ADVERTISEMENT

ಆಳ–ಅಗಲ: ಎಸ್‌ಐಆರ್‌ ಒಳ ಹೊರಗು

ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಅಂತಿಮ ಹಂತದ ಸಿದ್ಧತೆ

ಜಯಸಿಂಹ ಆರ್.
ಖಲೀಲ ಅಹ್ಮದ ಶೇಖ
Published 18 ಸೆಪ್ಟೆಂಬರ್ 2025, 0:30 IST
Last Updated 18 ಸೆಪ್ಟೆಂಬರ್ 2025, 0:30 IST
.
.   
ಮತದಾರರ ಪಟ್ಟಿಯ ಪರಿಷ್ಕರಣೆ ಹೇಗೆ ನಡೆಯಲಿದೆ, ಪರಿಷ್ಕರಣೆಯ ಹಂತಗಳು ಯಾವುವು, ಮತದಾರರು ತಮ್ಮ ಪೌರತ್ವ ಸಾಬೀತುಪಡಿಸಲು ಯಾವೆಲ್ಲಾ ದಾಖಲೆಗಳನ್ನು ಒದಗಿಸಬೇಕು, ಪೌರತ್ವ ಮತ್ತು ಗುರುತು ಸಾಬೀತುಪಡಿಸುವಲ್ಲಿ ಸಲ್ಲಿಸಬೇಕಾದ ದಾಖಲೆಗಳಲ್ಲಿ ಇರುವ ವಿನಾಯಿತಿಗಳ ವಿವರಗಳ ಕೈಪಿಡಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಒದಗಿಸಿದೆ.

ಬಿಹಾರದಲ್ಲಿ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ಯ (ಎಸ್‌ಐಆರ್‌) ನಂತರ ಕರ್ನಾಟಕದಲ್ಲೂ ಎಸ್‌ಐಆರ್ ನಡೆಸಲು ರಾಜ್ಯ ಚುನಾವಣಾ ಆಯೋಗ ಅಂತಿಮ ಹಂತದ ಸಿದ್ಧತೆ ನಡೆಸಿದೆ.

ಮತದಾರರ ಪಟ್ಟಿಯಲ್ಲಿ ಇರುವ ಮತದಾರರು ಆಯಾ ವಿಳಾಸದಲ್ಲಿ ಇದ್ದಾರೆಯೇ, ಮೃತಪಟ್ಟಿದ್ದಾರೆಯೇ, ಅವರ ವೈವಾಹಿಕ ಮತ್ತು ಕೌಟುಂಬಿಕ ವಿವರಗಳು ಬದಲಾಗಿವೆಯೇ ಎಂಬುದನ್ನು ಪರಿಶೀಲಿಸುವ ಹಾಗೂ ಸರಿಪಡಿಸುವ ಬೃಹತ್ ಕಾರ್ಯಾಚರಣೆ ಇದು.

ಮತದಾರರ ಪಟ್ಟಿಯ ಪರಿಷ್ಕರಣೆ ಹೇಗೆ ನಡೆಯಲಿದೆ, ಪರಿಷ್ಕರಣೆಯ ಹಂತಗಳು ಯಾವುವು, ಮತದಾರರು ತಮ್ಮ ಪೌರತ್ವ ಸಾಬೀತುಪಡಿಸಲು ಯಾವೆಲ್ಲಾ ದಾಖಲೆಗಳನ್ನು ಒದಗಿಸಬೇಕು, ಪೌರತ್ವ ಮತ್ತು ಗುರುತು ಸಾಬೀತುಪಡಿಸುವಲ್ಲಿ ಸಲ್ಲಿಸಬೇಕಾದ ದಾಖಲೆಗಳಲ್ಲಿ ಇರುವ ವಿನಾಯಿತಿಗಳ ವಿವರಗಳ ಕೈಪಿಡಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಒದಗಿಸಿದೆ.

