ADVERTISEMENT

ಸವಾಲಿನ ಹಾದಿಯಲ್ಲಿ...

ಪ್ರಮೋದ ಜಿ.ಕೆ
Published 15 ಡಿಸೆಂಬರ್ 2013, 19:30 IST
Last Updated 15 ಡಿಸೆಂಬರ್ 2013, 19:30 IST
ಈ ಸಲದ ರಣಜಿ ಋತುವಿನಲ್ಲಿ ಉತ್ತಮ ಪ್ರದರ್ಶನ ತೋರಿ ಭರವಸೆಗೆ ಕಾರಣವಾಗಿರುವ ಕರ್ನಾಟಕದ ಕೆ.ಎಲ್‌. ರಾಹುಲ್‌
ಈ ಸಲದ ರಣಜಿ ಋತುವಿನಲ್ಲಿ ಉತ್ತಮ ಪ್ರದರ್ಶನ ತೋರಿ ಭರವಸೆಗೆ ಕಾರಣವಾಗಿರುವ ಕರ್ನಾಟಕದ ಕೆ.ಎಲ್‌. ರಾಹುಲ್‌   

‘ಬಲಿಷ್ಠ ಎದುರಾಳಿಗಳು ಒಳ್ಳೆಯ ಕಾರಣಕ್ಕಾಗಿ ಇರುತ್ತಾರೆ. ಏಕೆಂದರೆ, ನಮ್ಮ ಸಾಮರ್ಥ್ಯ ಸಾಬೀತು ಮಾಡಲು ಅದೊಂದು ಅಪೂರ್ವ ಅವಕಾಶ. ಇದರಿಂದ ಸಮಸ್ಯೆಗಳನ್ನು ನಾವೆಷ್ಟು ಇಷ್ಟಪಡುತ್ತೇವೆ ಹಾಗೂ ಬಯಸುತ್ತೇವೆ ಎಂದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ...’

ಕಂಪ್ಯೂಟರ್‌ ವಿಜ್ಞಾನಿ ಮತ್ತು ಫ್ರೊಫೆಸರ್‌ ಕೂಡಾ ಆಗಿದ್ದ ಅಮೆರಿಕದ ರ್‍ಯಾಂಡಿ ಪಾಶ್‌ ‘ದ ಲಾಸ್ಟ್‌ ಲೆಕ್ಚರ್‌’ ಪುಸ್ತಕದಲ್ಲಿ ಹೇಳಿದ ಸ್ಫೂರ್ತಿಯ ಮಾತುಗಳಿವು. ದುರ್ಬಲ ತಂಡಗಳ ಎದುರು ಗೆಲುವಿನ ಕೇಕೆ ಹಾಕಿ ಬಲಿಷ್ಠ ತಂಡಗಳ ಸವಾಲನ್ನು ಎದುರು ನೋಡುತ್ತಿರುವ ಕರ್ನಾಟಕ ರಣಜಿ ತಂಡಕ್ಕೆ ಈ ಸಾಲುಗಳು ಪ್ರೇರಣೆಯಾಗಬಲ್ಲವು.

ಒಡಿಶಾ ಮತ್ತು ಹರಿಯಾಣದಂಥ ಬಲಿಷ್ಠವಲ್ಲದ ತಂಡಗಳ ಎದುರು ಪ್ರಯಾಸ ಪಟ್ಟು ಗೆಲುವಿನ ಸವಿ ಕಂಡಿರುವ ಕರ್ನಾಟಕ ತಂಡಕ್ಕೆ ಈಗ ಸವಾಲಿನ ಹಾದಿಯಿದೆ. ‘ಎ’ ಗುಂಪಿನ ಪಾಯಿಂಟ್‌ ಪಟ್ಟಿಯಲ್ಲಿ 19 ಪಾಯಿಂಟ್‌ಗಳೊಂದಿಗೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಹಾಲಿ ಚಾಂಪಿಯನ್‌ ಮುಂಬೈ 20 ಪಾಯಿಂಟ್ಸ್‌್ ಹೊಂದಿದ್ದು ಅಗ್ರಸ್ಥಾನ ಕಾಯ್ದುಕೊಂಡಿದೆ.

