ಜಮಾಲುದ್ದೀನ್ ಅಲಿಯಾಸ್ ಚಂಗೂರ್ ಬಾಬಾ
ಎಕ್ಸ್ ಚಿತ್ರ
ಸಮಾಜದಲ್ಲಿನ ದುರ್ಬಲ ಮತ್ತು ಬಡ ಜನರಿಗೆ ಹಣದ ಆಮಿಶವೊಡ್ಡಿ ಮತಾಂತರ ದಂಧೆ ನಡೆಸುತ್ತಿರುವ ಜಾಲದ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದೆ. ಈ ಜಾಲ ನಡೆಸುತ್ತಿದ್ದ ಚಂಗೂರ್ ಬಾಬಾನನ್ನು ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ಪಡೆ ಬಂಧಿಸಿದೆ.
ಸಂಚುಕೋರ ಜಮಾಲುದ್ದೀನ್ ಅಲಿಯಾಸ್ ಚಂಗೂರ್ ಬಾಬಾನ ಅಕ್ರಮ ಚಟುವಟಿಕೆಗಳು ಮತ್ತು ವಿದೇಶದಿಂದ ವರ್ಗಾವಣೆಯಾಗಿರುವ ₹106 ಕೋಟಿಗೂ ಹೆಚ್ಚು ಹಣದ ಮೂಲದ ಕುರಿತು ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ. ಜಾರಿ ನಿರ್ದೇಶನಾಲಯದ ಲಖನೌ ಘಟಕವು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಮಂಗಳವಾರ ಸಂಜೆ ಪ್ರಕರಣ ದಾಖಲು ಮಾಡಿದೆ.
ಈ ಜಾಲದಲ್ಲಿ 18 ಜನರು ಸಕ್ರಿಯವಾಗಿದ್ದು, ಆ ಪೈಕಿ ನಾಲ್ವರನ್ನು ಬಂಧಿಸಲಾಗಿದೆ. ಉಳಿದವರ ಬಂಧನಕ್ಕೆ ಶೋಧ ನಡೆಯುತ್ತಿದೆ. ಈ ಜಾಲವು ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಎಟಿಎಸ್ ಮೂಲಗಳು ತಿಳಿಸಿವೆ.
ಜಮಾಲುದ್ದೀನ್ ಅವರ ಗುಂಪು ಸಮಾಜ ವಿರೋಧಿ ಅಷ್ಟೇ ಅಲ್ಲ ರಾಷ್ಟ್ರ ವಿರೋಧಿಯೂ ಆಗಿದೆ. ಈ ಜಾಲದಲ್ಲಿ ಇರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಇದರ ಬೆನ್ನಲ್ಲೇ ಬಲರಾಂಪುರದ ಉತ್ರೌಲಾದಲ್ಲಿರುವ ಜಮಾಲುದ್ದೀನ್ ಅವರ ಮನೆಯನ್ನು ಜಿಲ್ಲಾಡಳಿತ ಬುಲ್ಡೋಜರ್‌ಗಳನ್ನು ಬಳಸಿ ನೆಲಸಮಗೊಳಿಸಿದೆ.
ಕೇವಲ ಮತಾಂತರ ಮಾತ್ರವಲ್ಲದೆ 2022ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಹಳಷ್ಟು ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ಚಂಗೂರ್ ಬಾಬಾ ಆರ್ಥಿಕ ನೆರವು ನೀಡಿದ್ದರು. ಈ ದಾಖಲೆಗಳೆಲ್ಲವೂ ಆ ಕೆಂಪು ಬಣ್ಣದ ಡೈರಿಯಲ್ಲಿದೆ ಎಂದೆನ್ನಲಾಗಿದ್ದು, ತನಿಖಾ ತಂಡ ಇದರ ಬೆನ್ನು ಹತ್ತಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಜಂಗೂರ್ ಬಾಬಾ ಅಥವಾ ಪೀರ್ ಬಾಬಾ ಎಂದೇ ಕರೆಯಲಾಗುವ ಜಮಾಲುದ್ದೀನ್ ಬಲರಾಮಪುರದ ರೆಹರಾ ಮಾಫಿ ಗ್ರಾಮದ ನಿವಾಸಿ. ಇದು ನೇಪಾಳದೊಂದಿಗೆ ಗಡಿ ಹಂಚಿಕೊಂಡಿದೆ. ಆರಂಭದಲ್ಲಿ ಸೈಕಲ್‌ನಲ್ಲಿ ಬಳೆ, ತಾಯತ ಮಾರಿಕೊಂಡು ಜೀವನ ನಡೆಸುತ್ತಿದ್ದ ಜಮಾಲುದ್ದೀನ್, ಕೆಲವೇ ದಶಕಗಳಲ್ಲಿ ನೂರರು ಕೋಟಿ ರೂಪಾಯಿಯ ಸಾಮ್ರಾಜ್ಯ ಕಟ್ಟಿದ್ದರ ರಹಸ್ಯವನ್ನು ಇಡಿ ಅಧಿಕಾರಿಗಳು ಭೇದಿಸುತ್ತಿದ್ದಾರೆ.
