ಇಸ್ರೇಲ್ ನಿರ್ಮಿತ ಹಾರೋಪ್ ಡ್ರೋನ್ ಚಿತ್ರ:ಐಎಐ ವೆಬ್‌ಸೈಟ್
ಅಮೆರಿಕ, ರಷ್ಯಾ, ಇಸ್ರೇಲ್ ಸೇರಿದಂತೆ ಪಶ್ಚಿಮದ ರಾಷ್ಟ್ರಗಳಿಗೆ ಡ್ರೋನ್ ಯುದ್ಧವು ಹೊಸದಲ್ಲ. ಆದರೆ, ಏಷ್ಯಾದ ಮಟ್ಟಿಗೆ ಇದು ಹೊಸ ಸಮರ ವಿಧಾನ. ಎರಡು ದಿನಗಳ ಸಂಘರ್ಷದ ರೀತಿಯನ್ನು ನೋಡಿದಾಗ ಅಣ್ವಸ್ತ್ರ ಸಾಮರ್ಥ್ಯದ ಭಾರತ– ಪಾಕಿಸ್ತಾನಗಳು ಡ್ರೋನ್ ಸಮರಕ್ಕೆ ಇಳಿದಂತೆ ಕಾಣುತ್ತಿದೆ. ಭಾರತವು ಇಸ್ರೇಲ್ ನಿರ್ಮಿತ ಹಾರ್ಪಿ, ಹಾರೋಪ್ ಡ್ರೋನ್‌ಗಳನ್ನು ಬಳಸಿದೆ ಎಂದು ಹೇಳಲಾಗುತ್ತಿದ್ದು, ಪಾಕಿಸ್ತಾನವು ಟರ್ಕಿ ನಿರ್ಮಿತ ಡ್ರೋನ್‌ಗಳ ಮೂಲಕ ದಾಳಿ ನಡೆಸಿದೆ ಎಂದು ಭಾರತ ಹೇಳಿದೆ.
––––
‘ಡ್ರೋ ನ್ ಸಮರವು 21ನೇ ಶತಮಾನದಲ್ಲಿ ನಡೆಯುವ ಸಂಘರ್ಷಗಳಿಗೆ ಹೊಸ ರೂಪ ನೀಡುತ್ತಿದೆ’ ಎಂದು ದಶಕಗಳ ಹಿಂದೆ ತಜ್ಞರು ಅಭಿಪ್ರಾಯಪಟ್ಟಿದ್ದರು. ಮೂರು ವರ್ಷಗಳಿಂದ ನಡೆಯುತ್ತಿರುವ ರಷ್ಯಾ–ಉಕ್ರೇನ್ ಯುದ್ಧ, ಹಲವು ತಿಂಗಳುಗಳಿಂದ ಜಾರಿಯಲ್ಲಿರುವ ಇಸ್ರೇಲ್ –ಪ್ಯಾಲೆಸ್ಟೀನ್ , ಇಸ್ರೇಲ್–ಲೆಬನಾನ್, ಇಸ್ರೇಲ್–ಇರಾನ್ ಕಲಹಗಳು ಹಾಗೂ ಈಗ ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾಗಿರುವ ಸೇನಾ ಸಂಘರ್ಷವನ್ನು ಗಮನಿಸಿದರೆ ತಜ್ಞರ ಅಂದಿನ ಮಾತು ಅಕ್ಷರಶಃ ನಿಜವಾಗಿದೆ.
