
ಇಲ್ಲಿರುವ ಯಾವ ಹೆಸರೂ ಜನಪ್ರಿಯವಲ್ಲ. ಹಲವರ ಹೆಸರು ಅವರಿರುವ ಗ್ರಾಮ/ಪಟ್ಟಣದಿಂದ ಹೊರಗೆ ತಿಳಿದೇ ಇರಲಿಲ್ಲ. ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡಿದ್ದವರು. ತಮ್ಮ ಬದುಕು ತಮಗಾಗಿ ಅಷ್ಟೇ ಅಲ್ಲ ಎಂದು ಭಾವಿಸಿದ್ದ ಇವರು ತಮ್ಮ ಸುತ್ತಲಿನ ಸಮಾಜ, ಊರು, ಜನರ ಒಳಿತಿಗೆ ಸದ್ದಿಲ್ಲದೇ ದುಡಿದವರು. ದೇಶದ ವಿವಿಧ ರಾಜ್ಯಗಳಲ್ಲಿನ ಇಂಥ ಹಲವರಿಗೆ ಈ ಬಾರಿ ಪದ್ಮಶ್ರೀ ಸಂದಿದೆ. ತೆರೆಮರೆಯ ಸಾಧಕರು ವಿಭಾಗದಲ್ಲಿ ಇಂಥಹ 45 ಜನರನ್ನು ಗುರುತಿಸಿ ಪ್ರಶಸ್ತಿ ಘೋಷಿಸಲಾಗಿದೆ. ‘ಪದ್ಮಶ್ರೀ’ಗೆ ಪಾತ್ರರಾದ ಕೆಲವರ ಸಾಧನೆಯ ಪುಟ್ಟ ಪರಿಚಯ ಇಲ್ಲಿದೆ

ಕ್ಷೇತ್ರ: ವೈದ್ಯಕೀಯ ರಾಜ್ಯ: ಮಹಾರಾಷ್ಟ್ರ
ಗೋವಾದಲ್ಲಿ ಬೇರುಗಳಿದ್ದರೂ, ಅರ್ಮಿಡಾ ಅವರು ಧಾರವಾಡದಲ್ಲಿ ಹುಟ್ಟಿ, ಹುಬ್ಬಳ್ಳಿಯಲ್ಲಿ ವೈದ್ಯಕೀಯ ಪದವಿ ಮತ್ತು ಮುಂಬೈನ ಕೆಇಎಂ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ವೈದ್ಯಕೀಯ ವೃತ್ತಿಯನ್ನು ಜನರ ಸೇವೆ ಎಂದು ಭಾವಿಸಿದ ಇವರು, ಪೌಷ್ಟಿಕತೆ, ಶಿಕ್ಷಣ, ಆರೋಗ್ಯ ಸೇವೆಗಳಿಗಾಗಿ ಕೆಲವು ಶಿಶುತಜ್ಞರ ಜತೆಗೂಡಿ ‘ಸ್ನೇಹಾ’ ಎನ್ನುವ ಸ್ವಯಂಸೇವಾ ಸಂಸ್ಥೆ ಆರಂಭಿಸಿದರು. ಮುಂಬೈನ ಲೋಕಮಾನ್ಯ ತಿಲಕ್ ಸಾರ್ವಜನಿಕ ಆಸ್ಪತ್ರೆಯಲ್ಲಿ ನವಜಾತ ಶಿಶುರೋಗ ವಿಭಾಗದ ಮುಖ್ಯಸ್ಥರಾಗಿದ್ದಾಗ ತಾಯಂದಿರ ಎದೆಹಾಲಿನ ಬ್ಯಾಂಕ್ ಆರಂಭಿಸಿದರು. ಪ್ರತಿವರ್ಷ, ಹಲವು ರೀತಿಯ ಕಾಯಿಲೆ, ದೌರ್ಬಲ್ಯಕ್ಕೆ ಗುರಿಯಾಗಿ, ಹುಟ್ಟುತ್ತಲೇ ತೀವ್ರ ನಿಗಾ ಘಟಕದಲ್ಲಿ ಜೀವಕ್ಕಾಗಿ ಸೆಣಸಾಡುವ ಸಾವಿರಾರು ಮಕ್ಕಳ ಜೀವ ಉಳಿಸಲು ಈ ಎದೆಹಾಲಿನ ಬ್ಯಾಂಕ್ ನೆರವಾಗುತ್ತಿದೆ. ತಳಸಮುದಾಯಗಳಲ್ಲಿ ಶಿಶು ಪೌಷ್ಟಿಕತೆ ಮತ್ತು ತಾಯಿ ಆರೋಗ್ಯ ವೃದ್ಧಿಸಲು ಮೂರು ದಶಕಗಳಿಂದ ದುಡಿಯುತ್ತಿದ್ದಾರೆ.
