ADVERTISEMENT

ಆಳ –ಅಗಲ: ಟಾಟಾ ‘ಸಾಮ್ರಾಜ್ಯ’ದಲ್ಲಿ ಬಿರುಕು?

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 0:12 IST
Last Updated 9 ಅಕ್ಟೋಬರ್ 2025, 0:12 IST
ಟಾಟಾ
ಟಾಟಾ   

ರತನ್ ಟಾಟಾ ಅವರು ಟಾಟಾ ಸಮೂಹದ ಮುಖ್ಯಸ್ಥರಾಗಿದ್ದವರು. ಅವರು ನಿಧನರಾಗಿ ಇಂದಿಗೆ (ಅಕ್ಟೋಬರ್ 9) ಒಂದು ವರ್ಷವಾಗಿದೆ. ಒಂದೇ ವರ್ಷದಲ್ಲಿ ಅವರ ನೆಚ್ಚಿನ ಟಾಟಾ ಟ್ರಸ್ಟ್ಸ್‌ (tata trusts) ಆಡಳಿತ ಮಂಡಳಿಯಲ್ಲಿ ಬಿರುಕು ಮೂಡಿದೆ. ಆಡಳಿತದಲ್ಲಿ ಕಂಡುಬಂದಿರುವ  ಒಳಜಗಳವು 156 ವರ್ಷಗಳ ಇತಿಹಾಸವಿರುವ ಟಾಟಾ ಸಮೂಹವನ್ನು ಅಸ್ಥಿರಗೊಳಿಸುವ ಆತಂಕವನ್ನು ಸೃಷ್ಟಿಸಿದೆ.     

ಟಾಟಾ ಉದ್ದಿಮೆ ಸಮೂಹವು ಉದ್ದಿಮೆಯಾಗಿ ಅಷ್ಟೇ ಅಲ್ಲ, ದಾನಕ್ಕೂ ಹೆಸರುವಾಸಿ. ಆರೋಗ್ಯ ಸೇವೆ, ಶಿಕ್ಷಣ, ಕ್ಯಾನ್ಸರ್‌ ಚಿಕಿತ್ಸೆ, ಕೌಶಲ ಅಭಿವೃದ್ಧಿ, ಮೂಲಸೌಕರ್ಯ ಹೀಗೆ ಅನೇಕ ವಲಯಗಳಿಗೆ ಅಪಾರ ಕೊಡುಗೆ ನೀಡುತ್ತಿದೆ. ದಾನ, ದೇಣಿಗೆಯಂತಹ ಸಮಾಜಮುಖಿ ಕಾರ್ಯಗಳಿಗೆಂದೇ ಟಾಟಾ ಹಲವು ಟ್ರಸ್ಟ್‌ಗಳನ್ನು ಹೊಂದಿದೆ. ಅವೆಲ್ಲವೂ ಸೇರಿ ಟಾಟಾ ಟ್ರಸ್ಟ್ಸ್‌ ಎಂದು ಹೆಸರಾಗಿವೆ. ಬದುಕಿರುವವರೆಗೆ ರತನ್ ಟಾಟಾ ಅವರೇ ಟಾಟಾ ಟ್ರಸ್ಟ್ಸ್‌ನ ಅಧ್ಯಕ್ಷರಾಗಿದ್ದರು. ರತನ್ ಸಾವಿನ ನಂತರ ಅವರ ಮಲ ಸಹೋದರ ನೋಯಲ್ ಟಾಟಾ ಅವರು ಇದರ ನೇತೃತ್ವ ವಹಿಸಿದ್ದಾರೆ.    

