ADVERTISEMENT

ವಿದೇಶ ವಿದ್ಯಮಾನ | ಟ್ರಂಪ್ ಆಡಳಿತಕ್ಕೆ 1 ವರ್ಷ: ತಾಳ್ಯಾಕ ತಂತ್ಯಾಕ; ಜಗದ ಹಂಗ್ಯಾಕ

ಸೂರ್ಯನಾರಾಯಣ ವಿ.
ಬಿ.ವಿ. ಶ್ರೀನಾಥ್
Published 22 ಜನವರಿ 2026, 0:00 IST
Last Updated 22 ಜನವರಿ 2026, 0:00 IST
<div class="paragraphs"><p>ಡೊನಾಲ್ಡ್ ಟ್ರಂಪ್.</p></div>

ಡೊನಾಲ್ಡ್ ಟ್ರಂಪ್.

   
ತಮ್ಮ ಮಾತು ಎಲ್ಲರೂ ಕೇಳಬೇಕು ಎನ್ನುವುದು ಅವರ ಬಯಕೆ. ಮಾತು ಕೇಳದಿದ್ದರೆ, ಅಂಥ ದೇಶದ ಮೇಲೆ ಸುಂಕದ ಅಸ್ತ್ರ ಝಳಪಿಸುತ್ತಾರೆ. ದಿಢೀರ್ ಆಗಿ ಸುಂಕದ ಪ್ರಮಾಣವನ್ನು ಹತ್ತಾರು ಪಟ್ಟು ಹೆಚ್ಚಿಸುತ್ತಾರೆ. ನಂತರ ಅದನ್ನು ಇಳಿಸುತ್ತಾರೆ, ತಡೆಯುತ್ತಾರೆ, ಮುಂದೂಡುತ್ತಾರೆ. ಒಮ್ಮೆ ಉಕ್ರೇನ್ ಮೇಲೆ ಕೆಂಡಾಮಂಡಲರಾಗಿ ಕೂಗಾಡುತ್ತಾರೆ. ಮತ್ತೊಮ್ಮೆ ಅನಾಥನನ್ನು ಎಳೆದು ಎದೆಗಪ್ಪಿಕೊಳ್ಳುವಂತೆ ಪ್ರೀತಿ ತೋರುತ್ತಾರೆ. ‘ಮೋದಿ ನನ್ನ ಸ್ನೇಹಿತರು’ ಎನ್ನುತ್ತಾರೆ. ಆದರೆ, ಭಾರತದ ಮೇಲೆ ಸುಂಕದ ಪ್ರಮಾಣವನ್ನು ಏರಿಸುತ್ತಲೇ ಇದ್ದಾರೆ.

ಜನವರಿ 20ಕ್ಕೆ (ಮಂಗಳವಾರ) ಡೊನಾಲ್ಡ್ ಟ್ರಂಪ್ ಅವರು ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷ ತುಂಬಿದೆ. ಚುನಾವಣೆಯಲ್ಲಿ ಗೆದ್ದ ನಂತರ, ಅಧಿಕೃತವಾಗಿ ಅಧಿಕಾರ ಸ್ವೀಕರಿಸುವುದಕ್ಕೂ ಮುಂಚೆಯೇ ಅವರು ಈ ಬಾರಿಯ ತಮ್ಮ ಆಡಳಿತ ಭಿನ್ನವಾಗಿರುವ ಸೂಚನೆಗಳನ್ನು ನೀಡಿದ್ದರು. ಶ್ವೇತಭವನದ ಮೆಟ್ಟಿಲು ಹತ್ತಿದ ದಿನದಿಂದ ಅವರು ತಮ್ಮ ಅನಿರೀಕ್ಷಿತ ನಿರ್ಧಾರಗಳು, ಅಚ್ಚರಿಯ ಘೋಷಣೆಗಳು, ಊಹೆ ಮಾಡಲಾಗದ ನಿಲುವುಗಳನ್ನು ಪ್ರಕಟಿಸುತ್ತಲೇ ಇದ್ದಾರೆ.    

ಅಮೆರಿಕದ ಅಧ್ಯಕ್ಷರಾಗಿದ್ದರೂ ಟ್ರಂಪ್‌ ಅವರ ಚಟುವಟಿಕೆ ಮತ್ತು ಕ್ರಮಗಳು ಅಮೆರಿಕಕ್ಕೆ ಮಾತ್ರ ಸೀಮಿತವಾಗಿಲ್ಲ. ಇಡೀ ಜಗತ್ತೇ ತಮ್ಮ ಪ್ರಯೋಗ ಶಾಲೆ ಎನ್ನುವಂತೆ ಭಾವಿಸಿದ್ದಾರೆ.

