ಮಂಬೈ ದಾಳಿ ಮತ್ತು ರಾಣಾ
ಮುಂಬೈನ 26/11 ದಾಳಿ ಆಗಿ 16 ವರ್ಷಗಳ ನಂತರ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಘಟಿಸಿದೆ. ಪ್ರಕರಣದ ಸಂಚುಕೋರರಲ್ಲಿ ಒಬ್ಬನಾದ ತಹವ್ವುರ್ ಹುಸೇನ್ ರಾಣಾನನ್ನು ಅಮೆರಿಕವು ಭಾರತಕ್ಕೆ ಹಸ್ತಾಂತರಿಸಿದೆ. 26/11ರ ಕರಾಳ ಘಟನೆಯ ಜತೆಗೆ ದೇಶದ ಇತರೆಡೆ ನಡೆದಿದ್ದ ಭಯೋತ್ಪಾದನಾ ದಾಳಿಗಳ ಕುರಿತ ಪ್ರಮುಖ ಮಾಹಿತಿಯೂ ರಾಣಾ ಬಳಿ ಇರುವ ಸಾಧ್ಯತೆ ಇದೆ. ಜತೆಗೆ, ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸುವ ಉಗ್ರರಿಗೆ ತನ್ನ ದೇಶದಲ್ಲಿ ನೆಲೆ ಒದಗಿಸಿರುವ ಪಾಕಿಸ್ತಾನದ ಮುಖವಾಡ ಕಳಚಲಿದೆ ಎನ್ನಲಾಗುತ್ತಿದೆ. ರಾಣಾ ಹಸ್ತಾಂತರವು ಭಯೋತ್ಪಾದನೆ ವಿರುದ್ಧದ ಭಾರತದ ಮುಂದಿನ ಹೋರಾಟಕ್ಕೆ ಬಲ ತುಂಬಲಿದೆ ಎನ್ನುವ ನಿರೀಕ್ಷೆ ಇದೆ.
ಭಾರತದ ವಾಣಿಜ್ಯ ರಾಜಧಾನಿ ಮುಂಬೈಗೆ 2008ರ ನ.26ರ ರಾತ್ರಿ ದೋಣಿ ಮೂಲಕ ಬಂದಿದ್ದ ಉಗ್ರ ಸಂಘಟನೆ ಲಷ್ಕರ್– ಎ –ತಯಬಾದ (ಎಲ್‌ಇಟಿ) 10 ಆತ್ಮಾಹುತಿ ದಾಳಿಕೋರರು ಮೂರು ದಿನ ನಗರದಲ್ಲಿ ಮಾರಣಹೋಮ ನಡೆಸಿದ್ದರು. ವಿದೇಶಿಯರು ಹೆಚ್ಚಾಗಿ ಸೇರುವ, ಜನಸಂದಣಿ ಇರುವ ಆರು ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು. ಅಮೆರಿಕದ ಆರು ಮಂದಿ ಸೇರಿದಂತೆ 166 ಮಂದಿ ಸಾವಿಗೀಡಾಗಿದ್ದರು. 300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಒಂಬತ್ತು ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು. ಅಜ್ಮಲ್ ಕಸಬ್ ಎಂಬಾತ ಸೆರೆಸಿಕ್ಕಿದ್ದ. ಆತನನ್ನು 2012ರಲ್ಲಿ ನೇಣಿಗೆ ಏರಿಸಲಾಗಿತ್ತು.
