ಸರ್ ಕ್ರೀಕ್ ಅಳಿವೆ ಪ್ರದೇಶದಲ್ಲಿ ಗಡಿ ಭದ್ರತಾ ಪಡೆ ಸಿಬ್ಬಂದಿಯ ಗಸ್ತು
ಚಿತ್ರ: ಬಿಎಸ್‌ಎಫ್ ಗುಜರಾತ್ ‘ಎಕ್ಸ್’ ಖಾತೆ
ಈ ವಿವಾದದ ಬಗ್ಗೆ ಸಮಗ್ರ ದ್ವಿಪಕ್ಷೀಯ ಚರ್ಚೆ ನಡೆಸಲು 2015ರಲ್ಲಿ ಉಭಯ ದೇಶಗಳು ಸಮ್ಮತಿಸಿದ್ದವು. ಆದರೆ 2016ರಲ್ಲಿ ನಡೆದ ಪಠಾಣ್‌ಕೋಟ್ ದಾಳಿ ಮತ್ತು ಆ ನಂತರದ ಬೆಳವಣಿಗೆಗಳು ಮಾತುಕತೆ ಮುಂದುವರಿಸಲು ಅವಕಾಶ ನೀಡಲಿಲ್ಲ.
ಭಾರತ–ಪಾಕಿಸ್ತಾನದ ಸಂಘರ್ಷ ಎಂದರೆ, ಅದು ಕಾಶ್ಮೀರ ಕುರಿತದ್ದೇ ಆಗಿರುತ್ತದೆ ಎನ್ನುವ ಭಾವನೆ ಇದೆ. ಆದರೆ, ಅದಕ್ಕಿಂತಲೂ ಹಳೆಯದಾದ, ಪ್ರಮುಖ ವಿವಾದವೊಂದು ಈಗ ಮುನ್ನೆಲೆಗೆ ಬಂದಿದೆ. ಅದು ‘ಸರ್ ಕ್ರೀಕ್’ ವಿವಾದ.
ಸರ್ ಕ್ರೀಕ್, ಭಾರತದ ಕಛ್ ಮತ್ತು ಪಾಕಿಸ್ತಾನದ ಸಿಂಧ್ ನಡುವೆ ಇರುವ 96 ಕಿ.ಮೀ.ಉದ್ದದ ಒಂದು ಜೌಗು ಪ್ರದೇಶ. ಕ್ರೀಕ್ ಎಂದರೆ, ಕೊರಕಲು ಅಥವಾ ಅಳಿವೆ. ನದಿ ನೀರು ಅರಬ್ಬಿ ಸಮುದ್ರ ಸೇರುವ ಸ್ಥಳ ಅದು. ಯಾವುದೇ ಜನವಸತಿ ಇಲ್ಲದ, ಕೆಸರು, ನೀರು ತುಂಬಿದ ಕೊರಕಲು ‘ಸರ್ ಕ್ರೀಕ್’ ಎಂದೇ ಪ್ರಸಿದ್ಧವಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಪಶ್ವಿಮ ತುದಿಯಲ್ಲಿರುವ ಗಡಿ ಅದಾಗಿದೆ. ಸರ್ ಕ್ರೀಕ್ ಯಾರಿಗೆ ಸೇರಿದ್ದು ಎನ್ನುವುದು ಎರಡು ದೇಶಗಳ ನಡುವಿನ ವಿವಾದಕ್ಕೆ ಕಾರಣವಾಗಿದೆ.