ADVERTISEMENT

ತಮ್ಮ ಮಾತು ಎಲ್ಲರೂ ಕೇಳಬೇಕು ಎನ್ನುವುದು ಅವರ ಬಯಕೆ. ಮಾತು ಕೇಳದಿದ್ದರೆ, ಅಂಥ ದೇಶದ ಮೇಲೆ ಸುಂಕದ ಅಸ್ತ್ರ ಝಳಪಿಸುತ್ತಾರೆ. ದಿಢೀರ್ ಆಗಿ ಸುಂಕದ ಪ್ರಮಾಣವನ್ನು ಹತ್ತಾರು ಪಟ್ಟು ಹೆಚ್ಚಿಸುತ್ತಾರೆ. ನಂತರ ಅದನ್ನು ಇಳಿಸುತ್ತಾರೆ, ತಡೆಯುತ್ತಾರೆ, ಮುಂದೂಡುತ್ತಾರೆ. ಒಮ್ಮೆ ಉಕ್ರೇನ್ ಮೇಲೆ ಕೆಂಡಾಮಂಡಲರಾಗಿ ಕೂಗಾಡುತ್ತಾರೆ. ಮತ್ತೊಮ್ಮೆ ಅನಾಥನನ್ನು ಎಳೆದು ಎದೆಗಪ್ಪಿಕೊಳ್ಳುವಂತೆ ಪ್ರೀತಿ ತೋರುತ್ತಾರೆ. ‘ಮೋದಿ ನನ್ನ ಸ್ನೇಹಿತರು’ ಎನ್ನುತ್ತಾರೆ. ಆದರೆ, ಭಾರತದ ಮೇಲೆ ಸುಂಕದ ಪ್ರಮಾಣವನ್ನು ಏರಿಸುತ್ತಲೇ ಇದ್ದಾರೆ. ರಷ್ಯಾದಿಂದ ಕಡಿಮೆ ಬೆಲೆಗೆ ಸಿಗುವ ಇಂಧನ ಕೊಳ್ಳುವುದನ್ನು ಭಾರತ ಬಿಡಬೇಕು ಎಂದು ಠರಾವು ಹೊರಡಿಸುತ್ತಾರೆ. ಅಮೆರಿಕದಿಂದಲೇ ಶಸ್ತ್ರಾಸ್ತ್ರಗಳನ್ನು ಕೊಳ್ಳಬೇಕು ಎಂದು ಆದೇಶ ಹೊರಡಿಸಿ, ಒತ್ತಡ ತಂತ್ರ ಅನುಸರಿಸುತ್ತಾರೆ.

ಟ್ರಂಪ್ ಅವರು ಕೇವಲ ಮಾತಿಗೆ ಸೀಮಿತವಾಗಿಲ್ಲ. ಕೆಲವು ದೇಶಗಳಲ್ಲಿ ಭಾರಿ ತಲ್ಲಣವನ್ನೇ ಉಂಟುಮಾಡಿದ್ದಾರೆ. ರಾತ್ರೋರಾತ್ರಿ ವೆನೆಜುವೆಲಾದ ಅಧ್ಯಕ್ಷರ ಮನೆಗೆ ನುಗ್ಗಿ ಅವರನ್ನು ಅಮೆರಿಕಕ್ಕೆ ಹೊತ್ತೊಯ್ಯಲಾಗುತ್ತದೆ. ‘ನಾನೇ ವೆನೆಜುವೆಲಾ ಅಧ್ಯಕ್ಷ’ ಎಂದು ಘೋಷಣೆ ಮಾಡುತ್ತಾರೆ. ಎಂಟು ಯುದ್ಧಗಳನ್ನು ನಿಲ್ಲಿಸಿದೆ, ಜಗತ್ತಿನಲ್ಲಿ ಶಾಂತಿ ಸ್ಥಾಪಿಸಿದೆ ಎಂದು ಹೇಳುತ್ತಲೇ ಗ್ರೀನ್‌ಲ್ಯಾಂಡ್ ಸೇರಿದಂತೆ ಹಲವು ದೇಶಗಳ ಮೇಲೆ ಸೇನಾ ದಾಳಿ ನಡೆಸುವ ಸೂಚನೆ ನೀಡುತ್ತಾರೆ. ಟ್ರಂಪ್ ಅವರ ದೃಷ್ಟಿ ತಮ್ಮ ಮೇಲೆ ಬೀಳದಿರಲಿ ಎಂದು ಕೆಲವು ದೇಶಗಳ ನಾಯಕರು ಪ್ರಾರ್ಥಿಸುವಂತಾಗಿದೆ.

