ADVERTISEMENT

Explainer | ವಕ್ಫ್ ತಿದ್ದುಪಡಿ ಮಸೂದೆ 2024: ಹೊಸ ಕಾಯ್ದೆಯಿಂದ ಯಾರಿಗೆ ಪ್ರಯೋಜನ?

ಏಜೆನ್ಸೀಸ್
Published 2 ಏಪ್ರಿಲ್ 2025, 13:04 IST
Last Updated 2 ಏಪ್ರಿಲ್ 2025, 13:04 IST
<div class="paragraphs"><p>ಸಂಸತ್ ಭವನ</p></div>

ಸಂಸತ್ ಭವನ

   

ಪಿಟಿಐ ಚಿತ್ರ

‘ಹೊಸದಾಗಿ ತಿದ್ದುಪಡಿಯಾದ ವಕ್ಫ್‌ ಕಾಯ್ದೆಯು ಆಸ್ತಿಗಳ ನಿರ್ವಹಣೆ, ಪಾರದರ್ಶಕತೆ, ಲೆಕ್ಕಪರಿಶೋಧನೆ ಮತ್ತು ಬಡವರ ಹಿತಕ್ಕಾಗಿ ಮಹತ್ವದ ಬದಲಾವಣೆಗಳನ್ನು ತರಲಿದೆ’ ಎಂದು ಸರ್ಕಾರ ಹೇಳಿದೆ.

ವಕ್ಫ್‌ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರವು ಬುಧವಾರ ಲೋಕಸಭೆಯಲ್ಲಿ ಮಂಡಿಸಿದೆ. ಮಸೂದೆ ಮೇಲಿನ ಚರ್ಚೆಗೆ ಸ್ಪೀಕರ್ ಓಂ ಬಿರ್ಲಾ ಅವರು ಎಂಟು ಗಂಟೆಯ ಅವಧಿ ನಿಗದಿಪಡಿಸಿದ್ದಾರೆ. ಕಾಂಗ್ರೆಸ್ ವಿಪ್ ಜಾರಿ ಮಾಡಿದೆ. ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಮುಸ್ಲಿಂ ಸಂಘಟನೆಗಳಲ್ಲಿ ಕೆಲವು ವಿರೋಧ ವ್ಯಕ್ತಪಡಿಸಿದರೆ, ಇನ್ನೂ ಕೆಲವು ಬೆಂಬಲ ವ್ಯಕ್ತಪಡಿಸಿವೆ.

ADVERTISEMENT

ವಕ್ಫ್ ಆಸ್ತಿಗಳ ಮೇಲೆ ಕೇಂದ್ರದ ನಿಯಂತ್ರಣ ಹೆಚ್ಚಿಸುವ ವಕ್ಫ್‌ ಕಾಯ್ದೆ 1995ಕ್ಕೆ ತಿದ್ದುಪಡಿಗೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. 2024ರ ಆ. 8ರಂದು ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಅಂದು ವಕ್ಫ್‌ ತಿದ್ದುಪಡಿ ಮಸೂದೆ ಹಾಗೂ ಮುಸಲ್ಮಾನ್‌ ವಕ್ಫ್‌ (ರದ್ದು) ಮಸೂದೆ 2024 ಅನ್ನು ಮಂಡಿಸಲಾಗಿತ್ತು. 

ಏಕೀಕೃತ ವಕ್ಫ್‌ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಕಾಯ್ದೆ 2024 ಎಂದು ಮರುನಾಮಕರಣ ಮಾಡಲಾಗಿದೆ. ಈ ಮಸೂದೆಯಿಂದ ವಕ್ಫ್‌ ಆಸ್ತಿಗಳ ಆಡಳಿತ ಮತ್ತು ನಿರ್ವಹಣೆ ಸುಲಲಿತವಾಗಲಿದೆ ಎಂದೆನ್ನಲಾಗಿದೆ. 

