ADVERTISEMENT

ಆಳ ಅಗಲ | ನಿರ್ಲಕ್ಷಿಸದಿರಿ ರೇಬಿಸ್: ನಾಯಿ ಕಡಿತದ ಬಗ್ಗೆ ಇರಲಿ ಎಚ್ಚರ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 23:08 IST
Last Updated 4 ಜುಲೈ 2025, 23:08 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   
ಉತ್ತರ ಪ್ರದೇಶದ ಯುವ ಕಬಡ್ಡಿ ಆಟಗಾರ ಬ್ರಿಜೇಶ್ ಸೋಲಂಕಿ ಅವರು ರೇಬಿಸ್‌ ಕಾಯಿಲೆಯಿಂದ ನರಳಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಹಲವು ದಿನ ನರಳಿದ ಅವರು, ನಂತರ ಉಸಿರು ಚೆಲ್ಲಿದರು. ಕರ್ನಾಟಕದಲ್ಲೂ ಈ ವರ್ಷದ ಮೊದಲ ಆರು ತಿಂಗಳಲ್ಲಿ 19 ಮಂದಿ ರೇಬಿಸ್‌ಗೆ ಬಲಿಯಾಗಿದ್ದಾರೆ. ನೆರೆಯ ಕೇರಳದಲ್ಲೂ ರೇಬಿಸ್‌ನಿಂದ ಜನರು ಸಾಯುವುದು ಹೆಚ್ಚುತ್ತಿದ್ದು, ಇತ್ತೀಚಿನ ತಿಂಗಳಲ್ಲಿ ಮೂವರು ಮಕ್ಕಳು ಇದರಿಂದಾಗಿ ಮೃತಪಟ್ಟಿದ್ದಾರೆ. ಕೇಂದ್ರ ಸರ್ಕಾರವು 2030ರ ಒಳಗಾಗಿ ದೇಶವನ್ನು ರೇಬಿಸ್‌ಮುಕ್ತಗೊಳಿಸುವ ಯೋಜನೆ ಹಾಕಿಕೊಂಡಿದೆ. ಹಾಗಿದ್ದರೂ ವರ್ಷದಿಂದ ವರ್ಷಕ್ಕೆ ರೇಬಿಸ್‌ ಸಾವುಗಳು ಹೆಚ್ಚುತ್ತಿವೆ. ರೇಬಿಸ್‌ ತಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತೆಗಳು, ತಜ್ಞರ ಸಲಹೆಗಳು ಇಲ್ಲಿವೆ

ಚರಂಡಿಯಲ್ಲಿ ಬಿದ್ದಿದ್ದ ನಾಯಿ ಮರಿಯನ್ನು ರಕ್ಷಿಸಲು ಹೋಗಿದ್ದೇ 22 ವರ್ಷದ ಕಬಡ್ಡಿ ಆಟಗಾರ ಬ್ರಿಜೇಶ್ ಸೋಲಂಕಿ ಅವರ ಜೀವಕ್ಕೆ ಮುಳುವಾಗಿದೆ. ನಾಯಿ ಮರಿಯನ್ನು ರಕ್ಷಿಸುವ ವೇಳೆ ಅದು ಅವರಿಗೆ ಕಚ್ಚಿತ್ತು. ಕಚ್ಚಿದ್ದು ಚಿಕ್ಕ ಮರಿ ಎಂದು ಅವರು ನಾಯಿ ಕಡಿತವನ್ನು ನಿರ್ಲಕ್ಷಿಸಿದರು. ಅಂತಿಮವಾಗಿ, ಅದು ರೇಬಿಸ್‌ಗೆ ಕಾರಣವಾಗಿ, ನೊಯಿಡಾದ ಆಸ್ಪತ್ರೆಯೊಂದರಲ್ಲಿ ಅವರು ಅಸುನೀಗಿದ್ದಾರೆ. ಈ ಘಟನೆಯು ಜನರನ್ನು ಬೆಚ್ಚಿಬೀಳಿಸಿದ್ದು, ನಾಯಿ ಕಡಿತ ಮತ್ತು ರೇಬಿಸ್ ಬಗ್ಗೆ ಗಂಭೀರವಾಗಿ ಚಿಂತಿಸುವಂತೆ ಮಾಡಿದೆ.

