ADVERTISEMENT

ಆಳ–ಅಗಲ | ರಾಜ್ಯ–ರಾಜ್ಯಪಾಲರ ಸಂಘರ್ಷ: ‘ಸುಪ್ರೀಂ’ ದಿಕ್ಸೂಚಿ

ಬಿಜೆಪಿಯೇತರ ರಾಜ್ಯ ಸರ್ಕಾರಗಳ ಹಲವು ಮಸೂದೆಗಳಿಗೆ ಸಿಕ್ಕಿಲ್ಲ ಮುಕ್ತಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2025, 23:30 IST
Last Updated 9 ಏಪ್ರಿಲ್ 2025, 23:30 IST
   
ತಮಿಳುನಾಡಿನ ರಾಜ್ಯಪಾಲ ಆರ್‌.ಎನ್‌.ರವಿ ಅವರು ಅಲ್ಲಿನ ಸರ್ಕಾರದ 10 ಮಸೂದೆಗಳ ಬಗ್ಗೆ ತೀರ್ಮಾನ ಕೈಗೊಳ್ಳದೇ ತಮ್ಮ ಬಳಿಯೇ ಉಳಿಸಿಕೊಂಡು ವಿಳಂಬ ಮಾಡಿದ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಹಲವು ನೆಲೆಗಳಿಂದ ಐತಿಹಾಸಿಕವಾಗಿದೆ. ನ್ಯಾಯಮೂರ್ತಿಗಳ ಮಾತು ರಾಜ್ಯಪಾಲರ ಅಧಿಕಾರ ಮತ್ತು ರಾಜ್ಯ ಸರ್ಕಾರಗಳ ಹಕ್ಕಿನ ಬಗ್ಗೆ ಮತ್ತೊಮ್ಮೆ ಬೆಳಕು ಚೆಲ್ಲಿದೆ. ಕರ್ನಾಟಕವೂ ಸೇರಿದಂತೆ ಕೇರಳ, ಪಶ್ಚಿಮ ಬಂಗಾಳ, ಪಂಜಾಬ್, ತೆಲಂಗಾಣ ರಾಜ್ಯಗಳ ಹಲವು ಮಸೂದೆಗಳು ರಾಜ್ಯಪಾಲರ ಬಳಿ ಬಾಕಿ ಇದ್ದು, ಅವುಗಳಿಗೆ ಶೀಘ್ರದಲ್ಲೇ ಅಂಕಿತ ಸಿಗುವ ವಿಶ್ವಾಸ ಮೂಡಿಸಿದೆ. ಭವಿಷ್ಯದಲ್ಲಿಯೂ ಇದು ರಾಜ್ಯಪಾಲ ಮತ್ತು ಸರ್ಕಾರದ ನಡುವಿನ ಸಂಘರ್ಷದ ಸಂದರ್ಭದಲ್ಲಿ ದಿಕ್ಸೂಚಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ರಾಜ್ಯದಲ್ಲಿ ರಾಜ್ಯಪಾಲರು ಸಾಂವಿಧಾನಿಕ ಮುಖ್ಯಸ್ಥರಾಗಿದ್ದರೆ, ಸಚಿವ ಸಂಪುಟವು ಆಡಳಿತಾತ್ಮಕ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. ಚುನಾಯಿತ ಸರ್ಕಾರವು ಕಾಲದಿಂದ ಕಾಲಕ್ಕೆ ರೂಪಿಸಿದ ಮಸೂದೆಗಳು ಕಾಯ್ದೆಯಾಗಿ ಜಾರಿಗೆ ಬರಬೇಕು ಎಂದರೆ, ಅವಕ್ಕೆ ರಾಜ್ಯಪಾಲರ ಅಂಕಿತ ಬೀಳಲೇಬೇಕು. ರಾಜ್ಯ ಸರ್ಕಾರವು ಸಚಿವ ಸಂಪುಟದಲ್ಲಿ ಚರ್ಚಿಸಿ, ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಅಂಗೀಕರಿಸಿದ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಬೇಕು, ಹಿಂದಿರುಗಿಸಬೇಕು ಇಲ್ಲವೇ ರಾಷ್ಟ್ರಪತಿಗೆ ಕಳುಹಿಸಬೇಕು. ಆದರೆ, 2014ರ ನಂತರ, ಬಿಜೆಪಿಯೇತರ ಪಕ್ಷಗಳು ಆಡಳಿತ ನಡೆಸುವ ರಾಜ್ಯಗಳಲ್ಲಿ ಸರ್ಕಾರಗಳು ರೂಪಿಸಿದ ಮಸೂದೆಗಳನ್ನು ರಾಜ್ಯಪಾಲರು ಅನಿರ್ದಿಷ್ಟ ಕಾಲದವರೆಗೆ ನಿರ್ಧಾರ ಕೈಗೊಳ್ಳದೆ ವಿಳಂಬ ಮಾಡಿದ ವಿಚಾರವು ಅನೇಕ ಬಾರಿ ವಿವಾದ ಸೃಷ್ಟಿಸಿದೆ. 

ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಮತ್ತು ರಾಜ್ಯಪಾಲ ಆರ್.ಎನ್.ರವಿ ನಡುವಿನ ತಿಕ್ಕಾಟದಂತೆಯೇ ಹಲವು ರಾಜ್ಯಗಳಲ್ಲಿ ಸಂಘರ್ಷ ನಡೆಯುತ್ತಿದೆ. ಜಾರ್ಖಂಡ್‌ನಲ್ಲಿ ಜೆಎಂಎಂ ಮೈತ್ರಿ ಸರ್ಕಾರ ಇದ್ದಾಗ ಮೊದಲು ರಾಜ್ಯಪಾಲರಾಗಿದ್ದ ರಮೇಶ್ ಬೈಸ್ ಮತ್ತು ನಂತರ ರಾಜ್ಯಪಾಲರಾಗಿ ಬಂದಿದ್ದ ಸಿ.ಪಿ.ರಾಧಾಕೃಷ್ಣನ್ ಅವರು ಸರ್ಕಾರದ ಅನೇಕ ಮಸೂದೆಗಳಿಗೆ ಅಂಕಿತ ಹಾಕಿರಲಿಲ್ಲ. ಅದೇ ರೀತಿ ಕೇರಳ ಸರ್ಕಾರದ ವಿಶ್ವವಿದ್ಯಾಲಯ ತಿದ್ದುಪಡಿ ನಿಯಮಗಳ ಮಸೂದೆ, ಸಹಕಾರ ಸಂಘಗಳ ತಿದ್ದುಪಡಿ ಮಸೂದೆ ಮತ್ತು ಲೋಕಾಯುಕ್ತ ಮಸೂದೆಗಳು ಸೇರಿದಂತೆ ಅನೇಕ ಮಸೂದೆಗಳಿಗೆ ರಾಜ್ಯಪಾಲರಾಗಿದ್ದ ಆರಿಫ್ ಮೊಹಮ್ಮದ್ ಖಾನ್ ಅವರು ಅಂಕಿತ ಹಾಕಿರಲಿಲ್ಲ. ಪಂಜಾಬ್‌ ರಾಜ್ಯಪಾಲರಾಗಿದ್ದ ಬನ್ವರಿಲಾಲ್ ‍ಪುರೋಹಿತ್ ಮತ್ತು ಎಎಪಿ ಸರ್ಕಾರ, ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಜಗದೀಪ್ ಧನಕರ್ ಮತ್ತು ಟಿಎಂಸಿ ಸರ್ಕಾರದ ನಡುವೆ ಭಾರಿ ಸಂಘರ್ಷವೇ ನಡೆದಿದೆ. 

ತೆಲಂಗಾಣದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಬಿಆರ್‌ಎಸ್‌ ಮತ್ತು ಆಗ ರಾಜ್ಯಪಾಲರಾಗಿದ್ದ ತಮಿಳ್ ಇಸೈ ಸೌಂದರರಾಜನ್ ನಡುವಿನ ತಿಕ್ಕಾಟವಂತೂ ರಾಜಭವನದ ಹೊರಗೂ ಚಾಚಿಕೊಂಡಿತ್ತು. ಮಸೂದೆಗಳಿಗೆ ಅಂಕಿತ ಹಾಕದೇ ಇರುವುದರ ಜತೆಗೆ, ತಮಿಳ್ ಇಸೈ ಅವರು ವಿರೋಧ ಪಕ್ಷಗಳ ನಾಯಕರಂತೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು; ಸುದ್ದಿವಾಹಿನಿಗಳಿಗೆ ಸಂದರ್ಶನ ನೀಡಿ ಮುಖ್ಯಮಂತ್ರಿ ಅವರ ಸಚಿವ ಸಂಪುಟದ ಕಾರ್ಯವೈಖರಿಯನ್ನು ಟೀಕಿಸುತ್ತಿದ್ದರು. 

ADVERTISEMENT

ಹಲವು ಬಾರಿ ಎಚ್ಚರಿಸಿದ್ದ ‘ಸುಪ್ರೀಂ’: ರಾಜ್ಯಪಾಲರ ಇಂಥ ಧೋರಣೆಯ ವಿರುದ್ಧ ರಾಜ್ಯ ಸರ್ಕಾರಗಳು ಹಲವು ಬಾರಿ ಸುಪ್ರಿಂ ಕೋರ್ಟ್ ಕದ ತಟ್ಟಿವೆ. ರಾಜ್ಯಪಾಲರಾದ ತಮಿಳ್ ಇಸೈ ಅವರು 10 ಮಸೂದೆಗಳಿಗೆ ಅಂಕಿತ ಹಾಕದೇ ವಿಳಂಬ ಮಾಡುತ್ತಿದ್ದಾರೆ ಎಂದು 2023ರ ಏಪ್ರಿಲ್‌ನಲ್ಲಿ ತೆಲಂಗಾಣ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿತು. ಮಸೂದೆಗಳನ್ನು ಸ್ಪಷ್ಟೀಕರಣ ಕೋರಿ ವಾಪಸ್ ಕಳುಹಿಸಲಾಗಿದೆ ಎಂದು ರಾಜ್ಯಪಾಲರು ಹೇಳಿದ ನಂತರ ಪ್ರಕರಣ ಮುಕ್ತಾಯವಾಗಿತ್ತು. ಆದರೂ, ರಾಜ್ಯಪಾಲರು ಇಂಥ ವಿಚಾರಗಳಲ್ಲಿ ವಿಳಂಬ ಮಾಡುವಂತಿಲ್ಲ ಎಂದು ಅತ್ಯುನ್ನತ ನ್ಯಾಯಾಲಯವು ಕಿವಿಮಾತು ಹೇಳಿತ್ತು.

ಕಳೆದ ವರ್ಷ ಪಂಜಾಬ್ ಸರ್ಕಾರವು ಬನ್ವರಿಲಾಲ್ ಅವರು 4 ಮಸೂದಗಳಿಗೆ ಅಂಕಿತ ಹಾಕದೇ ವಿಳಂಬ ಮಾಡುತ್ತಿದ್ದಾರೆ ಎಂದು ‘ಸುಪ್ರೀಂ’ನಲ್ಲಿ ಅರ್ಜಿ ಸಲ್ಲಿಸಿತ್ತು. ಆಗಲೂ ಬನ್ವರಿಲಾಲ್ ಅವರಿಗೆ ಶೀಘ್ರ ಮಸೂದೆ ವಿಲೇವಾರಿಗೆ ಕೋರ್ಟ್ ಸೂಚಿಸಿತ್ತು; ರಾಜ್ಯಪಾಲರು ಸಾಂಕೇತಿಕ ಮುಖ್ಯಸ್ಥರಾಗಿದ್ದು, ವಿಧಾನ ಮಂಡಲ ಅಂಗೀಕರಿಸಿರುವ ಮಸೂದೆಗಳನ್ನು ತಡೆಹಿಡಿಯುವಂತಿಲ್ಲ ಎಂದಿತ್ತು. ಟಿಎಂಸಿ ಸರ್ಕಾರವು ವಿಧಾನ ಮಂಡಲದಲ್ಲಿ ಅಂಗೀಕರಿಸಿದ್ದ ಎಂಟು ಮಸೂದೆಗಳನ್ನು ರಾಜ್ಯಪಾಲರಾಗಿದ್ದ ಆನಂದ ಬೋಸ್ ಅವರು ವಿಲೇವಾರಿ ಮಾಡದೇ ಹಾಗೆಯೇ ಉಳಿಸಿಕೊಂಡಿದ್ದಾರೆ ಎಂದು ಪಶ್ಚಿಮ ಬಂಗಾಳ ಸರ್ಕಾರವು 2024ರ ಜುಲೈನಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಹಾಕಿದೆ. ಅದು ಇನ್ನೂ ವಿಚಾರಣೆಯ ಹಂತದಲ್ಲಿದೆ. 

ಈಗ ತಮಿಳುನಾಡಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಇಂಥದ್ದೇ ಸಮಸ್ಯೆ ಎದುರಿಸುತ್ತಿರುವ ಹಲವು ರಾಜ್ಯಗಳಲ್ಲಿ ಹೊಸ ಭರವಸೆ ಮೂಡಿಸಿದೆ. ಪಂಜಾಬ್, ಜಾರ್ಖಂಡ್, ಕೇರಳ, ಕರ್ನಾಟಕದಲ್ಲಿ ಕೆಲವು ಮಸೂದೆಗಳು ರಾಜ್ಯಪಾಲರ ಅಂಕಿತಕ್ಕಾಗಿ ಕಾಯುತ್ತಿವೆ.  

ಸಂವಿಧಾನ ಹೇಳುವುದೇನು?

ಮಸೂದೆಗಳಿಗೆ ಅಂಕಿತ ಹಾಕುವ ಸಂಬಂಧ ರಾಜ್ಯಪಾಲರಿಗೆ ಇರುವ ಅಧಿಕಾರವನ್ನು ಸಂವಿಧಾನದ 200ನೇ ವಿಧಿಯು ವಿವರಿಸುತ್ತದೆ. 

ರಾಜ್ಯವೊಂದರ ವಿಧಾನ ಮಂಡಲದ ಎರಡೂ ಸದನಗಳು ಅಂಗೀಕರಿಸಿದ ಮಸೂದೆಯನ್ನು ಅನುಮತಿಗಾಗಿ ರಾಜ್ಯಪಾಲರ ಮುಂದಿಡಬೇಕು. ರಾಜ್ಯಪಾಲರು ಆ ಮಸೂದೆಗೆ ಅಂಕಿತ ಹಾಕಬಹುದು ಅಥವಾ ಅನುಮತಿ ನೀಡದಿರಬಹುದು ಅಥವಾ ರಾಷ್ಟ್ರಪತಿಗಳ ಪರಿಶೀಲನೆಗಾಗಿ ಮಸೂದೆಯನ್ನು ಕಳುಹಿಸಬಹುದು. ರಾಜ್ಯವು ಮಸೂದೆಯನ್ನು (ಹಣಕಾಸು ಮಸೂದೆ ಅಲ್ಲದಿದ್ದರೆ) ರಾಜ್ಯ‍ಪಾಲರ ಸಹಿಗಾಗಿ ಕಳುಹಿಸಿದ ನಂತರ, ರಾಜ್ಯಪಾಲರು ಮಸೂದೆಯನ್ನು ಮರುಪರಿಶೀಲಿಸುವಂತೆ ಮತ್ತು ಆಗಬೇಕಾದ ಬದಲಾವಣೆಗಳ ಕುರಿತಂತೆ ಶಿಫಾರಸು ಮಾಡಿ ಸಾಧ್ಯವಾದಷ್ಟು ಬೇಗ ಮಸೂದೆಯನ್ನು ವಾಪಸ್‌ ಕಳುಹಿಸಬೇಕು. ಮಸೂದೆ ವಾಪಸ್‌ ಬಂದ ನಂತರ ವಿಧಾನಸಭೆ ಅಥವಾ ಎರಡೂ ಸದನಗಳು ಮಸೂದೆಯನ್ನು ಪರಿಶೀಲನೆಗೆ ಒಳಪಡಿಸಬೇಕು. ಒಂದು ವೇಳೆ ವಿಧಾನಸಭೆ ಅಥವಾ ಎರಡೂ ಸದನಗಳು ಮಸೂದೆಯಲ್ಲಿ ತಿದ್ದುಪಡಿಗಳನ್ನು ಮಾಡಿ ಅಥವಾ ತಿದ್ದುಪಡಿ ಮಾಡದೆ ಮೊದಲಿನ ರೂಪದಲ್ಲಿಯೇ ಅಂಗೀಕರಿಸಿ, ಮತ್ತೆ ರಾಜ್ಯಪಾಲರ ಅಂಕಿತಕ್ಕಾಗಿ ಕಳುಹಿಸಿದ ಪಕ್ಷದಲ್ಲಿ ರಾಜ್ಯಪಾಲರು ಅಂಕಿತ ಹಾಕದೆ ಇರುವಂತಿಲ್ಲ. ಒಂದು ವೇಳೆ, ಮಸೂದೆಯು ಕಾನೂನಾದರೆ ಅದು ಸಂವಿಧಾನದಲ್ಲಿ ಹೈಕೋರ್ಟ್‌ಗೆ ನೀಡಿರುವ ಅಧಿಕಾರ ಮತ್ತು ಸ್ಥಾನಮಾನವನ್ನು ಕುಗ್ಗಿಸಬಹುದು ಎಂಬ ಅಭಿಪ್ರಾಯ ರಾಜ್ಯಪಾಲರಿಗೆ ಬಂದರೆ ಅವರು ಮಸೂದೆಗೆ ಅಂಕಿತ ಹಾಕದೆ ರಾಷ್ಟ್ರಪತಿ ಅವರ ಪರಿಶೀಲನೆಗಾಗಿ ಕಳುಹಿಸಬೇಕು.

