ADVERTISEMENT

ಆಳ–ಅಗಲ: ಉತ್ತರಾಖಂಡ ಯುಸಿಸಿಯಲ್ಲೇನಿದೆ?

​ಪ್ರಜಾವಾಣಿ ವಾರ್ತೆ
Published 26 ಜನವರಿ 2025, 22:30 IST
Last Updated 26 ಜನವರಿ 2025, 22:30 IST
   

ಮದುವೆ ಮತ್ತು ನೋಂದಣಿ

* ಪತಿ/ಪತ್ನಿತ್ವಕ್ಕೆ ನಿರ್ಬಂಧ: ಈ ಕಾನೂನು ಪುರುಷರು ಒಬ್ಬರಿಗಿಂತ ಹೆಚ್ಚು ಪತ್ನಿಯರನ್ನು ಮತ್ತು ಮಹಿಳೆಯರು ಒಬ್ಬರಿಗಿಂತ ಹೆಚ್ಚು ಗಂಡಂದಿರನ್ನು ಹೊಂದುವುದನ್ನು ನಿರ್ಬಂಧಿಸುತ್ತದೆ. ಕಾಯ್ದೆಯ ಸೆಕ್ಷನ್‌ (4)ರಲ್ಲಿ ಉಲ್ಲೇಖಿಸಿರುವ ಮೊದಲ ಷರತ್ತೇ ಇದನ್ನು ಪ್ರಸ್ತಾಪಿಸುತ್ತದೆ. ‘ಮದುವೆಯಾಗುವ ಸಂದರ್ಭದಲ್ಲಿ ಪುರುಷ ಅಥವಾ ಮಹಿಳೆಯು, ಗಂಡ ಅಥವಾ ಹೆಂಡತಿಯನ್ನು ಹೊಂದಿರಬಾರದು’ ಎಂದು ಅದು ಹೇಳುತ್ತದೆ.

*ಗಂಡು ಮತ್ತು ಹೆಣ್ಣಿನ ಮದುವೆ ವಯಸ್ಸಿನಲ್ಲಿ ಬದಲಾವಣೆ ಮಾಡಲಾಗಿಲ್ಲ. ಈಗ ಇರುವಂತೆಯೇ ಕನಿಷ್ಠ 21 ವರ್ಷ ವಯಸ್ಸಿನ ಹುಡುಗ ಮತ್ತು ಕನಿಷ್ಠ 18 ವರ್ಷದ ಹೆಣ್ಣು ವಿವಾಹ ಬಂಧನಕ್ಕೆ ಒಳ‍‍ಪಡಬಹುದು

*ಮದುವೆ ನೋಂದಣಿ ಕಡ್ಡಾಯ: ಯುಸಿಸಿಯು ವಿವಾಹ ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸಿದೆ. ರಾಜ್ಯದಲ್ಲಿ ನೆಲಸಿರುವ ಮತ್ತು ಹೊರರಾಜ್ಯದಲ್ಲಿ ನೆಲಸಿದ ರಾಜ್ಯದವರು ಕೂಡ ಮದುವೆಯಾದ 60 ದಿನಗಳ (ಎರಡು ತಿಂಗಳು) ಒಳಗಾಗಿ ತಮ್ಮ ವ್ಯಾಪ್ತಿಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಹಾಗಿದ್ದರೂ ನೋಂದಣಿ ಮಾಡದ ಮದುವೆಯನ್ನು ಈ ಕಾನೂನು ಅಮಾನ್ಯ ಮಾಡುವುದಿಲ್ಲ. ಆದರೆ, ನೋಂದಣಿ ಮಾಡದೇ ಇದ್ದರೆ, ₹10 ಸಾವಿರ ದಂಡ, ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಬಹುದು

ADVERTISEMENT

*ವಿವಾಹ ನೋಂದಣಿ ಸಮಯದಲ್ಲಿ ವಧು/ವರರು ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿದರೆ ₹25 ಸಾವಿರದವರೆಗೆ ದಂಡ ತೆರಬೇಕಾಗುತ್ತದೆ

