ಬೆಂಗಳೂರಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ 2006ರಲ್ಲಿ ನಡೆದಿದ್ದ ‘ಪ್ರೇಮಾಂಜಲಿ ಹಬ್ಬ’ದಲ್ಲಿ ಕಥಕ್ ಸಾಮ್ರಾಟ ಪಂಡಿತ್ ಬಿರ್ಜು ಮಹಾರಾಜ್ ಅವರ ನೃತ್ಯಕ್ಕೆ ಜಾಕಿರ್ ಹುಸೇನ್ ಅವರು ತಬಲಾ ನುಡಿಸಿದಾಗ...
ಚಿತ್ರ ಪ್ರಜಾವಾಣಿ ಆರ್ಕೈವ್ಸ್
ಇಡೀ ಜಗತ್ತಿನಲ್ಲಿ ಯಾರೇ ತಬಲಾ ನುಡಿಸಿದರೂ ಅದರಲ್ಲಿ ಒಂದಂಶವಾದರೂ ಉಸ್ತಾದ್ ಜಾಕಿರ್ ಹುಸೇನ್ ಅವರ ಪ್ರೇರಣೆ ಇರಲೇಬೇಕು. ಅವರ ನುಡಿಸಾಣಿಕೆಯಲ್ಲಿದ್ದ ಮಾಂತ್ರಿಕ ಶಕ್ತಿಯ ಅನುಕರಣೆ ಒಂದಲ್ಲಾ ಒಂದು ರೂಪದಲ್ಲಿ ಆಗಲೇಬೇಕು. ಆ ಅಗಾಧ ಅಧ್ಯಯನ, ಹೊಸತನದ ಹುಡುಕಾಟ, ಸಂಶೋಧನೆ ಮುಂದಿನ ಹಲವು ತಲೆಮಾರುಗಳಿಗೆ ಸ್ಫೂರ್ತಿಯಾಗಿ ಹರಿಯಲೇಬೇಕು.
ಪಂಜಾಬಿ ಘರಾಣೆಯಲ್ಲಿ ಅಭ್ಯಾಸ ಮಾಡಿಬಂದ ಉಸ್ತಾದರು ಹಲವು ಘರಾಣೆಗಳ ಬೇಲಿ ದಾಟಿ ಬಲುದೂರ ಸಾಗಿದ್ದರು. ಸಂಪ್ರದಾಯದ ಹಾದಿಯಲ್ಲೇ ಹೆಜ್ಜೆ ಹಾಕಿದ ಅವರು ತಮ್ಮದೇ ಸ್ವಂತಿಕೆಯನ್ನು ಸೃಷ್ಟಿಸಿದರು. ಅವರ ಕಛೇರಿಗಳೆಂದರೆ ವಿದ್ವತ್ ಪ್ರದರ್ಶನದ ಸ್ಪರ್ಧಾತ್ಮಕ ಪರೀಕ್ಷೆಯಾಗಿರಲಿಲ್ಲ. ಮಧುರ ಮಾತುಕತೆ, ನೋಟ, ಒಳನೋಟ, ಪ್ರೀತಿ, ಅಂತಃಕರಣ, ಕರುಣೆಯ ದರ್ಶನವಾಗಿದ್ದವು. ಲೆಕ್ಕಾಚಾರಗಳಿಗೆ ಹೊರತಾಗಿ ಪ್ರೇಮದ ಪ್ರದರ್ಶನ ಅವರ ತಬಲಾ ನುಡಿಸಾಣಿಕೆಯಲ್ಲಿತ್ತು.
ಬತ್ತಳಿಕೆಯಲ್ಲಿ ಅಸ್ತ್ರ, ಬ್ರಹ್ಮಾಸ್ತ್ರಗಳಿದ್ದರೂ ಅವುಗಳನ್ನು ಹಮ್ಮು, ಬಿಮ್ಮು ತೋರಿಸಲು ಎಂದೂ ಬಳಸಿಕೊಳ್ಳಲಿಲ್ಲ. ಪ್ರಧಾನ ಗಾಯಕ, ವಾದ್ಯಗಾರರಿಗೆ ಸಹಕಾರ ತೋರುವ ಪಕ್ಕವಾದ್ಯ ಕಲಾವಿದರಾಗಿಯೇ ತಮ್ಮ ಛಾಪು ಮೂಡಿಸಿದ್ದರು. ತಮ್ಮ ಇಡೀ ಜ್ಞಾನ ಸಂಪತ್ತನ್ನು ಪ್ರೀತಿ ಹಂಚಲು ಬಳಸಿಕೊಂಡರು. ಸಮಚಿತ್ತವಾದ, ಸಮತೋಲಿತವಾದ ಪಕ್ಕವಾದ್ಯ ಸಹಕಾರದ ಮೂಲಕ ತಮ್ಮ ನಾದಗುಣವನ್ನು ಅವರು ಅನಾವರಣಗೊಳಿಸಿದರು.
