ಭಾರತ ಮತ್ತು ಪಾಕಿಸ್ತಾನ ಹಾಗೂ ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದ ನಡುವಿನ ಸಂಬಂಧ ಹಳಸಿರುವ ಸಂದರ್ಭದಲ್ಲಿ ತಾಲಿಬಾನ್ ಸಚಿವರು ಭಾರತಕ್ಕೆ ಭೇಟಿ ನೀಡಿರುವುದು ಭೌಗೋಳಿಕ ರಾಜಕೀಯದ ದೃಷ್ಟಿಯಿಂದ ಮಹತ್ವ ಪಡೆದಿದೆ. ಭಾರತವು ಅಫ್ಗನ್‌ನಲ್ಲಿರುವ ತಾಲಿಬಾನ್ ಆಡಳಿತವನ್ನು ಇನ್ನೂ ಅಂಗೀಕರಿಸಿಲ್ಲ. ಆದರೆ, ಅನೌಪಚಾರಿಕ ಸಂಬಂಧ ಹೊಂದಿದೆ. ಈಗ ಎರಡೂ ದೇಶಗಳು ತಮ್ಮ ರಾಜತಾಂತ್ರಿಕ ಸಂಬಂಧವನ್ನು ವೃದ್ಧಿಸಲು ಮುಂದಾಗಿವೆ. ಇದು ನೆರೆಯ ಪಾಕಿಸ್ತಾನದ ಕಣ್ಣು ಕೆಂಪಾಗಿಸಿದೆ.
ಕೆಲವೇ ವರ್ಷಗಳ ಹಿಂದೆ ಊಹಿಸಿಕೊಳ್ಳಲೂ ಅಸಾಧ್ಯವಾಗಿದ್ದ ವಿದ್ಯಮಾನ ನಡೆದಿದೆ. ಅಫ್ಗಾನಿಸ್ತಾನದಲ್ಲಿ ಅಧಿಕಾರ ನಡೆಸುತ್ತಿರುವ ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಪ್ರವಾಸಕ್ಕಾಗಿ ಭಾರತಕ್ಕೆ ಬಂದಿದ್ದಾರೆ. ವಾರದವರೆಗೆ ಅವರು ಇಲ್ಲಿ ಇರಲಿದ್ದಾರೆ. ಭಾರತದೊಂದಿಗೆ ರಾಜತಾಂತ್ರಿಕ, ವ್ಯಾಪಾರ ಮತ್ತು ಆರ್ಥಿಕ ಒಪ್ಪಂದಗಳ ಬಗ್ಗೆ ಅವರು ಕೇಂದ್ರ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆಗಳನ್ನು ನಡೆಸುತ್ತಿದ್ದಾರೆ.
ಇದು ವಿಶೇಷ ವಿದ್ಯಮಾನ ಎನ್ನಲು ಕಾರಣಗಳಿವೆ; 1994ರಲ್ಲಿ ತಾಲಿಬಾನ್ ಹುಟ್ಟು ಪಡೆದಾಗ ಅದು ಪಾಕಿಸ್ತಾನಿ ಬೆಂಬಲಿತ ಮತ್ತೊಂದು ಭಯೋತ್ಪಾದಕ ಗುಂಪು ಎಂದೇ ಭಾರತ ಭಾವಿಸಿತ್ತು. ಭಾರತವು ಇರಾನ್ ಮತ್ತು ರಷ್ಯಾದೊಂದಿಗೆ ಅಘ್ಗಾನಿಸ್ತಾನದಲ್ಲಿ ತಾಲಿಬಾನ್ ವಿರೋಧಿಗಳನ್ನು ಬೆಂಬಲಿಸುತ್ತಿತ್ತು. 