ADVERTISEMENT

ಆಳ–ಅಗಲ | ಜನಸಂಖ್ಯೆ ಕುಸಿತ: ಉತ್ತರ–ದಕ್ಷಿಣ ಅಂತರ

ದಕ್ಷಿಣದ 5 ರಾಜ್ಯಗಳಲ್ಲಿ ಶಿಶು ಜನನ ಪ್ರಮಾಣ ಗಣನೀಯ ಕುಸಿತ

​ಪ್ರಜಾವಾಣಿ ವಾರ್ತೆ
Published 18 ಮೇ 2025, 19:30 IST
Last Updated 18 ಮೇ 2025, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
ದಕ್ಷಿಣದ ರಾಜ್ಯಗಳಲ್ಲಿ ಜನಸಂಖ್ಯೆ ಕಡಿಮೆ ಆಗುತ್ತಿದೆ ಎನ್ನುವ ಆತಂಕ ವ್ಯಾಪಕವಾಗುತ್ತಿರುವಾಗಲೇ, ಅದನ್ನು ಸಮರ್ಥಿಸುವ ಮತ್ತೊಂದು ವರದಿ ಬಿಡುಗಡೆಯಾಗಿದೆ. ಮಾದರಿ ನೋಂದಣಿ ವ್ಯವಸ್ಥೆಯ (ಎಸ್‌ಆರ್‌ಎಸ್‌) ಸಾಂಖ್ಯಿಕ ವರದಿಯನ್ನು (2021) ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿ ಬಿಡುಗಡೆ ಮಾಡಿದೆ. ದೇಶದ 13 ದೊಡ್ಡ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರೀಯ ಸರಾಸರಿ ಕುಸಿತಕ್ಕಿಂತ ಹೆಚ್ಚಿನ ವೇಗದಲ್ಲಿ ಶಿಶು ಜನನ ಪ್ರಮಾಣ ಕುಸಿಯುತ್ತಿದೆ ಎಂದು ವರದಿ ಹೇಳುತ್ತಿದೆ. ತಮಿಳುನಾಡು, ಕೇರಳ, ದೆಹಲಿ ರಾಜ್ಯಗಳಲ್ಲಿ ಈ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ದುಪ್ಪಟ್ಟಾಗಿದೆ. ಜನನ ಪ್ರಮಾಣವು ತ್ವರಿತವಾಗಿ ಕುಸಿಯುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಸೇರಿದಂತೆ ದಕ್ಷಿಣದ ಎಲ್ಲ ರಾಜ್ಯಗಳೂ ಸ್ಥಾನ ಪಡೆದಿವೆ.

ಮಾದರಿ ನೋಂದಣಿ ವ್ಯವಸ್ಥೆ (ಎಸ್‌ಆರ್‌ಎಸ್‌), ಜನಸಂಖ್ಯೆಯ ಸ್ವರೂಪಕ್ಕೆ ಸಂಬಂಧಿಸಿದ ದೇಶದ ಅತಿ ದೊಡ್ಡ ಸಮೀಕ್ಷೆಯಾಗಿದೆ. ಇದು ಜನನ, ಮರಣ ಪ್ರಮಾಣಗಳ ವಾರ್ಷಿಕ ಅಂದಾಜು ಸೇರಿದಂತೆ ಹಲವು ಮಾಹಿತಿ ನೀಡುತ್ತದೆ. ಇತ್ತೀಚೆಗೆ ಬಿಡುಗಡೆ ಆಗಿರುವ ಎಸ್‌ಆರ್‌ಎಸ್‌–21 ದೇಶದಲ್ಲಿ ಜನಸಂಖ್ಯೆಯ ಏರಿಳಿತದ ಪ್ರವೃತ್ತಿಗಳನ್ನು ತೋರಿಸುತ್ತದೆ.