ಕಛ್ ಮತ್ತು ಸಿಂಧ್ ಪ್ರಾಂತ್ಯಗಳ ನಡುವಿನ ಈ ವಿವಾದಕ್ಕೆ ಶತಮಾನದ ಇತಿಹಾಸವಿದೆ. ಸ್ವಾತಂತ್ರ್ಯಪೂರ್ವದಲ್ಲಿ ಎರಡು ಪ್ರಾಂತ್ಯಗಳ ನಡುವಿನ ವಿವಾದ ಆಗಿದ್ದದ್ದು, ದೇಶ ವಿಭಜನೆಯ ನಂತರ ಎರಡು ದೇಶಗಳ ನಡುವಿನ ವಿವಾದವಾಗಿ ಮಾರ್ಪಟ್ಟಿತು. ವಿಭಜನೆಗೆ ಮುಂಚಿನ ದಾಖಲೆಗಳಲ್ಲಿ ಅಳಿವೆಯು ಸಿಂಧ್ ಪ್ರಾಂತ್ಯದಲ್ಲಿದೆ ಎಂದು ಉಲ್ಲೇಖವಾಗಿದ್ದು, ‘ಸಿಂಧ್ ಪಾಕಿಸ್ತಾನಕ್ಕೆ ಸೇರಿದ್ದರಿಂದ ಸರ್ ಕ್ರೀಕ್ ನಮ್ಮದು’ ಎನ್ನುವುದು ಪಾಕಿಸ್ತಾನದ ವಾದ. ಭಾರತವು ಪಾಕಿಸ್ತಾನದ ವಾದವನ್ನು ಸಂಪೂರ್ಣವಾಗಿ ನಿರಾಕರಿಸುತ್ತಲೇ ಬಂದಿದೆ.
ಈ ಅಳಿವೆಯ ಗಡಿ ಯಾವುದು ಎನ್ನುವುದು ನಿರ್ಧರಿಸಲು ಇದುವರೆಗೂ ಸಾಧ್ಯವಾಗಿಲ್ಲ. ಇದು ಎರಡು ದೇಶಗಳ ಸಮುದ್ರ ಪ್ರದೇಶ ಗುರುತಿಸುವ ವಿಚಾರದಲ್ಲಿಯೂ ನಿರ್ಣಾಯಕವಾಗಲಿದೆ. ಹೀಗಾಗಿಯೇ ಎರಡೂ ದೇಶಗಳು ಸರ್ ಕ್ರೀಕ್ ಮೇಲೆ ಹಿಡಿತ ಸಾಧಿಸಲು ಪಟ್ಟು ಹಿಡಿದಿವೆ.
ಇತ್ತೀಚೆಗೆ ಸರ್ ಕ್ರೀಕ್ ವಲಯಕ್ಕೆ ಭೇಟಿ ನೀಡಿದ್ದ ರಕ್ಷಣಾ ಸಚಿವ ರಾಜನಾಥ್‌ಸಿಂಗ್, ಪಾಕಿಸ್ತಾನವು ಸರ್ ಕ್ರೀಕ್ ಪ್ರದೇಶದಲ್ಲಿ ಸೇನಾ ಮೂಲಸೌಕರ್ಯ ವೃದ್ಧಿಗೆ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನವು ಇಂಥ ಪ್ರಯತ್ನ ಮುಂದುವರಿಸಿದರೆ, ಭಾರತವು ಅದಕ್ಕೆ ತಕ್ಕ ಉತ್ತರ ನೀಡಲಿದ್ದು, ಅದು ‘ಇತಿಹಾಸ ಮತ್ತು ಭೂಪ್ರದೇಶವನ್ನು ಬದಲಿಸುವಂತೆ’ ಇರುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಗುಜರಾತ್‌ನ ಕಛ್ ಜಿಲ್ಲೆ ಮತ್ತು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ನಡುವೆ ಸರ್ ಕ್ರೀಕ್ ಇದೆ. ಇದರ ಪೂರ್ವಕ್ಕೆ ರಣ್ ಕಛ್ ಇದ್ದರೆ, ಪಶ್ಚಿಮಕ್ಕೆ ಸಿಂಧ್ ಇದೆ. ಇದರ ಹಿಂದಿನ ಹೆಸರು ‘ಬಾಣ ಗಂಗಾ’. ಬ್ರಿಟಿಷ್ ಆಡಳಿತವು ತನ್ನ ಅಧಿಕಾರಿಯೊಬ್ಬರ ಹೆಸರನ್ನು ಸೇರಿಸಿ ಇದಕ್ಕೆ ‘ಸರ್ ಕ್ರೀಕ್’ ಎಂದು ಹೆಸರಿಟ್ಟಿತ್ತು. ಈ ಪ್ರದೇಶದಲ್ಲಿ ಜನವಸತಿ ಇಲ್ಲ. ಇದು ಮೀನುಗಾರಿಕೆಗೆ ಹೇಳಿ ಮಾಡಿಸಿದಂತಹ ಜಾಗ. ಹಾಗಾಗಿ, ಭಾರತ ಮತ್ತು ಪಾಕಿಸ್ತಾನದ ಮೀನುಗಾರರು ಇಲ್ಲಿ ಕಾಣಸಿಗುತ್ತಾರೆ. ಗಡಿ ಉಲ್ಲಂಘಿಸಿ ಪ್ರವೇಶ ಮಾಡಿದ ಕಾರಣಕ್ಕೆ ಎರಡೂ ರಾಷ್ಟ್ರಗಳಿಂದ ಬಂಧನಕ್ಕೆ ಒಳಗಾಗುತ್ತಾರೆ. ಅವರನ್ನು ಬಿಟ್ಟರೆ ಗಡಿ ಕಾವಲು ಕಾಯುವ ಉಭಯ ದೇಶಗಳ ಸೇನಾ ಸಿಬ್ಬಂದಿಯ ಸಂಚಾರ ಮಾತ್ರ ಇಲ್ಲಿ ಕಾಣಬಹುದು.
ಸೇನಾ ಕಾರ್ಯತಂತ್ರ, ದೇಶದ ಭದ್ರತೆ ಮತ್ತು ಆರ್ಥಿಕತೆಯ ಕಾರಣಕ್ಕೆ ಈ ಪ್ರದೇಶ ಮಹತ್ವ ಪಡೆದಿದೆ. ಅಲ್ಲಿಂದ ಕರಾಚಿ ಬಂದರಿಗೆ ನೇರವಾದ ಸಂಪರ್ಕ ಇದೆ. ಕರಾಚಿ ಬಂದರು ಪಾಕಿಸ್ತಾನದ ಮುಖ್ಯ ವಾಣಿಜ್ಯ ಚಟುವಟಿಕೆಯ ಸ್ಥಳವಾಗಿದ್ದು, ಸಂಘರ್ಷದ ಸಮಯದಲ್ಲಿ ಭಾರತದ ಅದರ ಮೇಲೆ ಕಣ್ಣಿಟ್ಟಿರುತ್ತದೆ. ಹೀಗಾಗಿ ಸರ್ ಕ್ರೀಕ್ ಭಾರತಕ್ಕೆ ಮುಖ್ಯವಾಗಿದೆ. ಪಾಕಿಸ್ತಾನಕ್ಕೆ ಕಾಶ್ಮೀರ, ಪಂಜಾಬ್, ರಾಜಸ್ಥಾನ ಗಡಿ ಪ್ರದೇಶಗಳಂತೆ ಇದು ಕೂಡ ಭಾರತದ ವಿರುದ್ಧ ಸೇನಾ ಚಟುವಟಿಕೆ ನಡೆಸಲು ಉತ್ತಮ ಸ್ಥಳವಾಗಿದೆ.
