ADVERTISEMENT

ನುಡಿ ಬೆಳಗು: ಭೇಟಿಗೇಕೆ ಮೀನ-ಮೇಷ

ವಾಸುದೇವ ನಾಡಿಗ್
Published 28 ಜನವರಿ 2026, 0:10 IST
Last Updated 28 ಜನವರಿ 2026, 0:10 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಈ ಕಥೆಯ ನಾಲ್ವರು ಗೆಳೆಯರ ಸಂಬಂಧವೇ ಬಹಳ ವಿಶಿಷ್ಟವಾದುದು. ಕಷ್ಟ ಮತ್ತು ಸುಖ ಎಲ್ಲದರಲ್ಲೂ ಪರಸ್ಪರ ಭಾಗಿಯಾಗುವ ಅವರು ತಮ್ಮ ಒಂದು ಭೇಟಿಯಲ್ಲಿ ತೆಗೆದುಕೊಂಡ ನಿರ್ಧಾರವೇ ರೋಮಾಂಚಕ. ತಮ್ಮ ಓದು ಬರಹ ಮುಗಿಸಿ ಉದ್ಯೋಗಕ್ಕೆ ಬೇರೆ ಬೇರೆ ಊರು ದೇಶಗಳಿಗೆ ತೆರಳುವಾಗ ಒಮ್ಮೆ ನಾಲ್ವರೂ ಟೀ ದೋಸೆ ಎಂದು ಸೇರಿದರು. ಹರಟೆ ಹೊಡೆದರು. ಎಂದಿನಂತೆ ಹೋಟೆಲ್ ಬಿಲ್ಲಿನ ಖರ್ಚನ್ನು ಇದ್ದವರು ಹಂಚಿಕೊಂಡು ಭರಿಸಿದರು. ನಗು, ತಮಾಷೆ, ಮಾತು ಮುಗಿಯುತ್ತಿದ್ದ ಹಾಗೆ ಮುಂದಿನ ಭೇಟಿ ಕೂಡ ಇಲ್ಲೇ ಹೀಗೆ ಎಂದು ನಿರ್ಧಾರ ಮಾಡಿ ಎದ್ದರು. ಮೂವತ್ತು ವರುಷಗಳ ನಂತರ ಭೇಟಿ ಆಗುವ ನಿರ್ಣಯ ಅದು. ಆದರೆ ಒಂದು ಕರಾರು: ಆಗ ಭೇಟಿಯಾದಾಗ ಯಾವ ಗೆಳೆಯ ತಡವಾಗಿ ಬಂದು ಸೇರುವರೋ ಅವರೇ ಹೋಟೆಲ್ ಕಾಫಿ ತಿಂಡಿಯ ಬಿಲ್ ಪಾವತಿಸಬೇಕು. ದಿನಾಂಕ ನಿಗದಿಯಾಯಿತು. ಎಲ್ಲರೂ ತಮ್ಮ ತಮ್ಮ ಬಾಳಿನ ದಾರಿ ಹಿಡಿದು ನಡೆದರು. ಕಾಲ ಮತ್ತು ಅದರ ಹಸಿವು ಶೋಧದ ತೀವ್ರತೆ ತಾತ್ಕಾಲಿಕವಾದ ಅಗಲಿಕೆಯನ್ನು ಸೃಷ್ಟಿಸಿತು. ಅವರವರ ದಾರಿ.