ರಕ್ಷಣಾ ಕ್ಷೇತ್ರವು ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳಿಗೆ ತೆರೆದುಕೊಂಡ ನಂತರ, ಶತ್ರುಗಳ ನೆಲೆಯನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ಮಾಡಬಲ್ಲ ಆಧುನಿಕ ಯುದ್ಧವಿಮಾನಗಳು, ಕ್ಷಿಪಣಿಗಳು, ಡ್ರೋನ್‌ಗಳು ಸಮರಾಂಗಣದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸುತ್ತಿವೆ. ಎರಡು ದೇಶಗಳ ನಡುವಿನ ಸೇನಾ ಸಂಘರ್ಷದಲ್ಲಿ ಯುದ್ಧವಿಮಾನ, ಕ್ಷಿಪಣಿಗಳ ಬಳಕೆ ಹಳೆಯದು. ಕೆಲವು ವರ್ಷಗಳಿಂದೀಚೆಗೆ ಲೇಸರ್ ನಿರ್ದೇಶಿತ ಕ್ಷಿಪಣಿಗಳು ಮತ್ತು ಬಾಂಬ್‌ಗಳು, ಡ್ರೋನ್‌ಗಳು ಮತ್ತು ‘ಯುಎವಿ’ ಎಂದು ಕರೆಸಿಕೊಳ್ಳುವ ‘ಮಾನವರಹಿತ ವೈಮಾನಿಕ ವಾಹನಗಳು’ ಸೇನಾ ಕಾರ್ಯಾಚರಣೆಗಳಲ್ಲಿ ಪ್ರಧಾನವಾಗಿ ಬಳಕೆಯಾಗುತ್ತಿವೆ.
ಪಹಲ್ಗಾಮ್ ಭಯೋತ್ಪಾದನಾ ದಾಳಿಗೆ ಪ್ರತೀಕಾರವಾಗಿ ಭಾರತವು ಇದೇ 7ರ (ಬುಧವಾರ) ನಸುಕಿನಲ್ಲಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಒಂಬತ್ತು ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ್ದ ‘ಆಪರೇಷನ್ ಸಿಂಧೂರ’ದಲ್ಲಿ ಬೆಂಗಳೂರಿನ ಕಂಪನಿಯು (ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಲಿಮಿಟೆಡ್), ಇಸ್ರೇಲ್‌ನ ಕಂಪನಿಯ (ಎಲ್ಬಿಟ್ ಸೆಕ್ಯೂರಿಟಿ ಸಿಸ್ಟಮ್ಸ್) ನೆರವಿನೊಂದಿಗೆ ತಯಾರಿಸಿದ್ದ ‘ಸ್ಕೈಸ್ಟ್ರೈಕರ್ ಸೂಸೈಡ್ ಡ್ರೋನ್’ ಅಥವಾ ‘ಕಾಮಿಕೇಜ್ ಡ್ರೋನ್’ ಎಂದು ಕರೆಯಲಾಗುವ ಮಾನವರಹಿತ ಮೈಮಾನಿಕ ವಾಹನಗಳನ್ನು (ಯುಎವಿ) ಭಾರತೀಯ ಸೇನೆಯು ಬಳಸಿತ್ತು. ‘ಸಿಂಧೂರ’ ಕಾರ್ಯಾಚರಣೆಗೆ ಪ್ರತಿಯಾಗಿ ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನದಲ್ಲಿರುವ ವಿವಿಧ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಡ್ರೋನ್‌ಗಳನ್ನು ದೊಡ್ಡ ಸಂಖ್ಯೆಯಲ್ಲಿ ಬಳಸಿತ್ತು. ಇದಕ್ಕೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಲಾಹೋರ್‌ನಲ್ಲಿರುವ ವಾಯು ರಕ್ಷಣಾ ವ್ಯವಸ್ಥೆ ಹಾಗೂ ಇನ್ನಿತರ ಸ್ಥಳಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಡ್ರೋನ್‌ಗಳನ್ನು ದೊಡ್ಡ ಸಂಖ್ಯೆಯಲ್ಲಿ ಬಳಸಲಾಗಿದೆ. ಎರಡೂ ದೇಶಗಳು ದಾಳಿ ನಡೆಸಲು ಕ್ಷಿಪಣಿಗಳ ಜೊತೆಗೆ ಡ್ರೋನ್‌ಗಳನ್ನು ಗಣನೀಯವಾಗಿ ಬಳಸುತ್ತಿವೆ ಎಂದು ಹೇಳಲಾಗುತ್ತಿದೆ.
