ADVERTISEMENT

ಆಳ–ಅಗಲ: ‘ಬಡ್ತಿ ಮೀಸಲು’ ಕಗ್ಗಂಟು

ರಾಜ್ಯ ಸರ್ಕಾರದ ಎಸ್‌ಸಿ, ಎಸ್‌ಟಿ, ಅಹಿಂಸಾ ನೌಕರರ ಮುಂಬಡ್ತಿ ನೀತಿ

ರಾಜೇಶ್ ರೈ ಚಟ್ಲ
Published 22 ಫೆಬ್ರುವರಿ 2022, 19:30 IST
Last Updated 22 ಫೆಬ್ರುವರಿ 2022, 19:30 IST
ಬಡ್ತಿ ಮೀಸಲಾತಿಗೆ ಒತ್ತಾಯಿಸಿ ನಡೆದಿದ್ದ ಜಾಥಾ –ಸಂಗ್ರಹ ಚಿತ್ರ
ಬಡ್ತಿ ಮೀಸಲಾತಿಗೆ ಒತ್ತಾಯಿಸಿ ನಡೆದಿದ್ದ ಜಾಥಾ –ಸಂಗ್ರಹ ಚಿತ್ರ   

ರಾಜ್ಯ ಸರ್ಕಾರಿ ನೌಕರರ ‘ಬಡ್ತಿ ಮೀಸಲು’ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಈ ವಿಷಯಕ್ಕೆ ಸಂಬಂಧಿಸಿದ ವ್ಯಾಜ್ಯಗಳು 30 ವರ್ಷಗಳಿಂದ ವಿವಿಧ ನ್ಯಾಯಾಲಯಗಳಲ್ಲಿವೆ. ತೀರ್ಪುಗಳು ಬಂದಾಗಲೆಲ್ಲ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ವರ್ಗ (ಎಸ್‌ಟಿ), ಅಲ್ಪಸಂಖ್ಯಾತ, ಹಿಂದುಳಿದ, ಸಾಮಾನ್ಯ (ಅಹಿಂಸಾ) ವರ್ಗದ ನೌಕರರ ನಡುವೆ ಸಂಚಲನ ಉಂಟಾಗುತ್ತಿದೆ. ನ್ಯಾಯಮೂರ್ತಿ ಎಲ್‌. ನಾಗೇಶ್ವರರಾವ್‌ ನೇತೃತ್ವದ ಸಂಜೀವ್‌ ಖನ್ನಾ ಮತ್ತು ಬಿ.ಆರ್‌. ಗವಾಯಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವುಜ. 28ರಂದು ನೀಡಿದ ಮಧ್ಯಂತರ ಆದೇಶ, ಬಡ್ತಿ ಮೀಸಲು ನೀತಿಗೆ ಹೊಸ ವ್ಯಾಖ್ಯೆ ನೀಡಿದೆ.

ಎಸ್‌ಸಿ, ಎಸ್‌ಟಿ ನೌಕರರಿಗೆ ಸರ್ಕಾರಿ ನೌಕರಿಯಲ್ಲಿ ಬಡ್ತಿ ಮೀಸಲು ನೀಡಲು ಮಾನದಂಡ ರೂಪಿಸಬೇಕೆಂಬ ಕೋರಿಕೆಯನ್ನು ಪೀಠವು ತಿರಸ್ಕರಿಸಿದೆ. ‘ಈ ಸಮುದಾಯಗಳ ನೌಕರರಿಗೆ ಅಗತ್ಯ ಪ್ರಾತಿನಿಧ್ಯ ಇಲ್ಲ ಎಂಬುದನ್ನು ದತ್ತಾಂಶಗಳ ಮೂಲಕ ರಾಜ್ಯ ಸರ್ಕಾರವೇ ಸ್ಥಾಪಿಸಬೇಕು’ ಎಂದಿದೆ. ಎಸ್‌ಸಿ, ಎಸ್‌ಟಿ ಸಮುದಾಯದ ನೌಕರರಿಗೆ ಅಗತ್ಯ ಪ್ರಾತಿನಿಧ್ಯ ಇಲ್ಲ ಎಂಬುದನ್ನು ಇಡೀ ಸೇವೆಯಲ್ಲಿ ಅಥವಾ ವರ್ಗದಲ್ಲಿರುವ ಪ್ರಾತಿನಿಧ್ಯದ ಆಧಾರದಲ್ಲಿ ನಿರ್ಧರಿಸುವಂತಿಲ್ಲ. ಯಾವ ಶ್ರೇಣಿ ಅಥವಾ ಹುದ್ದೆಯ ವರ್ಗಕ್ಕೆ ಬಡ್ತಿ ಕೇಳಲಾಗಿದೆಯೋ ಆ ಶ್ರೇಣಿ ಅಥವಾ ಹುದ್ದೆ ವರ್ಗದಲ್ಲಿ ಪ್ರಾತಿನಿಧ್ಯ ಎಷ್ಟಿದೆ ಎಂಬುದನ್ನು ನೋಡಿಕೊಂಡು ನಿರ್ಧರಿಸಬೇಕು ಎಂದು ಪೀಠವು ಆದೇಶಿಸಿದೆ. ಈ ಆದೇಶವು ಸದ್ಯ ಜಾರಿಯಲ್ಲಿರುವ ಬಡ್ತಿ ಮೀಸಲಾತಿ ನೀತಿಯನ್ನೇ ಪ್ರಶ್ನಿಸುವಂತಿದೆ.