ಜಾರಿಯಾಗದ ವರದಿಗಳು

ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂದರೆ, ಸಕ್ರಿಯ ರಾಜಕಾರಣದಿಂದ ದೂರ ಇರುವವರನ್ನು ರಾಜ್ಯಪಾಲರಾಗಿ ನೇಮಿಸಬೇಕು ಎನ್ನುವುದು ಸಂವಿಧಾನ ತಜ್ಞರ ಸಲಹೆ. ಈ ದಿಸೆಯಲ್ಲಿ ರಾಜ್ಯಪಾಲರ ನೇಮಕಾತಿ ಮತ್ತು ಅವರ ಕಾರ್ಯನಿರ್ವಹಣೆಯ ಚೌಕಟ್ಟಿನ ಸಂಬಂಧ ಸರ್ಕಾರಿಯಾ ಆಯೋಗ, ಎಂ.ಎನ್.ವೆಂಕಟಾಚಲಯ್ಯ ಆಯೋಗ ಹಲವು ಶಿಫಾರಸು ಮಾಡಿವೆ. ಆದರೆ, ಅವುಗಳ ಮುಖ್ಯ ಶಿಫಾರಸುಗಳು ಜಾರಿಗೆ ಬಂದಿಲ್ಲ.    

ಒಕ್ಕೂಟ ವ್ಯವಸ್ಥೆಯು (ಫೆಡರಲಿಸಂ) ದೇಶದ ಸಂವಿಧಾನದ ಮೂಲ ಲಕ್ಷಣವಾಗಿದೆ. ಇದರ ಮುಖ್ಯ ಪಾತ್ರ ವಹಿಸಬೇಕಾದ ರಾಜ್ಯಪಾಲರು, ಸಂವಿಧಾನದ 163ನೇ ವಿಧಿಯ ಪ್ರಕಾರ, ಸಚಿವ ಸಂಪುಟದ ಸಲಹೆಯ ಮೇರೆಗೆ ಮಾತ್ರ ಕೆಲಸ ಮಾಡಬೇಕು. ಆದರೆ, ಸ್ವಂತ ವಿವೇಚನಾಧಿಕಾರ ಬಳಸುವುದು, ರಾಜಕೀಯ ಪಕ್ಷವೊಂದರ ವಕ್ತಾರರಾಗಿ ಕೆಲಸ ಮಾಡುತ್ತಿರುವು‌ದರಿಂದ ಸಮಸ್ಯೆ, ಸಂಘರ್ಷ ಸೃಷ್ಟಿಯಾಗಿದೆ ಎಂದು ವಿಶ್ಲೇಷಿಸಲಾಗಿದೆ.