ಭಾರತದಲ್ಲಿ ವಕ್ಫ್‌ ಆಡಳಿತ ಮಂಡಳಿಯ ಜವಾಬ್ದಾರಿಗಳೇನು?

ವಕ್ಫ್‌ ಆಸ್ತಿಗಳ ನಿರ್ವಹಣೆಯನ್ನು ಭಾರತದಲ್ಲಿ ಸದ್ಯ ವಕ್ಫ್‌ ಕಾಯ್ದೆ 1995ರ ಅಡಿಯಲ್ಲಿ ನಿರ್ವಹಿಸಲಾಗುತ್ತಿದೆ. ಈ ಮಂಡಳಿಯನ್ನು ಕೇಂದ್ರ ಸರ್ಕಾರ ನಿರ್ವಹಿಸುತ್ತಿದೆ. ಇದರ ಪ್ರಮುಖ ಆಡಳಿತ ಮಂಡಳಿಯು ವಕ್ಫ್‌ ಆಸ್ತಿಗಳ ನಿರ್ವಹಣೆಯ ಜವಾಬ್ದಾರಿ ಹೊತ್ತಿದೆ.

ಇದರಲ್ಲಿ ಕೇಂದ್ರ ವಕ್ಫ್ ಮಂಡಳಿ (CWC), ಕೇಂದ್ರ ಹಾಗೂ ರಾಜ್ಯದ ವಕ್ಫ್ ಮಂಡಳಿಗಳಿಗೆ ನೀತಿಗಳ ಕುರಿತು ಸಲಹೆ ನೀಡುತ್ತದೆ. ಆದರೆ ವಕ್ಫ್‌ ಆಸ್ತಿಗಳ ಮೇಲೆ ಯಾವುದೇ ಹಕ್ಕುಗಳಿಲ್ಲ. ರಾಜ್ಯ ವಕ್ಫ್‌ ಮಂಡಳಿ (SWBs) ಪ್ರತಿ ರಾಜ್ಯಗಳಲ್ಲಿದ್ದು, ಇದು ಅಲ್ಲಿರುವ ಆಸ್ತಿಗಳ ರಕ್ಷಣೆಯ ಹೊಣೆ ಹೊತ್ತಿದೆ. ವಕ್ಫ್‌ ನ್ಯಾಯಮಂಡಳಿಯು ವಕ್ಫ್ ಆಸ್ತಿಗಳ ಕುರಿತ ತಕರಾರು ಹಾಗೂ ವ್ಯಾಜ್ಯಗಳನ್ನು ನಿರ್ವಹಿಸುವ ಸಂಸ್ಥೆ. ಕಳೆದ ಹಲವು ವರ್ಷಗಳಿಂದ ಈ ವ್ಯವಸ್ಥೆ ನಡೆದುಕೊಂಡು ಬಂದಿದೆ. 

ವಕ್ಫ್‌ ಮಂಡಳಿ ಕುರಿತು ಇರುವ ವಿವಾಧಗಳೇನು?

ಹಿಂದೊಮ್ಮೆ ವಕ್ಫ್‌ ಆಸ್ತಿಯಾಗಿದ್ದರೆ, ಅದು ಶಾಶ್ವತವಾಗಿ ವಕ್ಫ್‌ನ ಆಸ್ತಿ ಎಂಬ ಮಾತು ಬೆಟ್‌ ದ್ವಾರಕಾದ ದ್ವೀಪ ಕುರಿತ ವಿವಾದ ಎದ್ದಿದ್ದು, ನ್ಯಾಯಾಲಯಕ್ಕೂ ತಲೆನೋವಾಗಿತ್ತು. ವಕ್ಫ್‌ ಆಸ್ತಿ 1995 ಮತ್ತು 2013ರಲ್ಲಿ ಅದಕ್ಕೆ ತರಲಾದ ತಿದ್ದುಪಡಿ ಎರಡೂ ಪರಿಣಾಮಕಾರಿಯಾಗಿಲ್ಲ ಎಂದು ಹೇಳಲಾಗಿತ್ತು. ವಕ್ಫ್ ಆಸ್ತಿ ಮೇಲಿನ ಕಾನೂನಾತ್ಮಕ ಹಕ್ಕುಗಳೂ ಮತ್ತು ಮಾಲೀಕತ್ವ ಸಮಸ್ಯೆ ಸೃಷ್ಟಿಸಿದ್ದವು. ಆಸ್ತಿ ನೋಂದಣಿ ಮತ್ತು ಸರ್ವೆ ಕಾರ್ಯದಲ್ಲಿ ವಿಳಂಬ ಹಾಗೂ ವ್ಯಾಜ್ಯಗಳ ನಿರ್ವಹಣೆಯಲ್ಲಿ ಗೊಂದಲ ಸೃಷ್ಟಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.

