ADVERTISEMENT

Nandini Amul Row | ಆಳ–ಅಗಲ: ನಂದಿನಿಗೆ ಅಮೂಲ್ ಮಾರಕವೇ...?

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2023, 0:30 IST
Last Updated 11 ಏಪ್ರಿಲ್ 2023, 0:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗುಜರಾತಿನ ಹಾಲು ಉತ್ಪಾದಕರ ಸಹಕಾರ ಸಂಘದ ಬ್ರ್ಯಾಂಡ್‌ ಅಮೂಲ್‌, ಕರ್ನಾಟಕದಲ್ಲೂ ಮಾರುಕಟ್ಟೆ ವಿಸ್ತರಿಸಲಿದೆ ಎಂಬುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕರ್ನಾಟಕ ಹಾಲು ಮಹಾಮಂಡಳ–ಕೆಎಂಎಫ್‌ನ ಬ್ರ್ಯಾಂಡ್‌ ನಂದಿನಿಗೆ, ಅಮೂಲ್‌ನಿಂದ ಭಾರಿ ಹೊಡೆತ ಬೀಳಲಿದೆ ಎಂದು ಈ ಸ್ವರೂಪದ ವಿರೋಧ ವ್ಯಕ್ತವಾಗುತ್ತಿದೆ. ಅಮೂಲ್‌ನ ಉತ್ಪನ್ನಗಳು ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಮಾರಾಟವಾಗುತ್ತಿವೆ. ಆದರೆ, ಈಗ ತಾಜಾ ಹಾಲು ಮಾರಾಟಕ್ಕೆ ಮುಂದಾದ ಅಮೂಲ್‌ನ ಕ್ರಮಕ್ಕೆ ಕನ್ನಡಿಗರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಇದು, ನಂದಿನಿ–ಕೆಎಂಎಫ್‌ ಅನ್ನು ಮುಗಿಸುವ ಹುನ್ನಾರ ಎಂಬ ಕಳವಳ ವ್ಯಕ್ತವಾಗುತ್ತಿದೆ.

ಈ ವಿರೋಧ ಮತ್ತು ಕಳವಳಕ್ಕೆ ಕಿಡಿ ಹೊತ್ತಿಸಿದ್ದು, ಈಚೆಗೆ ಅಮೂಲ್‌ ಮಾಡಿದ್ದ ಟ್ವೀಟ್‌. ಕೆಂಗೇರಿಯಿಂದ ವೈಟ್‌ಫೀಲ್ಡ್‌ವರೆಗೆ ತಾಜಾ ಹಾಲು ದೊರೆಯುತ್ತದೆ ಎಂದು ಅಮೂಲ್‌ ಈಚೆಗೆ ಟ್ವೀಟ್‌ ಮಾಡಿತ್ತು. ಸದ್ಯದ ವಿರೋಧಕ್ಕೆ ಈ ಟ್ವೀಟ್‌ ತಕ್ಷಣದ ಕಾರಣ ಮಾತ್ರ. ಆದರೆ, ಇದಕ್ಕೂ ಹಿಂದೆ ನಡೆದಿದ್ದ ಹಲವು ಬೆಳವಣಿಗೆಗಳು ಈ ವಿರೋಧದ ತೀವ್ರತೆಗೆ ಕಾರಣವಾಗಿವೆ. ಕೇಂದ್ರ ಸರ್ಕಾರವು ಸಹಕಾರ ಸಚಿವಾಲಯವನ್ನು ರಚಿಸಿದ್ದು, ಕೇಂದ್ರ ಸಹಕಾರ ಸಚಿವರಾದ ಅಮಿತ್ ಶಾ ಅವರು ಕೆಎಂಎಫ್‌ ಮತ್ತು ಅಮೂಲ್‌ ಒಟ್ಟಾಗಿ ಕೆಲಸ ಮಾಡುವ ಬಗ್ಗೆ ಮಾತನಾಡಿದ್ದು ಕೆಎಂಎಫ್‌ನ ಹಾಲು ಉತ್ಪಾದಕರಲ್ಲಿ ಆತಂಕ ಮೂಡಿಸಿತ್ತು.