ಎಸ್‌ಆರ್‌ಎಸ್‌ ದತ್ತಾಂಶದ ಪ್ರಕಾರ, ಅಖಿಲ ಭಾರತ ಶಿಶು ಜನನ ಪ್ರಮಾಣವು (ಕ್ರೂಡ್ ಬರ್ಥ್ ರೇಟ್–  ಒಂದು ನಿರ್ದಿಷ್ಟ ಅವಧಿಯಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ ಜನನ ಪ್ರಮಾಣ) 2021ರಲ್ಲಿ 19.3 ಆಗಿತ್ತು. 2016ರಿಂದ 2021ರವರೆಗೆ ಪ್ರತಿ ವರ್ಷ ಜನನ ಪ್ರಮಾಣವು ಶೇ 1.12ರಷ್ಟು ಕುಸಿಯುತ್ತಲೇ ಬಂದಿದೆ.

13 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕುಸಿತದ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತಲೂ (ಶೇ 1.12) ಹೆಚ್ಚಾಗಿದೆ. 2016–21ರ ನಡುವೆ ತಮಿಳುನಾಡಿನಲ್ಲಿ ಪ್ರತಿವರ್ಷದ ಕುಸಿತದ ಪ್ರಮಾಣವು ಶೇ 2.35ರಷ್ಟು ಆಗಿದೆ. ದೆಹಲಿಯಲ್ಲಿ ಈ ಪ್ರಮಾಣ ಶೇ 2.23 ಇದ್ದರೆ, ಕೇರಳದಲ್ಲಿ ಶೇ 2.05ರಷ್ಟು ಇದೆ. ಈ ಪಟ್ಟಿಯಲ್ಲಿ ದಕ್ಷಿಣದ ಇತರ ರಾಜ್ಯಗಳಾದ ತೆಲಂಗಾಣ (ಶೇ 1.67), ಕರ್ನಾಟಕ (ಶೇ 1.65) ಮತ್ತು ಆಂಧ್ರಪ್ರದೇಶ ಕೂಡ (ಶೇ 1.26) ಸ್ಥಾನ ಪಡೆದಿವೆ.

ADVERTISEMENT

ದಕ್ಷಿಣದ ರಾಜ್ಯಗಳ ಜತೆಗೆ, ದೇಶದ ಇತರ ಕೆಲವು ರಾಜ್ಯಗಳಲ್ಲೂ ಜನನ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು ಕುಸಿದಿದೆ. ಮಹಾರಾಷ್ಟ್ರ (ಶೇ 1.57), ಗುಜರಾತ್ (ಶೇ 1.24), ಒಡಿಶಾ (ಶೇ 1.34), ಹಿಮಾಚಲ ಪ್ರದೇಶ (ಶೇ 1.29), ಹರಿಯಾಣ (ಶೇ 1.21), ಜಮ್ಮು ಮತ್ತು ಕಾಶ್ಮೀರ (ಶೇ 1.47) ಮತ್ತು ಪಂಜಾಬ್ ರಾಜ್ಯಗಳಲ್ಲಿಯೂ ಶಿಶು ಜನನ ಪ್ರಮಾಣದಲ್ಲಿ ಕುಸಿತ ಆಗಿದೆ. 

ದಕ್ಷಿಣಕ್ಕೆ ಹೋಲಿಸಿದರೆ ಉತ್ತರದ ರಾಜ್ಯಗಳಲ್ಲಿ ಶಿಶು ಜನನ ಪ್ರಮಾಣ ಹೆಚ್ಚೇನೂ ಕಡಿಮೆ ಆಗಿಲ್ಲ. ಈ ಪೈಕಿ ಅತಿ ಕಡಿಮೆ ಕುಸಿತ ಉಂಟಾಗಿರುವುದು ರಾಜಸ್ಥಾನ (0.48%), ಬಿಹಾರ (ಶೇ 0.86), ಛತ್ತೀಸಗಢ (ಶೇ 0.98), ಜಾರ್ಖಂಡ್ (ಶೇ 0.98) ರಾಜ್ಯಗಳಲ್ಲಿ. ಅಸ್ಸಾಂ (ಶೇ 1.05), ಮಧ್ಯಪ್ರದೇಶ (1.05), ಪಶ್ಚಿಮ ಬಂಗಾಳ (ಶೇ 1.08), ಉತ್ತರ ಪ್ರದೇಶ (1.09) ರಾಜ್ಯಗಳಲ್ಲಿಯೂ ಶಿಶು ಜನನ ಪ್ರಮಾಣದಲ್ಲಿ ಕುಸಿತ ಉಂಟಾಗಿದೆ. ಈ ಅವಧಿಯಲ್ಲಿ ಶಿಶು ಜನನ ಪ್ರಮಾಣವು ಹೆಚ್ಚಳವಾಗಿರುವ ಏಕೈಕ ರಾಜ್ಯ ಉತ್ತರಾಖಂಡ ಆಗಿದೆ.