*ಸಂಹಿತೆ ಜಾರಿಗೆ ಬರುವ ಮೊದಲೇ ಮದುವೆಯಾಗಿದ್ದವರು ಕೂಡ ಸಂಹಿತೆ ಜಾರಿಗೆ ಬಂದ ಆರು ತಿಂಗಳ ಒಳಗಾಗಿ  ಘೋಷಣಾ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಬೇಕು

*ಆಯಾ ಧರ್ಮದವರು, ಸಮುದಾಯದವರು ತಮ್ಮ ಧಾರ್ಮಿಕ ಸಂಪ್ರದಾಯ, ಸಂಸ್ಕೃತಿಯ ಅನುಸಾರ ಮದುವೆ ಮಾಡಿಕೊಳ್ಳುವುದಕ್ಕೆ ಕಾನೂನು ಅವಕಾಶ ಕಲ್ಪಿಸುತ್ತದೆ

* ಮದುವೆ ರೀತಿಯಲ್ಲಿಯೇ, ಸಂಹಿತೆ ಜಾರಿಗೆ ಬಂದ ನಂತರ ವಿಚ್ಛೇದನ ಆಗಿದ್ದರೆ, ಈ ಮಾಹಿತಿಯನ್ನು ಸರ್ಕಾರಕ್ಕೆ ತಿಳಿಸಿಬೇಕು ಎಂದು ಕಾಯ್ದೆಯ ಸೆಕ್ಷನ್‌ 11 (1) ಹೇಳುತ್ತದೆ 

ವಿಚ್ಛೇದನಕ್ಕೆ ಏನು ನಿಯಮ?

*ಕೋರ್ಟ್‌ನ ಆದೇಶವಿಲ್ಲದೇ ಯಾವ ಮದುವೆಯೂ ಅನೂರ್ಜಿತವಾಗದು. ನಿಯಮ ಉಲ್ಲಂಘಿಸಿದರೆ ಮೂರು ವರ್ಷಗಳ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ 

*ಸೆಕ್ಷನ್‌ 28ರ ಪ್ರಕಾರ, ಮದುವೆಯಾಗಿ ಕನಿಷ್ಠ ಒಂದು ವರ್ಷದವರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವಂತಿಲ್ಲ. ಒಂದು ವೇಳೆ ಅರ್ಜಿದಾರ ‘ತೀವ್ರ ಕಷ್ಟ ಅನುಭವಿಸಿದರೆ’ ಅಥವಾ ಪ್ರತಿವಾದಿಯು ‘ತೀರಾ ದುಷ್ಟತನ’ ತೋರ್ಪಡಿಸಿದ ಸಂದರ್ಭದಲ್ಲಿ ಒಂದು ವರ್ಷದ ಒಳಗಾಗಿ ಸಲ್ಲಿಸಿರುವ ವಿಚ್ಛೇದನ ಅರ್ಜಿಯನ್ನು ಪರಿಗಣಿಬಹುದು 

*ಯಾವೆಲ್ಲ ಕಾರಣಗಳಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಪಟ್ಟಿ ಮಾಡಲಾಗಿದ್ದು, ಅದರಲ್ಲಿ ಧಾರ್ಮಿಕ ಮತಾಂತರವನ್ನೂ (ಸೆಕ್ಷನ್‌ 25 (iv) ಒಂದು ಕಾರಣವಾಗಿ ಉಲ್ಲೇಖಿಸಲಾಗಿದೆ 

*ಮಗು ಇದ್ದ ದಂಪತಿ ವಿಚ್ಛೇದನ ಪಡೆದರೆ, ಮಗುವಿಗೆ ಐದು ವರ್ಷಗಳಾಗುವವರೆಗೆ ಅದು ತಾಯಿಯೊಂದಿಗೆ ಇರಬೇಕು

