ADVERTISEMENT

ಆಳ–ಅಗಲ: ಪ್ಯಾನ್‌ 2.0– ತೆರಿಗೆದಾರರ ನೋಂದಣಿ ಸೇವೆಗಳ ಹೊಸ ರೂಪ

ದೇಶದ ತೆರಿಗೆ ವ್ಯವಸ್ಥೆ ಮತ್ತು ತೆರಿಗೆದಾರರ ನೋಂದಣಿ ಸೇವೆಗಳನ್ನು ಮತ್ತಷ್ಟು ಸರಳೀಕರಿಸುವ ಹಾಗೂ ಸಂಪೂರ್ಣವಾಗಿ ಡಿಜಿಟಲೀಕರಿಸುವ ಮಹತ್ವದ ‘ಪ್ಯಾನ್‌ 2.0’

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2024, 0:28 IST
Last Updated 9 ಡಿಸೆಂಬರ್ 2024, 0:28 IST
<div class="paragraphs"><p>ಆಳ–ಅಗಲ: ಪ್ಯಾನ್‌ 2.0– ತೆರಿಗೆದಾರರ ನೋಂದಣಿ ಸೇವೆಗಳ ಹೊಸ ರೂಪ</p></div>

ಆಳ–ಅಗಲ: ಪ್ಯಾನ್‌ 2.0– ತೆರಿಗೆದಾರರ ನೋಂದಣಿ ಸೇವೆಗಳ ಹೊಸ ರೂಪ

   

ದೇಶದ ತೆರಿಗೆ ವ್ಯವಸ್ಥೆ ಮತ್ತು ತೆರಿಗೆದಾರರ ನೋಂದಣಿ ಸೇವೆಗಳನ್ನು ಮತ್ತಷ್ಟು ಸರಳೀಕರಿಸುವ ಹಾಗೂ ಸಂಪೂರ್ಣವಾಗಿ ಡಿಜಿಟಲೀಕರಿಸುವ ಮಹತ್ವದ ‘ಪ್ಯಾನ್‌ 2.0’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಹಣಕಾಸು ವ್ಯವಹಾರಗಳ ಸಂಪುಟ ಸಮಿತಿ ನವೆಂಬರ್‌ 25ರಂದು ಒಪ್ಪಿಗೆ ನೀಡಿದೆ. ಆದಾಯ ತೆರಿಗೆ ಇಲಾಖೆ ಅನುಷ್ಠಾನಗೊಳಿಸಲಿರುವ ಈ ಯೋಜನೆಗೆ ₹1,435 ಕೋಟಿ ವೆಚ್ಚವಾಗಲಿದೆ. ‘ಪ್ಯಾನ್‌ 2.0 ಯೋಜನೆಯಿಂದಾಗಿ ದೇಶದ ತೆರಿಗೆ ವ್ಯವಸ್ಥೆಯು ಹೆಚ್ಚು ಪರಿಣಾಮಕಾರಿ, ಸುರಕ್ಷಿತ ಮತ್ತು ಸುಲಭವಾಗಿ ಲಭ್ಯವಾಗುವ ಮೂಲಕ ತೆರಿಗೆದಾರರು, ಉದ್ದಿಮೆಗಳಿಗೆ ಅನುಕೂಲವಾಗಲಿದೆ. ಯೋಜನೆಯಿಂದ ಹಣಕಾಸು ವ್ಯವಹಾರದ ಪಾರದರ್ಶಕತೆ ಇನ್ನಷ್ಟು ಹೆಚ್ಚಲಿದೆ’ ಎಂದು ಸರ್ಕಾರ ಹೇಳಿದೆ. ಹೊಸ ಯೋಜನೆ ಜಾರಿ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ.

––––

ADVERTISEMENT

ಏನಿದು ಪ್ಯಾನ್‌ 2.0?

