ADVERTISEMENT

ಪ್ರಜಾವಾಣಿ 75 ನೇ ವರ್ಷಕ್ಕೆ ‘ಸಿನಿ ಸಮ್ಮಾನ’ದ ಮೆರುಗು– ಏನಿದರ ವಿಸ್ತಾರ?

ಕರುನಾಡಿನ ಪತ್ರಿಕೋದ್ಯಮದಲ್ಲಿ ಏಳು ದಶಕಗಳನ್ನು ಪೂರೈಸಿರುವ 'ಪ್ರಜಾವಾಣಿ' ಪತ್ರಿಕೆ ತನ್ನ ಅಮೃತ ಸಂಭ್ರಮದ ಅಂಗವಾಗಿ ಅನೇಕ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ.

​ಪ್ರಜಾವಾಣಿ ವಾರ್ತೆ
Published 1 ಮೇ 2023, 4:52 IST
Last Updated 1 ಮೇ 2023, 4:52 IST
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ‘ಪ್ರಜಾವಾಣಿ ಸಿನಿ ಸಮ್ಮಾನ’ ಟ್ರೋಫಿ ಅನಾವರಣ ಮಾಡಲಾಯಿತು
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ‘ಪ್ರಜಾವಾಣಿ ಸಿನಿ ಸಮ್ಮಾನ’ ಟ್ರೋಫಿ ಅನಾವರಣ ಮಾಡಲಾಯಿತು    –ಪ್ರಜಾವಾಣಿ ಚಿತ್ರ

ಕರುನಾಡಿನ ಪತ್ರಿಕೋದ್ಯಮದಲ್ಲಿ ಏಳು ದಶಕಗಳನ್ನು ಪೂರೈಸಿರುವ 'ಪ್ರಜಾವಾಣಿ' ಪತ್ರಿಕೆ ತನ್ನ ಅಮೃತ ಸಂಭ್ರಮದ ಅಂಗವಾಗಿ ಅನೇಕ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಕಥೆಗಾರರು, ಕವಿಗಳಿಗೆಲ್ಲ ಸ್ಪರ್ಧೆಗಳ ಮೂಲಕ ವೇದಿಕೆ ಒದಗಿಸಿ, ಗೌರವಿಸುತ್ತ ಬಂದಿರುವ ಪತ್ರಿಕೆ ರಂಗಭೂಮಿಗೂ ವಿಶಿಷ್ಟ ಸ್ಥಾನ ಕಲ್ಪಿ ಸಿದೆ. ಸಿನಿಮಾ ಕಲಾವಿದರನ್ನು ಪರಿಚಯಿಸುವಲ್ಲಿಯೂ ಹಿಂದೆ ಬಿದ್ದಿಲ್ಲ. ಈ ದಾರಿಯಲ್ಲಿ ಇನ್ನೊಂದು ಹೆಜ್ಜೆ ಮುಂದಿಟ್ಟು, ಈ ವರ್ಷದಿಂದ ಚಲನಚಿತ್ರ ರಂಗದ ಸಾಧಕರನ್ನು ಗುರುತಿಸಿ ಗೌರವಿಸುವಂತಹ ‘ಸಿನಿ ಸಮ್ಮಾನ’ ಕಾರ್ಯಕ್ರಮ ಹಮ್ಮಿಕೊಂಡಿದೆ.

ಉದ್ದೇಶವೇನು?