ಬೃಹತ್ ಉದ್ಯಮ ಸಮೂಹ: ಟಾಟಾ ಟ್ರಸ್ಟ್ಸ್‌ ದಾನ –ಧರ್ಮ ದೇಣಿಗೆಗೆ ಸೀಮಿತವಾದ ಸಂಸ್ಥೆಗಳಲ್ಲ; ಅನೇಕ ಬೃಹತ್ ಉದ್ಯಮಗಳ ಮಾಲೀಕತ್ವ ಹೊಂದಿರುವ ಟಾಟಾ ಸನ್ಸ್‌ನಲ್ಲಿ ಇವು ಶೇ 66ರಷ್ಟು ಷೇರುಗಳನ್ನು ಹೊಂದಿದ್ದು, ನಿರ್ಣಾಯಕ ಎನಿಸಿವೆ. 100 ದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ‘ಟಾಟಾ ಸನ್ಸ್‌’ನ  ಮೌಲ್ಯ ₹16 ಲಕ್ಷ ಕೋಟಿ ಎನ್ನುವುದು ಒಂದು ಅಂದಾಜು. ಆರ್ಥಿಕತೆಗೆ ಸಂಬಂಧಿಸಿದ ಬಹುತೇಕ ಎಲ್ಲ ವಲಯಗಳಲ್ಲೂ (ಟಾಟಾ ಕನ್ಸಲ್‌ಟೆನ್ಸಿ ಸರ್ವೀಸಸ್‌, ಟಾಟಾ ಸ್ಟೀಲ್, ಟಾಟಾ ಮೋಟರ್ಸ್, ಟಾಟಾ ಪವರ್, ಇಂಡಿಯನ್ ಹೋಟೆಲ್ಸ್ ಕಂಪನಿ, ಟಾಟಾ ಗ್ರಾಹಕ ಉತ್ಪನ್ನಗಳು ಇತ್ಯಾದಿ ಉಪ್ಪಿನಿಂದ ಹಿಡಿದು ಸೆಮಿಕಂಡಕ್ಟರ್‌ವರೆಗೆ) ಉದ್ಯಮಗಳನ್ನು ನಡೆಸುತ್ತಿರುವ 400 ಕಂಪನಿಗಳ ಮೇಲೆ ಅದು ನಿಯಂತ್ರಣ ಹೊಂದಿದೆ. ಹೀಗಾಗಿ ಟಾಟಾ ಟ್ರಸ್ಟ್ಸ್‌ ಮೇಲೆ ಹಿಡಿತ ಸಾಧಿಸುವುದು ಪ್ರತಿಷ್ಠೆಯ ಜತೆಗೆ ಲಕ್ಷಾಂತರ ಕೋಟಿ ರೂಪಾಯಿ ಮೊತ್ತದ ಉದ್ಯಮಗಳನ್ನು ನಿಯಂತ್ರಿಸುವ ವಿಚಾರವೂ ಆಗಿದೆ. 

ADVERTISEMENT

ಪ್ರಸ್ತುತ ಟಾಟಾ ಟ್ರಸ್ಟ್ಸ್‌ ಅಧ್ಯಕ್ಷರಾದ ನೋಯಲ್ ಟಾಟಾ ಮತ್ತು ಟ್ರಸ್ಟಿ ಮೆಹ್ಲಿ ಮಿಸ್ತ್ರಿ ನಡುವೆ ಟ್ರಸ್ಟ್ಸ್‌ ಮೇಲೆ ಹಿಡಿತ ಸಾಧಿಸಲು ಪೈಪೋಟಿ ನಡೆಯುತ್ತಿದೆ ಎನ್ನಲಾಗುತ್ತಿದೆ.  ಮೆಹ್ಲಿ ಮಿಸ್ತ್ರಿ ಅವರು ಶಾಪೂರ್ಜಿ ಪಲ್ಲೋಂಜಿ ಕುಟುಂಬದೊಂದಿಗೆ ನಂಟು ಹೊಂದಿದವರಾಗಿದ್ದು, ಈ ಕುಟುಂಬವು ಟಾಟಾ ಸನ್ಸ್‌ನಲ್ಲಿ ಶೇ 18.37ರಷ್ಟು ಪಾಲು ಹೊಂದಿದೆ. ಹಲವು ತಿಂಗಳಿನಿಂದ ನೋಯಲ್ ಮತ್ತು ಮಿಸ್ತ್ರಿ ನಡುವೆ ಶೀತಲ ಸಮರ ನಡೆಯುತ್ತಿದ್ದು, ಸೆ.11ರಂದು ನಡೆದ ಟ್ರಸ್ಟಿಗಳ ಸಭೆಯಲ್ಲಿ ಅದು ಬಹಿರಂಗಗೊಂಡಿದೆ. ಟ್ರಸ್ಟಿಗಳಲ್ಲಿ ಎರಡು ಗುಂಪುಗಳಾಗಿದ್ದು, ಮಿಸ್ತ್ರಿ ಅವರ ಗುಂಪಿನಲ್ಲಿ ನಾಲ್ಕು ಮಂದಿ ಇದ್ದರೆ, ನೋಯಲ್ ಅವರ ಗುಂಪಿನಲ್ಲಿ ಮೂವರು ಇದ್ದಾರೆ. ನೋಯಲ್ ಅವರ ಗುಂಪಿನ ವಿಜಯ್ ಸಿಂಗ್ ಅವರು ಟಾಟಾ ಸನ್ಸ್‌ನ ನಿರ್ದೇಶಕರಾಗಿ ಮರುನೇಮಕವಾಗುವುದನ್ನು ಮಿಸ್ತ್ರಿ ಗುಂಪು ತಡೆದರೆ, ಟಾಟಾ ಸನ್ಸ್‌ನ ನಿರ್ದೇಶಕರಾಗುವ ಮಿಸ್ತ್ರಿ ಅವರ ಪ್ರಯತ್ನವನ್ನು ನೋಯಲ್ ತಂಡವು ವಿರೋಧಿಸಿದೆ.