ಪಾಕಿಸ್ತಾನದಲ್ಲಿ ಎಲ್‌ಇಟಿ, ಅಲ್ಲಿನ ಗುಪ್ತಚರ ಸಂಸ್ಥೆ ಐಎಸ್‌ಐ ವ್ಯವಸ್ಥಿತವಾಗಿ ಯೋಜಿಸಿದ್ದ ಈ ದಾಳಿಯ ಮುಖ್ಯ ಸಂಚುಕೋರ ಡೇವಿಡ್ ಕೊಲೆಮನ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿ ಎನ್ನುವ ಅಮೆರಿಕದ ಪ್ರಜೆ. ಮುಂಬೈ ಮತ್ತು ಡೆನ್ಮಾರ್ಕ್‌ನಲ್ಲಿ ಭಯೋತ್ಪಾದನಾ ದಾಳಿಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಪೊಲೀಸರು ಅವನನ್ನು ಬಂಧಿಸಿದ್ದರು. ಆತ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತನ್ನ ಸಹಚರ ಮತ್ತು ದಾಳಿಯ ಮತ್ತೊಬ್ಬ ಸಂಚುಕೋರ ತಹವ್ವುರ್ ಹುಸೇನ್ ರಾಣಾನ ಪಾತ್ರದ ಬಗ್ಗೆ ಮಾಹಿತಿ ನೀಡಿದ್ದ.
ಯಾರು ಈ ರಾಣಾ?: 64 ವರ್ಷದ ತಹವ್ವುರ್ ರಾಣಾ ಪಾಕಿಸ್ತಾನ ಮೂಲದ ಕೆನಡಾ ಪ್ರಜೆ. ಪಾಕ್‌ನ ಪಂಜಾಬ್ ಪ್ರಾಂತ್ಯದ ಸಾಹಿವಾಲ್ ಜಿಲ್ಲೆಯ ಚಿಚಾವತನೀ ಎಂಬ ನಗರದವನು. ವೈದ್ಯಕೀಯ ಪದವಿ ಪಡೆದು ಪಾಕ್ ಸೇನೆಯಲ್ಲಿ ವೈದ್ಯನಾಗಿ ಒಂದಷ್ಟು ಕೆಲಸ ಮಾಡಿದ ಈತ, 1997ರಲ್ಲಿ ನಂತರ ಕೆನಡಾಕ್ಕೆ ವಲಸೆ ಹೋಗಿ, 2001ರಲ್ಲಿ ಅಲ್ಲಿನ ಪೌರತ್ವವನ್ನೂ ಪಡೆದಿದ್ದ. ನಂತರ ಅಮೆರಿಕಕ್ಕೆ ತೆರಳಿದ ಈತ ಅಲ್ಲಿ ‘ಫಸ್ಟ್ ವರ್ಲ್ಡ್ ಇಮಿಗ್ರೇಷನ್ ಸರ್ವೀಸಸ್’ ಎನ್ನುವ ಕಚೇರಿಯನ್ನು ಷಿಕಾಗೊ, ನ್ಯೂಯಾರ್ಕ್, ಕೆನಡಾದ ಟೊರಂಟೊಗಳಲ್ಲಿ ಆರಂಭಿಸಿ ವೀಸಾ ಸಂಬಂಧಿ ಕೆಲಸ ಮಾಡುತ್ತಿದ್ದ.
