ADVERTISEMENT

ಆಳ ಅಗಲ: ತೇಜಸ್ ವಿಮಾನ ದುರಂತ– ಕುಂದೀತೇ ’ತೇಜಸ್ಸು’?

ಸೂರ್ಯನಾರಾಯಣ ವಿ.
Published 23 ನವೆಂಬರ್ 2025, 23:57 IST
Last Updated 23 ನವೆಂಬರ್ 2025, 23:57 IST
<div class="paragraphs"><p>ದುಬೈ ಏರ್‌ಶೋನಲ್ಲಿ ತೇಜಸ್‌ ಯುದ್ಧವಿಮಾನ ಮತ್ತು ದುರಂತ ಸಮಯ</p></div>

ದುಬೈ ಏರ್‌ಶೋನಲ್ಲಿ ತೇಜಸ್‌ ಯುದ್ಧವಿಮಾನ ಮತ್ತು ದುರಂತ ಸಮಯ

   

ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ಮಹತ್ವಾಕಾಂಕ್ಷೆ ಹೊಂದಿರುವ ಕೇಂದ್ರ ಸರ್ಕಾರವು ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ನಿರ್ಮಿತ ಈ ಯುದ್ಧವಿಮಾನಗಳನ್ನು ದೊಡ್ಡ ಸಂಖ್ಯೆಯಲ್ಲಿ ವಾಯುಪಡೆ ಮತ್ತು ನೌಕಾ ಪಡೆಗಳಿಗೆ ಸೇರ್ಪಡೆಗೊಳಿಸಲು ‌ನಿರ್ಧರಿಸಿದೆ. ಅಲ್ಲದೇ, ಬೇರೆ ದೇಶಗಳಿಗೂ ಈ ವಿಮಾನಗಳನ್ನು ರಫ್ತು ಮಾಡುವ ಯೋಜನೆಯನ್ನೂ ಹೊಂದಿದೆ. ಇಂತಹ ಸನ್ನಿವೇಶದಲ್ಲಿ ಜಾಗತಿಕವಾಗಿ ನಡೆಯುವ ಪ್ರತಿಷ್ಠಿತ ಏರ್‌ಶೋಗಳಲ್ಲಿ ಒಂದಾದ ದುಬೈ ವಾಯುಪ್ರದರ್ಶನದಲ್ಲಿ ವಿಮಾನ ಅಪಘಾತಕ್ಕೀಡಾಗಿರುವುದು, ಜಗತ್ತಿನ ಮುಂದೆ ಸ್ವದೇಶಿ ನಿರ್ಮಿತ ತಂತ್ರಜ್ಞಾನವನ್ನು ತೆರೆದಿಡುವ ಮತ್ತು ಹೊರದೇಶಗಳಿಗೆ ಈ ವಿಮಾನವನ್ನು ಮಾರಾಟ ಮಾಡುವ ಭಾರತದ ಯತ್ನಕ್ಕೆ ಕೊಂಚ ಹಿನ್ನಡೆ ಉಂಟು ಮಾಡಿದೆ ಎಂದು ಹೇಳಲಾಗುತ್ತಿದೆ.

–––

ADVERTISEMENT

ಸ್ವದೇಶಿ ತಂತ್ರಜ್ಞಾನದಲ್ಲಿ ಭಾರತದಲ್ಲೇ ನಿರ್ಮಿಸಲಾದ ತೇಜಸ್‌ ಹಗುರ ಯುದ್ಧ ವಿಮಾನವು ದುಬೈ ಏರ್‌ ಶೋನ ಕೊನೆಯ ದಿನ ಕಸರತ್ತು ನಡೆಸುತ್ತಿದ್ದ ಸಂದರ್ಭದಲ್ಲೇ ಪತನಗೊಂಡಿದ್ದು ಮಾತ್ರವಲ್ಲದೇ, ವಿಮಾನದ ಪೈಲಟ್‌ ವಿಂಗ್‌ ಕಮಾಂಡರ್‌ ನಮಾಂಶ್‌ ಸ್ಯಾಲ್‌ ಅವರು ಮೃತಪಟ್ಟಿರುವುದು ದೇಶದ ರಕ್ಷಣಾ ವಲಯದಲ್ಲಿ ಆಘಾತ ಉಂಟು ಮಾಡಿದೆ.

