ದೇಶದ ಬಹುತೇಕ ರಾಜ್ಯಗಳಿಗೆ ಮದ್ಯವು ಆದಾಯದ ಪ್ರಮುಖ ಮೂಲ. ಈ ಕಾರಣಕ್ಕೆ ಆಗಿಂದಾಗ್ಗೆ ಮದ್ಯಕ್ಕೆ ಸಂಬಂಧಿಸಿದ ಶುಲ್ಕ, ತೆರಿಗೆಗಳನ್ನು ಹೆಚ್ಚಿಸುತ್ತಲೇ ಇರುತ್ತವೆ. ಕರ್ನಾಟಕ ಸರ್ಕಾರವು ಈಗ ಅಬಕಾರಿ ಕಾನೂನಿಗೆ ತಿದ್ದುಪಡಿ ಮಾಡಿ, ಕರಡು ನಿಯಮಗಳ ಅಧಿಸೂಚನೆ ಪ್ರಕಟಿಸಿದೆ. ಅದರ ಅನ್ವಯ ಮದ್ಯ ತಯಾರಿಕೆ, ಬಾಟ್ಲಿಂಗ್, ಮಾರಾಟ ಮಳಿಗೆಗಳ ಪರವಾನಗಿ ಸೇರಿ ಎಲ್ಲ ಸ್ವರೂಪದ ಶುಲ್ಕವನ್ನೂ ಶೇ 100ರಷ್ಟು ಹೆಚ್ಚಿಸಲು ಮುಂದಾಗಿದೆ. ಇದರಿಂದ ಮದ್ಯ ತಯಾರಕರು ಮತ್ತು ಮಾರಾಟಗಾರರು ಸಂಕಷ್ಟ ಎದುರಿಸಬೇಕಾಗಿದೆ. ಯಾವುದೇ ರೀತಿಯ ಬೆಲೆ/ಶುಲ್ಕ ಹೆಚ್ಚಳವು ಅಂತಿಮವಾಗಿ ಗ್ರಾಹಕರಿಗೆ ವರ್ಗಾವಣೆಯಾಗುತ್ತದೆ. ಮುಂದಿನ ದಿನಗಳಲ್ಲಿ ಮದ್ಯ ಮತ್ತಷ್ಟು ದುಬಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.
ದೇಶದಲ್ಲಿ ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳಿಗೆ ಅಬಕಾರಿ ಮತ್ತು ಇಂಧನ ಆದಾಯವು ಪ್ರಮುಖ ಹಣಕಾಸು ಮೂಲಗಳಾಗಿವೆ. ರಾಜ್ಯಗಳ ಸ್ವಂತ ತೆರಿಗೆ ಆದಾಯದಲ್ಲಿ (ಎಸ್‌ಒಟಿಆರ್) ಅಬಕಾರಿ ಆದಾಯದ ಪಾಲು ಗಮನಾರ್ಹವಾದುದಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ 2019–20ರ ಒಂದು ಅಧ್ಯಯನದ ಪ್ರಕಾರ, ಹಲವು ರಾಜ್ಯಗಳ ಎಸ್‌ಒಟಿಆರ್‌ನಲ್ಲಿ ಅಬಕಾರಿ ಸುಂಕದ ಪ್ರಮಾಣವು ಶೇ 10–ಶೇ 15ರಷ್ಟು ಇದೆ. ಕರ್ನಾಟಕ, ರಾಜಸ್ಥಾನ ಸೇರಿದಂತೆ ಐದು ರಾಜ್ಯಗಳಲ್ಲಿ ಅಬಕಾರಿ ಆದಾಯವು ರಾಜ್ಯದ ಆದಾಯದ ಶೇ 20ರಷ್ಟಿದೆ ಎಂದು ‘ಇಂಡಿಯನ್ ರೇಟಿಂಗ್ಸ್ ಆ್ಯಂಡ್ ರಿಸರ್ಚ್’ ಐದು ವರ್ಷಗಳ ಹಿಂದೆಯೇ ಹೇಳಿತ್ತು. ಮದ್ಯ ಮಾರಾಟದ ಆಧಾರದಲ್ಲಿ ಅದರ ಆದಾಯವು ನಿರ್ಧಾರವಾಗುತ್ತದೆ. ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ತೆಲಂಗಾಣ ಅಬಕಾರಿಯಿಂದ ಅತಿ ಹೆಚ್ಚು ಆದಾಯ ಗಳಿಸುತ್ತಿರುವ ರಾಜ್ಯಗಳಾಗಿವೆ.