ವಕ್ಫ್‌ ನ್ಯಾಯಮಂಡಳಿಯ ಆದೇಶ ಪ್ರಶ್ನಿಸಿ ಮೇಲಿನ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ. ಇದು ವಕ್ಫ್‌ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಪ್ರಶ್ನೆ ಹುಟ್ಟುಹಾಕಿತ್ತು.

ವಕ್ಫ್ ಆಸ್ತಿಗಳ ಸರ್ವೆ ಕಾರ್ಯ ಅಪೂರ್ಣ

ವಕ್ಫ್‌ ಆಸ್ತಿ ಎಷ್ಟು? ಎಲ್ಲೆಲ್ಲಿದೆ? ಎಂಬ ಪ್ರಶ್ನೆಗೆ ಉತ್ತರ ರೂಪದಲ್ಲಿ ಸಿಗಬಹುದಾದ ಸರ್ವೆ ಕಾರ್ಯ ಹಲವು ರಾಜ್ಯಗಳಲ್ಲಿ ವಿಳಂಬವಾಗಿದೆ. ಗುಜರಾತ್ ಮತ್ತು ಉತ್ತರಾಖಂಡದಲ್ಲಿ ಈವರೆಗೂ ಆರಂಭವೇ ಆಗಿಲ್ಲ. ಉತ್ತರ ಪ್ರದೇಶದಲ್ಲಿ 2014ರಲ್ಲಿ ಆದೇಶವಾಗಿದ್ದರೂ, ಈವರೆಗೂ ಬಾಕಿ ಇದೆ. ಕಂದಾಯ ಇಲಾಖೆಯೊಂದಿಗೆ ಸಮನ್ವಯತೆ ಕೊರತೆಯಿಂದ ಸರ್ವೆ ಹಾಗೂ ನೋಂದಣಿ ವಿಳಂಬವಾಗಿದೆ.

ಕೆಲ ರಾಜ್ಯಗಳ ವಕ್ಫ್‌ ಮಂಡಳಿಗಳಲ್ಲಿ ಅಧಿಕಾರ ದುರುಪಯೋಗದಿಂದಾಗಿ ಸಮುದಾಯಗಳ ನಡುವೆ ವೈಷಮ್ಯ ಬೆಳೆದಿದೆ. ವಕ್ಫ್‌ ಕಾಯ್ದೆಯ ಸೆಕ್ಷನ್‌ 40 ಅನ್ನು ವ್ಯಾಪಕವಾಗಿ ದುರುಪಯೋಗಪಡಿಸಿಕೊಳ್ಳಲಾಗಿದೆ. ಕೆಲವೆಡೆ ವಕ್ಫ್ ಆಸ್ತಿಯನ್ನು ಖಾಸಗಿ ಆಸ್ತಿಗಳೆಂದು ಘೋಷಿಸಲಾಗಿದೆ. ಇದರಿಂದ ಕಾನೂನು ಸಂಘರ್ಷ ಏರ್ಪಟ್ಟಿದೆ. ಕೇಂದ್ರಾಡಳಿತ ಪ್ರದೇಶ ಸೇರಿ ಒಟ್ಟು 30 ರಾಜ್ಯಗಳಲ್ಲಿ 8 ರಾಜ್ಯಗಳು ಮಾತ್ರ ಮಾಹಿತಿ ನೀಡಿವೆ. ಸೆಕ್ಷನ್‌ 40ರ ಅಡಿಯಲ್ಲಿ ಕೇವಲ 515 ಆಸ್ತಿಗಳು ಎಂದಷ್ಟೇ ಘೋಷಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿವೆ.