2001ರಲ್ಲಿ ಅಮೆರಿಕವು ಅಘ್ಗನ್ ಮೇಲೆ ಹಿಡಿತ ಸಾಧಿಸಿ, ಅಲ್ಲಿ ಅಮೆರಿಕ ಬೆಂಬಲಿತ ಸರ್ಕಾರ ರಚನೆಯಾದ ಮೇಲೆ ಭಾರತ ನಿರಂತರ 20 ವರ್ಷ ಆ ಸರ್ಕಾರವನ್ನು ಬೆಂಬಲಿಸಿತು. 1999ರಲ್ಲಿ ಭಾರತದ ವಿಮಾನವನ್ನು ಅಪಹರಿಸಿದ್ದವರಿಗೆ ತಾಲಿಬಾನ್ ಆಶ್ರಯ ನೀಡಿದೆ ಎಂದು ಭಾರತ ಭಾವಿಸಿತ್ತು. ಜತೆಗೆ, ತನ್ನ ನಾಲ್ವರು ಅಧಿಕಾರಿಗಳ ಸಾವಿಗೆ ಕಾರಣವಾಗಿದ್ದ 2008ರ ಕಾಬೂಲ್ ಉಗ್ರ ದಾಳಿಯ ಬಗ್ಗೆಯೂ ಭಾರತ ಅಸಮಾಧಾನ ವ್ಯಕ್ತಪಡಿಸಿತ್ತು. ಹೀಗೆ ವಿವಿಧ ಕಾರಣಗಳಿಂದ ತಾಲಿಬಾನ್ ಮತ್ತು ಭಾರತದ ನಡುವಿನ ಸಂಬಂಧ ಹಳಸಿತ್ತು.
2021ರಲ್ಲಿ ತಾಲಿಬಾನ್ ಸಂಘಟನೆಯು ಅಘ್ಗಾನಿಸ್ತಾನದ ಸರ್ಕಾರವನ್ನು ಪದಚ್ಯುತಗೊಳಸಿ ಅಧಿಕಾರವನ್ನು ಕೈವಶ ಮಾಡಿಕೊಂಡ ನಂತರ ಅಲ್ಲಿನ ಭಾರತದ ರಾಯಭಾರ ಕಚೇರಿಯನ್ನು ಮುಚ್ಚಲಾಗಿತ್ತು. ವೀಸಾ ನೀಡುವುದನ್ನು ಸ್ಥಗಿತಗೊಳಿಸಿತ್ತು. ಅನಿವಾರ್ಯ ಕಾರಣಗಳಿಗಾಗಿ ಕೆಲವೇ ಕೆಲವು ಸಿಬ್ಬಂದಿಯನ್ನು ಮಾತ್ರ ಅಲ್ಲಿ ನಿಯೋಜಿಸಲಾಗಿತ್ತು. ಮೇಲಾಗಿ, ತಾಲಿಬಾನ್ ಸರ್ಕಾರವನ್ನು ಇದುವರೆಗೂ ಭಾರತ ಅಂಗೀಕರಿಸಿಯೇ ಇಲ್ಲ. ಇಂಥ ಹಿನ್ನೆಲೆ ಇದ್ದರೂ ಮುತ್ತಾಕಿ ಅವರು ಭಾರತಕ್ಕೆ ಭೇಟಿ ನೀಡಿದ್ದಾರೆ. ಈ ಭೇಟಿ ಎರಡೂ ದೇಶಗಳ ಮಟ್ಟದಲ್ಲಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹತ್ವ ಪಡೆದಿದೆ. ತಾಲಿಬಾನ್ ಸಚಿವರೊಬ್ಬರು ಭಾರತಕ್ಕೆ ಭೇಟಿ ನೀಡುತ್ತಿರುವುದೇ ಇದೇ ಮೊದಲು.