ADVERTISEMENT

ರಾಜ್ಯದ ಪ್ರತಿ ಮತದಾರನೂ ಎಸ್‌ಐಆರ್‌ ಪ್ರಕ್ರಿಯೆಗೆ ಒಳಪಡಲಿದ್ದಾರೆ. ಇದರ ಆಧಾರದಲ್ಲಿ ಮತಗಟ್ಟೆಗಳು ಬದಲಾಗಲಿವೆ. ಹೊಸ ಮತದಾರರ ಚೀಟಿಯೂ ಅಸ್ತಿತ್ವಕ್ಕೆ ಬರಲಿದೆ. ಎಸ್‌ಐಆರ್‌ನಲ್ಲಿ ಭಾಗಿಯಾಗುವ ಸರ್ಕಾರದ ಅಧಿಕಾರಿ ಮತ್ತು ಸಿಬ್ಬಂದಿಗೆ ಹಲವು ಹಂತದ ತರಬೇತಿಯನ್ನು ಈಗಾಗಲೇ ನೀಡಲಾಗಿದೆ. ಎಸ್‌ಐಆರ್ ಕೈಪಿಡಿ ಮತ್ತು ತರಬೇತಿ ಸಾಮಗ್ರಿಗಳಲ್ಲಿ ಇರುವ ಮಾಹಿತಿಗಳ ಆಧಾರದಲ್ಲಿ, ಎಸ್‌ಐಆರ್‌ ಹೇಗೆ ನಡೆಯಲಿದೆ ಎಂಬುದರ ವಿವರವನ್ನು ಇಲ್ಲಿ ಕಟ್ಟಿಕೊಡಲಾಗಿದೆ.

ಹೀಗೆ ನಡೆಯಲಿದೆ ಪರಿಷ್ಕರಣೆ...

2002ರ ವಿಶೇಷ ಸಮಗ್ರ ಪರಿಷ್ಕರಣೆಯ ನಂತರ ಸೃಜಿಸಲಾದ ಮತದಾರರ ಪಟ್ಟಿಯನ್ನು ಮತಗಟ್ಟೆ ಅಧಿಕಾರಿಗಳಿಗೆ (ಬಿಎಲ್‌ಒ) ನೀಡಲಾಗುತ್ತದೆ.

ಆ ಪಟ್ಟಿಯಲ್ಲಿ ಇರುವವರು, ಈಗಲೂ ಅದೇ ವಿಳಾಸದಲ್ಲಿ ಇದ್ದಾರೆ ಅಥವಾ ಇಲ್ಲವೇ ಎಂಬುದನ್ನು ಬಿಎಲ್‌ಒಗಳು ಪರಿಶೀಲಿಸುತ್ತಾರೆ. ಬದಲಾವಣೆಗಳು ಇಲ್ಲದೇ ಇದ್ದರೆ, ಅಂತಹವರ ಮತದಾರರ ಚೀಟಿ ಉಳಿಯುತ್ತದೆ. ಅವರು ಗಣತಿ ನಮೂನೆ (ಎನ್ಯುಮರೇಷನ್‌ ಫಾರ್ಮ್‌) ಸಲ್ಲಿಸಬೇಕೇ ಅಥವಾ ಬೇಡವೇ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ.

ಮತದಾರರ ವಿಳಾಸ, ವಿವರಗಳಲ್ಲಿ ಬದಲಾವಣೆಯಾಗಿದ್ದರೆ, ಗಣತಿ ನಮೂನೆಯನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕು. ನಮೂನೆಯ ಒಂದು ಪ್ರತಿಯನ್ನು ಮತದಾರರಿಗೆ ನೀಡಲಾಗುತ್ತದೆ. ಮತ್ತೊಂದು ಪ್ರತಿಯನ್ನು ಬಿಎಲ್‌ಒ ತನ್ನ ಬಳಿ ಇರಿಸಿಕೊಳ್ಳುತ್ತಾರೆ. ಸಂಬಂಧಿತ ಆ್ಯಪ್‌ನಲ್ಲಿಯೂ ಈ ನಮೂನೆಯಲ್ಲಿರುವ ವಿವರಗಳು ಅಪ್‌ಲೋಡ್‌ ಆಗುತ್ತವೆ.