ನಾಯಿ ಕಡಿತವೇ ಮೂಲ

ರೇಬಿಸ್ ಇಂದಿಗೂ ಜಗತ್ತಿನ ಅತ್ಯಂತ ಅಪಾಯಕಾರಿ ಕಾಯಿಲೆ ಆಗಿದ್ದು, ಮನುಷ್ಯರಲ್ಲಿ ಮತ್ತು ಪ್ರಾಣಿಗಳಲ್ಲಿ ಅದರ ಮರಣ ಪ್ರಮಾಣ ಶೇ 100ರಷ್ಟಿದೆ. ಅಂದರೆ, ಒಮ್ಮೆ ರೇಬಿಸ್ ತಗುಲಿದರೆ, ಅದು ಗುಣವಾಗುವುದೇ ಇಲ್ಲ. ನಾಯಿ ಕಡಿತವೇ ರೇಬಿಸ್‌ಗೆ ಮುಖ್ಯ ಮೂಲವಾಗಿದೆ. ಕೆಲವೊಮ್ಮೆ ಬೆಕ್ಕು ಕಡಿತದಿಂದಲೂ ರೇಬಿಸ್‌ ಸೋಂಕು ಹರಡುವ ಅಪಾಯ ಇದೆ. ಜಗತ್ತಿನ ರೇಬಿಸ್‌ ಪ್ರಕರಣಗಳಲ್ಲಿ ಶೇ 99ರಷ್ಟು ನಾಯಿ ಕಡಿತದಿಂದಲೇ ಬಂದಂಥವು. ಆರೋಗ್ಯವಂತ ನಾಯಿ ಕಡಿದರೆ, ಅದರಿಂದ ರೇಬಿಸ್ ಸೋಂಕು ಹರಡುವುದಿಲ್ಲ. ಆದರೆ, ರೇಬಿಸ್ ವೈರಾಣು ಇರುವ (ಹುಚ್ಚು) ನಾಯಿ ಕಡಿದರೆ ರೇಬಿಸ್ ಸೋಂಕು ಹರಡುತ್ತದೆ. ಕೆಲವು ಸಂದರ್ಭಗಳಲ್ಲಿ ನಾಯಿ, ಬೆಕ್ಕು ಪರಚುವಿಕೆಯಿಂದಲೂ ಇದು ಹರಡುತ್ತದೆ.

ರೇಬಿಸ್ ಒಂದು ವೈರಾಣು ಕಾಯಿಲೆಯಾಗಿದ್ದು, ಅದು ಮನುಷ್ಯರೂ ಸೇರಿದಂತೆ ನಾಯಿ, ಬೆಕ್ಕು, ನರಿಗಳ ನರಮಂಡಲ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ರೇಬಿಸ್‌ ವೈರಸ್‌ ಸೋಂಕಿತ ಪ್ರಾಣಿಗಳ ಎಂಜಲು ಮತ್ತು ಮಿದುಳಿನಲ್ಲಿ ಸ್ಥಾನಪಡೆದಿರುತ್ತದೆ. ಸೋಂಕಿತ ಪ್ರಾಣಿಗಳು ಇತರ ಯಾವುದೇ ಪ್ರಾಣಿ ಅಥವಾ ಮನುಷ್ಯನನ್ನು ಕಚ್ಚಿದರೆ, ಅವರಿಗೂ ಸೋಂಕು ಹರಡುತ್ತದೆ. ಬಾವಲಿಯಂಥ ಕೆಲವು ಪಕ್ಷಿಗಳಲ್ಲೂ ವೈರಾಣು ಇರುತ್ತದೆ. ಕಾಡುಪ್ರಾಣಿಗಳ ನಡುವೆ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಇದ್ದರೆ, ಅದು ಸಾಕು ಪ್ರಾಣಿಗಳಿಗೆ ಹರಡಿ, ಅವುಗಳಿಂದ ಮನುಷ್ಯರಿಗೆ ಹರಡುವ ಅಪಾಯ ಹೆಚ್ಚಿರುತ್ತದೆ. ರೇಬಿಸ್‌ನಿಂದ ಜಾಗತಿಕವಾಗಿ ಪ್ರತಿವರ್ಷ ಸುಮಾರು 59,000 ಸಾವುಗಳು ಸಂಭವಿಸುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ADVERTISEMENT

