ADVERTISEMENT

ಮೈಸೂರಿನಲ್ಲಿ ಹೆಚ್ಚಿದ ಪ್ರೀತಿ

ಗಿರೀಶದೊಡ್ಡಮನಿ
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST

`ಅರಮನೆ ನಗರಿ~ ಮೈಸೂರಿಗೆ `ಲವ್ ಗೇಮ್~ ಟೆನಿಸ್ ಮೇಲೆ ಎಲ್ಲಿಲ್ಲದ ಪ್ರೀತಿ. ಬ್ರಿಟಿಷರ ಮೂಲಕ ಕಾವೇರಿನಾಡಿಗೆ ಪ್ರವೇಶಿಸಿದ ಶ್ರೀಮಂತರ ಆಟ ಟೆನಿಸ್‌ನ ರ್‍ಯಾಕೆಟ್ ಇವತ್ತು ಸಾಮಾನ್ಯ ವ್ಯಕ್ತಿಯ ಕೈಗೆಟಕುವವರೆಗೂ ಬೆಳೆದಿದೆ!

40ರ ದಶಕದಲ್ಲಿ ಮಹಾರಾಜಾ ಕಾಲೇಜಿನ ಪ್ರಾಚಾರ್ಯರಾಗಿದ್ದ ಡಾ. ಜೆ.ಸಿ. ರೋಲೋ ಅವರ ಕಾಲದಲ್ಲಿಯೇ ಮೊಟ್ಟಮೊದಲ ಟೆನಿಸ್ ಕೋರ್ಟ್  ನಿರ್ಮಾಣವಾಯಿತು. ಆಗಿನ ಪ್ರಾಧ್ಯಾಪಕರು, ಪ್ರತಿಷ್ಠಿತ ಮನೆತನಗಳ ಜನರು ಮಾತ್ರ ಈ ಆಟ ಆಡುತ್ತಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರವೂ  ಪ್ರತಿಷ್ಠಿತರ ಆಟವಾಗಿ ಉಳಿದಿದ್ದ ಟೆನಿಸ್ ಅನ್ನು ಜನಸಾಮಾನ್ಯರ ಮನೆ, ಮನಗಳಿಗೆ ಮುಟ್ಟಿಸುವ ಕೆಲಸ ಆರಂಭವಾಗಿದ್ದು 1969ರಲ್ಲಿ.

ಟೆನಿಸ್ ಆಟಗಾರರಾಗಿದ್ದ ಬಿ.ಎ. ಬೆಳ್ಳಿಯಪ್ಪ, ಎಂ.ಎಚ್. ರಾಜಾರಾವ್,  ಆರ್. ಪಟ್ಟಾಭಿರಾಮನ್ ಮತ್ತು ಸಂಗಡಿಗರ ಪ್ರಯತ್ನದಿಂದ ಮೈಸೂರು ಟೆನಿಸ್ ಕ್ಲಬ್ (ಎಂಟಿಸಿ)ಆರಂಭವಾಯಿತು. ನಗರಸಭೆಯು ಚಾಮರಾಜಪುರಂ ರೈಲ್ವೆ ನಿಲ್ದಾಣದ ಹತ್ತಿರ ನೀಡಿದ ನಿವೇಶನದಲ್ಲಿ ಎರಡು ಮಣ್ಣಿನ ಅಂಕಣಗಳು ಸಿದ್ಧಗೊಂಡವು. ಐಡಿಯಲ್ ಜಾವಾದ ಎಫ್.ಕೆ. ಇರಾನಿಯವರು ಕ್ಲಬ್ ಉದ್ಘಾಟಿಸಿದರು.
 
ಸ್ಯಾಮ್ ಮಾರ್ಕರ್ ಮಾರ್ಗದರ್ಶಕರಾಗಿದ್ದರು. ಅದೇ ವರ್ಷ ಕ್ಲಬ್‌ಗೆ 50 ಮಂದಿ ಸದಸ್ಯತ್ವ ಪಡೆದುಕೊಂಡರು. 1973ರಲ್ಲಿ ಬಿ.ಎ. ಬೆಳ್ಳಿಯಪ್ಪ ಅಧ್ಯಕ್ಷರಾದ ನಂತರ ನಡೆದ ರಾಷ್ಟ್ರೀಯ ರ‌್ಯಾಂಕಿಂಗ್ ಟೂರ್ನಿಗಳು ನಡೆದವು. ಟೆನಿಸ್ ತಾರೆಗಳಾದ ರಾಮನಾಥನ್‌ಕೃಷ್ಣನ್, ರಮೇಶ್ ಕೃಷ್ಣನ್, ವಿಜಯ್ ಅಮೃತರಾಜ್, ಶಶಿ ಮೆನನ್, ಜೀಶನ್ ಅಲಿ ಈ ಅಂಗಳದಲ್ಲಿ ಆಡಿದರು.

