ರಾಜ್ಯ ಸರ್ಕಾರವು ಕಳೆದ ವರ್ಷದ ನವೆಂಬರ್‌ನಲ್ಲಿ ಜಾರಿಗೆ ತಂದಿರುವ ನೂತನ ಪ್ರವಾಸೋದ್ಯಮ ನೀತಿ 2024-29ರ ಅಡಿಯಲ್ಲಿ ರಾಜ್ಯದಲ್ಲಿ ಒಟ್ಟು 1,275 ಪ್ರವಾಸಿ ತಾಣಗಳನ್ನು ಗುರುತಿಸಿದೆ. ಪ್ರವಾಸೋದ್ಯಮ ಇಲಾಖೆಯು ಆಗಸ್ಟ್ 7ರಂದು ಈ ಸಂಬಂಧ ಆದೇಶ ಹೊರಡಿಸಿದ್ದು, ಜಿಲ್ಲಾವಾರು ಪ್ರವಾಸಿ ತಾಣಗಳ ಸಂಖ್ಯೆಗಳನ್ನು ಪಟ್ಟಿ ಮಾಡಿದೆ.
2020–26ರ ಪರಿಷ್ಕೃತ ನೀತಿಯಲ್ಲಿ 810 ತಾಣಗಳಿಗೆ ಮಾತ್ರವೇ ಸ್ಥಾನ ಸಿಕ್ಕಿತ್ತು. ಆದರೆ, ಹೊಸ ನೀತಿಯಲ್ಲಿ 465 ಹೆಚ್ಚು ಸ್ಥಳಗಳಿಗೆ ಮನ್ನಣೆ ಸಿಕ್ಕಿದೆ. ಜಿಲ್ಲಾವಾರು ಪಟ್ಟಿಯ ಪ್ರಕಾರ ಪ್ರಕಾರ, ಚಾಮರಾಜನಗರ ಜಿಲ್ಲೆಯು ಅತ್ಯಂತ ಕಡಿಮೆ, ಐದು ತಾಣಗಳನ್ನು ಹೊಂದಿದ್ದರೆ, ಮಂಡ್ಯ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು, 106 ಪ್ರವಾಸಿ ಸ್ಥಳಗಳನ್ನು ಗುರುತಿಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ 27 ತಾಣಗಳಿವೆ.
ಅಚ್ಚರಿಯ ಸಂಗತಿ ಎಂದರೆ, ಕೆಲವು ಜಿಲ್ಲೆಗಳ ಪಟ್ಟಿಯಲ್ಲಿ ಈಗಾಗಲೇ ಪ್ರಸಿದ್ಧಿಗೆ ಬಂದಿರುವ ಪ್ರವಾಸಿ ತಾಣಗಳ ಹೆಸರು ಇಲ್ಲ. ಉದಾಹರಣೆಗೆ, ಮೈಸೂರು ಜಿಲ್ಲೆಯಲ್ಲಿ 13 ಪ್ರವಾಸಿ ತಾಣಗಳು ಇವೆ ಎಂದು ಹೊಸ ಪಟ್ಟಿಯಲ್ಲಿ ಹೇಳಲಾಗಿದೆ. ತಾಣಗಳ ವಿವರದಲ್ಲಿ ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಮೃಗಾಲಯ ಸೇರಿದಂತೆ ಹೆಚ್ಚಿನ ಜನರನ್ನು ಸೆಳೆಯುವ ಪ್ರವಾಸಿ ತಾಣಗಳ ಹೆಸರುಗಳಿಲ್ಲ. ನೆರೆಯ ಚಾಮರಾಜನಗರ ಜಿಲ್ಲೆಯ ವಿಷಯದಲ್ಲೂ ಅದೇ ರೀತಿ ಇದೆ. ವಾರ್ಷಿಕವಾಗಿ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುವ ಬಂಡೀಪುರ, ಬಿಳಿಗಿರಿರಂಗನಾಥಸ್ವಾಮಿ ದೇವಾಲಯ, ಮಹದೇಶ್ವರ ಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಮುಂತಾದ ಪ್ರಸಿದ್ಧ ತಾಣಗಳ ಹೆಸರುಗಳಿಲ್ಲ.