ಗುಂಪಿನಲ್ಲಿರುವ ಇತರ ತಂಡಗಳಾದ ಪಂಜಾಬ್‌, ಗುಜರಾತ್‌, ದೆಹಲಿ, ವಿದರ್ಭ, ಒಡಿಶಾ, ಹರಿಯಾಣ ಮತ್ತು ಜಾರ್ಖಂಡ್‌ ತಂಡಗಳಿಗಿಂತಲೂ ಮೇಲಿನ ಸ್ಥಾನ ಹೊಂದಿರುವ ಕರ್ನಾಟಕ ಖುಷಿಯಿಂದ ಬೀಗುವುದು ಅಗತ್ಯವಿಲ್ಲ. ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಪಂಜಾಬ್‌ ಎದುರಿನ ಪಂದ್ಯ ಮೊದಲ ಸವಾಲಾದರೆ, ಬೆಂಗಳೂರಿನಲ್ಲಿ ನಡೆಯಲಿರುವ ಮುಂಬೈ ಎದುರಿನ ಹೋರಾಟ ಅಗ್ನಿಪರೀಕ್ಷೆ. 40 ಸಲ ರಣಜಿ ಟ್ರೋಫಿ ಎತ್ತಿ ಹಿಡಿದಿರುವ ಮುಂಬೈ ಸುಲಭ ಎದುರಾಳಿಯಂತೂ ಅಲ್ಲವೇ ಅಲ್ಲ. ಕೊನೆಯ ಲೀಗ್‌ ಪಂದ್ಯದಲ್ಲಿ ರಾಜ್ಯ ತಂಡ ರಾಷ್ಟ್ರದ ರಾಜಧಾನಿಯಲ್ಲಿ ದೆಹಲಿ ಎದುರು ಆಡಬೇಕಿದೆ. ಆಗಲೂ ಕಠಿಣ ಪೈಪೋಟಿ ಕಟ್ಟಿಟ್ಟ ಬುತ್ತಿ.

ಈ ಎಲ್ಲಾ ಸವಾಲುಗಳನ್ನು ಎದುರಿಗಿಟ್ಟುಕೊಂಡಿರುವ ಕರ್ನಾಟಕ ಹಿಂದಿನ ಪಂದ್ಯಗಳಲ್ಲಿ ಮಾಡಿರುವ ಲೋಪಗಳಿಂದ ಪಾಠ ಕಲಿಯಬೇಕಿದೆ. ‘ನಮ್ಮ ತಂಡ ಉಳಿದ ಎಲ್ಲಾ ತಂಡಗಳಿಗಿಂತ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ’ ಎಂದು ಕರ್ನಾಟಕದ ಬ್ಯಾಟಿಂಗ್‌ ಕೋಚ್‌ ಜೆ. ಅರುಣ್‌ ಕುಮಾರ್‌ ಹೇಳುತ್ತಾರೆ. ಆದರೆ, ರೋಹ್ಟಕ್‌ (ಹರಿಯಾಣ ಎದುರು) ಮತ್ತು ಕಟಕ್‌ (ಒಡಿಶಾ) ವಿರುದ್ಧ ತೋರಿದ ಬ್ಯಾಟಿಂಗ್‌್ ಬಗ್ಗೆ ಪ್ರಶ್ನಿಸಿದರೆ, ‘ಸುಧಾರಣೆ ಅಗತ್ಯ’ ಎನ್ನುವ ಮಾತು ಹೇಳುತ್ತಾರೆ.

ಆ ಗೆಲುವು ಹೇಗಿದ್ದವು?:
ಒಡಿಶಾ ಎದುರು ಗೆಲುವು ಪಡೆಯಲು ಕರ್ನಾಟಕ ಎರಡನೇ ಇನಿಂಗ್ಸ್‌ನಲ್ಲಿ 126 ರನ್‌ ಮಾತ್ರ ಕಲೆ ಹಾಕಬೇಕಿತ್ತು. ಇಷ್ಟು ಸಣ್ಣ ಗುರಿ ಮುಟ್ಟುವ ಹಾದಿಯಲ್ಲಿ ತಂಡ ಕಳೆದುಕೊಂಡಿದ್ದು ಆರು ವಿಕೆಟ್‌. ಇಂಥದ್ದೇ ಪರಿಸ್ಥಿತಿ ಹರಿಯಾಣದ ಎದುರೂ ಕಾಡಿತು. ಲಾಹ್ಲಿಯಲ್ಲಿ ಗೆಲುವಿಗೆ 98 ರನ್‌ಗಳ ಅಲ್ಪ ಮೊತ್ತದ ಗುರಿ ಇದ್ದರೂ ಕರ್ನಾಟಕ ಕಳೆದುಕೊಂಡಿದ್ದು ಏಳು ವಿಕೆಟ್‌. ಆದ್ದರಿಂದ ಬೇಗನೆ ವಿಕೆಟ್‌ ಬೀಳದಂತೆ, ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ವಿಭಾಗ ಬಲಗೊಳ್ಳುವಂತೆ ನೋಡಿಕೊಳ್ಳುವ ಸವಾಲು ರಾಜ್ಯ ತಂಡದ ಮುಂದಿದೆ.

