ಮಿಗ್–21 ವಿಮಾನ
ಭಾರತದ ಕೀರ್ತಿಯನ್ನು ಬಾನೆತ್ತರದಲ್ಲಿ ಹಾರಿಸಿದ, ದೇಶದ ವಾಯುಸೇನೆಯ ಸಾಮರ್ಥ್ಯವನ್ನು ಜಗತ್ತಿಗೆ ಸಾರಿದ ಮಿಗ್–21 ಯುದ್ಧವಿಮಾನ ಇತಿಹಾಸದ ಪುಟ ಸೇರಿದೆ. ಇದರ ಬಗ್ಗೆ ಅತೀವ ಹೆಮ್ಮೆ ಹೊಂದಿರುವ ಭಾರತೀಯ ವಾಯುಸೇನೆಯು ಚಂಡೀಗಢದಲ್ಲಿ ಸೆ.26ರಂದು ಈ ಯುದ್ಧವಿಮಾನಕ್ಕೆ ಬೀಳ್ಕೊಡುಗೆ ಸಮಾರಂಭವನ್ನೂ ಆಯೋಜಿಸಿದೆ. ಈ ವಿಮಾನವು 1965 ಮತ್ತು 1971ರ ಭಾರತ–ಪಾಕಿಸ್ತಾನ ಯುದ್ಧಗಳು, 1999ರ ಕಾರ್ಗಿಲ್ ಯುದ್ಧ ಹಾಗೂ 2019ರ ಬಾಲಾಕೋಟ್ ನಿರ್ದಿಷ್ಟ ಭಾರತದ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿತ್ತು. ರಷ್ಯಾದಿಂದ ಆಮದು ಮಾಡಿಕೊಂಡಿದ್ದ ಮಿಗ್–21, ಭಾರತದ ವಾಯುಸೇನೆಯ ಮುಖ್ಯ ಭಾಗವಾಗಿ, ಪೈಲಟ್‌ಗಳ ನೆಚ್ಚಿನ ವಿಮಾನವಾಗಿ, ವಾಯುಸೇನೆಯಲ್ಲಿ 62 ವರ್ಷಗಳ ಅವಿಸ್ಮರಣೀಯ ಅಧ್ಯಾಯವನ್ನೇ ಬರೆದಿದೆ...
ಆಗಸ್ಟ್ 25ರಂದು ಬಿಕಾನೇರ್‌ನ ನಾಲ್ ವಾಯು ನೆಲೆಯಲ್ಲಿ ಮಿಗ್–21 ಗರ್ಜಿಸುತ್ತಾ ಆಗಸಕ್ಕೇರಿತು. ಈ ಯುದ್ಧವಿಮಾನದ ಕೊನೆಯ ಹಾರಾಟ ಅದು. ‘ಲವ್ ಆ್ಯಂಡ್ ವಾರ್’ ಹಿಂದಿ ಚಿತ್ರದ ಚಿತ್ರೀಕರಣದ ಭಾಗವಾಗಿ ಆಗಸದಲ್ಲಿ ಹಾರಿದ ಮಿಗ್–21, ಚಿತ್ರದ ಕಥೆಯಲ್ಲಿ ಮುಖ್ಯ ಭಾಗವೂ ಹೌದು. ಆದರೆ, ವಾಸ್ತವದಲ್ಲಿ, ಮಿಗ್–21 ಇನ್ನು ನೆನಪು ಮಾತ್ರ. ಆರು ದಶಕ ಭಾರತೀಯ ವಾಯುಸೇನೆಯ ಮುಖ್ಯ ಅಸ್ತ್ರವಾಗಿದ್ದ, ಬಾನಿನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ದೇಶದ ಹೆಮ್ಮೆಗೆ ಕಾರಣವಾದ ದೇಶದ ಮೊದಲ ಸೂಪರ್‌ಸಾನಿಕ್ ಯುದ್ಧ ವಿಮಾನ ಇದು; ಅಪ್ರಸ್ತುತವಾಗಿರುವ ತಂತ್ರಜ್ಞಾನ, ಹೆಚ್ಚುತ್ತಿರುವ ನಿರ್ವಹಣಾ ವೆಚ್ಚ ಹಾಗೂ ರಫೇಲ್, ತೇಜಸ್‌ನಂಥ ಅತ್ಯಾಧುನಿಕ ಯುದ್ಧವಿಮಾನಗಳ ಭರಾಟೆಯಲ್ಲಿ ಮರೆಗೆ ಸರಿದಿದೆ.