ಇದು ನೋಯಲ್ ಮತ್ತು ಮೆಹ್ಲಿ ಮಿಸ್ತ್ರಿ ಅವರ ನಡುವಿನ ಜಿದ್ದಾಜಿದ್ದಿಯಾಗಿರದೇ ಟಾಟಾ ಮತ್ತು ಶಾಪೂರ್ಜಿ ಪಲ್ಲೋಂಜಿ ಕುಟುಂಬಗಳ ನಡುವಿನ ಕಲಹದ ಮುಂದುವರಿದ ಭಾಗ ಎನ್ನುವ ವಿಶ್ಲೇಷಣೆಗಳು ಕೇಳಿಬಂದಿವೆ. ನೋಯಲ್ ಅವರು ಟ್ರಸ್ಟ್ಸ್‌ ಅನ್ನು ತಮ್ಮ ಸುಪರ್ದಿಗೆ ಪಡೆಯಲು ಹೊರಟಿರುವುದೇ ವಿವಾದಕ್ಕೆ ಕಾರಣ ಎಂದೂ ಹೇಳಲಾಗುತ್ತಿದೆ. ಇತ್ತ ಮೆಹ್ಲಿ ಮಿಸ್ತ್ರಿ ಅವರು ಇತರ ಟ್ರಸ್ಟಿಗಳೊಂದಿಗೆ ಸೇರಿ ಟ್ರಸ್ಟ್ಸ್‌ ಆಡಳಿತವನ್ನು ನಿಯಂತ್ರಿಸಲು ಯತ್ನಿಸುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. 

ನಾಲ್ಕು ಹುದ್ದೆ, ಎರಡು ಗುಂಪು: ಟಾಟಾ ಸಮೂಹ ಉದ್ಯಮಗಳ ಮೇಲೆ ಹಿಡಿತ ಹೊಂದಿರುವ ಟಾಟಾ ಸನ್ಸ್‌ ಆಡಳಿತ ಮಂಡಳಿಗೆ ಹೆಚ್ಚಿನ ಮಹತ್ವ ಇದೆ. ಅದರಲ್ಲಿ ಟಾಟಾ ಟ್ರಸ್ಟ್ಸ್‌ನಿಂದ ನಾಮನಿರ್ದೇಶನಗೊಂಡ ಮೂವರು ನಿರ್ದೇಶಕರು ಇರುತ್ತಾರೆ. ಪ್ರಸ್ತುತ ವಿಜಯ್ ಸಿಂಗ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ನಾಲ್ಕು ಹುದ್ದೆಗಳು ಖಾಲಿ ಇವೆ ಎನ್ನಲಾಗುತ್ತಿದೆ. ಈ ಹುದ್ದೆಗಳನ್ನು ತುಂಬುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಪ್ರತಿಷ್ಠೆ ಮತ್ತು ವ್ಯಾವಹಾರಿಕ ಮೇಲಾಟ ನಡೆಯುತ್ತಿದ್ದು, ಇದು ಟಾಟಾ ಸಮೂಹದ ಉದ್ಯಮಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.

ಟಾಟಾ ಸಮೂಹದ ಟಿಸಿಎಸ್‌, ಎರಡನೇ ತ್ರೈಮಾಸಿಕದ ವಹಿವಾಟಿನ ಮಾಹಿತಿ ನೀಡಲು ಗುರುವಾರ ಪತ್ರಿಕಾ ಗೋಷ್ಠಿ ಕರೆಯಲಾಗಿತ್ತು. ನಂತರ ಅದನ್ನು ರದ್ದುಪಡಿಸಲಾಗಿದೆ.  ರತನ್‌ ಟಾಟಾ ಅವರ ಮೊದಲ ವರ್ಷದ ಪುಣ್ಯಸ್ಮರಣೆ ಕಾರಣಕ್ಕೆ ಸುದ್ದಿಗೋಷ್ಠಿ ರದ್ದುಪಡಿಸಲಾಗಿದೆ ಎಂದು ಕಂಪನಿ ಹೇಳಿದೆ.  ಆದರೆ, ಆಂತರಿಕ ಕಲಹದ ಕಾರಣಕ್ಕೆ ಪತ್ರಿಕಾಗೋಷ್ಠಿಯನ್ನು ರದ್ದುಪಡಿಸಲಾಗಿದೆ ಎನ್ನುವ ಮಾತುಗಳಿವೆ.  

