ADVERTISEMENT

Explainer: ನೀರು ನಾಯಿ ತುಪ್ಪಳಕ್ಕೆ ರಚನೆಯಾದ ಅಲಸ್ಕಾವನ್ನು ರಷ್ಯಾ ಮಾರಿದ್ದೇಕೆ?

ಏಜೆನ್ಸೀಸ್
Published 16 ಆಗಸ್ಟ್ 2025, 11:50 IST
Last Updated 16 ಆಗಸ್ಟ್ 2025, 11:50 IST
<div class="paragraphs"><p>ವ್ಲಾಡಿಮಿರ್ ಪುಟಿನ್ ಮತ್ತು ಡೊನಾಲ್ಡ್ ಟ್ರಂಪ್</p></div>

ವ್ಲಾಡಿಮಿರ್ ಪುಟಿನ್ ಮತ್ತು ಡೊನಾಲ್ಡ್ ಟ್ರಂಪ್

   

ರಾಯಿಟರ್ಸ್ ಚಿತ್ರ

ಉಕ್ರೇನ್‌ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧ ನಿಲ್ಲಿಸುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಡ ಹೇರುತ್ತಿದ್ದಾರೆ. ಈ ಕುರಿತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಟ್ರಂಪ್ ಮಾತುಕತೆ ನಡೆಸಿದ್ದಾರೆ. ಈ ಇಬ್ಬರೂ ಶುಕ್ರವಾರ ಅಲಸ್ಕಾದಲ್ಲಿ ಸೇರಿದ್ದರು. ಉಕ್ರೇನ್ ಬಿಟ್ಟುಕೊಡಬೇಕು ಎಂಬ ಷರತ್ತನ್ನು ರಷ್ಯಾ ಮೇಲೆ ಅಮೆರಿಕ ಹೇರಿದರೆ, 1867ರಲ್ಲಿ ಅಮೆರಿಕಗೆ ರಷ್ಯಾ ಮಾರಾಟ ಮಾಡಿದ ಅಲಸ್ಕಾವನ್ನು ಮರಳಿ ನೀಡಬೇಕಾಗುತ್ತದೆ ಎಂಬ ವಾದವನ್ನು ರಷ್ಯಾ ಮುಂದಿಟ್ಟಿದೆ ಎಂದೆನ್ನಲಾಗಿದೆ.

ADVERTISEMENT

ಹಾಗಿದ್ದರೆ ಅಲಸ್ಕಾವನ್ನು ರಷ್ಯಾ ಮಾರಿದ್ದೇಕೆ..?

ಕ್ರಿಮಿಯಾ ಯುದ್ಧದ ನಂತರ ಅಲಸ್ಕಾದ ಒಂದು ಭಾಗವನ್ನು ರಷ್ಯಾ ಮಾರಲು ನಿರ್ಧರಿಸಿತು. ಈ ಭಾಗವನ್ನು 1783ರಲ್ಲಿ ಕ್ಯಾಥರಿನ್ ದಿ ಗ್ರೇಟ್‌ ಗೆದ್ದ ಪ್ರದೇಶವಾಗಿತ್ತು. 1991ರಲ್ಲಿ ಕ್ರಿಮಿಯಾ ಎಂಬುದು ಸ್ವತಂತ್ರ ಉಕ್ರೇನ್‌ನ ಭಾಗವಾಯಿತು. ಇದರ ಒಂದು ಭಾಗವನ್ನು 2014ರಲ್ಲಿ ರಷ್ಯಾ ವಶಕ್ಕೆ ಪಡೆದಿತ್ತು. ಇದನ್ನು ಮರಳಿ ಪಡೆಯಲು ಉಕ್ರೇನ್‌ ಮೇಲೆ 2022ರಲ್ಲಿ ರಷ್ಯಾ ಪೂರ್ಣ ಪ್ರಮಾಣದಯುದ್ಧ ಸಾರಿದೆ ಎಂದು ಇತಿಹಾಸಕಾರರು ಹೇಳಿದ್ದಾರೆ.

ಹಾಗಿದ್ದರೆ ಇತಿಹಾಸದಲ್ಲಿ ನಡೆದದ್ದೇನು...?

