ADVERTISEMENT

ಆಳ-ಅಗಲ | ಪ್ರೌಢ ಶಿಕ್ಷಣ: ರಾಜ್ಯದಲ್ಲಿ ಶಾಲೆ ತೊರೆಯುತ್ತಿರುವವರು ಹೆಚ್ಚು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 0:38 IST
Last Updated 8 ಸೆಪ್ಟೆಂಬರ್ 2025, 0:38 IST
   

ಏಕೀಕೃತ ಜಿಲ್ಲಾವಾರು ಶೈಕ್ಷಣಿಕ ಮಾಹಿತಿ ವ್ಯವಸ್ಥೆಯ 2024–25ರ ವರದಿಯ ಪ್ರಕಾರ, ಕರ್ನಾಟಕದಲ್ಲಿ 9 ಮತ್ತು 10ನೇ ತರಗತಿಗಳಲ್ಲಿ ಶಾಲೆ ತೊರೆಯುತ್ತಿರುವವರ ಪ್ರಮಾಣವು ಆತಂಕ ಹುಟ್ಟಿಸುವಂತಿದ್ದು, ರಾಜ್ಯವು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಈ ಹಂತದಲ್ಲಿ ಶಾಲೆ ತೊರೆಯುವವರ ಸಂಖ್ಯೆ ಹೆಚ್ಚಾಗಿರಲು ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತದಲ್ಲಿ ಶಿಕ್ಷಣದ ಗುಣಮಟ್ಟ ಕುಸಿದಿರುವುದು, ಬಾಲ ಕಾರ್ಮಿಕರು ಹೆಚ್ಚಾಗಿರುವುದು ಮುಂತಾದ ಕಾರಣಗಳಿವೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಮಟ್ಟದಲ್ಲಿ ಶಾಲೆಗಳ ಮಾಹಿತಿಯನ್ನು ಸಂಪೂರ್ಣವಾಗಿ ಬದಲಿಸಿ, ಅದಕ್ಕೆ ವ್ಯವಸ್ಥಿತ ರೂಪ ನೀಡುವ ಪ್ರಯತ್ನವೇ ಏಕೀಕೃತ ಜಿಲ್ಲಾವಾರು ಶೈಕ್ಷಣಿಕ ಮಾಹಿತಿ ವ್ಯವಸ್ಥೆ (ಯುಡಿಐಎಸ್‌ಇ ಪ್ಲಸ್). 2022–23ರಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿ ಮಾಡಿದ ನಂತರ ಇದಕ್ಕೆ ಮತ್ತಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಈ ವ್ಯವಸ್ಥೆಯ ಮೂಲಕ ದೇಶದಲ್ಲಿ ಶಾಲೆ ತೊರೆಯುವ ಮಕ್ಕಳ ಸಂಖ್ಯೆಯನ್ನು ಕೂಡ ಪತ್ತೆ ಹಚ್ಚಲಾಗುತ್ತಿದೆ.     

ಜಗತ್ತಿನಲ್ಲಿ ಅತಿ ಹೆಚ್ಚು ಶಾಲೆಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತದಲ್ಲಿ ಒಟ್ಟು 14.71 ಲಕ್ಷ ಶಾಲೆಗಳಿದ್ದು, 1.01 ಕೋಟಿಗೂ ಅಧಿಕ ಶಿಕ್ಷಕರು, 24.69 ಕೋಟಿ ವಿದ್ಯಾರ್ಥಿಗಳು (ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಿಕ್ಷಣ ಮತ್ತು ಪದವಿಪೂರ್ವ ಹಂತಗಳಲ್ಲಿ) ಇದ್ದಾರೆ.