ಸಹ–ಜೀವನ ನೋಂದಣಿಯೂ ಕಡ್ಡಾಯ

*ಸಂಹಿತೆಯ ಸೆಕ್ಷನ್‌ 378 ಸಹ–ಜೀವನದ (ಲಿವ್‌ ಇನ್‌ ರಿಲೇಷನ್‌ಶಿಪ್‌) ಬಗ್ಗೆ ಪ್ರಸ್ತಾಪಿಸುತ್ತದೆ. ರಾಜ್ಯದವರು ಅಥವಾ ಹೊರಗಿನವರೇ ಆಗಿರಲಿ, ಯಾವುದೇ ಪುರುಷ ಮತ್ತು ಮಹಿಳೆಯು ಉತ್ತರಾಖಂಡದಲ್ಲಿ ಸಹ ಜೀವನ ನಡೆಸುತ್ತಿದ್ದರೆ ಅವರು ಆ ವ್ಯಾಪ್ತಿಯ ನೋಂದಣಾಧಿಕಾರಿಗಳ ಮುಂದೆ, ಸಹಜೀವನ ನಡೆಸಲು ಆರಂಭಿಸಿದ 30 ದಿನಗಳ ಒಳಗಾಗಿ ‘ಹೇಳಿಕೆ ದಾಖಲಿಸಬೇಕು’ (ಸೆಕ್ಷನ್‌ 381). ಅರ್ಥಾತ್‌ ನೋಂದಣಿ ಮಾಡಿಕೊಳ್ಳಬೇಕು

* ಉತ್ತರಾಖಂಡದಿಂದ ಹೊರಗಡೆ ನೆಲಸಿರುವ ರಾಜ್ಯದವರು ಕೂಡ ಸಹ–ಜೀವನ ನಡೆಸುತ್ತಿದ್ದರೆ, ಅವರ ವ್ಯಾಪ್ತಿಯ ನೋಂದಣಾಧಿಕಾರಿ ಮುಂದೆ ಹೇಳಿಕೆ ದಾಖಲಿಸಬಹುದು

* ಸಹ–ಜೀವನ ಸಂಬಂಧ ಮುರಿದು ಬಿದ್ದರೆ, ಆ ವಿಚಾರವನ್ನೂ ನೋಂದಣಾಧಿಕಾರಿಗಳ ಗಮನಕ್ಕೆ ತರಬೇಕು. ಹುಡುಗ ಅಥವಾ ಹುಡುಗಿ ವಯಸ್ಸು 18–21 ವರ್ಷದ ನಡುವೆ ಇದ್ದರೆ, ನೋಂದಣಿಯಾಗಿರುವುದನ್ನು ಅವರ ಪೋಷಕರ ಗಮನಕ್ಕೆ ತರಲಾಗುತ್ತದೆ

*ನೋಂದಣಾಧಿಕಾರಿಗಳಿಗೆ ಮಾಹಿತಿ ಸಿಕ್ಕಿದ ಬಳಿಕ ಅವರು ತನಿಖೆ ನಡೆಸುತ್ತಾರೆ. ಸಹ ಜೀವನ ನಡೆಸುತ್ತಿರುವವರಲ್ಲಿ ಅಪ್ರಾಪ್ತ ವಯಸ್ಸಿನವರು ಇದ್ದಾರೆಯೇ? ಅವರಿಗೆ ಮದುವೆಯಾಗಿದೆಯೇ ಅಥವಾ ಬೇರೆ ಸಂಬಂಧ ಹೊಂದಿದ್ದಾರೆಯೇ ಎಂಬುದನ್ನೆಲ್ಲ ಪರಿಶೀಲನೆ ನಡೆಸುತ್ತಾರೆ. 30 ದಿನಗಳ ಒಳಗಾಗಿ ಅವರು ಈ ಬಗ್ಗೆ ನಿರ್ಧರಿಸುತ್ತಾರೆ. ಸಹ ಜೀವನ ನಡೆಸುತ್ತಿರುವವರು ನಿಯಮ ಉಲ್ಲಂಘಿಸಿರುವುದು ದೃಢಪಟ್ಟರೆ, ಅವರ ನೋಂದಣಿಯನ್ನು ತಿರಸ್ಕರಿಸಬಹುದು