ಕ್ಷೇತ್ರ: ಕ್ರೀಡೆ, ರಾಜ್ಯ: ಮಧ್ಯಪ್ರದೇಶ
ಛಾತ್ರಸಾಲ್ ಬುಂದೇಲ್‌ಖಂಡ್ ಅಖಾಡ ಸ್ಥಾಪಿಸಿ, ಅದರ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಜನಪದ ಸಮರ ಕಲೆಯನ್ನು ಕಲಿಸುವುದಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಮಂದಿ ಇದರಿಂದ ಸಮರ ಕಲೆ ತರಬೇತಿ ಪಡೆದಿದ್ದಾರೆ. ಅಳಿವಿನ ಹಾದಿಯಲ್ಲಿದ್ದ ಜನಪದ ಕಲೆಗಳನ್ನು, ದೊಣ್ಣೆ, ಕತ್ತಿ ವರಸೆ ಮುಂತಾದ ದೇಸೀ ಸಮರ ಕಲೆಗಳನ್ನು ಉಳಿಸಿ, ಬೆಳೆಸಿ, ಅವುಗಳನ್ನು ವಿಶ್ವದ ಹಲವು ದೇಶಗಳಿಗೂ ಹರಡಿದ ಕೀರ್ತಿ ಭಗವಾನ್‌ದಾಸ್ ರಾಯಕ್‌ವಾರ್ ಅವರಿಗೆ ಸಲ್ಲುತ್ತದೆ. ತಮ್ಮ ಬಳಿ ಇದ್ದ ಸೀಮಿತ ಸಂಪನ್ಮೂಲಗಳಿಂದಲೇ ವ್ಯಾಯಾಮಶಾಲೆ ಸ್ಥಾಪಿಸಿ, ಜನಪದ ಕಲೆ, ಸಂಸ್ಕೃತಿ, ಆಚರಣೆಗಳ ಉಳಿವಿಗೆ ದಶಕಗಳಿಂದಲೂ ಶ್ರಮಿಸುತ್ತಿದ್ದಾರೆ.
ಕ್ಷೇತ್ರ: ಕಲೆ, ರಾಜ್ಯ: ಅಸ್ಸಾಂ
ಅಸ್ಸಾಂನ ಕರ್ಬಿ ಆಂಗ್ಲಾಂಗ್ ಜಿಲ್ಲೆಯ ಕರ್ಬಿ ಬುಡಕಟ್ಟು ಸಾಂಪ್ರದಾಯಿಕ ಸಂಗೀತದ ಸಾಧಕಿ ಪೋಖಿಲಾ ಲೇಕ್‌ತೇಪೀ. ಜನಪದೀಯ ಅಂಶಗಳನ್ನು ಒಳಗೊಂಡ ಹಾಡುಗಳನ್ನು ಅತ್ಯಂತ ಸುಮಧುರವಾಗಿ ಹಾಡುವುದಕ್ಕೆ ಇವರು ಹೆಸರುವಾಸಿ. ‘ಕ್ವೀನ್ ಆಫ್ ಮೆಲೋಡಿ’ ಎಂದೇ ಬಿರುದು ಪಡೆದಿರುವ ಇವರು 300ಕ್ಕೂ ಹೆಚ್ಚು ಹಾಡು ಹಾಡಿದ್ದಾರೆ. ಪೋಖಿಲಾ ಅವರಿಗೆ ಗಾಯನ ಪೋಷಕರ ಬಳುವಳಿ. ಹಳ್ಳಿಯ ನಾಟಕಗಳಲ್ಲಿ ವಾದ್ಯ ನುಡಿಸುತ್ತಿದ್ದ ತಂದೆಯೇ ಇವರ ಮೊದಲ ಗುರು. ಶಾಲೆಯ ಸ್ಪರ್ಧೆಗಳಲ್ಲಿ ಹಾಡುತ್ತಲೇ ತಮ್ಮ ಶಾರೀರದಿಂದ ಜನಪ್ರಿಯತೆ ಗಳಿಸಿದರು. ದಿಫು ಕರ್ಬಿ ಕ್ಲಬ್‌ನಲ್ಲಿ ಗಾಯನ ಸ್ಪರ್ಧೆಯಲ್ಲಿ ಮೊದಲ ಪ್ರಶಸ್ತಿ ಗೆದ್ದಿದ್ದು ಇವರ ಆತ್ಮವಿಶ್ವಾಸವನ್ನು ವೃದ್ಧಿಸಿತು. ನಂತರ ತಾವೇ ಹಾಡುಗಳನ್ನೂ ಬರೆಯತೊಡಗಿದರು. ಕರ್ಬಿ ಸಂಗೀತಕ್ಕೆ ಆಧುನಿಕತೆಯ ಸ್ಪರ್ಶ ನೀಡಿ, ಹೊಸ ಪ್ರಕಾರವನ್ನೇ ಹುಟ್ಟುಹಾಕಿದರು. ಇವರ ಹಾಡುಗಳ ಹಲವು ಧ್ವನಿಸುರುಳಿಗಳು ಬಿಡುಗಡೆಯಾಗಿವೆ. ಜುಬಿನ್ ಗರ್ಗ್ ಅವರಂಥ ಹಲವರೊಂದಿಗೆ ಇವರು ಹಾಡಿದ್ದಾರೆ.
ಕ್ಷೇತ್ರ: ಸಮಾಜ ಸೇವೆ, ರಾಜ್ಯ: ಕೇರಳ
ಅಲಪ್ಪುಳ ಜಿಲ್ಲೆಯ ಮುತ್ತುಕುಲಂನಲ್ಲಿ ಐದು ಎಕರೆ ವಿಸ್ತೀರ್ಣದ ಅರಣ್ಯವಿದೆ. ಅದು ಮನುಷ್ಯ ನಿರ್ಮಿತ ಕಾಡು. 92 ವರ್ಷ ವಯಸ್ಸಿನ ದೇವಕಿ ಅಮ್ಮ ಅವರ ಕನಸು, ಶ್ರಮ ಮತ್ತು ಬದ್ಧತೆಯ ಫಲ ಅದು. ಇವರಿಗೆ ಮರಗಳೇ ಸರ್ವಸ್ವ. 44 ವರ್ಷಗಳಿಂದ ಅರಣ್ಯ ಬೆಳೆಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಇವರ ಗಂಡ ಗೋಪಾಲಕೃಷ್ಣ ಪಿಳ್ಳೈ ಶಾಲಾ ಮಾಸ್ತರರಾಗಿದ್ದರು. ಪ್ರವಾಸದಿಂದ ಹಿಂದಿರುಗುವಾಗ ಒಂದು ಬೀಜವನ್ನೋ, ಗಿಡವನ್ನೋ ಮನೆಗೆ ತರುವುದು ಅವರ ರೂಢಿಯಾಗಿತ್ತು. ಅವರ ಆ ಅಭ್ಯಾಸವು ‘ತಪೋವನಂ’ಗೆ ಬೀಜಾಂಕುರ ಹಾಕಿತ್ತು. ಪ್ರಸ್ತುತ ‘ತಪೋವನಂ’ನಲ್ಲಿ ಮೂರು ಸಾವಿರ ಮರಗಳಿವೆ. ಇಳಿವಯಸ್ಸಿನಲ್ಲಿಯೂ ಮರಗಳ ಆರೈಕೆಯಲ್ಲಿಯೇ ಸಾರ್ಥಕ್ಯ ಕಾಣುತ್ತಿದ್ದಾರೆ.