‘ಪ್ಯಾನ್‌’ ಅಥವಾ ‘PAN’ ಎನ್ನುವುದು PERMANENT ACCOUNT NUMBER ನ ಸಂಕ್ಷಿಪ್ತ ರೂಪ. ಅಂಕಿ ಮತ್ತು ಅಕ್ಷರಗಳನ್ನೊಳಗೊಂಡ (Alphanumeric) 10 ಅಂಕಿಗಳ ಸಂಖ್ಯೆಯೇ ‘ಪ್ಯಾನ್‌’. ಆದಾಯ ತೆರಿಗೆ ಪಾವತಿದಾರರು, ಉದ್ದಿಮೆಗಳು ಕಡ್ಡಾಯವಾಗಿ ಹೊಂದಿರಬೇಕಾದ ಶಾಶ್ವತ ಸಂಖ್ಯೆ ಇದು. ಆದಾಯ ತೆರಿಗೆ ಇಲಾಖೆಯು ಈ ಸಂಖ್ಯೆಯನ್ನು ಹೊಂದಿದ ಕಾರ್ಡ್‌ ಅನ್ನು ತೆರಿಗೆದಾರರಿಗೆ ವಿತರಿಸುತ್ತದೆ. 1972ರಲ್ಲಿ ಮೊದಲ ಬಾರಿಗೆ ದೇಶದಲ್ಲಿ ಪ್ಯಾನ್‌ ಅನ್ನು ಪರಿಚಯಿಸಲಾಗಿತ್ತು. ಐದು ದಶಕಗಳಲ್ಲಿ  ದೇಶದ ತೆರಿಗೆ ವ್ಯವಸ್ಥೆ, ತೆರಿಗೆದಾರರ ನೋಂದಣಿ ಸೇವೆಗಳಲ್ಲಿ ಹಲವು ಬದಲಾವಣೆಗಳಾಗಿವೆ.

ಪ್ಯಾನ್‌ ಮಾದರಿಯಲ್ಲೇ ಇರುವ 10 ಅಂಕಿಗಳನ್ನೊಳಗೊಂಡ (ಅಕ್ಷರಗಳ ಸಹಿತ) ಮತ್ತೊಂದು ಸಂಖ್ಯೆ ಟ್ಯಾನ್‌/ TAN (TAX DEDUCTION AND COLLECTION ACCOUNT NUMBER). ತೆರಿಗೆಯನ್ನು ಮೂಲದಲ್ಲೇ ಕಡಿತಗೊಳಿಸುವ ಅಥವಾ ಸಂಗ್ರಹಿಸುವವರು (ಸಾಮಾನ್ಯವಾಗಿ ಉದ್ಯೋಗದಾತ ಕಂಪನಿಗಳು/ಉದ್ದಿಮೆಗಳು) ಟ್ಯಾನ್‌ ಹೊಂದಿರುತ್ತಾರೆ.

ಪ್ಯಾನ್‌ ಮತ್ತು ಟ್ಯಾನ್‌ ಸಹಿತ ತೆರಿಗೆದಾರರ ನೋಂದಣಿ ಸೇವೆಗಳೂ ಸೇರಿದಂತೆ ದೇಶದ ಒಟ್ಟಾರೆ ತೆರಿಗೆ ವ್ಯವಸ್ಥೆಯನ್ನು ಆಧುನಿಕ ಡಿಜಿಟಲ್‌ ತಂತ್ರಜ್ಞಾನಕ್ಕೆ ಅನುಗುಣವಾಗಿ ಮೇಲ್ದರ್ಜೆಗೆ ಏರಿಸುವ ಗುರಿಯೊಂದಿಗೆ ಆದಾಯ ತೆರಿಗೆ ಇಲಾಖೆ ರೂಪಿಸಿರುವ ಬಳಕೆಸ್ನೇಹಿ ಹೊಸ ಯೋಜನೆಯೇ ಪ್ಯಾನ್‌ 2.0.

ವೈಶಿಷ್ಟ್ಯಗಳು ಏನು? ಈಗಿನದ್ದಕ್ಕಿಂತ ಹೇಗೆ ಭಿನ್ನ?

