ADVERTISEMENT

ಸುಧಾರಣೆಗಿದೆ ಅವಕಾಶ

ನಾಗೇಶ್ ಶೆಣೈ ಪಿ.
Published 4 ಸೆಪ್ಟೆಂಬರ್ 2011, 19:30 IST
Last Updated 4 ಸೆಪ್ಟೆಂಬರ್ 2011, 19:30 IST
ಸುಧಾರಣೆಗಿದೆ ಅವಕಾಶ
ಸುಧಾರಣೆಗಿದೆ ಅವಕಾಶ   

ದೂರದ ಇಂಗ್ಲೆಂಡ್‌ನಲ್ಲಿ ಭಾರತ ಕ್ರಿಕೆಟ್ ತಂಡಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಕಾಣುತ್ತಿದ್ದ ಸಮಯದಲ್ಲೇ, ನಮ್ಮ ವಾಲಿಬಾಲ್ ತಂಡ, ಇನ್ನೂ ದೂರದ ಬ್ರೆಜಿಲ್‌ನ   ರಿಯೊ ಡಿ ಜನೇರೊದಲ್ಲಿ ನಡೆದ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಬಲ ತಂಡದೆದರು ಆಡಿ 8ನೇ ಸ್ಥಾನ ಗಳಿಸಿದ್ದು ಹೆಚ್ಚು ಸುದ್ದಿಯಾಗಲಿಲ್ಲ.

ರಷ್ಯ, ಆರ್ಜೆಂಟೀನಾ, ಸರ್ಬಿಯ, ಅಮೆರಿಕ, ಆತಿಥೇಯ ಬ್ರೆಜಿಲ್ ಕ್ರಮವಾಗಿ ಮೊದಲ ಐದು ಸ್ಥಾನ ಗಳಿಸಿದ್ದವು. ಇರಾನ್, ಸ್ಪೇನ್ ನಂತರ ಭಾರತ ಎಂಟನೇ ಸ್ಥಾನ ಪಡೆಯಿತು.
ಅರ್ಹತೆ ಪಡೆದ 16 ತಂಡಗಳು ಕಣದಲ್ಲಿದ್ದವು. ಚಾಂಪಿಯನ್‌ಷಿಪ್ ನಡೆದ ಬೃಹತ್ ಒಳಾಂಗಣ ಕ್ರೀಡಾಂಗಣ 11,800 ಪ್ರೇಕ್ಷಕರ ಸಾಮರ್ಥ್ಯ ಹೊಂದಿತ್ತು!
`ಭಾರತ ಈ ಕೂಟದಲ್ಲಿ ಇನ್ನೂ ಮೇಲಿನ ಸ್ಥಾನ ಗಳಿಸಲು ಅರ್ಹವಾಗೇ ಇತ್ತು.
 
ಆದರೆ ಪ್ರಬಲ ತಂಡಗಳ ವಿರುದ್ಧ ನಿರ್ಣಾಯಕ ಸಂದರ್ಭದಲ್ಲಿ ನಮ್ಮ ಬ್ಲಾಕಿಂಗ್ ಮತ್ತು ರಕ್ಷಣೆಯಲ್ಲಿ ತಪ್ಪುಗಳಾದವು. ವಿಶೇಷವಾಗಿ ಸೈಡ್ ಬ್ಲಾಕರ್ಸ್  ಎಡವಿದರು~ ಎಂದು ತಂಡದ ಪ್ರದರ್ಶನ ಬಗ್ಗೆ ವಿಶ್ಲೇಷಿಸುತ್ತಾರೆ ತಂಡದ ಜತೆ ಸಹಾಯಕ ತರಬೇತುದಾರರಾಗಿ ತೆರಳಿದ್ದ ಭಾರತ ಕ್ರೀಡಾ ಪ್ರಾಧಿಕಾರ ತರಬೇತುದಾರ, ಮಂಗಳೂರಿನ ನಾರಾಯಣ ಆಳ್ವ. ಈ ತಂಡಕ್ಕೆ ಎಂ.ಎಚ್.ಕುಮಾರ್ ಮುಖ್ಯ ತರಬೇತುದಾರರಾಗಿದ್ದರೆ, ತಮಿಳುನಾಡಿನ ವೆಂಕಟೇಶನ್ ಇನ್ನೊಬ್ಬ ಸಹಾಯಕ ತರಬೇತುದಾರರಾಗಿದ್ದರು.

ಆಗಸ್ಟ್‌ನಲ್ಲಿ ನಡೆದ ಈ ಚಾಂಪಿಯನ್‌ಷಿಪ್‌ನ ಆರಂಭದ ಕೆಲವು ಪಂದ್ಯಗಳಲ್ಲಿ ಉತ್ತಮ ಬ್ಲಾಕ್‌ಗಳನ್ನು ಪ್ರದರ್ಶಿಸಿದ್ದ ಜಿ.ಆರ್.ವೈಷ್ಣವ್ ಕೊನೆಯ ಎರಡು ಪಂದ್ಯಗಳಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲಿಲ್ಲ. ಬ್ಲಾಕರ್‌ಗಳು ಪ್ರಮುಖ ಪಾತ್ರ ಬ್ಲಾಕಿಂಗ್‌ಗಿಂತ ಆಕ್ರಮಣಕ್ಕೆ ಮುಂದಾಗಿದ್ದೂ ಸ್ವಲ್ಪ ದುಬಾರಿಯಾಯಿತು. ದಾಳಿ ವಿಭಾಗದ ಆಟಗಾರರೂ ಸ್ಥಿರವಾದ ಪ್ರದರ್ಶನ ನೀಡಲಿಲ್ಲ ಎಂದು   ವಿವರಿಸುತ್ತಾರೆ ಆಳ್ವ.