*ಪುರುಷ, ಮಹಿಳೆಯನ್ನು ಕೈಬಿಟ್ಟರೆ, ಪರಿಹಾರ ಕೇಳುವ ಹಕ್ಕು ಆಕೆಗೆ ಇದೆ

*ಸಹ–ಜೀವನ ನಡೆಸುತ್ತಿರುವುದನ್ನು ತಿಂಗಳಲ್ಲಿ ನೋಂದಣಿ ಮಾಡಿಕೊಳ್ಳದಿದ್ದರೆ, ಜೋಡಿಗೆ ಗರಿಷ್ಠ ಮೂರು ತಿಂಗಳ ಜೈಲು ಶಿಕ್ಷೆ ಅಥವಾ ₹10 ಸಾವಿರದ ದಂಡ ಅಥವಾ ಎರಡನ್ನೂ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ. ನೋಂದಣಿ ಸಮಯದಲ್ಲಿ ಸುಳ್ಳು ಮಾಹಿತಿ ನೀಡಿದರೆ ಮೂರು ತಿಂಗಳ ಜೈಲು ಶಿಕ್ಷೆ ಅಥವಾ ₹25 ಸಾವಿರ ದಂಡ ಅಥವಾ ಎರಡನ್ನೂ ಅನುಭವಿಸಬೇಕಾಗುತ್ತದೆ. ನೋಂದಣಾಧಿಕಾರಿ ನೋಟಿಸ್‌ ನೀಡಿದ ಬಳಿಕವೂ ನೋಂದಣಿ ಮಾಡಿಕೊಳ್ಳದಿದ್ದರೆ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ/₹25 ಸಾವಿರದ ದಂಡ ಅಥವಾ ಎರಡನ್ನೂ ವಿಧಿಸಬಹುದು 

* ಸಂಹಿತೆಯು ಅನೂರ್ಜಿತ ಮದುವೆ, ನ್ಯಾಯಾಲಯದ ಮೂಲಕ ಅಧಿಕೃತವಾಗಿ ಅನೂರ್ಜಿತ ಎಂದು ಘೋಷಿಸುವವರೆಗೆ ಊರ್ಜಿತವಾಗಿರುವ ಮದುವೆ (voidable marriage) ಮತ್ತು ಸಹ–ಜೀವನದ ಸಂದರ್ಭದಲ್ಲಿ ಜನಿಸಿದ ಮಕ್ಕಳಿಗೆ ಕಾನೂನಿನ ಮಾನ್ಯತೆ ನೀಡುತ್ತದೆ.

ಮುಸ್ಲಿಂ ವೈಯಕ್ತಿಕ ಕಾನೂನು ಕೂಡ ರದ್ದು

ಏಕರೂಪ ನಾಗರಿಕ ಸಂಹಿತೆಯು, ಹಿಂದೂ ವಿವಾಹ ಕಾಯ್ದೆಯ ಮಾದರಿಯಲ್ಲಿ, ಮುಸ್ಲಿಂ ವೈಯಕ್ತಿಕ ಕಾನೂನನ್ನು ಕೂಡ ರದ್ದುಪಡಿಸುತ್ತದೆ. ಮುಸ್ಲಿಮರಲ್ಲಿ ಆಚರಣೆಯಲ್ಲಿರುವ ನಿಖಾ ಹಲಾಲಾ, ಇದ್ದತ್‌ ಮತ್ತು ತ್ರಿವಳಿ ತಲಾಖ್‌ (ಇದರ ವಿರುದ್ಧ ಸುಪ್ರೀಂ ಕೋರ್ಟ್ ಈಗಾಗಲೇ ತೀರ್ಪು ನೀಡಿದೆ) ಅನ್ನು ನಿರ್ಬಂಧಿಸುತ್ತದೆ. ಸಂಹಿತೆಯಲ್ಲಿ ಬಹುಪತ್ನಿತ್ವದ ಬಗ್ಗೆ ಉಲ್ಲೇಖ ಇದ್ದರೂ, ಈ ಆಚರಣೆಗಳ ಬಗ್ಗೆ ನೇರ ಪ್ರಸ್ತಾಪವಿಲ್ಲ. 

