ADVERTISEMENT

ಆಳ–ಅಗಲ: ಘನತೆಯ ಸಾವಿನ ಹಕ್ಕು; ಕರ್ನಾಟಕದ ದಿಟ್ಟ ಹೆಜ್ಜೆ

ಬಿ.ವಿ. ಶ್ರೀನಾಥ್
Published 10 ಫೆಬ್ರುವರಿ 2025, 21:18 IST
Last Updated 10 ಫೆಬ್ರುವರಿ 2025, 21:18 IST
<div class="paragraphs"><p>ಎಐ ಚಿತ್ರ</p></div>

ಎಐ ಚಿತ್ರ

   

ಶಶಿಕಿರಣ ದೇಸಾಯಿ

ಘನತೆಯಿಂದ ಸಾಯುವ ರೋಗಿಗಳ ಹಕ್ಕಿನ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಅನುಸಾರ, ಗುಣಪಡಿಸಲಾಗದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಘನತೆಯಿಂದ ಸಾಯುವ ಅವಕಾಶ ನೀಡಿ ಕರ್ನಾಟಕ ಆರೋಗ್ಯ ಇಲಾಖೆ ಆದೇಶಿಸಿದೆ. ಮಾರಣಾಂತಿಕ ಕಾಯಿಲೆಗಳಿಂದ ನರಳುತ್ತಿರುವವರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಸರ್ಕಾರ ಹೇಳಿದೆ. ಭವಿಷ್ಯದಲ್ಲಿ ತನಗೆ ಎಂಥ ಚಿಕಿತ್ಸೆ ಸಿಗಬೇಕು ಎಂದು ರೋಗಿ ದಾಖಲಿಸುವ ಮರಣ ಇಚ್ಛೆಯ ಉಯಿಲನ್ನೂ ರಾಜ್ಯದಲ್ಲಿ ಜಾರಿಗೆ ತರಲು ಇಲಾಖೆ ಮುಂದಾಗಿದೆ. ಮಾನವ ಹಕ್ಕುಗಳ ದೃಷ್ಟಿಯಿಂದಲೂ ಈ ಆದೇಶ ಮುಖ್ಯವೆನಿಸಿದೆ  

ಸಂವಿಧಾನದ 21ನೇ ವಿಧಿಯು ಘನತೆಯಿಂದ ಜೀವಿಸುವ ಹಕ್ಕನ್ನು ನೀಡಿರುವಂತೆಯೇ ಘನತೆಯಿಂದ ಸಾಯುವ ಹಕ್ಕನ್ನೂ ಒಳಗೊಂಡಿದೆ ಎಂದು ಸುಪ್ರೀಂ ಕೋರ್ಟ್‌ 2023ರ ಜನವರಿ 24ರಂದು ನೀಡಿದ ತೀರ್ಪಿನಲ್ಲಿ ಸ್ಪಷ್ಟಪಡಿಸಿತ್ತು. ಬದುಕುವ ಸಾಧ್ಯತೆಯೇ ಇಲ್ಲದೆ ಗುಣಪಡಿಸಲಾಗದ ಕಾಯಿಲೆಯಿಂದ ನರಳುತ್ತಿರುವವರಿಗೆ, ನಿರಂತರ ಕೋಮಾದಲ್ಲಿ ಇರುವವರಿಗೆ, ಜೀವರಕ್ಷಕ ಉಪಕರಣಗಳ ನೆರವಿನಿಂದ ಉಸಿರಾಡುತ್ತಿರುವವರಿಗೆ ಜೀವರಕ್ಷಕ ಉಪಕರಣಗಳ ನೆರವು ನಿಲ್ಲಿಸುವ ಅಥವಾ ನೀಡಲಾಗುತ್ತಿರುವ ಔಷಧಗಳನ್ನು ನಿಲ್ಲಿಸುವ (ವಿತ್‌ಡ್ರಾವಲ್‌ ಆಫ್‌ ಲೈಫ್‌ ಸಸ್ಟೈನಿಂಗ್‌ ಥೆರಪಿ– ಡಬ್ಲ್ಯುಎಲ್‌ಎಸ್‌ಟಿ) ಮೂಲಕ ಘನತೆಯಿಂದ ಸಾಯುವ ಹಕ್ಕನ್ನು ಸಾಧ್ಯವಾಗಿಸುವ ಬಗ್ಗೆ ನಿರ್ದೇಶನ ನೀಡಿತ್ತು. ಜತೆಗೆ, ಸುಪ್ರೀಂ ಕೋರ್ಟ್ ಅದಕ್ಕಾಗಿ ಮರಣ ಇಚ್ಛೆಯ ಉಯಿಲು (ಅಡ್ವಾನ್ಸ್ ಮೆಡಿಕಲ್ ಡೈರೆಕ್ಟಿವ್‌–ಎಎಂಡಿ) ಅನ್ನು ಕೂಡ ರೂಪಿಸಿತ್ತು. 

