘ಭಾರತೀಯ ಸಮಾಜದ ಪಾರಂಪರಿಕ ಮೌಲ್ಯಗಳಲ್ಲಿ ಹಿರಿಯರ ಆರೈಕೆಗೆ ಹೆಚ್ಚು ಒತ್ತು ಕೊಡಬೇಕು. ಆದರೆ, ಭರದಿಂದ ಚಲಿಸುತ್ತಿರುವ ಸಮಾಜದಲ್ಲಿ ಅವಿಭಜಿತ ಕುಟುಂಬದ ವ್ಯವಸ್ಥೆ ಕುಸಿಯುತ್ತಿದೆ. ಇಂತಹ ಕುಟುಂಬಗಳಲ್ಲಿನ ಹಿರಿಯರನ್ನು ಅದರಲ್ಲೂ ವಿಧವೆಯರು, ವೃದ್ಧರು ತಮ್ಮ ವೃದ್ಧಾಪ್ಯವನ್ನು ಭಾವನಾತ್ಮಕ ನಿರ್ಲಕ್ಷ್ಯ, ದೈಹಿಕ ಮತ್ತು ಆರ್ಥಿಕ ನೆರವಿನ ಕೊರತೆಗಳಲ್ಲಿ ಸಿಲುಕಿ ಒಂಟಿಯಾಗಿ ಬದುಕುವಂತಾಗಿದೆ’ ಎಂಬ ಕಾರಣಗಳಿಗಾಗಿ ‘ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ’ಯನ್ನು 2007ರಲ್ಲಿ ಜಾರಿಗೆ ತರಲಾಯಿತು.
ಈ ಕಾಯ್ದೆಯು ಮಕ್ಕಳಿಂದ ಅಥವಾ ಹಿರಿಯ ಸಂಬಂಧಿಕರ ಆಸ್ತಿಯನ್ನು ಸ್ವೀಕರಿಸಿದವರ ಮೇಲೆ ಆ ಹಿರಿಯರನ್ನು ಪಾಲಿಸುವ ಜವಾಬ್ದಾರಿ ವಿಧಿಸುವ ಉದ್ದೇಶವನ್ನು ಹೊಂದಿದೆ. ಹಾಗೆಯೇ ಬಡತನದಿಂದ ಬಳಲುತ್ತಿರುವ ಹಿರಿಯರ ನೆರವಿಗಾಗಿ ವೃದ್ಧಾಶ್ರಮಗಳನ್ನು ಸ್ಥಾಪಿಸುವುದಕ್ಕೂ ಅವಕಾಶ ನೀಡುತ್ತದೆ. ಅವರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಒದಗಿಸಲು ಹಾಗೂ ಅವರ ಜೀವ–ಆಸ್ತಿಗೆ ರಕ್ಷಣೆಯನ್ನು ಒದಗಿಸುವ ಕ್ರಮಗಳ ಬಗ್ಗೆಯೂ ಪ್ರಸ್ತಾಪಿಸುತ್ತದೆ.
ಪೋಷಕರು–ಹಿರಿಯರಿಗೆ ಅವರ ಅವಶ್ಯಕತೆಯ ಆಧಾರದಡಿ ಅವರ ಪಾಲನೆಗಾಗಿ ಸೂಕ್ತ ವ್ಯವಸ್ಥೆಯ ಸ್ಥಾಪನೆ, ಉತ್ತಮ ವೈದ್ಯಕೀಯ ಸೌಲಭ್ಯ ನೀಡುವುದು, ಹಿರಿಯರ ಜೀವ ಮತ್ತು ಆಸ್ತಿ ರಕ್ಷಣೆಗೆ ಸೂಕ್ತ ವ್ಯವಸ್ಥೆ ಸ್ಥಾಪಿಸುವುದು, ಪ್ರತೀ ಜಿಲ್ಲೆಯಲ್ಲಿ ವೃದ್ಧಾಶ್ರಮ ಸ್ಥಾಪಿಸುವುದು ಮುಂತಾದ ಪ್ರಮುಖ ಅಂಶಗಳು ಇದರಲ್ಲಿ ಅಡಕವಾಗಿವೆ.
