ಹೆರಾಲ್ಡ್ ಹೌಸ್
ನ್ಯಾಷನಲ್ ಹೆರಾಲ್ಡ್ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕಾಂಗ್ರೆಸ್ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್ ಪಿತ್ರೊಡಾ ಮತ್ತು ರಾಹುಲ್ ಆಪ್ತ, ಪತ್ರಕರ್ತ ಸುಮನ್ ದುಬೆ ಅವರ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದೆ. ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ, ವಿರೋಧ ಪಕ್ಷಗಳ ಧ್ವನಿ ಅಡಗಿಸಲು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ’ ಎಂದು ಕಾಂಗ್ರೆಸ್ ಆರೋಪಿಸಿದೆ. ‘ನ್ಯಾಯಾಲಯದ ಆದೇಶದ ಪ್ರಕಾರ ತನಿಖೆ ನಡೆಯುತ್ತಿದೆ’ ಎಂದು ಬಿಜೆಪಿ ಹೇಳುತ್ತಿದೆ. ದಶಕದ ಇತಿಹಾಸ ಇರುವ ಈ ಪ್ರಕರಣದ ವಿವರಗಳನ್ನು ಇಲ್ಲಿ ನೀಡಲಾಗಿದೆ
ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಎನ್ನುವ ಸಂಸ್ಥೆಯ ಆಸ್ತಿಯನ್ನು ಕೈವಶ ಮಾಡಿಕೊಳ್ಳಲು ಕಾಂಗ್ರೆಸ್ ಪಕ್ಷದ ಹಣವನ್ನು ಬಳಸಿಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು 2012ರಲ್ಲಿ ವಿಚಾರಣಾ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಎಜೆಎಲ್ ಪ್ರಕಟಿಸುತ್ತಿದ್ದ ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆ 2008ರಲ್ಲಿ ಮುಚ್ಚಿಹೋಗಿತ್ತು. ಆ ಸಂದರ್ಭದಲ್ಲಿ ಎಜೆಎಲ್ ಸಂಸ್ಥೆಯು ಕಾಂಗ್ರೆಸ್ ಪಕ್ಷಕ್ಕೆ ₹90 ಕೋಟಿ (ಪತ್ರಿಕೆಯ ನಿರ್ವಹಣೆಗೆಂದು ಆಗಿಂದಾಗ್ಗೆ ಪಡೆದಿದ್ದ) ಸಾಲ ಮರುಪಾವತಿ ಮಾಡಬೇಕಿತ್ತು. 2010ರಲ್ಲಿ ಕಾಂಗ್ರೆಸ್ ಪಕ್ಷವು ಆ ಸಾಲವನ್ನು ಯಂಗ್ ಇಂಡಿಯನ್ ಲಿಮಿಟೆಡ್‌ಗೆ ವಹಿಸಿತ್ತು. ಆಗ್ಗೆ ಕೆಲವು ತಿಂಗಳ ಹಿಂದಷ್ಟೇ ಸ್ಥಾಪನೆಯಾಗಿದ್ದ, ಲಾಭರಹಿತ ಕಂಪನಿ ಯಂಗ್ ಇಂಡಿಯನ್‌ನ ಆಡಳಿತ ಮಂಡಳಿಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ನಿರ್ದೇಶಕರಾಗಿದ್ದು, ಇಬ್ಬರು ತಲಾ ಶೇ 38ರಷ್ಟು ಷೇರುಗಳನ್ನು (ಒಟ್ಟು ಶೇ 76) ಹೊಂದಿದ್ದಾರೆ. ಉಳಿದ ಶೇ 24ರಷ್ಟು ಷೇರುಗಳನ್ನು ಕಾಂಗ್ರೆಸ್ ಮುಖಂಡರಾಗಿದ್ದ ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್ ಹೊಂದಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದರು. ಎಜೆಎಲ್ ಸಂಸ್ಥೆ ಮತ್ತು ಅದಕ್ಕೆ ಸೇರಿದ ಮುಂಬೈ, ದೆಹಲಿ, ಲಖನೌ ಮುಂತಾದೆಡೆ ಇದ್ದ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಸೋನಿಯಾ, ರಾಹುಲ್ ಮತ್ತು ಇತರರು ಅಕ್ರಮ ಮಾರ್ಗದಲ್ಲಿ ಅತ್ಯಂತ ಕಡಿಮೆ ಬೆಲೆಗೆ ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದರು.