ಕೇಂದ್ರದ ಮಧ್ಯಪ್ರವೇಶ

156 ವರ್ಷಗಳ ಇತಿಹಾಸ ಹೊಂದಿರುವ ಟಾಟಾ ಸಮೂಹವು ಭಾರತದ ಆರ್ಥಿಕತೆಯಲ್ಲಿ ಮಹತ್ವದ ಪಾತ್ರವಹಿಸುತ್ತಿದೆ. ಟಾಟಾ ಸನ್ಸ್‌ ಕಾರ್ಯನಿರ್ವಹಣೆಯ ಮೇಲೆ ಹಿಡಿತ ಹೊಂದಿರುವ ಟಾಟಾ ಟ್ರಸ್ಟ್ಸ್‌ ಆಡಳಿತ ಮಂಡಳಿಯಲ್ಲಿ ನಡೆಯುತ್ತಿರುವ ಬೆಳವಣಿಗೆಯು ಟಾಟಾ ಸಮೂಹದ ಕಂಪನಿಗಳ ಕಾರ್ಯಾಚರಣೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಟಾಟಾ ಸಮೂಹದಲ್ಲಿ ಅಸ್ಥಿರತೆ ಉಂಟಾದರೆ ಅದು ದೇಶದ ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿದೆ.

ಗೃಹ ಸಚಿವ ಅಮಿತ್‌ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಟಾಟಾ ಟ್ರಸ್ಟ್ಸ್‌ ಅಧ್ಯಕ್ಷ ನೋಯಲ್ ಟಾಟಾ, ಟಾಟಾ ಸನ್ಸ್‌ ಅಧ್ಯಕ್ಷ ಚಂದ್ರಶೇಖರನ್‌ ಮತ್ತು ಟಾಟಾ ಟ್ರಸ್ಟ್ಸ್‌ನ ಟ್ರಸ್ಟಿಗಳಾದ ವೇಣು ಶ್ರೀನಿವಾಸನ್‌ ಮತ್ತು ಡೇರಿಯಸ್‌ ಖಂಬಾಟ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. 

ಟ್ರಸ್ಟ್ಸ್‌ನ ಆಡಳಿತ ಮಂಡಳಿಯಲ್ಲಿನ ಆಂತರಿಕ ಕಲಹವನ್ನು ಬೇಗ ಇತ್ಯರ್ಥ ಪಡಿಸುವಂತೆ ಇಬ್ಬರೂ ಸಚಿವರು ಸೂಚಿಸಿದ್ದಾರೆ. ಒಳಜಗಳವು ಕಂಪನಿಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳುವಂತೆಯೂ ಸಲಹೆ ನೀಡಿದ್ದಾರೆ. ಆಡಳಿತ ಮಂಡಳಿಯನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆಯೂ ಸೂಚಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಕೆಲವು ಮಾಧ್ಯಮಗಳು ವರದಿ ಮಾಡಿವೆ.  ಟ್ರಸ್ಟ್ಸ್‌ನ ಟ್ರಸ್ಟಿಗಳ ಮತ್ತೊಂದು ಸಭೆ ಶುಕ್ರವಾರ ನಿಗದಿಯಾಗಿದೆ. ಸಭೆಯ ಕಾರ್ಯಸೂಚಿ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಆದರೆ, ವಿವಾದ ಬಗೆಹರಿಸುವ ದಿಸೆಯಲ್ಲಿ ಚರ್ಚೆಗಳು ನಡೆಯಲಿವೆ ಎಂದು ಹೇಳಲಾಗುತ್ತಿದೆ.