ಬಾಬಾ ಹಣಕಾಸು ಏಕಾಏಕಿ ಏರಿದ್ದರ ಹಿಂದೆ ಪಶ್ಚಿಮ ಏಷ್ಯಾ ರಾಷ್ಟ್ರಗಳಿಂದ ಹರಿದು ಬಂದ ದೇಣಿಗೆ ಇದೆ ಎಂದು ಅಧಿಕಾರಿಗಳು ಪಟ್ಟಿ ಮಾಡಿದ್ದಾರೆ. ಸುಮಾರು 40 ಬ್ಯಾಂಕ್ ಖಾತೆಗಳನ್ನು ಬಾಬಾ ನಿರ್ವಹಿಸುತ್ತಿದ್ದರು. ಇವುಗಳಿಗೆ ಸುಮಾರು ₹106 ಕೋಟಿ ಹರಿದುಬಂದಿದೆ. ಉತ್ತರ ಪ್ರದೇಶದ ಬಲರಾಮಪುರ ಹಾಗೂ ಮಹಾರಾಷ್ಟ್ರದ ಲೋನಾವಾಲಾದಲ್ಲಿ ಚಂಗೂರ್ ಬಾಬಾಗೆ ಸೇರಿದ ಆಸ್ತಿಗಳಿದ್ದು, ಇವುಗಳ ಒಟ್ಟು ಮೊತ್ತ ₹18 ಕೋಟಿ ಎಂದು ಅಂದಾಜಿಸಲಾಗಿದೆ.
ಅಧಿಕಾರಿಗಳಿಗೆ ದೊರೆತಿರುವ ಆ ಕೆಂಪು ಡೈರಿಯಲ್ಲಿ ಇರುವ ಕೆಲ ರಾಜಕಾರಣಿಗಳ ಹೆಸರು, ಕೊಟ್ಟ ಹಣದ ವಿವರವು ಪ್ರಕರಣಕ್ಕೆ ರಾಜಕೀಯ ತಿರುವು ನೀಡಿದೆ. ಪೊಲೀಸರ ಮಾಹಿತಿ ಪ್ರಕಾರ, ಬಾಬಾ ಬಳಿ ಅರ್ಧ ಡಜನ್‌ಗೂ ಹೆಚ್ಚು ರಾಜಕಾರಣಿಗಳು ಆರ್ಥಿಕ ನೆರವು ಪಡೆದಿದ್ದಾರೆ.
2022ರ ವಿಧಾನಸಭಾ ಚುನಾವಣೆಯಲ್ಲಿ ಉತ್ರಾಲಾ ಕ್ಷೇತ್ರದ ಮಾಜಿ ಅಭ್ಯರ್ಥಿಯೊಬ್ಬರಿಗೆ ಬಾಬಾ ₹90 ಲಕ್ಷ ನೀಡಿದ್ದಾರೆ. ಆ ಚುನಾವಣೆಯಲ್ಲಿ ಬಾಬಾ ಅಭ್ಯರ್ಥಿ ಪರಾಭವಗೊಂಡರು. ಆದರೆ 2027ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿರುವ ಮಾಜಿ ಐಪಿಎಸ್ ಅಧಿಕಾರಿಗೂ ಹಣಕಾಸಿನ ನೆರವನ್ನು ಬಾಬಾ ನೀಡುತ್ತಿದ್ದರು ಎಂಬುದನ್ನು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಉತ್ತರ ಪ್ರದೇಶದ ರಾಜಕೀಯದಲ್ಲೂ ಸಾಕಷ್ಟು ಹಿಡಿತ ಹೊಂದಿದ್ದ ಚಂಗೂರ್ ಬಾಬಾ, ಅಭ್ಯರ್ಥಿಗಳಿಗೆ ಆರ್ಥಿಕವಾಗಿ ನೆರವಾಗುವುದು ಮಾತ್ರವಲ್ಲ, ಮತ ಹಾಕಿಸಲು ತಮ್ಮ ಬೆಂಬಲಿಗರನ್ನು ಸಜ್ಜುಗೊಳಿಸುತ್ತಿದ್ದರು ಎಂದೆನ್ನಲಾಗಿದೆ.
2023ರಲ್ಲಿ ಹತನಾದ ರಾಜಕಾರಣಿ ಮತ್ತು ಗ್ಯಾಂಗ್‌ಸ್ಟರ್ ಅತೀಖ್ ಅಹ್ಮದ್ ಅವರೊಂದಿಗೆ ಚಂಗೂರ್ ಬಾಬಾ ಇರುವ ಭಾವಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿತು.