ಗಳಿಗೆಯಿಂದ ಗಳಿಗೆಗೆ ಅವರ ಮನಃಸ್ಥಿತಿ ಬದಲಾಗುತ್ತದೆ. ಅದನ್ನು ಅನುಸರಿಸಿ ಅವರ ಮಾತು, ಕ್ರಿಯೆ, ದೇಹಭಾಷೆ ಎಲ್ಲವೂ ಬದಲಾಗುತ್ತವೆ. ಸಾರ್ವಜನಿಕವಾಗಿ ಕೂಗಾಡಿದ, ಗೇಲಿ ಮಾಡಿದ, ಗಹಗಹಿಸಿ ನಕ್ಕ, ಸಿಟ್ಟಿನಿಂದ ಹೂಂಕರಿಸಿದ ಘಟನೆಗಳು ಅದೆಷ್ಟೋ. ವ್ಯಕ್ತಿಗಳ ಬಗ್ಗೆ ಆಗಲಿ, ದೇಶದ ಬಗ್ಗೆ ಆಗಲಿ, ಇಂಥದ್ದು ಮಾತಾಡಬಾರದು ಎನ್ನುವ ಗೆರೆಯನ್ನು ಅವರೆಂದೂ ಹಾಕಿಕೊಂಡಿಲ್ಲ. ಮನಸ್ಸು ಹರಿದಂತೆ, ನಾಲಿಗೆ ಹೊರಳಿದಂತೆ ವಾಕ್‌ಪ್ರಹಾರ ಹರಿಯುತ್ತದೆ. ಅವರ ಮಾತು, ಭಾಷೆ, ಹಾವಭಾವಗಳ ಬಗ್ಗೆ ಕೋಟ್ಯಂತರ ಮೀಮ್‌ಗಳು, ಎಐ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಟ್ರಂಪ್ ಅವರನ್ನು ಹೀಗೇ ಎಂದು ಯಾರೂ ಅಂದಾಜು ಮಾಡಲಾಗದು. ಎಲ್ಲವೂ ತಮ್ಮ ದೇಶದ ಹಿತಾಸಕ್ತಿ ಕಾಪಾಡಲು ಎನ್ನುವುದು ಅವರ ಸಮರ್ಥನೆ. ಅದನ್ನು ಅಲ್ಲಗಳೆಯಲಾಗದು. ಅವರನ್ನು ಕಡೆಗಣಿಸಲೂ ಆಗದು. ‘ವಿಶ್ವದ ದೊಡ್ಡಣ್ಣ’ ಎಂದು ಕರೆಸಿಕೊಳ್ಳುವ ದೇಶದಲ್ಲಿ ಜನರೇ ಎರಡನೇ ಬಾರಿಗೆ ಮತ ಹಾಕಿ, ಆರಿಸಿ ಕಳಿಸಿದ್ದಾರೆ. ಅಮೆರಿಕದ ಆಡಳಿತ ವ್ಯವಸ್ಥೆಯಲ್ಲಿಯೂ ಅವರು ಅನೇಕ ಬದಲಾವಣೆಗಳನ್ನು ಮಾಡಿದ್ದಾರೆ. ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವುದು ಅವರ ಶೈಲಿ. ಟ್ರಂಪ್ ಜನರ ಪಾಲಿಗೆ ಬಿಸಿತುಪ್ಪವಾಗಿದ್ದು, ಉಗುಳಲೂ ಆಗದ, ನುಂಗಲೂ ಆಗದ ಸ್ಥಿತಿ ಇದೆ. 

‘ಮನಶ್ಶಾಂತಿ’ ಕದಡಿದ ನೊಬೆಲ್‌ ಶಾಂತಿ ಪ್ರಶಸ್ತಿ

ಮೊದಲ ವರ್ಷದಲ್ಲೇ ಟ್ರಂಪ್‌ ಕಣ್ಣಿಟ್ಟಿದ್ದು ನೊಬೆಲ್‌ ಶಾಂತಿ ಪ್ರಶಸ್ತಿ ಮೇಲೆ. ಜಗತ್ತಿನ ಶಾಂತಿದೂತ ಎಂದು ತಮ್ಮನ್ನು ಬಿಂಬಿಸಿಕೊಂಡಿದ್ದ ಅವರು, ‘ನಾನು ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ. ನೊಬೆಲ್‌ ಶಾಂತಿ ಪ್ರಶಸ್ತಿ ನನಗೇ ಸಿಗಬೇಕು’ ಎಂದು ಪ್ರತಿಪಾದಿಸುತ್ತಾ ಬಂದಿದ್ದರು. ಪಾಕಿಸ್ತಾನ, ಇಸ್ರೇಲ್‌ ಸೇರಿದಂತೆ ಕೆಲವು ರಾಷ್ಟ್ರಗಳು ಟ್ರಂಪ್‌ ಅವರನ್ನು ನೊಬೆಲ್‌ ಶಾಂತಿ ಪ್ರಶಸ್ತಿಗೆ ಶಿಫಾರಸು ಮಾಡಿದ್ದವು. ಆದರೆ, ನಾರ್ವೆಯ ನೊಬೆಲ್‌ ಫೌಂಡೇಷನ್‌ ವೆನೆಜುವೆಲಾದ ವಿಪಕ್ಷ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರನ್ನು ಆಯ್ಕೆ ಮಾಡಿತು. ಮರುದಿನ ಮಾಧ್ಯಮದವರೊಂದಿಗೆ ಮಾತನಾಡಿದ್ದ ಟ್ರಂಪ್‌, ‘ಪ್ರಶಸ್ತಿಗೆ ಆಯ್ಕೆಯಾಗಿರುವ ವ್ಯಕ್ತಿ ನನಗೆ ಕರೆ ಮಾಡಿದ್ದರು. ನಿಮ್ಮ ಗೌರವಾರ್ಥ ನಾನು ಇದನ್ನು ಸ್ವೀಕರಿಸುತ್ತಿದ್ದೇನೆ. ನಿಜವಾಗಲೂ ಈ ಪ್ರಶಸ್ತಿಗೆ ನೀವು ಅರ್ಹರು ಎಂದು ಹೇಳಿದ್ದಾರೆ’ ಎಂದಿದ್ದರು. 