ಅಘ್ಗಾನಿಸ್ತಾನದ ತಾಲಿಬಾನ್ ಸರ್ಕಾರವನ್ನು ಸಂಪೂರ್ಣವಾಗಿ ಅಂಗೀಕರಿಸಿರುವುದು ರಷ್ಯಾ ಒಂದೇ. ಅಮೆರಿಕವು ಮುತ್ತಾಕಿ ಅವರ ಪ್ರಯಾಣದ ಮೇಲೆ ನಿರ್ಬಂಧ ವಿಧಿಸಿರುವುದರಿಂದ ರಷ್ಯಾ ಮೂಲಕವೇ ಅವರು ಭಾರತಕ್ಕೆ ಬಂದಿದ್ದಾರೆ. ಮುತ್ತಾಕಿ ಅವರ ಭೇಟಿಯಿಂದ ದೇಶದ ಅಭಿವೃದ್ಧಿ, ಪ್ರಾದೇಶಿಕ ಸ್ಥಿರತೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ. ಇನ್ನೊಂದೆಡೆ, ಭಾರತವನ್ನು ತನ್ನ ಆಪ್ತ ಸ್ನೇಹಿತ ಎಂದು ಬಣ್ಣಿಸಿರುವ ಮುತ್ತಾಕಿ, ಎರಡೂ ದೇಶಗಳ ಸಂಬಂಧ ವೃದ್ಧಿಗೆ ಈ ಭೇಟಿ ನೆರವಾಗಲಿದೆ ಎಂದಿದ್ದಾರೆ.
ಶತ್ರುವಿನ ಶತ್ರು ಮಿತ್ರ: ವಾಸ್ತವವಾಗಿ, ಭಾರತವು ತಾಲಿಬಾನ್‌ನೊಂದಿಗೆ ಸ್ನೇಹಹಸ್ತ ಚಾಚಲು ಮುಖ್ಯ ಕಾರಣ, ಪಾಕಿಸ್ತಾನ. ಪಾಕಿಸ್ತಾನವು ತಾಲಿಬಾನ್‌ನ ಮೊದಲ ಆಡಳಿತ ಅವಧಿಯಲ್ಲಿ (1996–2001) ಅದರೊಂದಿಗೆ ಉತ್ತಮ ಸಂಬಂಧ ಹೊಂದಿತ್ತು. ಆದರೆ, ಎರಡನೇ ಅವಧಿಯಲ್ಲಿ ಅವರ ಸಂಬಂಧದಲ್ಲಿ ಬಿರುಕು ಮೂಡಿ, ಅದು ಹಿರಿದಾಗುತ್ತಲೇ ಸಾಗಿತು. ಪಾಕಿಸ್ತಾನದ ರಕ್ಷಣಾ ಸಚಿವರು ‘ಅಘ್ಗಾನಿಸ್ತಾನ ನಮ್ಮ ಶತ್ರು ದೇಶ’ ಎಂದು ಕರೆಯುವ ಮಟ್ಟಿಗೆ ಸಂಬಂಧ ಹಳಸಿತು. ಪಾಕಿಸ್ತಾನದೊಂದಿಗೆ ದೂರವಾದಷ್ಟೂ ತಾಲಿಬಾನ್, ಭಾರತಕ್ಕೆ ಹತ್ತಿರವಾಗತೊಡಗಿತು.
ಹಾಗೆಂದು ತಾಲಿಬಾನ್ ಸಚಿವರ ಭಾರತ ಭೇಟಿ ತೀರಾ ಆಕಸ್ಮಿಕವೇನಲ್ಲ. ಭಾರತವು ಹಂತಹಂತವಾಗಿ ತಾಲಿಬಾನ್ ಜತೆಗಿನ ಸಂಬಂಧವನ್ನು ಉತ್ತಮಪಡಿಸುತ್ತಿದೆ. 2021ರಿಂದ, ತಾಲಿಬಾನ್ ಸರ್ಕಾರವನ್ನು ಅಂಗೀಕರಿಸದಿದ್ದರೂ, ಮಾನವೀಯತೆಯ ಆಧಾರದಲ್ಲಿ ಆರಂಭದಿಂದಲೂ ನೆರವು ನೀಡುತ್ತಿದೆ. 