ಕೋಲ್ಕತ್ತದಲ್ಲಿ ಪ್ರತಿಭಟನಕಾರರ ಆಕ್ರೋಶ
ಕೋಲ್ಕತ್ತದ ಆ ಬಡ ದಂಪತಿಯು ತಮ್ಮ ಮಗಳನ್ನೇ ಸರ್ವಸ್ವ ಎಂದುಕೊಂಡಿದ್ದರು. ಮಗಳ ಸಣ್ಣಪುಟ್ಟ ಆಸೆ ಈಡೇರಿಸಲೂ ಶಕ್ತಿಮೀರಿ ಶ್ರಮಿಸುತ್ತಿದ್ದರು. ತಾನು ವೈದ್ಯ ಳಾಗಿ ಅಪ್ಪ–ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಹಂಬಲ ಮಗಳದ್ದು. ಆಕೆಯ ಮೇಲೆ ಅತ್ಯಾಚಾರ ಎಸಗಿ, ಅವರನ್ನು ಹತ್ಯೆ ಮಾಡಿ, ಬಡ ಕುಟುಂಬದ ಕನಸನ್ನು ಕಮರುವಂತೆ ಮಾಡಿದ ಅಪರಾಧಿಗೆ ನ್ಯಾಯಾಲಯವು ಬದುಕಿರುವವರೆಗೆ ಜೈಲು ಶಿಕ್ಷೆ ವಿಧಿಸಿದೆ. ಈ ಪ್ರಕರಣವು ದೇಶದ ಅಂತಃಸಾಕ್ಷಿಯನ್ನು ಕಲಕಿತ್ತು
‘ನನ್ನ ಬಗ್ಗೆ ಯೋಚನೆ ಮಾಡಬೇಡ. ಸಮಯಕ್ಕೆ ಸರಿಯಾಗಿ ಔಷಧ ತೆಗೆದುಕೊಳ್ಳುವಂತೆ ಅಪ್ಪನಿಗೆ ಹೇಳು...’
ಕೋಲ್ಕತ್ತದ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿದ್ದ ವೈದ್ಯ ವಿದ್ಯಾರ್ಥಿನಿ ಆಗಸ್ಟ್ 8ರ ರಾತ್ರಿ ತನ್ನ ತಾಯಿಗೆ ಕರೆ ಮಾಡಿದಾಗ ಆಡಿದ್ದ ಕೊನೆಯ ಮಾತುಗಳಿವು. ಸತತ 36 ಗಂಟೆ ಕೆಲಸ ಮಾಡಿ ದಣಿದಿದ್ದ ಆಕೆಗೆ ವಿಶ್ರಾಂತಿ ಬೇಕಿತ್ತು. ಆದರೆ, ಆ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯರು ವಿಶ್ರಾಂತಿ ಪಡೆಯಲು ನಿರ್ದಿಷ್ಟ ಸ್ಥಳವೇ ಇರಲಿಲ್ಲ. ಹಾಗಾಗಿ, ಅವರು ಆಸ್ಪತ್ರೆಯ ಸೆಮಿನಾರ್ ಹಾಲ್‌ಗೆ ಹೋಗಿ ಮಲಗಿದರು.
ಮಾರನೆಯ ದಿನ ಬೆಳಿಗ್ಗೆಯ ಹೊತ್ತಿಗೆ ಸೆಮಿನಾರ್ ಹಾಲ್‌ನಲ್ಲಿ ಅವರ ಮೃತದೇಹ ಸಿಕ್ಕಿತ್ತು. ವಿದ್ಯಾರ್ಥಿನಿ ಮೈಮೇಲಿನ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿದ್ದವು. ಅವರ ದೇಹದ ಮೇಲೆ ಗಾಯಗಳು ಅಲ್ಲಿ ಏನು ನಡೆದಿತ್ತು ಎನ್ನುವುದನ್ನು ವಿವರಿಸುವಂತಿದ್ದವು. ದುಷ್ಕರ್ಮಿಯೊಬ್ಬ ಅವರ ಮೇಲೆ ಅತ್ಯಾಚಾರ ಮಾಡಿ, ಹತ್ಯೆ ಮಾಡಿದ್ದ.