ಚಂದನವನದ ಪ್ರತಿಭೆಗಳನ್ನು ಗುರುತಿಸಲು ಮತ್ತು ಕನ್ನಡ ಚಿತ್ರರಂಗದ ಅಭೂತಪೂರ್ವ ಪರಂಪರೆಯನ್ನು ಎತ್ತಿಹಿಡಿಯಲು ʻಪ್ರಜಾವಾಣಿ ಕನ್ನಡ ಸಿನಿ ಸಮ್ಮಾನʼ ವೇದಿಕೆಯಾಗಬೇಕೆಂಬುದು ಈ ಕಾರ್ಯಕ್ರಮದ ಆಶಯ. ಸ್ಯಾಂಡಲ್‌ವುಡ್‌ನಲ್ಲಿರುವ ಅಸಾಧಾರಣ ಪ್ರತಿಭೆಗಳನ್ನು ಗುರುತಿಸಿ, ಪ್ರಶಂಸಿಸಿ, ಕನ್ನಡ ಚಿತ್ರರಂಗದ ಬೆಳವಣಿಗೆ ಉತ್ತೇಜನ ನೀಡುವ ಉದ್ದೇಶವಿದೆ.

ADVERTISEMENT

2022ರ ಜನವರಿ 1ರಿಂದ ಡಿಸೆಂಬರ್ 31ರವರೆಗೆ ಸೆನ್ಸಾರ್ ಮಂಡಳಿಯಿಂದ ಪ್ರಮಾಣೀಕೃತಗೊಂಡು ಬಿಡುಗಡೆಯಾದ ಚಿತ್ರಗಳನ್ನು ಕೆಲ ತಿಂಗಳುಗಳ ಹಿಂದೆ ಸಮ್ಮಾನಕ್ಕಾಗಿ ಪರಿಗಣಿಸಲು ಆಹ್ವಾನಿಸಲಾಗಿತ್ತು. ಈ ಆಯ್ಕೆ ಪ್ರಕ್ರಿಯೆ ವಿಶಿಷ್ಟವಾಗಿದೆ. ಚಿತ್ರರಂಗದವರು ಹಾಗೂ ಜನರನ್ನೂ ಒಳಗೊಳ್ಳುವಂತಹ ಆಲೋಚನೆ. ನಾಮನಿರ್ದೇಶಿತರ ಹಾಗೂ ವಿಜೇತರ ಕುರಿತಂತೆ ಯಾವುದೇ ಪೂರ್ವಗ್ರಹ ಇರಕೂಡದು ಎಂಬ ಎಚ್ಚರಿಕೆಯೂ ಇದಾಗಿದೆ.

ಆಯ್ಕೆ ಪ್ರಕ್ರಿಯೆ ಹೇಗೆ?

ಆಯ್ಕೆಯು ಯಾವುದೇ ವ್ಯಕ್ತಿಗಳು, ಸಂಸ್ಥೆಗಳ ಹಸ್ತಕ್ಷೇಪಕ್ಕೆ ಅವಕಾಶವಿಲ್ಲದಂತೆ ಅತ್ಯಂತ ಪಾರದರ್ಶಕ ಮತ್ತು ವೃತ್ತಿಪರವಾಗಿ ನಡೆಯುತ್ತಿದೆ. ಇಡೀ ಆಯ್ಕೆ ಪ್ರಕ್ರಿಯೆಯನ್ನು ಮೂರು ಸ್ತರಗಳಲ್ಲಿ ನಡೆಸಲಾಗುಸಲಾಗುತ್ತಿದೆ. ಆಹ್ವಾನದ ವೇಳೆಯೇ ತಿಳಿಸಲಾಗಿದ್ದ ನಮ್ಮೆಲ್ಲ ಮಾನದಂಡಗಳನ್ನು ಪೂರೈಸಿದ ಚಿತ್ರಗಳನ್ನು ಪರಿಗಣಿಸಲಾಗಿದೆ.  ಈ ಚಿತ್ರಗಳನ್ನು ನಮ್ಮ  20 ಪರಿಣತರ ತಾಂತ್ರಿಕ ತೀರ್ಪುಗಾರರ ಮಂಡಳಿ ವೀಕ್ಷಿಸಿ, ಪ್ರತಿ ವಿಭಾಗದಲ್ಲಿ ತಲಾ ಐದು ನಾಮನಿರ್ದೇಶನ ಮಾಡಿದೆ.