2021ರಲ್ಲಿ ಅಘ್ಗನ್‌ನೊಂದಿಗೆ ಎಲ್ಲ ಸಂಪರ್ಕ ಕಡಿದುಕೊಂಡಿದ್ದ ಭಾರತವು 2022ರ ಜೂನ್‌ನಲ್ಲಿ ಅದರೊಂದಿಗೆ ಸಣ್ಣ ಮಟ್ಟದ ಸಂವಹನ ಆರಂಭಿಸಿತ್ತು. ನಂತರ ವೀಸಾ ನೀಡಲು ಆರಂಭಿಸಿತು. ಕಳೆದ ನವೆಂಬರ್‌ನಲ್ಲಿ ದೆಹಲಿಯಲ್ಲಿ ರಾಜತಾಂತ್ರಿಕ ಅಧಿಕಾರಿಯನ್ನು ನೇಮಿಸಿದ ತಾಲಿಬಾನ್, ಮೊದಲು ಮುಂಬೈ, ನಂತರ ಹೈದರಾಬಾದ್‌ನಲ್ಲಿ ಕಾನ್ಸಲ್ ಕಚೇರಿಗಳನ್ನೂ ಆರಂಭಿಸಿತು. ಇದರ ಜತೆಗೆ, ಮೂರು ವರ್ಷಗಳಿಂದಲೂ ಎರಡು ದೇಶಗಳ ಪ್ರತಿನಿಧಿಗಳು ಹೊರದೇಶಗಳಲ್ಲಿ ಹಲವು ಬಾರಿ ಭೇಟಿ ಮಾಡಿ ಸಂಬಂಧ ಸುಧಾರಣೆಯ ಬಗ್ಗೆ ಮಾತುಕತೆ ನಡೆಸಿದ್ದರು. ಈಗ ತಾಲಿಬಾನ್ ಸರ್ಕಾರದ ಸಚಿವರೇ ಭಾರತ ಭೇಟಿಗೆ ಆಗಮಿಸಿದ್ದಾರೆ.
ಸಂದೇಹದಿಂದಲೇ ಕಂಡಿದ್ದ ಭಾರತ
ಭಾರತ ಮತ್ತು ತಾಲಿಬಾನ್ ಸಂಬಂಧ ಯಾವತ್ತೂ ಉತ್ತಮವಾಗಿರಲಿಲ್ಲ. 1996–2001ರ ನಡುವೆ ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವಿದ್ದಾಗ ಭಾರತ ಅದರೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿರಲಿಲ್ಲ. ಅಮೆರಿಕ ನೇತೃತ್ವದ ಪಡೆಗಳು 2001ರಲ್ಲಿ ತಾಲಿಬಾನ್‌ನಿಂದ ಅಧಿಕಾರ ಕಸಿದುಕೊಂಡು ಪ್ರಜಾಸತ್ತಾತ್ಮಕವಾಗಿ ಹೊಸ ಸರ್ಕಾರ ರಚನೆಯಾದಾಗ, ಭಾರತ ಹೊಸ ಸರ್ಕಾರವನ್ನು ಬೆಂಬಲಿಸಿತ್ತು. ಅಲ್ಲದೇ 2001ರ ಬಳಿಕ 300 ಕೋಟಿ ಡಾಲರ್‌ನಷ್ಟು (ಈಗಿನ ಮೌಲ್ಯದ ಪ್ರಕಾರ ಅಂದಾಜು ₹26,600 ಕೋಟಿ) ವ್ಯಯಿಸಿ ಹೊಸ ಅಫ್ಗಾನಿಸ್ತಾನ ನಿರ್ಮಾಣಕ್ಕೆ ನೆರವಾಗಿತ್ತು. 2021ರಲ್ಲಿ ಮತ್ತೆ ತಾಲಿಬಾನ್ ಅಧಿಕಾರಕ್ಕೆ ಬಂದಾಗಲೂ ಅದರೊಂದಿಗಿನ ರಾಜತಾಂತ್ರಿಕ ಸಂಬಂಧ ಕಡಿದುಕೊಂಡಿತ್ತು. ಮಾನವೀಯ ನೆರವಿನಂತಹ ಸಾಮಾಜಿಕ ಕಾರ್ಯಗಳಿಗಷ್ಟೇ ಒತ್ತು ನೀಡಿತ್ತು.