ಉತ್ತರದ ರಾಜ್ಯಗಳಲ್ಲಿ ಮಹಿಳೆಯರ ಸಾಕ್ಷರತಾ ಪ್ರಮಾಣ ಕಡಿಮೆ ಇರುವುದು, ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವಾ ಸೌಕರ್ಯಗಳು ಸಮರ್ಪಕವಾಗಿ ಇಲ್ಲದಿರುವುದು, ಚಿಕ್ಕವಯಸ್ಸಿನಲ್ಲೇ ಮದುವೆ ಆಗುವುದು ಸೇರಿದಂತೆ ಹಲವು ರೀತಿಯ ಸಾಂಸ್ಕೃತಿಕ, ಸಾಮಾಜಿಕ ಅಂಶಗಳು ಜನನ ಪ್ರಮಾಣ ಹೆಚ್ಚಾಗಿರುವುದಕ್ಕೆ ಕಾರಣ.

.

ಟಿಎಫ್‌ಆರ್ ಕುಸಿತ: ದಕ್ಷಿಣದ ಐದು ರಾಜ್ಯಗಳಲ್ಲಿ ಒಟ್ಟು ಫಲವಂತಿಕೆ ದರವು (ಟಿಎಫ್‌ಆರ್) ಒಬ್ಬ ಮಹಿಳೆಗೆ 1.5 ಮತ್ತು 1.6 ಮಕ್ಕಳಷ್ಟು ಇದೆ. ಜನಸಂಖ್ಯೆಯ ಮಟ್ಟ ಕಾಯ್ದುಕೊಳ್ಳಲು 2.1ರಷ್ಟು ಫಲವಂತಿಕೆ ದರ ಅಗತ್ಯವಿದ್ದು, ದಕ್ಷಿಣದ ರಾಜ್ಯಗಳಲ್ಲಿ ಈ ಪ್ರಮಾಣ ಕಡಿಮೆ ಇದೆ. 

ಭಾರತದ ಒಟ್ಟಾರೆ ಟಿಎಫ್‌ಆರ್ 2.0 ಆಗಿದ್ದು, ಜನಸಂಖ್ಯೆ ಮಟ್ಟ ಕಾಯ್ದುಕೊಳ್ಳಲು ಅಗತ್ಯವಾದ ಪ್ರಮಾಣಕ್ಕಿಂತ ಸ್ವಲ್ಪ ಕಡಿಮೆ ಇದೆ. ಆದರೆ, ದಕ್ಷಿಣ ರಾಜ್ಯಗಳಲ್ಲಿ ಮಾತ್ರ ಟಿಎಫ್‌ಆರ್ ತೀರಾ ಕಡಿಮೆ ಇದೆ. ಕರ್ನಾಟಕದ ಟಿಆರ್‌ಎಫ್ 1.6 ಆಗಿದ್ದರೆ, ತೆಲಂಗಾಣ 1.6, ತಮಿಳುನಾಡು 1.5, ಕೇರಳ 1.5 ಮತ್ತು ಆಂಧ್ರಪ್ರದೇಶ 1.5 ಟಿಆರ್‌ಎಫ್ ಹೊಂದಿವೆ.‌ 