ವಾರದ ಹಿಂದೆ ಮಚಾದೊ, ಟ್ರಂಪ್‌ ಅವರಿಗೆ ನೊಬೆಲ್‌ ಶಾಂತಿ ಪ್ರಶಸ್ತಿಯನ್ನು ಹಸ್ತಾಂತರಿಸಿದ್ದರು. ಪ್ರಶಸ್ತಿಯನ್ನು ತಾವು ಸ್ವೀಕರಿಸುತ್ತಿರುವುದಾಗಿ ಅವರು ಹೇಳಿದ್ದರು. ಆದರೆ, ನೊಬೆಲ್‌ ಫೌಂಡೇಷನ್‌, ಒಬ್ಬರನ್ನು ಆಯ್ಕೆ ಮಾಡಿದ ನಂತರ ಪ್ರಶಸ್ತಿಯನ್ನು ಬೇರೆಯವರಿಗೆ ನೀಡುವ ಹಾಗಿಲ್ಲ ಎಂದು ಹೇಳಿತ್ತು. ಇದಕ್ಕೆ ಅಸಮಾಧಾನಗೊಂಡಿದ್ದ ಟ್ರಂಪ್‌ ನಾರ್ವೆ ಅಧ್ಯಕ್ಷರಿಗೆ ಪತ್ರ ಬರೆದು, ‘ಎಂಟಕ್ಕೂ ಹೆಚ್ಚು ಯುದ್ಧಗಳನ್ನು ನಿಲ್ಲಿಸಿದ ನನಗೆ ನೀವು ನೋಬೆಲ್ ಶಾಂತಿ ಪ್ರಶಸ್ತಿ ಕೊಡಬಾರದು ಎಂದು ತೀರ್ಮಾನಿಸಿರುವುದರಿಂದ, ನಾನು ಇನ್ನು ಮುಂದೆ ಕೇವಲ ಶಾಂತಿಯ ಬಗ್ಗೆಯೇ ಯೋಚಿಸಬೇಕೆಂದೇನೂ ಇಲ್ಲ. ಹಾಗಿದ್ದರೂ, ಅದು ಯಾವಾಗಲೂ ನನಗೆ ಪ್ರಮುಖ ವಿಷಯವಾಗಿರಲಿದೆ. ಆದರೆ, ಇನ್ನೀಗ ಅಮೆರಿಕಕ್ಕೆ ಯಾವುದು ಒಳ್ಳೆಯದು ಎಂಬುದರ ಬಗ್ಗೆ ನಾನು ಯೋಚಿಸಬಹುದು’ ಎಂದು ಹೇಳಿ ಗ್ರೀನ್‌ಲ್ಯಾಂಡ್‌ ಅಮೆರಿಕಕ್ಕೆ ಯಾಕೆ ಮುಖ್ಯ ಎಂಬುದನ್ನು ವಿವರಿಸಿದ್ದರು! 

ಯುದ್ಧ ಸ್ಥಗಿತ: 70 ಬಾರಿ ಜಪ

2025ರ ಮೇ 7ರಿಂದ 10ರವರೆಗೆ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದಿದ್ದ ಯುದ್ಧವನ್ನು ನಿಲ್ಲಿಸಿದ್ದು ತಾವೇ ಎಂದು ಟ್ರಂಪ್‌ ಅವರು ಒಂಬತ್ತು ತಿಂಗಳಲ್ಲಿ 70 ಬಾರಿ ಹೇಳಿದ್ದಾರೆ. ಪಾಕಿಸ್ತಾನವು ಇದನ್ನು ಅನುಮೋದಿಸಿ, ಟ್ರಂಪ್‌ ಅವರಿಗೆ ನೊಬೆಲ್‌ ಶಾಂತಿ ಪ್ರಶಸ್ತಿ ನೀಡಬೇಕು ಎಂದು ಶಿಫಾರಸು ಮಾಡಿದ್ದರೂ, ಭಾರತವು ಟ್ರಂಪ್‌ ಅವರ ಮಧ್ಯಪ್ರವೇಶವನ್ನು ನಿರಾಕರಿಸುತ್ತಲೇ ಬಂದಿದೆ. ಶಾಂತಿ ಪ್ರಶಸ್ತಿಯ ವಿಷಯ ಬಂದಾಗಲೆಲ್ಲ ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಸಂಘರ್ಷವನ್ನು ಪ್ರಸ್ತಾಪಿಸುವ ಅವರು, ‘ಸುಂಕ ಹೇರಿಕೆಯ ಒತ್ತಡವನ್ನು ಹಾಕಿ ಸಂಭವನೀಯ ಪರಮಾಣು ಸಂಘರ್ಷವನ್ನು ತಡೆದಿದ್ದೇನೆ’ ಎಂದು ಹೇಳುತ್ತಾ ಬಂದಿದ್ದಾರೆ.