ತಾಂತ್ರಿಕ ತೀರ್ಪುಗಾರರ ಮಂಡಳಿಯಲ್ಲಿ ಸಿನಿಮಾ ರಂಗದಲ್ಲಿ ಅಪಾರ ಅನುಭವ ಹೊಂದಿರುವ ಸಂಗೀತ ನಿರ್ದೇಶಕ ವಿ.ಮನೋಹರ್‌, ನಿರ್ದೇಶಕ ಜಯತೀರ್ಥ, ಗೀತ ಸಾಹಿತಿ ಕವಿರಾಜ್‌, ನಟಿ ‘ಸ್ಪರ್ಶ’ ರೇಖಾ, ನಟ ಸಂಪತ್‌ ಕುಮಾರ್, ಗಾಯಕಿ ಎಂ.ಡಿ.ಪಲ್ಲವಿ, ಸಂಕಲನಕಾರ ಎಂ.ಎನ್‌.ಸ್ವಾಮಿ, ನಿರ್ದೇಶಕಿ ರೂಪಾರಾವ್‌, ಛಾಯಾಗ್ರಾಹಕ ಎಚ್‌.ಎಂ.ರಾಮಚಂದ್ರ, ಗ್ರೇಡಿಂಗ್ ತಂತ್ರಜ್ಞ ಸುನೀಲ್‌ ಕಾಮತ್‌ ಸಿನಿಮಾ ವಿಭಾಗದ ಪರಿಣತರಾಗಿದ್ದಾರೆ. ಸಿನಿಮಾ ಪತ್ರಿಕೋದ್ಯಮದಲ್ಲಿ ದಶಕಗಳ ಅನುಭವ ಹೊಂದಿರುವ, ಉತ್ತಮ ಸಿನಿಮಾ ವಿಮರ್ಶಕರೆನಿಸಿರುವ ಪ್ರೀತಿ ನಾಗರಾಜ್‌, ಗಂಗಾಧರ್‌ ಮೊದಲಿಯಾರ್‌, ಸಂಧ್ಯಾರಾಣಿ, ಪ್ರತಿಭಾ ನಂದಕುಮಾರ್‌, ವಿಶ್ವನಾಥ್‌,  ಪ್ರೇಮ್‌ಕುಮಾರ್‌ ಹರಿಯಬ್ಬೆ, ಶ್ರುತಿ, ಭಾಸ್ಕರ್‌ ರಾವ್‌, ಎಂ.ಕೆ.ರಾಘವೇಂದ್ರ, ಹರೀಶ್‌ ಮಲ್ಯ ಇದ್ದಾರೆ. 

ನಿರ್ದೇಶಕ ಗಿರೀಶ ಕಾಸರವಳ್ಳಿ ಮುಖ್ಯ ತೀರ್ಪುಗಾರರ ಸಮಿತಿ ಅಧ್ಯಕ್ಷರಾಗಿದ್ದಾರೆ. ನಾದಬ್ರಹ್ಮ ಹಂಸಲೇಖ, ನಟ ಪ್ರಕಾಶ್‌ ರಾಜ್‌, ನಿರ್ದೇಶಕ ಯೋಗರಾಜ್ ಭಟ್, ನಟಿ ಶ್ರುತಿ ಹರಿಹರನ್‌, ನಿರ್ದೇಶಕಿ ಸುಮನಾ ಕಿತ್ತೂರು, ಬೆಂಗಳೂರು ಚಿತ್ರೋತ್ಸವದ ಸಂಸ್ಥಾಪಕ ವಿದ್ಯಾಶಂಕರ್‌ ಈ ಸಮಿತಿಯಲ್ಲಿರುವ ಇತರ ಮುಖ್ಯ ತೀರ್ಪುಗಾರರು. ಎರಡನೇ ಹಂತದಲ್ಲಿ ಮುಖ್ಯ ತೀರ್ಪುಗಾರರ ಮಂಡಳಿಯಿಂದ ನಾಮನಿರ್ದೇಶನಗಳಿಗೆ ಅಂತಿಮರೂಪ ದೊರೆತಿದೆ.

