ADVERTISEMENT

ಆಳ–ಅಗಲ | ಬಡತನದ ಸುಳಿಯಲ್ಲಿ ಭಾರತದ ಮಕ್ಕಳು: ಯುನಿಸೆಫ್‌ ವರದಿ

ಯುನಿಸೆಫ್‌ ಜಾಗತಿಕ ಮಕ್ಕಳ ಸ್ಥಿತಿಗತಿ ವರದಿ–2025ರಲ್ಲಿ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 23:30 IST
Last Updated 3 ಡಿಸೆಂಬರ್ 2025, 23:30 IST
   
ಭಾರತವನ್ನೂ ಒಳಗೊಂಡಂತೆ ಜಗತ್ತಿನಲ್ಲಿ ದೊಡ್ಡ ಸಂಖ್ಯೆಯ ಮಕ್ಕಳು ಬಡತನವನ್ನು ಎದುರಿಸುತ್ತಿದ್ದಾರೆ ಎಂದು ಯುನಿಸೆಫ್‌ ಜಾಗತಿಕ ಮಕ್ಕಳ ಸ್ಥಿತಿಗತಿ– 2025 ವರದಿ ತಿಳಿಸಿದೆ. ದಶಕದ ಹಿಂದಿನ ಅಂಕಿ ಅಂಶಗಳಿಗೆ ಹೋಲಿಸಿದರೆ ಜಾಗತಿಕ ಮಟ್ಟದಲ್ಲಿ ಕಡುಬಡ ಮಕ್ಕಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಆದರೆ, ಭಾರತದಲ್ಲಿ ಮಕ್ಕಳ ಬಹುಆಯಾಮದ ಬಡತನ ಪ್ರಮಾಣ ಈಗಲೂ ಗಣನೀಯವಾಗಿಯೇ ಇದೆ. ಇದು ಅವರ ಆರೋಗ್ಯ ಮತ್ತು ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಜಗತ್ತಿನಲ್ಲಿ 41.2 ಕೋಟಿ ಮಕ್ಕಳು ಕಡುಬಡತನಕ್ಕೆ ಗುರಿಯಾಗಿದ್ದು, ದಿನನಿತ್ಯದ ನೈರ್ಮಲ್ಯ ಮತ್ತು ಪೌಷ್ಟಿಕತೆಯಿಂದ ವಂಚಿತರಾಗಿದ್ದಾರೆ ಎಂದು ವರದಿ ಹೇಳಿದೆ

ಕಡಿಮೆ ಮತ್ತು ಕೆಳ–ಮಧ್ಯಮ ಆದಾಯದ ದೇಶಗಳ ಮಕ್ಕಳು ಬಡತನದಿಂದ ನರಳುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿಯ (ಯುನಿಸೆಫ್‌)ಇತ್ತೀಚಿನ ವರದಿ ತಿಳಿಸಿದೆ. ಜಗತ್ತಿನಲ್ಲಿ 41.2 ಕೋಟಿ ಮಕ್ಕಳು ಕಡುಬಡತನವನ್ನು ಎದುರಿಸುತ್ತಿದ್ದಾರೆ. ಭಾರತದಲ್ಲಿಯೂ ಬಡ ಮಕ್ಕಳ ಸಂಖ್ಯೆ ಹೆಚ್ಚೇ ಇದೆ ಎಂದು ವರದಿ ತಿಳಿಸಿದೆ.

