3I/ATLAS ಧೂಮಕೇತುವಿನ ಕಾಲ್ಪನಿಕ ಚಿತ್ರ
ಎಕ್ಸ್ ಚಿತ್ರ
ಬೆಂಗಳೂರು: ಹೊರಗಿನ ಧೂಮಕೇತುವೊಂದು ನಮ್ಮ ಸೌರಮಂಡಲ ಪ್ರವೇಶಿಸಿದ್ದು, ಇದು ಬುಧವಾರ (ಅ. 29) ಭೂಮಿಯ ಸಮೀಪ ಹಾದುಹೋಗಲಿದೆ ಎಂಬ ಸಂಗತಿಯು ಜಾಗತಿಕ ಖಗೋಳ ವಿಜ್ಞಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಇದನ್ನು 3I/ATLAS ಎಂದು ಈಗಾಗಲೇ ಕರೆಯಲಾಗಿದೆ. ಸೌರಮಂಡಲದಾಚಿಗಿನ ಧೂಮಕೇತುವೊಂದರ ನಿರ್ದಿಷ್ಟ ಪಥ, ಅದರಲ್ಲಿರುವ ರಾಸಾಯನಿಕ ಅಂಶಗಳು ಮತ್ತು ಅದರಿಂದ ಉಂಟಾಗಬಹುದಾದ ಪರಿಣಾಮಗಳ ಕುರಿತು ವಿಜ್ಞಾನಿಗಳು ಅಧ್ಯಯನ ಆರಂಭಿಸಿದ್ದಾರೆ.
ವಿಜ್ಞಾನಿಗಳ ಪ್ರಕಾರ ಇದರಿಂದ ಭೂಮಿಗೆ ಯಾವುದೇ ಹಾನಿ ಇಲ್ಲ. ಏಕೆಂದರೆ ಈ ಧೂಮಕೇತು ಭೂಮಿಯಿಂದ 27 ಕೋಟಿ ಕಿಲೋ ಮೀಟರ್ ದೂರದಲ್ಲಿ ಸಾಗುತ್ತಿದೆ. ಹೀಗಾಗಿ, ಸೌರಮಂಡಲದಾಚಿನ ವಸ್ತುವೊಂದರ ಕುರಿತ ಅಧ್ಯಯನಕ್ಕೆ ಇದು ಬಹುದೊಡ್ಡ ಅವಕಾಶವಾಗಿದೆ.
ಸೂರ್ಯನ ದಿಕ್ಕಿನೆಡೆಗೆ ವಿಚಿತ್ರವಾಗಿ ವರ್ತಿಸುವ ವಸ್ತುವೊಂದು ಹಾರಿಹೋಗುವುದನ್ನು ಅತ್ಯಾಧುನಿಕ ದೂರದರ್ಶಕದ ಮೂಲಕ ವಿಜ್ಞಾನಿಗಳು ಪತ್ತೆ ಮಾಡಿದ್ದರು. ಅದರ ರಚನೆ ಹಾಗೂ ವರ್ತನೆ ಕುತೂಹಲ ಮೂಡಿಸುವುದರ ಜತೆಗೆ, ನಕ್ಷತ್ರಗಳ ರಚನೆಯ ಕುರಿತು ಬಹುದೊಡ್ಡ ಮಾಹಿತಿಯನ್ನು ಇದು ಹೊಂದಿರಬಹುದು ಎಂಬ ಕಾರಣದಿಂದ ಖಗೋಳ ವಿಜ್ಞಾನಿಗಳ ಗಮನ ಇದರತ್ತ ನೆಟ್ಟಿದೆ.
ಈ ಧೂಮಕೇತು ಸೌರಮಂಡಲ ಪ್ರವೇಶಿಸಿದ ಸಂಗತಿಯನ್ನು ಕಳೆದ ಜುಲೈನಲ್ಲಿ ಖಗೋಳ ವಿಜ್ಞಾನಿಗಳು ಪತ್ತೆ ಮಾಡಿದ್ದರು. ಇದರ ರಚನೆ ಮೂಡಿಸಿದ ಕುತೂಹಲದಿಂದಾಗಿ ಜಗತ್ತಿನ ನಾಲ್ಕು ಅತ್ಯಂತ ಶಕ್ತಿಶಾಲಿ ದೂರದರ್ಶಕಗಳು ಇದರ ಚಲನವಲನದತ್ತ ಕಣ್ಣಿಟ್ಟಿವೆ.