ದೇಶದ ರಕ್ಷಣಾ ಕ್ಷೇತ್ರಕ್ಕೆ ಹೊಸ ದಿಕ್ಕು ತೋರುವ ಸಾಮರ್ಥ್ಯವಿರುವ ತೇಜಸ್‌ ಯುದ್ಧವಿಮಾನವು ಜಾಗತಿಕ ಮಟ್ಟದಲ್ಲಿ ಈಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿದೆ. ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ಮಹತ್ವಾಕಾಂಕ್ಷೆ ಹೊಂದಿರುವ ಕೇಂದ್ರ ಸರ್ಕಾರವು ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ನಿರ್ಮಿತ ಈ ಯುದ್ಧವಿಮಾನಗಳನ್ನು ದೊಡ್ಡ ಸಂಖ್ಯೆಯಲ್ಲಿ ವಾಯುಪಡೆ ಮತ್ತು ನೌಕಾ ಪಡೆಗಳಿಗೆ ಸೇರ್ಪಡೆಗೊಳಿಸಲು ‌ನಿರ್ಧರಿಸಿದೆ. ಅಲ್ಲದೇ, ಬೇರೆ ದೇಶಗಳಿಗೂ ಈ ವಿಮಾನಗಳನ್ನು ರಫ್ತು ಮಾಡುವ ಯೋಜನೆಯನ್ನೂ ಹೊಂದಿದೆ. ಇಂತಹ ಸನ್ನಿವೇಶದಲ್ಲಿ ಜಾಗತಿಕವಾಗಿ ನಡೆಯುವ ಪ್ರತಿಷ್ಠಿತ ಏರ್‌ಶೋಗಳಲ್ಲಿ ಒಂದಾದ ದುಬೈ ವಾಯುಪ್ರದರ್ಶನದಲ್ಲಿ ವಿಮಾನ ಅಪಘಾತಕ್ಕೀಡಾಗಿರುವುದು, ಜಗತ್ತಿನ ಮುಂದೆ ಸ್ವದೇಶಿ ನಿರ್ಮಿತ ತಂತ್ರಜ್ಞಾನವನ್ನು ತೆರೆದಿಡುವ ಮತ್ತು ಹೊರದೇಶಗಳಿಗೆ ಈ ವಿಮಾನವನ್ನು ಮಾರಾಟ ಮಾಡುವ ಭಾರತದ ಯತ್ನಕ್ಕೆ ಕೊಂಚ ಹಿನ್ನಡೆ ಉಂಟು ಮಾಡಿದೆ ಎಂದು ಹೇಳಲಾಗುತ್ತಿದೆ. 

ಶುಕ್ರವಾರ (ನ.21) ನಡೆದ ಅಪಘಾತಕ್ಕೆ ಏನು ಕಾರಣ ಎಂಬುದು ಇನ್ನೂ ತಿಳಿದು ಬಂದಿಲ್ಲ. ಆದರೆ, ಪತನಕ್ಕೂ ಮುನ್ನ ಪೈಲಟ್‌ ಸ್ಯಾಲ್‌ ಅವರು ನಡೆಸುತ್ತಿದ್ದ ಕಸರತ್ತು ಅತ್ಯಂತ ಸಂಕೀರ್ಣವಾದುದು ಮತ್ತು ಹೆಚ್ಚು ಕೌಶಲ ಬೇಕು. ‘ಅಪಘಾತಕ್ಕೆ ತಾಂತ್ರಿಕ ಕಾರಣವೂ ಇರಬಹುದು, ಮಾನವ ಲೋಪವೂ ಇರಬಹುದು, ಉಪಕರಣಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದುದೂ ಕಾರಣವಾಗಿರಬಹುದು. ಅದು ತನಿಖೆಯಿಂದಷ್ಟೇ ತಿಳಿದುಬರಲಿದೆ’ ಎಂದು ವಾಯುಪಡೆಯ ಅಧಿಕಾರಿಗಳು ಹೇಳಿದ್ದಾರೆ. 