ವಕ್ಫ್‌ ಕಾಯ್ದೆಯ ಸಾಂವಿಧಾನಿಕ ಮಾನ್ಯತೆ

ವಕ್ಫ್‌ ಕಾಯ್ದೆಯ ಒಂದು ಧರ್ಮಕ್ಕಷ್ಟೇ ಸೀಮಿತವಾಗಿದೆ. ಇತರ ಧರ್ಮಗಳಿಗೆ ಇಂಥ ಕಾಯ್ದೆಗಳಿಲ್ಲ. ವಕ್ಫ್ ಕಾಯ್ದೆ ಸಾಂವಿಧಾನಿಕವೇ? ಎಂಬ ಪ್ರಶ್ನೆಯುಳ್ಳ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದೆಹಲಿ ಹೈಕೋರ್ಟ್‌ಗೆ ಸಲ್ಲಿಕೆಯಾಗಿವೆ. ಇದಕ್ಕೆ ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಮಸೂದೆ ರಚನೆಗೂ ಮೊದಲು ಸಚಿವಾಲಯದ ಸಿದ್ಧತೆಗಳೇನು?

ಸಾಚಾರ್ ಸಮಿತಿ ವರದಿ, ಸಾರ್ವಜನಿಕರ ಅಹವಾಲು, ಮಾಧ್ಯಮಗಳ ವರದಿಗಳನ್ನು ಆಧರಿಸಿ ವಕ್ಫ್‌ ಅಧಿಕಾರದ ದುರುಪಯೋಗ ಮತ್ತು ವಕ್ಫ್ ಆಸ್ತಿಗಳ ಅಸಮರ್ಪಕ ಬಳಕೆ ಕುರಿತು ಅಲ್ಪಸಂಖ್ಯಾತರ ಸಚಿವಾಲಯವು ಮಾಹಿತಿ ಕಲೆಹಾಕಿತು. ಇದಕ್ಕಾಗಿ ರಾಜ್ಯ ವಕ್ಫ್‌ ಮಂಡಳಿಗಳನ್ನೂ ಕೇಂದ್ರ ಸಂಪರ್ಕಿಸಿತು. 2023ರಲ್ಲಿ ಲಖನೌ ಮತ್ತು ದೆಹಲಿಯಲ್ಲಿ ಎರಡು ಸಭೆಗಳನ್ನೂ ನಡೆಸಲಾಗಿದೆ. 

ಮುತವಲ್ಲಿಗಳ ಪಾತ್ರ ಮತ್ತು ಹೊಣೆ, ನ್ಯಾಯಮಂಡಳಿಯ ಪುನಾರ್‌ ರಚನೆ, ನೋಂದಣಿಯ ಪ್ರಕ್ರಿಯೆಯನ್ನು ಇನ್ನಷ್ಟು ಉತ್ತಮಗೊಳಿಸುವುದು, ಆಸ್ತಿ ಘೋಷಣೆ, ವಕ್ಫ್ ಆಸ್ತಿಗಳ ಸರ್ವೆ, ವಕ್ಫ್‌ ಆಸ್ತಿಗಳ ಹಕ್ಕು ಬದಲಾವಣೆ ಇತ್ಯಾದಿ ವಿಷಯಗಳ ಕುರಿತು ಸಚಿವಾಲಯ ಚರ್ಚೆಗಳನ್ನು ನಡೆಸಿತ್ತು. 

ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಸೌದಿ ಅರೇಬಿಯಾ, ಈಜಿಪ್ಟ್‌, ಕುವೈತ್‌, ಒಮನ್‌, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಟರ್ಕಿಯ ಕಾನೂನುಗಳು ಏನು ಹೇಳುತ್ತವೆ ಎಂಬುದನ್ನೂ ಕೇಂದ್ರ ಸರ್ಕಾರ ಅಧ್ಯಯನ ನಡೆಸಿತ್ತು ಎಂದು ವರದಿಯಾಗಿದೆ.

ಇದಾದ ಬೆನ್ನಲ್ಲೇ ಭಾರತದಲ್ಲಿರುವ ಮುಸ್ಲಿಂ ಸಂಘಟನೆಗಳಾದ ಅಖಿಲ ಭಾರತ ಸುನ್ನಿ ಜಮಿಯತುಲ್‌ ಉಲಾಮಾ, ಇಂಡಿಯನ್ ಮುಸ್ಲಿಂ ಆಫ್ ಸಿವಿಲ್ ರೈಟ್ಸ್‌, ಮುತ್ತಾಹೆದಾ ಮಜ್ಲಿಸ್‌ ಇ ಉಲೆಮಾ, ಝಕಾತ್ ಫೌಂಡೇಷನ್ ಆಫ್ ಇಂಡಿಯಾ, ಅಂಜುಮನ್ ಎ ಶಿತೀಲಿ ದಾವೂದಿ ಬೊಹ್ರಾ ಸಮುದಾಯ, ಚಾಣಕ್ಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸೇರಿದಂತೆ ಹಲವು ಸಂಸ್ಥೆಗಳೊಂದಿಗೆ 2024ರ ಆ. 22ರಂದು ಕೇಂದ್ರ ಸರ್ಕಾರ ಸಭೆ ನಡೆಸಿತ್ತು.

ಈ ಎಲ್ಲಾ ಸಭೆಗಳ ನಂತರ ಏಕೀಕೃತ ವಕ್ಫ್‌ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಕಾಯ್ದೆ 2024 ಎಂದು ಮರುನಾಮಕರಣ ಮಾಡಲಾಯಿತು. 

ಮಸೂದೆಯಲ್ಲಿ ಮಾಡಲಾದ ಬದಲಾವಣೆಗಳೇನು?

  • 1995ರ ವಕ್ಫ್‌ ಮಸೂದೆ ಅನ್ವಯ ಸರ್ಕಾರಿ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಲಾಗುತ್ತಿತ್ತು. 2024ರ ತಿದ್ದುಪಡಿ ಮಸೂದೆಯಲ್ಲಿ ಸರ್ಕಾರಿ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಿದರೂ, ವಿವಾದವನ್ನು ಜಿಲ್ಲಾಧಿಕಾರಿ ಪರಿಹರಿಸಬೇಕು.

  • ವಕ್ಫ್‌ ಆಸ್ತಿ ಸಮೀಕ್ಷೆಗೆ ಅವಕಾಶವಿದ್ದರೂ ಅದನ್ನು ಅನುಷ್ಠಾನಗೊಳಿಸಲು ವಿಳಂಬ ಮಾಡಲಾಗುತ್ತಿತ್ತು. ಹೊಸ ಮಸೂದೆಯಲ್ಲಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಕಂದಾಯ ಕಾನೂನಿನಡಿ ವಕ್ಫ್ ಆಸ್ತಿಯನ್ನು ಗುರುತಿಸಿ, ಸರ್ವೆ ಪೂರ್ಣಗೊಳಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

  • 1995ರ ಕಾಯ್ದೆಯನ್ವಯ ಕೇಂದ್ರ ವಕ್ಫ್ ಮಂಡಳಿಯಲ್ಲಿ ಮುಸ್ಲಿಮರು ಮಾತ್ರ ಇರಬೇಕು ಎಂದಿತ್ತು. 2024ರ ತಿದ್ದುಪಡಿ ಮಸೂದೆಯಲ್ಲಿ ಇಬ್ಬರು ಮುಸ್ಲಿಮೇತರರು ಮತ್ತು ಇಬ್ಬರು ಮುಸ್ಲಿಂ ಮಹಿಳೆಯರು ಇರಬೇಕು ಎಂದು ಬದಲಿಸಲಾಗಿದೆ.

