ಇಂದು ರಾತ್ರಿ ಆಕಾಶದಲ್ಲಿ ಅಪರೂಪದ ವಿದ್ಯಮಾನ ನಡೆಯಲಿದೆ. ಸೌರಮಂಡಲದ ಏಳು ಗ್ರಹಗಳು ಆಗಸದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಲಿವೆ. ಸೂರ್ಯಾಸ್ತದ ನಂತರ ಕಾಣಸಿಗುವ ಈ ಕೌತುಕಕ್ಕೆ ಜಗತ್ತೇ ಸಾಕ್ಷಿಯಾಗಲಿದೆ. ಮೂರು ನಾಲ್ಕು ಗ್ರಹಗಳು ಒಟ್ಟಾಗಿ ಕಾಣಿಸಿಕೊಳ್ಳುವುದು ಸಾಮಾನ್ಯವಾದರೂ ಆರೇಳು ಗ್ರಹಗಳು ಒಟ್ಟಾಗಿ ಗೋಚರಿಸುವುದು ಬಹಳ ಅಪರೂಪ. ಮುಂದಿನ 15 ವರ್ಷಗಳವರೆಗೆ ಏಳು ಗ್ರಹಗಳು ಒಟ್ಟಾಗಿ ಕಾಣಲು ಸಿಗವು ಎಂಬುದು ವಿಜ್ಞಾನಿಗಳ ಹೇಳಿಕೆ.
ಈ ವರ್ಷದ ಮೊದಲ ತಿಂಗಳಲ್ಲೇ ಆಗಸದಲ್ಲಿ ಸೌರ ಮಂಡಲದ ಆರು ಗ್ರಹಗಳು (ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್) ಒಟ್ಟಾಗಿ ಕಾಣಿಸಿಕೊಂಡು ನಕ್ಷತ್ರ ವೀಕ್ಷಕರು, ಗಗನ ಕುತೂಹಲಿಗಳನ್ನು ಅಚ್ಚರಿಗೆ ಕೆಡವಿದ್ದವು. ಶುಕ್ರವಾರ (ಫೆ.28) ಮತ್ತೊಂದು ಅಪರೂಪದ ಖಗೋಳ ವಿದ್ಯಮಾನಕ್ಕೆ ಈ ಜಗತ್ತು ಸಾಕ್ಷಿಯಾಗಲಿದೆ. ಈ ಆರು ಗ್ರಹಗಳ ಸಾಲಿಗೆ ಬುಧ ಗ್ರಹವೂ ಸೇರಿ ಸೌರ ಮಂಡಲದ ಇತರ ಎಲ್ಲ ಏಳು ಗ್ರಹಗಳೂ ಆಕಾಶದಲ್ಲಿ ‘ಪಥಸಂಚಲನ’ ನಡೆಸಲಿವೆ. ಮತ್ತೊಮ್ಮೆ ಇಂತಹ ಅಪರೂಪದ ವಿದ್ಯಮಾನಕ್ಕೆ ನಾವು ಸಾಕ್ಷಿಯಾಗಲು ಕನಿಷ್ಠ 15 ವರ್ಷ ಕಾಯಬೇಕು.
ಗ್ರಹಗಳು ಒಟ್ಟಿಗೆ ಗೋಚರಿಸುವುದು ಖಗೋಳ ವಿಜ್ಞಾನದಲ್ಲಿ ಸಾಮಾನ್ಯ ವಿದ್ಯಮಾನ. ಪ್ರತಿ ದಿನ ರಾತ್ರಿ ಶುಕ್ರ, ಗುರು, ಮಂಗಳ ಗ್ರಹ ಬರಿ ಕಣ್ಣಿಗೆ ಕಾಣಿಸುತ್ತವೆ. ಐದಕ್ಕಿಂತ ಹೆಚ್ಚು ಗ್ರಹಗಳು ಒಟ್ಟಾಗಿ ಕಾಣಿಸಿಕೊಳ್ಳುವುದು ಅಪರೂಪ. ಅದರಲ್ಲೂ ಏಳು ಗ್ರಹಗಳು ಒಂದೇ ಸಾಲಿನಲ್ಲಿ ಬರುವುದು ಇನ್ನೂ ಅಪರೂಪ. ಖಗೋಳ ವಿಜ್ಞಾನದಲ್ಲಿ ಇದನ್ನು ‘ಗ್ರಹಗಳ ಸಾಲುಗೂಡುವಿಕೆ’ (planetary alignment) ಎಂದು ಕರೆಯಲಾಗುತ್ತದೆ.
ಗ್ರಹಗಳು ಕಾಣುವುದೆಲ್ಲಿ?