ಸಹಕಾರ ತತ್ವದಡಿ ಕಾರ್ಯನಿರ್ವಹಿಸುವ ಸಂಸ್ಥೆ ಕೆಎಂಎಫ್‌. ಸಹಕಾರವು ರಾಜ್ಯಪಟ್ಟಿಯಲ್ಲಿ ಬರುತ್ತದೆ. ಆದರೆ, 2022ರಲ್ಲಿ ಕೇಂದ್ರದ ಬಿಜೆಪಿ ಸರ್ಕಾರವು ದೇಶದ ಎಲ್ಲಾ ಸಹಕಾರ ಸಂಘಗಳನ್ನು ಒಂದೇ ವೇದಿಕೆ ಅಡಿ ತರುವ ಉದ್ದೇಶದಿಂದ ಸಹಕಾರ ಸಚಿವಾಲಯವನ್ನು ಹೊಸದಾಗಿ ಸೃಷ್ಟಿಸಿತ್ತು. ಕೇಂದ್ರ ಸರ್ಕಾರದ ಈ ಕ್ರಮಕ್ಕೆ ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ರಾಜ್ಯ ಸರ್ಕಾರಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

ADVERTISEMENT

ಅದರ ಬೆನ್ನಲ್ಲೇ 2022ರ ಡಿಸೆಂಬರ್‌ನಲ್ಲಿ, ಸಹಕಾರ ಸಚಿವ ಅಮಿತ್ ಶಾ ಅವರು ಮಂಡ್ಯದ ಗೆಜ್ಜಲಗೆರೆಯಲ್ಲಿ ಡೇರಿ ಉದ್ಘಾಟನೆಗೆ ಬಂದಿದ್ದರು. ‘ಅಮೂಲ್‌ ಮತ್ತು ನಂದಿನಿ ಒಟ್ಟಾದರೆ ಕರ್ನಾಟಕದ ಹಾಲು ಉತ್ಪಾದಕರಿಗೆ ಹೆಚ್ಚು ಅನುಕೂಲವಾಗಲಿದೆ’ ಎಂದು ಹೇಳಿದ್ದರು. ಅಮೂಲ್‌ ಮತ್ತು ನಂದಿನಿಯನ್ನು ವಿಲೀನ ಮಾಡುವ ಸೂಚನೆಯಾಗಿಯೇ ಅಮಿತ್ ಶಾ ಈ ಮಾತು ಹೇಳಿದ್ದಾರೆ ಎಂದು ಹಾಲು ಉತ್ಪಾದಕರು, ರೈತ ಸಂಘಟನೆಗಳು ಆತಂಕ ವ್ಯಕ್ತಪಡಿಸಿದ್ದವು. ಈ ಹೇಳಿಕೆ ವಿರುದ್ಧ ರಾಜ್ಯದಾದ್ಯಂತ ತೀವ್ರ ಪ್ರತಿಭಟನೆಯೂ ನಡೆದಿತ್ತು. ಅಮೂಲ್‌ ಮತ್ತು ನಂದಿನಿಯನ್ನು ವಿಲೀನ ಮಾಡುವ ಪ್ರಸ್ತಾವ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿತ್ತು.