ಅಬಕಾರಿ ರಾಜ್ಯದ ವಿಷಯವಾಗಿದ್ದು, ಪ್ರತಿ ರಾಜ್ಯವೂ ತನ್ನದೇ ಆದ ಅಬಕಾರಿ ನೀತಿ ಹೊಂದಿದೆ. ಸುಂಕ, ಶುಲ್ಕವೂ ಭಿನ್ನವಾಗಿವೆ. ಪ್ರತಿಯೊಂದು ರಾಜ್ಯದಲ್ಲಿಯೂ ಸರ್ಕಾರ ತನ್ನದೇ ಘಟಕಗಳ ಮೂಲಕ ಇಲ್ಲವೇ ಖಾಸಗಿಯವರಿಗೆ ಪರವಾನಗಿ (ಸನ್ನದು) ನೀಡುವ ಮೂಲಕ ಮದ್ಯ ಮಾರಾಟ ಮಾಡುತ್ತದೆ. ಪ್ರತಿ ವರ್ಷವೂ ಮದ್ಯದಂಗಡಿಗಳ ಸನ್ನದು ನವೀಕರಣ ಮಾಡಬೇಕು. ಅದಕ್ಕಾಗಿ ಪ್ರತಿ ವರ್ಷವೂ ಭಾರಿ ಮೊತ್ತವನ್ನು ಶುಲ್ಕವಾಗಿ ಭರಿಸಬೇಕು.
ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನಂಥ (ಎಂಎಸ್‌ಐಎಲ್) ಘಟಕಗಳ ಮೂಲಕ ಮತ್ತು ಖಾಸಗಿಯವರಿಗೆ ಮದ್ಯದಂಗಡಿಗಳನ್ನು ನಡೆಸಲು ಪರವಾನಗಿ ನೀಡುವ ಮೂಲಕ ರಾಜ್ಯದಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಎಲ್ಲ ಸರ್ಕಾರಗಳೂ ಕಾಲದಿಂದ ಕಾಲಕ್ಕೆ ಬಿಯರ್ ಮತ್ತು ದೇಶೀಯ ಮದ್ಯಗಳ (ಐಎಂಎಲ್) ಮೇಲಿನ ತೆರಿಗೆಯನ್ನು ಹೆಚ್ಚಿಸುತ್ತಲೇ ಬರುತ್ತಿವೆ. ಆದಾಯ ಸಂಗ್ರಹದ ಗುರಿ ಮುಟ್ಟುವ ಸಲುವಾಗಿಯೂ ಸರ್ಕಾರಗಳು ಮದ್ಯದ ಬೆಲೆಯನ್ನು ಹೆಚ್ಚಿಸಿದ್ದುಂಟು. ಅದರಲ್ಲೂ ಹೆಚ್ಚು ಜನ ಕುಡಿಯುವ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು (ಎಇಡಿ) ಹಲವು ಬಾರಿ ಹೆಚ್ಚಳ ಮಾಡಲಾಗಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಯರ್ ಮೇಲಿನ ಎಇಡಿ ಮೂರು ಬಾರಿ ಹೆಚ್ಚಾಗಿದೆ. ಈಗ ಅಬಕಾರಿ ಶುಲ್ಕವೂ ಸೇರಿದಂತೆ ಹಲವು ರೀತಿಯ ಶುಲ್ಕಗಳಲ್ಲಿ ಭಾರಿ ಹೆಚ್ಚಳ ಮಾಡಲು ಸರ್ಕಾರ ಹೊರಟಿದೆ. ತಯಾರಿಕೆಯ ಮಟ್ಟದಲ್ಲೂ ಶುಲ್ಕವನ್ನು ಹೆಚ್ಚಿಸಲು