ಕ್ಷೇತ್ರ: ಸಮಾಜ ಸೇವೆ, ರಾಜ್ಯ: ಛತ್ತೀಸಗಢ
ಹಿರಾನರ್ ಗ್ರಾಮದ ಬುಧರೀ ತಾತೀ ದಿಟ್ಟತನಕ್ಕೆ ಹೆಸರಾದ ಮಹಿಳೆ. ನಕ್ಸಲ್‌ಪೀಡಿತ ಬಸ್ತಾರ್ ಜಿಲ್ಲೆಯಲ್ಲಿ ಬಡತನ, ಹಿಂಸಾಚಾರ, ಶೋಷಣೆಯಿಂದ ಅಂಚಿನ ಸಮುದಾಯಗಳ ಮತ್ತು ಬುಡಕಟ್ಟು ಮಹಿಳೆಯರನ್ನು ಪಾರು ಮಾಡಿ, ಅವರಿಗೆ ನೆಲೆ ಕಲ್ಪಿಸಿದ ಶ್ರೇಯ ಬುಧರೀ ತಾತೀ ಅವರದ್ದು. ತನ್ನ 15ನೇ ವಯಸ್ಸಿನಲ್ಲಿಯೇ ಸಮಾಜ ಸೇವೆಗೆ ಇಳಿದವರು ಇವರು. ಶಾಲೆಯ ಮುಖವನ್ನೇ ಕಾಣದ ಮಕ್ಕಳನ್ನು ಎಳೆದೊಯ್ದು ಶಾಲೆಗೆ ಸೇರಿಸುವುದು, ಅಸಹಾಯಕ ವೃದ್ಧರನ್ನು ಅನಾಥಾಶ್ರಮಗಳಿಗೆ ಸೇರಿಸುವುದು ಸೇರಿದಂತೆ ಇವರ ಸಮಾಜ ಸೇವೆಗೆ ಹಲವು ಮುಖಗಳು. ನೊಂದ ಹಿರಿಯ ಜೀವಗಳ ಸೇವೆಗಾಗಿ ಹಲವು ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಬಸ್ತಾರ್‌ನ ಜನ ಇವರನ್ನು ಪ್ರೀತಿಯಿಂದ ‘ಬಡೀ ದೀದಿ’ ಎನ್ನುತ್ತಾರೆ.
ಕ್ಷೇತ್ರ: ಕಲೆ ರಾಜ್ಯ: ಮಹಾರಾಷ್ಟ್ರ
ಮಹಾರಾಷ್ಟ್ರದ ವರ್ಲಿ ಬುಡಕಟ್ಟಿನ ಕೊನೆಯ ಕುಡಿಗಳಲ್ಲಿ ಒಬ್ಬರಾಗಿರುವ, ಕೊಂಕಣ ಪ್ರದೇಶದ ವಾಲ್ವಂಡಾ ಗ್ರಾಮದ 90 ವರ್ಷದ ಭಿಕ್ಲ್ಯಾ ಲಡ್ಕ್ಯಾ ಧಿಂಡಾ ಅವರು ತಾರಪಾ ಎಂಬ ವಿಶಿಷ್ಟ ವಾದ್ಯ ನುಡಿಸುವ ಕಲಾವಿದ. ವರ್ಲಿ ಬುಡಕಟ್ಟು ಸಮುದಾಯದ ಈ ವಿಶೇಷ ಸಂಗೀತ ಪರಂಪರೆಯನ್ನು ಉಳಿಸಿ ಬೆಳೆಸಲು ನೀಡಿದ ಕೊಡುಗೆಗಾಗಿ ಕೇಂದ್ರ ಸರ್ಕಾರ ಇವರಿಗೆ ‘ಪದ್ಮ’ ಗೌರವ ನೀಡಿದೆ. ತಾರಪಾ ಎನ್ನುವುದು ಸ್ಥಳೀಯವಾಗಿ ಲಭ್ಯವಿರುವ ಸೋರೆಕಾಯಿ, ಬಿದಿರು, ತಾಳೆ ಮರದ ಎಲೆ ಮತ್ತು ಜೇನುಗೂಡಿನ ಮೇಣದಿಂದ ತಯಾರಿಸುವ ವಾದ್ಯ. ಹಾವಾಡಿಗರ ಪುಂಗಿಯಂತೆ, ಶಹನಾಯಿಯಂತೆ, ಬ್ಯಾಗ್‌ಪೈಪರ್‌ನಂತೆ ನಾದದ ಅಲೆ ಹೊಮ್ಮಿಸುವ ಈ ವಾದ್ಯವನ್ನು ಸ್ವತಃ ತಯಾರಿಸುತ್ತಾರೆ. ಅದನ್ನು ನುಡಿಸುತ್ತಾರೆ. ಅದರಿಂದ ಬರುವ ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕುವುದನ್ನೂ ಹೇಳಿಕೊಡುತ್ತಾರೆ.