ತೀರ್ಪಿಗೇಕೆ ಮಹತ್ವ?

‘ಈ ತೀರ್ಪು ಐತಿಹಾಸಿಕ. ಇದು ಎಲ್ಲ ರಾಜ್ಯ ಸರ್ಕಾರಗಳಿಗೆ ಸಿಕ್ಕ ಗೆಲುವು’

– ಮಂಗಳವಾರ ಸುಪ್ರೀಂ ಕೋರ್ಟ್‌ನ ತೀರ್ಪು ಹೊರಬಿದ್ದ ತಕ್ಷಣ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ನೀಡಿದ ಪ್ರತಿಕ್ರಿಯೆ ಇದು. 

ಕರ್ನಾಟಕದ ಸಿದ್ದರಾಮಯ್ಯ, ಕೇರಳದ ಪಿಣರಾಯಿ ವಿಜಯನ್‌ ಸೇರಿದಂತೆ ಬಿಜೆಪಿಯೇತರ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ‘ಸುಪ್ರೀಂ’ನ ತೀರ್ಪನ್ನು ಸ್ವಾಗತಿಸಿದ್ದಾರೆ. ಈ ತೀರ್ಪಿನ ಆಧಾರದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.  

ಕಾನೂನು ತಜ್ಞರು ಕೂಡ ಈ ತೀರ್ಪನ್ನು ಸ್ವಾಗತಿಸಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಕಾನೂನುಗಳನ್ನು ರೂಪಿಸುವ ರಾಜ್ಯಗಳ/ವಿಧಾನ ಮಂಡಲಗಳ ಹಕ್ಕುಗಳನ್ನು ಈ ತೀರ್ಪು ಒತ್ತಿ ಹೇಳಿದೆ. ಕೇಂದ್ರ ಸರ್ಕಾರವು ರಾಜ್ಯಪಾಲರ ಮೂಲಕ ವಿವಿಧ ರಾಜ್ಯಗಳ ಆಡಳಿತದಲ್ಲಿ ಮೂಗು ತೂರಿಸುವ ಪ್ರವೃತ್ತಿಗೂ ಇದು ಕಡಿವಾಣ ಹಾಕಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.  ಸುಪ್ರೀಂ ಕೋರ್ಟ್‌ನ ನಿರ್ಧಾರದಿಂದ ತಮಿಳುನಾಡು ಸರ್ಕಾರ ಸೇರಿದಂತೆ ಮಸೂದೆಗಳ ವಿಚಾರದಲ್ಲಿ ರಾಜ್ಯಪಾಲರೊಂದಿಗೆ ಸಂಘರ್ಷ ನಡೆಸುತ್ತಿರುವ ಇತರ ರಾಜ್ಯಗಳಿಗೂ ಅನುಕೂಲವಾಗಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. 

ಸುಪ್ರೀಂ ಕೋರ್ಟ್‌ನ ತೀರ್ಪು ರಾಜ್ಯಪಾಲರ ಅಧಿಕಾರಗಳ ವಿಚಾರದ ಕುರಿತ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಈ ಹಿಂದೆಯೂ ದೇಶದ ಅತ್ಯುನ್ನತ ನ್ಯಾಯಾಲಯವು ವಿವಿಧ ಪ್ರಕರಣಗಳಲ್ಲಿ ರಾಜ್ಯಪಾಲರ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದಂತೆ ತೀರ್ಪುಗಳನ್ನು ನೀಡಿತ್ತು.  