ಅಮೆರಿಕ, ರಷ್ಯಾ, ಇಸ್ರೇಲ್ ಸೇರಿದಂತೆ ಪಶ್ಚಿಮದ ರಾಷ್ಟ್ರಗಳಿಗೆ ಡ್ರೋನ್ ಯುದ್ಧವು ಹೊಸದಲ್ಲ. ಆದರೆ, ಏಷ್ಯಾದ ಮಟ್ಟಿಗೆ ಇದು ಹೊಸ ಸಮರ ವಿಧಾನ. ಎರಡು ದಿನಗಳ ಸಂಘರ್ಷದ ರೀತಿಯನ್ನು ನೋಡಿದಾಗ ಅಣ್ವಸ್ತ್ರ ಸಾಮರ್ಥ್ಯದ ಭಾರತ– ಪಾಕಿಸ್ತಾನಗಳು ಡ್ರೋನ್ ಸಮರಕ್ಕೆ ಇಳಿದಂತೆ ಕಾಣುತ್ತಿದೆ. ಭಾರತವು ಇಸ್ರೇಲ್ ನಿರ್ಮಿತ ಹಾರ್ಪಿ, ಹಾರೋಪ್ ಡ್ರೋನ್‌ಗಳನ್ನು ಬಳಸಿದೆ ಎಂದು ಹೇಳಲಾಗುತ್ತಿದ್ದು, ಪಾಕಿಸ್ತಾನವು ಟರ್ಕಿ ನಿರ್ಮಿತ ಡ್ರೋನ್‌ಗಳ ಮೂಲಕ ದಾಳಿ ನಡೆಸಿದೆ ಎಂದು ಭಾರತ ಹೇಳಿದೆ.
ದಾಳಿ ಗುರಿ ನಿಖರ, ಪರಿಣಾಮಕಾರಿ
ಈ ಮೊದಲು ರಕ್ಷಣಾ ಕ್ಷೇತ್ರದಲ್ಲಿ ಡ್ರೋನ್‌ಗಳನ್ನು ಕಾವಲು, ಮೇಲ್ವಿಚಾರಣೆ, ನಿಗಾ ಉದ್ದೇಶಕ್ಕೆ ಬಳಸಲಾಗುತ್ತಿತ್ತು. ಈಗ ಅವುಗಳನ್ನೇ ಬಾಂಬ್ ಆಗಿ ಪರಿವರ್ತಿಸಿ ದಾಳಿಗೂ ಬಳಸಲಾಗುತ್ತಿದೆ. ಡ್ರೋನ್‌ಗಳು/ ಯುಎವಿಗಳನ್ನು ರಕ್ಷಣಾ ಭಾಷೆಯಲ್ಲಿ ‘ಲಾಯಿಟರ್ ಮ್ಯೂನಿಶನ್ ಸಿಸ್ಟಮ್ಸ್ (ಎಲ್‌ಎಂಎಸ್) ಎಂದು ಕರೆಯಲಾಗುತ್ತದೆ. ಶತ್ರು ನೆಲೆಗಳ ಮೇಲೆ ನಿಖರವಾಗಿ ಗುರಿ ಇಟ್ಟು ವೈಮಾನಿಕ ದಾಳಿ ನಡೆಸುವ ಆಧುನಿಕ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಇದು. ಪುಟ್ಟ ವಿಮಾನವನ್ನು ಹೋಲುವ ಈ ಡ್ರೋನ್‌ಗಳು, ಆಗಸದಲ್ಲಿ ಸಂಚರಿಸುತ್ತಾ ನಿರ್ದಿಷ್ಟ ವ್ಯಾಪ್ತಿಯಲ್ಲಿರುವ ಶತ್ರುವಿನ ನೆಲೆಯನ್ನು ಪತ್ತೆ ಮಾಡುತ್ತವೆ. ನಂತರ ಅದರತ್ತ ಧಾವಿಸಿ ನಿಖರವಾಗಿ ಗುರಿಗೆ ಅಪ್ಪಳಿಸಿ ಸ್ಫೋಟಗೊಳ್ಳುತ್ತವೆ. ಹಾಗಾಗಿ, ಇವುಗಳನ್ನು ‘ಸೂಸೈಡ್’ ಅಥವಾ ‘ಆತ್ಮಾಹುತಿ ಡ್ರೋನ್’ಗಳು ಎಂದೂ ಕರೆಯಲಾಗುತ್ತದೆ. ಇವುಗಳು ಡ್ರೋನ್‌ಗಳಂತೆ ಹಾರಾಡಬಲ್ಲವು. ದಾಳಿ ಸಂದರ್ಭದಲ್ಲಿ ಬಾಂಬ್‌ಗಳಂತೆ ಸಿಡಿಯಬಲ್ಲವು. ಮಾನವನ ಮಧ್ಯಪ್ರವೇಶವಿಲ್ಲದೆ, ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವುದು ಮಾತ್ರವಲ್ಲದೆ, ತನ್ನ ಗುರಿಯನ್ನು ಪತ್ತೆ ಹಚ್ಚಿ ಶತ್ರು ದೇಶದ ರೇಡಾರ್‌ನ ನಿಗಾದಿಂದ ತಪ್ಪಿಸಿಕೊಂಡು ನಿಖರವಾಗಿ ದಾಳಿ ಮಾಡಿ, ಶತ್ರು ನೆಲೆಯನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿರುವುದು ಈ ಡ್ರೋನ್‌ಗಳ ಹೆಗ್ಗಳಿಕೆ. ಹಾಗಾಗಿ ಸಮರಾಂಗಣದಲ್ಲಿ ಈಗ ಇವುಗಳಿಗೆ ಹೆಚ್ಚು ಬೇಡಿಕೆ. ಎಐ ತಂತ್ರಜ್ಞಾನ ಪ್ರವರ್ಧಮಾನಕ್ಕೆ ಬಂದ ನಂತರ ಈ ಡ್ರೋನ್‌ಗಳ ಕಾರ್ಯನಿರ್ವಹಣೆ ಇನ್ನಷ್ಟು ಪರಿಪಕ್ವಗೊಂಡಿದ್ದು, ದೇಶಗಳಿಗೆ ತಮ್ಮ ಶತ್ರುಗಳ ನೆಲೆಯನ್ನು ಅನ್ವೇಷಿಸುವುದು ಮತ್ತು ಅವುಗಳ ಮೇಲೆ ನಿಖರವಾಗಿ ದಾಳಿ ನಡೆಸುವುದು ಇನ್ನಷ್ಟು ಸುಲಭವಾಗಿದೆ. ಒಟ್ಟಾರೆಯಾಗಿ ಸೇನೆಗಳ ಕಾರ್ಯಾಚರಣೆಯನ್ನು ಈ ಡ್ರೋನ್‌ಗಳು ಇನ್ನಷ್ಟು ಪರಿಣಾಮಕಾರಿಯಾಗುವಂತೆ ಮಾಡುತ್ತಿವೆ.