ರಾಣಾ ಮತ್ತು ಹೆಡ್ಲಿ ಬಾಲ್ಯಸ್ನೇಹಿತರು. ಹೆಡ್ಲಿಯ ಅಪ್ಪ ಪಾಕಿಸ್ತಾನಿ, ಅಮ್ಮ ಅಮೆರಿಕದವರು. ಹೆಡ್ಲಿ ಚಿಕ್ಕಂದಿನಲ್ಲಿ ಪಾಕ್‌ನಲ್ಲಿ ಓದಿದ್ದ. ಈ ವೇಳೆ ರಾಣಾ ಆತನ ಸ್ನೇಹಿತನಾಗಿದ್ದ. ಎಲ್‌ಇಟಿ ಬಗ್ಗೆ ಆಕರ್ಷಿತನಾಗಿದ್ದ ಹೆಡ್ಲಿ, ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿದ. ಅಮೆರಿಕದಲ್ಲಿ ಹೆಡ್ಲಿಯೊಂದಿಗೆ ರಾಣಾನೂ ಸೇರಿಕೊಂಡ. ಎನ್‌ಐಎ 2009 ನ.11ರಂದು ದಾಖಲಿಸಿರುವ ದೂರಿನಂತೆ, ಎಲ್‌ಇಟಿ ಮತ್ತು ಹರ್ಕತ್–ಉಲ್ ಜಿಹಾದಿ ಇಸ್ಲಾಮಿ ಜತೆ ಸೇರಿ ಇವರಿಬ್ಬರೂ ಭಾರತದ ದೆಹಲಿ, ಮುಂಬೈ ಮತ್ತಿತರ ನಗರಗಳಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ಎಸಗಲು ಯೋಜಿಸಿದ್ದರು. ಹೆಡ್ಲಿಗೆ ಉಗ್ರರೊಂದಿಗೆ ಇರುವ ಸಂಪರ್ಕಗಳ ಬಗ್ಗೆ ರಾಣಾಗೆ ಅರಿವಿತ್ತು ಎಂದು ತನಿಖೆ ವೇಳೆ ತಿಳಿದುಬಂದಿತ್ತು.
ರಾಣಾ ಪಾತ್ರವೇನು?: ಸಂಚಿನ ಭಾಗವಾಗಿ ರಾಣಾ ಹಲವು ಬಾರಿ ಭಾರತಕ್ಕೆ ಭೇಟಿ ನೀಡಿದ್ದ; ದೆಹಲಿಯ ನ್ಯಾಷನಲ್ ಡಿಫೆನ್ಸ್ ಕಾಲೇಜ್, ವಿವಿಧ ನಗರಗಳಲ್ಲಿನ ಛಾಬಡ್ ಹೌಸ್‌ಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಎನ್‌ಐಎ ಉಲ್ಲೇಖಿಸಿದೆ. ರಾಣಾ 2008ರ ನ.13 ಮತ್ತು ನ.21ರ ನಡುವೆ ತನ್ನ ಪತ್ನಿಯೊಂದಿಗೆ ಭಾರತಕ್ಕೆ ಭೇಟಿ ನೀಡಿದ್ದ. ಈ ವೇಳೆ ಆತ ಉತ್ತರ ಪ್ರದೇಶದ ಹಾಪುರ, ದೆಹಲಿ, ಆಗ್ರಾ, ಕೊಚ್ಚಿ, ಅಹಮದಾಬಾದ್ ಮತ್ತು ಮುಂಬೈ ನಗರಗಳನ್ನು ಸುತ್ತಾಡಿದ್ದ. ರಾಣಾ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದ ವೇಳೆ ಹೆಡ್ಲಿ ಆತನಿಗೆ 32 ಬಾರಿ ಕರೆ ಮಾಡಿದ್ದ; ಇದೇ ರೀತಿ ಎಂಟು ಬಾರಿ ಭಾರತಕ್ಕೆ ಭೇಟಿ ನೀಡಿದ್ದ ರಾಣಾ ಜತೆ ಹೆಡ್ಲಿ ಹತ್ತಾರು ಬಾರಿ ಮಾತನಾಡಿದ್ದ ಎಂದು ತನಿಖೆ ವೇಳೆ ತಿಳಿದುಬಂದಿತ್ತು.