ತಾಲಿಬಾನ್ ಸಂಘಟನೆಯು ಪಾಕಿಸ್ತಾನದೊಂದಿಗೆ ಉತ್ತಮ ಒಡನಾಟ ಹೊಂದಿದ್ದು ಭಾರತವು ಅದರಿಂದ ಅಂತರ ಕಾಯ್ದುಕೊಳ್ಳಲು ಪ್ರಮುಖ ಕಾರಣ. ತಾಲಿಬಾನ್, ಪಾಕಿಸ್ತಾನದ ಇನ್ನೊಂದು ಮುಖ ಎಂಬ ಸಂದೇಹ ಭಾರತಕ್ಕೆ ಇತ್ತು. ತನ್ನ ಮೇಲೆ ಹಗೆ ಸಾಧಿಸಲು ಪಾಕಿಸ್ತಾನವು ತಾಲಿಬಾನ್ ಸಂಘಟನೆಯನ್ನು ಬಳಸಬಹುದು ಎಂಬ ಅನುಮಾನವೂ ಅದಕ್ಕಿತ್ತು.
ಬದಲಾದ ನೀತಿ: ಈಗ ಚಿತ್ರಣ ಬದಲಾಗಿದೆ. ಅದರೊಂದಿಗೆ ಅಫ್ಗಾನಿಸ್ತಾನ ಕುರಿತಂತೆ ಭಾರತದ ನೀತಿಯೂ ಬದಲಾದಂತೆ ಕಾಣುತ್ತಿದೆ.
ತಾಲಿಬಾನ್ –ಪಾಕಿಸ್ತಾನದ ಸಂಬಂಧ ಹಳಸಿದೆ. ಐಎಸ್, ಅಲ್‌ಖೈದಾದಂತಹ ಉಗ್ರ ಸಂಘಟನೆಗಳು ಭಾರತದ ಮೇಲೆ ದಾಳಿ ನಡೆಸಲು ಅಫ್ಗಾನಿಸ್ತಾನದ ನೆಲವನ್ನು ಬಳಸಬಹುದು ಎಂಬ ಆತಂಕ ಭಾರತಕ್ಕೆ ಇದೆ. ಆದರೆ, ಬೇರೆ ದೇಶಗಳ ಮೇಲೆ ದಾಳಿ ನಡೆಸಲು ತನ್ನ ನೆಲವನ್ನು ಬಳಸಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ತಾಲಿಬಾನ್ ಆಡಳಿತ ಸ್ಪಷ್ಟವಾಗಿ ಹೇಳಿದೆ. ಅಲ್ಲದೇ ಅದು ಸ್ನೇಹ ಹಸ್ತವನ್ನೂ ಚಾಚಿದೆ. ಚೀನಾ ಮತ್ತು ಪಾಕಿಸ್ತಾನ ಪ್ರಭಾವವನ್ನು ಕಡಿಮೆಗೊಳಿಸಲು ಇರಾನ್ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳೊಂದಿಗೆ ಸಂಪರ್ಕ ಸಾಧಿಸಲು ಅಫ್ಗಾನಿಸ್ತಾನ ಮುಖ್ಯ. ಹೀಗಾಗಿ, ತಾಲಿಬಾನ್ ಆಡಳಿತವನ್ನು ಅಧಿಕೃತವಾಗಿ ಅಂಗೀಕರಿಸದಿದ್ದರೂ ಅದರೊಂದಿಗಿನ ರಾಜತಾಂತ್ರಿಕ ಬಾಂಧವ್ಯವನ್ನು ಸುಧಾರಿಸುವ ದಿಸೆಯಲ್ಲಿ ಭಾರತ ಎಚ್ಚರಿಕೆ ಇಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಂದು ಪರಮಾಪ್ತ, ಇಂದು ಬದ್ಧವೈರಿ
ಪಾಕಿಸ್ತಾನ ಮತ್ತು ತಾಲಿಬಾನ್ ಹಿಡಿತದಲ್ಲಿದ್ದ ಅಫ್ಗಾನಿಸ್ತಾನ ಒಂದು ಕಾಲದಲ್ಲಿ ಆಪ್ತ ರಾಷ್ಟ್ರಗಳು. ಆದರೆ, ಈಗ ಇವೆರಡೂ ವೈರಿ ದೇಶಗಳಾಗಿ ಮಾರ್ಪಟ್ಟಿವೆ. ತಾಲಿಬಾನ್ ಈಗ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದುತ್ತಿರುವುದು ಪಾಕಿಸ್ತಾನದ ಕೆಂಗಣ್ಣಿಗೆ ಗುರಿಯಾಗಿದೆ. ಇದೇ ಹೊತ್ತಿನಲ್ಲಿ, ಎರಡೂ ರಾಷ್ಟ್ರಗಳ ನಡುವೆ ಸೇನಾ ಸಂಘರ್ಷವೂ ಆರಂಭವಾಗಿದೆ. ಹಾಗಾಗಿ, ಅಫ್ಗನ್ ಜೊತೆಗಿನ ಅದರ ಸಂಬಂಧ ಸರಿಪಡಿಸಲಾಗದಷ್ಟು ಹದಗೆಟ್ಟಿದೆ.