ಕ್ಷೇತ್ರ: ಸಮಾಜ ಸೇವೆ, ರಾಜ್ಯ: ಜಮ್ಮು ಮತ್ತು ಕಾಶ್ಮೀರ
ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಸೇರಿದವರಾದ ಬ್ರಿಜ್ ಲಾಲ್ ಭಟ್ ನಿವೃತ್ತ ಸರ್ಕಾರಿ ಅಧಿಕಾರಿ. ನಿವೃತ್ತಿಯ ಬಳಿಕ ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಅನಂತನಾಗ್ ಜಿಲ್ಲೆಯಲ್ಲಿರುವ ಶ್ರೀ ರಾಮಕೃಷ್ಣ ಮಿಷನ್ ಆಶ್ರಮ ಮತ್ತು ವಿವೇಕಾನಂದ ಕೇಂದ್ರದ ಮೂಲಕ ಅವರು ಸಾಮಾಜಿಕ ಕಾರ್ಯಕರ್ತರಾಗಿ ದುಡಿಯುತ್ತಿದ್ದಾರೆ.ಕಾಶ್ಮೀರದಿಂದ ವಲಸೆ ಹೋಗಿರುವ ಪಂಡಿತ ಸಮುದಾಯದವರನ್ನು ವಾಪಸ್ ರಾಜ್ಯಕ್ಕೆ ಕರೆತರುವ ನಿಟ್ಟಿನಲ್ಲೂ ಇವರು ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಜಮ್ಮು ಮತ್ತು ಕಾಶ್ಮೀರದ ಎಲ್ಲ ಸಮುದಾಯಗಳ ಯುವಜನರನ್ನು ಒಂದುಗೂಡಿಸುವ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಕೊಳ್ಳುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಕ್ಷೇತ್ರ: ಇತರ–ಕೃಷಿ, ರಾಜ್ಯ: ಅಸ್ಸಾಂ
ಕೃಷಿ ಕ್ಷೇತ್ರ ಅದರಲ್ಲೂ ವಿಶೇಷವಾಗಿ ರೇಷ್ಮೆ ಕೃಷಿಯಲ್ಲಿ ಹಲವು ವಿನೂತನ ಪ್ರಯೋಗಗಳನ್ನು ಮಾಡಿ ಗಮನ ಸೆಳೆದವರು ಜೋಗೇಶ್ ದೇವುರಿ. ಎರಿ ಎಂಬ ಸ್ವದೇಶಿ ರೇಷ್ಮೆ ತಳಿ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿದವರು. ಬೊಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್‌ನ ರೇಷ್ಮೆ ಘಟಕದ ನಿರ್ದೇಶಕರಾಗಿರುವ ಜೋಗೇಶ್ ಅವರು ಸಾಂಪ್ರದಾಯಿಕ ರೇಷ್ಮೆ ಹುಳು ಸಾಕಣೆಯನ್ನು ಆಧುನೀಕರಣಗೊಳಿಸಿದ್ದಾರೆ. ರೇಷ್ಮೆ ಪಾರ್ಕ್‌ಗಳನ್ನು ನಿರ್ಮಿಸಿ ಅಸ್ಸಾಂನ ಗ್ರಾಮಗಳ ಸಾವಿರಾರು ರೈತರ ಮತ್ತು ಬುಡಕಟ್ಟು ಸಮುದಾಯದವರ ಬದುಕಿಗೆ ದಾರಿ ಮಾಡಿಕೊಟ್ಟವರು. ಇವರ ಪ್ರಯತ್ನದಿಂದಾಗಿ ರೇಷ್ಮೆ ಕೃಷಿಯಲ್ಲಿ ತೊಡಗಿಕೊಳ್ಳುವ ಮಹಿಳೆಯರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಗ್ರಾಮಸ್ಥರ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಿದೆ.