‘ಹೊಸದಾಗಿ ಸೇರ್ಪಡೆಯಾಗಿರುವ ಪ್ರವಾಸಿ ತಾಣಗಳ ಹೆಸರುಗಳನ್ನು ಮಾತ್ರ ಪಟ್ಟಿಯಲ್ಲಿ ಬರೆಯಲಾಗಿದೆ. ಹಳೆಯ ತಾಣಗಳ ಹೆಸರುಗಳನ್ನು ಉಲ್ಲೇಖಿಸಿಲ್ಲ’ ಎಂದು ಸ್ಥಳೀಯ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಬೇರೆ ಜಿಲ್ಲೆಗಳ ತಾಣಗಳ ಪಟ್ಟಿಯಲ್ಲಿ ಈಗಾಗಲೇ ಪ್ರಸಿದ್ಧಿ ಪಡೆದಿರುವ ಸ್ಥಳಗಳ ಹೆಸರುಗಳೂ ಇವೆ. ಉದಾಹರಣೆಗೆ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ರಂಗನಾಥಸ್ವಾಮಿ ದೇವಾಲಯ, ಬೃಂದಾವನ, ರಂಗನತಿಟ್ಟು, ಟಿಪ್ಪು ಬೇಸಿಗೆ ಅರಮನೆ ಮುಂತಾದ ತಾಣಗಳೂ ಪಟ್ಟಿಯಲ್ಲಿವೆ. ಪ್ರವಾಸಿಗರ ನೆಚ್ಚಿನ ಕೊಡಗು ಜಿಲ್ಲೆಯ ತಾಣಗಳ ಪಟ್ಟಿಯಲ್ಲಿ ಹೊಸ ತಾಣಗಳೊಂದಿಗೆ ಹಳೆಯ ಸ್ಥಳಗಳ ಹೆಸರುಗಳೂ ಇವೆ. ಉತ್ತರ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಈಗಾಗಲೇ ಗುರುತಿಸಿರುವ ಪ್ರವಾಸಿ ತಾಣಗಳೂ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ವಿಶ್ವವಿಖ್ಯಾತ ಹಂಪಿ ಇರುವ ವಿಜಯನಗರ ಜಿಲ್ಲೆಯಲ್ಲಿ ಹಿಂದಿನ 13 ಸ್ಥಳಗಳ ಜೊತೆಗೆ 29 ತಾಣಗಳನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ.
ಪ್ರವಾಸೋದ್ಯಮ ಇಲಾಖೆಯು ಆಗಸ್ಟ್ 7ರಂದು ಹೊರಡಿಸಿರುವ ಆದೇಶದಲ್ಲಿ ‘ರಾಜ್ಯದ ಒಟ್ಟು 1,275 ಪ್ರವಾಸಿ ತಾಣಗಳು’ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ, ಈ ಆದೇಶದೊಂದಿಗೆ ಜಿಲ್ಲಾವಾರು ಪ್ರವಾಸಿ ತಾಣಗಳ ವಿವರಗಳನ್ನು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅವರು ನೀಡಿದ್ದಾರೆ.
ಸಿಗುವುದೇ ಪ್ರವಾಸೋದ್ಯಮಕ್ಕೆ ಹೊಸ ರೂಪ?
ರಾಜ್ಯದ ಪ್ರವಾಸೋದ್ಯಮಕ್ಕೆ ಹೊಸ ರೂಪ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ 2024ರ ನವೆಂಬರ್‌ನಲ್ಲಿ ಕರ್ನಾಟಕ ಪ್ರವಾಸೋದ್ಯಮ ನೀತಿ 2024–29 ಜಾರಿಗೆ ತಂದಿದೆ.
ದೇಶೀಯ, ಜಾಗತಿಕ ಪ್ರವಾಸಿಗರನ್ನು ಸೆಳೆಯುವುದು, ಪ್ರವಾಸೋದ್ಯಮ ಆಧಾರಿತ ಉದ್ಯೋಗ ಸೃಷ್ಟಿಸುವುದು, ಆರ್ಥಿಕ ಬೆಳವಣಿಗೆ, ಉದ್ಯಮಶೀಲತೆಗೆ ಚೈತನ್ಯ ತುಂಬುವುದು, ಪ್ರಾದೇಶಿಕ–ಪ್ರವಾಸೋದ್ಯಮ ಹೂಡಿಕೆ, ಕೌಶಲ ಅಭಿವೃದ್ಧಿ, ಪರಿಚಿತವಲ್ಲದ ಪ್ರೇಕ್ಷಣೀಯ ಸ್ಥಳಗಳನ್ನು ಹೊರಜಗತ್ತಿಗೆ ಪರಿಚಯಿಸುವುದು, ಪ್ರವಾಸಿ ಮಾರ್ಗದರ್ಶಕರನ್ನು ಪ್ರೋತ್ಸಾಹಿಸುವುದು, ಸ್ಥಳೀಯ–ಸಾಂಪ್ರದಾಯಿಕ ಕರಕುಶಲತೆ, ಪಾಕ ಪದ್ಧತಿ, ಸಂಸ್ಕೃತಿಗೆ ಪ್ರಚಾರ ನೀಡುವುದು ನೀತಿಯ ಪ್ರಮುಖ ಗುರಿ. 2029ರ ವೇಳೆಗೆ ಕರ್ನಾಟಕವನ್ನು ದೇಶಿಯ ಪ್ರವಾಸಿಗರು ಭೇಟಿ ನೀಡುವ ಅಗ್ರ ಮೂರು ರಾಜ್ಯಗಳಲ್ಲಿ ಒಂದು ಮತ್ತು ಹೆಚ್ಚು ವಿದೇಶಿ ಪ್ರವಾಸಿಗರು ಭೇಟಿ ನೀಡುವ ಮೊದಲ ಐದು ರಾಜ್ಯಗಳಲ್ಲಿ ಒಂದಾಗಿ ರೂಪಿಸುವ ಉದ್ದೇಶವನ್ನೂ ಇದು ಹೊಂದಿದೆ.