ಇನ್ನೊಂದೆಡೆ, 26/11ರ ದಾಳಿಯ ಮತ್ತೊಬ್ಬ ಪ್ರಮುಖ ಸಂಚುಕೋರ ಐಎಸ್‌ಐ ಅಧಿಕಾರಿ ಮೇಜರ್ ಇಕ್ಬಾಲ್‌ನೊಂದಿಗೆ ರಾಣಾ ನಿರಂತರ ಸಂಪರ್ಕದಲ್ಲಿದ್ದ. ದಾಳಿ ಸಿದ್ಧತೆಗಳಿಗೆ ಅನುಕೂಲವಾಗಲೆಂದೇ ರಾಣಾ ಮುಂಬೈನಲ್ಲಿ ‘ಇಮ್ಮಿಗ್ರೆಂಟ್ ಲಾ ಸೆಂಟರ್’ ಆರಂಭಿಸಿದ್ದ; ಅದಕ್ಕೆ ಹೆಡ್ಲಿಯನ್ನು ನೇಮಕ ಮಾಡಿದ್ದ. ಹೆಡ್ಲಿಗೆ ಭಾರತದ ವೀಸಾ ಕೊಡಿಸಲು ಸಹಾಯ ಮಾಡಿದ್ದ. ಭಾರತದ ವಿವಿಧ ಪ್ರದೇಶಗಳಿಗೆ ಭೇಟಿ ನೀಡುವುದಕ್ಕಾಗಿ ಮತ್ತು ಇತರೆ ಕಾರ್ಯಗಳಿಗಾಗಿ ಹೆಡ್ಲಿಗೆ ಹಣಕಾಸಿನ ನೆರವನ್ನೂ ನೀಡಿದ್ದ ಎಂದು ಎನ್‌ಐಎ ಹೇಳಿತ್ತು.
ಪ್ರವಾದಿ ಮುಹಮ್ಮದ್ ಅವರ ವ್ಯಂಗ್ಯಚಿತ್ರವನ್ನು ಪ್ರಕಟಿಸಿದ್ದ ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನ ದಿನಪತ್ರಿಕೆ ಮತ್ತು ಅದರ ಸಿಬ್ಬಂದಿ ಮೇಲೆ ದಾಳಿ ನಡೆಸಲು ಮತ್ತು ಮುಂಬೈ ದಾಳಿ ಸಂಚು ರೂಪಿಸಿದ ಆರೋಪದ ಅಡಿಯಲ್ಲಿ ಶಿಕಾಗೊದಲ್ಲಿ ಫೆಡರಲ್ ಬ್ಯೂರೊ ಆಫ್ ಇನ್‌ವೆಸ್ಟಿಗೇಷನ್ (ಎಫ್‌ಬಿಐ) 2009ರ ಅಕ್ಟೋಬರ್‌ನಲ್ಲಿ ಹೆಡ್ಲಿ ಮತ್ತು ರಾಣಾನನ್ನು ಬಂಧಿಸಿತ್ತು. ಆ ಪ್ರಕರಣದಲ್ಲಿ ರಾಣಾಗೆ 14 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದಾಗ್ಯೂ, ಮುಂಬೈ ದಾಳಿಗೆ ನೆರವು ನೀಡಿದ ಪ್ರಕರಣದಲ್ಲಿ ರಾಣಾ ನಿರಪರಾಧಿ ಎಂದು ಅಮೆರಿಕದ ನ್ಯಾಯಾಲಯ ತೀರ್ಪು ನೀಡಿತ್ತು. ಇದೇ ಪ್ರಕರಣದಲ್ಲಿ 35 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಹೆಡ್ಲಿ, ವಿಚಾರಣೆ ವೇಳೆ ಮುಂಬೈ ದಾಳಿಯಲ್ಲಿ ರಾಣಾ ಪಾತ್ರದ ಬಗ್ಗೆ ಬಾಯಿ ಬಿಟ್ಟಿದ್ದ. ಅದರ ನಂತರ ರಾಣಾನನ್ನು ಹಸ್ತಾಂತರಿಸುವಂತೆ ಭಾರತವು ಅಮೆರಿಕವನ್ನು ಕೋರಿತ್ತು.