ಮೂಲ ಕಾಯ್ದೆಯು ಹಠಾತ್ ರೂಪುಗೊಂಡದ್ದಲ್ಲ. ಇದು ಭಾರತದ ಸಂವಿಧಾನದ 41ನೇ ವಿಧಿಯನ್ನು ಅನುಸರಿಸಿ ರೂಪುಗೊಂಡಿರುವ ನಮ್ಮ ರಾಜ್ಯದ ಆರ್ಥಿಕ ಬಲದ ದಿಕ್ಸೂಚಿಯೊಂದಿಗೆ ನಿರುದ್ಯೋಗ, ಅನಾರೋಗ್ಯ, ಅಂಗವೈಕಲ್ಯ, ವೃದ್ಧಾಪ್ಯ ಮುಂತಾದ ದುರ್ಬಲ ಸ್ಥಿತಿಗಳ ಸಂದರ್ಭಗಳಲ್ಲಿ ನೀಡಲಾಗುವ ನೆರವಿನ ಶಾಸಕಾಂಗದ ಒಳದನಿ. ಈ ಕಾಯ್ದೆ 2007ರ ಡಿಸೆಂಬರ್ 29ರಂದು ಜಾರಿಗೆ ಬಂದ ನಂತರ ಅನೇಕ ಬಾರಿ ತಿದ್ದುಪಡಿಗೆ ಒಳಗಾಗಿದೆ. 2019ರಲ್ಲಿ ತರಲಾದ ತಿದ್ದುಪಡಿ ಮಸೂದೆಯ ಅನುಸಾರ ಹಿರಿಯರು ಅಥವಾ ಪೋಷಕರಿಗೆ ನೀಡಲಾಗುವ ಮಾಸಿಕ ಭತ್ಯೆಯ ಬಗ್ಗೆ ಕಲಂ 9ರ ಅಡಿಯಲ್ಲಿ ವಿಶೇಷವಾಗಿ ವಿವರಿಸಿ ಅದರ ಬದಲಾವಣೆಯನ್ನು ನಿರ್ದಿಷ್ಟಪಡಿಸಲಾಯಿತು.
ಆ ಬದಲಾವಣೆಯ ರೂಪ ಹೀಗಿತ್ತು:
ಪೋಷಕರು ಅಥವಾ ಹಿರಿಯರನ್ನು ನಿರ್ಲಕ್ಷಿಸುವ ಅಥವಾ ಪಾಲನೆ ಮಾಡಲು ನಿರಾಕರಿಸುವ ಮಕ್ಕಳ ವಿರುದ್ಧ ಅಥವಾ ಸಂಬಂಧಿಕರ ವಿರುದ್ಧ, ಹಿರಿಯರು ತಮ್ಮ ನಿರ್ವಹಣೆಯನ್ನು ಮಾಡಲಾಗದೆ, ಗೌರವಯುತವಾಗಿ ಜೀವನ ನಡೆಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇದ್ದಾರೆ ಎಂಬುದನ್ನು ನ್ಯಾಯಮಂಡಳಿ ಮನವರಿಕೆ ಮಾಡಿಕೊಳ್ಳಬೇಕು. ಇಂತಹ ಸಂದರ್ಭದಲ್ಲಿ ನ್ಯಾಯಮಂಡಳಿಯು, ಆ ಮಕ್ಕಳು ಅಥವಾ ಸಂಬಂಧಿಕರು ಅಂತಹ ಪೋಷಕರು ಅಥವಾ ಹಿರಿಯರಿಗೆ ಪ್ರತಿ ತಿಂಗಳ ಪಾಲನೆ ಭತ್ಯೆ ಅಥವಾ ಬೇರೆ ಅಗತ್ಯ ನೆರವುಗಳನ್ನು ನೀಡುವಂತೆ ಆದೇಶಿಸಬಹುದು.