ವಿರೋಧಿ ಪಾಳಯದ ವಾಯು ರಕ್ಷಣಾ ವ್ಯವಸ್ಥೆಯ ಕಣ್ತಪ್ಪಿಸಲೂ ಈ ಡ್ರೋನ್‌ಗಳನ್ನು ಬಳಸಲಾಗುತ್ತದೆ. ಅಂದರೆ, ಶತ್ರು ನೆಲೆ ಮೇಲೆ ಕ್ಷಿಪಣಿ ದಾಳಿ ನಡೆಸುವುದಕ್ಕೂ ಮುನ್ನ ಹಲವು ಡ್ರೋನ್‌ಗಳನ್ನು ಒಟ್ಟಾಗಿ ಹಾರಿಸಲಾಗುತ್ತದೆ. ವಿರೋಧಿಗಳ ರೇಡಾರ್‌ಗಳು ಈ ಡ್ರೋನ್‌ಗಳನ್ನು ಪತ್ತೆಹಚ್ಚಿ, ವಾಯು ರಕ್ಷಣಾ ವ್ಯವಸ್ಥೆಯ ಮೂಲಕ ಅವುಗಳನ್ನು ತಡೆಯುವುದರಲ್ಲಿ ನಿರತವಾಗಿದ್ದಾಗ ಕ್ಷಿಪಣಿ ಮೂಲಕ ದಾಳಿ ನಡೆಸುವ ತಂತ್ರವನ್ನು ಕಾರ್ಯಾಚರಣೆಯಲ್ಲಿ ಬಳಸಲಾಗುತ್ತದೆ. ಉಕ್ರೇನ್–ರಷ್ಯಾ ನಡುವಿನ ಸಂಘರ್ಷದಲ್ಲಿ ಎರಡೂ ರಾಷ್ಟ್ರಗಳು ಈ ತಂತ್ರವನ್ನು ಅನುಸರಿಸುತ್ತಾ ಬಂದಿವೆ.
ಇಸ್ರೇಲ್‌ನ ಎಲ್ಬಿಟ್ ಸೆಕ್ಯೂರಿಟಿ ಸಿಸ್ಟಮ್ಸ್ ಅಭಿವೃದ್ಧಿ ಪಡಿಸಿರುವ ಸ್ಕೈಸ್ಟ್ರೈಕರ್ ಚಿತ್ರ: ಎಲ್ಬಿಟ್ ಸಿಸ್ಟಮ್ಸ್ ವೆಬ್‌ಸೈಟ್
ಸಾಮರ್ಥ್ಯವೇನು?
ಈ ಡ್ರೋನ್‌ಗಳು 30 ನಿಮಿಷಗಳಿಂದ ಕೆಲವು ಗಂಟೆಗಳವರೆಗೂ ಕಾರ್ಯಾಚರಿಸುವ ಸಾಮರ್ಥ್ಯವನ್ನು ಹೊಂದಿದೆ. 40 ಕಿ.ಮೀನಿಂದ ಹಿಡಿದು 1,000 ಕಿ.ಮೀ ದೂರದವರೆಗೂ ಹಾರಾಟ ನಡೆಸಬಲ್ಲವು. ಉದಾಹರಣೆಗೆ, ಇಸ್ರೇಲ್ ನಿರ್ಮಿತ ಹಾರೋಪ್ ಡ್ರೋನ್ ಆರು ಗಂಟೆಗೂ ಹೆಚ್ಚು ನಿರಂತರವಾಗಿ ಆಗಸದಲ್ಲಿ ಕಾರ್ಯಾಚರಿಸುವುದರ ಜೊತೆಗೆ 1,000 ಕಿ.ಮೀ ದೂರದವರೆಗೂ ಸಂಚರಿಸಬಹುದು. ಭಾರತವು ಸೇರಿದಂತೆ ಹಲವು ರಾಷ್ಟ್ರಗಳು ಹೆಚ್ಚಿನ ಸಾಮರ್ಥ್ಯದ ಡ್ರೋನ್‌ಗಳ ಅಭಿವೃದ್ಧಿಯಲ್ಲಿ ತೊಡಗಿವೆ.
ಏನು ಲಾಭ?