ಮುಂಬೈ ದಾಳಿಯ ಸಂಚು ರೂಪಿಸಿದ ಆರೋಪದ ಅಡಿಯಲ್ಲಿ ಒಂಬತ್ತು ಮಂದಿಯ ವಿರುದ್ಧ ಎನ್‌ಐಎ ಪ್ರಕರಣ ದಾಖಲಿಸಿತ್ತು. ಡೇವಿಡ್ ಹೆಡ್ಲಿ, ರಾಣಾ, ಲಷ್ಕರ್–ಎ ತಯಬಾ (ಎಲ್‌ಇಟಿ) ಮತ್ತು ಹರ್ಕತ್ ಉಲ್ ಜಿಹಾದಿ ಇಸ್ಲಾಮಿ (ಎಚ್‌ಯುಜೆಐ) ಸಂಘಟನೆಯ ಐವರು, ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐನ ಇಬ್ಬರು ಸೇರಿ ಒಂಬತ್ತು ಮಂದಿಯ ವಿರುದ್ಧ ಎನ್‌ಎಐ ಅಧಿಕಾರಿಗಳು 2011ರ ಡಿಸೆಂಬರ್ 24ರಂದು ನವದೆಹಲಿಯ ಪಟಿಯಾಲ ಹೌಸ್‌ನ ಎನ್‌ಐಎ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಮುಂಬೈ ಪೊಲೀಸರು ಕೂಡ 2023ರಲ್ಲಿ ರಾಣಾ ವಿರುದ್ಧ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಿದ್ದರು.
ಆರೋಪಿಗಳು ಯಾರು ಯಾರು: 1. ಹಫೀಜ್ ಮುಹಮ್ಮದ್ ಸಯೀದ್ ಅಲಿಯಾಸ್ ತೆಯ್ಯಾಜಿ (ಎಲ್‌ಇಟಿ ಮುಖ್ಯಸ್ಥ) 2. ಝಾಕಿರ್ ರೆಹಮಾನ್ ಲಖ್ವಿ (ಎಲ್‌ಇಟಿ ಮುಖಂಡ) 3. ಸಜ್ಜಿದ್ ಮಜಿದ್ ಅಲಿಯಾಸ್ ವಾಸಿ 4. ಇಲ್ಯಾಸ್ ಕಾಶ್ಮೀರಿ (ಅಲ್ ಕೈದಾ ಮುಖಂಡ) 5. ಅಬ್ದುರ್ ರೆಹಮಾನ್ ಹಶೀಮ್ ಸೈಯದ್ ಅಲಿಯಾಸ್ ಅಬ್ದುರ್ ರೆಹಮಾನ್ ಅಲಿಯಾಸ್ ಪಾಷಾ 6. ಮೇಜರ್ ಇಕ್ಬಾಲ್ ಅಲಿಯಾಸ್ ಮೇಜರ್ ಅಲಿ 7. ಮೇಜರ್ ಸಮೀರ್ ಅಲಿ ಅಲಿಯಾಸ್ ಮೇಜರ್ ಸಮೀರ್ 8. ಡೇವಿಡ್ ಕೊಲೆಮನ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿ ಮತ್ತು 9. ತಹವ್ವುರ್ ರಾಣಾ
ಒಂಬತ್ತು ಜನರ ವಿರುದ್ಧವೂ ಭಾರತ ಬಂಧನ ವಾರಂಟ್ ಹೊರಡಿಸಿದೆ. ಈ ಪೈಕಿ ಹೆಡ್ಲಿಯು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದಲ್ಲಿ 35 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದು, ಕಾರಾಗೃಹದಲ್ಲಿದ್ದಾನೆ. ರಾಣಾನನ್ನು ಕರೆತರುವಲ್ಲಿ ಭಾರತ ಯಶಸ್ವಿಯಾಗಿದೆ. ಉಳಿದ ಏಳು ಮಂದಿಯೂ ಪಾಕಿಸ್ತಾನದಲ್ಲಿದ್ದಾರೆ ಎಂದು ಹೇಳಲಾಗಿದೆ.
ಅಮೆರಿಕದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಹೆಡ್ಲಿಯನ್ನೂ ಹಸ್ತಾಂತರಿಸಬೇಕು ಎಂದು ಭಾರತ ಅಮೆರಿಕಕ್ಕೆ ಮನವಿ ಮಾಡಿದೆ. ಮುಂಬೈ ದಾಳಿಯ ಪ್ರಮುಖ ಸಂಚುಕೋರ ಹೆಡ್ಲಿ. ಕೇಂದ್ರ ಸರ್ಕಾರದ ಪ್ರಯತ್ನದ ಹೊರತಾಗಿಯೂ ಅಮೆರಿಕ ಸರ್ಕಾರ ಇನ್ನೂ ಆತನನ್ನು ಹಸ್ತಾಂತರಿಸಿಲ್ಲ.
ಹೆಡ್ಲಿಯು ಅಮೆರಿಕ ಸರ್ಕಾರ ಮತ್ತು ಪಾಕಿಸ್ತಾನದ ಐಎಸ್‌ಐಗೆ ಡಬಲ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಎಂಬ ಆರೋಪ ಇದೆ. ಆತ, ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗುತ್ತಿದ್ದುದು ತಿಳಿದಿದ್ದರೂ ಅಮೆರಿಕ ಆತನ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ ಎಂಬ ಆಪಾದನೆಯೂ ಇದೆ.
2020ರಲ್ಲಿ ರಾಣಾ ಹಸ್ತಾಂತರಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ವೇಳೆ, ಹೆಡ್ಲಿಯನ್ನು ಭಾರತಕ್ಕೆ ಹಸ್ತಾಂತರಿಸುವುದು ಸಾಧ್ಯವಿಲ್ಲ ಎಂದು ಅಮೆರಿಕದ ಸಹಾಯಕ ಅಟಾರ್ನಿ ಜಾನ್ ಜೆ. ಲುಲೆಜಿಯಾನ್ ಅವರು ಲಾಸ್ ಏಂಜಲೀಸ್‌ನ ಫೆಡರಲ್ ಕೋರ್ಟ್‌ಗೆ ತಿಳಿಸಿದ್ದರು.
‘ಮುಂಬೈ ದಾಳಿಗೆ ಸಂಬಂಧಿಸಿದಂತೆ ತನ್ನ ವಿರುದ್ಧ ಮಾಡಲಾಗಿದ್ದ ಎಲ್ಲ ದೋಷಾರೋಪಗಳನ್ನು ಹೆಡ್ಲಿ ಒಪ್ಪಿಕೊಂಡಿದ್ದಾನೆ. ತನಿಖೆಗೂ ಸಹಕರಿಸಿದ್ದಾನೆ. ಆತನು ಎಲ್ಲ ಷರತ್ತುಗಳನ್ನು ಒಪ್ಪಿಕೊಂಡಿರುವುದರಿಂದ ಅರ್ಜಿಗೆ ಸಂಬಂಧಿಸಿದಂತೆ ನಡೆದಿರುವ ಒಪ್ಪಂದದ ಪ್ರಕಾರ ಆತನನ್ನು ಭಾರತಕ್ಕೆ ಹಸ್ತಾಂತರಿಸಲಾಗದು’ ಎಂದು ಜಾನ್ ಅವರು ನ್ಯಾಯಾಲಯಕ್ಕೆ ತಿಳಿಸಿದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
2009 ಅ.3: ಮುಂಬೈ ದಾಳಿ ಮತ್ತು ಪ್ರವಾದಿ ಅವರ ವ್ಯಂಗ್ಯಚಿತ್ರ ಪ್ರಕಟಿಸಿದ್ದ ಡೆನ್ಮಾರ್ಕ್ ಪತ್ರಿಕೆ ಹಾಗೂ ಸಿಬ್ಬಂದಿ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ ಆರೋಪದಲ್ಲಿ ಡೇವಿಡ್ ಹೆಡ್ಲಿಯನ್ನು ಬಂಧಿಸಿದ ಎಫ್‌ಬಿಐ
2009 ಅ.18: ಈ ಪ್ರಕರಣಗಳ ಸಂಬಂಧ ತಹವ್ವುರ್ ರಾಣಾ ಬಂಧನ