2011ರಲ್ಲಿ ತೇಜಸ್‌ ವಿಮಾನವು ಮೊದಲ ಬಾರಿಗೆ ಹಾರಾಟ ನಡೆಸಿದ ಬಳಿಕ ಪತನಕ್ಕೆ ಈಡಾಗುತ್ತಿರುವುದು ಇದು ಎರಡನೇ ಬಾರಿ. ಕಳೆದ ವರ್ಷದ ಮಾರ್ಚ್‌ನಲ್ಲಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಈ ವಿಮಾನ ಮೊದಲ ಬಾರಿಗೆ ಪತನಗೊಂಡಿತ್ತು. ಆ ಸಂದರ್ಭದಲ್ಲಿ ಪೈಲಟ್‌ ಅವರು ಪ್ಯಾರಾಚೂಟ್‌ ಮೂಲಕ ಸುರಕ್ಷಿತವಾಗಿ ಭೂಮಿಗೆ ಇಳಿದಿದ್ದರು.

ಯುದ್ಧ ವಿಮಾನಗಳು ಅಪಘಾತಕ್ಕೆ ಈಡಾಗುವುದು ಹೊಸದೇನಲ್ಲ. ಜಾಗತಿಕ ಮಟ್ಟದಲ್ಲಿ ಅತ್ಯುತ್ಕೃಷ್ಟ ವಿಮಾನಗಳು ಎಂದು ಹೆಸರು ಮಾಡಿದ ಯುದ್ಧವಿಮಾನಗಳು ವಾಯುಪ್ರದರ್ಶನಗಳಲ್ಲೇ ಪತನಗೊಂಡಿರುವ ಉದಾಹರಣೆಗಳು ಹಲವು ಇವೆ. ಹಾಗಾಗಿ, ಈಗ ತೇಜಸ್‌ ಯುದ್ಧವಿಮಾನ ಪತನಗೊಂಡಿರುವುದು ದೊಡ್ಡ ಸಂಗತಿ ಅಲ್ಲ. ಆದರೆ, ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೊಂದು ಅಭಿವೃದ್ಧಿ ಪಡಿಸಿರುವ ವಿಮಾನವೊಂದು ಜಾಗತಿಕ ಮಟ್ಟದ ಪ್ರದರ್ಶನದಲ್ಲಿ ಅಪಘಾತಕ್ಕೀಡಾಗಿರುವುದು ಪ್ರಪಂಚಕ್ಕೆ ಬೇರೆಯದೇ ಆದ ಸಂದೇಶ ರವಾನಿಸುತ್ತದೆ ಎಂಬುದು ತಜ್ಞರ ವಾದ. 

ವಿಳಂಬಿತ ಯೋಜನೆ

ಸ್ವದೇಶಿ ನಿರ್ಮಿತ ಯುದ್ಧ ವಿಮಾನ ಹೊಂದುವ ಭಾರತದ ಬಹುದೊಡ್ಡ ಕನಸನ್ನು ನನಸು ಮಾಡಿರುವುದು ತೇಜಸ್‌. ಈ ವಿಮಾನಕ್ಕೆ ನಾಲ್ಕು ದಶಕಗಳ ಇತಿಹಾಸವೇ ಇದೆ. ಇದು ತುಂಬಾ ವಿಳಂಬವಾದ ಯೋಜನೆ. ಮಿಗ್‌ 21 ವಿಮಾನಗಳ ಜಾಗ ತುಂಬುವುದಕ್ಕಾಗಿ ಭಾರತವು 1980ರ ದಶಕದಲ್ಲೇ ತೇಜಸ್‌ ವಿಮಾನ ಅಭಿವೃದ್ಧಿ ಕಾರ್ಯಕ್ರಮ ಆರಂಭಿಸಿತ್ತು. 2001ರಲ್ಲಿ ವಿಮಾನ ತಂತ್ರಜ್ಞಾನದ ಮೊದಲ ಪರೀಕ್ಷೆ ನಡೆದಿತ್ತು. 2011ರಲ್ಲಿ ತೇಜಸ್‌ ಮೊದಲ ಪರೀಕ್ಷಾರ್ಥ ಹಾರಾಟ ನಡೆಸಿತ್ತು. 2016ರಲ್ಲಿ ಐಎಎಫ್‌ ಸೇರ್ಪಡೆಗೊಂಡಿತ್ತು.