ಕಛ್‌ನ ರಣ್‌ನಲ್ಲಿ ಭಾರತದ ಎರಡು ಪ್ರಮುಖ ಬಂದರುಗಳಿವೆ (ಮುಂದ್ರಾ ಮತ್ತು ಕಾಂಡ್ಲಾ) ಮತ್ತು ಪಾಕಿಸ್ತಾನಕ್ಕೆ ಸೇರಿದ ರಣ್ ಪ್ರದೇಶದಲ್ಲಿ ಚೀನಾ ಗಣಿಗಾರಿಕೆ ಮತ್ತು ವಿದ್ಯುತ್ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದೆ. ಚೀನಾ ಮತ್ತು ಪಾಕಿಸ್ತಾನ ಆ ಯೋಜನೆಗಳನ್ನೇ ಸೇನಾ ನೆಲೆಗಳನ್ನಾಗಿ ಪರಿವರ್ತಿಸಬಹುದು ಎನ್ನುವುದು ಭಾರತದ ಆತಂಕವಾಗಿದೆ. ಮೇ 8 ಮತ್ತು 9ರ ಸಂಘರ್ಷದ ವೇಳೆ ಪಾಕಿಸ್ತಾನವು 36 ಸ್ಥಳಗಳಿಂದ ಭಾರತದ ಮೇಲೆ 400 ಡ್ರೋನ್‌ಗಳ ಮೂಲಕ ದಾಳಿ ನಡೆಸಲು ಪ್ರಯತ್ನಿಸಿತ್ತು. ಆ ಸ್ಥಳಗಳಲ್ಲಿ ಸರ್ ಕ್ರೀಕ್ ಕೂಡ ಒಂದಾಗಿತ್ತು. ಜತೆಗೆ, ಇಲ್ಲಿಂದ ಉಗ್ರರು ಗುಜರಾತ್‌ನೊಳಗೆ ನುಸುಳಲು ಹಲವು ಬಾರಿ ಪ್ರಯತ್ನ ನಡೆಸಿದ್ದು, ಭಾರತೀಯ ಸೇನೆಯು ಅದನ್ನು
ವಿಫಲಗೊಳಿಸಿತ್ತು.
ಜಾಮ್‌ನಗರದ ರಿಲಯನ್ಸ್‌ನ ತೈಲ ಸಂಸ್ಕರಣ ಘಟಕದ ಮೇಲೆ ದಾಳಿ ನಡೆಸುವುದಾಗಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಮುನೀರ್ ಇತ್ತೀಚೆಗೆ ಬೆದರಿಕೆ ಹಾಕಿದ್ದರು. ಜಾಮ್‌ನಗರವು ಸರ್ ಕ್ರೀಕ್‌ಗೆ ಹತ್ತಿರದಲ್ಲಿದೆ.
ಈ ಅಳಿವೆಯಲ್ಲಿ ಅಪಾರ ಪ್ರಮಾಣದ ತೈಲ ಮತ್ತು ಅನಿಲ ನಿಕ್ಷೇಪ ಇದೆ ಎನ್ನಲಾಗುತ್ತಿದೆ. ಗಡಿ ಗುರುತಿಸದೇ ಇರುವುದರಿಂದ ಎರಡೂ ದೇಶಗಳು ತೈಲ ನಿಕ್ಷೇಪದ ಹುಡುಕಾಟ ನಡೆಸಲು ಸಾಧ್ಯವಾಗಿಲ್ಲ. ಪಾಕಿಸ್ತಾನವು ತನ್ನ ನೆಲದಲ್ಲಿ ತೈಲ ನಿಕ್ಷೇಪಗಳನ್ನು ಪತ್ತೆ ಹಚ್ಚುವ ಸಂಬಂಧ ಅಮೆರಿಕದೊಂದಿಗೆ ಇತ್ತೀಚೆಗೆ ಒಪ್ಪಂದ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಏಷ್ಯಾದ ಅತಿ ದೊಡ್ಡ ಮೀನುಗಾರಿಕಾ ನೆಲೆಗಳಲ್ಲಿ ಇದು ಕೂಡ ಒಂದಾಗಿದ್ದು, ಸಾವಿರಾರು ಕುಟುಂಬಗಳಿಗೆ ಜೀವನೋಪಾಯ ಕಲ್ಪಿಸಿದೆ. ಗಡಿ ವಿವಾದದಿಂದಾಗಿ ಎರಡೂ ದೇಶಗಳ ಮೀನುಗಾರರು ಆಗಿಂದಾಗ್ಗೆ ಬಂಧನಕ್ಕೆ ಒಳಗಾಗುವುದು ನಡೆಯುತ್ತಲೇ ಇದೆ.