ಮಾರ್ಚ್ 2010: ಮುಂಬೈನಲ್ಲಿ 2008ರಲ್ಲಿ ನಡೆದಿದ್ದ ದಾಳಿಯಲ್ಲಿ ಆರು ಮಂದಿ ಅಮೆರಿಕ ನಾಗರಿಕರು ಮತ್ತು ಇತರರ ಹತ್ಯೆ ಪ್ರಕರಣ ಸಂಬಂಧ ತಪ್ಪೊಪ್ಪಿಕೊಂಡ ಹೆಡ್ಲಿ
2011 ಜೂನ್ 9: ಡೆನ್ಮಾರ್ಕ್ ದಿನಪತ್ರಿಕೆಯ ಸಿಬ್ಬಂದಿಯ ಶಿರಚ್ಛೇದ ಮಾಡಲು ಸಂಚು ರೂಪಿಸಿದ ಪ್ರಕರಣದಲ್ಲಿ ರಾಣಾ ಮತ್ತು ಹೆಡ್ಲಿ ಅಪರಾಧಿಗಳು ಎಂದು ಘೋಷಿಸಿದ ನ್ಯಾಯಾಲಯ. ಆದರೆ, ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಣಾನನ್ನು ಖುಲಾಸೆಗೊಳಿಸಿದ ನ್ಯಾಯಾಧೀಶರು
2011 ಜೂನ್ 10: ರಾಣಾನನ್ನು ಖುಲಾಸೆಗೊಳಿಸಿದ ಕೋರ್ಟ್ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಭಾರತ ಸರ್ಕಾರ
2013 ಜ.17: ಡೆನ್ಮಾರ್ಕ್ ದಿನಪತ್ರಿಕೆ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ ಪ್ರಕರಣದಲ್ಲಿ ರಾಣಾಗೆ 14 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ
2016 ಮಾರ್ಚ್–ಏಪ್ರಿಲ್: ಮುಂಬೈ ದಾಳಿಗೆ ಸಂಬಂಧಿಸಿದಂತೆ ನಡೆದ ವಿಡಿಯೊ ಕಾನ್ಫರೆನ್ಸಿಂಗ್ ವಿಚಾರಣೆಯಲ್ಲಿ ಮುಂಬೈ ದಾಳಿಯಲ್ಲಿ ರಾಣಾ ನಿರ್ವಹಿಸಿದ ಪಾತ್ರದ ಬಗ್ಗೆ ವಿವರಣೆ ನೀಡಿದ ಹೆಡ್ಲಿ
2018 ಆ.28: ರಾಣಾ ಬಂಧನಕ್ಕೆ ವಾರಂಟ್ ಹೊರಡಿಸಿದ ಮುಂಬೈ ದಾಳಿ ಪ್ರಕರಣ ವಿಚಾರಣೆ ನಡೆಸುತ್ತಿದ್ದ ಎನ್‌ಐಎ ನ್ಯಾಯಾಲಯ
2020 ಜೂನ್ 9: ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮಾನವೀಯತೆ ಆಧಾರದಲ್ಲಿ ರಾಣಾ ಬಿಡುಗಡೆಗೆ ಆದೇಶಿಸಿದ ಅಮೆರಿಕದ ಜಿಲ್ಲಾ ನ್ಯಾಯಾಲಯ
2020 ಜೂನ್ 10: ಭಾರತ–ಅಮೆರಿಕ ಹಸ್ತಾಂತರ ಒಪ್ಪಂದದ ಅಡಿಯಲ್ಲಿ ರಾಣಾ ಬಂಧನಕ್ಕೆ ವಾರಂಟ್ ಹೊರಡಿಸಲು ಮನವಿ ಮಾಡಿದ ಅಮೆರಿಕ ಸರ್ಕಾರ
2020 ಜುಲೈ 21: ಹಸ್ತಾಂತರಕ್ಕಾಗಿ ರಾಣಾನನ್ನು ವಶಕ್ಕೆ ಪಡೆಯಲು ಸಮ್ಮತಿಸಿದ ಕೋರ್ಟ್
2020 ಆ.13: ರಾಣಾ ಎಸಗಿದ ಅಪರಾಧಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಿದ ಭಾರತ
2023 ಮೇ 16: ರಾಣಾನನ್ನು ಭಾರತಕ್ಕೆ ಹಸ್ತಾಂತರ ಮಾಡಲು ಅನುಮತಿ ನೀಡಿದ ಕ್ಯಾಲಿಫೋರ್ನಿಯಾದ ಮ್ಯಾಜಿಸ್ಟ್ರೇಟ್ ಕೋರ್ಟ್