ಸದ್ಯ, ಭಾರತದ ವಾಯುಪಡೆಯು ತೇಜಸ್‌ (ಮಾರ್ಕ್‌–1) ಯುದ್ಧವಿಮಾನಗಳ ಎರಡು ಸ್ಕ್ವಾಡ್ರನ್‌ಗಳನ್ನು (38 ವಿಮಾನಗಳು) ಹೊಂದಿದೆ. ಆದರೆ, ಈವರೆಗೂ ಇದನ್ನು ಸೇನಾ ಕಾರ್ಯಾಚರಣೆಯಲ್ಲಿ ಬಳಸಲಾಗಿಲ್ಲ. ರಕ್ಷಣಾ ಇಲಾಖೆಯು  2021ರಲ್ಲಿ ₹46,898 ಕೋಟಿ ವೆಚ್ಚದಲ್ಲಿ 83 ಅತ್ಯಾಧುನಿಕ ತೇಜಸ್‌ ಯುದ್ಧವಿಮಾನ (ಎಂಕೆ1ಎ) ಮತ್ತು 2025ರಲ್ಲಿ ₹66,500 ಕೋಟಿ ವೆಚ್ಚದಲ್ಲಿ 97 ಯುದ್ಧವಿಮಾನಗಳ ಖರೀದಿಗೆ ಎಚ್‌ಎಎಲ್‌ ಜೊತೆ ಒಪ್ಪಂದ ಮಾಡಿಕೊಂಡಿದೆ. ಆದರೆ, ಅಮೆರಿಕದ ಜಿಇ ಏರೋಸ್ಪೇಸ್‌ನಿಂದ ಎಂಜಿನ್‌ ಪೂರೈಕೆ ವಿಳಂಬವಾಗಿರುವುದರಿಂದ ನಿಗದಿತ ಸಮಯದಲ್ಲಿ ವಿಮಾನಗಳನ್ನು ಹಸ್ತಾಂತರ ಮಾಡಲು ಎಚ್‌ಎಎಲ್‌ಗೆ ಆಗುತ್ತಿಲ್ಲ.

ದೇಶೀಯವಾಗಿ ಬಳಸುವುದರ ಜೊತೆಗೆ ಏಷ್ಯಾ, ಅಫ್ರಿಕಾ ಮತ್ತು ಲ್ಯಾಟಿನ್‌ ಅಮೆರಿಕಾದ ರಾಷ್ಟ್ರಗಳಿಗೆ ಈ ವಿಮಾನವನ್ನು ಮಾರಾಟ ಮಾಡುವ ಗುರಿಯನ್ನೂ ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಇದೇ ಉದ್ದೇಶಕ್ಕೆ 2023ರಲ್ಲಿ ಮಲೇಷ್ಯಾದಲ್ಲಿ ಎಚ್‌ಎಎಲ್‌ ಪ್ರಾದೇಶಿಕ ಕಚೇರಿಯನ್ನೂ ತೆರೆದಿದೆ.