ಈ ಡ್ರೋನ್‌ಗಳಿಂದ ನಿರ್ದಿಷ್ಟ ಗುರಿಯ ಮೇಲೆ ನಿಖರ ದಾಳಿ ಮಾಡಲು ಸಾಧ್ಯವಿರುವುದು ಒಂದು ಪ್ರಯೋಜನ. ಜತೆಗೆ, ಕ್ಷಿಪಣಿ, ಯುದ್ಧವಿಮಾನಗಳಿಗೆ ಹೋಲಿಸಿದರೆ ಈ ಡ್ರೋನ್‌ಗಳು ಅಗ್ಗ. ಇವುಗಳ ಖರೀದಿಗೆ ಹೆಚ್ಚು ಖರ್ಚು ಮಾಡಬೇಕಾಗಿಲ್ಲ. ತುಂಬಾ ದೂರದಲ್ಲಿರುವ ಗುರಿಗಳ ಮೇಲೆ ದಾಳಿ ನಡೆಸಲು ಇವುಗಳನ್ನು ಬಳಸಲು ಮತ್ತು ವಿರೋಧಿ ಪಾಳಯಕ್ಕೆ ದೊಡ್ಡ ಮಟ್ಟದ ಹಾನಿ ಉಂಟು ಮಾಡಲು ಇವುಗಳಿಂದ ಸಾಧ್ಯವಿಲ್ಲವಾದರೂ ಕಡಿಮೆ ವ್ಯಾಪ್ತಿಯಲ್ಲಿರುವ ಗುರಿಗಳನ್ನು ಸುಲಭವಾಗಿ ತಲುಪಬಹುದು. ಡ್ರೋನ್‌ಗಳು ಮಾನವರಹಿತವಾಗಿ ಕಾರ್ಯಾಚರಿಸುವುದರಿಂದ ಶತ್ರು ರಾಷ್ಟ್ರವು ಹೊಡೆದು ಉರುಳಿಸಿದರೂ ಜೀವಹಾನಿಯಾಗದು.
ಇತ್ತೀಚೆಗೆ ಇಸ್ರೇಲ್, ರಷ್ಯಾ, ಉಕ್ರೇನ್, ಇರಾನ್ ಇಂತಹ ಡ್ರೋನ್‌ಗಳನ್ನು ಬಳಸಿವೆ. ಅಮೆರಿಕವು ಈ ಹಿಂದೆಯೇ ಇರಾಕ್, ಲಿಬಿಯಾ, ಪಾಕಿಸ್ತಾನ, ಸಿರಿಯಾ ಹಾಗೂ ಇತರ ರಾಷ್ಟ್ರಗಳಲ್ಲಿ ಭಯೋತ್ಪಾದಕರು ಮತ್ತು ಬಂಡುಕೋರರನ್ನು ಸದೆಬಡಿಯಲು ಬಳಸಿದೆ. ಫ್ರಾನ್ಸ್, ಬ್ರಿಟನ್, ಚೀನಾ, ಟರ್ಕಿ ಸೇರಿದಂತೆ ಹಲವು ರಾಷ್ಟ್ರಗಳ ಶಸ್ತ್ರಾಸ್ತ್ರ ಕೋಠಿಗಳಲ್ಲಿ ಇಂತಹ ಡ್ರೋನ್‌ಗಳು ಭಾರಿ ಸಂಖ್ಯೆಯಲ್ಲಿವೆ ಎಂದು ಹೇಳಲಾಗುತ್ತಿವೆ.
ಸೇನಾ ಡ್ರೋನ್‌ಗಳಿಗೆ ಎಂಟು ದಶಕಗಳಿಗೂ ಹೆಚ್ಚು ಇತಿಹಾಸವಿದೆ. ಎರಡನೇ ವಿಶ್ವ ಮಹಾಯುದ್ಧದಿಂದಲೇ ಈ ಡ್ರೋನ್‌ಗಳ ಅಭಿವೃದ್ಧಿ ಪಡಿಸುವ ಪ್ರಯತ್ನ ಆರಂಭವಾಗಿತ್ತು. 1970, 80ರ ದಶಕದಲ್ಲಿ ಇದಕ್ಕೆ ಒಂದು ಸ್ಪಷ್ಟ ರೂಪ ಸಿಕ್ಕಿದರೆ, 2000–2010ರ ನಡುವೆ ಅಮೆರಿಕ ಈ ತಂತ್ರಜ್ಞಾನದಲ್ಲಿ ಭಾರಿ ಪ್ರಗತಿ ಸಾಧಿಸಿತು. ನಂತರದ ವರ್ಷಗಳಲ್ಲಿ ಸೇನಾ ಕಾರ್ಯಾಚರಣೆಯಲ್ಲಿ ಇವುಗಳ ಬಳಕೆ ವ್ಯಾಪಕವಾಯಿತು. ಈಗ ಇವು ಎಲ್ಲ ರಾಷ್ಟ್ರಗಳ ಬತ್ತಳಿಕೆಯಲ್ಲಿನ ಪ್ರಮುಖ ಅಸ್ತ್ರವೇ ಆಗಿ ಹೋಗಿವೆ.