  • ವಕ್ಫ್ ನ್ಯಾಯಮಂಡಳಿಯಲ್ಲಿ ಈ ಹಿಂದೆ ಒಬ್ಬರು ನ್ಯಾಯಾಧೀಶರು ಮತ್ತು ಮುಸ್ಲಿಂ ಕಾನೂನು ತಜ್ಞರು ಇರಬೇಕಿತ್ತು. ಈಗ ತಜ್ಞರ ಬದಲು ಜಿಲ್ಲಾ ನ್ಯಾಯಾಧೀಶರು, ಅಲ್ಪಸಂಖ್ಯಾತರ ಸಚಿವಾಲಯದ ಜಂಟಿ ಕಾರ್ಯದರ್ಶಿ ಇರಬೇಕು ಎಂದೆನ್ನಲಾಗಿದೆ.

  • ಈ ಹಿಂದೆ ವಕ್ಫ್ ನ್ಯಾಯಮಂಡಳಿ ತೀರ್ಮಾನವೇ ಅಂತಿಮ ಎಂದಿತ್ತು. ಪರಿಷ್ಕೃತ ಕಾಯ್ದೆಯಲ್ಲಿ ಆದೇಶದ ಮೇಲೆ 90 ದಿನಗಳ ಒಳಗಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 

  • ವಕ್ಫ್‌ ಮಂಡಳಿಗೆ ಕೇಂದ್ರ ಸರ್ಕಾರ ಕೆಲವೊಂದು ನಿರ್ದೇಶನ ನೀಡುವ ಅಧಿಕಾರವಿತ್ತೇ ಹೊರತು, ಕಾನೂನು ರಚಿಸುವ ಅಧಿಕಾರ ಇರಲಿಲ್ಲ. ಪರಿಷ್ಕೃತ ಮಸೂದೆಯಲ್ಲಿ ವಕ್ಫ್ ನೋಂದಣಿ, ಲೆಕ್ಕಪರಿಶೋಧನೆ ಹಾಗೂ ಆಸ್ತಿಗಳ ನಿರ್ವಹಣೆಯಲ್ಲಿ ಕೇಂದ್ರದ ಪಾತ್ರವನ್ನು ಹೆಚ್ಚಿಸಲಾಗಿದೆ.

  • ತಿದ್ದುಪಡಿ ಮಸೂದೆ ಕುರಿತು ಈವರೆಗೂ 97,27,772 ಅರ್ಜಿಗಳು ಸಲ್ಲಿಕೆಯಾಗಿವೆ. ಇದರೊಂದಿಗೆ ಬೆಂಗಳೂರು ಒಳಗೊಂಡು ದೇಶದ 10 ಪ್ರಮುಖ ನಗರಗಳಿಗೆ ಈ ಸಮಿತಿ ಭೇಟಿ ನೀಡಿದೆ. 

ವಕ್ಫ್ ಕಾಯ್ದೆಗೆ ಸಂಬಂಧಿಸಿದಂತೆ ಜಂಟಿ ಸಮಿತಿಯ ಪ್ರಮುಖ ಶಿಫಾರಸುಗಳೇನು?

  • ವಕ್ಫ್ ಕಾಯ್ದೆ 1995ರ ಅನ್ವಯ ವಕ್ಫ್ ತಿದ್ದುಪಡಿ ಮಸೂದೆ 2024ರ ಕುರಿತು ಜಂಟಿ ಸಮಿತಿಯು ಕೆಲವೊಂದು ಶಿಫಾರಸುಗಳನ್ನು ಮಾಡಿತ್ತು.