‘ಅತಿಪರವಲಯ ಪಥದಲ್ಲಿ ಸೂರ್ಯನೆಡೆಗೆ ಇದು ಸಾಗುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ. ಇದರ ವೇಗ ಮತ್ತು ನಿರ್ದಿಷ್ಟ ಪಥದಿಂದ ಇದು ಸೌರಮಂಡಲದಾಚಿನ ವಸ್ತು ಎಂಬುದು ತಿಳಿಯಿತು. ಸೌರಮಂಡಲದಾಚೆಗಿನ ರಸಾಯನವಿಜ್ಞಾನ ಮತ್ತು ಧೂಮಕೇತುಗಳ ವಿಕಾಸವನ್ನು ಅರಿಯಲು 3I/ATLAS ಬಹಳಷ್ಟು ನೆರವಾಗಲಿದೆ’ ಎಂದು ಭೌತವಿಜ್ಞಾನಿ ಮಿಚಿಯೊ ಕಾಕು ತಿಳಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಅನ್ಯ ಸೌರಮಂಡಲದ ಧೂಮಕೇತು ಒಂದು ಬಾರಿ ಇಲ್ಲಿ ಕಾಣಿಸುವ ವಸ್ತುವಾಗಿರುವುದರಿಂದ ಯುವ ಖಗೋಳ ವಿಜ್ಞಾನಿಗಳಲ್ಲಿ ಬಹಳಷ್ಟು ಕುತೂಹಲ ಮೂಡಿಸಿದೆ. ಹಾಗೆಂದ ಮಾತ್ರಕ್ಕೆ ಇಂಥ ಕೌತುಕ ಇದೇ ಮೊದಲಲ್ಲ. 2017ರಲ್ಲಿ ಔಮೌಮೌ ಹಾಗೂ 2019ರಲ್ಲಿ 2I/Borisov ಕೂಡಾ ಸೌರಮಂಡಲದಾಚಿನ ವಸ್ತುಗಳು ಇಲ್ಲಿ ಕಂಡುಬಂದಿದ್ದವು.
ಸೂರ್ಯನ ಸುತ್ತ ಸುತ್ತುವ ಧೂಮಕೇತುಗಳಿಗಿಂತ ಭಿನ್ನವಾಗಿರುವ ಇವು ಸೌರ ಮಂಡಳವನ್ನು ಪ್ರವೇಶಿಸಿ ಒಂದು ಬಾರಿಯಷ್ಟೇ ಕಾಣಿಸುವ ಹಾಗೂ ನಂತರ ಆಳವಾದ ಬಾಹ್ಯಾಕಾಶದಲ್ಲಿ ಶಾಶ್ವತವಾಗಿ ನಾಪತ್ತೆಯಾಗುವ ವಸ್ತುವಾಗಿರುವುದರಿಂದ ಜಗತ್ತಿನ ಬಹಳಷ್ಟು ವಿಜ್ಞಾನಿಗಳು ಇದರ ಅಧ್ಯಯನದಲ್ಲಿ ತೊಡಗಿದ್ದಾರೆ.
ಹಿಂದೆ ಎಷ್ಟೋ ಲಕ್ಷ ವರ್ಷಗಳ ಹಿಂದೆ ಬೇರೊಂದು ಸೌರಮಂಡಲದಿಂದ ಹೊರಚಿಮ್ಮಿದ ಧೂಮಕೇತುವಿದು. ಹೀಗಾಗಿ ನಕ್ಷತ್ರಪುಂಜದ ಬೇರೊಂದು ಸೌರ ಮಂಡಳದ ವಸ್ತು ಹೇಗಿರುತ್ತದೆ ಎಂಬುದರ ಅಧ್ಯಯನದಲ್ಲಿ ಎಲ್ಲರೂ ಮುಳುಗಿದ್ದಾರೆ.
3I/ATLAS ಧೂಮಕೇತು ಗಾತ್ರ ಒಂದು ಕಿಲೋ ಮೀಟರ್‌ಗಿಂತಲೂ ಕಡಿಮೆ. ಇದನ್ನು ಅನಿಲದ ಮೋಡ ಹಾಗೂ ಧೂಳು ಸುತ್ತುವರಿದಿದೆ. ಇದರೊಂದಿಗೆ ಇಂಗಾಲದ ಡೈಆಕ್ಸೈಡ್, ಸೈನೈಡ್ ಮತ್ತು ನಿಕ್ಕಲ್ ಆವಿ ಇರುವುದರಿಂದ ಸೂರ್ಯನ ಬೆಳಕಿನಲ್ಲಿ ವಿಶೇಷವಾಗಿ ಪ್ರಜ್ವಲಿಸುವ ಗುಣ ಹೊಂದಿದೆ.