ವಾಯು ರಕ್ಷಣಾ ವ್ಯವಸ್ಥೆಯೂ ಮುಖ್ಯ
ಯುದ್ಧದಲ್ಲಿ ಡ್ರೋನ್ ಬಳಕೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಡ್ರೋನ್ ದಾಳಿಯನ್ನು ತಡೆಯುವಂತಹ ಸದೃಢ ವಾಯು ರಕ್ಷಣಾ ವ್ಯವಸ್ಥೆಯನ್ನು ಹೊಂದುವುದೂ ಮುಖ್ಯ.
‘ಪಾಕಿಸ್ತಾನವು ಭಾರತವನ್ನು ಗುರಿಯಾಗಿಸಿಕೊಂಡು 300ರಿಂದ 400 ಡ್ರೋನ್‌ಗಳನ್ನು ದಾಳಿಗೆ ಬಳಸಿದೆ. ಪಾಕಿಸ್ತಾನದ ದುಸ್ಸಾಹಸವನ್ನು ಯುಎಎಸ್ ಗ್ರಿಡ್ ಮತ್ತು ವಾಯು ರಕ್ಷಣಾ ವ್ಯವಸ್ಥೆಯ ನೆರವಿನಿಂದ ತಡೆಯಲಾಗಿದೆ’ ಎಂದು ಭಾರತ ಹೇಳಿದೆ.
ವಾಯು ರಕ್ಷಣಾ ವ್ಯವಸ್ಥೆ ಎಂದರೆ, ವೈಮಾನಿಕ ದಾಳಿಯನ್ನು ತಡೆಯಲು ಇರುವಂತಹ ಬಹು ಹಂತದ ಜಾಲ ವ್ಯವಸ್ಥೆ. ಭಾರತವು ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಮತ್ತು ವಿದೇಶದಿಂದ ಆಮದು ಮಾಡಿಕೊಂಡಿರುವ ತಂತ್ರಜ್ಞಾನಗಳನ್ನು ಈ ಉದ್ದೇಶಕ್ಕೆ ಬಳಸುತ್ತಿದೆ.
ಪಾಕಿಸ್ತಾನ ನಡೆಸಿರುವ ಡ್ರೋನ್ ಮತ್ತು ಕ್ಷಿಪಣಿ ದಾಳಿಯನ್ನು ಹತ್ತಿಕ್ಕಲು ಭಾರತವು ರಷ್ಯಾದಿಂದ ಆಮದು ಮಾಡಿದ ಎಸ್–400 ಕ್ಷಿಪಣಿ ವ್ಯವಸ್ಥೆಯನ್ನು (ಎಸ್ 400 ಸುದರ್ಶನ ಚಕ್ರ) ಬಳಸಿದೆ. ಇದಲ್ಲದೇ 2,000 ಕಿ.ಮೀ ವ್ಯಾಪ್ತಿ ಸಾಮರ್ಥ್ಯವಿರುವ ಭೂಮಿಯ ವಾತಾವರಣದ ಹೊರಗೆ ಇರುವ ಕ್ಷಿಪಣಿಯನ್ನು ನಾಶ ಮಾಡಬಲ್ಲ ಬ್ಯಾಲಿಸ್ಟಿಕ್ ಕ್ಷಿಪಣಿ ರಕ್ಷಣಾ (ಬಿಎಂಡಿ) ವ್ಯವಸ್ಥೆಯನ್ನೂ ಭಾರತ ಹೊಂದಿದೆ.