ಒಂದೇ ಪೋರ್ಟಲ್‌: ಸದ್ಯ ಪ್ಯಾನ್‌ಗೆ ಸಂಬಂಧಿಸಿದ ಸೇವೆಗಳನ್ನು ನೀಡಲು ಆದಾಯ ತೆರಿಗೆ ಇಲಾಖೆಯು ಇ–ಫೈಲಿಂಗ್‌ ಪೋರ್ಟಲ್‌, ಯುಟಿಐಐಟಿಎಸ್‌ಎಲ್‌ ಪೋರ್ಟಲ್‌ ಮತ್ತು ಪ್ರೊಟಿಯಾನ್‌ ಇ–ಗವರ್ನೆನ್ಸ್‌ ಪೋರ್ಟಲ್‌ಗಳನ್ನು ಬಳಸುತ್ತಿದೆ. ಪ್ಯಾನ್‌ 2.0 ಯೋಜನೆಯಲ್ಲಿ ಪ್ಯಾನ್‌/ಟ್ಯಾನ್‌ಗೆ ಸಂಬಂಧಿಸಿದ ಸಮಗ್ರ ಸೇವೆಗಳನ್ನು ನೀಡಲು ಇಲಾಖೆಯು ಒಂದೇ ಪೋರ್ಟಲ್‌ ಅನ್ನು ಅಭಿವೃದ್ಧಿ ಪಡಿಸಲಿದೆ. ಪ್ಯಾನ್‌/ಟ್ಯಾನ್‌ ಹಂಚಿಕೆ, ಮಾಹಿತಿ ಪರಿಷ್ಕರಣೆ, ತಿದ್ದುಪಡಿ, ಆನ್‌ಲೈನ್‌ ಪ್ಯಾನ್‌ ದೃಢೀಕರಣ (ಒಪಿವಿ), ನಿಮ್ಮ ತೆರಿಗೆ ಪರಿಶೀಲನಾ ಅಧಿಕಾಯನ್ನು ತಿಳಿದುಕೊಳ್ಳಿ (ನೋ ಯುವರ್‌ ಎಒ), ಆಧಾರ್‌–ಪ್ಯಾನ್‌ ಜೋಡಣೆ ಸ್ಥಿತಿಗತಿ ಪರಿಶೀಲನೆ, ಪ್ಯಾನ್‌ ದೃಢೀಕರಣ, ಇ–ಪ್ಯಾನ್‌ಗೆ ಅರ್ಜಿ ಸಲ್ಲಿಸುವುದು, ಪ್ಯಾನ್‌ ಕಾರ್ಡ್‌ ಮರು ಮುದ್ರಣಕ್ಕೆ ಅರ್ಜಿ ಹಾಕುವುದು ಸೇರಿದಂತೆ ಪ್ಯಾನ್‌/ಟ್ಯಾನ್‌ಗೆ  ಸಂಬಂಧಿಸಿದ ಎಲ್ಲ ಸೇವೆಗಳನ್ನೂ ತೆರಿಗೆದಾರರು ಈ ಪೋರ್ಟಲ್‌ನಲ್ಲಿ ಪಡೆಯಬಹುದು.

ಕಾಗದ ರಹಿತ: ಹೊಸ ವ್ಯವಸ್ಥೆಯಲ್ಲಿ ಎಲ್ಲ ಪ್ರಕ್ರಿಯೆಗಳೂ ಕಾಗದ ರಹಿತವಾಗಿರಲಿವೆ

ಉಚಿತ ಸೇವೆ: ಪ್ಯಾನ್‌ ಹಂಚಿಕೆ/ಪರಿಷ್ಕರಣೆ/ತಿದ್ದುಪಡಿ ಎಲ್ಲವೂ ಉಚಿತ. ಇ–ಪ್ಯಾನ್‌ ಅನ್ನು ಅರ್ಜಿದಾರರ ನೋಂದಾಯಿತ ಇ–ಮೇಲ್ ವಿಳಾಸಕ್ಕೆ ಆದಾಯ ತೆರಿಗೆ ಇಲಾಖೆ ಕಳುಹಿಸಲಿದೆ. ಮುದ್ರಿತ ಪ್ಯಾನ್‌ ಕಾರ್ಡ್‌ (ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ ಮಾದರಿಯ) ಬೇಕೆಂದಿದ್ದರೆ ಅರ್ಜಿದಾರ ₹50 ಶುಲ್ಕವನ್ನು ಪಾವತಿಸಬೇಕು. ಹೊಸ ಕಾರ್ಡ್‌ ಅನ್ನು ಭಾರತದಿಂದ ಹೊರಗಡೆ ಇರುವ ವಿಳಾಸಕ್ಕೆ ತಲುಪಿಸಬೇಕಾದರೆ ಅರ್ಜಿದಾರರು ₹15 ಮತ್ತು ಅಂಚೆ ಶುಲ್ಕ ಪಾವತಿಸಬೇಕು.