ಒಂದು ಮತಗಟ್ಟೆಯಲ್ಲಿ ಇರುವ ಪ್ರತಿ ಮತದಾರನ ವಿವರ ಪರಿಶೀಲನೆ ಮತ್ತು ಬದಲಾವಣೆಯ ವಿವರಗಳನ್ನು ರಾಜಕೀಯ ಪಕ್ಷಗಳ ಏಜೆಂಟರ ಜತೆಗೆ ಹಂಚಿಕೊಳ್ಳಲಾಗುತ್ತದೆ. ಆನಂತರ ಪರಿಷ್ಕೃತ ಮತದಾರರ ಪಟ್ಟಿಯ ಕರಡನ್ನು ಪ್ರಕಟಿಸಲಾಗುತ್ತದೆ. ಅದನ್ನು ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ ಮತ್ತು ರಾಜಕೀಯ ಪಕ್ಷಗಳ ಏಜೆಂಟರಿಗೂ ನೀಡಲಾಗುತ್ತದೆ. ಅದರ ಪರಿಶೀಲನೆಯ ನಂತರ ರಾಜಕೀಯ ಪಕ್ಷಗಳು, ಮತದಾರರು ಆಕ್ಷೇಪ ದಾಖಲಿಸಬಹುದು.

ಆಕ್ಷೇಪಗಳ ಪರಿಶೀಲನೆಯ ನಂತರ ಚುನಾವಣಾ ಆಯೋಗವು, ಕರಡು ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ತಿದ್ದುಪಡಿಗಳನ್ನು ಮಾಡುತ್ತದೆ. ತಿದ್ದುಪಡಿಯ ನಂತರ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸ ಲಾಗುತ್ತದೆ. ಇದರಲ್ಲಿ ಯಾವುದೇ ಬದಲಾವಣೆಗೆ ಅವಕಾಶವಿಲ್ಲ. ಮತದಾರರಿಗೆ ತಕರಾರು ಗಳಿದ್ದರೆ, ಅವರು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಮನವಿ ಸಲ್ಲಿಸಬೇಕಾಗುತ್ತದೆ.

ಯಾರು ಯಾವೆಲ್ಲಾ ದಾಖಲೆ ಒದಗಿಸಬೇಕು?

ಗಣತಿ ನಮೂನೆಯ ಜತೆಗೆ, ಇಂತಿಷ್ಟು ವಯಸ್ಸಿನ ಮತದಾರರು ಭಿನ್ನ ಸ್ವರೂ‍ಪದ ಘೋಷಣಾ ಪತ್ರವನ್ನು ನೀಡಬೇಕಾಗುತ್ತದೆ. ಘೋಷಣಾ ಪತ್ರದ ಜತೆಗೆ ಸೂಚಿತ ಗುರುತಿನ/ಪೌರತ್ವ ಸಾಬೀತು‍ಪಡಿಸುವ ದಾಖಲೆ ಪತ್ರಗಳನ್ನು ನೀಡಬೇಕಾಗುತ್ತದೆ. ಜನ್ಮ ವರ್ಷದ ಆಧಾರದಲ್ಲಿ ಮೂರು ವರ್ಗಗಳನ್ನು ಮಾಡಲಾಗಿದ್ದು, ಆಯಾ ವರ್ಗದವರಿಗೆ ಅನ್ವಯವಾಗುವ ಷರತ್ತುಗಳು ಈ ಮುಂದಿನಂತಿವೆ.

1. 1987ರ ಜುಲೈ 1ಕ್ಕೂ ಮೊದಲು ಜನಿಸಿದವರು

* ಆಯಾ ಮತದಾರನ ಗುರುತು ಮತ್ತು ಪೌರತ್ವ ಸಾಬೀತುಪಡಿಸುವ ದಾಖಲೆಯಾಗಿರಬೇಕು. ಜನ್ಮ ದಿನಾಂಕ/ ಜನ್ಮಸ್ಥಳವನ್ನು ಸಾಬೀತುಪಡಿಸುವಂತಹ ದಾಖಲೆ ಪತ್ರವಾಗಿರಬೇಕು

2. 1987ರ ಜುಲೈ 1ರ ಬಳಿಕ 2004ರ ಡಿಸೆಂಬರ್ 2ರ ಮಧ್ಯೆ ಜನಿಸಿದವರು

* ಆಯಾ ಮತದಾರನ ಗುರುತು ಮತ್ತು ಪೌರತ್ವ ಸಾಬೀತುಪಡಿಸುವ ದಾಖಲೆಯಾಗಿರಬೇಕು. ಜನ್ಮ ದಿನಾಂಕ/ ಜನ್ಮಸ್ಥಳವನ್ನು ಸಾಬೀತುಪಡಿಸುವಂತಹ ದಾಖಲೆ ಪತ್ರವಾಗಿರಬೇಕು