ಇಡೀ ಪ್ರಶಸ್ತಿಯ ವಿಶಿಷ್ಟ ಮತ್ತು ಅನನ್ಯವಾದ ಹೆಜ್ಜೆ ಮೂರನೇ ಹಂತ. ವಿಜೇತರ ಆಯ್ಕೆಗಾಗಿ ಚಿತ್ರರಂಗದ ಸಾವಿರಕ್ಕೂ ಹೆಚ್ಚು ಮಂದಿಯಿಂದ ಮತದಾನ ನಡೆಯಲಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ ಸೇರಿದಂತೆ ಪ್ರಮುಖ ‌ಸಂಘ-ಸಂಸ್ಥೆಗಳ ‌ ಸದಸ್ಯರು ಮತದಾನದ ಮೂಲಕ ನಾಮನಿರ್ದೇಶಿತರಾದವರಲ್ಲಿ ಒಬ್ಬರನ್ನು ಆಯ್ಕೆ ಮಾಡುತ್ತಾರೆ. 

ನಂತರ ಮುಖ್ಯ ತೀರ್ಪುಗಾರರ ಮಂಡಳಿಯಿಂದ ಮೇಲಿನ ಮೂರು ಸ್ತರಗಳಿಂದಾದ ಆಯ್ಕೆಗೆ ಅಂತಿಮ ಅನುಮೋದನೆ ದೊರೆಯುತ್ತದೆ. ಕೊನೆಯ ಹಂತದಲ್ಲಿ  27ರಂದು ವಿಜೇತರ ಘೋಷಣೆಯಾಗಲಿದೆ. 15 ವಿಭಾಗಗಳಲ್ಲಿ ಅರ್ಹರ ಆಯ್ಕೆಗೆ ಈ ಪ್ರಕ್ರಿಯೆ ಅನ್ವಯವಾಗಲಿದೆ.

ಬೆಂಗಳೂರಿನಲ್ಲಿ ಶುಕ್ರವಾರ ನಡೆದ ‘ಪ್ರಜಾವಾಣಿ ಸಿನಿ ಸಮ್ಮಾನ’ ಟ್ರೋಫಿ ಅನಾವರಣವನ್ನು ನಿರ್ದೇಶಕ ಗಿರೀಶ ಕಾಸರವಳ್ಳಿ ಕ್ಲಾಪ್‌ ಮಾಡುವ ಮೂಲಕ ನಡೆಸಿದರು. ಸಿಇಒ ಸೀತಾರಾಮನ್‌ ಶಂಕರ್‌ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್‌ ಸಂಗೀತ ನಿರ್ದೇಶಕ ವಿ. ಮನೋಹರ್‌ ನಿರ್ದೆಶಕಿ ಸುಮನಾ ಕಿತ್ತೂರು ಹಂಸಲೇಖ ಹಾಗೂ ಎನ್‌. ವಿದ್ಯಾಶಂಕರ್‌ ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ

3 ಬಗೆ 24 ಪ್ರಶಸ್ತಿಗಳು

ಪ್ರಶಸ್ತಿಗಳ ವಿಭಾಗಗಳನ್ನು ಮೂರು ಬಗೆಗಳಲ್ಲಿ ವಿಂಗಡಿಸಲಾಗಿದೆ. ಮೊದಲನೆಯದು ‘ಅಸಾಧಾರಣ ಪ್ರತಿಭೆಯ ಚಿತ್ರಗಳು’. ಇದರ ಅಡಿಯಲ್ಲಿ ಶ್ರೇಷ್ಠ ನಟ ಶ್ರೇಷ್ಠ ನಟಿ ವರ್ಷದ ಸಿನಿಮಾ ಶ್ರೇಷ್ಠ ಪೋಷಕ ನಟಿ ಸೇರಿದಂತೆ ಇಡೀ ಚಲನಚಿತ್ರೋದ್ಯಮದ ಕೆಲಸವನ್ನು ಗುರುತಿಸಿ ಗೌರವಿಸುವಂತಹ ಒಟ್ಟು 15 ಸಮ್ಮಾನಗಳಿವೆ. ಎರಡನೆಯದು ‘ಚಲನಚಿತ್ರ ಉದ್ಯಮಕ್ಕೆ ಹೊಸ ದಿಕ್ಕು ತೋರಿಸಬಲ್ಲ ಸಿನಿಮಾಗಳು’. ಈ ವಿಭಾಗದಡಿ ಶ್ರೇಷ್ಠ ಚಿತ್ರನಿರ್ಮಾಣ ವಿನ್ಯಾಸ (ಕಲೆ ಪ್ರಸಾಧನ ವಸ್ತ್ರಾಲಂಕಾರ ಮುಂತಾದವು)  ಜೀವಮಾನ ಸಾಧನೆ ಪ್ರಶಸ್ತಿ ಸಾಮಾಜಿಕ ಪರಿಣಾಮ ಬೀರಿದ ಚಿತ್ರಗಳು ವಿಎಫ್ಎಕ್ಸ್ ಎಸ್ ಎಫ್ ಎಕ್ಸ್ ಅತ್ಯುತ್ತಮ ಪೋಸ್ಟ್ ಪ್ರೊಡಕ್ಷನ್ ಅನಿಮೇಷನ್ ಪ್ರಶಸ್ತಿಗಳಿವೆ. 3ನೇಯದು ‘ಸಾರ್ವಜನಿಕರಿಂದ ಆಯ್ಕೆಯಾಗು ವ' ವಿಭಾಗಗಳನ್ನು ಒಳಗೊಂಡಿದೆ. ಇದರಡಿ ಶ್ರೇಷ್ಠ ನಟ ಶ್ರೇಷ್ಠ ನಟಿ ಅತ್ಯುತ್ತಮ ಚಿತ್ರ ಅತ್ಯುತ್ತಮ ಸಂಗೀತ ಪ್ರಶಸ್ತಿಗಳಿವೆ. ಇದಕ್ಕೆ ನಮ್ಮ ಓದುಗರು https://www.prajavani.net/cinesamman ತಾಣದಲ್ಲಿ ಮತದಾನ ಮಾಡುವ ಮೂಲಕ ನಿಮ್ಮ ನೆಚ್ಚಿನ ನಟ ನಟಿ ಸಿನಿಮಾಗಳನ್ನು ಆಯ್ಕೆ ಮಾಡಬಹುದು.