‘ಮೀಸಲಾತಿ ಪ್ರಮಾಣವು ಶೇಕಡಾ 50ರಷ್ಟನ್ನು ಮೀರಬಾರದು. ಬ್ಯಾಕ್‌ಲಾಗ್‌ ಹುದ್ದೆಗಳನ್ನು ಹಿಂದಿನ ಅವಧಿಯಿಂದ ನೀಡುವ ಅಗತ್ಯ ಇಲ್ಲ. ಒಟ್ಟು ವೃಂದವನ್ನು ಗಣನೆಗೆ ತೆಗೆದುಕೊಂಡು ಮಾದರಿ ಪದ್ಧತಿ ಅನುಸರಿಸಿ ಬಡ್ತಿ ಮೀಸಲಾತಿ ನೀಡಬೇಕು ಎಂದು ರತ್ನಪ್ರಭಾ ಸಮಿತಿ ವರದಿ ಸಲ್ಲಿಸಿತ್ತು. ಈ ವರದಿಯ ಆಧಾರದಲ್ಲಿ, ಸುಪ್ರೀಂ ಕೋರ್ಟ್‌ ಬಿ.ಕೆ. ಪವಿತ್ರ– 2 ತೀರ್ಪು ನೀಡಿರುವುದನ್ನು ಮರು ಪರಿಶೀಲಿಸಬೇಕು. ಹುದ್ದೆ ಆಧಾರಿತ ಪ್ರಾತಿನಿಧ್ಯ ಗುರುತಿಸಬೇಕು. ಯಾವುದೇ ಮಾರ್ಗದಿಂದ ಹುದ್ದೆಗೆ ಸೇರಿದ್ದರೂ ಎಸ್‌ಸಿ, ಎಸ್‌ಟಿ ಪ್ರಾತಿನಿಧ್ಯವನ್ನು ಕ್ರಮವಾಗಿ ಶೇ 15 ಮತ್ತು ಶೇ 3ಕ್ಕೆ ಸೀಮಿತಗೊಳಿಸಬೇಕು’ ಎಂದು ಪೀಠ ಹೇಳಿದೆ.