‘ಒಂದು ಜಿಲ್ಲೆ, ಒಂದು ತಾಣ’ ಎಂಬ ಕಲ್ಪನೆಯ ಅಡಿಯಲ್ಲಿ ಜಿಲ್ಲೆಗೊಂದು ಪ್ರವಾಸಿ ತಾಣವನ್ನು ಅಭಿವೃದ್ಧಿ ಪಡಿಸುವ ಮಹತ್ವಾಕಾಂಕ್ಷೆಯೂ ನೀತಿಯಲ್ಲಿದೆ.
ಹಿಂದಿನ ಪ್ರವಾಸೋದ್ಯಮ ನೀತಿಯು 18 ಪ್ರವಾಸೋದ್ಯಮ ಪರಿಕಲ್ಪನೆಗಳನ್ನು ಮುಂದಿಟ್ಟಿತ್ತು. ಹೊಸ ನೀತಿಯು ಇದಕ್ಕೆ ಏಳು ಹೊಸ ಪರಿಕಲ್ಪನೆಗಳನ್ನು ಸೇರ್ಪಡೆಗೊಳಿಸಿದ್ದು, ಒಟ್ಟು 25 ಪರಿಕಲ್ಪನೆಗಳನ್ನು ಪಟ್ಟಿ ಮಾಡಿದೆ. ಬುಡಕಟ್ಟು ಪ್ರವಾಸೋದ್ಯಮ, ವೈವಾಹಿಕ, ಪ್ರವಾಸೋದ್ಯಮ, ವಾರಾಂತ್ಯದ ಪ್ರವಾಸೋದ್ಯಮ, ಗಾಲ್ಫ್ ಪ್ರವಾಸೋದ್ಯಮ, ವೈದ್ಯಕೀಯ ಪ್ರವಾಸೋದ್ಯಮ, ಸಾಹಿತ್ಯ ಪ್ರವಾಸೋದ್ಯಮ ಮತ್ತು ಗ್ರಾಮೀಣ ಪ್ರವಾಸೋದ್ಯಮ ಹೊಸ ಪರಿಕಲ್ಪನೆಗಳು.
ಹೊಸ ನೀತಿಯು ಕರಾವಳಿ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಿದ್ದು, ರಾಜ್ಯದ 320 ಕಿ.ಮೀ. ಉದ್ದದ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯನ್ನು ಕೈಗೊಳ್ಳಲು ಸರ್ಕಾರ ಉದ್ದೇಶಿಸಿದೆ. ಕರಾವಳಿ ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲು ವಿಶೇಷ ಆರ್ಥಿಕ ಪ್ಯಾಕೇಜ್ ರಚಿಸಲಾಗುವುದು ಎಂದೂ ಅದು ಹೇಳಿದೆ.
ಕರ್ನಾಟಕದ ಎಲ್ಲಾ ಹೆಲಿ ಟೂರಿಸಂ ಸ್ಥಳಗಳಿಗೆ ರೋಪ್‌ವೇ , ಕೇಬಲ್ ಕಾರ್‌ಗಳನ್ನು ಒದಗಿಸಲು ನಿರ್ಧರಿಸ ಲಾಗಿದೆ. ರೋಪ್ ವೇಗಳ ಸ್ಥಾಪನೆ, ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಅನುಕೂಲವಾಗುವಂತೆ ರೋಪ್‌ವೇ ಕಾಯ್ದೆಯನ್ನು ಜಾರಿಗೊಳಿಸುವ ಬಗ್ಗೆಯೂ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ.