ಆರ್.ಜಿ.ಕರ್ ಆಸ್ಪತ್ರೆಯಲ್ಲಿ ನಡೆದಿದ್ದ ಅಪರಾಧದ ಭೀಕರತೆಗೆ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಮಾರನೆಯ ದಿನವೇ ಆರೋಪಿ ಸಂಜಯ್ ರಾಯ್‌ನನ್ನು ಪೊಲೀಸರು ಬಂಧಿಸಿದ್ದರು. ನಾಗರಿಕ ಸ್ವಯಂಸೇವಕನಾಗಿದ್ದ ಸಂಜಯ್ ರಾಯ್, ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ. ರಕ್ಷಣೆ ಕೊಡಬೇಕಾಗಿದ್ದವನೇ ಘೋರವಾದ ಕೃತ್ಯವೆಸಗಿ, ವೈದ್ಯ ವಿದ್ಯಾರ್ಥಿನಿಯನ್ನು ಹತ್ಯೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದರು.
ವೈದ್ಯ ವಿದ್ಯಾರ್ಥಿನಿಯ ಪೋಷಕರು ಕೋಲ್ಕತ್ತದ ಕೆಳಮಧ್ಯಮ ವರ್ಗಕ್ಕೆ ಸೇರಿದವರು. ಅವರ ತಂದೆ ಟೈಲರ್ ಆಗಿದ್ದರು. ತಾಯಿ ಗೃಹಿಣಿ. ಅವರಿಗೆ ಇದ್ದದ್ದು ಒಬ್ಬಳೇ ಮಗಳು. ಮಗಳನ್ನು ಅತ್ಯಂತ ಪ್ರೀತಿಯಿಂದ ಸಾಕಿ ಸಲಹಿದ್ದರು. ಹಣಕಾಸು ಮುಗ್ಗಟ್ಟು ಎದುರಿಸುತ್ತಿದ್ದ ಕುಟುಂಬವು, ಮಗಳ ಸಣ್ಣ ಪುಟ್ಟ ಆಸೆಗಳನ್ನು ಪೂರೈಸಲೂ ಪರದಾಡುತ್ತಿತ್ತು. ಮಗಳಿಗೆ ಇಷ್ಟವಾದ ದಾಳಿಂಬೆ ಹಣ್ಣು ತೆಗೆದುಕೊಡಲೂ ಅಪ್ಪನ ಬಳಿ ಹಣ ಇರುತ್ತಿರಲಿಲ್ಲ. ಹೀಗಾಗಿಯೇ ತನ್ನ ಮಗಳು ವೈದ್ಯಳಾಗುತ್ತಾಳೆ ಎಂದು ಅಪ್ಪ ಹೇಳಿದಾಗ ಅದನ್ನು ನೆರೆಹೊರೆಯವರು ನಂಬಿರಲಿಲ್ಲ. ಆದರೆ, ಮಗಳು ಹಟಕ್ಕೆ ಬಿದ್ದು, ಚೆನ್ನಾಗಿ ಓದಿ ಸರ್ಕಾರಿ ಕಾಲೇಜಿನಲ್ಲಿಯೇ ಎಂಬಿಬಿಎಸ್ ಸೀಟು ಪಡೆದುಕೊಂಡಿದ್ದರು.