ಇ.ಡಿ. ಹೇಳುತ್ತಿರುವುದೇನು?
ಸುಬ್ರಮಣಿಯನ್ ಸ್ವಾಮಿ ಅವರ ದೂರನ್ನು ಪಟಿಯಾಲಾ ಹೌಸ್‌ನ ಮೆಟ್ರೊಪಾಲಿಟನ್ ನ್ಯಾಯಾಧೀಶರು 2014ರ ಜೂನ್ 26ರಂದು ಪರಿಗಣನೆಗೆ ತೆಗೆದುಕೊಂಡರು. ಈ ಬಗ್ಗೆ ಜಾರಿ ನಿರ್ದೇಶನಾಲಯವು 2021ರಂದು ತನಿಖೆ ಆರಂಭಿಸಿತು. ಪ್ರಕರಣದಲ್ಲಿ ಸೋನಿಯಾ ಗಾಂಧಿ ಅವರು ಒಂದನೇ ಆರೋಪಿಯಾಗಿದ್ದರೆ, ರಾಹುಲ್ ಗಾಂಧಿ ಅವರು ಎರಡನೇ ಆರೋಪಿ ಆಗಿದ್ದಾರೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ಎ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ದೋಷಾರೋಪ ನಿಗದಿ ಮಾಡಲಾಗಿದೆ. ಜಾರಿ ನಿರ್ದೇಶನಾಲಯವು ಪ್ರಕರಣದ ಸಂಬಂಧ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು 2022ರಲ್ಲಿ ದೀರ್ಘ ವಿಚಾರಣೆಗೆ ಒಳಪಡಿಸಿತ್ತು.
ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ನ (ಎಜೆಎಲ್) ಸಾವಿರಾರು ಕೋಟಿ ಮೌಲ್ಯದ ಆಸ್ತಿಯನ್ನು ಸ್ವಾಧೀನಕ್ಕೆ ಪಡೆಯುವ ಸಲುವಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸ್ಯಾಮ್ ಪಿತ್ರೊಡಾ, ಸುಮನ್ ದುಬೆ ಮತ್ತು ಇತರ ಕಾಂಗ್ರೆಸ್ ನಾಯಕರು ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ; ಯಂಗ್ ಇಂಡಿಯನ್ ಲಿಮಿಟೆಡ್ ಮೂಲಕ, ₹2,000 ಕೋಟಿ ಮೌಲ್ಯದ ಆಸ್ತಿಯನ್ನು ಸೋನಿಯಾ ಮತ್ತು ರಾಹುಲ್ ಅವರು ಕೇವಲ ₹50 ಲಕ್ಷಕ್ಕೆ ಸ್ವಾಧೀನ ಪಡಿಸಿಕೊಂಡಿದ್ದಾರೆ. ಹಾಗೂ ಕಾಂಗ್ರೆಸ್ ಪಕ್ಷವು ಎಜೆಎಲ್‌ಗೆ ನೀಡಿದ್ದ ₹90.2 ಕೋಟಿ ಸಾಲವನ್ನು 9.02 ಕೋಟಿಯ ಈಕ್ವಿಟಿ ಷೇರುಗಳನ್ನಾಗಿ ಪರಿವರ್ತಿಸಿ ಯಂಗ್ ಇಂಡಿಯನ್‌ಗೆ ವರ್ಗಾಯಿಸಲಾಗಿದೆ ಎಂದು ಇ.ಡಿ. ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ.
ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್)
1937ರಲ್ಲಿ ಜವಾಹರಲಾಲ್ ನೆಹರೂ ಅವರು ಸ್ಥಾಪಿಸಿದ ಕಂಪನಿ ಇದು. 5,000 ಸ್ವಾತಂತ್ರ್ಯ ಹೋರಾಟಗಾರರು ಈ ಕಂಪನಿಯಲ್ಲಿ ಷೇರುಗಳನ್ನು ಹೊಂದಿದ್ದರು. ಕಂಪನಿಯು ನಿರ್ದಿಷ್ಟ ವ್ಯಕ್ತಿಗೆ ಸೇರಿರಲಿಲ್ಲ. 2010ರ ವೇಳೆಗೆ ಅದು 1,057 ಷೇರುದಾರರನ್ನು ಹೊಂದಿತ್ತು. ಎಜೆಎಲ್ ‘ನ್ಯಾಷನಲ್ ಹೆರಾಲ್ಡ್’ ಎಂಬ ಇಂಗ್ಲಿಷ್ ಪತ್ರಿಕೆ, ‘ಕೌಮೀ ಆವಾಜ್’ ಎಂಬ ಉರ್ದು ಪತ್ರಿಕೆ ಮತ್ತು ‘ನವಜೀವನ್’ ಎಂಬ ಹಿಂದಿ ಪತ್ರಿಕೆಗಳನ್ನು 2008ರವರೆಗೂ ಪ್ರಕಟಿಸುತ್ತಾ ಬಂದಿತ್ತು. ನಷ್ಟ ಅನುಭವಿಸಿದ ಕಾರಣಕ್ಕೆ ನಂತರ ಪತ್ರಿಕೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಕಂಪನಿಯು ದೆಹಲಿ, ಮುಂಬೈ ಮತ್ತು ಲಖನೌಗಳಲ್ಲಿ ಸ್ವಂತ ಆಸ್ತಿಗಳನ್ನು ಹೊಂದಿತ್ತು. 2011ರಲ್ಲಿ ಕಂಪನಿಯ ಮಾಲೀಕತ್ವವನ್ನು ಯಂಗ್ ಇಂಡಿಯನ್ ಪ್ರೈವೆಟ್ ಲಿಮಿಟೆಡ್‌ಗೆ ವರ್ಗಾವಣೆ ಮಾಡಲಾಗಿತ್ತು. ಮೂರೂ ಪತ್ರಿಕೆಗಳ್ನು ಪುನರಾರಂಭಿಸಲು ಎಜೆಎಲ್ 2016ರಲ್ಲಿ ನಿರ್ಧರಿಸಿತ್ತು.
‘ನ್ಯಾಷನಲ್ ಹೆರಾಲ್ಡ್’ ಎಂದರೆ...
ಜವಾಹರಲಾಲ್ ನೆಹರೂ ಅವರು ಇತರ ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಸೇರಿ 1938ರಲ್ಲಿ ಆರಂಭಿಸಿದ ಪತ್ರಿಕೆ ‘ನ್ಯಾಷನಲ್ ಹೆರಾಲ್ಡ್’. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಈ ಪತ್ರಿಕೆಯು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಾಗೂ ಅದರ ಮುಖಂಡರ ಅಭಿಪ್ರಾಯಗಳನ್ನು ಜನರಿಗೆ ತಲುಪಿಸುವ ಮಾರ್ಗವಾಗಿತ್ತು. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಪ್ರಕಟಿಸುತ್ತಿದ್ದ ಈ ಪತ್ರಿಕೆ ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಪಕ್ಷದ ಮುಖವಾಣಿಯಾಗಿತ್ತು. ₹90 ಕೋಟಿ ಸಾಲದ ಸುಳಿಗೆ ಸಿಲುಕಿ ನಷ್ಟದಲ್ಲಿದ್ದ ಪತ್ರಿಕೆ 2008ರಲ್ಲಿ ಸ್ಥಗಿತಗೊಂಡಿತ್ತು. ಈಗ ಅದು ವೆಬ್‌ಸೈಟ್ ಮೂಲಕ ಸಕ್ರಿಯವಾಗಿದೆ.