ADVERTISEMENT

ಪ್ರಕ್ರಿಯೆ ಹೇಗೆ?: ಸುಪ್ರೀಂ ಕೋರ್ಟ್‌ನ ನಿರ್ದೇಶನದ ಪ್ರಕಾರ, ಡಬ್ಲ್ಯುಎಲ್‌ಎಸ್‌ಟಿಗೆ ರೋಗಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಅನುಮತಿ ಬೇಕು. ಜತೆಗೆ, ರೋಗಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯು ಪ್ರಾಥಮಿಕ ಮತ್ತು ದ್ವಿತೀಯ ವೈದ್ಯಕೀಯ ಮಂಡಳಿಗಳನ್ನು ರಚಿಸಬೇಕು. ಎರಡೂ ಮಂಡಳಿಗಳಲ್ಲಿ ತಲಾ ಮೂವರು ನೋಂದಾಯಿತ ವೈದ್ಯಕೀಯ ವೃತ್ತಿಪರರು (ವೈದ್ಯರು) ಇರಬೇಕು. ಜತೆಗೆ, ದ್ವಿತೀಯ ವೈದ್ಯಕೀಯ ಮಂಡಳಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ನಾಮ ನಿರ್ದೇಶನ ಮಾಡಿರುವ ಒಬ್ಬ ವೈದ್ಯರು ಇರಬೇಕು.  

ನಿರ್ದಿಷ್ಟ ಪ್ರಾಧಿಕಾರದಿಂದ ಅನುಮತಿ ಪಡೆದಿರುವ ನರಶಾಸ್ತ್ರಜ್ಞ, ನರಚಿಕಿತ್ಸಾತಜ್ಞ, ಶಸ್ತ್ರಚಿಕಿತ್ಸಕ, ಅರವಳಿಕೆ ತಜ್ಞ, ತುರ್ತು ಚಿಕಿತ್ಸಾತಜ್ಞರಲ್ಲಿ ಯಾರಾದರೂ ಒಬ್ಬರನ್ನು ರೋಗಿಯ ಮಿದುಳು ನಿಷ್ಕ್ರಿಯ ಎಂದು ನಿರ್ಧರಿಸುವ ವೈದ್ಯಕೀಯ ಪರಿಣತರ ಮಂಡಳಿಗೆ ನೇಮಿಸುವ ಸಂಬಂಧ ಆರೋಗ್ಯ ಇಲಾಖೆಯು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಪತ್ರ ಬರೆದಿದೆ. ನೇಮಕಗೊಂಡವರು ದ್ವಿತೀಯ ವೈದ್ಯಕೀಯ ಮಂಡಳಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಾರೆ. ರೋಗಿಯ ಹತ್ತಿರದ ಸಂಬಂಧಿ ಅಥವಾ ಮರಣ ಇಚ್ಛೆಯ ಉಯಿಲಿನಲ್ಲಿ ಹೆಸರಿಸಿರುವ ವ್ಯಕ್ತಿಯ ಅನುಮತಿ ಪಡೆದ ನಂತರ ಎರಡು ವೈದ್ಯಕೀಯ ಮಂಡಳಿಗಳು ಡಬ್ಲ್ಯುಎಲ್‌ಎಸ್‌ಟಿ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತವೆ. 