ADVERTISEMENT

ಎಸ್‌ಸಿ, ಎಸ್‌ಟಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡಬೇಕು ಎಂಬುದನ್ನು ಸಂವಿಧಾನದ ಅನುಚ್ಛೇದ 16(4)(ಎ)ಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ರಾಜ್ಯ ಸರ್ಕಾರ 1978 ಏ. 27ರ ಆದೇಶದಲ್ಲಿ ಎಸ್‌ಸಿ, ಎಸ್‌ಟಿ ನೌಕರರಿಗೆ ಮುಂಬಡ್ತಿಯಲ್ಲಿ ಕ್ರಮವಾಗಿ ಶೇ 15 ಮತ್ತು ಶೇ 3ರಷ್ಟು ಹುದ್ದೆ ಆಧಾರಿತ ಮೀಸಲಾತಿ ಜಾರಿಗೊಳಿಸಿದೆ. 1978ರಲ್ಲೇ ಬಡ್ತಿ ಮೀಸಲು ಸಂಘರ್ಷ ಆರಂಭವಾಗಿದೆ. 1995ರಲ್ಲಿ ಬಡಪ್ಪನವರ್‌ ಪ್ರಕರಣದಿಂದ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಬಳಿಕ ಎಂ. ನಾಗರಾಜ್‌ ಮತ್ತು ಬಿ.ಕೆ. ಪವಿತ್ರ ಪ್ರಕರಣದವರೆಗೂ ಹಿಗ್ಗಿಕೊಂಡು ಬಂದಿದೆ. ಬಿ.ಕೆ.ಪವಿತ್ರ ಮತ್ತು ಇತರರು ಹಾಗೂ ಭಾರತ ಸರ್ಕಾರದ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ (2017ರ ಫೆ. 9) ರಾಜ್ಯ ಸರ್ಕಾರದ ‘ಬಡ್ತಿ ಮೀಸಲಾತಿ ಕಾಯ್ದೆ– 2002’ ಅನ್ನು ರದ್ದುಗೊಳಿಸಿ ತೀರ್ಪು ನೀಡಿತ್ತು. ಈ ತೀರ್ಪು ಪ್ರಕಟವಾಗುತ್ತಿದ್ದಂತೆ ಪರಿಶಿಷ್ಟ ನೌಕರರ ಬಡ್ತಿ ಭವಿಷ್ಯ ಡೋಲಾಯಮಾನವಾಯಿತು. ಹೊಸ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿ, 3,750ಕ್ಕೂ ಹೆಚ್ಚು ಪರಿಶಿಷ್ಟ ನೌಕರರಿಗೆ ಹಿಂಬಡ್ತಿ ನೀಡಲಾಗಿತ್ತು.

ಈ ವರ್ಗಗಳ (ಎಸ್‌ಸಿ, ಎಸ್‌ಟಿ) ಹಿಂದುಳಿದಿರುವಿಕೆ, ಸೇವಾದಕ್ಷತೆ ಮತ್ತು ಪ್ರಾತಿನಿಧ್ಯದ ಕೊರತೆಗೆ ಸಂಬಂಧಿಸಿದ ದಾಖಲೆಗಳನ್ನು ರಾಜ್ಯ ಸರ್ಕಾರ ಸಂಗ್ರಹಿಸಿಲ್ಲ ಎಂಬುದು ಕಾಯ್ದೆಯನ್ನು ರದ್ದುಗೊಳಿಸಲು ನ್ಯಾಯಾಲಯ ನೀಡಿದ್ದ ಕಾರಣ. ಎಸ್‌ಸಿ, ಎಸ್‌ಟಿ ನೌಕರರು ಮತ್ತು ಇತರ ಸಂಘಟನೆಗಳು ಹೋರಾಟ ನಡೆಸಿದ್ದರಿಂದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ನೇತೃತ್ವದಲ್ಲಿಅಂದಿನ ಸರ್ಕಾರ ಸಮಿತಿ ರಚಿಸಿತ್ತು. ಈ ಸಮಿತಿಯ ವರದಿ ಆಧರಿಸಿ ‘ಮೀಸಲು ಆಧಾರದಲ್ಲಿ ಬಡ್ತಿ ಪಡೆದ ಅಧಿಕಾರಿಗಳಿಗೆ ತತ್ಪರಿಣಾಮ ಜ್ಯೇಷ್ಠತೆ ವಿಸ್ತರಣೆ ಕಾಯ್ದೆ –2017’ ಅನ್ನು ಸರ್ಕಾರ ರೂಪಿಸಿತು. ಅದಕ್ಕೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿಈ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಸರ್ಕಾರ ಸಮರ್ಥಿಸಿಕೊಂಡಿತ್ತು. ‘ಈ ಕಾನೂನಿನಿಂದ ಈವರೆಗೆ ನೀಡಿದ್ದ ಬಡ್ತಿ ಮೀಸಲಾತಿಗೆ ಧಕ್ಕೆ ಆಗದು. ಇಷ್ಟರವರೆಗೆ, ‘ಖಾಲಿ ಹುದ್ದೆ’ಗಳ ಆಧಾರದಲ್ಲಿ ಬಡ್ತಿ ನೀಡಲಾಗುತ್ತಿತ್ತು. ಇನ್ನು ಮುಂದೆ ‘ಹುದ್ದೆ ಆಧಾರ’ದಲ್ಲಿ ಮೀಸಲು ನೀಡಲಾಗುವುದು’ ಎಂದು ಹೇಳಿತ್ತು. ಪವಿತ್ರ– 2 ಪ್ರಕರಣದಲ್ಲಿ ಈ ಕಾಯ್ದೆಯನ್ನು (2019ರ ಮೇ 10)ಸುಪ್ರೀಂ ಕೋರ್ಟ್‌ ಸಿಂಧುಗೊಳಿಸಿದೆ.