ADVERTISEMENT

2024–25ರ ಯುಡಿಐಎಸ್‌ಇ ಪ್ಲಸ್ ವರದಿ ಬಿಡುಗಡೆಯಾಗಿದ್ದು, ಅದರಲ್ಲಿ ದೇಶದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿವಿಧ ಹಂತಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮತ್ತು ಶಾಲೆ ತೊರೆದ ಮಕ್ಕಳ ಸಂಖ್ಯೆ ಹಾಗೂ ಪ್ರಮಾಣವನ್ನು ಉಲ್ಲೇಖಿಸಲಾಗಿದೆ. ಕರ್ನಾಟಕದಲ್ಲಿ ಪ್ರಾಥಮಿಕ ಹಂತದಲ್ಲಿ (1ರಿಂದ 5ನೇ ತರಗತಿ)ಈ ಪ‍್ರಮಾಣ ಶೂನ್ಯ; ಮಾಧ್ಯಮಿಕ ಹಂತದಲ್ಲಿ (6ರಿಂದ 8ನೇ ತರಗತಿ) ಶೇ 2.1ರಷ್ಟಿದೆ.  ಆದರೆ, ಪ್ರೌಢಶಿಕ್ಷಣದ 9 ಮತ್ತು 10ನೇ ತರಗತಿಗಳಲ್ಲಿ ಶಾಲೆ ತೊರೆದ ಮಕ್ಕಳ ಸಂಖ್ಯೆಯು ರಾಜ್ಯದಲ್ಲಿ ಜಾಸ್ತಿ ಇದೆ (ಶೇ 18.3); ಅರುಣಾಚಲ ಪ್ರದೇಶದಲ್ಲಿಯೂ ಇಷ್ಟೇ ‍ಪ್ರಮಾಣದ ಮಕ್ಕಳು ಶಾಲೆ ತೊರೆದಿದ್ದಾರೆ. ಈ ಹಂತದಲ್ಲಿ ಶಾಲೆ ತೊರೆಯುವವರ ಪ್ರಮಾಣವು ದೇಶದಲ್ಲಿಯೇ ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚಾಗಿದೆ (20). ಕರ್ನಾಟಕದಲ್ಲಿ ಪ್ರೌಢಶಿಕ್ಷಣದ ಹಂತದಲ್ಲಿ ಶಾಲೆ ತೊರೆಯುವ ಮಕ್ಕಳ ಪೈಕಿ ಬಾಲಕರ ಪ್ರಮಾಣ ಶೇ 21.9ರಷ್ಟಿದ್ದರೆ, ಬಾಲಕಿಯರ ಪ್ರಮಾಣ ಶೇ 14.6ರಷ್ಟಿದೆ.

ರಾಷ್ಟ್ರೀಯ ಮಟ್ಟದಲ್ಲಿ ಈ ಪ್ರಮಾಣ ಶೇ 11.5ರಷ್ಟಿದೆ. ದಕ್ಷಿಣದ ರಾಜ್ಯಗಳ ಪೈಕಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಶಾಲೆ ತೊರೆಯುವವರ ಸಂಖ್ಯೆ ಹೆಚ್ಚಾಗಿದ್ದರೆ, ಕೇರಳ ಮತ್ತು ತಮಿಳುನಾಡಿನಲ್ಲಿ ಅಂಥ ಮಕ್ಕಳ ಸಂಖ್ಯೆ ಕಡಿಮೆ ಇದೆ. 

ಇಷ್ಟಾದರೂ ಕಳೆದ ವರ್ಷಕ್ಕೆ ಹೋಲಿಸಿದರೆ, ರಾಜ್ಯದಲ್ಲಿ ಶಾಲೆ ತೊರೆಯುವವರ ಪ್ರಮಾಣದಲ್ಲಿ ಅಲ್ಪ ಮಟ್ಟದ ಇಳಿಕೆಯಾಗಿದೆ. 2023–24ನೇ ಸಾಲಿನ ಯುಡಿಐಎಸ್‌ಇ ಪ್ಲಸ್ ವರದಿಯಲ್ಲಿ ಪ್ರೌಢಶಿಕ್ಷಣ ಹಂತದಲ್ಲಿ ಶಾಲೆ ತೊರೆಯುವ ಮಕ್ಕಳ ಪ್ರಮಾಣ ರಾಷ್ಟ್ರೀಯ ಮಟ್ಟದಲ್ಲಿ ಶೇ 14.1ರಷ್ಟು ಇದ್ದರೆ, ರಾಜ್ಯದಲ್ಲಿ ಶೇ 22.1ರಷ್ಟಿತ್ತು. ಬಿಹಾರದಲ್ಲಿ ಅತಿ ಹೆಚ್ಚು (ಶೇ 25.6) ಇದ್ದರೆ, ನಂತರದ ಸ್ಥಾನದಲ್ಲಿದ್ದ ಅಸ್ಸಾಂನಲ್ಲಿ ಶೇ 25.1 ಮತ್ತು ಅರುಣಾಚಲ ಪ್ರದೇಶದಲ್ಲಿ ಶೇ 19.3ರಷ್ಟು ಇತ್ತು.