ಹತ್ಯೆಗೊಳಗಾದ ವೈದ್ಯ ವಿದ್ಯಾರ್ಥಿನಿಗೆ ಡೈರಿ ಬರೆಯುವ ಹವ್ಯಾಸವಿತ್ತು. ‘ನಾನು ವೈದ್ಯ ಪದವಿಯಲ್ಲಿ ಉತ್ತಮವಾಗಿ ಓದಿ, ಚಿನ್ನದ ಪದಕ ಪಡೆಯುತ್ತೇನೆ. ನಂತರ ನನ್ನ ತಂದೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ’ ಎಂದು ಅವರು ದಿನಚರಿಯಲ್ಲಿ ನಮೂದಿಸಿದ್ದರು. ಮಗಳ ಸಾವಿನಿಂದ ಬಡ ಪೋಷಕರ ಆಸೆಗಳೆಲ್ಲ ನುಚ್ಚುನೂರಾಗಿವೆ, ಕನಸುಗಳು ಕಮರಿವೆ. ಕೆಲಸದ ಸ್ಥಳದಲ್ಲಿ ಮಗಳಿಗೆ ಸೂಕ್ತ ರಕ್ಷಣೆ ನೀಡದ ಆಸ್ಪತ್ರೆಯ ಮುಖ್ಯಸ್ಥರೂ ಈ ಘಟನೆಗೆ ಕಾರಣ ಎಂದು ಅವರು ಆರೋಪಿಸಿದರು. ರಾಜ್ಯ ಸರ್ಕಾರ ಘೋಷಿಸಿದ್ದ ಪರಿಹಾರವನ್ನು ಅವರು ನಿರಾಕರಿಸಿದರು. ತಮ್ಮ ಮಗಳ ಸಾವಿಗೆ ನ್ಯಾಯ ಬೇಕು ಎನ್ನುವುದು ಅವರ ಒಕ್ಕೊರಲ ಬೇಡಿಕೆಯಾಗಿತ್ತು.
ಸದ್ದು ಮಾಡಿದ ಹೋರಾಟ
ತಮ್ಮ ಸಹೋದ್ಯೋಗಿಯ ದಾರುಣ ಅಂತ್ಯದಿಂದ ಕನಲಿದ ವೈದ್ಯ ಸಮೂಹವು ದೇಶದಾದ್ಯಂತ ಬೀದಿಗಿಳಿಯಿತು. ಭಾರತೀಯ ವೈದ್ಯಕೀಯ ಸಂಘದ (ಐಎಂಎ) ನೇತೃತ್ವದಲ್ಲಿ ವೈದ್ಯರು ಕೆಲಸ ಸ್ಥಗಿತಗೊಳಿಸಿ ಬೀದಿಗಿಳಿದು ಹೋರಾಟ ನಡೆಸಿದರು. ಕೃತ್ಯ ನಡೆದ ಆರ್.ಜಿ.ಕರ್ ಆಸ್ಪತ್ರೆಯ ಮೇಲೆ ದಾಳಿಗಳೂ ನಡೆದವು. ಪ್ರತಿಭಟನೆಗಳ ಬಿಸಿ ಪಶ್ಚಿಮ ಬಂಗಾಳದ ಸರ್ಕಾರಕ್ಕೂ ತಟ್ಟಿತು. ಪ್ರತಿಭಟನೆಗಳ ಹಿಂದೆ ವಿರೋಧ ಪಕ್ಷ ಬಿಜೆಪಿಯ ಕೈವಾಡ ಇದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ತಕ್ಷಣದಿಂದಲೇ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿಯ ವಿಶ್ರಾಂತಿಗಾಗಿ ನಿರ್ದಿಷ್ಟ ಕೊಠಡಿ, ಸಿ.ಸಿ.ಟಿ.ವಿ ಕ್ಯಾಮೆರಾ ವ್ಯವಸ್ಥೆ ಇರುವ ರಕ್ಷಣಾ ವಲಯಗಳ ಸ್ಥಾಪನೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುವುದಾಗಿ ಸರ್ಕಾರ ಘೋಷಿಸಿತ್ತು. ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿತ್ತು. ಎಫ್‌ಐಆರ್ ವಿಳಂಬ ಸೇರಿದಂತೆ ತನಿಖೆಯಲ್ಲಿನ ಲೋಪಗಳತ್ತ ಬೊಟ್ಟು ಮಾಡಿದ್ದ ಆಗಿನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು, ‘ಈ ಪ್ರಕರಣವು ದೇಶದ ಅಂತಃಸಾಕ್ಷಿಯನ್ನು ಕಲಕಿದೆ’ ಎಂದಿದ್ದರು.