ಸಾಮಾನ್ಯ ಗುರುತಿನ ಸಂಖ್ಯೆ: ಸರ್ಕಾರಿ ಏಜೆನ್ಸಿಗಳ ಡಿಜಿಟಲ್‌ ವ್ಯವಸ್ಥೆಯಲ್ಲಿ ಗುರುತಿನ ದೃಢೀಕರಣಕ್ಕಾಗಿ ಈ ಪ್ಯಾನ್‌ ಕಾರ್ಡ್‌ ಅನ್ನು ಸಾಮಾನ್ಯ ಗುರುತಿನ ಸಂಖ್ಯೆಯಾಗಿ ಪರಿಗಣಿಸಲಾಗುತ್ತದೆ.

ಸಶಕ್ತ ಕ್ಯುಆರ್‌ ಕೋಡ್‌

ಪ್ಯಾನ್‌ ಕಾರ್ಡ್‌ಗಳಲ್ಲಿ ಕ್ಯುಆರ್‌ ಕೋಡ್‌ ಹೊಸದೇನಲ್ಲ. 2017–18ರಿಂದ ವಿತರಿಸಲಾಗುತ್ತಿರುವ ಎಲ್ಲ ಪ್ಯಾನ್‌ ಕಾರ್ಡ್‌ಗಳು ಕ್ಯುಆರ್‌ ಕೋಡ್‌ ಹೊಂದಿವೆ. ಪ್ಯಾನ್‌ 2.0 ಯೋಜನೆಯ ಪ್ಯಾನ್‌ ಕಾರ್ಡ್‌ಗಳು ಹೆಚ್ಚು ಸಶಕ್ತವಾದ ಅಂದರೆ, ಪ್ಯಾನ್ ದತ್ತಾಂಶ ಸಂಗ್ರಹದಲ್ಲಿರುವ ಪರಿಷ್ಕೃತ ಮಾಹಿತಿಗಳನ್ನು ನೀಡುವ ಕ್ಯುಆರ್‌ ಕೋಡ್‌ ಹೊಂದಿರಲಿವೆ. 2017–18ಕ್ಕೂ ಮೊದಲು ವಿತರಿಸಲಾದ (ಕ್ಯುಆರ್‌ ಕೋಡ್‌ ಹೊಂದಿಲ್ಲದ) ಪ್ಯಾನ್‌ ಕಾರ್ಡ್‌ಗಳನ್ನು ಹೊಂದಿರುವವರು ಈಗಿರುವ ವ್ಯವಸ್ಥೆಯಲ್ಲೇ ಕ್ಯುಆರ್‌ ಕೋಡ್‌ ಇರುವ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಇದೆ.

ಕ್ಯುಆರ್‌ ಕೋಡ್‌ಗಳು ಪ್ಯಾನ್‌ ಹಾಗೂ ಅದರಲ್ಲಿನ ವಿವರಗಳನ್ನು ದೃಢೀಕರಿಸಲು ಸಹಾಯ ಮಾಡುತ್ತವೆ. ಸದ್ಯ ಮಾಹಿತಿಗಳನ್ನು ಪರಿಶೀಲಿಸುವುದಕ್ಕಾಗಿ ಪ್ರತ್ಯೇಕವಾದ ಕ್ಯುಆರ್‌ ರೀಡರ್‌ ಅಪ್ಲಿಕೇಷನ್‌ ಇದೆ. ಆ ಆ್ಯಪ್‌ ಮೂಲಕ ಕೋಡ್‌ ಸ್ಕ್ಯಾನ್‌ ಮಾಡಿದಾಗ ಕಾರ್ಡ್‌ದಾರರ ಪೂರ್ಣ ವಿವರಗಳನ್ನು (ಫೋಟೊ, ಹೆಸರು, ಸಹಿ, ತಂದೆಯ ಹೆಸರು, ಜನ್ಮದಿನಾಂಕ) ತೋರಿಸುತ್ತದೆ.

ಒಂದಕ್ಕಿಂತ ಹೆಚ್ಚು ಪ್ಯಾನ್‌ ಹೊಂದಿದ್ದರೆ?