ವರದಿಯು 130 ಕೆಳ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳ ಬಹುಆಯಾಮದ ದತ್ತಾಂಶವನ್ನು ವಿಶ್ಲೇಷಿಸಿದ್ದು, ಆರು ರೀತಿಯ ಸೌಲಭ್ಯಗಳ ಕೊರತೆಯನ್ನು ಪಟ್ಟಿ ಮಾಡಿದೆ. ಶಿಕ್ಷಣ, ಆರೋಗ್ಯ, ವಸತಿ, ಪೌಷ್ಟಿಕತೆ, ನೈರ್ಮಲ್ಯ ಮತ್ತು ಶುದ್ಧ ನೀರು. ಇವುಗಳ ಪೈಕಿ 41.7 ಕೋಟಿ ಮಕ್ಕಳು ಎರಡು ಮತ್ತು ಅದಕ್ಕಿಂತ ಹೆಚ್ಚಿನ ಕೊರತೆಗಳನ್ನು ಎದುರಿಸುತ್ತಿದ್ದಾರೆ.

ಜಾಗತಿಕವಾಗಿ ಇಂದಿಗೂ ಅನೇಕ ಮಕ್ಕಳು ಮೂಲಭೂತ ಅಗತ್ಯಗಳಿಂದ ವಂಚಿತರಾಗಿದ್ದಾರೆ. ಇವು ಅಸಮಾನತೆಯನ್ನು ಹೆಚ್ಚಿಸುತ್ತಿದ್ದು, ಬೆಳವಣಿಗೆಯನ್ನು ಕುಂಠಿತಗೊಳಿಸಿವೆ. ಇದು ಸಾಮಾಜಿಕ ವ್ಯವಸ್ಥೆಯನ್ನೂ ದುರ್ಬಲಗೊಳಿಸುತ್ತಿದ್ದು, ತಲೆಮಾರುಗಳ ಕಾಲ ಅದರ ಪರಿಣಾಮ ಇರುತ್ತದೆ ಎಂದು ವಿಶ್ಲೇಷಿಸಿದೆ. ಚಿಕ್ಕ ಮಕ್ಕಳು, ಅಂಗವಿಕಲರು ಮತ್ತು ಬಿಕ್ಕಟ್ಟುಗಳಲ್ಲಿ ಬದುಕುತ್ತಿರುವ ಮಕ್ಕಳು ಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ. ಹವಾಮಾನ ವೈಪರೀತ್ಯಗಳು, ರಾಜಕೀಯ ಬಿಕ್ಕಟ್ಟುಗಳು ಮತ್ತು ರಾಷ್ಟ್ರದ ಸಾಲವು ಕುಟುಂಬಗಳನ್ನು ಸಂಕಷ್ಟಕ್ಕೆ ದೂಡುತ್ತಿದ್ದು, ಕುಟುಂಬದ ದುಡಿಮೆಯನ್ನು ಮಕ್ಕಳಿಗೆ ಬಳಸುವುದಕ್ಕೆ ಆಸ್ಪದ ನೀಡುತ್ತಿಲ್ಲ. 

ADVERTISEMENT

ಭಾರತದಲ್ಲಿ ಬಡಮಕ್ಕಳು:

ಕಡುಬಡತನವು ಜಾಗತಿಕ ಮಟ್ಟದಲ್ಲಿ ಇಳಿಮುಖವಾಗುತ್ತಿದೆ. ಆದರೆ, ಭಾರತದಲ್ಲಿ ಬಹುಆಯಾಮದ ಬಡತನದಿಂದ ನರಳುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಿದೆ. ದೇಶದ 20.6 ಕೋಟಿ ಮಕ್ಕಳು ಆರು ಸವಲತ್ತುಗಳ ಪೈಕಿ ಕನಿಷ್ಠ ಒಂದರ ಕೊರತೆ ಎದುರಿಸುತ್ತಿದ್ದಾರೆ. ಈ ಪೈಕಿ ಮೂರನೇ ಒಂದರಷ್ಟು ಮಕ್ಕಳಿಗೆ ಎರಡು ಮತ್ತು ಅದಕ್ಕಿಂತ ಹೆಚ್ಚು ಕೊರತೆಗಳಿವೆ. ಜತೆಗೆ, ಪೌಷ್ಟಿಕತೆ, ಶಿಕ್ಷಣ, ಆರೋಗ್ಯ, ವಸತಿ ಮತ್ತು ನೈರ್ಮಲ್ಯ ಈ ಎಲ್ಲ ವಲಯಗಳಲ್ಲಿಯೂ ಉತ್ತಮಿಕೆಯ ಅಗತ್ಯವಿದೆ ಎಂದು ವರದಿ ಎಚ್ಚರಿಸಿದೆ.