ಕಾಲವನ್ನು ನಿಲ್ಲಿಸಲಾಗುವುದಿಲ್ಲ. ಅಭಿನವ ಪಂಪ ನಾಗಚಂದ್ರನ ಕಾಲವಶವನ್ನು ದಾಟಿಹೋಗುವ ಕ್ರಿಯೆ, ಬೇಂದ್ರೆಯವರ ಹಾರುವ ಹಕ್ಕಿ ಮತ್ತು ಕಣವಿಯವರ ಕಟ್ಟಿಹಾಕಲಾಗದ ಕತ್ತೆ. ಯಾರೂ ನಿಯಂತ್ರಿಸಲಾಗದ ಇದು ಈ ನಾಲ್ವರನ್ನೂ ಮತ್ತೆ ಕೂಡಿಸಿತು. ಮೊದಲೇ ನಿಗದಿಯಾದ ದಿನದಂದು ನಿಗದಿಯಾದ ಜಾಗದಲ್ಲಿ ಸೇರಲು ಅಣಿಯಾದರು. ಮೂವರು ಮಾತ್ರ ಬಂದು ಸೇರಿದರು. ಒಬ್ಬ ಇಂಜಿನಿಯರ್, ಒಬ್ಬ ವ್ಯಾಪಾರಿ ಮತ್ತೊಬ್ಬ ಬ್ಯಾಂಕಿಂಗ್ ಉದ್ಯೋಗಸ್ಥನಾಗಿ ಕೆಲಸ. ಎಷ್ಟು ಹೊತ್ತು ಕಾದರೂ ಇನ್ನೊಬ್ಬ ಗೆಳೆಯ ಬರಲೇ ಇಲ್ಲ, ಕಾದರು. ಕೊನೆಗೆ ಬರುವವ ಹೊಟೇಲ್ ಬಿಲ್ ಕೊಡುವ ಮಾತಾಗಿತ್ತು. ಅವನು ಬರುವವರೆಗೂ ಮಾತನಾಡುತ್ತ ತಮಗೆ ಬೇಕಾದ ತಿನಿಸುಗಳನ್ನು ಆರ್ಡರ್ ಮಾಡಿ ತಿನ್ನಲು ಶುರು ಮಾಡಿದರು. ಸಂಜೆ ಹೋಗಿ ಇರುಳು ಕವಿಯುತ್ತಿದ್ದರೂ ಆ ಗೆಳೆಯ ಬರಲೇ ಇಲ್ಲ. ಇನ್ನೇನು ಎದ್ದು ಬಿಲ್ ಕೊಟ್ಟು ಹೋಗಬೇಕು ಅನ್ನುವಷ್ಟರಲ್ಲಿ ಒಬ್ಬ ಯುವಕ ಓಡಿ ಬಂದು ಆ ಬಿಲ್ಲನ್ನು ತೆಗೆದುಕೊಂಡು ಪಾವತಿ ಮಾಡಿಬಿಟ್ಟ.‘ನಾನು ನಿಮ್ಮ ಇನ್ನೊಬ್ಬ ಗೆಳೆಯನ ಮಗ. ಈಗ ಡಾಕ್ಟರ್ ಆಗಿದ್ದೇನೆ. ಅಪ್ಪ ಮೇಷ್ಟ್ರಾಗಿ ಕೆಲಸಕ್ಕೆ ಸೇರಿಕೊಂಡರು. ಅವರು ತಮ್ಮ ಡೈರಿಯಲ್ಲಿ ದಿನಾಂಕ ಬರೆದಿಟ್ಟು ಸದಾ ನನಗೂ ನೆನಪು ಮಾಡುತ್ತಿದ್ದರು. ಕಳೆದ ತಿಂಗಳಷ್ಟೆ ನಿಧನ ಹೊಂದಿದರು’ ಎಂದ. ಪರಸ್ಪರ ಈ ಮೂವರೂ ಈ ಮೊದಲು ಮತ್ತೆ ಮತ್ತೆ ಆಗಾಗ ಕಾಣಬಹುದಾಗಿತ್ತು ಎಂದು ಕೊರಗಿ ಪೇಚಾಡಿದರು.

ADVERTISEMENT

ನಿಜ ಅಲ್ಲವೇ? ಕೆಲವರ ಭೇಟಿ ನಮ್ಮ ಬಾಳಿಗೆ ಪ್ರೇರಕವಾಗಬಹುದಾದರೆ ದಿನಾಂಕವನ್ನು ನಿಗದಿಪಡಿಸಿ ಕಾಯದೇ ಕಂಡುಬಿಡಬೇಕು. ಈ ಮೊದಲೇ ಭೇಟಿಯಾಗಬೇಕಿತ್ತು ಎಂಬ ನಮ್ಮ ಆಲೋಚನೆ ಕಾರ್ಯರೂಪಕ್ಕೆ ತಂದುಬಿಡಬೇಕು. ಅಪ್ತ ಸ್ನೇಹಿತರನ್ನೋ ಹಿರಿಯರನ್ನೋ ಹಿತೈಷಿಗಳನ್ನೋ ಕಂಡು ಮಾತಾನಾಡಿಸುವ ಮೂಲಕ ಒತ್ತಡ, ರೋಗ ರುಜಿನ, ಖಿನ್ನತೆ ಮತ್ತು ಒಳಗೆ ಕಾದುಕೂತ ಅಕಾಲಿಕ ಸಾವನ್ನೂ ಮುಂದೂಡಬಲ್ಲುದಾದರೆ ಆ ಭೇಟಿಗೆ ತಡವೇಕೆ. ನಮ್ಮದೇ ಖಾಸಗಿ ಒಳಗುದಿಗೆ ಅಂತಹ ಭೇಟಿ ಒಂದು ಧ್ರುವನಕ್ಷತ್ರವಾಗಬಲ್ಲುದಾದರೆ ಅಂತಹದಕ್ಕೂ ನೆಪಬೇಕೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.