ಆದರೆ, ವಿಚ್ಛೇದನದ ಬಳಿಕ ಮರು ವಿವಾಹವಾಗುವ ಬಗ್ಗೆ ಪ್ರಸ್ತಾಪಿಸುವ ಸಂಹಿತೆಯ ಸೆಕ್ಷನ್‌ 30(2), ‘ವ್ಯಕ್ತಿಯೊಬ್ಬರಿಗೆ ತಮ್ಮ ವಿಚ್ಛೇದಿತ ಪತಿ/ಪತ್ನಿಯನ್ನು ಮರು ಮದುವೆಯಾಗುವ ಹಕ್ಕು ಇದೆ. ಆದರೆ, ಮತ್ತೆ ಮದುವೆಯಾಗುವುದಕ್ಕೂ ಮೊದಲು ಆ ವ್ಯಕ್ತಿ ಮೂರನೇ ವ್ಯಕ್ತಿಯೊಂದಿಗೆ ಮದುವೆಯಾಗಿರಬಾರದು’ ಎಂದು ಹೇಳುತ್ತದೆ (ಇದು ನಿಖಾ ಹಲಾಲಾ ಕುರಿತಾಗಿ ಇದೆ ಎಂಬುದು ತಜ್ಞರ ಹೇಳಿಕೆ). ಈ ನಿಯಮ ಉಲ್ಲಂಘಿಸಿದವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹1 ಲಕ್ಷದವರೆಗೆ ದಂಡ ವಿಧಿಸುವುದಕ್ಕೆ ಅವಕಾಶ ಇದೆ.

ಸಮಾನ ಆಸ್ತಿ ಹಕ್ಕು

ಸಂಹಿತೆಯು ಆಸ್ತಿಯಲ್ಲಿ ಪತ್ನಿ, ಹೆಣ್ಣು ಮಕ್ಕಳೂ ಸೇರಿದಂತೆ ಎಲ್ಲ ಮಕ್ಕಳು ಮತ್ತು ಪೋಷಕರಿಗೆ ಸಮಾನ ಹಕ್ಕುಗಳನ್ನು ಖಚಿತಪಡಿಸುತ್ತದೆ. ಒಂದು ವೇಳೆ ಆಸ್ತಿ ಮಾಲೀಕನಿಗೆ ಪತ್ನಿ, ಮಕ್ಕಳು ಇಲ್ಲದಿದ್ದರೆ, ಅವರ ನಿಧನದ ನಂತರ ಅವರ ಎರಡನೇ ಸಾಲಿನ ಸಂಬಂಧಿಕರು ಆಸ್ತಿಯನ್ನು ಸಮಾನವಾಗಿ ಹಂಚಿಕೊಳ್ಳುವುದಕ್ಕೆ ಅವಕಾಶ ನೀಡುತ್ತದೆ.