1961ರ ಆದಾಯ ತೆರಿಗೆ ಕಾಯ್ದೆ ಪ್ರಕಾರ, ಒಬ್ಬರು ಒಂದೇ ಪ್ಯಾನ್‌ ಹೊಂದಿರಬೇಕು. ಒಂದಕ್ಕಿಂತ ಹೆಚ್ಚು ಪ್ಯಾನ್‌ ಹೊಂದಿದ್ದರೆ, ಕಾರ್ಡ್‌ದಾರರು ತಮ್ಮ ವ್ಯಾಪ್ತಿಯ ತೆರಿಗೆ ಪರಿಶೀಲನಾ ಅಧಿಕಾರಿಯ ಗಮನಕ್ಕೆ ತಂದು ಹೆಚ್ಚುವರಿ ಪ್ಯಾನ್‌ ಅನ್ನು ಡಿಲೀಟ್‌ ಮಾಡಬೇಕು ಅಥವಾ ನಿಷ್ಕ್ರಿಯಗೊಳಿಸಬೇಕು.

ಪ್ಯಾನ್‌ 2.0 ಯೋಜನೆಯಲ್ಲಿ ಸುಧಾರಿತ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದರಿಂದ ಹೆಚ್ಚುವರಿ ಪ್ಯಾನ್‌ ಗುರುತಿಸಬಹುದು ಅಥವಾ ಅರ್ಜಿದಾರರೊಬ್ಬರು ಒಂದಕ್ಕಿಂತ ಹೆಚ್ಚು ಬಾರಿ ಪ್ಯಾನ್‌ಗೆ ಮನವಿ ಸಲ್ಲಿಸಿರುವುದನ್ನು ಪತ್ತೆ ಹಚ್ಚಬಹುದಾಗಿದೆ. ಅಲ್ಲದೇ ಹೊಸ ವ್ಯವಸ್ಥೆಯು ಕೇಂದ್ರೀಕೃತವಾಗಿರಲಿದ್ದು, ಅತ್ಯಾಧುನಿಕವೂ ಆಗಿರಲಿದೆ. ಹೀಗಾಗಿ, ವ್ಯಕ್ತಿಯೊಬ್ಬರು ಒಂದಕ್ಕಿಂತ ಹೆಚ್ಚು ಪ್ಯಾನ್‌ ಹೊಂದಿರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. 

ನಡೆದು ಬಂದ ಹಾದಿ

ಪ್ಯಾನ್‌ 2.0 ಯೋಜನೆಯ ಸಂಕ್ಷಿಪ್ತ ನೋಟ

* ಪ್ಯಾನ್‌/ಟ್ಯಾನ್‌ಗೆ ಸಂಬಂಧಿಸಿದ ಎಲ್ಲ ಸೇವೆಗಳಿಗೆ ಜನಸ್ನೇಹಿಯಾಗಿರುವ ಒಂದೇ ಪೋರ್ಟಲ್‌

* ಪರಿಸರ ಸ್ನೇಹಿ, ಕಾಗದ ರಹಿತ ಸೇವೆಗಳಿಗೆ ಒತ್ತು. ಆನ್‌ಲೈನ್‌ನಲ್ಲಿ ಸುಲಭ ಸೇವೆ 

* ಯಾವುದೇ ಶುಲ್ಕವಿಲ್ಲದೆ ಪ್ಯಾನ್ ನೀಡಿಕೆ. ಅರ್ಜಿದಾರರಿಗೆ ಕಡಿಮೆ ಅವಧಿಯಲ್ಲಿ ಪ್ಯಾನ್‌ ವಿತರಣೆ

* ವೈಯಕ್ತಿಕ ಮತ್ತು ಜನಸಂಖ್ಯೆಗೆ ಸಂಬಂಧಿಸಿದ ದತ್ತಾಂಶಗಳ ರಕ್ಷಣೆಗೆ ‘ಪ್ಯಾನ್‌ ಡೇಟಾ ವಾಲ್ಟ್‌’ ಸೇರಿದಂತೆ ಹೆಚ್ಚು ಅತ್ಯಾಧುನಿಕವಾದ ಸುರಕ್ಷಾ ಕ್ರಮಗಳು 

* ಜನರ ಪ್ರಶ್ನೆಗಳಿಗೆ ಉತ್ತರಿಸಲು ಮತ್ತು ಕುಂದುಕೊರತೆಗಳನ್ನು ಪರಿಹರಿಸಲು ಪ್ರತ್ಯೇಕ ಕಾಲ್‌ ಸೆಂಟರ್‌ ಮತ್ತು ಸಲಹಾ ಕೇಂದ್ರ ಸ್ಥಾಪನೆ.