ಗುಣಪಡಿಸಲಾಗದ ಕಾಯಿಲೆಯಿಂದ ನರಳುತ್ತಿದ್ದು, ಬದುಕುವ ಸಾಧ್ಯತೆಯೇ ಇಲ್ಲದವರು, ನಿರಂತರ ಕೋಮಾದಲ್ಲಿ ಇರುವವರು, ಸಾಯುವ ಸ್ಥಿತಿಯಲ್ಲಿರುವ ಅಥವಾ ಜೀವಚ್ಛವದಂತೆ ಇರುವ ವ್ಯಕ್ತಿಗೆ ನೀಡುವ ಚಿಕಿತ್ಸೆಯನ್ನು ನಿಲ್ಲಿಸುವ ಅಥವಾ ಜೀವರಕ್ಷಕ ಉಪಕರಣಗಳ ನೆರವಿನಿಂದ ಉಸಿರಾಡುತ್ತಿರುವವರಿಗೆ ಅಳವಡಿಸಿರುವ ಉಪಕರಣಗಳನ್ನು ತೆಗೆಯುವ ಬಗ್ಗೆ ತೀರ್ಮಾನಿಸುವ ಜವಾಬ್ದಾರಿ ಎರಡೂ ವೈದ್ಯಕೀಯ ಮಂಡಳಿಗಳದ್ದು.

ರೋಗಿಯ ಕಾಯಿಲೆಯ ಸ್ಥಿತಿ, ಲಭ್ಯವಿರುವ ವೈದ್ಯಕೀಯ ಚಿಕಿತ್ಸೆ, ಪರ್ಯಾಯ ಚಿಕಿತ್ಸಾ ಕ್ರಮಗಳು, ಉಳಿದ ಅವಧಿಗೆ ನೀಡಬಹುದಾದ ಅಥವಾ ನೀಡಲಾಗದ ಚಿಕಿತ್ಸೆಯ ಪರಿಣಾಮಗಳನ್ನು ಪ್ರಾಥಮಿಕ ವೈದ್ಯಕೀಯ ಮಂಡಳಿಯು ರೋಗಿ/ಅವರ ಪ್ರತಿನಿಧಿಗೆ ವಿವರಿಸಬೇಕು. ಪ್ರಾಥಮಿಕ ವೈದ್ಯಕೀಯ ಮಂಡಳಿಯ ನಿರ್ಧಾರವನ್ನು ದ್ವಿತೀಯ ವೈದ್ಯಕೀಯ ಮಂಡಳಿಯು ದೃಢೀಕರಿಸುತ್ತದೆ.  

ಮಂಡಳಿಗಳ ನಿರ್ಧಾರದ ಪ್ರತಿಗಳನ್ನು, (ನಿರ್ಧಾರ ಕಾರ್ಯಗತಗೊಳಿಸುವ ಮುನ್ನವೇ) ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯಕ್ಕೆ (ಜೆಎಂಎಫ್‌ಸಿ) ಸಲ್ಲಿಸಬೇಕು. ಜೆಎಂಎಫ್‌ಸಿಯು ಆ ಪ್ರತಿಗಳನ್ನು ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಕಳಿಸುತ್ತದೆ. ಅಲ್ಲಿ ದಾಖಲೆಯನ್ನು ಸಂಗ್ರಹಿಸಿಡಲಾಗುತ್ತದೆ.

ಮರಣ ಇಚ್ಛೆಯ ಉಯಿಲು ಎಂದರೇನು?