ಆದರೆ, ಉತ್ತರದ ರಾಜ್ಯಗಳ ಟಿಆರ್‌ಎಫ್ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ. ಬಿಹಾರ 3.0 ಟಿಆರ್‌ಎಫ್ ಹೊಂದಿದ್ದರೆ, ಉತ್ತರ ಪ್ರದೇಶ 2.7, ಮಧ್ಯಪ್ರದೇಶ 2.6, ಜಾರ್ಖಂಡ್ 2.3 ಮತ್ತು ರಾಜಸ್ಥಾನ 2.4 ಟಿಆರ್‌ಎಫ್ ಹೊಂದಿವೆ. 

ದಕ್ಷಿಣದ ರಾಜ್ಯಗಳಲ್ಲಿ ದಶಕಗಳಿಂದ ಮಹಿಳೆಯರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಅದರ ಪರಿಣಾಮವಾಗಿ ಮಹಿಳಾ ಸಾಕ್ಷರತೆ ಪ್ರಮಾಣ ಹೆಚ್ಚಾಗಿದೆ. ಜತೆಗೆ, ಮಹಿಳಾ ಉದ್ಯೋಗಿಗಳ ಸಂಖ್ಯೆಯೂ ಹೆಚ್ಚಾಗಿದೆ. ಆರೋಗ್ಯ ಸೇವಾ ವ್ಯವಸ್ಥೆ ಉತ್ತಮವಾಗಿರುವುದು, ತಡವಾಗಿ ವಿವಾಹವಾಗುವುದು ಫಲವಂತಿಕೆ ದರ ಕಡಿಮೆ ಇರಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ದಕ್ಷಿಣ ರಾಜ್ಯಗಳಲ್ಲಿ ಶಿಶುಗಳ ಲಿಂಗಾನುಪಾತ ಕೂಡ ಕಡಿಮೆ ಇರುವುದು ಗಮನಾರ್ಹ; ಗ್ರಾಮೀಣ ಮತ್ತು ನಗರಗಳ ನಡುವಿನ ಅಂತರವೂ ತೀರಾ ಕಡಿಮೆ ಆಗಿದೆ. 

ಶಿಶು ಜನನ ಪ್ರಮಾಣ, ಫಲವಂತಿಕೆ ದರ ಮುಂತಾದ ಅಂಶಗಳಲ್ಲಿ ಉತ್ತರ ಮತ್ತು ದಕ್ಷಿಣದ ರಾಜ್ಯಗಳ ನಡುವಿನ ವ್ಯತ್ಯಾಸವು ಗೆರೆ ಎಳೆದಷ್ಟು ಸ್ಪಷ್ಟವಾಗಿ ಕಾಣುತ್ತಿದೆ. ಇದು ದೇಶದ ಎರಡು ಭಾಗಗಳಲ್ಲಿನ ಜನಸಂಖ್ಯಾ ಸ್ವರೂಪಕ್ಕೆ ಕನ್ನಡಿ ಹಿಡಿಯುತ್ತಿದೆ. ಜನಸಂಖ್ಯೆಯ ಕುಸಿತವು ದಕ್ಷಿಣದಲ್ಲಿ ದೀರ್ಘಾಕಾಲದ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳನ್ನು ಉಂಟುಮಾಡಲಿದೆ ಎನ್ನುವ ಆತಂಕ ವ್ಯಕ್ತವಾಗಿದೆ. 

ಜನನ ಪ್ರಮಾಣ: ಯಾವ ವರ್ಷ ಎಷ್ಟು?

ಪರಿಣಾಮವೇನು?