ಗೋವಾದಲ್ಲೂ ಇದೆ ಸಂಹಿತೆ

ಸ್ವತಂತ್ರ ಭಾರತದಲ್ಲಿ ಏಕರೂಪನಾಗರಿಕ ಸಂಹಿತೆಯನ್ನು ಜಾರಿ ಮಾಡುತ್ತಿರುವ ಮೊದಲ ರಾಜ್ಯ ಉತ್ತರಾಖಂಡ. ಆದರೆ, ಗೋವಾದಲ್ಲಿ ಒಂದೂವರೆ ಶತಮಾನಕ್ಕಿಂತಲೂ ಹೆಚ್ಚು ಕಾಲದಿಂದ ಏಕರೂಪ ನಾಗರಿಕ ಸಂಹಿತೆ ಜಾರಿಯಲ್ಲಿದೆ. ಪೋರ್ಚುಗೀಸರು 1867ರಲ್ಲಿ ರೂಪಿಸಿದ್ದ ಯುಸಿಸಿಯನ್ನೇ ಈಗಲೂ ಅಲ್ಲಿ ಪಾಲಿಸಲಾಗುತ್ತಿದೆ. 

1961ರಲ್ಲಿ ಗೋವಾವು ಭಾರತದ ಭಾಗವಾಗಿ ಕೇಂದ್ರಾಡಳಿತ ಪ್ರದೇಶವಾದ ಮರು ವರ್ಷ (1962) ಗೋವಾ, ದಮನ್‌ ಮತ್ತು ದಿಯು ಆಡಳಿತ ಕಾಯ್ದೆಯನ್ನು ಅಂಗೀಕರಿಸಲಾಗಿತ್ತು. ಈ ಕಾಯ್ದೆಯು ಪೋರ್ಚುಗೀಸ್‌ ಕಾಲದ ನಾಗರಿಕ ಸಂಹಿತೆಯನ್ನೇ ಉಳಿಸಿಕೊಳ್ಳಲು ಅವಕಾಶ ನೀಡಿತ್ತು. ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು ಸೇರಿದಂತೆ ಎಲ್ಲರೂ ಈ ಸಂಹಿತೆಯನ್ನೇ ಅಲ್ಲಿ ಪಾಲಿಸುತ್ತಿದ್ದಾರೆ.

ಯುಸಿಸಿ ಜಾರಿಗೆ ವಿರೋಧ

ಉತ್ತರಾಖಂಡ ಸರ್ಕಾರದ ನಿರ್ಧಾರಕ್ಕೆ ವಿವಿಧ ವಲಯಗಳಿಂದ ಆಕ್ಷೇಪಗಳು ಬರುತ್ತಿವೆ. ಬಿಜೆಪಿಯು 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಪ್ರಸ್ತಾಪಿಸಿದಾಗಲೂ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಪಸಂಖ್ಯಾತರ ಅದರಲ್ಲೂ ವಿಶೇಷವಾಗಿ ಮುಸ್ಲಿಮರ ಧಾರ್ಮಿಕ ಆಚರಣೆಯ ಹಕ್ಕುಗಳನ್ನು ಇದು ಕಸಿಯುತ್ತದೆ ಎಂಬ ಕೂಗು ಕೇಳಿ ಬಂದಿತ್ತು. ಈಗಲೂ ರಾಷ್ಟ್ರಮಟ್ಟದಲ್ಲಿ ಇದನ್ನು ಜಾರಿ ಮಾಡುವುದಕ್ಕೆ ತೀವ್ರ ವಿರೋಧ ಇದೆ.  ಬಹುತ್ವ ಸಂಸ್ಕೃತಿಯ ಭಾರತದಲ್ಲಿ ಏಕ ರೂಪ ನಾಗರಿಕ ಸಂಹಿತೆ ಕಾರ್ಯಸಾಧುವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಉತ್ತರಾಖಂಡ ಜಾರಿಗೆ ತರುತ್ತಿರುವ ಸಂಹಿತೆಯಲ್ಲಿ ಸಹ–ಜೀವನ ನಡೆಸುವುದನ್ನೂ ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸಿರುವ ಬಗ್ಗೆಯೂ ಆಕ್ಷೇಪ ಕೇಳಿ ಬಂದಿದೆ. ಇದು ಪುರುಷ ಮತ್ತು ಮಹಿಳೆಯ ಖಾಸಗಿತನದ ಉಲ್ಲಂಘನೆ. ಗಂಡು–ಹೆಣ್ಣು ಆತ್ಮೀಯ ಸಂಬಂಧ ಹೊಂದುವ ಹಕ್ಕನ್ನು ಸಂವಿಧಾನ ನೀಡಿದೆ. ಇದು ಅದರ ಉಲ್ಲಂಘನೆಯಾಗುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಮುಸ್ಲಿಂ ವೈಯಕ್ತಿಕ ಕಾನೂನು ಕೂಡ ರದ್ದು