ಪ್ರತಿಭೆಯಿಂದ ಅವರು ಬಲು ದೊಡ್ಡವರು ನಿಜ. ಆದರೆ, ಗುಣಧರ್ಮದಲ್ಲಿ, ನಡವಳಿಕೆಯಲ್ಲಿ, ಪ್ರೀತಿಯ ಹಂಚಿಕೆಯಲ್ಲಿ ಉಸ್ತಾದರು ಮತ್ತಷ್ಟು, ಮಗದಷ್ಟು ದೊಡ್ಡವರು. ಅದೊಂದು ಪ್ರೀತಿಯ ಪರ್ವತ. 50ಕ್ಕೂ ಹೆಚ್ಚು ವರ್ಷಗಳವರೆಗೆ ಪ್ರಖ್ಯಾತಿಯ ತುತ್ತ ತುದಿಯಲ್ಲಿ ಮಿನುಗಿದ ಆ ನಕ್ಷತ್ರ ಸೃಷ್ಟಿಸಿದ ಸೋಜಿಗಗಳು ಒಂದೆರಡಲ್ಲ. ವಾದ್ಯಕ್ಕೆ ಹೊಸ ರೂಪ ಕೊಟ್ಟ ಸಾಧನೆ ಒಂದೆಡೆಯಾದರೆ, ವಾದ್ಯದ ಸಾಧ್ಯತೆಯನ್ನು ಬಲು ಎತ್ತರಕ್ಕೆ ವಿಸ್ತರಣೆ ಮಾಡಿದ ಶ್ರೇಷ್ಠತೆ ಇನ್ನೊಂದೆಡೆ.
ಅವರು ವಾದ್ಯ ಹಿಡಿದು ಕುಳಿತಾಗ ಅವರ ಕಿರುನಗು, ರೇಷ್ಮೆಯ ನೂಲಿನಂತಿದ್ದ ಕೂದಲಿನ ಒಳಗೆ ತೂರಿಬರುತ್ತಿದ್ದ ನೋಟವನ್ನು ನೋಡಲಿಕ್ಕಾಗಿಯೇ ರಸಿಕರು ಬಂದು ಸೇರುತ್ತಿದ್ದರು. ಅವರ ಪ್ರತಿಭೆ ಕಂಡು ಜನರು ‘ಭಲಾ’ ಎಂಬ ಕೂಗು ಮೊಳಗಿಸುತ್ತಿದ್ದರು. ಇದರಿಂದ ಉಸ್ತಾದರು ಉನ್ಮಾದಗೊಳ್ಳುತ್ತಿರಲಿಲ್ಲ, ಮುಖ್ಯ ಕಲಾವಿದರಿಗೆ ತೋರಬೇಕಾದ ಸಹಕಾರದ ಹಾದಿ ಬಿಟ್ಟು ಕದಲುತ್ತಿರಲಿಲ್ಲ. ಹರಿವ ನದಿಯಂತಿದ್ದ ಅವರ ಸಹಕಾರ ಪಕ್ಕವಾದ್ಯಕ್ಕೆ ಒಂದು ದೊಡ್ಡ ಮಾದರಿಯಾಗಿತ್ತು.
