ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಗೆ ಪ್ರತ್ಯುತ್ತರವಾಗಿ ಭಾರತ ವಾಘಾ–ಅಟ್ಟಾರಿ ಗಡಿ ಬಂದ್ ಮಾಡಲು ನಿರ್ಧರಿಸಿದೆ. ಈ ನಿರ್ಧಾರದಿಂದ ಪಾಕ್‌ನ ವ್ಯಾಪಾರಕ್ಕೆ ಮತ್ತಷ್ಟು ಹೊಡೆತ ಬೀಳಲಿದೆ ಎಂದು ವಿಶ್ಲೇಷಿಸಲಾಗಿದೆ.
ಅಟ್ಟಾರಿ ಗಡಿಯಲ್ಲಿ ಇರುವ ಚೆಕ್‌ಪೋಸ್ಟ್ ಅನ್ನು (ತಪಾಸಣಾ ಠಾಣೆ) ತಕ್ಷಣದಿಂದ ಜಾರಿಗೆ ಬರುವಂತೆ ಮುಚ್ಚಲಾಗುತ್ತದೆ ಎಂದು ಭಾರತ ಹೇಳಿದೆ. ಈ ಮಾರ್ಗದ ಮೂಲಕ ಗಡಿ ದಾಟಿದವರು ಮೇ 1ಕ್ಕೆ ಮೊದಲು ವಾಪಸ್ ಆಗಬೇಕು. ದೇಶದ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಬುಧವಾರ ಈ ಮಾಹಿತಿ ನೀಡಿದ್ದಾರೆ.
ಅಮೃತಸರದಿಂದ ಕೇವಲ 28 ಕಿಲೋಮೀಟರ್ ದೂರದಲ್ಲಿರುವ ಅಟ್ಟಾರಿ, ಭಾರತದ ಮೊದಲ ಭೂ ಬಂದರು ಮತ್ತು ಪಾಕಿಸ್ತಾನದೊಂದಿಗೆ ವ್ಯಾಪಾರಕ್ಕಾಗಿ ಅನುಮತಿಸಲಾದ ಏಕೈಕ ಭೂ ಮಾರ್ಗವಾಗಿದೆ. ಇದು 120 ಎಕರೆಗಳಷ್ಟು ವಿಸ್ತೀರ್ಣದಲ್ಲಿ ಹರಡಿಕೊಂಡಿದ್ದು, ರಾಷ್ಟ್ರೀಯ ಹೆದ್ದಾರಿ-1ಕ್ಕೆ ನೇರವಾಗಿ ಸಂಪರ್ಕ ಹೊಂದಿದೆ.
ಅಟ್ಟಾರಿ ಬಂದರು ಭಾರತ-ಪಾಕಿಸ್ತಾನ ನಡುವಿನ ವ್ಯಾಪಾರದಲ್ಲಿ ಮಾತ್ರವಲ್ಲದೇ, ಗಡಿಯಾಚೆಗಿನ ವ್ಯಾಪಾರದಲ್ಲಿಯೂ ವಿಶೇಷವಾಗಿ ಅಫ್ಗಾನಿಸ್ತಾನದ ಸರಕುಗಳ ಆಮದಿನಲ್ಲೂ ನಿರ್ಣಾಯಕ ಪಾತ್ರ ವಹಿಸಿದೆ.
ವಾಘಾ–ಅಟ್ಟಾರಿ ಗಡಿ ಪ್ರತಿ ವರ್ಷ ವ್ಯಾಪಾರ ಮತ್ತು ಪ್ರಯಾಣಿಕರ ಸಂಚಾರದಲ್ಲಿ ಏರಿಳಿತಗಳನ್ನು ಕಂಡಿದೆ. 2023-24ರಲ್ಲಿ 6,871 ಸರಕು ಸಾಗಣೆ ವಾಹನಗಳು ಈ ಬಂದರಿನ ಮೂಲಕ ಹಾದು ಹೋಗಿವೆ. 71,563 ಜನ ಈ ಮಾರ್ಗದ ಮೂಲಕ ಪ್ರಯಾಣಿಸಿದ್ದಾರೆ. ಈ ಅವಧಿಯಲ್ಲಿ ಒಟ್ಟು ₹ 3,886.53 ಕೋಟಿ ಮೌಲ್ಯದ ವ್ಯಾಪಾರ ವಹಿವಾಟು ನಡೆದಿದೆ.
ಈ ಬಂದರು ಬಹಳ ಹಿಂದಿನಿಂದಲೂ ಭಾರತ ಮತ್ತು ಪಾಕಿಸ್ತಾನದ ನಡುವಿನ ಪ್ರಮುಖ ವ್ಯಾಪಾರ ಮಾರ್ಗವಾಗಿದೆ. ಭಾರತದಿಂದ, ಸೋಯಾಬೀನ್, ಕೋಳಿ ಆಹಾರ, ತರಕಾರಿ, ಕೆಂಪು ಮೆಣಸಿನಕಾಯಿ, ಪ್ಲಾಸ್ಟಿಕ್ ಕಣಗಳು ಮತ್ತು ಪ್ಲಾಸ್ಟಿಕ್ ದಾರದಂತಹ ಸರಕುಗಳನ್ನು ರಫ್ತು ಮಾಡಲಾಗುತ್ತದೆ. ಅದೇ ಸಮಯದಲ್ಲಿ, ಒಣ ಹಣ್ಣುಗಳು, ಒಣ ಖರ್ಜೂರ, ಜಿಪ್ಸಮ್, ಸಿಮೆಂಟ್, ಗಾಜು, ಕಲ್ಲು ಉಪ್ಪು ಮತ್ತು ವಿವಿಧ ರೀತಿಯ ಗಿಡಮೂಲಿಕೆಗಳು ಪಾಕಿಸ್ತಾನ ಮತ್ತು ಇತರ ದೇಶಗಳಿಂದ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ.
ಅಟ್ಟಾರಿ ಚೆಕ್ ಪೋಸ್ಟ್ ಮುಚ್ಚುವ ನಿರ್ಧಾರವು ವಿಶೇಷವಾಗಿ ದಿನನಿತ್ಯದ ವಸ್ತುಗಳ ವ್ಯಾಪಾರವನ್ನು ಅವಲಂಬಿಸಿರುವ ಸಣ್ಣ ವ್ಯಾಪಾರಿಗಳು ಮತ್ತು ತಯಾರಕರ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ, ಈಗಾಗಲೇ ದುರ್ಬಲಗೊಂಡಿರುವ ವ್ಯಾಪಾರ ಸಂಬಂಧಕ್ಕೆ ಮತ್ತಷ್ಟು ಹೊಡೆತ ಬೀಳಲಿದೆ.
ಅಲ್ಲದೆ, ಭಾರತ ಮತ್ತು ಅಫ್ಗಾನಿಸ್ತಾನದ ನಡುವಿನ ಆಮದು-ರಫ್ತಿನ ಮೇಲೂ ಪರಿಣಾಮ ಬೀರಬಹುದು ಎನ್ನಲಾಗಿದೆ. ಏಕೆಂದರೆ ಹಲವು ಸರಕುಗಳನ್ನು ಪಾಕಿಸ್ತಾನದ ಮೂಲಕ ಈ ಮಾರ್ಗವಾಗಿ ಸಾಗಿಸಲಾಗುತ್ತಿತ್ತು. ಈಗ ಈ ಮಾರ್ಗ ಮುಚ್ಚಿರುವುದರಿಂದ ಸಾಗಣೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಬಹುದು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.