ಸೂರ್ಯನ ಸಮೀಪ ಸಾಗುತ್ತಿದ್ದಂತೆ ಆ ಶಾಖಕ್ಕೆ ವಿಚಿತ್ರವಾದ ಅನಿಲವನ್ನು ಇದು ಹೊರಹೊಮ್ಮಿಸುತ್ತದೆ. ಈ ಹೊರಸೂಸುವಿಕೆಯೇ ಅದರ ರಚನೆಯ ಮಾಹಿತಿ ಲಭ್ಯವಾಗುವಂತೆ ಮಾಡುತ್ತಿದೆ. ಆ ಮೂಲಕ ಇತರ ಸೌರಮಂಡಲಗಳ ರಚನೆ ಮಾಹಿತಿಯನ್ನು ವಿಜ್ಞಾನಿಗಳು ಅಂದಾಜಿಸುತ್ತಿದ್ದಾರೆ.
ಸ್ಪೇನ್‌ನ ಟೀಡ್ ಕೇಂದ್ರದಲ್ಲಿರುವ ದೂರದರ್ಶಕದ ಮೂಲಕ 2025ರ ಆಗಸ್ಟ್‌ನಲ್ಲಿ ಈ ಸೌರಮಂಡಲದಾಚಿನ ಧೂಮಕೇತುವಿನ ಚಿತ್ರವನ್ನು ಸೆರೆ ಹಿಡಿಯಲಾಯಿತು. ಧೂಮಕೇತುವಿನ ಬಾಲವು ಸೂರ್ಯನೆಡೆಗೆ ಸಾಗುತ್ತಿರುವುದನ್ನು ವಿಜ್ಞಾನಿಗಳು ಪತ್ತೆ ಮಾಡಿದರು. ಸೌರ ವಿಕಿರಣಕ್ಕೆ ವಿರುದ್ಧ ದಿಕ್ಕಿನಲ್ಲಿ ಈ ಧೂಮಕೇತುವಿನ ಬಾಲ ಇರುವುದನ್ನು ವಿಜ್ಞಾನಿಗಳು ಗಮನಿಸಿದರು.
ಇಷ್ಟು ಮಾತ್ರವಲ್ಲ, ಇದರ ವಿಶೇಷವಾದ ವೇಗ ಹಾಗೂ ವಿಚಿತ್ರ ಆಕಾರ ವಿಜ್ಞಾನಿಗಳ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿತ್ತು. ಇದು ನೈಸರ್ಗಿಕವಾಗಿ ರಚನೆಗೊಂಡಿರುವ ಸಾಧ್ಯತೆ ತೀರಾ ಕಡಿಮೆ ಇರುವುದರಿಂದ, ಇದರ ರಚನೆ ಹಾಗೂ ಚಲನವಲನ ತೀವ್ರ ಕುತೂಹಲ ಮೂಡಿಸಿದೆ ಎಂದು ಹಾರ್ವರ್ಡ್‌ನ ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.
3I/ATLAS ಧೂಮಕೇತುವಿನ ಹೊಳೆಯುವ ಮಟ್ಟವು 12ರಿಂದ 14 ಇದ್ದು, ದೂರದರ್ಶಕವಿಲ್ಲದೆ ಇದನ್ನು ನೋಡುವುದು ಅಸಾಧ್ಯ. ಅದರಲ್ಲೂ 200 ಮಿ.ಮೀ. ಅಪಾರ್ಚರ್ ಗಾತ್ರದ ದೂರದರ್ಶಕವೇ ಬೇಕು ಎನ್ನುತ್ತಾರೆ ತಜ್ಞರು.
ಸೂರ್ಯನ ಬಳಿ ಸಾಗುತ್ತಿದ್ದಂತೆ ಇದರ ಸ್ಥಾನ ಬದಲಾಗುವುದರಿಂದ ಕೆಲ ದಿನಗಳ ಕಾಲ ಗೋಚರಿಸದು. ಮುಂದೆ ಇದು 2025ರ ಡಿಸೆಂಬರ್‌ನಲ್ಲಿ ಕಾಣಿಸುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.