ರಾಜಸ್ಥಾನದ ಬಿಕಾನೇರ್‌ನ ನಾಲ್ ವಾಯುನೆಲೆಯಲ್ಲಿ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತಿ ಸಿಂಗ್ ಅವರು ಆಗಸ್ಟ್ 19ರಂದು ಮಿಗ್-21 ವಿಮಾನವನ್ನು ಕೊನೆಯ ಬಾರಿಗೆ ಹಾರಿಸಿದ್ದರು - –ಪಿಟಿಐ ಚಿತ್ರ
ಮಿಕೊಯಾನ್ ಗುರೊವಿಚ್–21 ಅಲಿಯಾಸ್ ಮಿಗ್– 21 ರಷ್ಯಾ ನಿರ್ಮಿತ ಮೊದಲ ಆಧುನಿಕ, ಎರಡನೇ ತಲೆಮಾರಿನ ಆಕರ್ಷಕ ವಿನ್ಯಾಸದ ಯುದ್ಧವಿಮಾನ. ಇದರ ಮೊದಲ ಆವೃತ್ತಿ ಮೊದಲ ಬಾರಿಗೆ ಕಾರ್ಯಾಚರಣೆ ಆರಂಭಿಸಿದ್ದು 1960ರಲ್ಲಿ. 1963ರಲ್ಲಿ ಭಾರತೀಯ ವಾಯುಪಡೆ ಸೇರಿ, ಅದರ ಪ್ರಮುಖ ಅಸ್ತ್ರವಾಯಿತು. ಭಾರತವು ನಡೆಸಿದ ಪ್ರತಿ ಯುದ್ಧದಲ್ಲಿಯೂ ಇದರದ್ದು ಪ್ರಮುಖ ಪಾತ್ರವಾಗಿತ್ತು. 1971ರ ಡಿ.14ರಂದು ಢಾಕಾದಲ್ಲಿ ರಾಜ್ಯಪಾಲರ ಮನೆಯ ಮೇಲೆ ನಡೆಸಿದ ದಾಳಿ ನಿರ್ಣಾಯಕವಾಗಿತ್ತು. ಅದರಿಂದ ಯುದ್ಧವು ತಿರುವು ಪಡೆದು, ಪಾಕ್ ವಿರುದ್ಧ ಭಾರತ ಗೆಲುವು ಸಾಧಿಸಿತ್ತು. 2019ರ ಬಾಲಾಕೋಟ್ ವಾಯುದಾಳಿಯ ಸಂದರ್ಭದಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಇದ್ದ ಮಿಗ್–21 ವಿಮಾನ ಪತನ ಹೊಂದುವುದಕ್ಕೂ ಮುನ್ನ ಪಾಕ್‌ನ ಅತ್ಯಂತ ಶಕ್ತಿಶಾಲಿ ಯುದ್ಧವಿಮಾನ, ಅಮೆರಿಕ ನಿರ್ಮಿತ ಎಫ್–16 ಅನ್ನು ಹೊಡೆದುರುಳಿಸಿತ್ತು.
ಅತ್ಯಂತ ದೀರ್ಘಾವಧಿಗೆ ವಾಯುಪಡೆಯ ಭಾಗವಾಗಿದ್ದ ಈ ವಿಮಾನ ಪೈಲಟ್‌ಗಳ ತರಬೇತಿಗೂ ಬಳಕೆಯಾಗುತ್ತಿತ್ತು. ತನ್ನ ವೇಗ, ಸರಳತೆ, ಲವಲವಿಕೆಯಿಂದ ‘ವರ್ಕ್‌ಹಾರ್ಸ್’ ಎಂದು ಹೆಸರು ಪಡೆದಿದ್ದ ಈ ವಿಮಾನವು ಅಪಘಾತಗಳಿಗೆ, ದುರಸ್ತಿಗೆ, ಪೈಲಟ್‌ಗಳು, ನಾಗರಿಕರ ಸಾವಿಗೆ ಕಾರಣವಾಗಿ ‘ಹಾರಾಡುವ ಶವಪೆಟ್ಟಿಗೆ’ ಎನ್ನುವ ಅಪಖ್ಯಾತಿಗೂ ಗುರಿಯಾಗಿತ್ತು. ಹಾರಾಟ ನಿಲ್ಲಿಸಿದರೂ ಮಿಗ್–21 ತನ್ನ ಸಾಮರ್ಥ್ಯ, ಸಾಧನೆಯ ಮೂಲಕ ಸೇನಾ ಸಿಬ್ಬಂದಿಯೂ ಸೇರಿದಂತೆ ದೇಶದ ಜನರ ಮನಸ್ಸಿನಲ್ಲಿ ಚಿರಂತನವಾಗಿ ಉಳಿಯಲಿದೆ.
ವಾಯುಪಡೆ ಸಾಮರ್ಥ್ಯ ಕುಂಠಿತ
ಮಿಗ್–21 ವಿಮಾನಗಳ ನಿವೃತ್ತಿಯಿಂದಾಗಿ ವಾಯುಪಡೆಯ ಸಾಮರ್ಥ್ಯ ಕುಂಠಿತಗೊಂಡಿದೆ. ಸದ್ಯ ವಾಯುಪಡೆಯ ಬಳಿ ಇರುವ ಜಾಗ್ವಾರ್, ಮಿರಾಜ್–2000 ಮತ್ತು ಮಿಗ್–29 ಯುದ್ಧವಿಮಾನಗಳು ಕೂಡ ಹಳೆಯದಾಗುತ್ತಾ ಬಂದಿದ್ದು, ಈ ದಶಕದ ಕೊನೆಯ ಹೊತ್ತಿಗೆ ಸೇವೆಯಿಂದ ಒಂದೊಂದೇ ನಿವೃತ್ತಿ ಹೊಂದಲಿವೆ. ವಾಯುಪಡೆಯು ಹೊಸ ವಿಮಾನಗಳನ್ನು ಖರೀದಿಸದೇ ಇದ್ದರೆ ಸಾಮರ್ಥ್ಯ ಇನ್ನಷ್ಟು ಕುಗ್ಗಲಿದೆ.