* ಜನಸಂಖ್ಯಾ ಸ್ವರೂಪದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕಾದರೆ ಫಲವಂತಿಕೆ ದರ ಮತ್ತು ಶಿಶು ಜನನ ಪ್ರಮಾಣ ಉತ್ತಮವಾಗಿರುವುದು ಅಗತ್ಯ

* ಜನಸಂಖ್ಯೆ ಕುಸಿತವು ದೇಶದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯ ಮೇಲೆ ಪರಿಣಾಮ ಬೀರುತ್ತದೆ

* ಜನನ ಪ್ರಮಾಣ ಕುಸಿಯುತ್ತಾ ಹೋದರೆ ದೇಶದಲ್ಲಿ ಹೆಚ್ಚು ವಯಸ್ಸಿನವರ ಸಂಖ್ಯೆ ಹೆಚ್ಚಾಗುತ್ತದೆ. ಇದು ಕಾರ್ಮಿಕ ಬಲವನ್ನು ಕುಸಿಯುವಂತೆ ಮಾಡುತ್ತದೆ. ಇದರಿಂದ ಉದ್ದಿಮೆಗಳಿಗೆ ಕಾರ್ಮಿಕರ ಕೊರತೆ ಉಂಟಾಗುತ್ತದೆ

* ಹೆಚ್ಚಿನ ಸಂಖ್ಯೆಯಲ್ಲಿರುವ ಹಿರಿಯ ವಯಸ್ಸಿನವರು, ಕಡಿಮೆ ಸಂಖ್ಯೆಯಲ್ಲಿರುವ ಚಿಕ್ಕ ವಯೋಮಾನದವರ ಮೇಲೆ ಹೆಚ್ಚು ಅವಲಂಬಿಸಬೇಕಾಗಿ ಬರುತ್ತದೆ

* ಸಾಮಾಜಿಕ ಭದ್ರತಾ ವ್ಯವಸ್ಥೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸರ್ಕಾರವು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಸಂಪನ್ಮೂಲಗಳನ್ನು ವ್ಯಯಿಸಬೇಕಾಗುತ್ತದೆ

* ಪ್ರಾಂತ್ಯವಾರು ತಾರತಮ್ಯವನ್ನೂ ಕಾರಣಬಹುದು (ಉದಾ: ಉತ್ತರ ಭಾರತ ಮತ್ತು ದಕ್ಷಿಣ ಭಾರತ)

* ಲಿಂಗಾನುಪಾತದಲ್ಲಿ ವ್ಯತ್ಯಾಸ ಉಂಟಾಗಬಹುದು

2021ರ ಸಮೀಕ್ಷೆಯ ಪ್ರಮುಖ ಅಂಶಗಳು

* ಪ್ರತಿ 1,000 ಜನಸಂಖ್ಯೆಗೆ 19.3 ಮಕ್ಕಳು ಜನಿಸುತ್ತಾರೆ

* ಪ್ರತಿ 1,000 ಜನಸಂಖ್ಯೆಗೆ 7.5 ಸಾವು ಸಂಭವಿಸುತ್ತದೆ

* ಜನಿಸಿದ ಪ್ರತಿ 1,000 ಶಿಶುಗಳಲ್ಲಿ 27 ಶಿಶುಗಳು ಮೃತಪಡುತ್ತವೆ. ಶಿಶು ಮರಣ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. 2014ರಲ್ಲಿ ಈ ಪ್ರಮಾಣ 39 ಇತ್ತು  

* ಪ್ರತಿ ಲಕ್ಷ ಹೆರಿಗೆಗೆ 93 ಮಂದಿ ತಾಯಂದಿರು ಮೃತಪಡುತ್ತಿದ್ದಾರೆ. ಹಿಂದಿನ ಅಂಕಿ ಅಂಶಗಳಿಗೆ ಹೋಲಿಸಿದರೆ ಈ ಪ್ರಮಾಣದಲ್ಲೂ ಇಳಿಕೆಯಾಗಿದೆ.  