ಟಾಟಾ -ಮಿಸ್ತ್ರಿ ಕಲಹ

ಟಾಟಾ ಮತ್ತು ಮಿಸ್ತ್ರಿ ಕುಟುಂಬದ ನಡುವೆ ಈ ಹಿಂದೆಯೂ ಕಲಹ ನಡೆದಿತ್ತು. 2012ರಿಂದ 2016ರವರೆಗೆ ಟಾಟಾ ಸನ್ಸ್‌ ಅಧ್ಯಕ್ಷರಾಗಿದ್ದ ಸೈರಸ್‌ ಮಿಸ್ತ್ರಿ ಅವರನ್ನು ಅಧ್ಯಕ್ಷ ಸ್ಥಾನದಿಂದ ರತನ್‌ ಟಾಟಾ ವಜಾ ಮಾಡಿದ್ದರು. ಇದನ್ನು ಪ್ರಶ್ನಿಸಿ ಮಿಸ್ತ್ರಿ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. 2021ರಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌ ಮಿಸ್ತ್ರಿ ವಜಾವನ್ನು ಎತ್ತಿ ಹಿಡಿದಿತ್ತು. 2022ರ ಸೆಪ್ಟೆಂಬರ್‌ 4ರಂದು ರಸ್ತೆ ಅಪಘಾತದಲ್ಲಿ ಸೈರಸ್‌ ಮಿಸ್ತ್ರಿ ಅವರು ನಿಧನರಾಗಿದ್ದರು. 

ಸೈರಸ್‌ ಮಿಸ್ತ್ರಿ ಅವರು ಶಾರ್ಪೂಜಿ ಪಲ್ಲೊಂಜಿ ಸಮೂಹದ ಭಾಗವಾಗಿದ್ದರು. 2006ರವರೆಗೂ ಅವರ ತಂದೆ ಟಾಟಾದ ಆಡಳಿತ ಮಂಡಳಿಯಲ್ಲಿದ್ದರು. ಅವರ ನಿಧನದ ನಂತರ, ಸೈರಸ್‌ ಮಿಸ್ತ್ರಿ ಅವರು ಆಡಳಿತ ಮಂಡಳಿಗೆ ಸೇರ್ಪಡೆಗೊಂಡಿದ್ದರು. 2011ರಲ್ಲಿ ರತನ್‌ ಟಾಟಾ ಅವರು ಟಾಟಾ ಸನ್ಸ್‌ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ ನಂತರ ಮಿಸ್ತ್ರಿ ಅವರನ್ನು ನೇಮಕ ಮಾಡಲಾಗಿತ್ತು. ಆದರೆ, ಅವರ ಕಾರ್ಯವೈಖರಿ ರತನ್ ಟಾಟಾ ಅವರಿಗೆ ಒಪ್ಪಿಗೆಯಾಗಿರಲಿಲ್ಲ ಎನ್ನಲಾಗಿತ್ತು. ಈ ಕಾರಣಕ್ಕೆ ಅವರನ್ನು ಹುದ್ದೆಯಿಂದ ವಜಾ ಮಾಡಲಾಗಿತ್ತು. 

ರತನ್‌ ಟಾಟಾ

ದೇಶದ ಎರಡು ಬೃಹತ್‌ ಉದ್ಯಮಗಳನ್ನು ನಡೆಸುತ್ತಿರುವ ಕುಟುಂಬಗಳ ನಡುವಿನ ಈ ಕಲಹ ಭಾರಿ ಸುದ್ದಿ ಮಾಡಿತ್ತು. 

ಈಗ ಟಾಟಾ ಟ್ರಸ್ಟ್ಸ್‌ ಟ್ರಸ್ಟಿಗಳಲ್ಲಿ ಒಬ್ಬರಾಗಿರುವ ಮೆಹ್ಲಿ ಮಿಸ್ತ್ರಿ ಅವರು ಸೈರಸ್‌ ಮಿಸ್ತ್ರಿ ಅವರ ಸಂಬಂಧಿ. ರತನ್ ಟಾಟಾ ಅವರಿಗೆ ಆಪ್ತರಾಗಿದ್ದವರು. ರತನ್ ಅವರು ಬರೆದಿದ್ದ ಉಯಿಲನ್ನು ಅನುಷ್ಠಾನಕ್ಕೆ (ವಿಲ್‌ ಎಕ್ಸಿಕ್ಯುಟರ್‌) ತಂದವರಲ್ಲಿ ಇವರೂ ಒಬ್ಬರಾಗಿದ್ದರು.

ಟ್ರಸ್ಟ್ಸ್‌ನಲ್ಲಿ ಎಷ್ಟು ಟ್ರಸ್ಟ್‌ಗಳು?