ರಕ್ಷಣಾ ಸಚಿವಾಲಯವು 83 ತೇಜಸ್ ಎಂಕೆ1ಎ ಯುದ್ಧವಿಮಾನ ಖರೀದಿಗಾಗಿ ಎಚ್‌ಎಎಲ್ ಜೊತೆ ₹48 ಸಾವಿರ ಕೋಟಿಯ ಒಪ್ಪಂದ ಮಾಡಿಕೊಂಡಿತ್ತು. 2024ರ ಮಾರ್ಚ್‌ನಿಂದಲೇ ತೇಜಸ್ ವಿಮಾನಗಳನ್ನು ವಾಯುಪಡೆಗೆ ಹಸ್ತಾಂತರಿಸಲು ಆರಂಭಿಸಬೇಕಿತ್ತು. ಆದರೆ, ಎಚ್‌ಎಎಲ್ ಈವರೆಗೆ ಒಂದು ವಿಮಾನವನ್ನೂ ಹಸ್ತಾಂತರಿಸಿಲ್ಲ. 2021ರ ಆಗಸ್ಟ್‌ನಲ್ಲಿ ಎಚ್‌ಎಎಲ್ 99ಎಫ್–404 ಎಂಜಿನ್‌ಗಳ ಖರೀದಿಗಾಗಿ ಜಿಇ ಏರೋಸ್ಪೇಸ್ ಕಂಪನಿಯೊಂದಿಗೆ ₹5,375 ಕೋಟಿ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಒಂದೂವರೆ ವರ್ಷ ಎಂಜಿನ್ ಪೂರೈಕೆ ಆಗಿರಲಿಲ್ಲ. ಮೊದಲ ಎಂಜಿನ್ ಈ ವರ್ಷದ ಏಪ್ರಿಲ್‌ನಲ್ಲಿ ಬಂದಿದೆ.
ಹಾರಾಡುವ ಶವಪೆಟ್ಟಿಗೆ
ಮಿಗ್–21 ವಿಮಾನವು ‘ಹಾರಾಡುವ ಶವಪೆಟ್ಟಿಗೆ’ ಎಂಬ ಅಪಖ್ಯಾತಿಯನ್ನೂ ಹೊಂದಿದೆ. ವಿಮಾನವು ಪದೇ ಪದೇ ಪತನಗೊಂಡು ಪೈಲಟ್‌ಗಳು ಹಾಗೂ ನಾಗರಿಕರು ಸಾವಿಗೀಡಾಗುತ್ತಿದ್ದುದು ಇದಕ್ಕೆ ಕಾರಣ. ಈವರೆಗೆ 400ಕ್ಕೂ ಹೆಚ್ಚು ವಿಮಾನಗಳು ಅಪಘಾತಕ್ಕೀಡಾಗಿದ್ದು, 200 ಪೈಲಟ್‌ಗಳು ಮತ್ತು 60 ನಾಗರಿಕರು ಮೃತಪಟ್ಟಿದ್ದಾರೆ.
‘ಮರೆಯಲಾಗದ ಆತ್ಮೀಯತೆ’
ಹಲವು ವಾಯುಸೇನಾ ಅಧಿಕಾರಿಗಳು ಮಿಗ್–21 ಹಾರಿಸಿದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡು, ಅದರ ಸಾಮರ್ಥ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಇಂದು ಪೈಲಟ್‌ಗಳು ಹೆಚ್ಚು ಸುರಕ್ಷಿತವಾದ, ನಾಜೂಕಾದ ಮತ್ತು ಮುಂದುವರಿದ ತಂತ್ರಜ್ಞಾನದ ಯುದ್ಧವಿಮಾನಗಳನ್ನು ಹಾರಿಸುತ್ತಿದ್ದಾರೆ. ಆದರೆ ಒರಟು ಎಂದು ಕರೆಯಬಹುದಾಗಿದ್ದ, ಸಣ್ಣ ಲೋಪಕ್ಕೂ ಅವಕಾಶ ಇಲ್ಲದ ವಿಮಾನದೊಂದಿಗೆ ನಾವು ಹೊಂದಿದ್ದ ಆತ್ಮೀಯತೆ ಎಂತಹದ್ದು ಎನ್ನುವುದನ್ನು ಇಂದಿನವರು ಎಂದಿಗೂ ಅರಿಯಲಾರರು’ ಎಂದು ನಿವೃತ್ತ ಗ್ರೂಪ್ ಕ್ಯಾಪ್ಟನ್ ಅನುಪಮ್ ಬ್ಯಾನರ್ಜಿ ತಮ್ಮ ಅನುಭವ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.