ಈ ಕ್ಲಬ್‌ನಲ್ಲಿ ಅಂತರರಾಷ್ಟ್ರೀಯ ದರ್ಜೆಯ ಆರು ಸಿಂಥೆಟಿಕ್ ಕೋರ್ಟ್‌ಗಳಿವೆ. ಕಳೆದ ಜೂನ್‌ನಲ್ಲಿ ನಡೆದಿದ್ದ ಐಟಿಎಫ್ ಟೂರ್ನಿಯ ಪ್ರಶಸ್ತಿ ಗೆದ್ದಿದ್ದ ವಿಷ್ಣುವರ್ಧನ್ (ನಂತರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು) ಕೂಡ ಈ ಕೋರ್ಟ್‌ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

`ಇವತ್ತಿಗೂ ನಮ್ಮ ಕ್ಲಬ್‌ನಲ್ಲಿ ಮಾಸಿಕ 150 ರೂಪಾಯಿ ಮಾತ್ರ ಶುಲ್ಕ ಪಡೆಯಲಾಗುತ್ತಿದೆ. ಇಷ್ಟೊಂದು ಕಡಿಮೆ ಶುಲ್ಕ ಪಡೆಯುವ ಕ್ಲಬ್ ದೇಶದಲ್ಲಿಯೇ ಇಲ್ಲ. ಇದರಿಂದಾಗಿ ಮಧ್ಯಮವರ್ಗದ ಜನರಿಗೂ ಟೆನಿಸ್ ಆಡುವ ಅವಕಾಶ ಸಿಗುತ್ತಿದೆ~ ಎಂದು ಕ್ಲಬ್‌ನ ಅಧ್ಯಕ್ಷ ಡಾ. ಎನ್.ಎಂ. ಶ್ರೀನಿವಾಸ್ ಹೆಮ್ಮೆ ವ್ಯಕ್ತಪಡಿಸುತ್ತಾರೆ.

ಎಂಟಿಸಿಯನ್ನು ಹೊರತುಪಡಿಸಿದರೆ ಮಹಾರಾಜ ಕಾಲೇಜು, ಮಾನಸಗಂಗೋತ್ರಿ, ಚಾಮುಂಡಿ ಕ್ಲಬ್, ಕಾಸ್ಮೋಪಾಲಿಟಿನ್ ಕ್ಲಬ್, ನಾಗರಾಜ್ ಟೆನಿಸ್ ಅಕಾಡೆಮಿ, ಗಾರ್ಡನ್ ಟೆನಿಸ್ ಕ್ಲಬ್, ರಘುವೀರ್ ಟೆನಿಸ್ ಅಕಾಡೆಮಿ ಮತ್ತಿತರ ಖಾಸಗಿ ಕಾಲೇಜುಗಳೂ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಟೆನಿಸ್ ಕೋರ್ಟ್‌ಗಳು ಮೈಸೂರಿನಲ್ಲಿವೆ. ಸೌಲಭ್ಯಗಳ ಸದುಪಯೋಗದಿಂದ ಹಲವರು ಅಂತರರಾಷ್ಟ್ರೀಯ ಆಟಗಾರರಾಗಿದ್ದಾರೆ.

ಡೆವಿಸ್ ಕಪ್ ಆಟಗಾರ ಪ್ರಹ್ಲಾದ್ ಶ್ರೀನಾಥ್, ಚರಣ್ ಜಯದೇವ್, ಸಿ.ಎಸ್. ರಾಮಸ್ವಾಮಿ, ಗೋಪಾಲಕೃಷ್ಣ, ಎನ್.ಎಂ. ಶ್ರೀನಿವಾಸ್, ಒಲಿಂಪಿಯನ್ ರೋಹನ್ ಬೋಪಣ್ಣ, ಅಂತರರಾಷ್ಟ್ರೀಯ ಆಟಗಾರರಾದ ಪಿ. ರಘುವೀರ್, ನಾಗರಾಜ್, ಮಹಿಳೆಯರ ವಿಭಾಗದಲ್ಲಿ ನೀತ್ ದೇವಯ್ಯ, ಪೂಜಾಶ್ರೀ ವೆಂಕಟೇಶ್ ಇದರಲ್ಲಿ ಪ್ರಮುಖರು. ಸದ್ಯ ವಸಿಷ್ಠ ಚೆರುಕು,  ಪ್ರಜ್ವಲ್‌ದೇವ್, ಸೂರಜ್ ಪ್ರಭೋದ್, ಧೃತಿ, ವಾರುಣ್ಯ ಚಂದ್ರಶೇಖರ್ ಭರವಸೆಯ ಪ್ರತಿಭೆಗಳಾಗಿದ್ದಾರೆ.

50 ಸಹಸ್ರ ಡಾಲರ್ ಮೊತ್ತದ ಪ್ರಶಸ್ತಿ ಇರುವ ಅಂತರರಾಷ್ಟ್ರೀಯ ಟೂರ್ನಿಯನ್ನು ಮೈಸೂರಿನಲ್ಲಿ ನಡೆಸಲು ಅವಕಾಶವಿದೆ ಎಂದು ಜೂನ್‌ನಲ್ಲಿ ಐಟಿಎಫ್ ಸಂಘಟಿಸಿದ್ದ ಜೈಗೋ ಸ್ಪೋರ್ಟ್ಸ್‌ನ ಅಧಿಕಾರಿಗಳು ಹೇಳಿದ್ದು ಇಲ್ಲಿಯ ಟೆನಿಸ್ ಪ್ರೀತಿಗೆ ಮತ್ತಷ್ಟು ಹುರುಪು ತುಂಬಿದೆ. ಸೌಲಭ್ಯಗಳು ಮತ್ತು ಯಶಸ್ವಿ ಆಟಗಾರರಿಂದಾಗಿ ಕರ್ನಾಟಕದ `ಟೆನಿಸ್ ಊರು~ಎಂಬಂತೆ ಮೈಸೂರು ಬೆಳೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.