ಅಧಿಸೂಚನೆ ಪ್ರಕಟಿಸಲಾಗಿದೆ. ಮಾರಾಟ ಮಳಿಗೆಗಳ ಸನ್ನದು ಶುಲ್ಕ ದುಪ್ಪಟ್ಟುಗೊಳಿಸಲಾಗಿದೆ. ಡಿಸ್ಟಿಲರಿ ಮತ್ತು ವೇರ್‌ಹೌಸ್ ಸನ್ನದು ಶುಲ್ಕವನ್ನು ₹45 ಲಕ್ಷದಿಂದ ₹90 ಲಕ್ಷಕ್ಕೆ, ಬ್ರುವರಿ ಸನ್ನದು ಶುಲ್ಕವನ್ನು ₹27 ಲಕ್ಷದಿಂದ ₹ 54 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಇದಲ್ಲದೇ ಬಾಟ್ಲಿಂಗ್ ಸನ್ನದು ಶುಲ್ಕ, ಬಲ್ಕ್ ಬಿಯರ್ ಮಾರಾಟ ಗುತ್ತಿಗೆಯನ್ನೂ ದುಪ್ಪಟ್ಟುಗೊಳಿಸಲಾಗಿದೆ. ಈ ಸಂಬಂಧ ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಆಹ್ವಾನಿಸ ಲಾಗಿದೆ. ಜುಲೈ 1ರಿಂದ ಪರಿಷ್ಕೃತ ಶುಲ್ಕ ಜಾರಿಗೆ ಬರಲಿದೆ.
ಸರ್ಕಾರದ ಕ್ರಮಕ್ಕೆ ಮದ್ಯ ಮಾರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿಂದೆ 2016ರಲ್ಲಿ ರಾಜ್ಯ ಸರ್ಕಾರವು ಸನ್ನದು ಶುಲ್ಕವನ್ನು ಶೇ 15ರಷ್ಟು ಹೆಚ್ಚಿಸಿತ್ತು. ‘ಹಣದುಬ್ಬರ ಮತ್ತಿತರ ಕಾರಣಗಳಿಂದ ಈ ಬಾರಿಯೂ ನಿಗದಿತ ಪ್ರಮಾಣದಲ್ಲಿ ಹೆಚ್ಚಿಸಬಹುದಿತ್ತು. ಆದರೆ, ಭಾರಿ ಪ್ರಮಾಣದಲ್ಲಿ ಹೆಚ್ಚಿಸಿರುವುದರಿಂದ ತಾವು ತೀವ್ರ ಸಂಕಷ್ಟಕ್ಕೆ ಸಿಲುಕುತ್ತೇವೆ’ ಎನ್ನುವುದು ಮದ್ಯ ಮಾರಾಟಗಾರರ ಅಳಲು.
ಸದ್ಯ, ಮದ್ಯಕ್ಕೆ ಸಂಬಂಧಿಸಿದ ಶುಲ್ಕ ಮತ್ತು ಸುಂಕಗಳು ಅತಿ ಹೆಚ್ಚಾಗಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಈಗ ಈ ಪ್ರಮಾಣವು ಮತ್ತಷ್ಟು ಹೆಚ್ಚಾಗಲಿದೆ. ಸರ್ಕಾರದ ಕ್ರಮಗಳಿಂದ ಈಗಾಗಲೇ ಬಿಯರ್ ದರ ವಿಪರೀತ ಹೆಚ್ಚಾಗಿದೆ. ಈಗ ಬಿಯರ್ ಜತೆಗೆ ಅಗ್ಗದ ಬೆಲೆಗೆ ದೊರೆಯುವ ಐಎಂಎಲ್ ದರವೂ ಹೆಚ್ಚಾಗಲಿದೆ.
ಸರ್ಕಾರ ಈ ಹಿಂದೆ ಬೆಲೆ ಹೆಚ್ಚಳ ಮಾಡಿದ್ದು ಮತ್ತು ಇತರ ಕಾರಣಗಳಿಂದ ಈಗಾಗಲೇ ರಾಜ್ಯದಲ್ಲಿ ಬಿಯರ್ ಮಾರಾಟ ಕುಸಿದಿದೆ. ಜತೆಗೆ, 24–25ನೇ ಸಾಲಿನಲ್ಲಿ ರಾಜ್ಯದ 19 ಜಿಲ್ಲೆಗಳಲ್ಲಿ ಒಟ್ಟಾರೆ ಮದ್ಯ ಮಾರಾಟ ಕುಸಿದಿದೆ. ಈಗ ಶುಲ್ಕಗಳ ಹೆಚ್ಚಳದಿಂದ ಮುಂದಿನ ದಿನಗಳಲ್ಲಿ ಮದ್ಯದ ದರ ಹೆಚ್ಚಾಗಿ, ಮಾರಾಟ ಮತ್ತಷ್ಟು ಕುಸಿಯಲಿದೆ ಎನ್ನುವ ಆತಂಕ ಮದ್ಯ ಮಾರಾಟಗಾರರದ್ದು.
ಕುಡಿತ ಒಂದು ಚಟ. ಅದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರ ನಡುವೆಯೂ ಕರ್ನಾಟಕವೂ ಸೇರಿದಂತೆ ದೇಶದಲ್ಲಿ ಮದ್ಯ ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ. ಅದಕ್ಕೆ ಕಾರಣಗಳು ಅನೇಕ. ಹೀಗೆ ಕುಡಿಯುವವರಲ್ಲಿ ಗ್ರಾಮೀಣ ಭಾಗದವರು, ಬಡವರು, ಶ್ರೀಮಂತರು, ಕೆಳಮಧ್ಯಮ ವರ್ಗದವರು ಹೀಗೆ ನಾನಾ ಸ್ಥಿತಿಯ ನಾನಾ ಹಿನ್ನೆಲೆಯ ಜನ ಇದ್ದಾರೆ. ಜನರು ಕುಡಿಯಬಾರದು ಎಂದು ಸರ್ಕಾರಗಳು ಪ್ರಾಮಾಣಿಕವಾಗಿ ಭಾವಿಸಿದರೆ, ಪಾನನಿಷೇಧ ಜಾರಿಗೆ ತರಬೇಕು. ಆದರೆ, ಆದಾಯ ಸಂಗ್ರಹಕ್ಕಾಗಿ ಮದ್ಯ ಕುಡಿಯಲು ಅವಕಾಶ ನೀಡಿ, ಬೆಲೆಯನ್ನು ಹೀಗೆ ವಿಪರೀತ ಎನ್ನುವಷ್ಟು ಏರಿಕೆ ಮಾಡುವುದರಿಂದ ಮದ್ಯ ಸೇವನೆ ಮಾಡುವವರನ್ನು ಶೋಷಣೆ ಮಾಡಿದಂತಾಗುತ್ತದೆ ಎನ್ನುವ ಅಭಿಪ್ರಾಯವೂ ಇದೆ.