* ತಂದೆ ಅಥವಾ ತಾಯಿಯ ಜನ್ಮ ದಿನಾಂಕ ಅಥವಾ ಜನ್ಮ ಸ್ಥಳ ಸಾಬೀತು‍ಪಡಿಸುವಂತಹ ದಾಖಲೆ ಪತ್ರಗಳನ್ನೂ ಸಲ್ಲಿಸಬೇಕು

3. 2004ರ ಡಿಸೆಂಬರ್ 2ರ ನಂತರ ಜನಿಸಿದವರು

* ಆಯಾ ಮತದಾರನ ಗುರುತು ಮತ್ತು ಪೌರತ್ವ ಸಾಬೀತುಪಡಿಸುವ ದಾಖಲೆಯಾಗಿರಬೇಕು. ಜನ್ಮ ದಿನಾಂಕ/ ಜನ್ಮಸ್ಥಳವನ್ನು ಸಾಬೀತುಪಡಿಸುವಂತಹ ದಾಖಲೆ ಪತ್ರವಾಗಿರಬೇಕು

* ತಂದೆಯ ಜನ್ಮ ದಿನಾಂಕ ಅಥವಾ ಜನ್ಮ ಸ್ಥಳ ಸಾಬೀತು‍ಪಡಿಸುವಂತಹ ದಾಖಲೆ ಪತ್ರಗಳನ್ನೂ ಸಲ್ಲಿಸಬೇಕು

* ತಾಯಿಯ ಜನ್ಮ ದಿನಾಂಕ ಅಥವಾ ಜನ್ಮ ಸ್ಥಳ ಸಾಬೀತು‍ಪಡಿಸುವಂತಹ ದಾಖಲೆ ಪತ್ರಗಳನ್ನೂ ಸಲ್ಲಿಸಬೇಕು

* ತಂದೆ ಅಥವಾ ತಾಯಿ ಭಾರತೀಯರು ಆಗಿರದೇ ಇದ್ದರೆ, ಮತದಾರನ ಜನ್ಮದ ಸಂದರ್ಭದಲ್ಲಿ ಪೋಷಕರು ಭಾರತದಲ್ಲಿ ಇದ್ದರು ಎಂಬುದನ್ನು ಸಾಬೀತುಪಡಿಸುವ ಪಾಸ್‌ಪೋರ್ಟ್‌ ಅಥವಾ ವೀಸಾ ಪ್ರತಿ ಸಲ್ಲಿಸಬೇಕು

* ಭಾರತದ ಹೊರಗೆ ಜನಿಸಿದವರು, ವಿದೇಶದಲ್ಲಿನ ಭಾರತೀಯ ರಾಯಭಾರ ಕಚೇರಿ ನೀಡಿರುವ ಜನನ ನೋಂದಣಿ ಪ್ರಮಾಣಪತ್ರ ಸಲ್ಲಿಸಬೇಕು

* ಪೌರತ್ವ ನೋಂದಣಿ ಮೂಲಕ ಭಾರತದ ಪೌರತ್ವ ಪಡೆದಿರುವವರು, ಪೌರತ್ವ ನೋಂದಣಿ ಪ್ರಮಾಣ ಪತ್ರ ನೀಡಬೇಕು

ಯಾವೆಲ್ಲಾ ದಾಖಲೆಗಳು ಮಾನ್ಯ?

1. ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರ/ಸರ್ಕಾರಿ ಉದ್ಯಮದ ಕಾಯಂ ಉದ್ಯೋಗಿ/ಪಿಂಚಣಿದಾರರಿಗೆ ನೀಡಿರುವ ಯಾವುದೇ ಗುರುತಿನ ಚೀಟಿ ಅಥವಾ ಪಿಂಚಣಿ ಸಂದಾಯ ಆದೇಶ

2. ಭಾರತದಲ್ಲಿ 1987ಕ್ಕೂ ಮೊದಲು ಸರ್ಕಾರ/ಸ್ಥಳೀಯ ಪ್ರಾಧಿಕಾರಗಳು/ಬ್ಯಾಂಕುಗಳು/ಅಂಚೆ ಕಚೇರಿ/ಜೀವ ವಿಮಾ ನಿಗಮ/ಸರ್ಕಾರಿ ಉದ್ಯಮಗಳು ನೀಡಿರುವ ಯಾವುದೇ ಗುರುತಿನ ಚೀಟಿ/ ಪ್ರಮಾಣ ಪತ್ರ/ ದಸ್ತಾವೇಜು