‘ಬಡ್ತಿ ಹೊಂದಿದ ಎಸ್‌ಸಿ, ಎಸ್‌ಟಿ ನೌಕರರು ತತ್ಪರಿಣಾಮದ ಜ್ಯೇಷ್ಠತೆಗೆ ಹಕ್ಕು ಉಳ್ಳವರಾಗಿರತಕ್ಕದ್ದು, ಜ್ಯೇಷ್ಠತೆಯನ್ನು ಒಂದು ವೃಂದದಲ್ಲಿ ಸಲ್ಲಿಸಿದ ಸೇವಾವಧಿ ಆಧರಿಸಿ ನಿರ್ಧರಿಸತಕ್ಕದ್ದು’ ಎಂದುಈ ಕಾಯ್ದೆಯು ತಿಳಿಸಿದೆ. ಅಲ್ಲದೆ, ‘1978 ರ ಏ. 27ರ ನಂತರ ಬಡ್ತಿ ಹೊಂದಿದ ಎಸ್‌ಸಿ, ಎಸ್‌ಟಿ ನೌಕರರಿಗೆ ಈಗಾಗಲೇ ನೀಡಿರುವ ತತ್ಪರಿಣಾಮ ಜ್ಯೇಷ್ಠತೆ ಸಿಂಧುವಾಗಿರತಕ್ಕದ್ದು, ಅದನ್ನು ಸಂರಕ್ಷಿಸತಕ್ಕದ್ದು ಮತ್ತು ಭಂಗಗೊಳಿಸತಕ್ಕದ್ದಲ್ಲ’ ಎಂದೂ ಸ್ಪಷ್ಟಪಡಿಸಿದೆ. ಕಾಯ್ದೆಯನ್ನು ಜಾರಿಗೊಳಿಸಿ 2019ರ ಮೇ 15ರಂದು ಸರ್ಕಾರ ಆದೇಶ ಹೊರಡಿಸಿದೆ. ಪರಿಣಾಮ, ಹಿಂಬಡ್ತಿಗೊಳಗಾಗಿದ್ದ ಪರಿಶಿಷ್ಟ ನೌಕರರ ಜ್ಯೇಷ್ಠತೆ ಸಂರಕ್ಷಣೆಗೆ ಒಳಗಾಗಿ, ಮತ್ತೆ ಹಳೆ ಹುದ್ದೆಗೆ ಮರಳುವ ಸ್ಥಿತಿ ಬಂದಿತ್ತು.

ಇದೀಗ, ಜರ್ನೈಲ್‌ ಸಿಂಗ್‌ ವಿರುದ್ಧ ಲಚ್ಚಿಮಿ ನೈಯಾನ್‌ ಗುಪ್ತಾ ಮತ್ತು ಇತರರ ಪ್ರಕರಣದಲ್ಲಿ ನೀಡಿರುವ ಮಧ್ಯಂತರ ಆದೇಶವು ಬಡ್ತಿ ಮೀಸಲು ನೀತಿಯ ವಿಷಯದಲ್ಲಿ ಹಲವು ಕಾನೂನು ಪ್ರಶ್ನೆಗಳನ್ನು ಎತ್ತಿದೆ. ಆ ಆದೇಶವನ್ನು ಜಾರಿಗೊಳಿಸಬೇಕು ಎಂದು ‘ಅಹಿಂಸಾ’ (ಅಲ್ಪಸಂಖ್ಯಾತ, ಹಿಂದುಳಿದ, ಸಾಮಾನ್ಯ) ಸಂಘಟನೆ ರಾಜ್ಯ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದೆ. ಅದೇ ವೇಳೆ, ಕರ್ನಾಟಕಕ್ಕೆ ಸಂಬಂಧವಿಲ್ಲದ ಈ ತೀರ್ಪು ಅನ್ನು ಜಾರಿ ಮಾಡಬಾರದು ಎಂದು ಎಸ್‌ಸಿ, ಎಸ್‌ಟಿಸರ್ಕಾರಿ ನೌಕರರ ಸಂಘ ಒತ್ತಾಯಿಸಿದೆ. ಪರಿಣಾಮ, ಸರ್ಕಾರ ಮೀಸಲಾತಿ ಬಲೆಯಲ್ಲಿ ಸಿಲುಕಿದೆ.