ಕಲ್ಕತ್ತಾ ಹೈಕೋರ್ಟ್ ನಿರ್ದೇಶದನ ಮೇರೆಗೆ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿತು. ಆರೋಪಿ ಸಂಜಯ್ ರಾಯ್‌ನನ್ನು ವಶಕ್ಕೆ ಪಡೆದು ತನಿಖೆ ನಡೆಸಿತು. ಈಗ ಸಂಜಯ್ ರಾಯ್ ಆರೋಪ ಸಾಬೀತಾಗಿದ್ದು, ನ್ಯಾಯಾಲಯವು ಅವನಿಗೆ ಬದುಕಿರುವವರಿಗೆ ಜೈಲು ವಾಸದ ಶಿಕ್ಷೆ ವಿಧಿಸಿದೆ. ಆದರೆ, ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸುತ್ತಿದ್ದ ವೈದ್ಯ ವಿದ್ಯಾರ್ಥಿನಿಯ ಪೋಷಕರು, ಇದರಿಂದ ತೃಪ್ತರಾಗಿಲ್ಲ. ಅಪರಾಧಿಗೆ ಗಲ್ಲು ಶಿಕ್ಷೆ ನೀಡಬೇಕು ಜತೆಗೆ, ಪ್ರಕರಣದ ಇತರ ಆರೋಪಿಗಳಿಗೂ ಶಿಕ್ಷೆ ಆಗಬೇಕು ಎನ್ನುವುದು ಅವರ ಒತ್ತಾಯ. ಪೋಷಕರಷ್ಟೇ ಅಲ್ಲ, ಆಕೆಯ ಸಹೋದ್ಯೋಗಿಗಳು, ವೈದ್ಯಕೀಯ ಸಮುದಾಯ ಕೂಡ ಶಿಕ್ಷೆ ಪ್ರಮಾಣದ ಬಗ್ಗೆ ಸಮಾಧಾನಗೊಂಡಿಲ್ಲ.
ನಿರ್ಭಯಾ ಹತ್ಯೆ ನೆನಪಿಸಿದ ಕೃತ್ಯ
ಕೋಲ್ಕತ್ತದಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣವು 2012ರ ಡಿಸೆಂಬರ್ 16ರಂದು ದೆಹಲಿಯಲ್ಲಿ ನಡೆದಿದ್ದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ನೆನಪಿಸಿತ್ತು. ದೆಹಲಿಯ ಅಮಾನುಷ ಪ್ರಕರಣದ ಬಗ್ಗೆ ರಾಷ್ಟ್ರದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಸರ್ಕಾರವು ಅತ್ಯಾಚಾರಕ್ಕೆ ಸಂಬಂಧಿಸಿದ ಕಾನೂನಿನಲ್ಲಿ ಬದಲಾವಣೆ ಮಾಡುವಂತೆ ಆಗಿತ್ತು. ತ್ವರಿತ ವಿಚಾರಣಾ ನ್ಯಾಯಾಲಯಗಳನ್ನು ಸ್ಥಾಪಿಸಲೂ ಮುಂದಾಯಿತು. 2013ರ ಸೆಪ್ಟೆಂಬರ್ 13ರಂದು ವಿಚಾರಣಾ ನ್ಯಾಯಾಲಯವು ನಾಲ್ವರು ಆರೋಪಿಗಳಿಗೆ ಮರಣದಂಡನೆ ವಿಧಿಸಿತ್ತು.