ತಾಂತ್ರಿಕ ತೀರ್ಪುಗಾರರ ಮಂಡಳಿ ತಜ್ಞರ (ಚಿತ್ರರಂಗ) ಪ್ರತಿಕ್ರಿಯೆ

ಪಾರದರ್ಶಕ ಪ್ರಕ್ರಿಯೆ

ಇಡೀ ಆಯ್ಕೆ ಪ್ರಕ್ರಿಯೆಯಲ್ಲಿ ಒಳ್ಳೆಯ ಸಿನಿಮಾ, ಕೆಟ್ಟ ಸಿನಿಮಾ, ಸುಮಾರಾಗಿರುವ ಸಿನಿಮಾಗಳನ್ನೂ ನೋಡಿರುವೆ. ಇದರಿಂದ ಕನ್ನಡ ಚಿತ್ರರಂಗ ಯಾವ ದಿಕ್ಕಿನತ್ತ ಹೋಗುತ್ತಿದೆ ಎಂಬ ಚಿತ್ರಣ ದೊರೆಯಿತು. ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿದೆ. ತೀರ್ಪುಗಾರರಿಗೆ ಪರಸ್ಪರ ಪರಿಚಯವೇ ಇರಲಿಲ್ಲ. ಹೀಗಾಗಿ ಯಾವುದೇ ಶಿಫಾರಸು, ಸ್ವ ಹಿತಾಸಕ್ತಿಗಳಿಗೆ ಅವಕಾಶ ಇರಲಿಲ್ಲ. ತುಂಬ ನ್ಯಾಯಯುತವಾದ ಆಯ್ಕೆ ನಡೆಯುತ್ತದೆ ಎಂಬದನ್ನು ಇಲ್ಲಿನ ಪ್ರತಿ ಹಂತದ ಆಯ್ಕೆ ಹೇಳುತ್ತಿದೆ. ‘ಪ್ರಜಾವಾಣಿ’ಗೆ ಕೆಲಸಕ್ಕೆ ಸೇರಬೇಕೆಂಬ ನನ್ನ ಬಹಳ ಹಿಂದಿನ ಆಸೆ ಈ ಮೂಲಕವಾದರೂ ನೆರವೇರಿದಂತಾಗಿದೆ!

ವಿ.ಮನೋಹರ್‌, ಸಂಗೀತ ನಿರ್ದೇಶಕ

ಒಬ್ಬರದ್ದೇ ಅಭಿಪ್ರಾಯವಿಲ್ಲ

ಇಡೀ ಆಯ್ಕೆಯ ಕಸರತ್ತು ಬಹಳ ವೃತ್ತಿಪರವಾಗಿದೆ. ಪ್ರಕ್ರಿಯೆ ವಿಸ್ತೃತವಾಗಿದೆ. ಯೋಚನೆ ಮಾಡಿ ಶೆಡ್ಯೂಲ್‌ ಮಾಡಿದ್ದಾರೆ ಅನ್ನಿಸಿತು. ಎಲ್ಲರಿಗೂ ನ್ಯಾಯಯುತವಾಗಿ ಸ್ಕೋರಿಂಗ್‌ ಆಗುವ ರೀತಿಯಲ್ಲಿತ್ತು. ತೀರ್ಪುಗಾರರ ಮಂಡಳಿಯಲ್ಲಿ ಕೂಡ ಒಬ್ಬರ ಅಭಿಪ್ರಾಯದಿಂದ ಫಲಿತಾಂಶ ವ್ಯತ್ಯಾಸವಾಗುವುದಕ್ಕೆ ಅವಕಾಶವಿಲ್ಲ. ಎಲ್ಲರೂ ನೀಡಿದ ಅಂಕಗಳಿಂದ ಆಯ್ಕೆ ಆಗುವ ರೀತಿಯಲ್ಲಿ ಪ್ರಕ್ರಿಯೆ ರೂಪಿಸಲಾಗಿದೆ. ಇದು ಉತ್ತಮ ಹೆಜ್ಜೆ. ತುಂಬಾ ಶಿಸ್ತಿನಿಂದ ಕೂಡಿದೆ.

ಎಂ.ಡಿ.ಪಲ್ಲವಿ, ಸ್ವರ ಸಂಯೋಜಕಿ,ಗಾಯಕಿ.

