ಶಿಗೆರು ಇಶಿಬಾ
ಟೊಕಿಯೊ: ಜಪಾನ್‌ನ ಪ್ರಧಾನಿ ಹುದ್ದೆಗೆ ಶಿಗೆರು ಇಶಿಬಾ ಅವರು ಭಾನುವಾರ ರಾಜೀನಾಮೆ ಘೋಷಿಸಿದ್ದಾರೆ. ಅಧಿಕಾರಕ್ಕೇರಿ ಒಂದು ವರ್ಷ ಪೂರ್ಣಗೊಳ್ಳುವುದರೊಳಗಾಗಿ ಅವರು ಉಭಯ ಸದನಗಳಲ್ಲೂ ಬಹುಮತ ಕಳೆದುಕೊಂಡಿದ್ದಾರೆ.
ಮತ್ತೊಂದೆಡೆ ಜಗತ್ತಿನ ನಾಲ್ಕನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ಜಪಾನ್‌ನಲ್ಲಿ ಆಹಾರ ವಸ್ತುಗಳ ಬೆಲೆ ಏರುತ್ತಿದೆ. ಕಾರು ಉದ್ಯಮದ ಮೇಲೆ ಅಮೆರಿಕ ಹೇರಿರುವ ಸುಂಕವು ದೇಶಕ್ಕೆ ಸಾಕಷ್ಟು ಆರ್ಥಿಕತೆ ಹಿನ್ನಡೆ ನೀಡಿದೆ. ಇದರ ಬೆನ್ನಲ್ಲೇ ಇಶಿಬಾ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ‘ನಾನು ಪಕ್ಕಕ್ಕೆ ಸರಿದು ಮುಂದಿನ ತಲೆಮಾರಿಗೆ ದಾರಿ ಮಾಡಿಕೊಡಲು ತೀರ್ಮಾನಿಸಿದ್ದೇನೆ’ ಎಂದು ಇಶಿಬಾ ಅವರು ಹೇಳಿದ್ದಾರೆ.
ಇಶಿಬಾ ಅವರು ಪ್ರತಿನಿಧಿಸುವ ಲಿಬೆರಲ್ ಡೆಮಾಕ್ರೆಟಿಕ್ ಪಾರ್ಟಿ (LDP) ಯುದ್ಧದ ನಂತರದ ಬಹುತೇಕ ವರ್ಷಗಳ ಕಾಲ ದೇಶದಲ್ಲಿ ಅಧಿಕಾರಕ್ಕೇರಿದೆ. ಸದ್ಯ ಬಹುಮತ ಕಳೆದುಕೊಂಡಿದೆ. ಈ ಹಂತದಲ್ಲಿ ಮುಂದೇನಾಗಬಹುದು ಎಂಬ ಕುತೂಹಲ ಜಪಾನಿಯರಿಗೆ ಮಾತ್ರವಲ್ಲ, ಇಡೀ ಜಗತ್ತೇ ಕುತೂಹಲದಿಂದ ಎದುರುನೋಡುತ್ತಿದೆ.
ಇಶಿಬಾ ಅವರನ್ನು ಬದಲಿಸಲು ಎಲ್‌ಡಿಪಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು. ಅದಕ್ಕೆ ಈವರೆಗೂ ದಿನಾಂಕ ನಿಗದಿಯಾಗಿಲ್ಲ
2024ರ ಸೆಪ್ಟೆಂಬರ್‌ನಲ್ಲಿ ನಡೆದ ಪಕ್ಷದ ನಾಯಕನ ಚುನಾವಣೆಯಲ್ಲಿ ಅರ್ಹತೆ ಗಿಟ್ಟಸಿಕೊಳ್ಳಲು 20 ಸಂಸದರ ಮತಗಳ ಅಗತ್ಯ ಬೇಕಿತ್ತು. ಸದ್ಯ ಅ. 4ರಂದು ಚುನಾವಣೆ ಹಮ್ಮಿಕೊಳ್ಳಲು ಪಕ್ಷ ಯೋಜನೆ ಹೊಂದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ನಾಯಕತ್ವಕ್ಕಾಗಿ ಅಭ್ಯರ್ಥಿಗಳು ಜಪಾನ್‌ನಲ್ಲಿ ಚರ್ಚೆ ಹಾಗೂ ಪ್ರಚಾರ ನಡೆಸಬೇಕು. ಗೆಲ್ಲಬೇಕೆಂದರೆ ಸಂಸದರು ಮತ್ತು ಪಕ್ಷದ ಸದಸ್ಯರು ಅದಕ್ಕೆ ಶ್ರೇಣಿ ನೀಡಬೇಕು. ಕಳೆದ ಚುನಾವಣೆಯಲ್ಲಿ ಒಂಬತ್ತು ಸ್ಪರ್ಧಿಗಳು ಕಣದಲ್ಲಿದ್ದರು. ಇಶಿಬಾ ಅದರಲ್ಲಿ ಗೆಲುವು ಸಾಧಿಸಿದ್ದರು.
ಪೂರ್ಣ ಪ್ರಮಾಣದ ಚುನಾವಣೆ ಅಥವಾ ಸರಳ ಆಯ್ಕೆ ಎರಡೇ ಮಾದರಿಯಲ್ಲಿ ಪಕ್ಷವು ಮುಂದಿನ ನಾಯಕನನ್ನು ಆಯ್ಕೆ ಮಾಡಬೇಕಿದೆ.
ಕಳೆದ ಬಾರಿ ನಡೆದ ನಾಯಕತ್ವದ ಪೈಪೋಟಿಯಲ್ಲಿ ಪೂರ್ಣ ಪ್ರಮಾಣದ ಚುನಾವಣೆ ನಡೆದಿತ್ತು. ಅದರಲ್ಲಿ ಸಂಸದರು ಮತ ಚಲಾಯಿಸಿದ್ದರು. ಮೊದಲ ಸುತ್ತಿನಲ್ಲಿ ಸ್ಪರ್ಧಿಗಳು ಸಮಾನ ಮತಗಳನ್ನು ಪಡೆದಿದ್ದರು. ಸರಳ ಬಹುಮತ ಪಡೆದವರು ಪಕ್ಷದ ಅಧ್ಯಕ್ಷರಾಗಿದ್ದರು. ಒಂದೊಮ್ಮೆ ಯಾರೊಬ್ಬರಿಗೂ ಬಹುಮತ ಸಿಗದಿದ್ದರೆ, ಗರಿಷ್ಠ ಮತಗಳನ್ನು ಪಡೆದ ಇಬ್ಬರು ಅಭ್ಯರ್ಥಿಗಳ ನಡುವೆ ಸ್ಪರ್ಧೆ ಮುಂದುವರಿಯುತ್ತದೆ.
ಎರಡನೇ ಸುತ್ತಿನಲ್ಲಿ ಪ್ರತಿಯೊಬ್ಬ ಸಂಸದರಿಗೂ ಒಂದೊಂದು ಮತಗಳಿರುತ್ತವೆ. ಆದರೆ ಜಪಾನ್‌ನ ಪ್ರತಿ ಪ್ರಾಂತ್ಯಕ್ಕೂ ಒಂದರಂತೆ, ರ‍್ಯಾಂಕ್ ಮತ್ತು ಫೈಲ್ 47 ಮತಗಳಿಗೆ ಕುಸಿಯುತ್ತದೆ.
ಅವಧಿಗೂ ಮೊದಲೇ ಹಠಾತ್ತಾಗಿ ಅಧ್ಯಕ್ಷ ಸ್ಥಾನ ತೊರೆದರೆ ನಡೆಯುವ ಸರಳ ಮಾದರಿಯ ಚುನಾವಣೆಯೂ ಇದೇ ರೀತಿಯಲ್ಲೇ ಇರುತ್ತದೆ. ಎಲ್‌ಡಿಪಿ ಪಕ್ಷಕ್ಕೆ ಸೇರಿದ ಸಂಸದರು ಮತ್ತು ಪಕ್ಷದ ಮೂವರು ಪ್ರತಿನಿಧಿಗಳಿಗೆ ಮಾತ್ರ ಮತದಾನದ ಹಕ್ಕಿರುತ್ತದೆ.
ಈ ಚುನಾವಣೆಯಲ್ಲೂ ಸಮಬಲ ಸಾಧಿಸಿದರೆ, ಚೀಟಿ ಮೂಲಕ ವಿಜೇತರ ಆಯ್ಕೆ ನಡೆಯಬೇಕು ಎಂಬ ನಿಯಮವಿದೆ. ಆದರೆ ಅದು ಈವರೆಗೂ ನಡೆದಿಲ್ಲ. ಆದರೆ 2010ರಲ್ಲಿ ಎಲ್‌ಡಿಪಿ ಮೇಲ್ಮನೆ ನಾಯಕ ಯಾರಾಗಬೇಕು ಎಂಬುದನ್ನು ನಿರ್ಧರಿಸಲು ಈ ಪದ್ಧತಿ ಅನುಸರಿಸಲಾಗಿತ್ತು.
ಇಂಥ ಸರಳ ಮಾದರಿಯ ಚುನಾವಣೆಯು 2020ರಲ್ಲಿ ನಡೆದಿತ್ತು. ಪ್ರಧಾನಿ ಶಿಂಜೊ ಅಬೆ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಆಗ ಸ್ಪರ್ಧಿಸಿದ್ದ ಯುಷಿದೆ ಸುಗಾ ಅವರು ಹೊಸ ನಾಯಕರಾಗಿ ಆಯ್ಕೆಯಾಗಿದ್ದರು.