ಹಲವು ಗ್ರಹಗಳು, ಏಕಕಾಲದಲ್ಲಿ ಸೂರ್ಯನಿಗೆ ಹತ್ತಿರವಾಗಿ ಒಂದು ಬದಿಗೆ ಬಂದಾಗ ಗ್ರಹಗಳ ಪಂಕ್ತಿ ಕಾಣಿಸುತ್ತದೆ. ಸಾಲು ಎಂದಾಕ್ಷಣ ಈ ಗ್ರಹಗಳು ಸರಳ ರೇಖೆಯಲ್ಲಿ ಇರುವುದಿಲ್ಲ. ವೈಜ್ಞಾನಿಕವಾಗಿ ‘ಇಕ್ಲಿಪ್ಟಿಕ್’ ಎಂದು ಕರೆಯಲಾಗುವ ಕಲ್ಪನಾ ಪಥ ಅಥವಾ ಕಕ್ಷೆಯಲ್ಲಿ ಈ ಗ್ರಹಗಳು ಕಾಣಿಸಿಕೊಳ್ಳುತ್ತವೆ. ‘ಇಕ್ಲಿಪ್ಟಿಕ್’ ಎನ್ನುವುದು ಅಧಿಕೃತ ಕಕ್ಷೆ ಅಥವಾ ಪಥವಲ್ಲ; ಭೂಮಿಯಿಂದ ಆಕಾಶವನ್ನು ನೋಡುವಾಗ ಸೂರ್ಯನು ವರ್ಷದ ಅವಧಿಯಲ್ಲಿ ನಕ್ಷತ್ರಗಳ ನಡುವೆ ಸಾಗಿದಂತೆ ಕಾಣುವ ಹಾದಿ. ಈ ಹಾದಿಯನ್ನು, ಸೂರ್ಯನ ಸುತ್ತಲಿನ ಭೂಮಿಯ ಕಕ್ಷೆಯನ್ನು ಒಳಗೊಂಡಿರುವ ಕಾಲ್ಪನಿಕ ಸಮತಲ ಎಂದು ನಾಸಾ ವಿವರಿಸುತ್ತದೆ.
ಭೂಮಿ ಸೇರಿದಂತೆ ಎಲ್ಲ ಗ್ರಹಗಳು ಇದೇ ಸಮತಲದಲ್ಲಿ ಸೂರ್ಯನ ಸುತ್ತ ತಿರುಗುವುದರಿಂದ ಎಲ್ಲ ಗ್ರಹಗಳು ರಾತ್ರಿ ಆಕಾಶದಲ್ಲಿ ಈ ಕಲ್ಪನಾ ಹಾದಿಯ ಆಸುಪಾಸಿನಲ್ಲೇ ಕಾಣಿಸಿಕೊಳ್ಳುತ್ತವೆ.
ತಿಂಗಳಿಂದ ಗೋಚರ
ಜನವರಿ 18ರಿಂದೀಚೆಗೆ ಐದಾರು ಗ್ರಹಗಳು ಸಾಲು ಸಾಲಾಗಿ ಒಟ್ಟಿಗೆ ಕಾಣಿಸಿಕೊಂಡು ಖಗೋಳ ವೀಕ್ಷಣೆಯನ್ನು ಹವ್ಯಾಸವನ್ನಾಗಿಸಿಕೊಂಡವರ ಕಣ್ಣಿಗೆ ಹಬ್ಬವನ್ನೇ ತಂದಿವೆ. ಕತ್ತಲಿನ ಶುಭ್ರ ಆಕಾಶದಲ್ಲಿ ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳು ಒಟ್ಟಾಗಿ ಕಾಣಿಸಿಕೊಂಡು ಅವರ ಸಂಭ್ರಮವನ್ನು ಹೆಚ್ಚಿಸಿವೆ. ಆರು ಗ್ರಹಗಳ ಪೈಕಿ ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳನ್ನು ಬಿಟ್ಟು ಉಳಿದವುಗಳು ಬರಿಗಣ್ಣಿಗೆ ಕಾಣಿಸಿಕೊಂಡರೆ, ಈ ಎರಡು ಗ್ರಹಗಳನ್ನು ನೋಡಲು ದೂರದರ್ಶಕ, ಬೈನಾಕ್ಯುಲರ್‌ಗಳನ್ನು ಗಗನ ಕುತೂಹಲಿಗಳು ಹಿಡಿಯಬೇಕಾಗಿತ್ತು.
ಆರು ಗ್ರಹಗಳ ‘ಪಥಸಂಚಲನ’ಕ್ಕೆ ಬುಧ ಗ್ರಹವೂ ಈಗ ಸೇರ್ಪಡೆಗೊಂಡಿದೆ. ಈ ತಿಂಗಳ ಕೊನೆಯ ದಿನ ಶುಕ್ರವಾರ ಸೌರ ಮಂಡಲದ ಉಳಿದ ಏಳೂ ಗ್ರಹಗಳು ಸಾಲಾಗಿ ಕಾಣಿಸಿಕೊಳ್ಳಲಿವೆ.