ಏಷ್ಯಾ ಮತ್ತು ಉತ್ತರ ಅಮೆರಿಕ ಪ್ರತ್ಯೇಕಿಸುವ ಜಲಸಂಧಿಯನ್ನು ರಷ್ಯಾದ ಅನ್ವೇಷಕರು 18ನೇ ಶತಮಾನದಲ್ಲಿ ದಾಟಿದರು. ಈ ಜಲಸಂಧಿಯನ್ನು ‘ವೀಟಸ್ ಬೇರಿಂಗ್‌’ ಎಂದು ಕರೆದರು. 1720ರಲ್ಲಿ ಜಾರ್ ಪೀಟರ್ ಎಂಬಾತ ಇದು ರಷ್ಯಾದ ಭಾಗ ಎಂದು ಘೋಷಿಸಿದ.

ಸಮುದ್ರ ನೀರು ನಾಯಿಗಳ ತುಪ್ಪಳಕ್ಕಾಗಿ ರಷ್ಯಾದವರು ಆರಂಭದಲ್ಲಿ ಈ ಪ್ರದೇಶವನ್ನು ಅವಲಂಬಿಸಿದ್ದರು. ಆ ಕಾಲದಲ್ಲಿ ಈ ತುಪ್ಪಳಕ್ಕೆ ಚೀನಾದಲ್ಲಿ ಭಾರೀ ಬೇಡಿಕೆ ಇತ್ತು ಎಂದು ಇತಿಹಾಸಕಾರ ಬ್ಯಾಟ್‌ಮನ್‌ ಹೇಳಿದ್ದಾರೆ.

‘ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರ ಮಕ್ಕಳ ಅಪಹರಣ, ದೋಣಿ ಹಾಗೂ ಯುದ್ಧ ಸಾಮಗ್ರಿಗಳ ಅಪಹರಣ ಸೇರಿದಂತೆ ಸ್ಥಳೀಯರ ಮೇಲೆ ಇವರು ಕ್ರೌರ್ಯವೂ ನಡೆದಿತ್ತು’ ಎಂದು ಅಲಸ್ಕಾದ ಮಾಜಿ ಸೆನೆಟರ್‌ ಮತ್ತು ಇತಿಹಾಸಕಾರ ವಿಲಿಯಂ ಎಲ್‌. ಇಗ್ಗಿಯಾಗ್ರುಕ್ ಹೇಳಿದ್ದಾರೆ.

ಸಮುದ್ರ ನೀರು ನಾಯಿ

ಅಲಸ್ಕಾದ ಆರ್ಥಿಕತೆಯಿಂದ ಹಂತಹಂತವಾಗಿ ದೂರ ಸರಿದ ರಷ್ಯಾ

ತುಪ್ಪಳ ವ್ಯಾಪಾರ ಸುಗಮಗೊಳಿಸಲು ಹಾಗೂ ರಷ್ಯಾದ ವಸಾಹತನ್ನು ಅಧಿಕೃತಗೊಳಿಸಲು ಈ ಪ್ರದೇಶದಲ್ಲಿ 1799ರಲ್ಲಿ ‘ರಷ್ಯಾ–ಅಮೆರಿಕ‘ ಎಂಬ ಕಂಪನಿಯನ್ನು ರಷ್ಯಾ ಸಾಮ್ರಾಜ್ಯ ಪ್ರಾರಂಭಿಸಿತು. ಜತೆಗೆ ತಮ್ಮ ಹಿಡಿತದಲ್ಲಿದ್ದ ಈ ಪ್ರದೇಶವನ್ನು ಅಲಸ್ಕಾ ಎಂದು ಕರೆಯಿತು. ಕ್ಯಾಲಿಫೋರ್ನಿಯಾದ ದಕ್ಷಿಣದವರೆಗೂ ಈ ‘ರಷ್ಯಾ ಅಮೆರಿಕ’ ತನ್ನ ಹಿಡಿತ ವಿಸ್ತರಿಸಿಕೊಂಡಿತು.