ರೇಬಿಸ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ನಂತರ ಅದನ್ನು ತಡೆಯುವುದು ಸಾಧ್ಯವಿಲ್ಲ. ಆದರೆ, ರೇಬಿಸ್ ಬರದಂತೆ ತಡೆಯುವುದು ಸಾಧ್ಯವಿದೆ. ಲಸಿಕೆ, ಔಷಧಗಳಿಂದ ರೇಬಿಸ್ ಸಾವುಗಳನ್ನು ತಡೆಗಟ್ಟಬಹುದಾಗಿದೆ. ನಾಯಿಗಳಿಗೆ ಲಸಿಕೆ ಹಾಕಿಸುವುದರಿಂದ ರೇಬಿಸ್ ಹರಡುವಿಕೆಯ ಸರಪಳಿಯನ್ನು ತುಂಡರಿಸಬಹುದಾಗಿದೆ. 

ಆಫ್ರಿಕಾ, ಏಷ್ಯಾದಲ್ಲಿ ಹೆಚ್ಚು ಸಾವು

ಜಗತ್ತಿನ 150ಕ್ಕೂ ಹೆಚ್ಚು ದೇಶಗಳಲ್ಲಿ ಸಾವಿರಾರು ಜನ ರೇಬಿಸ್‌ನಿಂದ ಸತ್ತಿರುವುದಾಗಿ ವರದಿಗಳು ಹೇಳುತ್ತಿವೆ. ವ್ಯವಸ್ಥಿತ ಹಾಗೂ ನಿರಂತರ ಪ್ರಯತ್ನ, ಲಸಿಕೆಗಳಿಂದ ಕೆಲವು ದೇಶಗಳು ರೇಬಿಸ್‌ನಿಂದ ಮುಕ್ತವಾಗಿವೆ. ಪಶ್ಚಿಮ ಯುರೋಪ್, ಉತ್ತರ ಅಮೆರಿಕ, ಜಪಾನ್, ದಕ್ಷಿಣ ಕೊರಿಯಾ ಮತ್ತು ಲ್ಯಾಟಿನ್ ಅಮೆರಿಕದ ಕೆಲವು ಭಾಗಗಳು ಸೇರಿದಂತೆ ಹಲವು ದೇಶಗಳು ರೇಬಿಸ್‌ಮುಕ್ತವಾಗಿವೆ. ಆದರೆ, ಆಫ್ರಿಕಾ ಮತ್ತು ಏಷ್ಯಾ ಖಂಡದಲ್ಲಿ ಅತಿ ಹೆಚ್ಚು ಮಂದಿ ರೇಬಿಸ್‌ನಿಂದ ಮೃತರಾಗುತ್ತಿದ್ದು, ಜಗತ್ತಿನ ಒಟ್ಟು ಪ್ರಕರಣಗಳ ಪೈಕಿ ಈ ಎರಡು ಖಂಡಗಳಲ್ಲಿಯೇ ಶೇ 95ರಷ್ಟು ಸಾವುಗಳು ವರದಿಯಾಗಿವೆ.

ಗ್ರಾಮೀಣ ಪ್ರದೇಶಗಳಲ್ಲಿ ರೇಬಿಸ್ ಹೆಚ್ಚಾಗಿ (ಶೇ 80ರಷ್ಟು) ಕಾಣಿಸಿಕೊಳ್ಳುತ್ತಿದ್ದು, ಆರೋಗ್ಯ ಸೇವೆಗಳ ಲಭ್ಯತೆ, ಲಸಿಕೆ ಸಮಯಕ್ಕೆ ಸಿಗದಿರುವುದು, ಆಸ್ಪತ್ರೆಗೆ ಹೋಗಿ ತೋರಿಸಿಕೊಳ್ಳದಿರುವುದು, ತಿಳಿವಳಿಕೆಯ ಕೊರತೆ, ಮೂಢನಂಬಿಕೆ, ‘ನಾಟಿ’ ಔಷಧದ ಮೊರೆ ಹೋಗುವುದು ಸೇರಿದಂತೆ ಹಲವು ಅಂಶಗಳು ಇದಕ್ಕೆ ಕಾರಣ. ಆಘಾತಕಾರಿ ವಿಚಾರವೇನೆಂದರೆ, ರೇಬಿಸ್‌ನಿಂದ ಮೃತಪಡುತ್ತಿರುವವರಲ್ಲಿ ಶೇ 50ರಷ್ಟು ಮಂದಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು.