ಹೆಚ್ಚು ಎತ್ತರ: ಚಾಂಪಿಯನ್ ಆಗಿದ್ದ ರಷ್ಯ ಎತ್ತರದ ಆಟಗಾರರನ್ನು ಹೊಂದಿದ್ದು, ಅದರ ಉಪಯೋಗವನ್ನು ಸಮರ್ಥವಾಗಿ ಬಳಸಿಕೊಂಡಿತು. ರಷ್ಯದ ಆಟಗಾರರ ಸರಾಸರಿ ಎತ್ತರ ಎರಡು ಮೀಟರ್‌ಗಳಾಗಿದ್ದರೆ, ಭಾರತ ಆಟಗಾರರ ಸರಾಸರಿ ಎತ್ತರ 1.93 ಮೀಟರ್. ಇದು ಕಳೆದ ವರ್ಷಕ್ಕೆ ಹೋಲಿಸಿದಲ್ಲಿ (1.98 ಮೀ) ಕಡಿಮೆ.

ಏಷ್ಯನ್ ಚಾಂಪಿಯನ್ ಆಗಿದ್ದ ಜಪಾನ್ 11ನೇ ಸ್ಥಾನಕ್ಕೆ ಸರಿದಿತ್ತು. ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಮೂರನೇ ಸ್ಥಾನ ಪಡೆದಿತ್ತು.

ಭಾರತ, ಪೂರ್ವಭಾವಿ ಹಂತದಲ್ಲಿ ಪ್ರಬಲ ಜರ್ಮನಿ, ಈಜಿಪ್ಟ್ ತಂಡಗಳನ್ನು ಸೋಲಿಸಿದ್ದರೆ, ಫೆವರೀಟ್ ರಷ್ಯ ಎದುರು ಸೋಲನುಭವಿಸಿತ್ತು. ಆದರೆ ಇದು ಕ್ವಾರ್ಟರ್‌ಫೈನಲ್ ಲೀಗ್ ತಲುಪುವುದಕ್ಕೆ ಅಡ್ಡಿಯಾಗಲಿಲ್ಲ.

ಕ್ವಾರ್ಟರ್‌ಫೈನಲ್ ಹಂತದಲ್ಲಿ ಭಾರತ ತಂಡ, ಆರ್ಜೆಂಟೀನಾ, ಸರ್ಬಿಯಾ ಎದುರು ಸೋತರೂ ಒಂದು ಸೆಟ್ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಆತಿಥೇಯ ಬ್ರೆಜಿಲ್ ತಂಡವನ್ನು 3-2 ರಲ್ಲಿ ಸೋಲಿಸಿದ್ದು ಗಮನ ಸೆಳೆಯಿತು. ಸರ್ಬಿಯಾ ಎದುರು ಭಾರತ ಜಯಗಳಿಸಿದ್ದರೆ, ಭಾರತ ಸೆಮಿಫೈನಲ್ ತಲುಪಲು ಅವಕಾಶವಿತ್ತು.

ಇನ್ನು ಏಳು ಮತ್ತು ಎಂಟನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲೂ ಭಾರತೀಯರು ಸ್ಪೇನ್ ತಂಡದ ಎದುರು ಸಾಧಿಸಿದ್ದ ಮೇಲುಗೈಯನ್ನು ಕೊನೆಯಲ್ಲಿ ಕಳೆದುಕೊಂಡರು. 2-0 ಮುನ್ನಡೆ ನಂತರ ಮೂರನೇ ಸೆಟ್‌ನಲ್ಲಿ 21-19ರಲ್ಲಿ ಮುಂದಿದ್ದ ಭಾರತ ತಂಡ ಕೊನೆಗೆ 2-3ರಲ್ಲಿ ಸೋಲನುಭವಿಸಿತು. ಸ್ಪೇನ್ ಆಟಗಾರರ ಪ್ರಬಲ ರಕ್ಷಣೆ ಇದಕ್ಕೆ ಕಾರಣ ಎನ್ನುತ್ತಾರೆ.

ತಂಡದ ನಾಯಕ ಬ್ಲಾಕರ್ ನವಜೀತ್ ಸಿಂಗ್ ಕಾಲು ನೋವಿನ ಸಮಸ್ಯೆ ಎದುರಿಸಿದರೆ, ಪ್ರಮುಖ ಸೆಟ್ಟರ್ ರಣಜಿತ್, ಸರ್ಬಿಯಾ ವಿರುದ್ಧ ಆಡುವಾಗ ಜ್ವರದಿಂದ ಹಿಂದೆ ಸರಿಯಬೇಕಾಯಿತು.

ಒಟ್ಟಾರೆ ಕೆಲವು ಹಿನ್ನಡೆಗಳ ಮಧ್ಯೆಯೂ ಭಾರತ ತಂಡದ ಆಟಗಾರ ಕನಕರಾಜ್ ಚಾಂಪಿಯನ್‌ಷಿಪ್‌ನ `ಬೆಸ್ಟ್ ಲಿಬ್ರೊ~ ಗೌರವ ಪಡೆದಿದ್ದು ಕಡಿಮೆಯೇನಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.