ಕ್ಷೇತ್ರ: ಸಮಾಜ ಸೇವೆ ರಾಜ್ಯ:ಚಂಡೀಗಢ
88 ವರ್ಷದ ಇಂದರ್‌ಜಿತ್ ಸಿಂಗ್ ಸಿಧು ಅವರು ಪಂಜಾಬ್‌ನ ನಿವೃತ್ತ ಐಪಿಎಸ್ ಅಧಿಕಾರಿ. 10 ವರ್ಷಗಳಿಂದ ತಮ್ಮ ನೆರೆಹೊರೆಯ ರಸ್ತೆಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಚಂಡೀಗಢದ ಸೆಕ್ಟರ್ 49ರಲ್ಲಿರುವ ತಮ್ಮ ಮನೆಯ ಬಳಿಯ ರಸ್ತೆಯಲ್ಲಿ ಬಿದ್ದಿದ್ದ ಕಸವನ್ನು ಹೆಕ್ಕಿ, ರಸ್ತೆಯನ್ನು ಅವರು ಸ್ವಚ್ಛಗೊಳಿಸುತ್ತಿರುವ ವಿಡಿಯೊ ಕಳೆದ ವರ್ಷ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆ ಬಳಿಕ ಇವರು ಮಾಡುತ್ತಿರುವ ಕೆಲಸ ಹೊರಜಗತ್ತಿಗೆ ತಿಳಿಯಿತು. ಮೆಚ್ಚುಗೆಯೂ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬಗ್ಗೆ ಆದ ಸುದ್ದಿಯನ್ನು ನೋಡಿ ಸಿಧು ಅವರು ಕೊಂಚ ಮುಜುಗರ ಪಟ್ಟುಕೊಂಡರೂ ತಮ್ಮ ಸ್ವಚ್ಛತಾ ಅಭಿಯಾನವನ್ನು ಮುಂದುವರಿಸಿದ್ದಾರೆ.