‘ಆದರೆ, ಈಗ ಅಪಘಾತ ಸಂಭವಿಸಿರುವುದರಿಂದ ಜಾಗತಿಕ ಮಟ್ಟದಲ್ಲಿ ವಿಮಾನದ ಸುರಕ್ಷತೆ, ಕಾರ್ಯಕ್ಷಮತೆ, ಸಾಮರ್ಥ್ಯದ ಬಗ್ಗೆ ಬೇರೆ ದೇಶಗಳಲ್ಲಿ ಗೊಂದಲ ಮೂಡಬಹುದು. ಹಾಗಾಗಿ, ಅವುಗಳು ತೇಜಸ್‌ ಖರೀದಿಗೆ ಆಸಕ್ತಿ ತೋರದಿರುವ ಸಾಧ್ಯತೆ ಇದೆ. ಹೀಗಾಗಿ ಸದ್ಯದ ಮಟ್ಟಿಗೆ ಎಚ್‌ಎಎಲ್‌ ದೇಶೀಯ ಬೇಡಿಕೆಯನ್ನು ಪೂರೈಸುವುದಕ್ಕಷ್ಟೇ ಗಮನ ನೀಡಬೇಕಾಗಬಹುದು’ ಎಂದು ರಕ್ಷಣಾ ಕ್ಷೇತ್ರದ ತಜ್ಞರು ಹೇಳುತ್ತಿದ್ದಾರೆ. 

1999ರ ಪ್ಯಾರಿಸ್‌ ಏರ್‌ ಶೋನಲ್ಲಿ ಕಸರತ್ತು ನಡೆಸುತ್ತಿದ್ದ ಸುಖೋಯ್‌ 30ಎಂಕೆಐ ಯುದ್ಧವಿಮಾನವು ಪತನಗೊಂಡಿತ್ತು. ಈ ವಿಮಾನವು ಭಾರತದ ಬಳಿ ಇದ್ದ ಸುಖೋಯ್‌–30ರ ಅತ್ಯಾಧುನಿಕ ಆವೃತ್ತಿ. ಯುದ್ಧ ವಿಮಾನ ಪತನಗೊಂಡ ಹೊರತಾಗಿಯೂ ಭಾರತವು 2002ರಲ್ಲಿ ಈ ವಿಮಾನಗಳನ್ನು ವಾಯುಪಡೆಗೆ ಸೇರ್ಪಡೆಗೊಳಿಸಿತ್ತು. ಒಂದು ಅಪಘಾತದಿಂದ ಯುದ್ಧವಿಮಾನದ ಸಾಮರ್ಥ್ಯವನ್ನು ಅಳೆಯಲಾಗದು. ಹಾಗಾಗಿ, ಹೊರ ದೇಶಗಳು ತೇಜಸ್‌ ಮೇಲೆ ಆಸಕ್ತಿ ತೋರಲಾರವು ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂಬ ವಾದವೂ ಇದೆ. 

ಅಪಪ್ರಚಾರ

ಐಎಎಫ್‌ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳು, ತಜ್ಞರು ತೇಜಸ್‌ನ ಸಾಮರ್ಥ್ಯ, ಕಾರ್ಯಕ್ಷಮತೆಯ ಬಗ್ಗೆ ಈಗಲೂ ದೃಢವಾದ ನಂಬಿಕೆ ಹೊಂದಿದ್ದಾರೆ. ಆದರೆ, ವಿದೇಶಿಯರು ನಿರ್ವಹಿಸುತ್ತಿರುವ ವಿಶೇಷವಾಗಿ ಪಾಕಿಸ್ತಾನ ಮೂಲದ ಸಾಮಾಜಿಕ ಜಾಲತಾಣ ಖಾತೆಗಳ ಬಳಕೆದಾರರು ತೇಜಸ್‌ ಬಗ್ಗೆ ಅಪಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. 