ಪಾಲನೆಗೆ ನೀಡುವ ಮೊತ್ತದ ಬಗ್ಗೆ ನಿರ್ಧರಿಸುವಾಗ, ನ್ಯಾಯಮಂಡಳಿಯು ಆ ಹಿರಿಯರ ಜೀವನದ ಮಟ್ಟ, ಶೈಲಿ ಮತ್ತು ಅವರ ಹಾಗೂ ಮಕ್ಕಳ ಇಲ್ಲವೇ ಸಂಬಂಧಿಕರ ಆದಾಯಗಳನ್ನು ಪರಿಗಣಿಸಬಹುದು.
ಪಾಲನೆ ಆದೇಶವು, ಆದೇಶದ ದಿನಾಂಕದಿಂದಲೇ ಜಾರಿಗೆ ಬರಬಹುದು ಅಥವಾ ಅರ್ಜಿಯ ದಿನಾಂಕದಿಂದಲೂ ಅನ್ವಯಿಸಬಹುದು.
ಪಾಲನೆಯ ಆದೇಶದ ಪ್ರತಿಯನ್ನು
(i) ಉಚಿತವಾಗಿ ಪೋಷಕರಿಗೆ ಅಥವಾ ಹಿರಿಯರಿಗೆ ನೀಡಬೇಕು
(ii) ನ್ಯಾಯಮಂಡಳಿಯ ನೋಟಿಸ್ ಬೋರ್ಡ್ ಮೇಲೆ ಪ್ರದರ್ಶಿಸಬೇಕು
(iii) ಸಂಬಂಧಿಸಿದ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು
(iv) ಪಾಲನೆ ಅಧಿಕಾರಿಗೆ ನೀಡಬೇಕು.
ಒಂದು ವೇಳೆ ಒಬ್ಬರಿಗಿಂತ ಹೆಚ್ಚಿನವರ ವಿರುದ್ಧ ಹಿರಿಯರ ಪಾಲನೆಯ ಆದೇಶವಾಗಿದ್ದಲ್ಲಿ, ಅವರಲ್ಲಿ ಒಬ್ಬರು ಮೃತಪಟ್ಟರೂ ಉಳಿದವರು ಹಿರಿಯರ ಪೋಷಣೆಯ ಜವಾಬ್ದಾರಿಯನ್ನು ಮುಂದುವರಿಸಬೇಕಾಗಿರುತ್ತದೆ.
ಕಲಂ 9ರ ಪಾಲನೆಯ ಆದೇಶ
(1) ಪೋಷಕರು ಅಥವಾ ಹಿರಿಯರನ್ನು ಪಾಲನೆ ಮಾಡಲು ಮಕ್ಕಳು ಅಥವಾ ಸಂಬಂಧಿಕರು ನಿರಾಕರಿಸಿದಲ್ಲಿ, ನ್ಯಾಯಮಂಡಳಿ ಅವರಿಗೆ ಪ್ರತಿ ತಿಂಗಳ ಪಾಲನೆಗೆ ಭತ್ಯೆಯನ್ನು ನೀಡಲು ಆದೇಶಿಸಬಹುದು.
(2) ರಾಜ್ಯ ಸರ್ಕಾರ ನಿಗದಿಪಡಿಸಿದ ಗರಿಷ್ಠ ಪಾಲನೆಯ ಭತ್ಯೆ ₹10 ಸಾವಿರ ಮೀರಬಾರದು.
ಈ ಕಾಯ್ದೆಯ ಮೂಲ ಉದ್ದೇಶಗಳು
(i) ಅಗತ್ಯ ಆಧಾರಿತ ಪಾಲನೆ
(ii) ಉತ್ತಮ ವೈದ್ಯಕೀಯ ಸೌಲಭ್ಯ
(iii) ರಕ್ಷಣೆಗೆ ಸೂಕ್ತ ವ್ಯವಸ್ಥೆ.
ನ್ಯಾಯಮೂರ್ತಿ ಎಂ.ನಾಗಪ್ರಸನ್ನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.