ಉದ್ಯಮಕ್ಕೆ ಹೊಡೆತ
ಸರ್ಕಾರದ ನಿರ್ಧಾರವು ಮದ್ಯ ತಯಾರಿಕೆ ಮತ್ತು ಮಾರಾಟ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಆತಂಕವನ್ನು ಈ ಕ್ಷೇತ್ರದಲ್ಲಿ ತೊಡಗಿಕೊಂಡವರು ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಭಾರತೀಯ ಮದ್ಯ ತಯಾರಿಸುವ 31 ಘಟಕಗಳು ಮತ್ತು ಬಿಯರ್ ತಯಾರಿಸುವ 13 ಘಟಕಗಳಿವೆ.
‘ಪರವಾನಗಿ ಶುಲ್ಕವನ್ನು ದುಪ್ಪಟ್ಟು ಹೆಚ್ಚಿಸಿರುವುದು ನಮ್ಮ ಉದ್ಯಮಕ್ಕೆ ಅತ್ಯಂತ ದೊಡ್ಡ ಹೊಡೆತ. ಇದರಿಂದ ಮದ್ಯ ತಯಾರಿಕೆಯ ಒಟ್ಟಾರೆ ವೆಚ್ಚ ಹೆಚ್ಚಲಿದೆ. ಈಗಾಗಲೇ ವಿದ್ಯುತ್ ಶುಲ್ಕ ಏರಿಕೆ ಸೇರಿದಂತೆ ವಿವಿಧ ಕಾರಣಗಳಿಂದ ತಯಾರಿಕಾ ವೆಚ್ಚ ಜಾಸ್ತಿಯಾಗಿದೆ. ಕಾರ್ಮಿಕರ ಕನಿಷ್ಠ ವೇತನ ಹೆಚ್ಚಿಸುವ ನಿರ್ಧಾರವನ್ನೂ ಸರ್ಕಾರ ತೆಗೆದುಕೊಂಡಿದೆ. ಈಗ ಪರವಾನಗಿ ಶುಲ್ಕ ಜಾಸ್ತಿ ಮಾಡಲಾಗಿದೆ’ ಎಂದು ಕರ್ನಾಟಕ ಬ್ರುವರ್ಸ್ ಆ್ಯಂಡ್ ಡಿಸ್ಟಿಲ್ಲರ್ಸ್ ಅಸೋಸಿಯೇಷನ್‌ನ ಪದಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಸರ್ಕಾರದ ಈ ತೀರ್ಮಾನದಿಂದ ಮದ್ಯ ತಯಾರಕರು ಮತ್ತು ಮಾರಾಟಗಾರರಿಗೆ ನಷ್ಟವಾಗಲಿದೆ. ಅದು ಗ್ರಾಹಕರ ಮೇಲೆ ಪರಿಣಾಮ ಬೀರದು ಎಂಬುದು ಅವರ ಅಭಿಪ್ರಾಯ.
ಮದ್ಯದ ಬೆಲೆಯನ್ನು ಹೆಚ್ಚಿಸಿದರೆ, ಜಾಸ್ತಿಯಾಗಲಿರುವ ತಯಾರಿಕಾ ವೆಚ್ಚವನ್ನು ಸರಿದೂಗಿಸಬಹುದು. ಆದರೆ, ಬೆಲೆಯ ಬಗ್ಗೆ ನಿರ್ಧಾರ ಕೈಗೊಳ್ಳುವುದು ಸರ್ಕಾರ. ಮದ್ಯ ತಯಾರಿಕಾ ಕಂಪನಿಗಳು ಬೆಲೆ ಹೆಚ್ಚಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಬಹುದಷ್ಟೆ ಎಂದು ಹೇಳುತ್ತಾರೆ ಉದ್ಯಮದ ಪ್ರತಿನಿಧಿಗಳು.