ಕ್ಷೇತ್ರ: ಸಮಾಜ ಸೇವೆ ರಾಜ್ಯ:ಮೇಘಾಲಯ
ಮೇಘಾಲಯದ ಪ್ರಸಿದ್ಧ ಬೇರುಗಳ ಸೇತುವೆಗಳನ್ನು ಸಂರಕ್ಷಿಸಲು ಶ್ರಮಿಸುತ್ತಿರುವ ಹೈಲಿ ವಾರ್ ಅವರ ನಿಸ್ವಾರ್ಥ ಸೇವೆಗಾಗಿ ಪದ್ಮಶ್ರೀ ಪ್ರಶಸ್ತಿ ಒಲಿದಿದೆ. ಸೊಹ್ರಾ ಸಮೀಪದ ಸಿಯೆಜ್ ಗ್ರಾಮದವರಾದ ಹೈಲಿ ವಾರ್ ಅವರು ಮೇಘಾಲಯದಲ್ಲಿರುವ ನೈಸರ್ಗಿಕ ಬೇರುಗಳ ಸೇತುವೆಗಳನ್ನು ನಿರ್ಮಿಸುವ ಮತ್ತು ಅವುಗಳನ್ನು ಸಂರಕ್ಷಿಸುವ ಕೆಲಸವನ್ನು ದಶಕಗಳಿಂದ ಮಾಡುತ್ತಿದ್ದಾರೆ. 10 ವರ್ಷದ ಬಾಲಕನಾಗಿದ್ದಾಗಿನಿಂದ ಹೈಲಿ ಅವರು ಬೇರುಗಳನ್ನು ನೇಯ್ದು, ಅವುಗಳಿಂದ ಸೇತುವೆಯನ್ನು ನಿರ್ಮಿಸುವ ಕೆಲಸ ಮಾಡುತ್ತಿದ್ದಾರೆ. ಈ ಸೇತುವೆಗಳಿರುವ ಸ್ಥಳಗಳು ಪ್ರಸಿದ್ಧವಾಗಿದ್ದು, ಪ್ರವಾಸಿಗರನ್ನು ಭಾರಿ ಸಂಖ್ಯೆಯಲ್ಲಿ ಸೆಳೆಯುತ್ತಿವೆ. ಮೇಘಾಲಯದ ಪರಿಸರ, ಸಂಪ್ರದಾಯ, ಪರಂಪರೆಯ ಬಗ್ಗೆ ಅಪಾರ ಜ್ಞಾನವನ್ನೂ ಹೊಂದಿದ್ದಾರೆ.
ಕ್ಷೇತ್ರ: ಕಲೆ ರಾಜ್ಯ:ಒಡಿಶಾ
99 ವರ್ಷದ ಸಿಮಾಂಚಲ ಪಾತ್ರೊ ಒಡಿಶಾದ ಹಿರಿಯ ಜನಪದ ಕಲಾವಿದ. ಅವರು ತಮ್ಮ ಇಡೀ ಜೀವನವನ್ನು ‘ಪ್ರಹ್ಲಾದ ನಾಟಕ’ಕ್ಕಾಗಿ ಮುಡುಪಾಗಿಟ್ಟವರು. ವಿಷ್ಣುವಿನ ನರಸಿಂಹ ಅವತಾರವನ್ನು ಆಧಾರವಾಗಿಟ್ಟುಕೊಂಡಿರುವ ಈ ನಾಟಕವು 200 ಹಾಡುಗಳನ್ನು ಹೊಂದಿದೆ. ಇವುಗಳು ಒಡಿಶಾ ಸಂಗೀತದಲ್ಲಿರುವ 35 ರಾಗಗಳನ್ನು ಆಧಾರಿತವಾಗಿವೆ. ತುಂಬಾ ನಾಟಕೀಯವಾದ ಮತ್ತು ಸಂಗೀತ, ನೃತ್ಯಗಳು, ಹಾಡುಗಳು, ಭಾವುಕ ಸಂಭಾಷಣೆ ಮತ್ತು ಸಾಹಸಗಳನ್ನೊಳಗೊಂಡ ಈ ನಾಟಕ ನೋಡುಗರ ಕಣ್ಮನ ಸೆಳೆಯುತ್ತದೆ. ಸಿಮಾಂಚಲ ಅವರು ತಮ್ಮ 12ನೇ ವಯಸ್ಸಿನಿಂದಲೇ ಜನಪದ ಕಲೆಯಲ್ಲಿ ತೊಡಗಿಕೊಂಡಿದ್ದು, ಪ್ರಹ್ಲಾದ ನಾಟಕಕ್ಕಾಗಿ ತಮ್ಮ ಆಸ್ತಿಯಲ್ಲಿ ಸ್ವಲ್ಪ ಭಾಗವನ್ನೇ ಮಾರಾಟ ಮಾಡಿದ್ದರು.