ಈಗ ನಡೆಯುತ್ತಿರುವ ಸಂಘರ್ಷದಲ್ಲಿ ಭಾರತವು ತನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಲು ಯಶಸ್ವಿಯಾಗಿದ್ದು, ಪಾಕಿಸ್ತಾನವು ಅದರಲ್ಲಿ ವಿಫಲವಾಗಿದೆ ಎಂದು ಹೇಳಲಾಗುತ್ತಿದೆ.
ಎಸ್ 400 ಸುದರ್ಶನ ಚಕ್ರ
ಎಂಟು ದಶಕಗಳಿಗೂ ಹೆಚ್ಚು ಇತಿಹಾಸ
ಸೇನಾ ಡ್ರೋನ್‌ಗಳಿಗೆ ಎಂಟು ದಶಕಗಳಿಗೂ ಹೆಚ್ಚು ಇತಿಹಾಸವಿದೆ. ಎರಡನೇ ವಿಶ್ವ ಮಹಾಯುದ್ಧದಿಂದಲೇ ಈ ಡ್ರೋನ್‌ಗಳ ಅಭಿವೃದ್ಧಿ ಪಡಿಸುವ ಪ್ರಯತ್ನ ಆರಂಭವಾಗಿತ್ತು. 1970 80ರ ದಶಕದಲ್ಲಿ ಇದಕ್ಕೆ ಒಂದು ಸ್ಪಷ್ಟ ರೂಪ ಸಿಕ್ಕಿದರೆ 2000–2010ರ ನಡುವೆ ಅಮೆರಿಕ ಈ ತಂತ್ರಜ್ಞಾನದಲ್ಲಿ ಭಾರಿ ಪ್ರಗತಿ ಸಾಧಿಸಿತು. ನಂತರದ ವರ್ಷಗಳಲ್ಲಿ ಸೇನಾ ಕಾರ್ಯಾಚರಣೆಯಲ್ಲಿ ಇವುಗಳ ಬಳಕೆ ವ್ಯಾಪಕವಾಯಿತು. ಈಗ ಇವು ಎಲ್ಲ ರಾಷ್ಟ್ರಗಳ ಬತ್ತಳಿಕೆಯಲ್ಲಿನ ಪ್ರಮುಖ ಅಸ್ತ್ರವೇ ಆಗಿ ಹೋಗಿವೆ.
ಭಾರಿ ಸಂಖ್ಯೆಯಲ್ಲಿವೆ
ಇತ್ತೀಚೆಗೆ ಇಸ್ರೇಲ್ ರಷ್ಯಾ ಉಕ್ರೇನ್ ಇರಾನ್ ಇಂತಹ ಡ್ರೋನ್‌ಗಳನ್ನು ಬಳಸಿವೆ. ಅಮೆರಿಕವು ಈ ಹಿಂದೆಯೇ ಇರಾಕ್ ಲಿಬಿಯಾ ಪಾಕಿಸ್ತಾನ ಸಿರಿಯಾ ಹಾಗೂ ಇತರ ರಾಷ್ಟ್ರಗಳಲ್ಲಿ ಭಯೋತ್ಪಾದಕರು ಮತ್ತು ಬಂಡುಕೋರರನ್ನು ಸದೆಬಡಿಯಲು ಬಳಸಿದೆ. ಫ್ರಾನ್ಸ್ ಬ್ರಿಟನ್ ಚೀನಾ ಟರ್ಕಿ ಸೇರಿದಂತೆ ಹಲವು ರಾಷ್ಟ್ರಗಳ ಶಸ್ತ್ರಾಸ್ತ್ರ ಕೋಠಿಗಳಲ್ಲಿ ಇಂತಹ ಡ್ರೋನ್‌ಗಳು ಭಾರಿ ಸಂಖ್ಯೆಯಲ್ಲಿವೆ ಎಂದು ಹೇಳಲಾಗುತ್ತಿವೆ.
––––––––––––––
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.