‘ಹೊರೆ ಗ್ರಾಹಕರಿಗೆ ವರ್ಗಾವಣೆ ಅನಿವಾರ್ಯ’
ರಾಜ್ಯದಲ್ಲಿ ಸಿಎಲ್2 (ವೈನ್ ಶಾಪ್), ಸಿಎಲ್ 4 (ಕ್ಲಬ್), ಸಿಎಲ್ 6ಎ (ತಾರಾ ಹೋಟೆಲ್) ಸಿಎಲ್7 (ಹೋಟೆಲ್ ಮತ್ತು ಬೋರ್ಡಿಂಗ್ ಹೌಸ್), ಸಿಎಲ್–9 (ಬಾರ್ ಆ್ಯಂಡ್ ರೆಸ್ಟೋರೆಂಟ್), ಸಿಎಲ್ 11ಸಿ (ಎಂಎಸ್‌ಐಎಲ್) ಸೇರಿ 13 ಸಾವಿರಕ್ಕೂ ಹೆಚ್ಚು ಮದ್ಯ ಮಾರಾಟ ಮಳಿಗೆಗಳಿವೆ. ರಾಜಧಾನಿ ಬೆಂಗಳೂರಿನಲ್ಲೇ 3,700ರಷ್ಟು ಮದ್ಯದ ಮಳಿಗೆಗಳು ವಹಿವಾಟು ನಡೆಸುತ್ತಿವೆ.
ಮದ್ಯದ ಅಂಗಡಿಗಳ ಮಾಲೀಕರಿಗೆ ಸರ್ಕಾರ ಎಂಆರ್‌ಪಿ ಮೇಲೆ ಶೇ 10ರಷ್ಟು ಕಮಿಷನ್(ಮಾರ್ಜಿನ್) ನೀಡುತ್ತಿದೆ. 2009ರವರೆಗೂ ಈ ಕಮಿಷನ್ ಪ್ರಮಾಣ ಶೇ 20ರಷ್ಟಿತ್ತು. ಅಂದಿನ ಬಿಜೆಪಿ ಸರ್ಕಾರ ಅದನ್ನು ಶೇ 10ಕ್ಕೆ ಇಳಿಸಿತ್ತು. ಆ ಬಳಿಕ ಅಂಗಡಿಗಳಿಗೆ ಲಾಭ ಕಡಿಮೆಯಾಗಿದೆ ಎಂಬುದು ಮಾರಾಟಗಾರರ ಹೇಳಿಕೆ.
‘ಪರವಾನಗಿ ಶುಲ್ಕವನ್ನು ಹೆಚ್ಚಿಸುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಶೇ 100ರಷ್ಟು ಹೆಚ್ಚಿಸಿದರೆ ಅದರ ಹೊರೆಯನ್ನು ನಿಭಾಯಿಸುವುದು ಕಷ್ಟ. ಸಣ್ಣ ಪ್ರಮಾಣದಲ್ಲಿ ಹೆಚ್ಚಿಸಿದರೆ ಸಮಸ್ಯೆ ಇಲ್ಲ ಅಥವಾ ನಮ್ಮ ಕಮಿಷನ್ ಪ್ರಮಾಣ ಹೆಚ್ಚಿಸಿದರೂ ನಷ್ಟ ಆಗದಂತೆ ತಡೆಯಬಹುದು. ಈಗಿನ ಪರಿಸ್ಥಿತಿಯಲ್ಲಿ ಎಷ್ಟು ದಿನ ನಷ್ಟದಲ್ಲಿ ಅಂಗಡಿ ನಡೆಸುವುದಕ್ಕೆ ಆಗುತ್ತದೆ? ಅನಿವಾರ್ಯವಾಗಿ ನಾವು ನಮ್ಮ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲೇಬೇಕಾಗುತ್ತದೆ’ ಎಂದು ಹೇಳುತ್ತಾರೆ ಮದ್ಯದ ಅಂಗಡಿಗಳ ಮಾಲೀಕರು.