ಭವಿಷ್ಯದಲ್ಲಿ ತನಗೆ ಎಂಥ ವೈದ್ಯಕೀಯ ಚಿಕಿತ್ಸೆ ನೀಡಬೇಕು ಅಥವಾ ನೀಡಬಾರದು ಎನ್ನುವ ಬಗ್ಗೆ ರೋಗಿಯೊಬ್ಬರು ನೀಡುವ ನಿರ್ದೇಶನವೇ ಮರಣ ಇಚ್ಛೆಯ ಉಯಿಲು. ಭವಿಷ್ಯದಲ್ಲಿ ರೋಗಿಯು ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಕಳೆದುಕೊಂಡರೆ, ಆತನ ಪರವಾಗಿ ನಿರ್ಧಾರ ತೆಗೆದುಕೊಳ್ಳಲು ಇಬ್ಬರು ವ್ಯಕ್ತಿಗಳನ್ನು ನಾಮ ನಿರ್ದೇಶನ ಮಾಡಲೂ ಮರಣ ಇಚ್ಛೆಯ ಉಯಿಲಿನಲ್ಲಿ ಅವಕಾಶ ಇದೆ. ರೋಗಿಗೆ ಎಂಥ ಚಿಕಿತ್ಸೆ ನೀಡಬೇಕು ಅಥವಾ ನೀಡಬಾರದು ಎನ್ನುವುದನ್ನು ನಿರ್ಧರಿಸಲು ವೈದ್ಯರು, ರೋಗಿಗಳು ಮತ್ತು ಇತರ ಆರೋಗ್ಯ ರಕ್ಷಣಾ ಸಿಬ್ಬಂದಿಗೆ ಎಎಂಡಿ ನೆರವಾಗುತ್ತದೆ.

ಮಾನಸಿಕವಾಗಿ ಆರೋಗ್ಯವಂತನಾದ ಒಬ್ಬ ವಯಸ್ಕ ವ್ಯಕ್ತಿಯು ಮರಣ ಇಚ್ಛೆಯ ಉಯಿಲನ್ನು ದಾಖಲಿಸಬಹುದು. 18 ವರ್ಷ ತುಂಬಿದ ಯಾವುದೇ ವ್ಯಕ್ತಿ ಮರಣದ ಇಚ್ಛೆಯ ಉಯಿಲು ಸಿದ್ಧಪಡಿಸಿ, ಇಬ್ಬರು ಸಾಕ್ಷಿಗಳ ಸಮಕ್ಷಮದಲ್ಲಿ ಅದಕ್ಕೆ ಸಹಿ ಹಾಕಬೇಕು. ಅದನ್ನು ನೋಟರಿ ಇಲ್ಲವೇ ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಣ ಮಾಡಬೇಕು. ನಂತರ ಅವರು ಅದನ್ನು ಸ್ಥಳೀಯ ಆಡಳಿತದಿಂದ ನೇಮಕವಾಗಿರುವ ಸಂಬಂಧಪಟ್ಟ (ಈ ಕಾರ್ಯಕ್ಕೆ ನಿಯೋಜಿತರಾಗಿರುವ) ಅಧಿಕಾರಿಗೆ ಕಳಿಸಬೇಕು. ವೈದ್ಯಕೀಯ ಸಂಸ್ಥೆಗಳಲ್ಲಿರುವ ಪುಸ್ತಕ/ಡಿಜಿಟಲ್ ರೂಪದಲ್ಲಿಯೂ ರೋಗಿಯ ಮರಣ ಇಚ್ಛೆಯ ಉಯಿಲನ್ನು ದಾಖಲಿಸಬಹುದು. 

ಉಯಿಲಿಗೆ ಕೇರಳ ಮಾದರಿ

ಜನರು ಮರಣದ ಇಚ್ಛೆಯ ಉಯಿಲನ್ನು ದಾಖಲಿಸಬಹುದು ಮತ್ತು ಕಠಿಣ ಮಾರ್ಗಸೂಚಿಗಳ ಅಡಿಯಲ್ಲಿ ಔಷಧೋಪಚಾರ ನಿಲ್ಲಿಸುವ ಮೂಲಕ ವ್ಯಕ್ತಿಯ ಸಾವಿಗೆ ಕಾರಣವಾಗುವಂಥ ಪರೋಕ್ಷ ದಯಾಮರಣವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು 2018ರಲ್ಲಿ ‘ಸುಪ್ರೀಂ’ ತೀರ್ಪು ನೀಡಿತ್ತು. 

ತೀರ್ಪಿನ ನಂತರವೂ ಮರಣ ಇಚ್ಛೆಯ ಉಯಿಲನ್ನು (ಎಎಂಡಿ) ಭಾರತೀಯರು ಗಂಭೀರವಾಗಿ ಪರಿಗಣಿಸಿಯೇ ಇಲ್ಲ.

ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವೊಂದು ಕೇರಳದಲ್ಲಿ ಆರಂಭವಾಗಿದೆ. ಕೊಲ್ಲಂ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಯಾದೇವ್ ಮತ್ತು ತಂಡವು ಮರಣ ಇಚ್ಛೆಯ ಉಯಿಲಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ತ್ರಿಶ್ಶೂರ್‌ನ ನೋವು ಮತ್ತು ಉಪಶಾಮಕ ಆರೋಗ್ಯ ಕೇಂದ್ರದ 30 ಮಂದಿ ಮರಣ ಇಚ್ಛೆಯ ಉಯಿಲಿಗೆ ಸಹಿ ಮಾಡಿದ್ದಾರೆ. 

ಮುಂಬೈನ ಸ್ತ್ರೀರೋಗ ತಜ್ಞರಾದ ಡಾ.ನಿಖಿಲ್ ದಾತಾರ್ ಎನ್ನುವವರು ಎರಡು ವರ್ಷಗಳ ಹಿಂದೆ ಮರಣ ಇಚ್ಛೆಯ ಉಯಿಲನ್ನು ಎಲ್ಲಿ ದಾಖಲಿಸಬೇಕು ಎಂದು ಹುಡುಕಿದಾಗ, ಮಹಾರಾಷ್ಟ್ರದಲ್ಲಿ ಅದಕ್ಕಾಗಿ ಒಬ್ಬ ಅಧಿಕಾರಿಯನ್ನೂ ನಿಯೋಜಿಸಲಾಗಿಲ್ಲ ಎನ್ನುವುದು ತಿಳಿಯಿತು. ಅವರು ದಾತಾರ್ ಕೋರ್ಟ್‌ ಮೆಟ್ಟಿಲೇರಿದರು. ಅದರ ಫಲವಾಗಿ ಮಹಾರಾಷ್ಟ್ರ ಸರ್ಕಾರು ಸ್ಥಳೀಯ ಸಂಸ್ಥೆಗಳಲ್ಲಿ 400 ಅಧಿಕಾರಿಗಳನ್ನು ನೇಮಿಸಿತು. ಕಳೆದ ವರ್ಷ ಗೋವಾ ಸರ್ಕಾರವು ಮರಣ ಇಚ್ಛೆಯ ಉಯಿಲನ್ನು ಜಾರಿಗೊಳಿಸಿದೆ. ದೆಹಲಿಯ ಏಮ್ಸ್‌ನ ಡಾ.ಸುಷ್ಮಾ ಭಟ್ನಾಗರ್ ಅವರು ಇದರ ಬಗ್ಗೆ ಜಾಗೃತಿ ಮೂಡಿಸಲು ಸಂಸ್ಥೆಯಲ್ಲಿ ‌ಒಂದು ಪ್ರತ್ಯೇಕ ವಿಭಾಗ ಆರಂಭಿಸುವುದಾಗಿ ತಿಳಿಸಿದ್ದಾರೆ.

ಈಗ ಕರ್ನಾಟಕದಲ್ಲಿಯೂ ಮರಣ ಇಚ್ಛೆಯ ಉಯಿಲು ದಾಖಲಿಸಲು ಸರ್ಕಾರ ಅವಕಾಶ ಕಲ್ಪಿಸಿದೆ. 