ಲಖನೌದ ಹೋಟೆಲ್ ಒಂದರಲ್ಲಿದ್ದ ಚಂಗೂರ್ ಬಾಬಾ ಮತ್ತು ನೀತು ಅಲಿಯಾಸ್ ನಸ್ರೀನ್ ಎಂಬುವವರನ್ನು ಪೊಲೀಸರು ಜುಲೈ 5ರಂದು ಬಂಧಿಸಿದ್ದರು. ಸಮಾಜದಲ್ಲಿನ ದುರ್ಬಲ ಮತ್ತು ಬಡ ಜನರಿಗೆ ಹಣದ ಆಮಿಶವೊಡ್ಡಿ ಮತಾಂತರ ದಂಧೆ ನಡೆಸುತ್ತಿರುವ ಆರೋಪವನ್ನು ಬಾಬಾ ಎದುರಿಸುತ್ತಿದ್ದರು. ಬಾಬಾನ ಜಾಲಕ್ಕೆ ಬಲಿಯಾಗುತ್ತಿದ್ದವರಲ್ಲಿ ವಿಧವೆಯರು, ದಿನಗೂಲಿ ನೌಕರರು, ಪರಿಶಿಷ್ಟ ಜಾತಿಗೆ ಸೇರಿದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇದಕ್ಕಾಗಿ ಹಣದ ಆಮಿಷ, ಬಲವಂತ ಮತ್ತು ಮದುವೆ ಮಾಡಿಸುವ ಭರವಸೆಯನ್ನು ನೀಡಲಾಗುತ್ತಿತ್ತು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಬಾಬಾ ವಿರುದ್ಧ ಮೊದಲು ಬಲರಾಮಪುರದಲ್ಲಿರುವ ಎಸ್‌ಟಿಎಫ್ ಪ್ರಕರಣ ದಾಖಲಿಸಿಕೊಂಡಿತು. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯವು ತನಿಖೆ ಆರಂಭಿಸಿತು. ಬಾಬಾ ಖಾತೆಗೆ ಬಂದ ಹಣದ ಮೂಲದಲ್ಲಿ ಬೇರೆ ಯಾವುದೇ ಸಂಘಟನೆಗಳ ನಂಟು ಇದೆಯೇ ಎಂಬುದರ ತನಿಖೆ ನಡೆಯುತ್ತಿದೆ. ಜತೆಗೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ ಉಲ್ಲಂಘನೆ ಆಗಿದೆಯೇ ಎಂಬುದರ ಸುತ್ತಲೂ ಇ.ಡಿ. ತನಿಖೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.
ಮುಂಬೈ, ಉತ್ರಾಲಾ ಸೇರಿದಂತೆ 14 ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜುಲೈ 17ರಂದು ದಾಳಿ ನಡೆಸಿದ್ದರು. ಚಂಗೂರ್ ಬಾಬಾ ಮೂಲ ಊರಿನಿಂದ ಮೂರು ಕಿಲೋ ಮೀಟರ್ ದೂರದಲ್ಲಿರುವ ಮಾಧುಪುರದಲ್ಲಿದ್ದ ಅಕ್ರಮ ಕಟ್ಟಡವನ್ನು ಜಿಲ್ಲಾಡಳಿತ ನೆಲಸಮ ಮಾಡಿತು. ಇದು ಸರ್ಕಾರಕ್ಕೆ ಸೇರಿದ ಜಾಗವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಕಟ್ಟಡಕ್ಕೆ 15 ಕ್ಯಾಮೆರಾ ಅಳವಡಿಸಲಾಗಿತ್ತು. ಕಾವಲಿಗೆ ಎರಡು ನಾಯಿಗಳನ್ನು ಸಾಕಲಾಗಿತ್ತು. ಹಲವು ದಿನಗಳಿಂದ ಅಧಿಕಾರಿಗಳು ಇದರ ಮೇಲೆ ನಿಗಾ ಇಟ್ಟಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಚಂಗೂರ್ ಬಾಬಾ ಆಸ್ತಿ ಗಳಿಕೆ, ಮತಾಂತರ ಹಾಗೂ ಇನ್ನಿತರ ಚಟುವಟಿಕೆಗಳ ಕುರಿತು ಹಲವು ಆಯಾಮಗಳಿಂದ ತನಿಖೆ ನಡೆಯುತ್ತಿದೆ. ಲಭ್ಯವಾದ ‘ಕೆಂಪು ಡೈರಿ’ಯ ಸುತ್ತಲೇ ವಿವಿಧ ತನಿಖಾ ಸಂಸ್ಥೆಗಳು ತನಿಖೆ ನಡೆಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.