2030ರ ವೇಳೆಗೆ ಎಲ್ಲ ಹಂತಗಳಲ್ಲಿಯೂ ಶಾಲೆ ತೊರೆಯುವವರ ಪ್ರಮಾಣವನ್ನು ಕಡಿಮೆ ಮಾಡುವುದು ಮತ್ತು ಪ್ರತಿಯೊಬ್ಬರಿಗೂ ಶಿಕ್ಷಣ ಲಭ್ಯವಾಗುವಂತೆ ಮಾಡುವುದು ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ (ಎಸ್‌ಡಿಜಿ) ಒಂದಾಗಿದೆ. ಎನ್‌ಇಪಿಯಲ್ಲಿಯೂ ಇದೇ ಆಶಯವನ್ನು ಪ್ರತಿಪಾದಿಸಲಾಗಿದೆ. ಒಂದನೇ ತರಗತಿಗೆ ಪ್ರವೇಶ ಪಡೆದ ಮಕ್ಕಳ ಪೈಕಿ ಎಷ್ಟು ಮಂದಿ ಮುಂದಿನ ಹಂತಗಳಿಗೆ ಸಾಗುತ್ತಿದ್ದಾರೆ ಎನ್ನುವುದರ ಆಧಾರದಲ್ಲಿ ಶಾಲೆ ತೊರೆಯುತ್ತಿರುವವರ ಪ್ರಮಾಣವನ್ನು ಪತ್ತೆ ಮಾಡಲಾಗುತ್ತಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಶಾಲೆ ತೊರೆಯಲು ಕಾರಣ

ಮಕ್ಕಳು ಶಾಲೆ ತೊರೆಯುತ್ತಿರುವ ಪ್ರಮಾಣದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಶಿಕ್ಷಣ ತಜ್ಞರು, ಹಲವು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. 

  • ಮಕ್ಕಳು ಪ್ರಾಥಮಿಕ ಹಂತದಲ್ಲಿಯೇ ಕಲಿಕೆಯಲ್ಲಿ ಹಿಂದುಳಿಯುತ್ತಿರುವುದು

  • 7, 8ನೇ ತರಗತಿಗಳ ನಂತರ ಪಠ್ಯಗಳು ಹೆಚ್ಚಾಗುವುದು ಮತ್ತು ಕಠಿಣವಾಗುವುದು

  • ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಶಿಕ್ಷಣದ ಶಾಲೆಗಳು ಬೇರೆ ಬೇರೆ ಆಗಿದ್ದರೆ, ಹಲವು ಕಾರಣಗಳಿಂದ ಮುಂದಿನ ಹಂತಕ್ಕೆ ಪ್ರವೇಶ ಪಡೆಯದೇ ಇರುವುದು

  • ಬಾಲಕಾರ್ಮಿಕ ಕಾಯ್ದೆ ಪ್ರಕಾರ, 14 ವರ್ಷದ ಒಳಗಿನ ಮಕ್ಕಳು ಮಾತ್ರವೇ ಬಾಲಕಾರ್ಮಿಕರು. ಕೆಲವು ಬಡ ಕುಟುಂಬಗಳು 14ರ ನಂತರದ ಮಕ್ಕಳನ್ನು ದುಡಿಯಲು ಕಳುಹಿಸುತ್ತಿವೆ.