ಟಾಟಾ ಟ್ರಸ್ಟ್ಸ್‌ನಲ್ಲಿ ಒಟ್ಟು 14 ಟ್ರಸ್ಟ್‌ಗಳಿವೆ. ಸರ್‌ ದೊರಾಬ್ಜಿ ಟಾಟಾ ಟ್ರಸ್ಟ್‌ (ಎಸ್‌ಡಿಟಿಟಿ) ಮತ್ತು ಸರ್‌ ರತನ್‌ ಟಾಟಾ ಟ್ರಸ್ಟ್‌ (ಎಸ್‌ಆರ್‌ಟಿಟಿ) ಎರಡು ಪ್ರಮುಖ ಟ್ರಸ್ಟ್‌ಗಳ ಅಡಿಯಲ್ಲಿ ಉಳಿದ ಟ್ರಸ್ಟ್‌ಗಳು ಬರುತ್ತವೆ. ಎಸ್‌ಡಿಟಿಟಿ ಅಡಿಯಲ್ಲಿ ಎಂಟು ಟ್ರಸ್ಟ್‌ಗಳು, ಎಸ್‌ಆರ್‌ಟಿಟಿಯ ಜೊತೆಗೆ ನಾಲ್ಕು ಟ್ರಸ್ಟ್‌ಗಳಿವೆ. 

ಸೈರಸ್‌ ಮಿಸ್ತ್ರಿ

ಸರ್‌ ದೊರಾಬ್ಜಿ ಟಾಟಾ ಟ್ರಸ್ಟ್‌ ಜೊತೆಗೆ ಜಮ್‌ಶೆಡ್‌ಜೀ ಟಾಟಾ ಟ್ರಸ್ಟ್‌, ಟಾಟಾ ಎಜುಕೇಷನ್‌ ಟ್ರಸ್ಟ್‌, ಟಾಟಾ ಸೋಷಿಯಲ್‌ ವೆಲ್‌ಫೇರ್‌ ಟ್ರಸ್ಟ್‌, ಆರ್‌.ಡಿ.ಟಾಟಾ ಟ್ರಸ್ಟ್‌, ಲೇಡಿ ಟಾಟಾ ಮೆಮೋರಿಯಲ್‌ ಟ್ರಸ್ಟ್‌, ಜೆ.ಎನ್‌.ಟಾಟಾ ಎಂಡೋವ್‌ಮೆಂಟ್‌ ಫಾರ್‌ ದಿ ಹೈಯರ್‌ ಎಜುಕೇಷನ್‌ ಫಾರ್‌ ಇಂಡಿಯನ್ಸ್‌, ಜೆ.ಆರ್‌.ಡಿ ಆ್ಯಂಡ್‌ ಥೆಲ್ಮಾ ಜೆ.ಟಾಟಾ ಟ್ರಸ್ಟ್‌ ಮತ್ತು ಜೆ.ಆರ್‌.ಡಿ ಟಾಟಾ ಟ್ರಸ್ಟ್‌ಗಳು ಗುರುತಿಸಿಕೊಂಡಿವೆ. ಸರ್‌ ರತನ್‌ ಟಾಟಾ ಟ್ರಸ್ಟ್‌ ಜೊತೆಗೆ ಟಾಟಾ ಎಜುಕೇಷನ್‌ ಆ್ಯಂಡ್‌ ಡೆವೆಲಪ್‌ಮೆಂಟ್‌ ಟ್ರಸ್ಟ್‌, ನವಾಜ್‌ಬಾಯಿ ರತನ್‌ ಟಾಟಾ ಟ್ರಸ್ಟ್‌, ಬಾಯಿ ಹಿರಾಬಾಯಿ ಜೆಮ್‌ಶೆಡ್‌ಜೀ ಟಾಟಾ ನವ್‌ಸರಿ ಸಿಎಚ್‌ ಇನ್‌ಸ್ಟಿಟ್ಯೂಷನ್ಸ್‌ ಮತ್ತು ಸಾರ್ವಜನಿಕ ಸೇವಾ ಟ್ರಸ್ಟ್‌ ಸೇರಿವೆ. 

ಆಧಾರ: ಪಿಟಿಐ, ರಾಯಿಟರ್ಸ್, ಟಾಟಾ ಟ್ರಸ್ಟ್ಸ್‌ ವೆಬ್‌ಸೈಟ್, ಮಾಧ್ಯಮ ವರದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.