ಅರುಣಾ ಶಾನಭಾಗ್ ಪ್ರಕರಣ

ಅರುಣಾ ಶಾನಭಾಗ್‌

ಘನತೆಯಿಂದ ಸಾಯುವ ಹಕ್ಕಿನ ಬಗ್ಗೆ ಭಾರತದಲ್ಲಿ ತೀವ್ರ ಚರ್ಚೆ ಏರ್ಪಟ್ಟು ಸುಪ್ರೀಂ ಕೋರ್ಟ್ ಮಾರ್ಗದರ್ಶಕ ಸೂತ್ರಗಳನ್ನು ರೂಪಿಸುವಂತೆ ನಿರ್ದೇಶನ ನೀಡಲು ಕಾರಣವಾದದ್ದು ಅರುಣಾ ಶಾನಭಾಗ್‌ ಪ್ರಕರಣ. ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಅರುಣಾ ಅವರು, ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. 1973ರ ನ.27ರಂದು ಅವರ ಮೇಲೆ ಆಸ್ಪತ್ರೆಯ ವಾರ್ಡ್ ಬಾಯ್ ಅತ್ಯಾಚಾರ ಎಸಗಿದ್ದ. ಈ ವೇಳೆ ಆತ ಅರುಣಾ ಅವರ ಕುತ್ತಿಗೆಗೆ ನಾಯಿ ಕಟ್ಟಿಹಾಕುವ ಚೈನ್ ಅನ್ನು ಬಿಗಿದಿದ್ದರಿಂದ ಅವರ ಮಿದುಳು ನಿಷ್ಕ್ರಿಯಗೊಂಡಿತ್ತು. ಮೂಗಿಗೆ ನಳಿಕೆ ಅಳವಡಿಸಿ ಅವರಿಗೆ ಆಹಾರ ಪೂರೈಸಲಾಗುತ್ತಿತ್ತು. ಜೀವಚ್ಛವದಂತೆ ಅವರು ಆಸ್ಪತ್ರೆಯಲ್ಲಿಯೇ 42 ವರ್ಷ ಕಳೆದರು.

ಅರುಣಾ ಅವರಿಗೆ ದಯಾಮರಣ ಕಲ್ಪಿಸುವಂತೆ ಅವರ ಪರವಾಗಿ ಪತ್ರಕರ್ತೆ ಪಿಂಕಿ ವಿರಾನೀ 2009ರಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಭಾರತದಲ್ಲಿ ಉದ್ದೇಶಪೂರ್ವಕವಾಗಿ ಹತ್ಯೆ ಮಾಡುವುದು ಅಪರಾಧ ಆದ್ದರಿಂದ ನೇರ ದಯಾಮರಣಕ್ಕೆ (ಸಾಯುವಂಥ ಔಷಧ ನೀಡುವುದು) ಅವಕಾಶ ನೀಡಲು ಕೋರ್ಟ್ ಒಪ್ಪಲಿಲ್ಲ. ಆದರೆ, ಗುಣಪಡಿಸಲಾಗದ ಕಾಯಿಲೆಗಳನ್ನು ಎದುರಿಸುತ್ತಿರುವಂಥ ಕೆಲವರ ವಿಚಾರದಲ್ಲಿ ಪರೋಕ್ಷ ದಯಾಮರಣ (ಔಷಧೋಪಚಾರ ನಿಲ್ಲಿಸುವುದು) ಪರಿಗಣಿಸಬಹುದು ಎಂದಿತ್ತು. ಕೊನೆಗೆ, ಅರುಣಾ ಅವರು 2015ರಲ್ಲಿ ಮೃತಪಟ್ಟಿದ್ದರು.   

‘ಗಾಯಗೊಂಡು ಜರ್ಜರಿತವಾದ ನನ್ನ ಹಕ್ಕಿ ಮರಿ ಕೊನೆಗೂ ಇಂದು ಹಾರಿಹೋಯಿತು. ಹಾರುವ ಮುನ್ನ ಅದು ಭಾರತಕ್ಕೆ ಪರೋಕ್ಷ ದಯಾಮರಣದ ಕಾನೂನು ನೀಡಿತು’ ಎಂದು ಪಿಂಕಿ ವಿರಾನಿ ಅವರು ಅರುಣಾ ಸಾವಿಗೆ ಮಿಡಿದಿದ್ದರು.

ಯಾವ ದೇಶಗಳಲ್ಲಿ ಕಾನೂನುಬದ್ಧ? 