* ಫಲವಂತಿಕೆ ದರ ಸ್ಥಿರವಾಗಿದೆ (2.0)

* 2021ರಲ್ಲಿ ಬಿಹಾರದಲ್ಲಿ ಅತಿ ಹೆಚ್ಚು ಅಂದರೆ, 25.6ರಷ್ಟು ಶಿಶು ಜನನ ಪ್ರಮಾಣ ದಾಖಲಾಗಿದೆ. ಅತಿ ಕಡಿಮೆ ಜನನ ಪ್ರಮಾಣ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಸಮೂಹದಲ್ಲಿ (10.6) ವರದಿಯಾಗಿದೆ

* ಛತ್ತೀಸಗಢದಲ್ಲಿ ಅತಿ ಹೆಚ್ಚು ಅಂದರೆ 10.1ರಷ್ಟು ಮರಣ ಪ್ರಮಾಣ ದಾಖಲಾಗಿದೆ. ದೆಹಲಿ ಮತ್ತು ಚಂಡೀಗಢದಲ್ಲಿ ಅತಿ ಕಡಿಮೆ (5.4) ವರದಿಯಾಗಿದೆ

* ಅತಿ ಹೆಚ್ಚು ಶಿಶು ಮರಣ ಪ್ರಮಾಣ (41) ಮಧ್ಯ ಪ್ರದೇಶದಲ್ಲಿ ದಾಖಲಾಗಿದ್ದರೆ, ಮಣಿಪುರ, ಮಿಜೋರಾಂ ಮತ್ತು ಸಿಕ್ಕಿಂನಲ್ಲಿ ಅತಿ ಕಡಿಮೆ (4) ಶಿಶು ಮರಣ ಪ್ರಮಾಣ ದಾಖಲಾಗಿದೆ

* ಲಿಂಗಾನುಪಾತ ಸುಧಾರಣೆ ಕಂಡಿದ್ದು, ಪ್ರತಿ ಸಾವಿರ ಪುರುಷರಿಗೆ 913 ಮಹಿಳೆಯರಿದ್ದಾರೆ

ಸಮೀಕ್ಷೆ ಹೇಗೆ?‌‌

ನಗರ, ಗ್ರಾಮೀಣ ಪ್ರದೇಶಗಳ ಜನಸಂಖ್ಯೆಗೆ ಅನುಗುಣವಾಗಿ ನಿರ್ದಿಷ್ಟ ಘಟಕಗಳನ್ನಾಗಿ (ಯುನಿಟ್‌) ಮಾಡಿ ನಂತರ ಸಮೀಕ್ಷೆ ನಡೆಸಲಾಗಿದೆ. ಗ್ರಾಮೀಣ ಭಾಗದಲ್ಲಿ 4,959 ಮತ್ತು ನಗರ ಪ್ರದೇಶದಲ್ಲಿ 3,883 ಸೇರಿದಂತೆ ಒಟ್ಟು 8,842 ಮಾದರಿ ಘಟಕಗಳನ್ನು ಗುರುತಿಸಿ, ಸಮೀಕ್ಷೆ ನಡೆಸಲಾಗಿದೆ. ಒಟ್ಟು 84.45 ಲಕ್ಷ ಮಂದಿ ಈ ಸಮೀಕ್ಷೆಯ ಭಾಗವಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ 61.44 ಲಕ್ಷ ಮತ್ತು ನಗರ ಪ್ರದೇಶದಲ್ಲಿ 23.01 ಲಕ್ಷದಷ್ಟು ಮಾದರಿ ಜನಸಂಖ್ಯೆಯನ್ನು ಈ ಸಮೀಕ್ಷೆ ಒಳಗೊಂಡಿದೆ. 

ಆಧಾರ: ಕೇಂದ್ರ ಗೃಹ ಇಲಾಖೆಯ ಮಾದರಿ ನೋಂದಣಿ ವ್ಯವಸ್ಥೆಯ ಸಾಂಖ್ಯಿಕ ವರದಿ– 2021, ಪಿಐಬಿ ಪತ್ರಿಕಾ ಹೇಳಿಕೆ, ನ್ಯಾಷನಲ್‌ ಲೈಬ್ರೆರಿ ಆಫ್‌ ಮೆಡಿಸಿನ್‌ ವೆಬ್‌ಸೈಟ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.