1996-2001ರ ನಡುವೆ ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವಿದ್ದಾಗ ಪಾಕಿಸ್ತಾನವು ಅದರೊಂದಿಗೆ ಉತ್ತಮ ಬಾಂಧವ್ಯ ಹೊಂದಿತ್ತು. 2001ರಲ್ಲಿ ಅದರ ಆಡಳಿತ ಪತನಗೊಂಡ ನಂತರವೂ ಪಾಕಿಸ್ತಾನ ತಾಲಿಬಾನ್‌ನೊಂದಿಗೆ ಉತ್ತಮ ಸಂಬಂಧವನ್ನು ಮುಂದುವರಿಸಿತ್ತು. 2021ರಲ್ಲಿ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದ ನಂತರ ಆರಂಭದಲ್ಲಿ ಉತ್ತಮ ಸಂಬಂಧ ಇದ್ದರೂ ಇತ್ತೀಚಿನ ವರ್ಷಗಳಲ್ಲಿ ಅದು ಹಳಸಿದೆ.
ತಾಲಿಬಾನ್ ಆಡಳಿತವನ್ನು ಸದಾ ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿ ಪಾಕಿಸ್ತಾನ ಇತ್ತು. ಆದರೆ, ಎರಡನೇ ಬಾರಿ ಅಧಿಕಾರಕ್ಕೆ ಏರಿದ ನಂತರ ತಾಲಿಬಾನ್, ಭಾರತ ಸೇರಿದಂತೆ ಇತರ ದೇಶಗಳೊಂದಿಗೆ ಉತ್ತಮ ರಾಜತಾಂತ್ರಿಕ ಬಾಂಧವ್ಯ ಹೊಂದಲು ಯತ್ನಿಸುತ್ತಿದೆ. ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುತ್ತಿದೆ. ನೆರೆ ರಾಷ್ಟ್ರದ ಒತ್ತಡಕ್ಕೆ ಮಣಿಯುತ್ತಿಲ್ಲ. ಅಲ್ಲದೇ ಅದರ ಕೈಗೊಂಬೆಯಾಗಿ ಇರಲು ಒಪ್ಪುತ್ತಿಲ್ಲ. ಇದು ಪಾಕಿಸ್ತಾನದ ಅಸಮಾಧಾನಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ಜೊತೆಗೆ, ತೆಹ್ರಿಕ್–ಇ–ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಭಯೋತ್ಪಾದಕ ಸಂಘಟನೆಯು ಪಾಕಿಸ್ತಾನದ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ. ಈ ಸಂಘಟನೆಗೆ ತಾಲಿಬಾನ್ ಬೆಂಬಲ ನೀಡುತ್ತಿದ್ದು, ಅದರ ಮುಖಂಡರಿಗೆ ಅಫ್ಘಾನಿಸ್ತಾನದಲ್ಲಿ ಆಶ್ರಯ ನೀಡಿದೆ. ತನ್ನ ನೆಲದಲ್ಲಿ ದುಷ್ಕೃತ್ಯಗಳನ್ನು ಎಸಗಲು ನೆರವು ನೀಡುತ್ತಿದೆ ಎಂಬುದು ಪಾಕಿಸ್ತಾನದ ಆರೋಪ. ಈ ಸಂಘಟನೆಯು ಒಂದು ವರ್ಷದಲ್ಲಿ ಪಾಕ್ ನೆಲದಲ್ಲಿ ಕನಿಷ್ಠ 600 ದಾಳಿಗಳನ್ನು ಸಂಘಟಿಸಿದೆ ಎಂದು ಅಂದಾಜಿಸಲಾಗಿದೆ. ದಾಳಿಯಲ್ಲಿ ಸೈನಿಕರು ಹಾಗೂ ನಾಗರಿಕರು ಭಾರಿ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ.