ವಿಲೀನದ ಆತಂಕ ದೂರವಾದ ಕೆಲವೇ ದಿನಗಳಲ್ಲಿ ರಾಜ್ಯದಾದ್ಯಂತ ಹಾಲು ಉತ್ಪಾದನೆ ಕಡಿಮೆಯಾಯಿತು. ಕೆಎಂಎಫ್‌ನ ನಂದಿನಿ ಹಾಲಿನ ಪೂರೈಕೆಯಲ್ಲಿ ವ್ಯತ್ಯಯವಾಯಿತು. ಅದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಹಾಲು ಮಾರಾಟ ಮಾಡುವ ಬಗ್ಗೆ ಅಮೂಲ್‌ ಟ್ವೀಟ್‌ ಮಾಡಿತು. ‘ನಂದಿನಿ ಹಾಲಿನ ಕೊರತೆ ಇದೆ ಎಂದು ನಂಬಿಸಿ, ಅಮೂಲ್‌ ಹಾಲಿನ ಮಾರಾಟಕ್ಕೆ ಅವಕಾಶ ಸೃಷ್ಟಿಸಲಾಗುತ್ತಿದೆ. ಈ ಮೂಲಕ ಕೆಎಂಎಫ್ ಅನ್ನು ಮುಗಿಸಲು ಸಂಚು ಮಾಡಲಾಗಿದೆ’ ಎಂದು ವಿರೋಧ ಪಕ್ಷಗಳು, ಹಾಲು ಉತ್ಪಾದಕರ ಸಂಘಗಳು, ರೈತ ಸಂಘಗಳು, ಕನ್ನಡ ಭಾಷಾ ಸಂಘಟನೆಗಳು ಆರೋಪಿಸಿದವು. ಕೆಎಂಎಫ್‌–ನಂದಿನಿ ಉಳಿಸಿ ಎಂಬ ಅಭಿಯಾನವನ್ನೂ ಆರಂಭಿಸಿದವು.

ಆಧಾರ: ಅಮೂಲ್‌, ಪಿಟಿಐ, ಪಿಐಬಿ

***

‘ದಕ್ಷಿಣದಲ್ಲಿ ಮಾರುಕಟ್ಟೆ ವಿಸ್ತರಿಸಬೇಕು’

‘ದಕ್ಷಿಣ ಭಾರತದಲ್ಲೂ ಅಮೂಲ್‌ ಹಾಲಿನ ಮಾರುಕಟ್ಟೆ ವಿಸ್ತರಿಸಬೇಕು’ ಎಂದು ಅಮೂಲ್‌ನ ಈ ಹಿಂದಿನ ನಿರ್ದೇಶಕರಾಗಿದ್ದ ಆರ್‌.ಎಸ್‌.ಸೋಧಿ ಹೇಳಿದ್ದರು. ಅಮೂಲ್‌ ಮಾರುಕಟ್ಟೆ ವಿಸ್ತರಣಾ ಕಾರ್ಯಯೋಜನೆ ಬಗ್ಗೆ 2020ರಲ್ಲಿ ಅವರು ಮಾತನಾಡಿದ್ದರು. ದಕ್ಷಿಣದಲ್ಲಿ ಮಾರುಕಟ್ಟೆ ವಿಸ್ತರಿಸಬೇಕು ಎಂಬ ಅವರ ಮಾತಿಗೆ ಆಗಲೇ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

‘ನಾವು ಪಶ್ಚಿಮ ಭಾರತದಲ್ಲಿ ವಹಿವಾಟು ಆರಂಭಿಸಿದ್ದೆವು. ನಂತರ ಉತ್ತರದಲ್ಲೂ ಮಾರುಕಟ್ಟೆ ವಿಸ್ತರಿಸಿದೆವು. ಆನಂತರದಲ್ಲಿ ಮಧ್ಯ ಭಾರತಕ್ಕೂ ಅಮೂಲ್‌ ಅನ್ನು ವಿಸ್ತರಿಸಿದೆವು. ಪೂರ್ವ ಭಾರತದಲ್ಲೂ ದೊಡ್ಡ ಮಾರುಕಟ್ಟೆ ಸೃಷ್ಟಿಸಿದೆವು. ಆದರೆ, ಈವರೆಗೆ ದಕ್ಷಿಣ ಭಾರತಕ್ಕೆ ಮಾತ್ರ ಕಾಲಿಟ್ಟಿಲ್ಲ. ದಕ್ಷಿಣ ಭಾರತದಲ್ಲಿ ಅಮೂಲ್‌ ಹಾಲಿನ ಮಾರುಕಟ್ಟೆಗೆ ವಿಫುಲ ಅವಕಾಶಗಳಿವೆ. ಬೇರೆ ಯಾರೋ ಆ ಅವಕಾಶವನ್ನು ಬಳಸಿಕೊಳ್ಳುವ ಮುನ್ನ, ನಾವು ಅಲ್ಲಿ ಮಾರುಕಟ್ಟೆ ಹಿಡಿಯಬೇಕು’ ಎಂದು ಹೇಳಿದ್ದರು.