ಶೇ 15ರಷ್ಟು ಮಳಿಗೆಗಳು ಮುಚ್ಚಲಿವೆ
ಪರವಾನಗಿ ಶುಲ್ಕ ಹೆಚ್ಚಳ ಮಾಡಿದರೆ,ಮದ್ಯದ ಅಂಗಡಿಗಳ ಮಾಲೀಕರಿಗೆ ಹೊರೆ ಹೆಚ್ಚಾಗುತ್ತದೆ. ಕಡಿಮೆ ಮದ್ಯ ಮಾರಾಟವಾಗುವ ಅಂಗಡಿಗಳ ಮಾಲೀಕರಿಗೆ ಅದನ್ನು ನಿಭಾಯಿಸುವಷ್ಟು ಆರ್ಥಿಕ ಸಂಪನ್ಮೂಲ ಇರುವುದಿಲ್ಲ. ಕನಿಷ್ಠ ಶೇ 10ರಿಂದ ಶೇ 15ರಷ್ಟು ಅಂಗಡಿಗಳು ಮುಚ್ಚುವ ಸಾಧ್ಯತೆ ಇದೆ. 2016ರಿಂದ ಶುಲ್ಕ ಹೆಚ್ಚು ಮಾಡಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಈ ಅವಧಿಯಲ್ಲಿ 3000ಕ್ಕೂ ಹೆಚ್ಚು ಹೊಸ ಮದ್ಯದ ಅಂಗಡಿಗಳು ಸ್ಥಾಪನೆಯಾಗಿವೆ. ಆದರೆ, ಮಾರಾಟದಲ್ಲಿ ಹೆಚ್ಚಳವಾಗಿಲ್ಲ– ಗೋವಿಂದರಾಜ್ ಹೆಗ್ಡೆ, ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದ ಕಾರ್ಯದರ್ಶಿ
ಅಂಗಡಿ ನಿರ್ವಹಣೆ ಸಾಧ್ಯವಿಲ್ಲ
ಈಗಾಗಲೇ ನಾವು ಸಂಕಷ್ಟ ಅನುಭವಿಸುತ್ತಿದ್ದೇವೆ. ನಮ್ಮ ಮಾರ್ಜಿನ್ ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಇದ್ದೇವೆ. ಅದರ ಬದಲು ಸರ್ಕಾರ ಪರವಾನಗಿ ಶುಲ್ಕವನ್ನು ಶೇ 100ರಷ್ಟು ಹೆಚ್ಚಿಸಿ ನಮ್ಮನ್ನು ಇನ್ನಷ್ಟು ಕಷ್ಟಕ್ಕೆ ತಳ್ಳಿದೆ. ಶೇ 5–10ರಷ್ಟು ಹೆಚ್ಚಿಸಿದ್ದರೆ ಸುಮ್ಮನಿರಬಹುದಿತ್ತು. ಈಗಿನದ್ದಕ್ಕಿಂತ ಎರಡು ಪಟ್ಟು ಜಾಸ್ತಿ ಮಾಡಿದರೆ ಅದನ್ನು ಪಾವತಿಸುವುದು ಹೇಗೆ? ವ್ಯಾಪಾರ ನಡೆಸಲು ಸಾಧ್ಯವೇ ಇಲ್ಲ. ಸರ್ಕಾರ ಹಾಲು ನೀಡುವ ಕೆಚ್ಚಲನ್ನೇ ಕತ್ತರಿಸಲು ಹೊರಟಿದೆ. ಅದು ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು– ಲೋಕೇಶ್, ಬೆಂಗಳೂರು ನಗರ ಜಿಲ್ಲಾ ಮದ್ಯ ವ್ಯಾಪಾರಿಗಳ ಸಂಘದ ಅಧ್ಯಕ್ಷ
ರಾಜ್ಯದಲ್ಲೇ ತೆರಿಗೆ ಜಾಸ್ತಿ
ದೇಶದ ಎಲ್ಲ ರಾಜ್ಯಗಳ ಪೈಕಿ ಕರ್ನಾಟಕದಲ್ಲಿಯೇ ಮದ್ಯದ ಮೇಲೆ ತೆರಿಗೆ ಹೆಚ್ಚು ಎಂದು ಹೇಳುತ್ತಾರೆ ವ್ಯಾಪಾರಿಗಳು. ಕನಿಷ್ಠ ಶೇ 70ರಿಂದ ಶೇ 80ರಷ್ಟು ತೆರಿಗೆ ವಿಧಿಸಲಾಗುತ್ತಿದೆ ಎಂದು ಅವರು ಹೇಳುತ್ತಾರೆ. ಇದೇ ಕಾರಣಕ್ಕೆ ಗೋವಾ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದಲ್ಲಿ ಗ್ರಾಹಕರು ಮದ್ಯಕ್ಕೆ ಹೆಚ್ಚು ಹಣ ತೆರಬೇಕಾಗುತ್ತದೆ.