ಎಲ್ಲಕ್ಕಿಂತ ಮುಖ್ಯವಾಗಿ, ಸರ್ ಕ್ರೀಕ್, ಅರಬ್ಬಿ ಸಮುದ್ರದಲ್ಲಿನ ಸಂಪನ್ಮೂಲಗಳನ್ನು ಆಧರಿಸಿದ ಎರಡೂ ದೇಶಗಳ ವಿಶಿಷ್ಟ ಆರ್ಥಿಕ ವಲಯಗಳ ಮೇಲೆ (ಇಇಜೆಡ್) ಪರಿಣಾಮ ಬೀರಲಿದೆ.
ಸರ್ ಕ್ರೀಕ್ ಗಡಿ ವಿವಾದಕ್ಕೆ ಶತಮಾನದ ಇತಿಹಾಸವಿದೆ. 1947ರಲ್ಲಿ ದೇಶ ವಿಭಜನೆ ಆಗುವುದಕ್ಕೂ ಮೊದಲು, ಕಛ್ ಪ್ರದೇಶ ಮತ್ತು ಸಿಂಧ್ ಪ್ರಾಂತ್ಯವನ್ನು ಆಳುತ್ತಿದ್ದ ರಾಜರ ನಡುವೆ ಈ ಅಳಿವೆಯ ಮಾಲೀಕತ್ವದ ಬಗ್ಗೆ ತಕರಾರು ಇತ್ತು. 1908ರಿಂದಲೂ ಈ ವಿವಾದ ಇರುವುದು ಇತಿಹಾಸದಲ್ಲಿ ದಾಖಲಾಗಿದೆ. 1965ರ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದ ನಂತರ ಈ ವಿವಾದ ತೀವ್ರಗೊಂಡಿತ್ತು. ಸರ್ ಕ್ರೀಕ್‌ನಲ್ಲಿ ಗಡಿ ಗುರುತಿಸುವ ಸಂಬಂಧ ಇಲ್ಲಿಯವರೆಗೆ ಉಭಯ ದೇಶಗಳ ನಡುವೆ 10ಕ್ಕೂ ಹೆಚ್ಚು ಸುತ್ತಿನ ಮಾತುಕತೆಗಳು ನಡೆದಿವೆ. ಯಾವುದೂ ಫಲಪ್ರದವಾಗಿಲ್ಲ.
ಈ ವಿವಾದದ ಬಗ್ಗೆ ಸಮಗ್ರ ದ್ವಿಪಕ್ಷೀಯ ಚರ್ಚೆ ನಡೆಸಲು 2015ರಲ್ಲಿ ಉಭಯ ದೇಶಗಳು ಸಮ್ಮತಿಸಿದ್ದವು. ಆದರೆ, 2016ರಲ್ಲಿ ನಡೆದ ಪಠಾಣ್‌ಕೋಟ್ ದಾಳಿ ಮತ್ತು ಆ ನಂತರದ ಬೆಳವಣಿಗೆಗಳು ಮಾತುಕತೆ ಮುಂದುವರಿಸಲು ಅವಕಾಶ ನೀಡಲಿಲ್ಲ.