ಇಲ್ಲ ನಿಖರ ಮಾಹಿತಿ

ಭಾರತದಲ್ಲಿ ರೇಬಿಸ್‌ ಅತ್ಯಂತ ಗಂಭೀರ ಸ್ವರೂಪದ ಕಾಯಿಲೆ ಎಂದು ಹೇಳುತ್ತದೆ ವಿಶ್ವಆರೋಗ್ಯ ಸಂಸ್ಥೆ. ಅದರ ಪ್ರಕಾರ, ಜಗತ್ತಿನಲ್ಲಿ ವಾರ್ಷಿಕವಾಗಿ ವರದಿಯಾಗುತ್ತಿರುವ ರೇಬಿಸ್‌ನಿಂದ ಮನುಷ್ಯರ ಸಾವಿನ ಪ್ರಕರಣಗಳಲ್ಲಿ ಶೇ 36ರಷ್ಟು ಪ್ರಕರಣಗಳು ಭಾರತದಲ್ಲಿಯೇ ಕಂಡುಬರುತ್ತಿವೆ. ಆದರೆ, ಕೇಂದ್ರ ಸರ್ಕಾರದ ಅಂಕಿ ಅಂಶಗಳ ಪ್ರಕಾರ, 2022ರಿಂದೀಚೆಗೆ ದೇಶದಲ್ಲಿ ಪ್ರತಿವರ್ಷ ರೇಬಿಸ್‌ನಿಂದ ಮೃತಪಟ್ಟವರ ಸಂಖ್ಯೆ ಮೂರು ಅಂಕಿ ದಾಟಿಲ್ಲ. ದಶಕಗಳ ಹಿಂದೆ ದೇಶದಲ್ಲಿ ರೇಬಿಸ್‌ ಪ್ರಕರಣಗಳು ಮತ್ತು ಅದರಿಂದಾಗಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಜಾಸ್ತಿ ಇತ್ತು. ಆದರೆ, ಅದೀಗ ಗಣನೀಯವಾಗಿ ಕಡಿಮೆಯಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದರಲ್ಲಿ 2012ರಿಂದ 2022ರ ನಡುವೆ ಭಾರತದಲ್ಲಿ 6,644 ಶಂಕಿತ ರೇಬಿಸ್‌ ಮತ್ತು ಸಾವಿನ ಪ್ರಕರಣಗಳು ವರದಿಯಾಗಿವೆ ಎಂದು ಉಲ್ಲೇಖಿಸಲಾಗಿದೆ. ಸಂಸತ್ತಿನಲ್ಲಿ ಆರೋಗ್ಯ ಸಚಿವರು ನೀಡುವ ಅಂಕಿ ಅಂಶಗಳಲ್ಲೂ ವ್ಯತ್ಯಾಸ ಇದೆ. ದೇಶದಲ್ಲಿ ನಾಯಿ ಕಡಿತ ಮತ್ತು ರೇಬಿಸ್‌ ಪ್ರಕರಣಗಳು ನಿಖರವಾಗಿ ವರದಿಯಾಗುತ್ತಿಲ್ಲ ಎಂಬುದನ್ನು ಇದು ಬೊಟ್ಟು ಮಾಡುತ್ತದೆ. ಭಾರತದಲ್ಲಿ ಎಲ್ಲ ಪ್ರಕರಣಗಳೂ ಬೆಳಕಿಗೆ ಬರುತ್ತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯೂ ಹೇಳಿದೆ. 