ಕೋಲ್ಕತ್ತದ ಪ್ರಕರಣಕ್ಕೂ ರಾಷ್ಟ್ರದಾದ್ಯಂತ ಖಂಡನೆ ವ್ಯಕ್ತವಾಗಿತ್ತಲ್ಲದೇ, ಕೋಲ್ಕತ್ತದಲ್ಲಿ ವೈದ್ಯರು ತಿಂಗಳುಗಟ್ಟಲೆ ಹೋರಾಟ ನಡೆಸಿದ್ದರು. ನಿರ್ಭಯಾ ಪ್ರಕರಣಕ್ಕೆ ಹೋಲಿಸಿದರೆ (9 ತಿಂಗಳು), ಈ ಪ್ರಕರಣದಲ್ಲಿ ನ್ಯಾಯಾಲವು ಐದು ತಿಂಗಳಲ್ಲಿ ಪ್ರಕರಣದ ವಿಚಾರಣೆ ಮುಗಿಸಿ ತಪ್ಪಿತಸ್ಥನಿಗೆ ಶಿಕ್ಷೆ ವಿಧಿಸಿದೆ.
ಅತ್ಯಾಚಾರ, ಪ್ರತಿಭಟನೆ, ಶಿಕ್ಷೆ
* 2024, ಆಗಸ್ಟ್ 9: ಕೋಲ್ಕತ್ತದ ಸರ್ಕಾರಿ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿರುವ ಸೆಮಿನಾರ್ ಹಾಲ್‌ನಲ್ಲಿ 31 ವರ್ಷ ವಯಸ್ಸಿನ ವೈದ್ಯಕೀಯ ವಿದ್ಯಾರ್ಥಿನಿಯ ಶವ ಪತ್ತೆ. ಆಕೆಯ ಮೇಲೆ ಅತ್ಯಾಚಾರ ಎಸಗಿ, ಕತ್ತು ಹಿಸುಕಿ ಕೊಲೆ ಮಾಡಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢ. ಎಫ್ಐಆರ್ ದಾಖಲಿಸಲು ವಿಳಂಬ ಮಾಡಿದ ಪೊಲೀಸರು
* ಆಗಸ್ಟ್ 10: ವಿದ್ಯಾರ್ಥಿನಿಯ ಶವ ಪತ್ತೆಯಾದ ಮಾರನೇ ದಿನ ನಾಗರಿಕ ಸ್ವಯಂಸೇವಕನಾಗಿದ್ದ ಸಂಜಯ್ ರಾಯ್‌ನನ್ನು ಬಂಧಿಸಿದ ಕೋಲ್ಕತ್ತ ಪೊಲೀಸರು
* ಆಗಸ್ಟ್ 10: ಅತ್ಯಾಚಾರ, ಹತ್ಯೆಗೆ ರಾಷ್ಟ್ರದಾದ್ಯಂತ ಆಕ್ರೋಶ. ಘಟನೆಯನ್ನು ಖಂಡಿಸಿ ಆಸ್ಪತ್ರೆಯ ವೈದ್ಯರಿಂದ ಪ್ರತಿಭಟನೆ ಆರಂಭ. ಚಳವಳಿ ರೂಪ ಪಡೆದುಕೊಂಡ ಹೋರಾಟ. ವಿದ್ಯಾರ್ಥಿನಿ ಮತ್ತು ಆಕೆಯ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಮತ್ತು ಕರ್ತವ್ಯನಿರತ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಭದ್ರತೆ ಮತ್ತು ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಆಗ್ರಹ
* ಆಗಸ್ಟ್ 11: ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಆಸ್ಪತ್ರೆ ಸೂಪರಿಂಟೆಂಡೆಂಟ್ ಸಂಜಯ್ ವಶಿಷ್ಠ ಅವರನ್ನು ವರ್ಗಾವಣೆ ಮಾಡಿದ ಪಶ್ಚಿಮ ಬಂಗಾಳ ಸರ್ಕಾರ. ರಾಷ್ಟ್ರದಾದ್ಯಂತ ವೈದ್ಯರ ಮುಷ್ಕರಕ್ಕೆ ಕರೆ ನೀಡಿದ ಸ್ಥಾನಿಕ ವೈದ್ಯರ ಒಕ್ಕೂಟಗಳ ಮಹಾ ಒಕ್ಕೂಟ. ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಹಲವೆಡೆ ಆರೋಗ್ಯ ಸೇವೆಗಳಲ್ಲಿ ವ್ಯತ್ಯಯ