ಅವರ ಮಾತನ್ನು ಒಪ್ಪದಿರುವುದಕ್ಕೆ ಭಾರತದ ಮೇಲೆ ಅಸಮಾಧಾನವನ್ನೂ ಹೊಂದಿದ್ದಾರೆ. ತಮ್ಮನ್ನು ಹೊಗಳಿದ  ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸೀಂ ಮುನೀರ್‌ ಅವರನ್ನು ಅಮೆರಿಕಕ್ಕೆ ಆಹ್ವಾನಿಸಿ ಔತಣವನ್ನೂ ನೀಡಿದ್ದಾರೆ.

ಗ್ರೀನ್‌ಲ್ಯಾಂಡ್‌ ಮೇಲೆ ಕಣ್ಣು

ಡೆನ್ಮಾರ್ಕ್‌ನ ಅಧೀನದಲ್ಲಿರುವ ಹಿಮದ್ವೀಪ ಗ್ರೀನ್‌ಲ್ಯಾಂಡ್‌ ಮೇಲೆ ಮೊದಲಿನಿಂದಲೂ ಟ್ರಂಪ್‌ ಕಣ್ಣಿಟ್ಟಿದ್ದಾರೆ. ವೆನೆಜುವೆಲಾದ ಮೇಲೆ ಸೇನಾ ಕಾರ್ಯಾಚರಣೆ ನಡೆಸಿ ಅಲ್ಲಿನ ಅಧ್ಯಕ್ಷ ನಿಕೊಲಸ್‌ ಮಡೂರೊ ಅವರನ್ನು ಸೆರೆ ಹಿಡಿದು ಕರೆತಂದ ನಂತರ ಗ್ರೀನ್‌ಲ್ಯಾಂಡ್‌ ಅನ್ನು ವಶಕ್ಕೆ ಪಡೆಯುವ ಅವರ ಹೆಬ್ಬಯಕೆ ಇನ್ನಷ್ಟು ತೀವ್ರಗೊಂಡಿದೆ. ವಾರದಿಂದೀಚೆಗೆ ಅವರು ಹೋದಲ್ಲಿ ಬಂದಲ್ಲಿ ಗ್ರೀನ್‌ಲ್ಯಾಂಡ್‌ನ ಜಪ ಮಾಡುತ್ತಿದ್ದಾರೆ. ಅಮೆರಿಕದ ಪ್ರಯತ್ನಕ್ಕೆ ವಿರೋಧ ವ್ಯಕ್ತಪಡಿಸಿದ ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರಗಳ ಮೇಲೆ ಹೆಚ್ಚುವರಿ ಸುಂಕದ ಬರೆ ಎಳೆದಿದ್ದಾರೆ. ಕೆನಡಾ, ವೆನೆಜುವೆಲಾ ಮತ್ತು ಗ್ರೀನ್‌ಲ್ಯಾಂಡ್‌ ಕೂಡ ಅಮೆರಿಕಕ್ಕೆ ಸೇರಿದ್ದು ಎನ್ನುವ ಅರ್ಥ ಬರುವ, ಅವುಗಳ ಮ್ಯಾಪ್‌ನಲ್ಲಿ ಅಮೆರಿಕದ ಧ್ವಜದ ಬಣ್ಣಗಳನ್ನು ಬಳಿದಿರುವ ಎಐ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಗ್ರೀನ್‌ಲ್ಯಾಂಡ್‌: ‘ಅಮೆರಿಕದ ಭೂಭಾಗ, ಸ್ಥಾಪನೆ 2026’ ಎಂದು ಫಲಕದಲ್ಲಿ ಬರೆದು ಟ್ರಂಪ್‌ ಅವರು ಅಮೆರಿಕದ ಧ್ವಜವನ್ನು ಗ್ರೀನ್‌ಲ್ಯಾಂಡ್‌ನಲ್ಲಿ ನೆಡುತ್ತಿರುವ ಎಐ ಚಿತ್ರವನ್ನೂ ಹಂಚಿಕೊಂಡಿದ್ದಾರೆ. ‌