ಅರಳಿದ ಪ್ರತಿಭೆಗಳು:
ಒಂದೂ ಪಂದ್ಯದಲ್ಲಿ ಸೋಲು ಕಾಣದೇ ಮುನ್ನುಗ್ಗುತ್ತಿರುವ ಕರ್ನಾಟಕ ತಂಡದಲ್ಲಿ ಅರಳಿರುವ ಹೊಸ ಪ್ರತಿಭೆಗಳು ಹೊಸ ಭರವಸೆಗೆ ಕಾರಣರಾಗಿದ್ದಾರೆ. ಆ ಪ್ರತಿಭೆಗಳೇ ಕೆ.ಎಲ್‌. ರಾಹುಲ್‌, ರೋನಿತ್‌ ಮೋರೆ ಮತ್ತು ಅಬ್ರಾರ್ ಖಾಜಿ. ಹೋದ ರಣಜಿ ಋತುವಿನಲ್ಲಿ ಆರಂಭಿಕ ಜೋಡಿಯಾಗಿದ್ದ ರಾಬಿನ್‌ ಉತ್ತಪ್ಪ ಮತ್ತು ಕೆ.ಬಿ. ಪವನ್‌ ಸ್ಥಾನವನ್ನು ರಾಹುಲ್‌ ಮತ್ತು ಮಯಂಕ್‌ ಅಗರವಾಲ್‌ ಸಮರ್ಥವಾಗಿ ತುಂಬುತ್ತಿದ್ದಾರೆ.

ಬೆಂಗಳೂರಿನ ರಾಹುಲ್‌ 23 ವರ್ಷದೊಳಗಿನವರ ಉದಯೋನ್ಮುಖರ ಕ್ರಿಕೆಟ್‌ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಸಿಂಗಪುರದಲ್ಲಿ ನಡೆದ ಪಂದ್ಯದಲ್ಲಿ 88 ರನ್‌ ಗಳಿಸುವ ಮೂಲಕ ಭಾರತದ ಗೆಲುವಿಗೆ ಕಾರಣರಾಗಿದ್ದರು. ಈ ಸಲದ ರಣಜಿಯಲ್ಲೂ ರಾಹುಲ್‌ ಉತ್ತಮ ಬುನಾದಿ ಹಾಕಿಕೊಟ್ಟಿದ್ದಾರೆ. ಐದು ಪಂದ್ಯಗಳಿಂದ ಒಟ್ಟು 495 ರನ್‌ಗಳನ್ನು ಕಲೆ ಹಾಕಿರುವುದೇ ಇದಕ್ಕೆ ಸಾಕ್ಷಿ.

ಎರಡು ವರ್ಷಗಳ ಹಿಂದೆ ಮೇಲಿನ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುತ್ತಿದ್ದ ಮಾಜಿ ನಾಯಕ ಗಣೇಶ್ ಸತೀಶ್‌ ಈಗ ಐದನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಬಂದರೂ ತಮ್ಮ ಜವಾಬ್ದಾರಿ ಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಬ್ಯಾಟಿಂಗ್‌ ಜೊತೆಗೆ ವೇಗದ ಬೌಲಿಂಗ್‌ನಲ್ಲಿಯೂ ಸಾಕಷ್ಟು ಪೈಪೋಟಿ ಏರ್ಪಟ್ಟಿದೆ. ಎಚ್‌.ಎಸ್‌. ಶರತ್‌, ಆಲ್‌ರೌಂಡರ್‌ ಸ್ಟುವರ್ಟ್‌ ಬಿನ್ನಿ, ಅಭಿಮನ್ಯು ಮಿಥುನ್‌ ಜೊತೆ ಬೆಳಗಾವಿಯ ರೋನಿತ್‌ ಮೋರೆ ಪೈಪೋಟಿಗೆ ಇಳಿದಿದ್ದಾರೆ.  ಈ ಸಲದ ರಣಜಿ ಯಲ್ಲಿ ಒಂದು ಪಂದ್ಯವನ್ನಷ್ಟೇ ಆಡಿರುವ ಮೋರೆ ಏಳು ವಿಕೆಟ್‌ ಉರುಳಿಸಿ ಅನುಭವಿ ಬೌಲರ್‌ಗಳಿಗೆ ಸವಾಲು ಎಸೆದಿದ್ದಾರೆ.