* ಆಗಸ್ಟ್ 12: ಮುಷ್ಕರ, ಹೋರಾಟ ತೀವ್ರಗೊಳ್ಳುತ್ತಿದ್ದಂತೆಯೇ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಪ್ರಾಂಶುಪಾಲ ಸಂದೀಪ್ ಘೋಷ್ ಪದತ್ಯಾಗ
* ಆಗಸ್ಟ್ 13: ‘ಪೊಲೀಸರ ತನಿಖೆಯ ಮೇಲೆ ನಂಬಿಕೆ ಇಲ್ಲ. ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿ’ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಪೋಷಕರ ಅರ್ಜಿ. ತನಿಖೆಯನ್ನು ಸಿಬಿಐಗೆ ವಹಿಸಲು ಹೈಕೋರ್ಟ್ ಸಮ್ಮತಿ
* ಆಗಸ್ಟ್ 14: ಮಧ್ಯಪ್ರವೇಶಿಸಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ. ಸಿಬಿಐಗೆ ತನಿಖೆ ಹಸ್ತಾಂತರಿಸಿದ ಕೋಲ್ಕತ್ತ ಪೊಲೀಸರು. ಆರೋಪಿ ಸಂಜಯ್ ರಾಯ್ ಸಿಬಿಐ ವಶಕ್ಕೆ
* ಆಗಸ್ಟ್ 15: ತೀವ್ರ ಸ್ವರೂಪ ಪಡೆದುಕೊಂಡ ಹೋರಾಟ. ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆವರಣದಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ. ಆಸ್ಪತ್ರೆಯಲ್ಲಿ ಮತ್ತು ಘಟನೆ ನಡೆದ ಸ್ಥಳದಲ್ಲಿ (ನಾಲ್ಕನೇ ಮಹಡಿಯ ಸೆಮಿನಾರ್ ಹಾಲ್) ಉದ್ರಿಕ್ತ ಗುಂಪಿನಿಂದ ದಾಂದಲೆ. ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗ ಮತ್ತು ನರ್ಸಿಂಗ್ ಕೇಂದ್ರ ಘಟಕ ಧ್ವಂಸ
* ಆಗಸ್ಟ್ 16: ಆಸ್ಪತ್ರೆಯಲ್ಲಿ ದಾಂದಲೆ ನಡೆಸಿದ 19 ಮಂದಿಯನ್ನು ಬಂಧಿಸಿದ ಪೊಲೀಸರು. ಆಸ್ಪತ್ರೆಯ ಪ್ರಾಂಶುಪಾಲರಾಗಿದ್ದ ಸಂದೀಪ್ ಘೋಷ್ ವಿಚಾರಣೆ ಆರಂಭಿಸಿದ ಸಿಬಿಐ
* ಆಗಸ್ಟ್ 17: ಆಸ್ಪತ್ರೆಗೆ ಭೇಟಿ ನೀಡಿದ ಇಬ್ಬರು ಸದಸ್ಯರ ರಾಷ್ಟ್ರೀಯ ಮಹಿಳಾ ಆಯೋಗದ ನಿಯೋಗ. ಆಸ್ಪತ್ರೆಯಲ್ಲಿ ಭದ್ರತಾಲೋಪ ಮತ್ತು ಅಪರಾಧ ನಡೆದ ಸ್ಥಳದ ದುರಸ್ತಿ ಕೈಗೊಂಡು, ಸಾಕ್ಷ್ಯಗಳನ್ನು ತಿರುಚಲಾಗಿದೆ ಎಂದು ಆರೋಪ