365 ದಿನಗಳಲ್ಲಿ 365 ಗೆಲುವು

ಒಂದು ವರ್ಷದಲ್ಲಿ ಟ್ರಂಪ್‌ ಆಡಳಿತ ಕೈಗೊಂಡ ಕ್ರಮಗಳ ಪಟ್ಟಿಯನ್ನು ಶ್ವೇತಭವನ ಬಿಡುಗಡೆ ಮಾಡಿದೆ. ‘365 ದಿನಗಳಲ್ಲಿ 365 ಗೆಲುವು’ ಎಂಬ ತಲೆಬರಹದ ಅಡಿಯಲ್ಲಿ 365 ಸಾಧನೆಗಳನ್ನು ಪಟ್ಟಿ ಮಾಡಲಾಗಿದೆ. ವಲಸಿಗರು, ಕ್ರಿಮಿನಲ್‌ಗಳು, ಮಾದಕ ದ್ರವ್ಯ ಕಳ್ಳಸಾಗಣೆ ವಿರುದ್ಧ ಕೈಗೊಂಡ ಕ್ರಮಗಳು, ಜಾಗತಿಕ ಮಟ್ಟದಲ್ಲಿ ಅಮೆರಿಕದ ನಾಯಕತ್ವ, ಅರ್ಥವ್ಯವಸ್ಥೆ ಸುಧಾರಣೆಗೆ ತೆಗೆದುಕೊಂಡ ನಿರ್ಧಾರಗಳು, ಅನಗತ್ಯ ವೆಚ್ಚಕ್ಕೆ ನಿಯಂತ್ರಣ, ದೇಶದಲ್ಲಿ ಉದ್ಯೋಗ ಸೃಷ್ಟಿ, ಅಮೆರಿಕದ ನಾಗರಿಕರ ಜೀವನ ಸುಧಾರಣೆಗೆ ಒತ್ತು, ಸೇನೆಯ ಬಲವರ್ಧನೆ... ಸೇರಿದಂತೆ ಹಲವು ವಿಚಾರಗಳು ಇದರಲ್ಲಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಸ್ಥಗಿತಗೊಂಡಿದ್ದು ಕೂಡ ಈ ಪಟ್ಟಿಯಲ್ಲಿ (144ನೆಯದ್ದು) ಸ್ಥಾನ ಪಡೆದಿದೆ.  

ಟ್ರಂಪ್ ವಿಚಿತ್ರ ಹೇಳಿಕೆಗಳು

* ‘ಟ್ರಂಪ್ ಯಾವುದರ ಬಗ್ಗೆ ಏನು ಹೇಳಿದರೂ ಅದು ಸರಿಯಾಗಿರುತ್ತೆ. ಸರಿ ತಾನೇ?’

* ‘ಸರ್ಕಾರದ ಇಲಾಖೆ, ವಾಣಿಜ್ಯ ಇಲಾಖೆ ಅಥವಾ ಬೊಕ್ಕಸಕ್ಕೆ ನಾನು ಹೋದರೆ, ಅಲ್ಲಿ ಏನಾದರೂ ನನಗೆ ಇಷ್ಟವಾದರೆ, ಅದನ್ನು ತೆಗೆದುಕೊಳ್ಳಲು ನನಗೆ ಅನುಮತಿ ಇದೆ’

* ‘ಪೋಪ್ ಆಗಲು ನಾನು ಇಷ್ಟಪಡುತ್ತೇನೆ. ಅದು ನನ್ನ ಪ್ರಥಮ ಆಯ್ಕೆ’

(ಪೋಪ್ ಫ್ರಾನ್ಸಿಸ್ ಮೃತರಾದ ನಂತರ ಹೊಸ ಪೋಪ್‌ಗಾಗಿ ಹುಡುಕಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಹೇಳಿದ್ದು) 

* ‘ಸುಂಕ ಎನ್ನುವುದು ನನ್ನ ನೆಚ್ಚಿನ‍ ಪದ’

* ‘ಗಾಜಾವನ್ನು ಕೊಂಡುಕೊಳ್ಳಲು ಮತ್ತು ಅದರ ಮಾಲೀಕತ್ವ ಸಾಧಿಸಲು ನಾನು ಬದ್ಧನಾಗಿದ್ದೇನೆ’

* ‘ಕರೋಲಿನ್! ತಮ್ಮ ಸುಂದರ ಮುಖದೊಂದಿಗೆ ಆಕೆ ಎದ್ದುನಿಲ್ಲುತ್ತಾಳೆ ಮತ್ತು ಆಕೆಯ ಸುಂದರ ತುಟಿಗಳು ಮಷೀನ್ ಗನ್‌ನಂತೆ ನಿರಂತರವಾಗಿ, ತಡೆಯೇ ಇಲ್ಲದಂತೆ ಉಲಿಯುತ್ತಲೇ ಇರುತ್ತವೆ’

(ತಮ್ಮ ಮಾಧ್ಯಮ ಕಾರ್ಯದರ್ಶಿ ಕರೋಲಿನಾ ಲೀವಿಟ್ಟ ಟಿ.ವಿ ಶೋಗಳಲ್ಲಿ ಮಾತನಾಡುವ ಬಗ್ಗೆ)

* ‘ನಾನು ಏಳು ಯುದ್ಧಗಳನ್ನು ನಿಲ್ಲಿಸಿದ್ದೇನೆ. ಆ ಎಲ್ಲ ದೇಶಗಳ ನಾಯಕರೊಂದಿಗೂ ಮಾತನಾಡಿದ್ದೇನೆ. ಆದರೆ, ವಿಶ್ವಸಂಸ್ಥೆಯಿಂದ ನನಗೆ ಕನಿಷ್ಠ ಒಂದು ಫೋನ್ ಕರೆ ಕೂಡ ಬಂದಿಲ್ಲ’