ದುಬೈ ಏರ್‌ಶೋ ನಡೆಯುತ್ತಿದ್ದ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ತೇಜಸ್‌ ವಿಮಾನದಲ್ಲಿ ತೈಲ ಸೋರಿಕೆಯಾಗುತ್ತಿದೆ ಎಂಬ ಸುಳ್ಳು ಸುದ್ದಿಯನ್ನು ಈ ಮೊದಲು ಹರಡಲಾಗಿತ್ತು. ಭಾರತ ಫ್ಯಾಕ್ಟ್‌ಚೆಕ್‌ ಮೂಲಕ ಅದನ್ನು ತಳ್ಳಿಹಾಕಬೇಕಾಯಿತು. ವಿಮಾನ ಪತನವಾದುದನ್ನು ನೋಡುತ್ತಿದ್ದ ಪಾಕ್‌ ಪತ್ರಕರ್ತರೊಬ್ಬರು ವ್ಯಂಗ್ಯ ವಾಡುತ್ತಿರುವ ವಿಡಿಯೊವೊಂದು ಈಗ ಹರಿದಾಡುತ್ತಿದೆ. ತೇಜಸ್‌ ವಿಮಾನ ಅಲ್ಲ, ಅದು ಸಮೋಸ... ಹೀಗೆ ಅಪಪ್ರಚಾರ ಮಾಡುವ ಹಲವು ಪೋಸ್ಟ್‌ಗಳು ಈಗ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಏರ್‌ ಶೋ: ಪ್ರಮುಖ ದುರಂತಗಳು

* 2025 ಆಗಸ್ಟ್‌ 28: ಪೋಲೆಂಡ್‌ನ ರಾದೊಮ್‌ನಲ್ಲಿ ಆಯೋಜಿಸಲಾಗಿದ್ದ ಏರ್‌ಶೋನಲ್ಲಿ ಭಾಗವಹಿಸುವುದಕ್ಕಾಗಿ ತಾಲೀಮು ನಡೆಸುತ್ತಿದ್ದಾಗ ಪೋಲೆಂಡ್‌ ವಾಯುಪಡೆಯ ಎಫ್‌–16 ಯುದ್ಧವಿಮಾನ ಪತನಗೊಂಡು ಪೈಲಟ್‌ ಸಾವಿಗೀಡಾಗಿದ್ದರು

* 2025 ಮಾರ್ಚ್‌ 22: ದಕ್ಷಿಣ ಆಫ್ರಿಕಾದ ಸಲ್ಡಾನದಲ್ಲಿ ನಡೆದ ವೆಸ್ಟ್‌ಕೋಸ್ಟ್‌ ಏರ್‌ ಶೋನಲ್ಲಿ ಎಂಬಿ–326 ವಿಮಾನ ಪತನಗೊಂಡು ಪೈಲಟ್‌ ಮರಣ ಹೊಂದಿದ್ದರು

* 2024 ಜೂನ್‌ 2: ಪೋರ್ಚುಗಲ್‌ನ ಬೇಜಾದಲ್ಲಿ ನಡೆದ ಏರ್‌ಶೋನಲ್ಲಿ ಸಾಹಸ ಪ್ರದರ್ಶನ ನೀಡುತ್ತಿದ್ದಾಗ ಎರಡು ಯಾಕೊವ್ಲೆವ್‌ ಯಾಕ್‌–52 ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿ ಒಬ್ಬ ಪೈಲಟ್‌ ಮೃತಪಟ್ಟಿದ್ದರು

* 2023 ಆಗಸ್ಟ್‌ 13: ಮಿಷಿಗನ್‌ನ ಇಸ್ಪಿಲಾಂಟಿಯಲ್ಲಿ ನಡೆದ ಏರ್‌ಶೋನಲ್ಲಿ ಮಿಗ್‌– 23ಯುಬಿ ಯುದ್ಧ ವಿಮಾನ ಅಪಘಾತಕ್ಕೀಡಾಗಿತ್ತು. ಅದೃಷ್ಟವಶಾತ್‌ ಇಬ್ಬರೂ ಪೈಲಟ್‌ಗಳು ಸುರಕ್ಷಿತವಾಗಿ ಭೂಮಿಗೆ ಇಳಿದಿದ್ದರು 