ಘನತೆಯಿಂದ ಸಾಯುವ ಹಕ್ಕು, ನೇರ ಮತ್ತು ಪರೋಕ್ಷ ದಯಾಮರಣ ಇವುಗಳ ನಡುವೆ ಸೂಕ್ಷ್ಮ ವ್ಯತ್ಯಾಸಗಳಿವೆ. ಪ್ರಕ್ರಿಯೆಯಲ್ಲಿ ವ್ಯತ್ಯಾಸಗಳಿದ್ದರೂ ಇವುಗಳ ಅಂತಿಮ ಫಲಶ್ರುತಿ ಒಂದೇ. ಜಗತ್ತಿನ ಹೆಚ್ಚಿನ ದೇಶಗಳಲ್ಲಿ ಇವು ಕಾನೂನುವಿರೋಧಿ ಆಗಿದ್ದರೂ, ಕೆಲವು ದೇಶಗಳಲ್ಲಿ ಇದನ್ನು ಕಾನೂನುಬದ್ಧಗೊಳಿಸಲಾಗಿದೆ. ಕೆನಡಾ, ಆಸ್ಟ್ರೇಲಿಯಾ, ಸ್ವಿಟ್ಜರ್ಲೆಂಡ್, ನೆದರ್ಲೆಂಡ್ಸ್, ಬೆಲ್ಜಿಯಂ, ನ್ಯೂಜಿಲೆಂಡ್, ಸ್ಪೇನ್, ಆಸ್ಟ್ರಿಯಾ, ಈಕ್ವೆಡಾರ್ ದೇಶಗಳಲ್ಲಿ ಇದು ಜಾರಿಯಲ್ಲಿದೆ. ಅಮೆರಿಕದ ಕ್ಯಾಲಿಫೋರ್ನಿಯಾ, ಕೊಲರಾಡೊ, ನ್ಯೂ ಮೆಕ್ಸಿಕೊ, ಮೊಂಟಾನಾ, ವಾಷಿಂಗ್ಟನ್, ಒರೆಗಾನ್ ಮುಂತಾದ ರಾಜ್ಯಗಳಲ್ಲಿಯೂ ಇದು ಕಾನೂನುಬದ್ಧವಾಗಿದೆ.

ದುರುಪಯೋಗದ ಆತಂಕ

ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಕರ್ನಾಟಕ ಸರ್ಕಾರವು ಘನತೆಯಿಂದ ಸಾಯುವ ಹಕ್ಕನ್ನು ಕಲ್ಪಿಸಿರುವ ಬಗ್ಗೆ ಕೆಲವು ವಲಯಗಳಿಂದ ಆತಂಕವೂ ವ್ಯಕ್ತವಾಗಿದೆ. ಗಂಭೀರವಾದ ಕಾಯಿಲೆ ಇರುವವರು, ಹಲವು ರೀತಿಯ ಕಾಯಿಲೆಗಳಿಂದ ನೊಂದವರು ಅಥವಾ ಅವರ ಕುಟುಂಬಸ್ಥರು ದುರ್ಬಲ ಗಳಿಗೆಗಳಲ್ಲಿ ಕೆಟ್ಟ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿದೆ. ವೈದ್ಯರು ಅಥವಾ ಸಂಬಂಧಪಟ್ಟವರು ಹಣ ಮತ್ತು ಇತರೆ ಆಮಿಷಕ್ಕೊಳಗಾಗಿ ಸುಳ್ಳು ಪ್ರಮಾಣ ಪತ್ರ ನೀಡುವ ಸಾಧ್ಯತೆಯ ಬಗ್ಗೆಯೂ ಕೆಲವರು ಆತಂಕ ವ್ಯಕ್ತಪಡಿಸುತ್ತಾರೆ. ರೋಗಿ ಇನ್ನು ಬದುಕುವುದಿಲ್ಲ ಎಂದು ವೈದ್ಯರ ಹೇಳಿದ ನಂತರವೂ ಅನೇಕರು ಬದುಕುಳಿದಿರುವ ನಿದರ್ಶನಗಳಿರುವುದರಿಂದ ಎಷ್ಟೇ ಕಾಯಿಲೆ ಬಿದ್ದರೂ, ನೈಸರ್ಗಿಕವಾಗಿ ಸಾವು ಬರುವ ತನಕ ಮನುಷ್ಯ ಬದುಕಬೇಕು ಎನ್ನುವ ವಾದವೂ ಇದೆ.