ಕ್ಷೇತ್ರ: ಕಲೆ ರಾಜ್ಯ: ಅಸ್ಸಾಂ
ಅಸ್ಸಾಂನ ಶ್ರೇಷ್ಠ ಶಿಲ್ಪಿ ಹಾಗೂ ಕಲಾ ನಿರ್ದೇಶಕ. ಕಲಾ ಕ್ಷೇತ್ರಕ್ಕೆ ನೂರುದ್ದೀನ್ ಅಹ್ಮದ್ ಅವರು ನೀಡಿದ ಕೊಡುಗೆಗಾಗಿ ಪದ್ಮಶ್ರೀ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಲಾಗಿದೆ. ಅಸ್ಸಾಂನ ಆಧುನಿಕ ರಂಗಕೌಶಲದ ನಿರ್ಮಾತೃ ಎಂಬ ವಿಶೇಷಣವೂ ಅವರಿಗಿದೆ. ದೇವರ ಕಲಾಕೃತಿಗಳಲ್ಲದೆ, ತಾಜ್‌ಮಹಲ್‌ನಂತಹ ಸ್ಮಾರಕಗಳು, ಟೈಟಾನಿಕ್ ಹಡಗು ದುರಂತ ಇತ್ಯಾದಿ ಘಟನೆಗಳನ್ನು ಬೃಹತ್ ಕಲಾಕೃತಿಗಳ ಮೂಲಕ ಜನರ ಮುಂದೆ ಇಟ್ಟು ಗಮನಸೆಳೆದವರು. ಇವರು ಬಿದಿರಿನಿಂದ ಮಾಡಿದ 100 ಅಡಿ ಎತ್ತರದ ದುರ್ಗೆಯ ಕಲಾಕೃತಿ ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿದೆ. ತಮ್ಮದೇ ಆದ ತರಬೇತಿ ಶಾಲೆಯನ್ನು ನಡೆಸುತ್ತಿರುವ ಅವರು ವಿದ್ಯಾರ್ಥಿಗಳಿಗೆ ತಮ್ಮ ಕಲಾ ಕೌಶಲವನ್ನು ಧಾರೆ ಎರೆಯುತ್ತಿದ್ದಾರೆ.
ಬ್ರಹ್ಮಾವರ (ಉಡುಪಿ): ಕೋಟ ಹಂದಟ್ಟಿನ ಹಂದೆ ಮನೆತನದ 99 ವರ್ಷ ವಯಸ್ಸಿನ ವೈದ್ಯ ಡಾ.ಎಚ್.ವಿ.ಹಂದೆ ಅವರಿಗೆ ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ 2026ರ ಪದ್ಮಶ್ರೀ ಪುರಸ್ಕಾರ ಲಭಿಸಿದೆ. ಇವರು ತಮಿಳುನಾಡಿನಲ್ಲಿ ಎಂ.ಜಿ.ಆರ್ ಅವರು ಮುಖ್ಯಮಂತ್ರಿ ಆಗಿದ್ದಾಗ ಆರೋಗ್ಯ ಸಚಿವರಾಗಿದ್ದರು. ಮಂಗಳೂರು, ಚೆನ್ನೈ, ಕೊಯಮುತ್ತೂರಿನಲ್ಲಿ ಉನ್ನತ ವ್ಯಾಸಂಗ ಮುಗಿಸಿದ ಅವರು ಚೆನ್ನೈಯಲ್ಲಿ ಹಂದೆ ಆಸ್ಪತ್ರೆ ಸ್ಥಾಪಿಸಿದರು. ರಾಜಕೀಯದಲ್ಲಿ ಕುಶಲತೆ ಸಾಧಿಸಿದ ಅವರು ಮುಖ್ಯಮಂತ್ರಿ ಎಂ.ಜಿ.ಆರ್. ಅವರ ಅನಾರೋಗ್ಯ ಸಂದರ್ಭದಲ್ಲಿ ಸರ್ಕಾರ ಮುನ್ನಡೆಸಿದವರು. ‘ಕಂಬ ರಾಮಾಯಣ’ವನ್ನು ಇಂಗ್ಲಿಷ್, ತಮಿಳಿಗೆ ಭಾಷಾಂತರಿಸಿದ ಹಂದೆ ಅವರು ಸಾಹಿತ್ಯ ವಲಯದಲ್ಲಿಯೂ ಗುರುತಿಸಿಕೊಂಡವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.