ಕಲಾ ಪ್ರಪಂಚದಲ್ಲಿ ಅವರನ್ನು‘ಜಾಕಿರ್ ಭಾಯ್’ ಎನ್ನಲು ಹಲವು ಕಾರಣಗಳಿವೆ. ನನ್ನ ಒಡನಾಟಗಳನ್ನೇ ಇಲ್ಲಿ ಬಿಚ್ಚಿಡುತ್ತೇನೆ. ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಬಿರ್ಜು ಮಹಾರಾಜ್ ತಂಡದ ಕಥಕ್ ಹೆಜ್ಜೆಗಳಿಗೆ ಜಾಕಿರ್ ಹುಸೇನ್ ತಬಲಾ ಸಾಥಿಯಾಗಿದ್ದರು. ನೃತ್ಯದ ನಡುವಿನ ಅವಧಿಯಲ್ಲಿ ನಾನು ಅವರನ್ನು ಕಂಡೆ, ನನ್ನನ್ನು ನೋಡಿದ ಕೂಡಲೇ ಪ್ರೀತಿಯ ನಗೆ ಬೀರಿದರು. ನನ್ನ ಕೈಬೆರಳುಗಳಿಗೆ ಹಾಕಿಕೊಂಡಿದ್ದ ಬ್ಯಾಂಡೇಡ್ ಗಮನಸಿದವರೇ ನನ್ನ ಕೈ ಹಿಡಿದು ‘ಏನಿದು, ನಿನ್ನ ಬೆರಳುಗಳಿಗೆ ಏನಾಯಿತು‘ ಎಂದು ಪ್ರಶ್ನಿಸಿದರು. ‘ಬೆರಳು ಒಡೆದುಕೊಂಡಿವೆ, ಅದಕ್ಕೇ ಬ್ಯಾಂಡೇಡ್ ಹಾಕಿಕೊಂಡಿದ್ದೇನೆ’ ಎಂದೆ. ಅದಕ್ಕವರು ‘ಇದು ಸಣ್ಣ ಸೋರಿಯಾಸಿಸ್ ಅಷ್ಟೆ. ಹೆದರಬೇಡ, ಆರೈಕೆ ಮಾಡು, ನ್ಯೂಟ್ರಿಸಿನ್ ಕ್ರೀಮ್ ಹಚ್ಚು’ ಎಂದು ಅವರು ಹೇಳಿದಾಗ ನನ್ನ ಮನಸ್ಸು ಪ್ರೀತಿಯಲ್ಲಿ ಉಕ್ಕಿತ್ತು. ಅವರ ಆತ್ಮೀಯತೆಯನ್ನು ನಾನು ಏನೆಂದು ವರ್ಣಿಸಲಿ?
ಧಾರವಾಡ ಕಲಾಭವನದಲ್ಲಿ ಮೊದಲ ಬಾರಿಗೆ ಅವರ ಸೋಲೊ ತಬಲಾ ಕಛೇರಿ ನಿಗದಿಯಾಗಿತ್ತು, ಟಿಕೆಟ್ ಪ್ರದರ್ಶನ. ಜನರು ಟಿಕೆಟ್‌ಗಾಗಿ ಹೋರಾಟವನ್ನೇ ಮಾಡಿದ್ದರು. ಹಲವು ಪಟ್ಟು ಹೆಚ್ಚು ಹಣ ಕೊಡಲೂ ಸಿದ್ಧರಿದ್ದರು. ಟಿಕೆಟ್ ಸಿಗದ ಕೆಲವರು ಕಲಾಭವನದ ಮೇಲೆ ಕಲ್ಲು ತೂರಿದರು. ಸಂಗೀತ ಕಛೇರಿಗೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಕಲ್ಲು ತೂರಾಟ ನಡೆಸಿದ್ದನ್ನು ನಾನು ಎಲ್ಲೂ ಕೇಳಿರಲಿಲ್ಲ. ಅದೇ ಕಾರ್ಯಕ್ರಮದಲ್ಲಿ ಇನ್ನೊಂದು ಆಶ್ಚರ್ಯವೂ ನಡೆಯಿತು. ಕಲಾಮಂದಿರದಲ್ಲಿ ಪರದೆ ಸರಿದಾಗ ಮುಂದಿನ ಸಾಲಿನಲ್ಲಿ ಕುಳಿತಿದ್ದ ಪಂಡಿತ್ ಮಲ್ಲಿಕಾರ್ಜುನ ಮನಸೂರ ಅವರನ್ನು ಕಂಡು ಜಾಕಿರ್ ಹುಸೇನ್ ವೇದಿಕೆಯಿಂದ ಮಗುವಿನಂತೆ ಜಿಗಿದುಬಂದು ಮನಸೂರರ ಕಾಲಿಗೆ ಬಿದ್ದು ಮತ್ತೆ ವೇದಿಕೆಗೆ ತೆರಳಿದರು. ಈ ಘಟನೆ ಈಗಲೂ ಹಲವರ ಮನದಾಳದಲ್ಲಿದೆ.