ಆಧಾರ: ಪಿಟಿಐ, ಆರೋಗ್ಯ ಇಲಾಖೆಯ ಆದೇಶ, ಬಿಬಿಸಿ

‘ಹೋರಾಟಕ್ಕೆ ಸಂದ ಗೆಲುವು’

ದಾವಣಗೆರೆ: ‘ಗುಣಪಡಿಸಲಾಗದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಘನತೆಯಿಂದ ಮರಣ ಹೊಂದುವ ಹಕ್ಕು ಕರ್ನಾಟಕದಲ್ಲಿ ಜಾರಿಗೆ ಬಂದಿರುವುದು ದಯಾಮರಣದ ಅನುಷ್ಠಾನ ಕೋರಿ ನಿರಂತರವಾಗಿ ನಡೆಸಿದ ಹೋರಾಟದ ಫಲ’ ಎಂದು ನಿವೃತ್ತ ಶಿಕ್ಷಕಿ 85 ವರ್ಷ ವಯಸ್ಸಿನ ಎಚ್‌.ಬಿ. ಕರಿಬಸಮ್ಮ ಹೇಳಿದರು.

‘ಕರುಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಾನು 24 ವರ್ಷಗಳಿಂದ ದಯಾಮರಣ ಅಥವಾ ಇಚ್ಛಾಮರಣ ಕೋರಿ ಹೋರಾಟ ನಡೆಸುತ್ತಿದ್ದೇನೆ. ಕೋರ್ಟ್‌ ಮೆಟ್ಟಿಲು ಏರಿ ಕಾನೂನಾತ್ಮಕ ಹಕ್ಕು ಪಡೆಯಲು ಪ್ರಯತ್ನಿಸಿದ್ದೇನೆ. ದಯಾಮರಣಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿರುವುದು ಹರ್ಷವುಂಟು ಮಾಡಿದೆ. ಕಾನೂನಾತ್ಮಕವಾಗಿ ದಯಾ ಮರಣ ಪಡೆದ ಮೊದಲ ವ್ಯಕ್ತಿ ನಾನಾಗಬೇಕು ಎಂಬ ಬಯಕೆ ಇದೆ. ಈ ಅವಕಾಶಕ್ಕೆ ಕಾಯುತ್ತಿದ್ದೇನೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಹಲವು ಬಾರಿ ಸಾವಿನ ಮನೆಯ ಬಾಗಿಲು ಬಡಿದಿದ್ದೇನೆ. ಆತ್ಮಹತ್ಯೆ ಮಾಡಿಕೊಳ್ಳಲು ಮನಸು ಒಪ್ಪಲಿಲ್ಲ. ಮರಣವೂ ಘನತೆಯಿಂದ ಇರಬೇಕು ಎಂಬುದು ನನ್ನ ನಂಬಿಕೆ. ಹಲವು ದೇಶಗಳಲ್ಲಿರುವ ದಯಾಮರಣದ ಅವಕಾಶ ಭಾರತದಲ್ಲಿ ಏಕಿಲ್ಲ ಎಂಬ ಪ್ರಶ್ನೆ ಕಾಡಿತ್ತು’ ಎಂದರು.

‘ದೇಶದಲ್ಲಿ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ವೃದ್ಧರ ಸಂಖ್ಯೆ ದೊಡ್ಡದಾಗಿದೆ. ಘನತೆಯಿಂದ ಸಾಯುವ ಅವಕಾಶ ಸಿಗದೇ ಅವರೂ ನನ್ನಂತೆ ನರಳುತ್ತಿದ್ದಾರೆ. ದಯಾಮರಣ ಕಾನೂನು ಜಾರಿಗಾಗಿ ಹೋರಾಟ ಆರಂಭಿಸಿದಾಗ ಎಲ್ಲರೂ ಮೂದಲಿಸಿದ್ದರು. ಕುಟುಂಬದವರು ಸಂಬಂಧಿಕರು ದೂರವಾದರು. 16 ವರ್ಷಗಳಿಂದ ವೃದ್ಧಾಶ್ರಮದಲ್ಲಿ ನೆಲಸಿ ಹೋರಾಟ ಮುಂದುವರಿಸಿದೆ’ ಎಂದು ನೆನಪಿಸಿಕೊಂಡರು. ಹೋರಾಟಕ್ಕೆ ನೆರವಾದ ವಿಜಯಕುಮಾರಿ ಶಾಂತಮ್ಮ ಟಿ.ಎನ್‌.ಚಿಕ್ನಿಸ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.