ದೇಶದ ಎಲ್ಲಾ ರಾಜ್ಯಗಳಲ್ಲೂ ಅಮೂಲ್‌ನ ಬೆಣ್ಣೆ, ಚೀಸ್‌, ಐಸ್‌ಕ್ರೀಂ ಮತ್ತು ಸ್ನ್ಯಾಕ್ಸ್‌ ಸೇರಿ 26 ಸ್ವರೂಪದ ಉತ್ಪನ್ನಗಳು ಲಭ್ಯವಿವೆ. ದಕ್ಷಿಣ ಭಾರತದ ರಾಜ್ಯಗಳನ್ನು ಹೊರತುಪಡಿಸಿ, ಬೇರೆಲ್ಲಾ ರಾಜ್ಯಗಳಲ್ಲಿ ಅಮೂಲ್‌ನ ತಾಜಾ ಹಾಲು ದೊರೆಯುತ್ತದೆ. ಹೀಗಾಗಿ ಸೋಧಿ ಅವರ ಹೇಳಿಕೆಯು, ಅಮೂಲ್‌ ತಾಜಾ ಹಾಲಿನ ಮಾರುಕಟ್ಟೆಯನ್ನು ದಕ್ಷಿಣ ಭಾರತದಲ್ಲೂ ವಿಸ್ತರಿಸುವ ಕುರಿತದ್ದೇ ಎಂದು ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಹಾಲು ಉತ್ಪಾದಕರ ಸಹಕಾರ ಸಂಘಗಳು ಹೇಳಿದ್ದವು. ಆ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದವು.

ಆದರೆ, ಆ ಹೇಳಿಕೆಯ ನಂತರ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಅಮೂಲ್‌ ದೊಡ್ಡಮಟ್ಟದಲ್ಲಿ ಮಾರುಕಟ್ಟೆ ವಿಸ್ತರಣೆಗೆ ಕ್ರಮ ತೆಗೆದುಕೊಂಡಿದೆ. ಈಗ ಕರ್ನಾಟಕದಲ್ಲೂ ತಾಜಾ ಹಾಲು ಮಾರಾಟಕ್ಕೆ ಮುಂದಾಗಿರುವುದು ಇಂಥದ್ದೇ ಒಂದು ಕ್ರಮ ಎಂದು ಅರ್ಥೈಸಲಾಗುತ್ತಿದೆ.

***

ಮಾರುಕಟ್ಟೆ: ಅಮೂಲ್‌ನದ್ದೇ ಸಿಂಹಪಾಲು

ಭಾರತದಲ್ಲಿ ಬಳಕೆಯಾಗುವ ಹಾಲಿನಲ್ಲಿ ಬ್ರ್ಯಾಂಡೆಡ್‌ ಹಾಲಿನ ಪ್ರಮಾಣ ಮೂರನೇ ಒಂದರಷ್ಟು ಮಾತ್ರ. ದೇಶದ ಬ್ರ್ಯಾಂಡೆಡ್‌ ಹಾಲಿನ ಮಾರುಕಟ್ಟೆಯಲ್ಲಿ ಅಮೂಲ್‌ನ ಪಾಲು ಶೇ 63ರಷ್ಟು. ಕೆಎಂಎಫ್‌ ದೇಶದ ಎರಡನೇ ಅತ್ಯಂತ ದೊಡ್ಡ ಹಾಲು ಉತ್ಪಾದಕ ಸಂಘಟನೆಯಾಗಿದೆ.