ಬುಧ ಗ್ರಹವು ಈ ತಿಂಗಳ 22ರಿಂದಲೇ ಕಾಣಿಸಿಕೊಳ್ಳಲು ಆರಂಭಿಸಿದೆ. ಆದರೆ, ಜಗತ್ತಿನ ಬಹುತೇಕ ಕಡೆಗಳಲ್ಲಿ ಏಳು ಗ್ರಹಗಳು ಶುಕ್ರವಾರದಂದು ಒಟ್ಟಾಗಿ ಕಾಣಿಸಿಕೊಳ್ಳಲಿವೆ ಎಂದು ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಸ್ಟಾರ್‌ವಾಕ್ ವೆಬ್‌ಸೈಟ್ ವರದಿ ಮಾಡಿದೆ. ಮಾರ್ಚ್ 1ರಿಂದ ಶನಿ ಗ್ರಹವು ಗ್ರಹಗಳ ಸಾಲಿನಿಂದ ಮರೆಯಾಗಲಿದೆ. ಇದರೊಂದಿಗೆ ಏಳು ಗ್ರಹಗಳ ಅಪರೂಪದ ಪಥಸಂಚಲನಕ್ಕೆ ತೆರೆ ಬೀಳಲಿದೆ.
ಈ ವರ್ಷದ ಆಗಸ್ಟ್‌ನಲ್ಲಿ ಮತ್ತೆ ನಾಲ್ಕು ಗ್ರಹಗಳು ಒಟ್ಟಾಗಿ ಕಾಣಲಿವೆ ಎಂದು ನಾಸಾ ಹೇಳಿದೆ.
ಯಾವಾಗ ವೀಕ್ಷಿಸಬಹುದು?
ಶುಕ್ರವಾರ ಸಂಜೆ ಸೂರ್ಯಾಸ್ತ ಆದ ನಂತರ ಈ ಅಪರೂಪದ ವಿದ್ಯಮಾನವನ್ನು ವೀಕ್ಷಿಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಭಾರತದಲ್ಲೂ ಎಲ್ಲ ಕಡೆಗಳಲ್ಲಿ ಈ ಖಗೋಳ ಕೌತುಕವನ್ನು ವೀಕ್ಷಿಸಬಹುದು. ಆಕಾಶ ಶುಭ್ರವಾಗಿರಬೇಕಷ್ಟೆ
ಬುಧ, ಶುಕ್ರ, ಮಂಗಳ, ಗುರು, ಶನಿ ಗ್ರಹಗಳು ಬರಿ ಕಣ್ಣಿಗೆ ಗೋಚರಿಸಲಿವೆ ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳನ್ನು ವೀಕ್ಷಿಸಲು ಬೈನಾಕ್ಯುಲರ್ ಅಥವಾ ದೂರದರ್ಶಕದ ಸಹಾಯ ಬೇಕು
ಶುಕ್ರ ಮತ್ತು ಗುರು ಗ್ರಹವು ಹೆಚ್ಚು ಪ್ರಕಾಶಮಾನವಾಗಿರುವುದರಿಂದ ಗುರುತಿಸುವುದು ಸುಲಭ. ಮಂಗಳ ಗ್ರಹ ಕೊಂಚ ನಸುಗೆಂಪು ಬಣ್ಣದಲ್ಲಿ ಕಾಣಲಿದೆ
ಬುಧ ಮತ್ತು ಶನಿ ಗ್ರಹಗಳು ಸೂರ್ಯಾಸ್ತ ಆದ ಸ್ವಲ್ಪ ಹೊತ್ತಿನಲ್ಲೇ ದಿಗಂತದಿಂದ ಕೆಳಗೆ ಜಾರುವುದರಿಂದ ಇವುಗಳ ವೀಕ್ಷಣೆಗೆಗೆ ಕೆಲವು ನಿಮಿಷಗಳ ಅವಕಾಶವಷ್ಟೇ ಸಿಗಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಶುಕ್ರವಾರ, ಗುರು, ಮಂಗಳ ಗ್ರಹಗಳನ್ನು ದೀರ್ಘಾವಧಿಗೆ ವೀಕ್ಷಿಸಬಹುದು ಎಂದು ಅವರು ಹೇಳಿದ್ದಾರೆ
ಆಧಾರ: ನಾಸಾ, ಬಿಬಿಸಿ, ದಿ ನ್ಯೂಯಾರ್ಕ್ ಟೈಮ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.