2023 ಆ.10: ಹಸ್ತಾಂತರವನ್ನು ಪ್ರಶ್ನಿಸಿ ರಾಣಾ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಜಿಲ್ಲಾ ನ್ಯಾಯಾಲಯ
2024 ನ.13: ಹಸ್ತಾಂತರಕ್ಕೆ ತಡೆ ನೀಡುವಂತೆ ಮನವಿ ಮಾಡಿ ಅಮೆರಿಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಣಾ
2024 ಡಿ.16: ರಾಣಾ ಮೇಲ್ಮನವಿಯನ್ನು ವಿರೋಧಿಸಿದ ಅಮೆರಿಕ ಸರ್ಕಾರ
2025 ಜ.21: ರಾಣಾ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್
2025 ಫೆ.28: ಮೇಲ್ಮನವಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್ ನಿರ್ಧಾರಕ್ಕೆ ತಡೆ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಂದು ಅರ್ಜಿ ಹಾಕಿದ ರಾಣಾ
2025 ಫೆ.11: ರಾಣಾನನ್ನು ಭಾರತಕ್ಕೆ ಒಪ್ಪಿಸುವ ಸಂಬಂಧದ ಆದೇಶಕ್ಕೆ ಸಹಿ ಹಾಕಿದ
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ
2025 ಮಾರ್ಚ್ 7: ಹಸ್ತಾಂತರಕ್ಕೆ ತಡೆ ಒಡ್ಡಲು ಮತ್ತು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರು ಅರ್ಜಿ ವಿಚಾರಣೆ ನಡೆಸುವಂತೆ ತುರ್ತು ಅರ್ಜಿ ಸಲ್ಲಿಸಿದ ರಾಣಾ
2025 ಏಪ್ರಿಲ್ 7: ತುರ್ತು ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್
2025 ಏಪ್ರಿಲ್ 10: ಅಮೆರಿಕದಿಂದ ರಾಣಾನನ್ನು ಭಾರತಕ್ಕೆ ಕರೆತಂದ ಎನ್‌ಎಐ ಅಧಿಕಾರಿಗಳು
ಮುಂದೇನು?
* 26/11 ಘಟನೆಯ ಹೆಚ್ಚು ವಿವರಗಳು ಬಯಲಿಗೆ ಬರುವ ಸಾಧ್ಯತೆ
* ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ಹೊಸ ಸುಳಿವು ಸಾಕ್ಷ್ಯ ಸಿಗುವ ಸಂಭವ
* ಪಾಕಿಸ್ತಾನದಲ್ಲಿ ಇದ್ದಾರೆ ಎನ್ನಲಾಗುತ್ತಿರುವ ಪ್ರಕರಣದ ಇತರೆ ಆರೋಪಿಗಳ ಬಗ್ಗೆ ಸುಳಿವು ಸಿಗುವ ಸಾಧ್ಯತೆ
* ದೇಶದ ಇತರೆ ನಗರಗಳಲ್ಲಿ ನಡೆದಿದ್ದ ಉಗ್ರ ದಾಳಿ ಮತ್ತು ಸಂಚುಗಳ ಬಗ್ಗೆ ಮಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.