ಈಗ ತಾಲಿಬಾನ್ ಆಡಳಿತವು ಭಾರತದೊಂದಿಗಿನ ಸಂಬಂಧವನ್ನು ಸುಧಾರಿಸುವತ್ತ ಹೆಜ್ಜೆ ಹಾಕಿರುವುದು ಅದನ್ನು ಇನ್ನಷ್ಟು ಕೆರಳಿಸಿದೆ. ಶುಕ್ರವಾರ ಅಲ್ಲಿನ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಮತ್ತು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದ ನಂತರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಮತ್ತು ಭಯೋತ್ಪಾದನೆ ಪಾಕ್‌ನ ಆಂತರಿಕ ವಿಚಾರ ಎಂದು ಹೇಳಿರುವುದಕ್ಕೆ ಪಾಕಿಸ್ತಾನವು ತನ್ನಲ್ಲಿರುವ ಅಫ್ಗನ್ ರಾಜತಾಂತ್ರಿಕ ಅಧಿಕಾರಿಯನ್ನು ಕರೆಸಿಕೊಂಡು ಪ್ರತಿಭಟನೆ ದಾಖಲಿಸಿದೆ. ಈ ಭೇಟಿಯ ಹೊತ್ತಿನಲ್ಲೇ ಕಾಬೂಲ್ ಮೇಲೆ ವಾಯುದಾಳಿ ನಡೆಸಿದೆ. ಗಡಿಯಲ್ಲಿ ಎರಡೂ ಸೇನೆಗಳ ನಡುವೆ ಭಾರಿ ಕಾಳಗ ಆರಂಭವಾಗಿದೆ.
ತಾಲಿಬಾನ್ ಜತೆ ಸ್ನೇಹಕ್ಕೆ ವಿರೋಧ
ಭಾರತವು ಅಘ್ಗಾನಿಸ್ತಾನದ ತಾಲಿಬಾನ್ ಸರ್ಕಾರದ ಜತೆಗೆ ಸಂಬಂಧವೃದ್ಧಿಯ ಪ್ರಯತ್ನಗಳನ್ನು ನಡೆಸುತ್ತಿರುವುದಕ್ಕೆ ಕೆಲವರು ವಿರೋಧ ವ್ಯಕ್ತವಾಗಿದೆ. ಹಿಂದೂ ರಾಷ್ಟ್ರೀಯವಾದಿ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರವು ತಾಲಿಬಾನ್‌ನಂಥ ಮತೀಯವಾದಿ ಮುಸ್ಲಿಂ ಸರ್ಕಾರದೊಂದಿಗೆ ಕೈಜೋಡಿಸುತ್ತಿರುವುದರ ಬಗ್ಗೆ ಕಳವಳವೂ ವ್ಯಕ್ತವಾಗಿದೆ. ದೆಹಲಿಯ ಅಘ್ಗಾನಿಸ್ತಾನದ ರಾಯಭಾರ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಗೆ ಪತ್ರಕರ್ತೆಯರನ್ನು ನಿರ್ಬಂಧಿಸಲಾಗಿತ್ತು. ಅದರ ಬಗ್ಗೆಯೂ ಕೇಂದ್ರ ಸರ್ಕಾರ ಟೀಕೆಗೆ ಗುರಿಯಾಗಿದೆ.
ಆಧಾರ: ಪಿಟಿಐ, ಬಿಬಿಸಿ, ದಿ ನ್ಯೂಯಾರ್ಕ್ ಟೈಮ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.