ಬ್ರಿಟಿಷರ ಆಳ್ವಿಕೆಯಲ್ಲಿ ಈ ಪ್ರದೇಶ ಬಾಂಬೆ ಪ್ರೆಸಿಡೆನ್ಸಿ ವ್ಯಾಪ್ತಿಗೆ ಸೇರಿತ್ತು. 1947ರ ವಿಭಜನೆಯ ನಂತರ ಸಿಂಧ್ ಪ್ರಾಂತ್ಯ ಪಾಕಿಸ್ತಾನದ ಭಾಗವಾದರೆ, ಕಛ್ ಭಾರತದಲ್ಲೇ ಉಳಿದುಕೊಂಡಿದೆ
ಅಳಿವೆ ಪ್ರದೇಶದ ದಡದಲ್ಲಿ ಬಿದ್ದಿದ್ದ ಉರುವಲು ರಾಶಿ ಯಾರಿಗೆ ಸೇರಿದ್ದು ಎಂಬ ವಿಷಯದಲ್ಲಿ 1908ರಲ್ಲಿ ಸಿಂಧ್ ಮತ್ತು ಕಛ್ ಪ್ರದೇಶದ ಆಡಳಿತಗಾರರ ನಡುವೆ ವಾಗ್ವಾದ ನಡೆದಿತ್ತು
ಈ ಬಿಕ್ಕಟ್ಟನ್ನು 1914ರಲ್ಲಿ ಬಾಂಬೆ ಪ್ರೆಸಿಡೆನ್ಸಿಯ ಆಡಳಿತವು ಇತ್ಯರ್ಥಪಡಿಸಿತ್ತು. ಬ್ರಿಟಿಷ್ ಆಡಳಿತ ತೆಗೆದುಕೊಂಡಿದ್ದ ನಿರ್ಣಯಕ್ಕೆ ಎರಡೂ ಕಡೆಯ ಆಡಳಿತಗಾರರು ಸಹಿ ಹಾಕಿದ್ದರು. ಈ ನಿರ್ಣಯದ 9ನೇ ಪ್ಯಾರಾವು ಅಳಿವೆ ಪ್ರದೇಶದ ಪೂರ್ವ ದಂಡೆಯನ್ನು ಗಡಿ ಎಂದು ಗುರುತಿಸಿದೆ. ಅದರ ಪ್ರಕಾರ, ಇಡೀ ಅಳಿವೆ ಪ್ರದೇಶ ಪಾಕಿಸ್ತಾನಕ್ಕೆ ಸೇರುತ್ತದೆ. 10ನೇ ಪ್ಯಾರಾವು ಅಂತರರಾಷ್ಟ್ರೀಯ ಕಾನೂನಿನ ತ್ಯಾಲ್‌ವೆಗ್ ನಿಯಮವನ್ನು ಅನ್ವಯಿಸಿದೆ. ‘ಯಾವುದೇ ಎರಡು ರಾಜ್ಯ/ದೇಶಗಳ ಭೂ ಪ್ರದೇಶವನ್ನು ಹಡಗುಗಳ ಸಂಚಾರಕ್ಕೆ ಯೋಗ್ಯವಾದ ನದಿ ಅಥವಾ ಕಾಲುವೆಯು ವಿಭಜಿಸಿದರೆ ಆ ನದಿ/ಕಾಲುವೆಯ ಆಳವಾದ ಪ್ರದೇಶವನ್ನು ಗಡಿ ಎಂದು ಪರಿಗಣಿಸಬೇಕು’ ಎಂದು ಈ ನಿಯಮ ಹೇಳುತ್ತದೆ. 9 ಮತ್ತು 10ನೇ ಪ್ಯಾರಾ ವೈರುಧ್ಯದಿಂದ ಕೂಡಿವೆ
1914ರ ಬಳಿಕ ದೇಶ ಸ್ವಾತಂತ್ರ್ಯಗೊಳ್ಳುವವರೆಗೂ ವಿವಾದ ಕಂಡು ಬರಲಿಲ್ಲ. ವಿಭಜನೆ ಆದ ನಂತರ ಪಾಕಿಸ್ತಾನ ಮತ್ತು ಭಾರತ ನಿರ್ಣಯದ ಈ ಎರಡು ಅಂಶಗಳನ್ನು ಒಪ್ಪಿಲ್ಲ