ಭಾರತದಲ್ಲಿ 2013-2014 ಮತ್ತು 2022-2023ರ ನಡುವೆ ಬಹುಆಯಾಮದ ಬಡತನ ಪ್ರಮಾಣವು ಶೇ 29.2ರಿಂದ ಶೇ 11.3ಕ್ಕೆ ಇಳಿದಿದ್ದು, 24.8 ಕೋಟಿ ಮಂದಿಯನ್ನು ಬಡತನದಿಂದ ಮುಕ್ತಗೊಳಿಸಲಾಗಿದೆ ಎಂದು ನೀತಿ ಆಯೋಗದ ವರದಿ ಹೇಳಿತ್ತು. ಆದರೆ, ಬಡತನದ ಹೆಚ್ಚಿನ ಪರಿಣಾಮಗಳಿಗೆ ಮಕ್ಕಳು ಗುರಿಯಾಗುತ್ತಲೇ ಇದ್ದಾರೆ. 

ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆಯ ದೇಶವಾಗಿದೆ. ಆದರೆ, ಬಡ ಮಕ್ಕಳು ಹೆಚ್ಚಾಗಿರುವುದರಿಂದ ಜನಸಂಖ್ಯೆ ಹೆಚ್ಚಳದ ಪ್ರಯೋಜನಗಳನ್ನು ಪಡೆಯುವುದು ಕಷ್ಟಕರವಾಗಿ ಪರಿಣಮಿಸಿದೆ. ದೇಶದಲ್ಲಿ ಕುಂಠಿತ ಬೆಳವಣಿಗೆಯ ಮತ್ತು ಕಡಿಮೆ ತೂಕದ ಮಕ್ಕಳು ಹೆಚ್ಚಾಗಿದ್ದಾರೆ. ಹಸಿವು ಮುಕ್ತವಾಗಿರುವುದು, ಶಿಕ್ಷಣ, ಆರೋಗ್ಯ ಪಡೆಯುವುದು ದೇಶದ ಪ್ರತಿಯೊಬ್ಬ ಮಗುವಿನ ಹಕ್ಕಾಗಿದೆ. ಮಕ್ಕಳಿಗೆ ಮೂಲಭೂತ ಅಗತ್ಯಗಳನ್ನು ಪೂರೈಸುವುದು ಸರ್ಕಾರಗಳ ಕರ್ತವ್ಯವಾಗಿದೆ. ಇದಕ್ಕಾಗಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಆದರೆ, ಸಮಸ್ಯೆಯ ತೀವ್ರತೆ ಹೆಚ್ಚಾಗಿದೆ, ಅವು ಸಾಲದಾಗಿವೆ. 

ಕುಸಿಯುತ್ತಿರುವ ಅನುದಾನ:

2025–26ರ ಕೇಂದ್ರ ಬಜೆಟ್‌ನಲ್ಲಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ₹26,890 ಕೋಟಿ ಮೀಸಲಿಡಲಾಗಿದೆ. ಮಕ್ಕಳ ಕಾರ್ಯಕ್ರಮಗಳೂ ಇದರ ವ್ಯಾಪ್ತಿಯಲ್ಲಿಯೇ ಬರುತ್ತವೆ. ಆದರೆ, 2015-2016ರಲ್ಲಿ ಕೇಂದ್ರದ ವೆಚ್ಚದಲ್ಲಿ ಸಚಿವಾಲಯದ ಪಾಲು ಶೇ 0.96ರಷ್ಟಿತ್ತು. 2025-2026ರಲ್ಲಿ ಅದು ಶೇ 0.5ರಷ್ಟು ಕುಸಿದಿದೆ. ಅಂದರೆ, 10 ವರ್ಷದಲ್ಲಿ ಮಕ್ಕಳ ಅಭಿವೃದ್ಧಿಗಾಗಿ ಮೀಸಲಿಡುವ ಹಣವು ಕುಸಿಯುತ್ತಲೇ ಸಾಗಿದೆ. 