ಅಮೂಲ್‌ ಇಷ್ಟು ದೊಡ್ಡ ಸಂಸ್ಥೆಯಾದರೂ, ದೇಶದ ಎಲ್ಲಾ ಹಾಲು ಉತ್ಪಾದಕ ಸಂಘಟನೆಗಳು ಅದರ ಅಡಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಗುಜರಾತ್‌ನ 18 ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳು ಮಾತ್ರವೇ ಅಮೂಲ್‌ನ ಅಡಿಯಲ್ಲಿ ನೇರವಾಗಿ ಕಾರ್ಯನಿರ್ವಹಿಸುತ್ತವೆ. ಆದರೆ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಅಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಭಾಗಿತ್ವದಲ್ಲಿ ಅಮೂಲ್‌ ಕಾರ್ಯನಿರ್ವಹಿಸುತ್ತಿದೆ.

ಅಮೂಲ್‌ ಒಂದು ಬಹುರಾಜ್ಯ ಸಹಕಾರ ಸಂಘಟನೆಯಾಗಿದೆ. ಬಹುರಾಜ್ಯ ಸಹಕಾರ ಸಂಘಗಳು ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಬಹುದು. ಸಹಕಾರ ನೀತಿ–2002, ಸಹಕಾರ ಕಾಯ್ದೆ–2002 ಮತ್ತು ಸಹಕಾರ ಕಾನೂನು–2002ರಲ್ಲಿ ಈ ಸ್ವರೂಪದ ವಹಿವಾಟಿಗೆ ಯಾವುದೇ ನಿರ್ಬಂಧವಿಲ್ಲ. ಆದರೂ, ಒಂದು ಸಹಕಾರ ಸಂಘದ ಕಾರ್ಯವ್ಯಾಪ್ತಿಯಲ್ಲಿ ಮತ್ತೊಂದು ಸಹಕಾರ ಸಂಘವು ಪ್ರವೇಶಿಸದೇ ಇರುವ ಅಲಿಖಿತ ನಿಯಮವನ್ನು ಪಾಲಿಸಿಕೊಂಡು ಬರಲಾಗಿದೆ.

ದೇಶದ ಬಹುತೇಕ ರಾಜ್ಯಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಇವೆ. ಆ ರಾಜ್ಯಗಳಲ್ಲಿ ಅಮೂಲ್‌ ನೇರವಾಗಿ ಹಾಲು ಸಂಗ್ರಹ, ಸಂಸ್ಕರಣೆ ಮತ್ತು ಮಾರಾಟ ಮಾಡುತ್ತಿಲ್ಲ. ಬದಲಿಗೆ ಆಯಾ ರಾಜ್ಯದ ಸಹಕಾರ ಸಂಘಗಳ ಜತೆಗೆ ಒಪ್ಪಂದ ಮಾಡಿಕೊಂಡು ವಹಿವಾಟು ನಡೆಸುತ್ತಿದೆ. ಕೆಲವು ರಾಜ್ಯಗಳಲ್ಲಿ, ಕೆಲವು ಜಿಲ್ಲಾ ಮಟ್ಟದ ಹಾಲು ಉತ್ಪಾದಕರ ಸಂಘಗಳನ್ನು ಅಮೂಲ್‌ ನೇರವಾಗಿ ನಿರ್ವಹಣೆ ಮಾಡುತ್ತಿದೆ. ಕೆಲವು ರಾಜ್ಯಗಳಲ್ಲಿ ರಾಜ್ಯ ಮಟ್ಟದ ಸಂಘವನ್ನು ಅಮೂಲ್‌ ಸಂಪೂರ್ಣವಾಗಿ ನಿರ್ವಹಣೆ ಮಾಡುತ್ತಿದೆ. ಈ ರೀತಿ 25ಕ್ಕೂ ಹೆಚ್ಚು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರಣದಿಂದಲೇ ಅಮೂಲ್‌ನ ಮಾರುಕಟ್ಟೆ ಪಾಲು ಅತ್ಯಂತ ದೊಡ್ಡದು. ಈ ಸ್ವರೂಪದಲ್ಲಿ ಕೆಎಂಎಫ್‌ ಜತೆಗೆ ಕಾರ್ಯನಿರ್ವಹಿಸುವ ಬಗ್ಗೆಯೇ ಅಮಿತ್ ಶಾ ಮಾತನಾಡಿದ್ದರು. ಆದಕ್ಕೆ ವಿರೋಧ ವ್ಯಕ್ತವಾದ ಕಾರಣ ಅಮೂಲ್‌ ಮತ್ತು ಕೆಎಂಎಫ್‌ ಒಟ್ಟಾಗಿ ಕೆಲಸ ಮಾಡುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಕೈಬಿಟ್ಟಿತ್ತು. ಆದರೆ, ಈಗ ಕರ್ನಾಟಕದಲ್ಲಿ ಆನ್‌ಲೈನ್‌ ಮೂಲಕ ನೇರವಾಗಿ ತಾಜಾ ಹಾಲು ಮಾರಾಟ ಮಾಡಲು ಅಮೂಲ್‌ ಮುಂದಾಗಿದೆ.