* ಆಗಸ್ಟ್ 20: ಪ್ರಕರಣ ಸಂಬಂಧ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್. ವೈದ್ಯಕೀಯ ಮತ್ತು ಆರೋಗ್ಯ ಕ್ಷೇತ್ರದ ಸಿಬ್ಬಂದಿಯ ರಕ್ಷಣೆ ಮತ್ತು ಸುರಕ್ಷತೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ನೀಡಲು 10 ಮಂದಿಯ ಕಾರ್ಯಪಡೆ ರಚಿಸಿದ ಸುಪ್ರೀಂ ಕೋರ್ಟ್
* ಆಗಸ್ಟ್ 24: ಪ್ರಮುಖ ಆರೋಪಿ ಮತ್ತು ಇತರ ಆರು ಮಂದಿಗೆ ಸುಳ್ಳು ಪತ್ತೆ ಪರೀಕ್ಷೆ
* ಆಗಸ್ಟ್ 27: ಹಿಂಸಾಚಾರಕ್ಕೆ ತಿರುಗಿದ ‘ಪಶ್ಚಿಮ್ ಬಂಗಾ ಛಾತ್ರ ಸಮಾಜ’ ಎಂಬ ವಿದ್ಯಾರ್ಥಿ ಸಂಘಟನೆ ಕರೆ ನೀಡಿದ್ದ ‘ನಬನ್ನಾ ಅಭಿಯಾನ’. ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಘರ್ಷಣೆ
* ಸೆಪ್ಟೆಂಬರ್ 14: ಸಾಕ್ಷ್ಯ ನಾಶ ಮತ್ತು ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದ ಆರೋಪದಲ್ಲಿ ಸಂದೀಪ್ ಘೋಷ್ ಮತ್ತು ತಾಲಾ ಪೊಲೀಸ್ ಠಾಣೆ ಉಸ್ತುವಾರಿ ಅಭಿಜಿತ್ ಮಂಡಲ್ ಅವರನ್ನು ಬಂಧಿಸಿದ ಸಿಬಿಐ
* ಅಕ್ಟೋಬರ್ 15: ಪ್ರಕರಣ ಪ್ರಮುಖ ಆರೋಪಿ ಸಂಜಯ್ ರಾಯ್ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ
* ನವೆಂಬರ್ 4: ಆರೋಪಿ ವಿರುದ್ಧ ದೋಷಾರೋಪ ನಿಗದಿ ಮಾಡಿದ ಸಿಯಾಲದಹ ಸೆಷನ್ಸ್ ನ್ಯಾಯಾಲಯ
* ಡಿಸೆಂಬರ್ 14: ಸಿಬಿಐ ಅಧಿಕಾರಿಗಳು 90 ದಿನಗಳ ಒಳಗಾಗಿ ಆರೋಪ ಪಟ್ಟಿ ಸಲ್ಲಿಸದೇ ಇದ್ದುದರಿಂದ ಸಂದೀಪ್ ಘೋಷ್, ಅಭಿಜಿತ್ ಮಂಡಲ್ ಅವರಿಗೆ ಜಾಮೀನು ಮಂಜೂರು ಮಾಡಿದ ನ್ಯಾಯಾಲಯ
* ಡಿಸೆಂಬರ್ 19: ಪ್ರಕರಣವನ್ನು ಹೊಸದಾಗಿ ತನಿಖೆ ನಡೆಸಬೇಕು ಎಂದು ಮತ್ತೆ ಕಲ್ಕತ್ತಾ ಹೈಕೋರ್ಟ್ ಕದ ತಟ್ಟಿದ ಸಂತ್ರಸ್ತೆ ಪೋಷಕರು
* 2025, ಜನವರಿ 16: ಪ್ರಕರಣದ ಸಂಬಂಧ ಅಂತಿಮ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯ
* ಜನವರಿ 18: ಸಂಜಯ್ ರಾಯ್ ತಪ್ಪಿತಸ್ಥ ಎಂದು ಘೋಷಿಸಿದ ನ್ಯಾಯಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.