  • 1974ರ ಶಮ್‌ಶೇರ್‌ ಸಿಂಗ್‌ ಮತ್ತು ಪಂಜಾಬ್‌ ನಡುವಿನ ಪ್ರಕರಣದಲ್ಲಿ (ಇಬ್ಬರನ್ನು ನ್ಯಾಯಾಂಗ ಇಲಾಖೆಯಿಂದ ಕಾರಣ ನೀಡದೆ ವಜಾ ಮಾಡಿದ್ದ ಪ್ರಕರಣ) ರಾಜ್ಯಪಾಲರ ಅಧಿಕಾರದ ಬಗ್ಗೆ ವಿವರಣೆ ನೀಡಿದ್ದ ಸುಪ್ರೀಂ ಕೋರ್ಟ್‌, ‘ರಾಜ್ಯಪಾಲರು ರಾಜ್ಯದ ಮಂತ್ರಿ ಪರಿಷತ್ತಿನ ಸಲಹೆಗೆ ಅನುಗುಣವಾಗಿ ನಡೆದುಕೊಳ್ಳಬೇಕಾಗುತ್ತದೆ. ಅವರು ಅತ್ಯಂತ ಅಪರೂ‍ಪದ ಸಂದರ್ಭಗಳಲ್ಲಿ ಮಾತ್ರ ತಮ್ಮ ವಿವೇಚನಾಧಿಕಾರವನ್ನು ಬಳಸಬಹುದು’ ಎಂದು ಹೇಳಿತ್ತು

  •  2006ರ ರಾಮೇಶ್ವರ ಪ್ರಸಾದ್‌ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ (ಬಿಹಾರ ವಿಧಾನಸಭೆ ವಿಸರ್ಜನೆ ಮಾಡಿದ ಪ್ರಕರಣ) ರಾಜ್ಯಪಾಲರ ವೈಯಕ್ತಿಕ ಅಭಿಪ್ರಾಯವು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಆಧಾರವಾಗಲಾರದು ಎಂದು ಸುಪ್ರೀಂ ಕೋರ್ಟ್‌ ಪ್ರತಿಪಾದಿಸಿತ್ತು

  •  2006ರಲ್ಲಿ ಎಪುರು ಸುಧಾಕರ್‌ ಮತ್ತು ಆಂಧ್ರಪ್ರದೇಶ ಸರ್ಕಾರದ ನಡುವಿನ ವ್ಯಾಜ್ಯದಲ್ಲಿ (ಕ್ಷಮಾದಾನ ಅರ್ಜಿಗೆ ಸಂಬಂಧಿಸಿದ ಪ್ರಕರಣ) ಸಂವಿಧಾನದ 161ನೇ ವಿಧಿಯು ರಾಜ್ಯಪಾಲರಿಗೆ ನೀಡಿರುವ ಕ್ಷಮಾದಾನ ನೀಡುವ ಅಧಿಕಾರ ಕೂಡ ನ್ಯಾಯಾಂಗದ ಪರಿಶೀಲನೆಗೆ ಒಳಪಟ್ಟಿದೆ ಎಂದು ಹೇಳಿತ್ತು

  •  2016ರಲ್ಲಿ ಅರುಣಾಚಲ ಪ್ರದೇಶ ವಿಧಾನಸಭೆಗೆ ಸಂಬಂಧಿಸಿದ ಪ್ರಕರಣದಲ್ಲೂ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು, ವಿಧಾನಸಭೆ ಅಧಿವೇಶನ ಕರೆಯುವುದು, ವಿಸರ್ಜಿಸುವುದು ಮತ್ತು ಅಧಿವೇಶನವನ್ನು ನಿಗದಿಗೂ ಮೊದಲೇ ಕರೆಯುವುದಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ಇರುವ ಅಧಿಕಾರವು ಕಾನೂನಿಗೆ ಪರಿಶೀಲನೆಗೆ ಒಳಪಡುತ್ತದೆ ಎಂದು ಒಮ್ಮತದ ತೀರ್ಪು ನೀಡಿತ್ತು

ಆಧಾರ: ಪಿಟಿಐ, ಸುಪ್ರೀಂ ಕೋರ್ಟ್‌ ತೀರ್ಪುಗಳು, ಮಾಧ್ಯಮ ವರದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.