***

ಆಂಧ್ರದಲ್ಲಿ ಮೇಲುಗೈ

ಕರ್ನಾಟಕದ ರೀತಿ ಆಂಧ್ರಪ್ರದೇಶದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಟನೆ ಪ್ರಬಲವಾಗಿಲ್ಲ. ಇಲ್ಲಿ ಹಾಲು ಖರೀದಿ, ಸಂಸ್ಕರಣೆ ಹಾಗೂ ಮಾರಾಟ ಪ್ರಕ್ರಿಯೆಗಳು ಕರ್ನಾಟಕದಷ್ಟು ಯಶಸ್ವಿಯಾಗಿಲ್ಲ. ಇಲ್ಲಿ ಖಾಸಗಿ ಸಂಸ್ಥೆಗಳ ಡೇರಿ ಉತ್ಪನ್ನಗಳೇ ಮಾರುಕಟ್ಟೆಯನ್ನು ಆವರಿಸಿವೆ. ಖಾಸಗಿ ಸಂಸ್ಥೆಗಳ ಹಿಡಿತ ತಪ್ಪಿಸಿ, ರೈತರು ಹಾಗೂ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಆಂಧ್ರಪ್ರದೇಶ ಸರ್ಕಾರವು ಅಮೂಲ್‌ಗೆ ರಾಜ್ಯದಲ್ಲಿ ಮಣೆ ಹಾಕಿದೆ.

ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಅವರು ಅಮೂಲ್‌ನ ಜೊತೆಗೆ ಒಡಂಬಡಿಕೆಯೊಂದಕ್ಕೆ ಸಹಿ ಹಾಕಿದ ಬಳಿಕ ಆಂಧ್ರಪ್ರದೇಶದಲ್ಲಿ ಅಮೂಲ್‌ ಚಟುವಟಿಕೆಗಳು ಬಿರುಸುಗೊಂಡವು. ಅಮೂಲ್‌ ಸಂಸ್ಥೆಯು ಆಂಧ್ರ ಪ್ರದೇಶದ ರೈತರಿಂದ ಹಾಲು ಖರೀದಿಸುತ್ತದೆ. ಸಂಸ್ಕರಿಸಿದ ಹಾಲನ್ನು ರಾಜ್ಯದ ಅಂಗನವಾಡಿ ಮಕ್ಕಳಿಗೆ ಪೂರೈಸುತ್ತದೆ. ಅಮೂಲ್‌ ಹಾಲನ್ನು ರಾಜ್ಯ ಸರ್ಕಾರವೇ ಖರೀದಿಸಿ ಅಂಗನವಾಡಿ ಮಕ್ಕಳಿಗೆ ನೀಡುತ್ತದೆ.