ದತ್ತಾಂಶ ಸುರಕ್ಷಿತವೇ?

ಹೊಸ ಯೋಜನೆಯಲ್ಲಿ ತೆರಿಗೆದಾರರ ನೋಂದಣಿಯ ಡಿಜಿಟಲ್‌ ಪ್ರಕ್ರಿಯೆ ಸುಗಮಗೊಳಿಸಲು ಮತ್ತು ದತ್ತಾಂಶಗಳ ರಕ್ಷಣೆಗಾಗಿ ಜಾಗತಿಕ ಮಟ್ಟದ ಮಾನದಂಡಗಳನ್ನು ಪಾಲಿಸಲಾಗುತ್ತದೆ. ಗುಣಮಟ್ಟ, ಭದ್ರತೆ ಮತ್ತು ಸೇವಾ ನಿರ್ವಹಣೆಗಾಗಿ ಐಎಸ್‌ಒ ಪ್ರಮಾಣಪತ್ರ ಹೊಂದಿರುವುದನ್ನು ಖಾತರಿ ಪಡಿಸಲಾಗುತ್ತದೆ. ಪ್ಯಾನ್‌ 2.0 ಯೋಜನೆಯು ಕೇಂದ್ರೀಕೃತ ದತ್ತಾಂಶ ಸಂಗ್ರಹ ಕೋಠಿಯನ್ನು ಹೊಂದಿರಲಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಲಭ್ಯವಿರುವ ಸುರಕ್ಷತಾ ಕ್ರಮಗಳು,  ‘ಪ್ಯಾನ್‌ ಡೇಟಾ ವಾಲ್ಟ್‌’ನಂತಹ ಸದೃಢ ಭದ್ರತಾ ವ್ಯವಸ್ಥೆಯನ್ನು ಹೊಂದಿರಲಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

ಹಾಲಿ ಪ್ಯಾನ್‌ ಕಾರ್ಡ್‌ದಾರರು ಹೊಸ ಕಾರ್ಡ್‌ ಮಾಡಿಸಬೇಕೇ?

ಈಗಾಗಲೇ ಪ್ಯಾನ್‌ ಕಾರ್ಡ್‌ ಹೊಂದಿರುವವರು ಹೊಸ ಯೋಜನೆ ಜಾರಿಯಾದ ಬಳಿಕ ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕಾಗಿಲ್ಲ. ಈಗಿನ ಪ್ಯಾನ್‌ ಕಾನೂನುಬದ್ಧವಾಗಿರುತ್ತದೆ. ಈಗಿನಂತೆಯೇ ಅದನ್ನು ಬಳಸಬಹುದು.

ಪ್ಯಾನ್‌ ಕಾರ್ಡ್‌ನಲ್ಲಿ ವಿವರಗಳ ಪರಿಷ್ಕರಣೆ, ಹೆಸರು, ವಿಳಾಸ ಸೇರಿದಂತೆ ಇನ್ನಿತರ ತಿದ್ದುಪಡಿಗಳನ್ನು ಮಾಡಬೇಕಾಗಿದ್ದರೆ ಮಾತ್ರ ಹೊಸದಾಗಿ ಅರ್ಜಿ ಸಲ್ಲಿಸಬೇಕು.

ಪರಿಷ್ಕರಣೆ ಅಥವಾ ತಿದ್ದುಪಡಿಗಾಗಿ ಹೊಸ ಯೋಜನೆ ಜಾರಿಗೆ ಬರುವವರೆಗೆ ಕಾಯಬೇಕಾಗಿಯೂ ಇಲ್ಲ. ಈಗಿನ ವ್ಯವಸ್ಥೆಯ ಅಡಿಯಲ್ಲೇ (ಆಧಾರ್‌ ಆಧಾರಿತ ಆನ್‌ಲೈನ್‌ ಸೇವೆ ಅಥವಾ ಕೇಂದ್ರಗಳಿಗೆ ಭೇಟಿ ನೀಡಿ) ಅರ್ಜಿ ಸಲ್ಲಿಸಿ ಪರಿಷ್ಕೃತ/ತಿದ್ದುಪಡಿ ಮಾಡಿದ ಪ್ಯಾನ್‌ ಕಾರ್ಡ್‌ ಪಡೆಯಬಹುದು.

****

ಆಧಾರ: ಪಿಟಿಐ, ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌, ಪಿಐಬಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.