ಸದ್ಯದ ಪರಿಸ್ಥಿತಿಯಲ್ಲಿ ಸಮ್ಮಿಶ್ರ ಸರ್ಕಾರವು ಸಂಸತ್ತಿನಲ್ಲಿ ಬಹುಮತ ಕಳೆದುಕೊಂಡಿದೆ. ಹೀಗಾಗಿ ಎಲ್‌ಡಿಪಿ ಪಕ್ಷದ ನಾಯಕರೇ ಮುಂದಿನ ಪ್ರಧಾನಿಯಾಗುತ್ತಾರೆ ಎನ್ನುವಂತಿಲ್ಲ. ಕೆಳಮನೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಮುಂದುವರಿಯಲಿದೆ.
1994ರಲ್ಲಿ ಎಲ್‌ಡಿಪಿಯು ಮೂರು ಮಾರ್ಗಗಳಲ್ಲಿ ಮೈತ್ರಿ ಮಾಡಿಕೊಂಡಿತ್ತು. ಅದರಲ್ಲಿ ತನ್ನ ವಿರುದ್ಧದ ಸೋಷಿಯಲಿಸ್ಟ್ ಪಕ್ಷ ಮತ್ತು ಸಣ್ಣ ಹಾಗೂ ಹೊಸ ಪಕ್ಷಗಳ ಬೆಂಬಲದಿಂದ ಎಲ್‌ಡಿಪಿ ಅಧಿಕಾರಕ್ಕೆ ಬಂತು. ಸೋಷಿಯಲಿಸ್ಟ್ ನಾಯಕ ತೊಮಿಚಿ ಮುರಯಾಮಾ ಪ್ರಧಾನಿಯಾಗಿ ಆಯ್ಕೆಯಾದರು.
ಜಪಾನ್‌ನಲ್ಲಿ ಹೆಚ್ಚಿನ ಅಧಿಕಾರ ಹೊಂದಿರುವ ಕೆಳಮನೆಯಲ್ಲಿ ಪೂರ್ವ ನಿರ್ದೇಶನದಂತೆ ಪ್ರಧಾನಿ ಆಯ್ಕೆ ಮಾಡಲು ಮೊದಲು ಮತದಾನ ನಡೆಯಲಿದೆ. ಈ ಮನೆಯ ಯಾವುದೇ ಅಭ್ಯರ್ಥಿಯನ್ನು ಸಂಸದರು ನಾಮನಿರ್ದೇಶನ ಮಾಡಬಹುದು ಮತ್ತು ವಿರೋಧ ಪಕ್ಷದವರಿಗೂ ಇದರಲ್ಲಿ ಮತ ಹಾಕುವ ಹಕ್ಕಿರುತ್ತದೆ.
ಯಾವುದೇ ಅಭ್ಯರ್ಥಿಯು ಮೊದಲ ಸುತ್ತಿನಲ್ಲೇ ಸರಳ ಬಹುಮತ ಪಡೆದರೆ ಅವರು ಜಯಶಾಲಿಯಾದಂತೆ. ಯಾರಿಗೂ ಬಹುಮತ ಸಿಗದಿದ್ದರೆ, ಚುನಾವಣೆ ಅನಿವಾರ್ಯ. ಇದರಲ್ಲಿ ಗರಿಷ್ಠ ಮತ ಪಡೆದ ಮೊದಲ ಇಬ್ಬರ ನಡುವೆ ಮಾತ್ರ ಪೈಪೋಟಿ ನಡೆಯಲಿದೆ.
ನಂತರ ಮೇಲ್ಮನೆಯಲ್ಲಿ ಈ ಪ್ರಕ್ರಿಯೆ ನಡೆಯಲಿದೆ. ಇದೇ ಮಾದರಿ ಅಲ್ಲಿಯೂ ಅನುಸರಿಸಲಾಗುತ್ತದೆ. ಹೀಗಿದ್ದರೂ ಕೆಳಮನೆಯವರಿಗೆ ಮಾತ್ರ ಪ್ರಧಾನಿಯಾಗುವ ಅರ್ಹತೆ ಇರುತ್ತದೆ.
ಮೇಲ್ಮನೆ ಹಾಗೂ ಕೆಳಮನೆಯಲ್ಲಿ ಒಮ್ಮತ ಮೂಡದಿದ್ದರೆ, ಕೆಳಮನೆಯ ತೀರ್ಮಾನವೇ ಅಂತಿಮ. 2008ರಲ್ಲಿ ಕೆಳಮನೆಯ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ, ಮೇಲ್ಮನೆ ಪ್ರತಿಸ್ಪರ್ಧಿಯನ್ನು ಆಯ್ಕೆ ಮಾಡಿದ ಸಂಗತಿ ನಡೆದಿತ್ತು.
ಹೊಸದಾಗಿ ಆಯ್ಕೆಯಾಗುವ ಜಪಾನ್‌ನ ಪ್ರಧಾನಿಯು ಜನರ ತೀರ್ಮಾನ ಬಯಸಿ ಸಾರ್ವತ್ರಿಕ ಚುನಾವಣೆಯನ್ನೂ ಘೋಷಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.