ಈ ಯೋಜನೆಯ ಭಾಗವಾಗಿ, ರಾಜ್ಯದ ಪ್ರಕಾಶಂ, ಕೃಷ್ಣಾ, ಗುಂಟೂರು ಸೇರಿದಂತೆ ಏಳು ಜಿಲ್ಲೆಗಳಲ್ಲಿ ಅಮೂಲ್‌ ಹಾಲು ಖರೀದಿ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಉತ್ತರ ಕರಾವಳಿ ಜಿಲ್ಲೆಗಳಲ್ಲೂ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ. ನೂಜಿವೀಡು ಎಂಬಲ್ಲಿ ಹಾಲು ಸಂಸ್ಕರಣಾ ಘಟಕವನ್ನು ಅಮೂಲ್ ತೆರೆದಿದೆ. ಈ ಘಟಕವು ದಿನಕ್ಕೆ 50,000 ಲೀಟರ್‌ ಹಾಲು ಸಂಸ್ಕರಣೆ ಸಾಮರ್ಥ್ಯ ಹೊಂದಿದೆ. ಮುಂದಿನ ದಿನಗಳಲ್ಲಿ ಒಂಗೊಲ್ ಹಾಗೂ ಇತರ ಕಡೆಗಳಲ್ಲೂ ಸಂಸ್ಕರಣಾ ಘಟಕಗಳನ್ನು ಅಮೂಲ್ ತೆರೆಯಲಿದೆ. ಈ ಯೋಜನೆಯಡಿ, ರಾಜ್ಯದಲ್ಲಿ 11,690 ಹಾಲು ಖರೀದಿ ಕೇಂದ್ರಗಳು ಹಾಗೂ 4,900 ಹಾಲು ಶೀತಲೀಕರಣ ಘಟಕಗಳು ನಿರ್ಮಾಣವಾಗಲಿವೆ ಎಂದು ಒಡಂಬಡಿಕೆಗೆ ಸಹಿ ಹಾಕುವ ವೇಳೆ ಸರ್ಕಾರ ಹೇಳಿತ್ತು.

ರಾಜ್ಯದಲ್ಲಿ ಅಮೂಲ್‌ಗೆ ಇಷ್ಟರಮಟ್ಟಿಗೆ ಕೆಂಪುಹಾಸು ಹಾಸಿರುವ ಜಗನ್ ಸರ್ಕಾರದ ನಡೆಯ ಹಿಂದೆ ರಾಜಕೀಯದ ವಾಸನೆ ಇದೆ ಎನ್ನಲಾಗಿದೆ. ತಮ್ಮ ಎದುರಾಳಿ ಚಂದ್ರಬಾಬು ನಾಯ್ಡು ಅವರ ಒಡೆತನದ ‘ಹೆರಿಟೇಜ್’ ಎಂಬ ಖಾಸಗಿ ಸಂಸ್ಥೆಯನ್ನು ಗುರಿಯಾಗಿಸಿಕೊಂಡು ಜಗನ್ ಅವರು ಅಮೂಲ್‌ಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