ಭಾರತವು 1925ರಲ್ಲಿ ಸಿದ್ಧಪಡಿಸಲಾದ ನಕ್ಷೆಯ ಆಧಾರದಲ್ಲಿ ಅಳಿವೆ ಪ್ರದೇಶದ ಮಧ್ಯವು ಗಡಿಯಾಗಿದ್ದು, ಅಂತರರಾಷ್ಟ್ರೀಯ ಕಾನೂನಿನ ತ್ಯಾಲ್‌ವೆಗ್ ಸಿದ್ಧಾಂತದ ಅನ್ವಯ ಅರ್ಧ ತನಗೆ ಸೇರಿದ್ದು ಎಂದು ಪ್ರತಿಪಾದಿಸುತ್ತಾ ಬಂದಿದೆ
ಪಾಕ್ ಇದನ್ನು ಒಪ್ಪಿಲ್ಲ. ಜೌಗು ಪ್ರದೇಶವಾಗಿರುವ ಸರ್ ಕ್ರೀಕ್ ದೋಣಿ– ಹಡಗುಗಳ ಸಂಚಾರಕ್ಕೆ ಯೋಗ್ಯವಾಗಿಲ್ಲ. ಹಾಗಾಗಿ, ಇಲ್ಲಿ ಈ ಸಿದ್ಧಾಂತವನ್ನು ಅನ್ವಯಿಸಲು ಸಾಧ್ಯವಿಲ್ಲ ಎಂದು ಅದು ಹೇಳುತ್ತಿದೆ. ಆದರೆ, ಸಮುದ್ರದ ಉಬ್ಬರವಿದ್ದ ಸಂದರ್ಭದಲ್ಲಿ ಹಡಗುಗಳು ಇಲ್ಲಿ ಸಂಚರಿಸಬಹುದು ಎಂದು ಭಾರತ ವಾದಿಸುತ್ತಿದೆ
1965ರ ಯುದ್ಧದ ನಂತರ ಗುಜರಾತ್‌ನ ಕಛ್‌ನ ಅರ್ಧದಷ್ಟು ಭೂಭಾಗ ತನ್ನದೆಂದು ಪಾಕ್ ಹೇಳಿಕೊಂಡಿತು. ಇದನ್ನು ವಿರೋಧಿಸಿದ ಭಾರತ ಕಛ್ ಪೂರ್ಣವಾಗಿ ತನಗೇ ಸೇರಿದ್ದು ಎಂದು ಪ್ರತಿಪಾದಿಸಿತು. ಈ ವಿಚಾರವು ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿ ಮೆಟ್ಟಿಲೇರಿತು. 1968ರ ಫೆಬ್ರುವರಿ 19ರಂದು ನ್ಯಾಯಮಂಡಳಿ ನೀಡಿದ್ದ ಆದೇಶದಲ್ಲಿ ಭಾರತದ ವಾದವನ್ನು ಎತ್ತಿಹಿಡಿದಿತ್ತು. ಕಛ್‌ನ ಶೇ 90ರಷ್ಟು ಭೂಭಾಗ ಭಾರತಕ್ಕೆ ಸೇರಿದ್ದು ಎಂದು ಆದೇಶ ನೀಡಿದ್ದ ನ್ಯಾಯಮಂಡಳಿ, ಶೇ 10ರಷ್ಟು ಪ್ರದೇಶವನ್ನು ಪಾಕಿಸ್ತಾನಕ್ಕೆ ಸೇರಿದ್ದು ಎಂದು ಹೇಳಿತ್ತು. ಆದರೆ, ಸರ್ ಕ್ರೀಕ್‌ನಲ್ಲಿ ಗಡಿ ಗುರುತಿಸುವ ಬಗ್ಗೆ ಅದು ಏನೂ ಹೇಳಿರಲಿಲ್ಲ
ಈ ವಿವಾದ ಪರಿಹರಿಸುವ ದಿಸೆಯಲ್ಲಿ 1989ರ ಜೂನ್ 2ರಂದು ಇಸ್ಲಾಮಾಬಾದ್‌ನಲ್ಲಿ ಮೊದಲ ದ್ವಿಪಕ್ಷೀಯ ಮಾತುಕತೆ ನಡೆದಿತ್ತು. ನಂತರ 1990, 1991, 1992, 1994, 1996, 1997, 1998ರಲ್ಲಿ ಗಡಿ ಗುರುತಿಸುವಿಕೆ ಬಗ್ಗೆ ಎರಡೂ ರಾಷ್ಟ್ರಗಳು ಮಾತುಕತೆ ನಡೆಸಿದ್ದವು. 1998 ಮಾತುಕತೆ ವೇಳೆ ಗಡಿ ವಿವಾದವನ್ನು ದ್ವಿಪಕ್ಷೀಯವಾಗಿಯೇ ಬಗೆಹರಿಸಬೇಕು ಎಂದು ಭಾರತವು ಪ್ರತಿಪಾದಿಸಿತ್ತು