ಯಂಗ್ ಇಂಡಿಯನ್ ಲಿಮಿಟೆಡ್
2010ರ ನವೆಂಬರ್ 23ರಂದು ಸ್ಥಾಪಿಸಲಾಗಿದ್ದ ಲಾಭರಹಿತ ಉದ್ದೇಶದ ಕಂಪನಿ ಯಂಗ್ ಇಂಡಿಯನ್ ಪ್ರೈವೆಟ್ ಲಿಮಿಟೆಡ್. ₹5 ಲಕ್ಷ ಮೂಲ ಬಂಡವಾಳದೊಂದಿಗೆ ಇದನ್ನು ಆರಂಭಿಸಲಾಗಿತ್ತು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ತಲಾ ಶೇ 38ರಷ್ಟು ಷೇರುಗಳನ್ನು ಹೊಂದಿದ್ದಾರೆ. ಕಾಂಗ್ರೆಸ್ ಮುಖಂಡರಾಗಿದ್ದ ದಿವಂಗತ ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್ ಮುಂತಾದವರು ಉಳಿದ ಶೇ 24ರಷ್ಟು ಪಾಲುದಾರಿಕೆ ಹೊಂದಿದ್ದರು ಎಂದು ಹೇಳಲಾಗಿದೆ.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಎಸ್.ಜಿ.ಪಿತ್ರೊಡಾ, ಸುಮನ್ ದುಬೆ, ಅಜಯ್ ಮಾಕನ್ ಮತ್ತು ಪವನ್ ಕುಮಾರ್ ಬನ್ಸಾಲ್ ಅವರು ಈ ಕಂಪನಿಯ ಹಾಲಿ ನಿರ್ದೇಶಕರಾಗಿದ್ದಾರೆ.
ಲಾಭದ ಉದ್ದೇಶದ ಕಂಪನಿ ಅಲ್ಲದಿದ್ದರೂ ಯಂಗ್ ಇಂಡಿಯನ್ ಯಾವುದೇ ಸೇವಾ ಉದ್ದೇಶದ ಚಟುವಟಿಕೆಗಳನ್ನು ನಡೆಸುತ್ತಿಲ್ಲ ಎಂದು ಆರೋಪಿಸಲಾಗಿದೆ.
ಆಸ್ತಿ ಮುಟ್ಟುಗೋಲು
ಹಣದ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ಗೆ ಸೇರಿದ ದೆಹಲಿ, ಮುಂಬೈ ಮತ್ತು ಲಖನೌಗಳಲ್ಲಿರುವ ₹661 ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು ₹90.2 ಕೋಟಿ ಮೌಲ್ಯದ ಎಜೆಎಲ್ ಷೇರುಗಳನ್ನು 2023ರ ನವೆಂಬರ್ 20ರಂದು ಮುಟ್ಟುಗೋಲು ಹಾಕಿಕೊಂಡಿತ್ತು. ಈ ಆಸ್ತಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳುವ ಪ್ರಕ್ರಿಯೆಯನ್ನು ಇ.ಡಿ. ಆರಂಭಿಸಿದೆ. ದೆಹಲಿ, ಮುಂಬೈ ಮತ್ತು ಲಖನೌದ ನೋಂದಣಾಧಿಕಾರಿಗಳಿಗೆ ನೋಟಿಸ್ ನೀಡಿದೆ. ಅಲ್ಲದೇ, ಮುಂಬೈನ ಬಾಂದ್ರಾದಲ್ಲಿರುವ (ಪೂರ್ವ) ಎಜೆಎಲ್‌ಗೆ ಸೇರಿದ ಕಟ್ಟಡದಲ್ಲಿ (ಹೆರಾಲ್ಡ್ ಹೌಸ್) ಕಾರ್ಯಾಚರಿಸುತ್ತಿರುವ ಎಂ/ಎಸ್ ಜಿಂದಾಲ್ ಸೌತ್ ವೆಸ್ಟ್ ಪ್ರಾಜೆಕ್ಟ್ಸ್ ಲಿಮಿಟೆಡ್ ಕಂಪನಿಗೂ ನೋಟಿಸ್ ನೀಡಿ, ಕಟ್ಟಡದ ಬಾಡಿಗೆ/ಗುತ್ತಿಗೆ ಮೊತ್ತವನ್ನು ಪ್ರತಿ ತಿಂಗಳು ಜಾರಿ ನಿರ್ದೇಶನಾಲಯದ ನಿರ್ದೇಶಕರಿಗೆ ವರ್ಗಾವಣೆ ಮಾಡುವಂತೆ ಸೂಚಿಸಲಾಗಿದೆ.
ಆಧಾರ: ಪಿಟಿಐ, ಇ.ಡಿ ಪ್ರಕಟಣೆಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.