***

ತೆಲಂಗಾಣದಲ್ಲಿ ರತ್ನಗಂಬಳಿ

ಆಂಧ್ರದಂತೆ ತೆಲಂಗಾಣ ರಾಜ್ಯದಲ್ಲೂ ಅಮೂಲ್‌ ಕಾರ್ಯಾಚರಣೆಗೆ ಸಮಸ್ಯೆಗಳೇ ಇಲ್ಲ. ದಕ್ಷಿಣದ ಪ್ರಮುಖ ರಾಜ್ಯವಾಗಿರುವ ತೆಲಂಗಾಣದಲ್ಲಿ, ಅಲ್ಲಿನ ರಾಜ್ಯ ಸರ್ಕಾರವು ಅಮೂಲ್‌ಗೆ ರತ್ನಗಂಬಳಿ ಹಾಸಿ ಸ್ವಾಗತಿಸಿದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆಯ ಒಪ್ಪಂದಕ್ಕೆ ಅಮೂಲ್‌ ಜೊತೆ ತೆಲಂಗಾಣ ಸರ್ಕಾರ ಸಹಿ ಹಾಕಿದೆ. ಈ ಒಪ್ಪಂದದಿಂದಾಗಿ ತೆಲಂಗಾಣದಲ್ಲಿ ಅಮೂಲ್‌ ಚಟುವಟಿಕೆಗಳು ಸರಾಗವಾಗಿ ಸಾಗುತ್ತಿವೆ. 2021ರ ಡಿಸೆಂಬರ್‌ನಲ್ಲಿ ಮಾಡಿಕೊಂಡ ಒಪ್ಪಂದದ ಪ್ರಕಾರ, ಅಮೂಲ್ ಸಂಸ್ಥೆಯು ತೆಲಂಗಾಣದಲ್ಲಿ ₹500 ಕೋಟಿ ಹೂಡಿಕೆ ಮಾಡಲಿದೆ. ಮೊದಲ ಹಂತದಲ್ಲಿ ₹300 ಕೋಟಿ ಹಾಗೂ ಎರಡನೇ ಹಂತದಲ್ಲಿ ₹200 ಕೋಟಿ ಹೂಡಿಕೆ ಮಾಡುವುದಾಗಿ ಸಂಸ್ಥೆ ಭರವಸೆ ನೀಡಿದೆ.

ತೆಲಂಗಾಣದಲ್ಲಿ ದೇಶದಲ್ಲೇ ಅತಿದೊಡ್ಡ ಸಂಸ್ಕರಣಾ ಘಟಕವನ್ನು ಸ್ಥಾಪಿಸುವುದಾಗಿ ಅಮೂಲ್ ಹೇಳಿದೆ. ಇಲ್ಲಿ ನಿರ್ಮಾಣವಾಗುವ ಘಟಕವು ದಿನವೊಂದಕ್ಕೆ 5 ಲಕ್ಷ ಲೀಟರ್‌ ಹಾಲು ಸಂಸ್ಕರಣೆ ಮಾಡುವ ಸಾಮರ್ಥ್ಯ ಹೊಂದಿರಲಿದೆ. ಈ ಸಾಮರ್ಥ್ಯವನ್ನು 10 ಲಕ್ಷ ಲೀಟರ್‌ಗೆ ವಿಸ್ತರಿಸಲು ಸಾಧ್ಯವಾಗುವ ರೀತಿಯಲ್ಲಿ ಘಟಕವನ್ನು ಅಮೂಲ್ ನಿರ್ಮಿಸುತ್ತಿದೆ. ಇಡೀ ದಕ್ಷಿಣ ಭಾರತಕ್ಕೆ ಈ ಬೃಹತ್ ಘಟಕದಿಂದ ಹಾಲು ಹಾಗೂ ಇತರೆ ಡೇರಿ ಉತ್ಪನ್ನಗಳನ್ನು ಸರಬರಾಜು ಮಾಡಲು ಅಮೂಲ್ ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೂ ತೆಲಂಗಾಣದ ಘಟಕದಿಂದಲೇ ಹಾಲು ಪೂರೈಕೆಯಾಗಲಿದೆ ಎನ್ನಲಾಗಿದೆ.

ಘಟಕ ಸ್ಥಾಪನೆಯಾದ ಬಳಿಕ, ತೆಲಂಗಾಣದ ಹಾಲು ಉತ್ಪಾದಕರು, ಸಹಕಾರಿ ಸಂಘಗಳಿಂದ ನೇರವಾಗಿ ಹಾಲು ಖರೀದಿ ಮಾಡುವುದಾಗಿ ಅಮೂಲ್ ಭರವಸೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.