ಗಡಿ ಗುರುತಿಸಲು 2007ರ ವರ್ಷಾರಂಭದಲ್ಲಿ ಎರಡೂ ರಾಷ್ಟ್ರಗಳು ಜಂಟಿ ಸಮೀಕ್ಷೆ ನಡೆಸಿದ್ದವು. ಮೇ ತಿಂಗಳಲ್ಲಿ ಇಸ್ಲಾಮಾಬಾದ್‌ನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆದಿತ್ತು
ಸರ್ ಕ್ರೀಕ್‌ನ ವಿಷಯವಾಗಿ ಕೊನೆಯ ದ್ವಿಪಕ್ಷೀಯ ಮಾತುಕತೆ ನಡೆದಿದ್ದು 2012ರಲ್ಲಿ. ಆದರೆ, ಅಂತಿಮ ತೀರ್ಮಾನ ಸಾಧ್ಯವಾಗಿರಲಿಲ್ಲ
ಈ ವಿವಾದದ ಬಗ್ಗೆ ಸಮಗ್ರ ದ್ವಿಪಕ್ಷೀಯ ಚರ್ಚೆ ನಡೆಸಲು 2015ರಲ್ಲಿ ಉಭಯ ದೇಶಗಳು ಸಮ್ಮತಿಸಿದ್ದವು. ಆದರೆ 2016ರಲ್ಲಿ ನಡೆದ ಪಠಾಣ್‌ಕೋಟ್ ದಾಳಿ ಮತ್ತು ಆ ನಂತರದ ಬೆಳವಣಿಗೆಗಳು ಮಾತುಕತೆ ಮುಂದುವರಿಸಲು ಅವಕಾಶ ನೀಡಲಿಲ್ಲ.
ಭಾರತವು 1925ರಲ್ಲಿ ಸಿದ್ಧಪಡಿಸಲಾದ ನಕ್ಷೆಯ ಆಧಾರದಲ್ಲಿ ಅಳಿವೆ ಪ್ರದೇಶದ ಮಧ್ಯವು ಗಡಿಯಾಗಿದ್ದು ಅಂತರರಾಷ್ಟ್ರೀಯ ಕಾನೂನಿನ ತ್ಯಾಲ್‌ವೆಗ್ ಸಿದ್ಧಾಂತದ ಅನ್ವಯ ಅರ್ಧ ತನಗೆ ಸೇರಿದ್ದು ಎಂದು ಪ್ರತಿಪಾದಿಸುತ್ತಾ ಬಂದಿದೆ
ಪಾಕ್ ಇದನ್ನು ಒಪ್ಪುತ್ತಿಲ್ಲ. ಜೌಗು ಪ್ರದೇಶವಾಗಿರುವ ಸರ್ ಕ್ರೀಕ್ ದೋಣಿ– ಹಡಗುಗಳ ಸಂಚಾರಕ್ಕೆ ಯೋಗ್ಯವಾಗಿಲ್ಲ. ಹಾಗಾಗಿ ಇಲ್ಲಿ ಈ ಸಿದ್ಧಾಂತವನ್ನು ಅನ್ವಯಿಸಲು ಸಾಧ್ಯವಿಲ್ಲ ಎಂದು ಅದು ಹೇಳುತ್ತಿದೆ. ಆದರೆ ಸಮುದ್ರದ ಉಬ್ಬರವಿದ್ದ ಸಂದರ್ಭದಲ್ಲಿ ಹಡಗುಗಳು ಇಲ್ಲಿ ಸಂಚರಿಸಬಹುದು ಎಂದು ಭಾರತ ವಾದಿಸುತ್ತಿದೆ
ಆಧಾರ: ಪಿಟಿಐ, ಬ್ರಿಟನ್‌ನ ಡರ‍್ಹಂ ವಿವಿಯ ಅಧ್ಯಯನ ವರದಿ, ಸಂಸತ್‌ನಲ್ಲಿ ಸಚಿವರ ಹೇಳಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.