‘ಬಡ್ತಿ ಮೀಸಲು ನೀತಿ ಪರಿಷ್ಕರಿಸಬೇಕು’

ಎಂ.ನಾಗರಾಜ್‌

ಜ. 28ರ ಆದೇಶದ ಅನ್ವಯ ಬಡ್ತಿ ಮೀಸಲು ನೀತಿ ಪರಿಷ್ಕರಿಸಿ, ವೃಂದವಾರು ಪ್ರಾತಿನಿಧ್ಯ ನೀಡಬೇಕಾಗಿದೆ. ಎಸ್‌ಸಿ, ಎಸ್‌ಟಿ ವರ್ಗಕ್ಕೆ ಕ್ರಮವಾಗಿ ಶೇ 15 ಮತ್ತು ಶೇ 3ರಷ್ಟು ಪ್ರಾತಿನಿಧ್ಯ ನೀಡಬೇಕಿದೆ. ಈಗ ಹಲವು ಇಲಾಖೆಗಳಲ್ಲಿ ಶೇ 18ಕ್ಕಿಂತಲೂ ಹೆಚ್ಚು ಇದೆ. ಇದರಿಂದಾಗಿ ಸಾಮಾನ್ಯ ವರ್ಗದ ಅರ್ಹ ನೌಕರರು ಬಡ್ತಿಯಿಂದ ವಂಚಿತರಾಗುತ್ತಿದ್ದಾರೆ. ಅಹಿಂಸಾ ವರ್ಗದವರಿಗೆ ಮತ್ತು ಪರಿಶಿಷ್ಟ ವರ್ಗದವರಿಗೆ 16 (1) ಹಾಗೂ 16 (4) ಎ ಪ್ರಕಾರ ಪ್ರಾತಿನಿಧ್ಯ ನೀಡಬೇಕಾದುದು ಸರ್ಕಾರದ ಕರ್ತವ್ಯ. ಎರಡೂ ವರ್ಗಕ್ಕೆ ಅವರವರ ಪ್ರಾತಿನಿಧ್ಯಕ್ಕೆ ತಕ್ಕಂತೆ ಬಡ್ತಿಗಳನ್ನು ನೀಡಿದ್ದೇ ಆಗಿದ್ದರೆ ಎರಡೂ ವರ್ಗಗಳ ಸಿಬ್ಬಂದಿ ಸಾಮರಸ್ಯದಿಂದ ಕೆಲಸ ಮಾಡಲು ಸಾಧ್ಯ ಆಗುತ್ತಿತ್ತು. ಈಗ ಇದಕ್ಕೆ ಸೂಕ್ತ ಸಮಯ ಬಂದಿದೆ. ಸರ್ಕಾರ ಜ್ಯೇಷ್ಠತೆ ಸಂರಕ್ಷಣೆ ಕಾಯ್ದೆ ವಾಪಸು ಪಡೆದು, ಎರಡೂ ವರ್ಗದವರಿಗೂ ಪ್ರಾತಿನಿಧ್ಯ ಸಿಗುವಂತೆ ನೀತಿ ರೂಪಿಸಿದರೆ ಸಮಸ್ಯೆಗೆ ಅಂತ್ಯ ಹಾಡಬಹುದು.