ವಿಶ್ವಾಸಾರ್ಹತೆ ಮುಖ್ಯವಾಗುತ್ತದೆ

ಆಯ್ಕೆ ಪ್ರಕ್ರಿಯೆ ತುಂಬ ಚೆನ್ನಾಗಿದೆ. ನಿಷ್ಪಕ್ಷಪಾತವಾಗಿದೆ. ಕಣ್ಣುತಪ್ಪಿನಿಂದಲೋ, ಯಾರೋ ಒಬ್ಬರ ಆಲೋಚನೆಯಿಂದಲೋ ಯಾವುದೇ ಪ್ರತಿಭೆಗೆ ಅನ್ಯಾಯವಾಗುವ ಪ್ರಮೇಯವೇ ಇಲ್ಲ. ಮೊದಲ ಹೆಜ್ಜೆಯಲ್ಲಿಯೇ ಈ ರೀತಿ ಪ್ರಕ್ರಿಯೆ ಆಯ್ಕೆ ಮಾಡಿಕೊಂಡಿರುವುದು ಸ್ವಾಗತಾರ್ಹ. ಪ್ರಶಸ್ತಿಗಳೇ ನಾಯಿಕೊಡೆಗಳಾಗಿರುವಂತಹ ದಿನದಲ್ಲಿ ಪ್ರಶಸ್ತಿ ನೀಡುವ ಸಂಸ್ಥೆಯ ವಿಶ್ವಾಸಾರ್ಹತೆ ಕೂಡ ಮುಖ್ಯವಾಗುತ್ತದೆ. ಕೊಡುವವರ ವಿಶ್ವಾಸಾರ್ಹತೆ ಮೇಲೆ ಪ್ರಶಸ್ತಿ ಮೌಲ್ಯ ನಿರ್ಧಾರವಾಗುತ್ತದೆ. ಆ ದಿಸೆಯಲ್ಲಿ ‘ಪ್ರಜಾವಾಣಿ’ ದಿಟ್ಟ ಹೆಜ್ಜೆ ಇಟ್ಟಿದೆ.

ಕವಿರಾಜ್‌, ಗೀತ ಸಾಹಿತಿ

ಬಹಳ ಸ್ಪಷ್ಟತೆ ಇದೆ

ಆಯ್ಕೆ ಕಸರತ್ತಿನಲ್ಲಿ ಬಹಳ ಸ್ಪಷ್ಟತೆಯಿದೆ ಅನ್ನಿಸಿತು. ನಮಗೆ ಸಿನಿಮಾ ತೋರಿಸುವ ಮೊದಲು ನೀವು ಯಾವ ವಿಭಾಗದಲ್ಲಿ ಆಯ್ಕೆ ಮಾಡಬೇಕೆಂಬ ನಿಖರವಾದ ನಿರ್ದೇಶನ ನೀಡಿದ್ದರು. ಸಿನಿಮಾ ಲಿಂಕ್‌ ಓಪನ್‌ ಆಗದೆ ಸ್ವಲ್ಪ ಅಡಚಣೆಯಾಯಿತು. ಆದರೆ ಅದನ್ನು ತಕ್ಷಣ ಸರಿಪಡಿಸಿದರು. ಸಿನಿಮಾದಲ್ಲಿ ಸಂಗೀತ ಎಂದರೆ ಹಾಡು ಮಾತ್ರವಲ್ಲ, ಹಿನ್ನೆಲೆ ಸಂಗೀತವೂ ಸೇರುತ್ತದೆ. ಅದನ್ನು ಪರಿಗಣಿಸಬೇಕೆಂದು ಮುಂದಿನ ಹಂತದ ತೀರ್ಪುಗಾರರಿಗೆ ಮನವಿ ಮಾಡುತ್ತೇನೆ. ಪ್ರಕ್ರಿಯೆ ತುಂಬ ಅಚ್ಚುಕಟ್ಟಾಗಿದೆ. ಒಂದು ರೀತಿ ಅಕಾಡೆಮಿ ಆಯ್ಕೆಯ ಅನುಭವ ನೀಡಿದೆ.