(ಶಾಂತಿ ಮೂಡಿಸುವಲ್ಲಿ ವಿಶ್ವಸಂಸ್ಥೆಯಿಂದ ತಮಗೆ ಯಾವ ನೆರವೂ ಸಿಗಲಿಲ್ಲ ಎಂದು ವಿವರಿಸುವಾಗ ಹೇಳಿದ್ದು) 

* ‘ವಿಶ್ವಸಂಸ್ಥೆಯಿಂದ ನನಗೆ ಸಿಕ್ಕಿದ್ದು ಒಂದು ಕೆಟ್ಟುಹೋದ ಟೆಲಿಪ್ರಾಂಪ್ಟರ್ ಮತ್ತು ಅರ್ಧದಲ್ಲಿ ಕೆಟ್ಟುನಿಲ್ಲುವ ಎಸ್ಕಲೇಟರ್. ಅಮೆರಿಕದ ಮೊದಲ ಮಹಿಳೆ (ಟ್ರಂಪ್ ಪತ್ನಿ) ದೇಹದ ಆಕಾರ ಚೆನ್ನಾಗಿದೆ, ಇಲ್ಲದಿದ್ದರೆ ಕುಸಿದುಬೀಳುತ್ತಿದ್ದಳು. ನಮ್ಮಿಬ್ಬರ ಆಕಾರಗಳೂ ಚೆನ್ನಾಗಿವೆ’   

(ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಎಸ್ಕಲೇಟರ್ ಕೆಟ್ಟುನಿಂತಾಗ)

* ಆತ ಹಾಗೆ ಹೇಳಿದನೆ? ಇರಲಿ, ಅಷ್ಟಕ್ಕೂ ಆತ ಬರೋದು ಯಾರಿಗೂ ಬೇಡ ಬಿಡಿ. ಏಕೆಂದರೆ, ಶೀಘ್ರದಲ್ಲೇ ಆತ ಕುರ್ಚಿಯಿಂದ ಕೆಳಗಿಳಿಯುತ್ತಾನೆ. ಅವರ ವೈನ್ ಮತ್ತು ಶ್ಯಾಂಪೇನ್ ಮೇಲೆ ನಾನು ಶೇ 200 ಸುಂಕ ವಿಧಿಸುತ್ತೇನೆ. ಆಗ ಆತ ನಮ್ಮೊಂದಿಗೆ ಸೇರಲು ಬರುತ್ತಾನೆ. ಆಗ ಆತನನ್ನು ನಾವು ಸೇರಿಸಬೇಕಾಗಿಯೇನೂ ಇಲ್ಲ’   

(ತಾವು ಪ್ರಸ್ತಾಪಿಸಿರುವ ಶಾಂತಿ ಮಂಡಳಿಗೆ ಸೇರಲು ನಿರಾಕರಿಸಿದ ಫ್ರಾನ್ಸ್ ಅಧ್ಯಕ್ಷ್ಯ ಇಮ್ಯಾನುಯೆಲ್ ಮ್ಯಾಕ್ರನ್ ಹೇಳಿಕೆ ಬಗ್ಗೆ)