–ಎಂ.ನಾಗರಾಜ್‌, ಅಧ್ಯಕ್ಷ, ‘ಅಹಿಂಸಾ’ ಸಂಘಟನೆ

‘ಬಡ್ತಿ ಮೀಸಲು ನೀತಿ ಪರಿಷ್ಕರಿಸುವ ಅಗತ್ಯ ಇಲ್ಲ’

ಡಿ.ಚಂದ್ರಶೇಖರಯ್ಯ

ರಾಜ್ಯದಲ್ಲಿ ರಿಕ್ತ ಸ್ಥಾನ ಆಧಾರಿತವಾಗಿ ಮೀಸಲಾತಿ ನೀಡುವುದರಿಂದ ಎಸ್‌ಸಿ ,ಎಸ್‌ಟಿ ಮೀಸಲಾತಿಯು ಕ್ರಮವಾಗಿ ಶೇ 15, ಶೇ 3ರಷ್ಟನ್ನು ಮೀರುವುದಿಲ್ಲ. ಸುಪ್ರೀಂ ಕೋರ್ಟ್‌ ಪೀಠ, ಜ. 28ರ ಆದೇಶದಲ್ಲಿ ವೃಂದ ಆಧಾರಿತ ಮೀಸಲಾತಿ ನೀಡಬೇಕೆಂಬ ಅಂಶವನ್ನು ಚರ್ಚೆ ಮಾಡಿದೆ. ವಿಚಾರಣೆಯನ್ನು ಫೆ. 24ಕ್ಕೆ ಮುಂದೂಡಿದ್ದರೂ, ಈ ಅಂಶವನ್ನೇ ಆಧಾರವಾಗಿಟ್ಟು ಅಹಿಂಸಾ ಸಂಘಟನೆ ಗೊಂದಲ ಉಂಟು ಮಾಡುತ್ತಿದೆ. ಸಾಮಾನ್ಯ ಅರ್ಹತೆಯಲ್ಲಿ ನೇಮಕ ಆದವರು ಮತ್ತು ಮುಂಬಡ್ತಿ ಪಡೆದವರನ್ನು ಮೀಸಲಾತಿ ಕೋಟಾದಲ್ಲಿ ಪರಿಗಣಿಸಬಾರದೆಂದು ಹಲವು ಕೋರ್ಟ್‌ಗಳು ತೀರ್ಪು ನೀಡಿವೆ. ಹೀಗಾಗಿ, ಯಾವುದೇ ಮೂಲದಿಂದ ನೇಮಕ, ಬಡ್ತಿ ಪಡೆದವರನ್ನು ಎಸ್‌ಸಿ, ಎಸ್‌ಟಿ ಕೋಟಾದಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಬೇಕೆಂಬ ಬೇಡಿಕೆ ಸರಿಯಲ್ಲ. ರಾಜ್ಯದಲ್ಲಿ ಜ್ಯೇಷ್ಠತೆ ಸಂರಕ್ಷಣೆ ಕಾಯ್ದೆ ಜಾರಿಯಲ್ಲಿರುವುದರಿಂದ ಜ. 28ರ ಮಧ್ಯಂತರ ಆದೇಶದಂತೆ ಕ್ರಮ ವಹಿಸಬೇಕಾದ ಅಗತ್ಯ ಉದ್ಭವಿಸುವುದಿಲ್ಲ.

–ಡಿ.ಚಂದ್ರಶೇಖರಯ್ಯ, ಅಧ್ಯಕ್ಷ, ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘ

ರಾಜ್ಯದ ‘ಬಡ್ತಿ ಮೀಸಲು’ ಹೀಗಿದೆ...