ಒಟ್ಟಾರೆ ಬಡತನ ಮತ್ತು ಮಕ್ಕಳ ಬಡತನ ಎರಡೂ ಭಿನ್ನ. ಎರಡಕ್ಕೂ ಪ್ರತ್ಯೇಕ ಯೋಜನೆಗಳನ್ನು ರೂಪಿಸಬೇಕು. ನಿರ್ದಿಷ್ಟ ಕಾರ್ಯಕ್ರಮಗಳನ್ನು ರೂಪಿಸಿ, ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಮಕ್ಕಳ ಕಲ್ಯಾಣಕ್ಕಾಗಿ ಯುನಿಸೆಫ್ ಐದು ಅಂಶಗಳ ಕಾರ್ಯಕ್ರಮವನ್ನು ರೂಪಿಸಿದೆ ಮತ್ತು ಆರೋಗ್ಯ, ಕಲಿಕೆ, ರಕ್ಷಣೆ ಮತ್ತು ಸ್ವಚ್ಛ ವಾತಾವರಣದ ಬದುಕನ್ನು ಮಕ್ಕಳಿಗೆ ಖಾತರಿ ಪಡಿಸಬೇಕು ಎಂದು ಆಗ್ರಹಿಸಿದೆ. 

ವರದಿಯ ‍ಪ್ರಮುಖ ಅಂಶಗಳು
  • ಜಗತ್ತಿನಲ್ಲಿ ಐದು ಮಕ್ಕಳಲ್ಲಿ ಒಂದು ಮಗು ಕಡು ಬಡತನದ ಸ್ಥಿತಿಯನ್ನು ಎದುರಿಸುತ್ತಿದೆ

  • ಹವಾಮಾನ ಬದಲಾವಣೆ ಮತ್ತು ಸಂಘರ್ಷಗಳು ಹೆಚ್ಚು ಕುಟುಂಬಗಳನ್ನು ಬಡತನದತ್ತ ದೂಡುತ್ತಿವೆ

  • ಪ್ರತಿ ವರ್ಷ ಐವರು ಮಕ್ಕಳಲ್ಲಿ ನಾಲ್ವರು ಒಂದಲ್ಲ ಒಂದು ರೀತಿಯ ಹವಾಮಾನ ವಿಕೋಪದ ಪರಿಣಾಮವನ್ನು ಎದುರಿಸುತ್ತಿದ್ದಾರೆ

  • 2024ರಲ್ಲಿ ಐವರು ಮಕ್ಕಳಲ್ಲಿ ಒಂದು ಮಗು ಸಂಘರ್ಷಪೀಡಿತ ಪ್ರದೇಶದಲ್ಲಿ ವಾಸಿಸುತ್ತಿತ್ತು 

  • ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಆರ್ಥಿಕ ಪ್ರಗತಿ ಕುಂಠಿತವಾಗುತ್ತಿದೆ. ಇದರಿಂದ ಮಕ್ಕಳ ಅಭಿವೃದ್ಧಿ ಕಾರ್ಯಕ್ರಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅಭಿವೃದ್ಧಿಗಾಗಿ ನೀಡುತ್ತಿರುವ ನೆರವಿನಲ್ಲಿ ಕಡಿತವಾಗುತ್ತಿದೆ. ಇದರಿಂದಾಗಿ 2030ರ ಹೊತ್ತಿಗೆ ಪ್ರ‍ಪಂಚದಲ್ಲಿ ಐದು ವರ್ಷದೊಳಗಿನ 45 ಲಕ್ಷ ಮಕ್ಕಳ ಜೀವಕ್ಕೆ ಕುತ್ತು ಉಂಟಾಗಲಿದೆ. ಕಲಿಕೆಯ ಮೇಲೂ ಇದು ಪರಿಣಾಮ ಬೀರಲಿದ್ದು, 2026ರ ಹೊತ್ತಿಗೆ ಜಾಗತಿಕವಾಗಿ 60 ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿಯಲಿದ್ದಾರೆ

  • ಬಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಸಾಲದ ಸುಳಿಗೆ ಸಿಲುಕಿವೆ. 45 ಪ್ರಗತಿಶೀಲ ರಾಷ್ಟ್ರಗಳು ಆರೋಗ್ಯ ಕ್ಷೇತ್ರಕ್ಕೆ ಮಾಡುತ್ತಿರುವ ವೆಚ್ಚಕ್ಕಿಂತಲ್ಲೂ ಹೆಚ್ಚು ಮೊತ್ತವನ್ನು ಸಾಲದ ಬಡ್ಡಿಗೆ ಪಾವತಿಸುತ್ತಿವೆ. 22 ದೇಶಗಳು ಶಿಕ್ಷಣಕ್ಕೆ ಮೀಸಲಿಡುತ್ತಿರುವುದಕ್ಕಿಂತಲೂ ಹೆಚ್ಚಿನ ಹಣವನ್ನು ಸಾಲದ ಬಡ್ಡಿಯಾಗಿ ಪಾವತಿಸುತ್ತಿವೆ. ಮಕ್ಕಳ ಅಭಿವೃದ್ಧಿಗೆ ಹೆಚ್ಚಿನ ಹೂಡಿಕೆ ಮಾಡುವ ರಾಷ್ಟ್ರಗಳ ಸಾಮರ್ಥ್ಯವನ್ನು ಇದು ಕುಗ್ಗಿಸುತ್ತಿದೆ

ಪರಿಹಾರವೇನು?

ಮಕ್ಕಳು ಎದುರಿಸುತ್ತಿರುವ ಬಡತನವನ್ನು ನಿವಾರಿಸುವುದಕ್ಕಾಗಿ ಕೈಗೊಳ್ಳಬೇಕಾದ ಪರಿಹಾರೋಪಾಯಗಳನ್ನೂ ಯುನಿಸೆಫ್‌ ತನ್ನ ವರದಿಯಲ್ಲಿ ಪಟ್ಟಿ ಮಾಡಿದೆ. ಮಕ್ಕಳ ಸ್ಥಿತಿಗತಿ ಸುಧಾರಣೆ ಕಂಡ ರಾಷ್ಟ್ರಗಳಲ್ಲಿ ಅಲ್ಲಿನ ಆಡಳಿತಗಳು ಅನುಸರಿಸಿರುವ ನೀತಿಗಳನ್ನು ಸಾಕ್ಷ್ಯಗಳನ್ನಾಗಿ ಇಟ್ಟುಕೊಂಡು ಪ್ರಮುಖವಾಗಿ ಐದು ಶಿಫಾರಸುಗಳನ್ನು ಯುನಿಸೆಫ್‌ ಮಾಡಿದೆ. ಅವುಗಳನ್ನು ಆಧಾರ ಸ್ತಂಭಗಳು (ಪಿಲ್ಲರ್‌) ಎಂದು ಅದು ಕರೆದಿದೆ. 