  • ವಕ್ಫ್ ಮತ್ತು ಟ್ರಸ್ಟ್‌ಗಳನ್ನು ಹೊಸ ಮಸೂದೆ ಪ್ರತ್ಯೇಕವಾಗಿಯೇ ನೋಡಲಿದೆ. ಮುಸ್ಲಿಮರು ರಚಿಸುವ ಟ್ರಸ್ಟ್‌ಗಳು ಮುಂದೆಂದೂ ವಕ್ಫ್‌ ಎಂದು ಪರಿಗಣಿಸಲಾಗದು. 

  • ವಕ್ಫ್‌ ಆಸ್ತಿಗಳ ನಿರ್ವಹಣೆಗೆ ಕೇಂದ್ರೀಕೃತ ಪೋರ್ಟಲ್‌ ರಚಿಸಬೇಕು. ಇದರಲ್ಲಿ ನೋಂದಣಿ, ಲೆಕ್ಕಪರಿಶೋಧನೆ, ಕೊಡುಗೆ ಮತ್ತು ಆಸ್ತಿ ವ್ಯಾಜ್ಯಗಳ ಮಾಹಿತಿ ಇರಬೇಕು. ಇದರಿಂದ ಕಾರ್ಯಕ್ಷಮತೆ ಮತ್ತು ಪಾರದರ್ಶಕತೆ ತರಲು ಸಾಧ್ಯ. 

  • ಮುಸ್ಲಿಮ್‌ ಧರ್ಮವನ್ನು ಕಳೆದ ಐದು ವರ್ಷಗಳಿಂದ ಅನುಸರಿಸುವವರು ತಮ್ಮ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಿಕೊಳ್ಳಬಹುದು. ಈಗಾಗಲೇ ವಕ್ಫ್ ಆಸ್ತಿ ಎಂದು ಘೋಷಿಸಲಾದ ಆಸ್ತಿ ಕುರಿತು ವ್ಯಾಜ್ಯಗಳಿಲ್ಲದಿದ್ದಲ್ಲಿ ಅಥವಾ ಸರ್ಕಾರಿ ಜಾಗ ಅಲ್ಲದಿದ್ದಲ್ಲಿ ಮಾತ್ರ ವಕ್ಫ್‌ ಘೋಷಣೆ.

  • ವಕ್ಫ್‌ನಲ್ಲಿ ಮಹಿಳೆಯರಿಗೆ ಸೂಕ್ತ ಹಕ್ಕುಗಳು ಸಿಗಬೇಕು. ಅದರಲ್ಲೂ ವಿಧವೆಯರು, ವಿಚ್ಛೇಧಿತರು ಮತ್ತು ಅಬಲೆಯರಿಗೆ ಹೆಚ್ಚಿನ ಆದ್ಯತೆ ಸಿಗಬೇಕು.

  • ವಕ್ಫ್‌ ಆಸ್ತಿಗಳನ್ನು ಘೋಷಿಸಿಕೊಳ್ಳಬೇಕೆಂದರೆ ಮುತುವಲ್ಲಿಗಳು ಕೇಂದ್ರೀಯ ಪೋರ್ಟಲ್‌ನಲ್ಲಿ ಆರು ತಿಂಗಳ ಒಳಗಾಗಿ ಮಾಹಿತಿ ದಾಖಲಿಸಬೇಕು.

  • ಸರ್ಕಾರಿ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಿಕೊಂಡರೆ ಜಿಲ್ಲಾಧಿಕಾರಿ ಮೇಲಿನ ಅಧಿಕಾರಿ ತನಿಖೆ ನಡೆಸಬೇಕು.

  • ಯಾವುದೇ ವಕ್ಫ್ ಮಂಡಳಿ ವಾರ್ಷಿಕ ₹1 ಲಕ್ಷ ಗಳಿಕೆ ಕಂಡಲ್ಲಿ ಲೆಕ್ಕಪರಿಶೋಧನೆ ಅಗತ್ಯ. ಇದನ್ನು ಸರ್ಕಾರವೇ ನಡೆಸಬೇಕು.