ತುಪ್ಪಳ ತಯಾರಿಕೆ ಮಿತಿ ಮೀರಿದ್ದರಿಂದ ದಾಸ್ತಾನು ಹೆಚ್ಚಾಯಿತು. ಬೇಡಿಕೆಗಿಂತ ಪುರೈಕೆಯೇ ಹೆಚ್ಚಾಗಿದ್ದರಿಂದ ಬೆಲೆಯೂ ಕುಸಿಯಿತು. ಇದರ ನಡುವೆ ರಷ್ಯಾ, ಬ್ರಿಟನ್ ಮತ್ತು ಅಮೆರಿಕ ನಡುವೆ ಇದೇ ತುಪ್ಪಳ ವ್ಯಾಪಾರದಿಂದಾಗಿ ಸಂಘರ್ಷ ಉಂಟಾಯಿತು. ಇದರ ನಡುವೆ ನೀರು ನಾಯಿಗಳ ಬೇಟೆಗಾಗಿ ಇಂಥದ್ದೇ ಸ್ಥಳ ಎಂಬುದು ನಿಗದಿಯಾಗಿರಲಿಲ್ಲ. ಜತೆಗೆ ಕಡಿಮೆ ಸಂಖ್ಯೆಯಲ್ಲಿದ್ದ ರಷ್ಯಾದ ವಸಾಹುತಗಳಿಗೆ ರಕ್ಷಣೆಯೂ ಕ್ಷೀಣಿಸಿತ್ತು.

ವಹವಾಟಿನ ಮೇಲೆ ಪ್ರಭಾವ ಬೀರಿದ ಜಾಗತಿಕ ರಾಜಕೀಯ

ಇತರ ಖಂಡಗಳಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳು ಅಲಸ್ಕಾ ಮೇಲಿನ ಹಿಡಿತವನ್ನು ಇನ್ನಷ್ಟು ಸಮಸ್ಯೆಗೆ ಸಿಲುಕಿಸಿತ್ತು. ಒಂದೆಡೆ ವ್ಯಾಪಾರ, ಮತ್ತೊಂದೆಡೆ ತನ್ನ ಸಾಮ್ರಾಜ್ಯವನ್ನು ಪೂರ್ವದೆಡೆ ವಿಸ್ತರಿಸುವತ್ತ ರಷ್ಯಾ ತನ್ನ ಗಮನವನ್ನು ಹೆಚ್ಚಾಗಿ ಕೇಂದ್ರೀಕರಿಸಿತ್ತು.

ಇದರ ನಡುವೆ ಬ್ರಿಟನ್‌, ಫ್ರಾನ್ಸ್‌ ಮತ್ತು ಒಟಮನ್‌ ಸಾಮ್ರಾಜ್ಯದ ವಿರುದ್ಧ 1853ರಲ್ಲಿ ಕ್ರಿಮಿಯಾದಲ್ಲಿ ರಷ್ಯಾ ಯುದ್ಧ ಆರಂಭಿಸಿತು. ಉತ್ತರ ಅಮೆರಿಕ ಮೂಲಕ ಬ್ರಿಟಿಷ್ ಪಡೆಗಳು ರಷ್ಯಾ ಸೇನೆಯ ಮೇಲೆ ದಾಳಿ ನಡೆಸಿತು. ತಮ್ಮ ಭೂಪ್ರದೇಶವನ್ನೇ ಕಳೆದುಕೊಳ್ಳುವ ಆತಂಕವನ್ನು ರಷ್ಯಾ ಅಧಿಕಾರಿಗಳು ಹೊಂದಿದ್ದರು ಎಂದು 2016ರಲ್ಲಿ ಪ್ರಕಟಗೊಂಡ ಇತಿಹಾಸಕಾರ ಲೀ ಫೆರೊ ಅವರ ಪುಸ್ತಕದಲ್ಲಿ ದಾಖಲಾಗಿದೆ.