3. ಜನನ ಪ್ರಮಾಣಪತ್ರ

4. ಪಾಸ್‌ಪೋರ್ಟ್‌

5. ಮಾನ್ಯತೆ ಪಡೆದ ಮಂಡಳಿಗಳು/ ವಿಶ್ವವಿದ್ಯಾಲಯಗಳು ನೀಡಿರುವ ಮೆಟ್ರಿಕ್ಯುಲೇಷನ್‌/ಶೈಕ್ಷಣಿಕ ಪ್ರಮಾಣಪತ್ರ (ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಪ್ರಮಾಣ ಪತ್ರಗಳು)

6. ರಾಜ್ಯ ಸರ್ಕಾರದ ಪ್ರಾಧಿಕಾರಗಳು ನೀಡಿರುವ ಕಾಯಂ ನಿವಾಸಿ ಪ್ರಮಾಣಪತ್ರ

7. ಅರಣ್ಯ ಹಕ್ಕು ಪ್ರಮಾಣಪತ್ರ

8. ಇತರೆ ಹಿಂದುಳಿದ ವರ್ಗಗಳು (ಒಬಿಸಿ)/ಪರಿಶಿಷ್ಟ ಜಾತಿ (ಎಸ್‌ಸಿ)/ಪರಿಶಿಷ್ಟ ಪಂಗಡ (ಎಸ್‌ಟಿ) ಅಥವಾ ಯಾವುದೇ ಜಾತಿ ಪ್ರಮಾಣ ಪತ್ರಗಳು

9. ರಾಷ್ಟ್ರೀಯ ಪೌರತ್ವ ನೋಂದಣಿ ಚೀಟಿ (ಯಾವುದೇ ರಾಜ್ಯದಲ್ಲಿ ಇದ್ದರೂ ಮಾನ್ಯ)

10. ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆ/ಪ್ರಾಧಿಕಾರಗಳು ಸಿದ್ಧಪಡಿಸಿದ ಕುಟುಂಬ ರಿಜಿಸ್ಟರ್‌

11. ಜಮೀನು/ ಮನೆ ಹಂಚಿಕೆಗೆ ಸಂಬಂಧಿಸಿದಂತೆ ಸರ್ಕಾರವು ನೀಡಿರುವ ಪ್ರಮಾಣಪತ್ರ/ಹಂಚಿಕೆ ಪತ್ರ

12. ಆಧಾರ್‌: ಸುಪ್ರೀಂ ಕೋರ್ಟ್‌ನ ನಿರ್ದೇಶನ ಮತ್ತು ಆದೇಶದ ಅನ್ವಯ ಗುರುತನ್ನು ಸಾಬೀತುಪಡಿಸುವ ದಾಖಲೆಯಾಗಿ ಮಾತ್ರವೇ ಪರಿಗಣಿಸಲಾಗುತ್ತದೆ. ಆಧಾರ್ ಅನ್ನು ಪೌರತ್ವ ಅಥವಾ ನಾಗರಿಕ ಪ್ರಮಾಣಪತ್ರವಾಗಿ ಪರಿಗಣಿಸುವುದಿಲ್ಲ

  • ಭಾರತದ ಹೊರಗೆ ಜನಿಸಿದವರು, ವಿದೇಶದಲ್ಲಿನ ಭಾರತೀಯ ರಾಯಭಾರ ಕಚೇರಿ ನೀಡಿರುವ ಜನನ ನೋಂದಣಿ ಪ್ರಮಾಣ ಪತ್ರ ಸಲ್ಲಿಸಬೇಕು

  • ಪೌರತ್ವ ನೋಂದಣಿ ಮೂಲಕ ಭಾರತದ ಪೌರತ್ವ ಪಡೆದಿರುವವರು, ಪೌರತ್ವ ನೋಂದಣಿ ಪ್ರಮಾಣ ಪತ್ರ ನೀಡಬೇಕು. ಭಾರತದ ಹೊರಗೆ ಜನಿಸಿದವರು, ವಿದೇಶದಲ್ಲಿನ ಭಾರತೀಯ ರಾಯಭಾರ ಕಚೇರಿ ನೀಡಿರುವ ಜನನ ನೋಂದಣಿ ಪ್ರಮಾಣ ಪತ್ರ ಸಲ್ಲಿಸಬೇಕು

ವಿಳಾಸ ಬದಲಾಗಿದ್ದರೆ...