ಏಕರೂಪ ನಾಗರಿಕ ಸಂಹಿತೆಯು ಹಿಂದೂ ವಿವಾಹ ಕಾಯ್ದೆಯ ಮಾದರಿಯಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನನ್ನು ಕೂಡ ರದ್ದುಪಡಿಸುತ್ತದೆ. ಮುಸ್ಲಿಮರಲ್ಲಿ ಆಚರಣೆಯಲ್ಲಿರುವ ನಿಖಾ ಹಲಾಲಾ ಇದ್ದತ್‌ ಮತ್ತು ತ್ರಿವಳಿ ತಲಾಖ್‌ (ಇದರ ವಿರುದ್ಧ ಸುಪ್ರೀಂ ಕೋರ್ಟ್ ಈಗಾಗಲೇ ತೀರ್ಪು ನೀಡಿದೆ) ಅನ್ನು ನಿರ್ಬಂಧಿಸುತ್ತದೆ. ಸಂಹಿತೆಯಲ್ಲಿ ಬಹುಪತ್ನಿತ್ವದ ಬಗ್ಗೆ ಉಲ್ಲೇಖ ಇದ್ದರೂ ಈ ಆಚರಣೆಗಳ ಬಗ್ಗೆ ನೇರ ಪ್ರಸ್ತಾಪವಿಲ್ಲ.  ಆದರೆ ವಿಚ್ಛೇದನದ ಬಳಿಕ ಮರು ವಿವಾಹವಾಗುವ ಬಗ್ಗೆ ಪ್ರಸ್ತಾಪಿಸುವ ಸಂಹಿತೆಯ ಸೆಕ್ಷನ್‌ 30(2) ‘ವ್ಯಕ್ತಿಯೊಬ್ಬರಿಗೆ ತಮ್ಮ ವಿಚ್ಛೇದಿತ ಪತಿ/ಪತ್ನಿಯನ್ನು ಮರು ಮದುವೆಯಾಗುವ ಹಕ್ಕು ಇದೆ. ಆದರೆ ಮತ್ತೆ ಮದುವೆಯಾಗುವುದಕ್ಕೂ ಮೊದಲು ಆ ವ್ಯಕ್ತಿ ಮೂರನೇ ವ್ಯಕ್ತಿಯೊಂದಿಗೆ ಮದುವೆಯಾಗಿರಬಾರದು’ ಎಂದು ಹೇಳುತ್ತದೆ (ಇದು ನಿಖಾ ಹಲಾಲಾ ಕುರಿತಾಗಿ ಇದೆ ಎಂಬುದು ತಜ್ಞರ ಹೇಳಿಕೆ). ಈ ನಿಯಮ ಉಲ್ಲಂಘಿಸಿದವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹1 ಲಕ್ಷದವರೆಗೆ ದಂಡ ವಿಧಿಸುವುದಕ್ಕೆ ಅವಕಾಶ ಇದೆ.