ಆಧಾರ: ರಾಯಿಟರ್ಸ್‌, ಪಿಟಿಐ, ದಿ.ನ್ಯೂಯಾರ್ಕ್‌ ಟೈಮ್ಸ್‌, ಎನ್‌ಬಿಸಿ, ಶ್ವೇತಭವನ ವೆಬ್‌ಸೈಟ್‌

ಟ್ರಂಪ್ ನೀತಿ: ಅಮೆರಿಕನ್ನರಲ್ಲಿ ಆತಂಕ

ಡೊನಾಲ್ಡ್‌  ಟ್ರಂಪ್‌ ಅವರ ನೀತಿಗಳು ಮತ್ತು ಅವರ ಆದ್ಯತೆಗಳು ಅಮೆರಿಕನ್ನರಲ್ಲಿ ಕಳವಳ ಉಂಟು ಮಾಡಿವೆ ಎಂದು ಸುದ್ದಿ ಸಂಸ್ಥೆ ಎಪಿ ಮತ್ತು ಷಿಕಾಗೊ ವಿಶ್ವವಿದ್ಯಾಲಯದ ಎನ್‌ಒಆರ್‌ಸಿ (ನ್ಯಾಷನಲ್‌ ಒಪಿನೀಯನ್‌ ರಿಸರ್ಚ್‌ ಸೆಂಟರ್‌) ನಡೆಸಿರುವ ಜಂಟಿ ಸಮೀಕ್ಷೆ ತಿಳಿಸಿದೆ. ಜನವರಿ ತಿಂಗಳ ಆರಂಭದಲ್ಲಿ ನಡೆಸಿರುವ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಜನರ ಪೈಕಿ ಶೇ 59 ಮಂದಿ ಅಧ್ಯಕ್ಷರಾಗಿ ಟ್ರಂಪ್‌ ಅವರ ಕೆಲಸ ತೃಪ್ತಿ ತಂದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಟ್ರಂಪ್‌ ಆಡಳಿತದಲ್ಲಿ ಅರ್ಥವ್ಯವಸ್ಥೆ ಇನ್ನಷ್ಟು ಹದಗೆಟ್ಟಿದೆ ಎಂದು ಜನರು ಅಭಿ‍ಪ್ರಾಯಪಟ್ಟಿದ್ದಾರೆ. ಹೊರದೇಶಗಳಿಂದ ಆಮದಾಗುವ ಉತ್ಪನ್ನಗಳ ಮೇಲೆ ಸುಂಕ ಹೆಚ್ಚಳ ಮಾಡಿರುವುದರಿಂದ ದಿನನಿತ್ಯದ ವೆಚ್ಚ ಹೆಚ್ಚಾಗಿದೆ ಎಂದು ಜನರು ಹೇಳಿದ್ದಾರೆ. ಟ್ರಂಪ್‌ ಆರ್ಥಿಕ ನಿರ್ವಹಣೆ ಸರಿಯಾಗಿಲ್ಲ ಎಂದು ಶೇ 62 ಮಂದಿ ಹೇಳಿದ್ದಾರೆ. ವಲಸೆ ವಿಚಾರದಲ್ಲಿ ಟ್ರಂಪ್‌ ನೀತಿಯನ್ನೂ ಜನರು ವಿರೋಧಿಸಿದ್ದಾರೆ. ವೆನೆಜುವೆಲಾ ವಿರುದ್ಧದ ಸೇನಾ ಕ್ರಮವನ್ನು ಶೇ 57 ಮಂದಿ ಸರಿಯಲ್ಲ ಎಂದಿದ್ದಾರೆ.

ಸಂಖ್ಯೆಗಳಲ್ಲಿ ಟ್ರಂಪ್‌ ವರ್ಷದ ಆಡಳಿತ

229: ಹೊರಡಿಸಿರುವ ಕಾರ್ಯಾದೇಶಗಳು. ಅಧಿಕಾರ ವಹಿಸಿಕೊಂಡ ದಿನವೇ 26 ಕಾರ್ಯಾದೇಶಕ್ಕೆ ಟ್ರಂಪ್‌ ಸಹಿ ಹಾಕಿದ್ದರು. ವರ್ಷದಲ್ಲಿ ಗರಿಷ್ಠ ಕಾರ್ಯಾದೇಶ ಹೊರಡಿಸಿರುವ ಎರಡನೇ ಅಧ್ಯಕ್ಷ ಇವರು. ಫ್ರಾಂಕ್ಲಿನ್‌ ಡಿ. ರೂಸ್‌ವೆಲ್ಟ್‌ ಅವರು ತಮ್ಮ ಮೂರನೇ ಅವಧಿಯಲ್ಲಿ ಎರಡನೇ ವಿಶ್ವ ಯುದ್ಧಕ್ಕೂ ಮೊದಲು ಒಂದೇ ವರ್ಷದಲ್ಲಿ 381 ಆದೇಶಗಳಿಗೆ ಸಹಿ ಹಾಕಿದ್ದರು 

88: ಕ್ಷಮಾದಾನ ನೀಡಿರುವುದು. ಮೊದಲ ದಿನವೇ ಆರು ಮಂದಿಗೆ ಅವರು ಕ್ಷಮಾದಾನ ನೀಡಿದ್ದರು

13: ವಿದೇಶ ಪ್ರವಾಸ 56: ದೇಶಿ ಪ್ರವಾಸ

100: ಭೇಟಿ ಮಾಡಿದ ಹೊರದೇಶಗಳ ನಾಯಕರು. ಈ ಪೈಕಿ 49 ಮಂದಿಯನ್ನು ಶ್ವೇತ ಭವನದಲ್ಲೇ ಅವರು ಭೇಟಿಯಾಗಿದ್ದಾರೆ

6.05 ಲಕ್ಷ: ಗಡಿಪಾರು ಮಾಡಿದ ಅಕ್ರಮ ವಲಸಿಗರು

19 ಲಕ್ಷ: ಸ್ವಯಂ ‍ಪ್ರೇರಿತರಾಗಿ ಗಡಿಪಾರುಗೊಂಡ ವಲಸಿಗರು

16 ಲಕ್ಷ: ಟ್ರಂಪ್‌ ವಲಸೆ ನೀತಿಯಿಂದ ಕಾನೂನು ಪ್ರಕಾರವಾಗಿ ಹೊಂದಿದ್ದ ವಲಸಿಗ ಸ್ಥಾನಮಾನ ಕಳೆದುಕೊಂಡವರು

66,886: ವಲಸೆ ಮತ್ತು ಕಸ್ಟಮ್ಸ್‌ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾದವರು 

7: ಬಾಂಬ್‌ ಹಾಕಿದ ದೇಶಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.