ಮತದಾರರ ವಿಳಾಸ ಬದಲಾಗಿದ್ದರೆ, ಬಿಎಲ್‌ಒಗಳು ಅದನ್ನು ಪರಿಶೀಲಿಸುತ್ತಾರೆ. ಮತದಾರರು ಸಂಪರ್ಕಕ್ಕೆ ಸಿಕ್ಕರೆ, ಅವರ ಈಗಿನ ವಿಳಾಸದ ವಿವರ ಪಡೆದು ಕೊಳ್ಳುತ್ತಾರೆ. ಮತದಾರರು ಬೇರೆ ಮನೆಗೆ (ಮನೆ ನಂಬರ್ ಬದಲಾಗುತ್ತದೆ), ಬೇರೆ ಬೀದಿಗೆ, ಬೇರೆ ವಿಭಾಗಕ್ಕೆ, ಬೇರೆ ಮತಗಟ್ಟೆ ವ್ಯಾಪ್ತಿಗೆ ಅಥವಾ ಬೇರೆ ವಿಧಾನಸಭಾ ಕ್ಷೇತ್ರಕ್ಕೆ ಸ್ಥಳಾಂತರವಾಗಿದ್ದರೆ, ಗಣತಿ ನಮೂನೆ ಜತೆಗೆ ಸ್ಥಳಾಂತರ ನಮೂನೆ (ನಮೂನೆ 8/ನಮೂನೆ 8ಎಂ) ಸಲ್ಲಿಸಬೇಕಾಗುತ್ತದೆ. ಈ ಮೂಲಕ ನೂತನ ವಿಳಾಸದಲ್ಲೇ ಮತದಾರರ ಚೀಟಿ ಸೃಷ್ಟಿ ಆಗುತ್ತದೆ.

ಒಂದೊಮ್ಮೆ ಮತದಾರರರು ಆ ವಿಳಾಸದಲ್ಲಿ ಇಲ್ಲದೇ ಇದ್ದರೆ, ಅವರು ಸಂಪರ್ಕಕ್ಕೆ ಸಿಗದೇ ಹೋದರೆ ಅವರ ಚೀಟಿ ರದ್ದಾಗುತ್ತದೆ. ಆದರೆ ಆ ಮತದಾರರು ಬೇರೊಂದು ಸ್ಥಳದಲ್ಲಿದ್ದು, ಅಲ್ಲಿಗೆ ಭೇಟಿ ನೀಡುವ ಬಿಎಲ್‌ಒಗಳಿಗೆ ತಮ್ಮ ಮತದಾರರ ಚೀಟಿಯನ್ನು ಒಪ್ಪಿಸಬೇಕು. ಅಗ ಬಿಎಲ್‌ಒಗಳು ಅದನ್ನು ರದ್ದುಪಡಿಸಲು ಶಿಫಾರಸು ಮಾಡಿ, ಹೊಸದಾಗಿ ಮತದಾರರ ನೋಂದಣಿ ಅರ್ಜಿಯನ್ನು (ನಮೂನೆ 6) ಭರ್ತಿ ಮಾಡುತ್ತಾರೆ. ಆ ಮೂಲಕ ಮತದಾರರು ತಾವು ಈಗ ಇರುವ ವಿಳಾಸದಲ್ಲೇ ಹೊಸ ಮತದಾರರ ಚೀಟಿಯನ್ನು ಪಡೆಯಬಹುದಾಗಿದೆ.

  • ‘ನಮೂನೆ 6’ ಅನ್ನು ಹೊಸ ಮತದಾರರ ನೋಂದಣಿಗೆ ಮಾತ್ರವೇ ನೀಡಲಾಗುತ್ತದೆ. ಆದರೆ ಹಿಂದಿನ ವಿಳಾಸದಲ್ಲಿರುವ ಎಪಿಕ್‌ ರದ್ದುಪಡಿಸಿ, ಹೊಸದಾಗಿ ನೋಂದಣಿ ಮಾಡಿಸುವವರು ಈ ನಮೂನೆಯನ್ನು ಸಲ್ಲಿಸಬಹುದಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.