ಗ್ರಾಮೀಣ ಭಾಗಗಳಲ್ಲಿ ರೇಬಿಸ್‌ ರೋಗದ ಬಗ್ಗೆ ತಪ್ಪು ಕಲ್ಪನೆಗಳಿದ್ದು, ಮೂಢನಂಬಿಕೆಯನ್ನು ಪಾಲಿಸುತ್ತಾರೆ. ನಾಯಿ ಕಚ್ಚಿದರೂ ವೈದ್ಯರ ಬಳಿಗೆ ಹೋಗಿ ಚುಚ್ಚುಮದ್ದು ಪಡೆಯದೆ, ನಾಟಿ ವೈದ್ಯರ ಬಳಿಗೆ ಹೋಗುವ ಪದ್ಧತಿ ಇದೆ. ಹಸು ಸೇರಿದಂತೆ ಇನ್ನಿತರ ಜಾನುವಾರುಗಳಿಗೆ ನಾಯಿ ಕಚ್ಚಿ, ಅವುಗಳಿಗೆ ರೇಬಿಸ್ ತಗುಲಿ ಸಾವುಗಳು ಸಂಭವಿಸುತ್ತಲೇ ಇವೆ. ಹೀಗಿದ್ದರೂ ಅನೇಕರು ನಾಯಿ ಕಡಿತಕ್ಕೆ ಚಿಕಿತ್ಸೆ ನೀಡಲು ಹೋಗುವುದಿಲ್ಲ. ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶದಲ್ಲಿ ಅವುಗಳಿಗೆ ರೇಬಿಸ್‌ ನಿರೋಧಕ ಲಸಿಕೆ ನೀಡಲಾಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಬಹುಪಾಲು ಜನರು ಸಾಕು ನಾಯಿಗಳಿಗೆ ಚುಚ್ಚುಮದ್ದು ಕೊಡಿಸುವುದಿಲ್ಲ.

ರೋಗ ಲಕ್ಷಣಗಳೇನು?

ರೇಬಿಸ್‌ ಸೋಂಕು ಹೊಂದಿದ ನಾಯಿ, ಬೆಕ್ಕು ಹಾಗೂ ಇತರ ಪ್ರಾಣಿಗಳು ಕಚ್ಚಿದ ನಂತರ ಮನುಷ್ಯನ ರಕ್ತ ಸೇರುವ ವೈರಾಣು ನಂತರ ಮಿದುಳಿಗೆ ಸೇರುತ್ತದೆ. ಆ ಬಳಿಕ ರೋಗ ಲಕ್ಷಣಗಳು ಗೋಚರಿಸಲು ಶುರುವಾಗುತ್ತದೆ. ಇದಕ್ಕೆ ಕೆಲವು ವಾರಗಳಿಂದ ತಿಂಗಳುವರೆಗೆ ಸಮಯ ತೆಗೆದುಕೊಳ್ಳುತ್ತದೆ.

  • ಮೊದಲ 10 ದಿನಗಳಲ್ಲಿ ಜ್ವರ, ತಲೆನೋವು, ತಲೆಸುತ್ತು, ಸುಸ್ತು ಮುಂತಾದ ಸಾಮಾನ್ಯ ರೋಗ ಲಕ್ಷಣಗಳು

  • ಕಚ್ಚಿದ ಜಾಗದಲ್ಲಿ ತುರಿಕೆ, ಜುಮ್ಮೆನ್ನುವುದು

  • ಎರಡು ವಾರಗಳ ನಂತರ ತೀವ್ರತರದ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆ ಸಂದರ್ಭದಲ್ಲಿ ವೈರಸ್‌ ಮನುಷ್ಯನ ಮಿದುಳಿಗೆ ಹಾನಿ ಮಾಡಿರುತ್ತದೆ.

  • ನಿದ್ರಾಹೀನತೆ, ಗೊಂದಲ, ವ್ಯಾಕುಲತೆ, ಭಾವೋನ್ಮಾದ, ಭ್ರಾಂತಿ, ನೀರಿನ ಭಯ, ಹೆಚ್ಚು ಜೊಲ್ಲು ಸುರಿಸುವುದು, ಮೂರ್ಛೆ/ಪಾರ್ಶ್ವವಾಯು

ಚುಚ್ಚುಮದ್ದು ಪಡೆದಿದ್ದರೂ ಸಾವು

ಕೇರಳದಲ್ಲೂ ರೇಬಿಸ್‌ನಿಂದಾಗಿ ಹೆಚ್ಚು ಸಾವಿನ ಪ್ರಕರಣಗಳು ವರದಿಯಾಗುತ್ತಿವೆ. ಈ ವರ್ಷದ ಏಪ್ರಿಲ್‌–ಮೇ ತಿಂಗಳಲ್ಲಿ 15 ವರ್ಷ ವಯಸ್ಸಿನ ಒಳಗಿನ ಮೂವರು ಮಕ್ಕಳು, ನಾಯಿ ಕಚ್ಚಿದ ಬಳಿಕ ಲಸಿಕೆ ಪಡೆದಿದ್ದರೂ ರೇಬಿಸ್‌ನಿಂದಾಗಿ ಮೃತಪಟ್ಟಿರುವುದು ರಾಜ್ಯದಲ್ಲಿ ಆತಂಕ ಸೃಷ್ಟಿಸಿದೆ. ಲಸಿಕೆಯ ಗುಣಮಟ್ಟ, ಅದರ ನಿರ್ವಹಣೆಯ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ. 