ವಕ್ಫ್ ಎಂದು ಘೋಷಣೆಯಾದ ಮುಸ್ಲಿಮೇತರ ಆಸ್ತಿಗಳ ಭವಿಷ್ಯವೇನು?

2024ರ ಸೆಪ್ಟೆಂಬರ್‌ನಲ್ಲಿ 25 ರಾಜ್ಯಗಳ 5,973 ಸರ್ಕಾರಿ ಆಸ್ತಿಗಳನ್ನು ವಕ್ಫ್‌ ಎಂದು ಮಂಡಳಿಗಳು ಘೋಷಿಸಿದ್ದವು. ಕರ್ನಾಟಕದಲ್ಲಿ ಕೃಷಿ ಜಮೀನು, ಸಾರ್ವಜನಿಕ ಸ್ಥಳಗಳು, ಸರ್ಕಾರಿ ಜಾಗ, ಸ್ಮಶಾನ, ಕೆರೆ ಹಾಗೂ ದೇವಾಲಯಗಳೂ ವಕ್ಫ್ ಆಸ್ತಿಗಳು ಎಂದು ಗುರುತಿಸಲಾಗಿತ್ತು.

ತಮಿಳುನಾಡು, ಬಿಹಾರ, ಕೇರಳ ಹಾಗೂ ಇನ್ನೂ ಹಲವು ರಾಜ್ಯಗಳಲ್ಲಿ ಮುಸ್ಲಿಮೇತರರ ಆಸ್ತಿಗಳು ವಕ್ಫ್ ಆಸ್ತಿ ಎಂದು ದಾಖಲಾಗಿದ್ದು ವಿವಾದಕ್ಕೆ ಕಾರಣವಾಗಿತ್ತು. ಕರ್ನಾಟಕದ ಹಾವೇರಿ, ಬಳ್ಳಾರಿ, ವಿಜಯಪುರ, ಚಿತ್ರದುರ್ಗ, ಯಾದಗಿರಿ ಮತ್ತು ಧಾರವಾಡದಲ್ಲೂ ಇಂಥ ಘಟನೆಗಳು ನಡೆದ ಉದಾಹರಣೆಗಳಿವೆ.

ವಕ್ಫ್ ತಿದ್ದುಪಡಿ ಮಸೂದೆಯಿಂದ ಬಡವರಿಗೆ ಆಗುವ ಪ್ರಯೋಜನಗಳೇನು?

ಧಾರ್ಮಿಕ, ದತ್ತಿ ಮತ್ತು ಸಮಾಜ ಕಲ್ಯಾಣ ಅಗತ್ಯಗಳಲ್ಲಿ ವಕ್ಫ್ ಪ್ರಮುಖ ಪಾತ್ರ ವಹಿಸಲಿದೆ. ಅದರಲ್ಲೂ ಆರ್ಥಿಕವಾಗಿ ಹಿಂದುಳಿದವರಿಗೆ ಇದರ ಪ್ರಯೋಜನ ಹೆಚ್ಚು. ಜಾಗ ಒತ್ತುವರಿ, ಪಾರದರ್ಶಕ ಕೊರತೆಯನ್ನು ನೀಗಿಸುವುದರ ಜತೆಗೆ, ಆರ್ಥಿಕ ಪಾರದರ್ಶಕತೆ ತರುವುದರಿಂದ ಹಣದ ಸೋರಿಕೆ ತಗ್ಗಲಿದೆ. ಅದು ನೇರವಾಗಿ ಬಡವರ ಕಲ್ಯಾಣಕ್ಕೆ ಬಳಕೆಯಾಗಲಿದೆ ಎಂದು ಅಲ್ಪಸಂಖ್ಯಾತರ ಸಚಿವಾಲಯ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.