ಬಲವಿಲ್ಲದ ಸ್ಪಿನ್‌ ವಿಭಾಗದಿಂದ ಪರದಾಡಿದ್ದ ಕರ್ನಾಟಕ ತಂಡಕ್ಕೆ ಅಬ್ರಾರ್‌ ಖಾಜಿ ಬಂದಿದ್ದು ನೆರವಾಗಿದೆ. ಎಸ್‌.ಕೆ. ಮೊಯಿನುದ್ದೀನ್‌ ಬದಲು ಸ್ಥಾನ ಗಳಿಸಿರುವ ಖಾಜಿ ಮೂರು ಪಂದ್ಯಗಳಿಂದ ನಾಲ್ಕು ವಿಕೆಟ್‌ ಮಾತ್ರ ಕಬಳಿಸಿದ್ದಾರೆ. ಆದರೆ, ಹೆಚ್ಚು ರನ್‌ ಬಿಟ್ಟುಕೊಡದಂತೆ ಎಚ್ಚರಿಕೆ ವಹಿಸಿದ್ದಾರೆ. ಆದ್ದರಿಂದ ಲೆಗ್‌ ಸ್ಪಿನ್ನರ್‌ ಕೆ.ಪಿ. ಅಪ್ಪಣ್ಣ ಎರಡು ಪಂದ್ಯಗಳಿಗೆ ‘ಬೆಂಚ್‌’ ಕಾದಿದ್ದಾರೆ.

ಆಯ್ಕೆದಾರರ ಚಾಟಿ:
15 ವರ್ಷಗಳಿಂದ ರಣಜಿ ಟ್ರೋಫಿ ಗೆಲ್ಲುವ ಕನಸು ನನಸಾಗದ ಕಾರಣ ಆಯ್ಕೆ ಸಮಿತಿ ಪ್ರತಿ ಪಂದ್ಯದಿಂದ ಪಂದ್ಯಕ್ಕೆ ಕಠಿಣ ನಿರ್ಧಾರಗಳನ್ನು ತೆಳೆಯುತ್ತಿದೆ.
ರಣಜಿಯಲ್ಲಿ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಗಳಿಸಿದ್ದ ಮೊದಲ ಬ್ಯಾಟ್ಸ್‌ಮನ್‌ ಕುನಾಲ್‌ ಕಪೂರ್‌ ಈ ಸಲದ ರಣಜಿಯಲ್ಲಿ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ತೋರಿಲ್ಲ. ಐದು ಪಂದ್ಯಗಳಿಂದ ಈ ಬ್ಯಾಟ್ಸ್‌ಮನ್‌ ಗಳಿಸಿದ್ದು 167 ರನ್‌ ಮಾತ್ರ. ಆದ್ದರಿಂದ ಪಂಜಾಬ್‌ ಎದುರಿನ ಪಂದ್ಯಕ್ಕೆ ಕುನಾಲ್‌ ಬದಲು ಶ್ರೇಯಸ್‌ ಗೋಪಾಲ್‌ಗೆ ಅವಕಾಶ ನೀಡಲಾಗಿದೆ.

ಕರ್ನಾಟಕದಲ್ಲಿ ಸಾಕಷ್ಟು ಪ್ರತಿಭಾನ್ವಿತ ಆಟಗಾರರು ಇದ್ದಾರೆ. ರಣಜಿ ತಂಡದಲ್ಲಿ ಪಡೆದ ಸ್ಥಾನ ಉಳಿಸಿಕೊಳ್ಳಬೇಕಾದರೆ, ಪ್ರತಿ ಪಂದ್ಯದಲ್ಲೂ ಸಾಮರ್ಥ್ಯ ಮೆರೆಯುವುದು ಅನಿವಾರ್ಯ. ಇಲ್ಲವಾದರೆ ‘ಗೇಟ್‌ ಪಾಸ್‌’ ಕಟ್ಟಿಟ್ಟ ಬುತ್ತಿ.  ಪ್ರಮುಖ ಬ್ಯಾಟ್ಸ್‌ಮನ್‌ ಆಗಿ ಗುರುತಿಸಿಕೊಂಡಿದ್ದ ಪವನ್‌ ಈಗ ತಂಡ ದಲ್ಲಿಯೇ ಇಲ್ಲ. ಅದಕ್ಕಾಗಿ ಅವರು ಈ ಸಲ ತ್ರಿಪುರ ಪರ ಆಡುತ್ತಿ ದ್ದಾರೆ. ಉತ್ತಮ ಆಟವಾಡದ ಹೊರತು ಯಾರ ಸ್ಥಾನವೂ ಕಾಯಂ ಅಲ್ಲ ಎನ್ನುವುದಕ್ಕೆ ಇದೊಂದು ನಿದರ್ಶನವಷ್ಟೇ. ರಾಜ್ಯ ತಂಡ ಬಲಿಷ್ಠವಾಗಿ ಇದು ಬೆಳೆಯಲು ಸಹಕಾರಿಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.