ಸಮಾನ ಆಸ್ತಿ ಹಕ್ಕು

ಸಂಹಿತೆಯು ಆಸ್ತಿಯಲ್ಲಿ ಪತ್ನಿ ಹೆಣ್ಣು ಮಕ್ಕಳೂ ಸೇರಿದಂತೆ ಎಲ್ಲ ಮಕ್ಕಳು ಮತ್ತು ಪೋಷಕರಿಗೆ ಸಮಾನ ಹಕ್ಕುಗಳನ್ನು ಖಚಿತಪಡಿಸುತ್ತದೆ. ಒಂದು ವೇಳೆ ಆಸ್ತಿ ಮಾಲೀಕನಿಗೆ ಪತ್ನಿ ಮಕ್ಕಳು ಇಲ್ಲದಿದ್ದರೆ ಅವರ ನಿಧನದ ನಂತರ ಅವರ ಎರಡನೇ ಸಾಲಿನ ಸಂಬಂಧಿಕರು ಆಸ್ತಿಯನ್ನು ಸಮಾನವಾಗಿ ಹಂಚಿಕೊಳ್ಳುವುದಕ್ಕೆ ಅವಕಾಶ ನೀಡುತ್ತದೆ.

ಗೋವಾದಲ್ಲೂ ಇದೆ ಸಂಹಿತೆ

ಸ್ವತಂತ್ರ ಭಾರತದಲ್ಲಿ ಏಕರೂಪನಾಗರಿಕ ಸಂಹಿತೆಯನ್ನು ಜಾರಿ ಮಾಡುತ್ತಿರುವ ಮೊದಲ ರಾಜ್ಯ ಉತ್ತರಾಖಂಡ. ಆದರೆ ಗೋವಾದಲ್ಲಿ ಒಂದೂವರೆ ಶತಮಾನಕ್ಕಿಂತಲೂ ಹೆಚ್ಚು ಕಾಲದಿಂದ ಏಕರೂಪ ನಾಗರಿಕ ಸಂಹಿತೆ ಜಾರಿಯಲ್ಲಿದೆ. ಪೋರ್ಚುಗೀಸರು 1867ರಲ್ಲಿ ರೂಪಿಸಿದ್ದ ಯುಸಿಸಿಯನ್ನೇ ಈಗಲೂ ಅಲ್ಲಿ ಪಾಲಿಸಲಾಗುತ್ತಿದೆ. ಗೋವಾವು ಭಾರತದ ಭಾಗವಾಗಿ ಕೇಂದ್ರಾಡಳಿತ ಪ್ರದೇಶವಾದ ಮರು ವರ್ಷ (1962) ಗೋವಾ ದಮನ್‌ ಮತ್ತು ದಿಯು ಆಡಳಿತ ಕಾಯ್ದೆಯನ್ನು ಅಂಗೀಕರಿಸಲಾಗಿತ್ತು. ಈ ಕಾಯ್ದೆಯು ಪೋರ್ಚುಗೀಸ್‌ ಕಾಲದ ನಾಗರಿಕ ಸಂಹಿತೆಯನ್ನೇ ಉಳಿಸಿಕೊಳ್ಳಲು ಅವಕಾಶ ನೀಡಿತ್ತು. ಹಿಂದೂಗಳು ಮುಸ್ಲಿಮರು ಕ್ರಿಶ್ಚಿಯನ್ನರು ಸೇರಿದಂತೆ ಎಲ್ಲರೂ ಈ ಸಂಹಿತೆಯನ್ನೇ ಅಲ್ಲಿ ಪಾಲಿಸುತ್ತಿದ್ದಾರೆ.

ಸಂಹಿತೆಯು ಅನೂರ್ಜಿತ ಮದುವೆ ನ್ಯಾಯಾಲಯದ ಮೂಲಕ ಅಧಿಕೃತವಾಗಿ ಅನೂರ್ಜಿತ ಎಂದು ಘೋಷಿಸುವವರೆಗೆ ಊರ್ಜಿತವಾಗಿರುವ ಮದುವೆ (voidable marriage) ಮತ್ತು ಸಹ–ಜೀವನದ ಸಂದರ್ಭದಲ್ಲಿ ಜನಿಸಿದ ಮಕ್ಕಳಿಗೆ ಕಾನೂನಿನ ಮಾನ್ಯತೆ ನೀಡುತ್ತದೆ.

ಆಧಾರ: ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ-2024

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.