ಜಯತೀರ್ಥ, ಚಲನಚಿತ್ರ ನಿರ್ದೇಶಕರು

ಹೊಸತನದಿಂದ ಕೂಡಿದೆ

ನನ್ನ ಪಾಲಿಗೆ ಬಂದ ಎಲ್ಲ ಚಿತ್ರಗಳನ್ನೂ ನೋಡಿದೆ. ಅದರಲ್ಲಿ ಕೆಲವೇ ಕೆಲವು ಗುಣಮಟ್ಟದ ಸಿನಿಮಾಗಳು ಸಿಕ್ಕವು. ಅತ್ಯುತ್ತಮವಾಗಿದ್ದು ಮಾತ್ರ ಅಂತಿಮವಾಗಿ ಉಳಿದುಕೊಳ್ಳುತ್ತವೆ. ಇಡೀ ಆಯ್ಕೆ ಪ್ರಕ್ರಿಯೆ ಹೊಸತನದಿಂದ ಕೂಡಿದೆ. ಬೇರೆ ಕೆಲ ಪ್ರಶಸ್ತಿ ನೋಡಿರುವೆ. ಯಾರೋ ಶಿಫಾರಸು ಮಾಡುತ್ತಾರೆ. ಇಲ್ಲಿ ಸಿನಿಮಾ ನೋಡಿ ಪಟ್ಟಿ ಕಳುಹಿಸಿದ ನಂತರವೂ ಒಬ್ಬ ತೀರ್ಪುಗಾರನಿಗೆ ಇನ್ನೊಬ್ಬ ತೀರ್ಪುಗಾರನ ಬಗ್ಗೆ ಗೊತ್ತಿರಲಿಲ್ಲ. ಪರಸ್ಪರ ಕರೆ ಮಾಡಿ, ಶಿಫಾರಸು ಮಾಡುವ ಪ್ರಮೇಯವೇ ಇರಲಿಲ್ಲ. ಒಳ್ಳೆಯ ಪ್ರಕ್ರಿಯೆ. ಪ್ರಾಮಾಣಿಕವಾಗಿ ಕೆಲಸ ಮಾಡಲು ಮುಕ್ತ ಅವಕಾಶ. ಚೆನ್ನಾಗಿಲ್ಲದ ಸಿನಿಮಾಗಳನ್ನು ಮುಲಾಜಿಲ್ಲದೆ ಹೊರಗಿಟ್ಟಿದ್ದೇವೆ.

ಎಂ.ಎನ್‌.ಸ್ವಾಮಿ, ಸಿನಿಮಾ ಸಂಕಲನಕಾರರು

ಬೇರೆಯವರಿಗೂ ಮಾದರಿ

ಇಡೀ ಆಯ್ಕೆ ಪ್ರಕ್ರಿಯೆ ತುಂಬ ಮೃದುವಾಗಿತ್ತು ಮತ್ತು ವೃತ್ತಿಪರವಾಗಿತ್ತು. ಡೆಡ್‌ಲೈನ್‌ ಸ್ವಲ್ಪ ಬಿಗಿಯಾಗಿತ್ತು. ನಾನು 2-3 ಬೇರೆ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಕೆಲಸ ಮಾಡಿರುವೆ. ಆದರೆ ಈ ರೀತಿ 3 ಸ್ತರದಲ್ಲಿ ಆಯ್ಕೆ ನೋಡಿದ್ದು ಭಾರತದಲ್ಲಿಯೇ ಇದೇ ಮೊದಲು. ಇಲ್ಲಿ ಯಾರಿಗೂ ಅನ್ಯಾಯ ಆಗುವುದಿಲ್ಲ. ಹಂತ ಹಂತವಾಗಿ ಫಿಲ್ಟರ್‌ ಆಗುತ್ತದೆ. ಬೇರೆ ಪ್ರಶ್ತಸ್ತಿಗಳಿಗೂ ಮಾದರಿಯಾಗಬಲ್ಲ ಆಯ್ಕೆ ಪ್ರಕ್ರಿಯೆ. ವಿಸ್ತೃತವಾಗಿದೆ. ಆಯ್ಕೆ ನಿರ್ವಹಣೆ ರೀತಿಯೇ ಪ್ರಶಸ್ತಿ ಮೌಲ್ಯ ಮತ್ತು ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.

ರೂಪಾ ರಾವ್‌, ಚಲನಚಿತ್ರ ನಿರ್ದೇಶಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.