ರಾಜ್ಯ ಸರ್ಕಾರ 1978 ಏ. 27ರ ಆದೇಶದಲ್ಲಿ ಮುಂಬಡ್ತಿಯಲ್ಲಿ ಶೇ 15:3 ಮೀಸಲಾತಿ ಜಾರಿಗೊಳಿಸಿದೆ. 33 ಹುದ್ದೆಗಳಿಗೆ ಒಂದು ವೃತ್ತವೆಂದು ಪರಿಗಣಿಸಿ, 1,7,14, 21, 27ನೇ ಹುದ್ದೆಗಳನ್ನು ಎಸ್‌ಸಿ. 2ನೇ ಹುದ್ದೆಯನ್ನು ಪರಿಶಿಷ್ಟ ಪಂಗಡದವರಿಗೆ ನೀಡಲಾಗುತ್ತದೆ. 99 ಹುದ್ದೆಗಳಲ್ಲಿ ಎಸ್‌ಸಿಗೆ 15, ಎಸ್‌ಟಿಗೆ 3 ಹುದ್ದೆಗಳನ್ನು ನೀಡಬೇಕು. 100ನೇ ಹುದ್ದೆಯಿಂದ ಮತ್ತೆ ಹೊಸತಾಗಿ ಮೀಸಲು ಅಳವಡಿಸಬೇಕು. ಈ ಬಡ್ತಿ ಮೀಸಲಾತಿ ಆದೇಶದಂತೆ ಈ ಹುದ್ದೆಗೆ ಎದುರಾಗಿ ಎಸ್‌ಸಿ, ಎಸ್‌ಟಿಯವರು ಲಭ್ಯವಿಲ್ಲದಿದ್ದಾಗ ಆ ಹುದ್ದೆಯನ್ನು ಸಾಮಾನ್ಯ ವರ್ಗದವರಿಗೆ ನೀಡಬಾರದು. ಎಸ್‌ಸಿ, ಎಸ್‌ಟಿಗಳಿಗೆ ಬ್ಯಾಕ್‌ಲಾಗ್‌ ಹುದ್ದೆಗಳಾಗಿ ಉಳಿಸಿಕೊಳ್ಳಲಾಗುತ್ತದೆ. ಬ್ಯಾಕ್‌ಲಾಗ್‌ ಹುದ್ದೆಗಳನ್ನು ತುಂಬಲು ಸರ್ಕಾರ 1997ರ ಜೂನ್‌ 24ರಂದು ಆದೇಶ ಹೊರಡಿಸಿದೆ. ಆ ಆದೇಶವನ್ನು 2015ರಲ್ಲಿ ಬದಲಿಸಲಾಗಿದ್ದು, ಅದರ ಪ್ರಕಾರ ಬ್ಯಾಕ್‌ಲಾಗ್‌ ಹುದ್ದೆಗಳನ್ನು ತುಂಬುವ ಸಂದರ್ಭದಲ್ಲಿ ಆ ಹುದ್ದೆಗಳಿಗೆ ಸೀಮಿತಗೊಳಿಸಿ ಅರ್ಹ ನೌಕರರ ಲಭ್ಯತೆ ಅನುಸರಿಸಿ ಒಂದು ಮೀಸಲು ವೃತ್ತದಲ್ಲಿ ಎಸ್‌ಸಿಗೆ ಗರಿಷ್ಠ 9, ಎಸ್‌ಟಿಗೆ 1 ಹುದ್ದೆ ಹೆಚ್ಚುವರಿ ನೀಡಲಾಗಿದೆ.

ಪ್ರಾತಿನಿಧ್ಯ ಮಿತಿ ಮೀರುವುದು ಹೇಗೆ?

* ಸ್ವಂತ ಅರ್ಹತೆಯಲ್ಲಿ ನೇಮಕವಾದಾಗ * ಸಾಮಾನ್ಯ ಜ್ಯೇಷ್ಠತೆಯಲ್ಲಿ ಸಾಮಾನ್ಯ ಹುದ್ದೆಯಲ್ಲಿ ಮುಂಬಡ್ತಿ ಪಡೆದಾಗ * ಬ್ಯಾಗ್‌ಲಾಗ್‌ ಹುದ್ದೆಗಳಿಗೆ ಎಸ್‌ಸಿ, ಎಸ್‌ಟಿ ನೇಮಕವಾದಾಗ ಮತ್ತು ಮುಂಬಡ್ತಿ ಪಡೆದಾಗ. ಅನುಕಂಪದ ಹುದ್ದೆಗಳಲ್ಲಿ ನೇಮಕವಾದಾಗ. * ಜ್ಯೇಷ್ಠತೆಯಲ್ಲಿ ಮೇಲಿರುವ ಸಾಮಾನ್ಯ ವರ್ಗದವರು ಮುಂದಿನ ವೃಂದಕ್ಕೆ ಬಡ್ತಿ ಪಡೆದಾಗ, ನಿವೃತ್ತಿಯಾದಾಗ, ಮರಣ ಹೊಂದಿದಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.