ದತ್ತಾಂಶದ ಬಗ್ಗೆ ಆಕ್ಷೇಪ

2023–24ರ ಯುಡಿಐಎಸ್‌ಇ ಪ್ಲಸ್ ವರದಿಗೆ ಕರ್ನಾಟಕದ ಕೆಲವು ಶಿಕ್ಷಣ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದರು. ವಿದ್ಯಾರ್ಥಿಗಳ ಪ್ರವೇಶ ಪ್ರಮಾಣದಲ್ಲಿ ದಿಢೀರ್ ಕುಸಿತವಾಗಿರುವುದು ಮತ್ತು ಶಾಲೆ ತೊರೆದವರ ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ದತ್ತಾಂಶದ ಬಗ್ಗೆಯೇ ಅನುಮಾನ ಮೂಡಿಸುತ್ತಿದೆ; ರಾಜ್ಯದ ವಿದ್ಯಾರ್ಥಿ ಸಾಧನೆ ನಿಗಾ ವ್ಯವಸ್ಥೆ (ಎಸ್‌ಎಟಿಎಸ್‌) ಅತ್ಯಂತ ನಿಖರವಾಗಿರುತ್ತದೆ. ಈ ದಿಸೆಯಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರದ ಶಿಕ್ಷಣ ಇಲಾಖೆಯು ಪರಸ್ಪರ ಚರ್ಚೆ ನಡೆಸಿ, ಈ ವಿಚಾರದಲ್ಲಿ ಸರಿಯಾದ ಮಾಹಿತಿ, ದತ್ತಾಂಶ ನೀಡಬೇಕು ಎಂದು ಒತ್ತಾಯಿಸಿದ್ದರು. ಈ ಬಾರಿಯೂ ಯುಡಿಐಎಸ್‌ಇ ಪ್ಲಸ್ ದತ್ತಾಂಶದ ಬಗ್ಗೆ ಇಂತಹದ್ದೇ ಆಕ್ಷೇಪ ಕೇಳಿಬಂದಿದೆ.

ದಾಖಲಾತಿ ಅನುಪಾತ ಹೆಚ್ಚು

ಪ್ರಾಥಮಿಕ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದಲ್ಲಿ ಮಕ್ಕಳ ಒಟ್ಟು ದಾಖಲಾತಿ ಅನುಪಾತ (ಜಿಇಆರ್‌) ರಾಜ್ಯದಲ್ಲಿ ಹೆಚ್ಚಿದೆ. ದೇಶದ ಸರಾಸರಿಗಿಂತ ಕಡಿಮೆ ಇದೆ. ಈ ಅನುಪಾತವು ಶಿಕ್ಷಣದ ನಿರ್ದಿಷ್ಟ ಹಂತಕ್ಕೆ (ಪ್ರಾಥಮಿಕ ಹಿರಿಯ ಪ್ರಾಥಮಿಕ ಮತ್ತು ಪ್ರೌಢ) ಸೂಕ್ತ ವಯೋಮಾನದ ಅನುಸಾರ ನಡೆದಿರುವ ಮಕ್ಕಳ ಶಾಲಾ ದಾಖಲಾತಿಯೊಂದಿಗೆ ಹೋಲಿಕೆ ಮಾಡುತ್ತದೆ. ದಾಖಲಾತಿ ಅನುಪಾತ 100ಕ್ಕಿಂತ ಜಾಸ್ತಿ ಇದ್ದರೆ ಅದಕ್ಕೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆದಿರುವುದು ಅಥವಾ ನಿರ್ದಿಷ್ಟ ಹಂತದಲ್ಲಿ ನಿಗದಿಗಿಂತ ಕಡಿಮೆ ವಯಸ್ಸಿನ ಮಕ್ಕಳು ದಾಖಲಾಗಿರುವುದು ಮಕ್ಕಳ ಅಂತರರಾಜ್ಯ ವಲಸೆಯಂತಹ ಕಾರಣ ಇರಬಹುದು ಎಂದು ವರದಿ ಹೇಳಿದೆ.   

ಕರ್ನಾಟಕದಲ್ಲಿ ಪ್ರೌಢಶಿಕ್ಷಣದ ಹಂತದಲ್ಲಿ ಶಾಲೆ ತೊರೆಯುವ ಮಕ್ಕಳ ಪೈಕಿ ಬಾಲಕರ ಪ್ರಮಾಣ ಶೇ 21.9ರಷ್ಟಿದ್ದರೆ, ಬಾಲಕಿಯರ ಪ್ರಮಾಣ ಶೇ 14.6ರಷ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.