ಮತ್ತೊಮ್ಮೆ ಜಾಕಿರ್ ಭಾಯ್ ಬೆಂಗಳೂರಿಗೆ ಬಂದಿದ್ದಾಗ ನಾನು ಕಛೇರಿಗೆ ಹೋಗಲಾಗಿರಲಿಲ್ಲ. ನನ್ನ ಶಿಷ್ಯರು ಅವರನ್ನು ಕಂಡು ಮಾತನಾಡಿಸಿದಾಗ ‘ಯಾವಗಲ್ ಏಕೆ ಬಂದಿಲ್ಲ, ಅವನು ಸಿಕ್ಕರೆ ನೇಣು ಹಾಕುತ್ತೇನೆ’ ಎಂದಿದ್ದರು. ಇನ್ನೊಮ್ಮೆ ಜಾಕಿರ್ ಭಾಯ್ ಕಛೇರಿಗೆ ನನ್ನ ಮಗ ಕಿರಣ್ ಯಾವಗಲ್ ಹೋಗಿದ್ದ. ಎಂದೋ ಒಮ್ಮೆ ನನ್ನ ಮಗನನ್ನು ನೋಡಿದ್ದ ಅವರು ಗುರುತಿಸಿ ಗ್ರೀನ್ ರೂಮ್‌ಗೆ ಕರೆದು ಸಮೋಸ ತಿನ್ನಿಸಿದ್ದರು. ತಬಲಾ ನುಡಿಸಿ, ಇದು ಹೇಗಿದೆ ಎಂದು ಕೇಳಿದ್ದರು. ಅದಕ್ಕೆ ನನ್ನ ಮಗ ಏನು ಹೇಳಬೇಕು? ಸಣ್ಣವರಿಗೂ ಮಾನ್ಯತೆ ಕೊಡುತ್ತಿದ್ದ ಅವರ ಗುಣವೇ ದೊಡ್ಡದು. ಆಗ ಸಂಘಟಕರನ್ನು ಕರೆದು ‘ಈ ಹುಡುಗನನ್ನು ಮುಂದಿನ ಸಾಲಿನಲ್ಲೇ ಕೂರಿಸಿ, ಕಛೇರಿ ಮುಗಿಯುವವರೆಗೂ ನನ್ನ ಕಣ್ಣಿಗೆ ಇವನು ಕಾಣಬೇಕು’ ಎಂದು ಹೇಳಿದ್ದರು.
ನಾವೇನೂ ಉಸ್ತಾದ್ ಜಾಕಿರ್ ಹುಸೇನ್ ಅವರ ಆತ್ಮೀಯ ವಲಯದಲ್ಲಿ ಗುರುತಿಸಿಕೊಂಡವರಲ್ಲ. ಆದರೂ ಅವರು ತೋರಿತ್ತಿದ್ದ ಆತ್ಮೀಯತೆ ಬಲು ದೊಡ್ಡದು. ಪ್ರತಿಯೊಬ್ಬರಿಗೂ ಇದೇ ಪ್ರೀತಿ, ಆತ್ಮೀಯತೆ ತೋರುತ್ತಿದ್ದರು. ಅದರಿಂದಲೇ ಅವರು ದೊಡ್ಡವರಾದರು. 2025ರಲ್ಲೂ ಅವರ ಕಛೇರಿಗಳು ನಿಗದಿಯಾಗಿದ್ದವು. ಆದರೆ, ಆಸ್ಪತ್ರೆಗೆ ಸೇರಿದ ನಂತರ ಅವರು ಎಲ್ಲಾ ಕಛೇರಿಗಳನ್ನು ರದ್ದು ಮಾಡಿಕೊಂಡರು ಎಂದು ಕೇಳ್ಪಟ್ಟೆ. ಅವರೀಗ ಇಲ್ಲ ಎಂಬ ಭಾವನೆ ನಮ್ಮೊಳಗಿಲ್ಲ. ಅವರ ಹಂಚಿದ ಪ್ರೀತಿ, ನಾದ ದುಂದುಭಿ ನದಿಯಾಗಿ ಹರಿಯಲಿದೆ.
ಜಾಕೀರ್ ಹುಸನ್ ಅವರ ಚಿತ್ರಣ ಹಲವು ಚಿತ್ರಕಲಾ ಕಲಾವಿದರಿಗೆ ಬಣ್ಣದ ವಸ್ತುವಾಗಿತ್ತು. ಹಲವು ರೂಪಗಳಲ್ಲಿ ಅವರು ಕ್ಯಾನ್‌ವಾಸ್‌ನಲ್ಲಿ ಮೂಡಿ ಬಂದಿದ್ದರು. ಅಷ್ಟೇ ಅಲ್ಲ, ಮಕ್ಕಳ ಪ್ರೀತಿಯ ಕಾರ್ಟೂನ್ ರೂಪದಲ್ಲೂ ಅವರು ಕಾಣಿಸಿಕೊಂಡಿದ್ದರು.
ಲೇಖಕ: ಪಂ.ರವೀಂದ್ರ ಯಾವಗಲ್, ಖ್ಯಾತ ತಬಲಾ ವಾದಕ
ನಿರೂಪಣೆ: ಎಂ.ಎನ್.ಯೋಗೇಶ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.