ಮೂಲಸೌಕರ್ಯ: ಅದೇ ಸ್ಥಿತಿ, ಅದೇ ಗತಿ
ರಾಜ್ಯದಲ್ಲಿ ವೈವಿಧ್ಯಮಯವಾದ ಪ್ರವಾಸಿ ತಾಣಗಳಿವೆ. ಆದರೆ, ಬೆಂಗಳೂರು ಹೊರತುಪಡಿಸಿದರೆ, ಇತರ ಅನೇಕ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದೆ ಎನ್ನುವ ದೂರು ವ್ಯಾಪಕವಾಗಿದೆ. ಅನೇಕ ಪ್ರವಾಸಿ ತಾಣಗಳಿಗೆ ಹೋಗಲು ಸೂಕ್ತ ರಸ್ತೆ ಸೌಕರ್ಯವೇ ಇಲ್ಲ. ಪ್ರವಾಸಿ ತಾಣಗಳಿಗೆ ಹೋದರೆ, ಉತ್ತಮ ಹೋಟೆಲ್, ಶೌಚಾಲಯ, ಕುಡಿಯುವ ನೀರು ದೊರೆಯುವುದೇ ಕಷ್ಟವಾಗಿದೆ. ಕೊರತೆ ಇರುವ ವ್ಯವಸ್ಥೆಗೇ ಅತಿ ಹೆಚ್ಚಿನ ಹಣವನ್ನು ವಸೂಲಿ ಮಾಡಲಾಗುತ್ತಿದೆ ಎನ್ನುವ ದೂರುಗಳೂ ಇವೆ.
ಮೂಲಸೌಕರ್ಯಗಳನ್ನು ಕಲ್ಪಿಸಲು ಸರ್ಕಾರವು ಹೆಚ್ಚಿನ ಹಣ ವಿನಿಯೋಗಿಸಬೇಕಿದೆ. ಕೆಲವೆಡೆ, ಹಣ ಖರ್ಚು ಮಾಡಿ ಒಂದಿಷ್ಟು ಸೌಲಭ್ಯಗಳನ್ನು ಒದಗಿಸಿದ್ದರೂ, ನಿರ್ವಹಣೆಯ ಸಮಸ್ಯೆ ಇದೆ. ಕೆಲವು ಪ್ರವಾಸಿ ತಾಣಗಳಲ್ಲಿ ಭ್ರಷ್ಟಾಚಾರವೂ ನಡೆಯುತ್ತಿದೆ.
‘ಒಂದು ರಾಜ್ಯ, ಹಲವು ಜಗತ್ತು’ ಎನ್ನುವುದು ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಘೋಷ ವಾಕ್ಯ. ಅದಕ್ಕೆ ತಕ್ಕಂಥ ಪ್ರವಾಸಿ ತಾಣಗಳು ರಾಜ್ಯದಲ್ಲಿವೆ. ಆದರೆ, ಅವುಗಳನ್ನು ಗುರುತಿಸುವಲ್ಲಿ ಇಲಾಖೆ ಸೋತಿದೆ. ಪ್ರವಾಸೋದ್ಯಮ ಉತ್ತೇಜನಕ್ಕೆ ಅನೇಕ ಅವಕಾಶಗಳಿದ್ದರೂ, ಅವುಗಳನ್ನು ಸದ್ಬಳಕೆ ಮಾಡಿಕೊಂಡಿಲ್ಲ ಎನ್ನುವ ಅಭಿಪ್ರಾಯವಿದೆ. ರಾಮಾಯಣ ಸರ್ಕಿಟ್‌ನಂಥ ವ್ಯವಸ್ಥೆ ರೂಪಿಸಲು ಅವಕಾಶವಿದೆ.
ಪಾರಂಪರಿಕ ತಾಣವಾದ ಹಂಪಿಗೆ ಹೆಚ್ಚು ಒತ್ತು ಸಿಗುತ್ತಿದ್ದು, ಬೇಲೂರು, ಹಳೇಬೀಡು, ಪಟ್ಟದಕಲ್ಲು, ಐಹೊಳೆಗೆ ಅಷ್ಟು ಪ್ರಾಮುಖ್ಯ ಸಿಗುತ್ತಿಲ್ಲ ಎಂಬಂತಹ ದೂರು ರಾಜ್ಯದಾದ್ಯಂತ ಇರುವ ಪ್ರವಾಸಿ ತಾಣಗಳಿಗೆ ಸಂಬಂಧಿಸಿದಂತೆ ಕೇಳಿ ಬರುತ್ತಿದೆ.
ಐದು ವರ್ಷಕ್ಕೊಮ್ಮೆ ಪ್ರವಾಸೋದ್ಯಮ ನೀತಿ ಬದಲಾಗುತ್ತಿದ್ದರೂ, ಪ್ರವಾಸಿ ತಾಣಗಳು, ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದರೂ, ಮೂಲಸೌಕರ್ಯಗಳ ಕೊರತೆ ಮಾತ್ರ ನೀಗಿಲ್ಲ ಎನ್ನುವುದು ಉದ್ಯಮ ನಿರತರು, ಪ್ರವಾಸಿಗರ ದೂರು.
ಆಧಾರ: ಕರ್ನಾಟಕ ಪ್ರವಾಸೋದ್ಯಮ ನೀತಿ 2024–29, ಸದನದಲ್ಲಿ ಸಚಿವರ ಉತ್ತರ, ಸರ್ಕಾರಿ ಆದೇಶಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.