* 2022 ನವೆಂಬರ್‌ 12: ಡಲ್ಲಾಸ್‌ ಏರ್‌ಶೋ ನಡೆಯುತ್ತಿದ್ದ ವೇಳೆ ಆಗಾಸದಲ್ಲಿ ಬೋಯಿಂಗ್‌ ಬಿ–17ಜಿ ಮತ್ತು ಬೆಲ್‌ ಪಿ–63 ಕಿಂಗ್‌ಕೋಬ್ರಾ ವಿಮಾನಗಳು ಆಗಸದಲ್ಲಿ ಡಿಕ್ಕಿ ಹೊಡೆದು ಆರು ಮಂದಿ ಪ್ರಾಣ ಕಳೆದುಕೊಂಡಿದ್ದರು

* 2011 ಸೆಪ್ಟೆಂಬರ್‌ 16: ಅಮೆರಿಕದ ನೆವಡಾ ರಾಜ್ಯದಲ್ಲಿ ನಡೆದ ರೆನೊ ಏರ್‌ ರೇಸ್‌ನಲ್ಲಿ ಮಾರ್ಪಡಿಸಿದ ರೇಸಿಂಗ್‌ ವಿಮಾನವೊಂದು ಪೈಲಟ್‌ನ ನಿಯಂತ್ರಣ ತಪ್ಪಿ ಪ್ರೇಕ್ಷಕರ ಗ್ಯಾಲರಿ ಮೇಲೆ ಅಪ್ಪಳಿಸಿದ್ದರಿಂದ 10 ಮಂದಿ ಕೊನೆಯುಸಿರೆಳೆದಿದ್ದರು

* 2009 ಆಗಸ್ಟ್‌ 30: ಪೋಲೆಂಡ್‌ನ ರಾದೊಮ್‌ನಲ್ಲಿ ನಡೆದ ಏರ್‌ಶೋನಲ್ಲಿ ಕಸರತ್ತು ತೋರುತ್ತಿದ್ದ ಬೆಲರೂಸ್‌ನ ಸುಖೋಯ್‌ –27 ಯುದ್ಧವಿಮಾನ ಅಪಘಾತಕ್ಕೀಡಾಗಿ ಇಬ್ಬರು ಪೈಲಟ್‌ಗಳು ಅಸು ನೀಗಿದ್ದರು 

*2002 ಜುಲೈ 27: ಉಕ್ರೇನ್‌ನ ಲಿವ್‌ ಸಮೀಪ ನಡೆದ ಏರ್‌ಶೋದಲ್ಲಿ ಉಕ್ರೇನ್‌ ವಾಯುಪಡೆಯ ಸುಖೋಯ್‌ ಎಸ್‌ಯು–27 ವಿಮಾನವು ಕೆಳಮಟ್ಟದಲ್ಲಿ ಸಾಹಸ ಪ್ರದರ್ಶನ ನೀಡುತ್ತಿದ್ದಾಗ ಪತನವಾಗಿತ್ತು. ವಿಮಾನವು ವಾಯುನೆಲೆಯಲ್ಲಿ ನಿಲ್ಲಿಸಿದ್ದ ವಿಮಾನದ ಮೇಲೆ ಅಪ್ಪಳಿಸಿದ್ದರಿಂದ ಭಾರಿ ಸ್ಫೋಟ ಸಂಭವಿಸಿ 28 ಮಕ್ಕಳು ಸೇರಿ 77 ಮಂದಿ ದಾರುಣವಾಗಿ ಮೃತಪಟ್ಟಿದ್ದರು

* 1999: ಪ್ಯಾರಿಸ್‌ ಏರ್‌ಶೋನಲ್ಲಿ ಸಾಹಸ ನಡೆಸುತ್ತಿದ್ದಾಗ ರಷ್ಯಾದ ಸುಖೋಯ್‌ ಎಸ್‌ಯು–30ಎಂಕೆಐ ವಿಮಾನ ಪತನಗೊಂಡಿತ್ತು. ಪೈಲಟ್‌ ಅಪಾಯದಿಂದ ಪಾರಾಗಿದ್ದರು 