1. ಮಕ್ಕಳ ಬಡತನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದನ್ನು ರಾಷ್ಟ್ರೀಯ ಆದ್ಯತೆಯ ವಿಷಯವನ್ನಾಗಿ ಪರಿಗಣಿಸಬೇಕು

2. ವಿತ್ತೀಯ ಅವಕಾಶಗಳನ್ನು ಸೃಷ್ಟಿಸಬೇಕು ಮತ್ತು ಆರ್ಥಿಕ ‍ಪರಿಸ್ಥಿತಿಗೆ ಪೂರಕವಾಗಿರುವ ನೀತಿಗಳನ್ನು ರೂಪಿಸಬೇಕು. ಸಾಲದ ಮೇಲಿನ ಬಡ್ಡಿದರದಲ್ಲಿ ಆಗುವ ಬದಲಾವಣೆಯು ಕುಟುಂಬಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಕೇಂದ್ರೀಯ ಬ್ಯಾಂಕುಗಳು ಮೌಲ್ಯಮಾಪನ ಮಾಡಬೇಕು. ಮಕ್ಕಳಿಗೆ ಸಂಬಂಧಿಸಿದಂತೆ ಮಾಡುವ ವೆಚ್ಚಗಳನ್ನು ರಕ್ಷಿಸುವಂತಹ ಕಾನೂನಿನ ಚೌಕಟ್ಟುಗಳನ್ನು ರೂಪಿಸಬೇಕು. ಮಕ್ಕಳಿಗೆ ಪೂರಕವಾದ ಬಜೆಟ್‌ ಮತ್ತು ಉತ್ತರದಾಯಿತ್ವವನ್ನು ಬೆಂಬಲಿಸುವ ಪಾರದರ್ಶಕ ವ್ಯವಸ್ಥೆಯ ಅಗತ್ಯವಿದೆ

3. ಎಲ್ಲರನ್ನೂ ಒಳಗೊಳ್ಳುವ ಸಾಮಾಜಿಕ ರಕ್ಷಣಾ ಯೋಜನೆಗಳನ್ನು ಇನ್ನಷ್ಟು ವಿಸ್ತರಿಸಬೇಕು. ಸಾರ್ವತ್ರಿಕ, ಕುಟುಂಬ ಗುರಿ ಆಧಾರಿತ ಹಾಗೂ ಮಕ್ಕಳಿಗೆ ಅನುಕೂಲ ಕಲ್ಪಿಸುವ ಯೋಜನೆಗಳು ಮಕ್ಕಳ ಪೌಷ್ಟಿಕತೆ, ಆರೋಗ್ಯ ಮತ್ತು ಶಾಲಾ ಹಾಜರಾತಿಯನ್ನು ಹೆಚ್ಚಿಸುವ ಮೂಲಕ ಮಕ್ಕಳ ಬಡತನ ಪ್ರಮಾಣವನ್ನು ಕಡಿಮೆ ಮಾಡಿದ ಉದಾಹರಣೆಗಳು ಜಗತ್ತಿನಲ್ಲಿ ಸಾಕಷ್ಟಿವೆ. ಇಂತಹ ಕಾರ್ಯಕ್ರಮಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು

4. ಶಿಕ್ಷಣ, ಆರೋಗ್ಯ, ಶುದ್ಧ ನೀರು, ನೈರ್ಮಲ್ಯ, ಪೌಷ್ಟಿಕತೆ, ಮಾಹಿತಿ, ವಸತಿ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಸಾರ್ವಜನಿಕ ಸೇವೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು

5. ಮಕ್ಕಳ ಪೋಷಕರು ಆರ್ಥಿಕವಾಗಿ ಸುಭದ್ರರಾಗಿರುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಪೋಷಕರಿಗೆ ಉದ್ಯೋಗ ನೀಡಬೇಕು. ಅವರಿಗೆ ಕನಿಷ್ಠ ವೇತನ, ಪ್ರೋತ್ಸಾಹ ಧನ ನೀಡುವ ವ್ಯವಸ್ಥೆ, ಅಸಂಘಟಿತ ವಲಯದವರಿಗೂ ಸಾಮಾಜಿಕ ಭದ್ರತಾ ಯೋಜನೆಗಳನ್ನು ವಿಸ್ತರಿಸುವುದು ಮುಂತಾದ ಶಾಸನಬದ್ಧವಾದ ನೀತಿಗಳನ್ನು ಜಾರಿಗೊಳಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.