ನಾಯಿಗಳು ಕಚ್ಚಿದ ಜಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಗಾಯ ಆಗಿದ್ದರೆ, ಬಹುಬೇಗ ವೈರಸ್‌ ನರವ್ಯೂಹಕ್ಕೆ ತಲುಪಿ ಚುಚ್ಚುಮದ್ದು ನೀಡಿದ್ದರೂ ಸೋಂಕಿನ ತೀವ್ರತೆಯನ್ನು ಹೆಚ್ಚಿಸಬಹುದು. ಮೃತಪಟ್ಟ ಮೂವರು ಮಕ್ಕಳಿಗೂ ನಾಯಿ ಕಚ್ಚಿದ ಜಾಗದಲ್ಲಿ ದೊಡ್ಡ ಗಾಯಗಳಾಗಿದ್ದವು ಎಂದು ವರದಿಯಾಗಿದೆ.

ಚಿಕಿತ್ಸೆ ಪಡೆಯಿರಿ

ನಾಯಿ ಕಚ್ಚಿದರೆ ನಿರ್ಲಕ್ಷ್ಯ ಮಾಡಬಾರದು. ರೇಬಿಸ್ ಸೋಂಕು ದೇಹದ ನರವ್ಯೂಹ ಸೇರಿದ ಬಳಿಕ ಬಲಿಷ್ಠಗೊಂಡು ವ್ಯಕ್ತಿಯನ್ನು ಗಾಸಿಗೊಳಿ ಸುತ್ತದೆ. ನಾಯಿ ಕಚ್ಚಿದಾಗ ಆದಷ್ಟು ಬೇಗ ಚಿಕಿತ್ಸೆ ಪಡೆದುಕೊಳ್ಳಬೇಕು. ಸಾಬೂನಿನಿಂದ ಗಾಯವನ್ನು ಸ್ವಚ್ಛಗೊಳಿಸಿದಲ್ಲಿ ಸೋಂಕು ದೇಹದ ನರವ್ಯೂಹ ಸೇರುವುದನ್ನು ತಡೆಯಬಹುದು. ‌ರಕ್ತಸ್ರಾವ ಜಾಸ್ತಿ ಇದ್ದಲ್ಲಿ ಶುಭ್ರವಾದ ಬಟ್ಟೆಯನ್ನು ಕಟ್ಟಿಕೊಳ್ಳಬೇಕು. ಬಳಿಕ ಹತ್ತಿರದ ಆಸ್ಪತ್ರೆಗೆ ತೆರಳಿ ಚುಚ್ಚುಮದ್ದನ್ನು ಪಡೆಯಬೇಕು. ಕಚ್ಚಿದ ನಾಯಿ ಮೇಲೆ ಕೂಡ ನಿಗಾ ಇಡಬೇಕಾಗುತ್ತದೆ. ಯಾವುದೇ ಕಾರಣಕ್ಕೂ ನಾಯಿಯನ್ನು ಸಾಯಿಸಬಾರದು

-ಡಾ.ಅನ್ಸರ್ ಅಹಮದ್, ಆರೋಗ್ಯ ಇಲಾಖೆಯ ಐಡಿಎಸ್‌ಪಿಯ ನಿವೃತ್ತ ನಿರ್ದೇಶಕ

ಆಧಾರ: ಡಬ್ಲ್ಯುಎಚ್‌ಒ, ವರ್ಲ್ಡ್ ಆರ್ಗನೈಸೇಷನ್ ಫಾರ್ ಆ್ಯನಿಮಲ್ ಹೆಲ್ತ್, ಪಿಟಿಐ, ರಾಷ್ಟ್ರೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮ, ಕರ್ನಾಟಕ ಆರೋಗ್ಯ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.