* 1989: ಪ್ಯಾರಿಸ್‌ ವಾಯು ಪ್ರದರ್ಶನದಲ್ಲಿ ಸೋವಿಯತ್‌ ರಷ್ಯಾ ನಿರ್ಮಿತ ಮಿಗ್‌–29 ವಿಮಾನ ಅಪಘಾತವಾಗಿತ್ತು. ಆ ಸಂದರ್ಭದಲ್ಲೂ ಪೈಲಟ್‌ ಬದುಕುಳಿದಿದ್ದರು

* 1989 ಅಕ್ಟೋಬರ್‌ 8: ಭಾರತೀಯ ವಾಯುಪಡೆ ದಿನದ ಅಂಗವಾಗಿ ನವದೆಹಲಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಗಸದಲ್ಲಿ ಕಸರತ್ತು ನಡೆಸುತ್ತಿದ್ದ ಮಿರಾಜ್‌ 2000 ವಿಮಾನ ಪತನಗೊಂಡು ವಿಂಗ್‌ ಕಮಾಂಡರ್‌ ರಮೇಶ್‌ ಭಕ್ಷಿ ಹಾಗೂ ಒಬ್ಬ ಪ್ರೇಕ್ಷಕ ಪ್ರಾಣ ಕಳೆದುಕೊಂಡಿದ್ದರು 

* 1988 ಆಗಸ್ಟ್‌ 28: ಪಶ್ಚಿಮ ಜರ್ಮನಿಯಲ್ಲಿರುವ ಅಮೆರಿಕದ ರ‍್ಯಾಮ್‌ಸ್ಟೀನ್‌ ವಾಯುನೆಲೆಯಲ್ಲಿ ನಡೆದ ಪ್ರದರ್ಶನದ ವೇಳೆ ಇಟಲಿ ವಾಯುಪಡೆಯ ವಿಮಾನಗಳು ಆಗಸದಲ್ಲಿ ಡಿಕ್ಕಿ ಹೊಡೆದು ರನ್‌ವೇಗೆ ಪತನಗೊಂಡಿದ್ದರಿಂದ ಭಾರಿ ಪ್ರಮಾಣದಲ್ಲಿ ಬೆಂಕಿ ಆವರಿಸಿ ಮೂವರು ಪೈಲಟ್‌ಗಳು ಮತ್ತು 67 ಪ್ರೇಕ್ಷಕರು ಕೊನೆಯುಸಿರೆಳೆದಿದ್ದರು 

* 1973: ಪ್ಯಾರಿಸ್‌ ಏರ್‌ಶೋನಲ್ಲಿ ನಡೆದ ಪ್ರಾಯೋಗಿಕ ಹಾರಾಟದ ಮಧ್ಯೆ ಟ್ಯುಪೊಲೆವ್‌ ಟು–144 ಸೂಪರ್‌ಸಾನಿಕ್‌ ವಿಮಾನವು ಅಪಘಾತಕ್ಕೀಡಾಗಿ 14 ಜನರು ಮೃತಪಟ್ಟಿದ್ದರು

* 1972 ಸೆಪ್ಟೆಂಬರ್‌ 24: ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದಲ್ಲಿ ನಡೆದ ಗೋಲ್ಡನ್‌ ವೆಸ್ಟ್‌ ಸ್ಪೋರ್ಟ್ ವಾಯು ಪ್ರದರ್ಶನದ ವೇಳೆ ಕೆನಡಾ ಏರ್‌ನ ಎಂಕೆ.5 ವಿಮಾನವು ಟೇಕ್‌ ಆಫ್‌ ಆಗುವಾಗ ರನ್‌ವೇ ತುದಿಯಲ್ಲಿ ‍ಪತನಗೊಂಡು ಸಮೀಪದಲ್ಲಿದ್ದ ಐಸ್‌ಕ್ರೀಂ ಪಾರ್ಲರ್‌ಗೆ ಅಪ್ಪಳಿಸಿದ್ದರಿಂದ 22 ಮಂದಿ ಮೃತಪಟ್ಟಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.