ಪ್ರತಿ ಲೀಟರ್ ಮದ್ಯದ ಮೇಲೆ ₹50 ಅಬಕಾರಿ ಸುಂಕ ಹಾಕಲಾಗುತ್ತದೆ. ಇದಲ್ಲದೆ, ಮದ್ಯದ ಬೆಲೆಯ ಮೇಲೆ ಹೆಚ್ಚುವರಿ ಅಬಕಾರಿ ಸುಂಕವನ್ನೂ ವಿಧಿಸಲಾಗುತ್ತದೆ. ಮದ್ಯದ ಮೂಲ ಬೆಲೆಯ ಆಧಾರದಲ್ಲಿ 16 ಸ್ಲ್ಯಾಬ್‌ಗಳನ್ನು ಮಾಡಲಾಗಿದ್ದು, ಒಂದೊಂದು ಸ್ಲ್ಯಾಬ್‌ಗೂ ಪ್ರತ್ಯೇಕವಾದ ಹೆಚ್ಚುವರಿ ಅಬಕಾರಿ ಸುಂಕ ನಿಗದಿಪಡಿಸಲಾಗಿದೆ.
ಬಿಯರ್ ಮೇಲೆ ಎಇಡಿ 205%
2023ರ ಜುಲೈನಿಂದ ಇಲ್ಲಿವರೆಗೆ ಕರ್ನಾಟಕ ಸರ್ಕಾರವು ಬಿಯರ್ ಮೇಲೆ ವಿಧಿಸಲಾಗುತ್ತಿರುವ ಹೆಚ್ಚುವರಿ ಅಬಕಾರಿ ಸುಂಕವನ್ನು ಮೂರು ಬಾರಿ ಹೆಚ್ಚಿಸಿದೆ. ಅದಕ್ಕೂ ಮೊದಲು ಪ್ರತಿ ಲೀಟರ್ ಬಿಯರ್‌ಗೆ ಘೋಷಿತ ಬೆಲೆಯ ಶೇ 175ರಷ್ಟು ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸಲಾಗುತ್ತಿತ್ತು. ಅದೀಗ ಶೇ 205ಕ್ಕೆ ಏರಿದೆ. ಇದರಿಂದ ರಾಜ್ಯದಲ್ಲಿ ಬಿಯರ್ ಬೆಲೆ ಹೆಚ್ಚಾಗಿದ್ದು, ಮಾರಾಟ ಕುಸಿದಿದೆ.
ತೆರಿಗೆ ಹೆಚ್ಚಳ ನಿರ್ಧಾರವು ₹5,000 ಕೋಟಿ ಮೌಲ್ಯದ ಉದ್ಯಮದ ಮೇಲೆ ಪರಿಣಾಮ ಬೀರುತ್ತಿದ್ದು, ಮುಂದೆ ತೆರಿಗೆ ಹೆಚ್ಚಿಸದಂತೆ ಬ್ರುವರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮನವಿ ಮಾಡಿದೆ.
ಆಧಾರ: ಪಿಟಿಐ, ಅಬಕಾರಿ ಇಲಾಖೆ ವೆಬ್‌ಸೈಟ್, ಮಾಧ್ಯಮ ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.