ಆತಂಕ ಕಡಿಮೆಯಾದರೂ ಪೆಸಿಫಿಕ್‌ ಪ್ರದೇಶದಲ್ಲಿ ಬ್ರಿಟಿಷರ ಉಪಸ್ಥಿತಿ ರಷ್ಯಾದವರಿಗೆ ತಲೆನೋವಾಗಿತ್ತು. 1850ರಲ್ಲಿ ಕ್ಯಾಲಿಫೋರ್ನಿಯಾವನ್ನು ಯುನೈಟೆಡ್‌ ಸ್ಟೇಟ್ಸ್ ಸ್ವಾದೀನಪಡಿಸಿಕೊಂಡಿತು. ಟೆಕ್ಸಾಸ್‌ಗಾಗಿ ಮೆಕ್ಸಿಕೊದೊಂದಿಗೆ ಕಾದಾಡಿತು. ಆದರೆ ಉತ್ತರ ಅಮೆರಿಕದೆಡೆ ತಮ್ಮ ಸಾಮ್ರಾಜ್ಯ ವಿಸ್ತರಣೆಯ ಆಲೋಚನೆಯನ್ನು ಯುನೈಟೆಡ್ ಸ್ಟೇಟ್ಸ್ ಹೊಂದಿತ್ತು. ಈ ಸಂದರ್ಭದಲ್ಲಿ ಅಲಸ್ಕಾವನ್ನು ಬಿಟ್ಟುಬಿಡುವಂತೆ ರಷ್ಯಾದ ಪೆಸಿಫಿಕ್‌ ಪ್ರಾಂತ್ಯದ ಕಮಾಂಡರ್‌ ಸಹಿತ ಇತರ ಅಧಿಕಾರಿಗಳು ಒತ್ತಾಯಪಡಿಸಿದರು ಎಂದು ಇತಿಹಾಸ ಹೇಳುತ್ತದೆ.

ಇಬ್ಬರಿಗೂ ಲಾಭ ತಂದ ಒಪ್ಪಂದ

ಬ್ರಿಟನ್‌ನಿಂದ ಸಮಾನ ತೊಂದರೆ ಅನುಭವಿಸುತ್ತಿದ್ದ ಅಮೆರಿಕ ಮತ್ತು ರಷ್ಯಾಗೆ ಈ ಒಪ್ಪಂದ ಫಲಪ್ರದವಾಯಿತು. 1867ರ ಮಾರ್ಚ್‌ನಲ್ಲಿ ಕಾರ್ಯದರ್ಶಿ ವಿಲಿಯಂ ಹೆನ್ರಿ ಸೆವಾರ್ಡ್ ಅವರು ಮಾತುಕತೆಗೆ ಆಹ್ವಾನ ನೀಡಿದರು. ಎಡ್ವರ್ಡ್‌ ಸ್ಟಾಕ್‌ಗೆ ಈ ಪ್ರಾಂತ್ಯವನ್ನು 50 ಲಕ್ಷ ಅಮೆರಿಕನ್‌ ಡಾಲರ್‌ ನೀಡುವ ಪ್ರಸ್ತಾವವನ್ನು ಅಮೆರಿಕದಲ್ಲಿನ ರಷ್ಯಾ ಸಚಿವರ ಮುಂದಿಟ್ಟರು. 

ಎರಡು ವಾರಗಳ ಕಾಲ ನಡೆದ ಈ ಮಾತುಕತೆಯು ಅಂತಿಮವಾಗಿ 72 ಲಕ್ಷ ಅಮೆರಿಕನ್ ಡಾಲರ್‌ಗೆ ಕೊನೆಗೊಂಡಿತು. ಇದು ಎಕರೆಗೆ ಭಾರತದ 20 ಪೈಸೆಗಿಂತಲೂ ಕಡಿಮೆ. ಇಡೀ ರಾತ್ರಿ ನಡೆದ ಮಾತುಕತೆಯು ನಸುಕಿನಲ್ಲಿ ಕೊನೆಗೊಂಡಿತು. ಬೆಳಿಗ್ಗೆ 4ಕ್ಕೆ ಒಪ್ಪಂದಕ್ಕೆ ಉಭಯ ನಾಯಕರು ಸಹಿ ಹಾಕಿದರು. ನಂತರ ಇದನ್ನು ಕಾಂಗ್ರೆಸ್ ಹಾಗು ದ್ವಿತೀಯ ಝಾರ್‌ ಅಲೆಕ್ಸಾಂಡರ್‌ ಅನುಮೋದಿಸಿದರು.

ಆದರೆ ಈ ಹಣ ಪಾವತಿಯಲ್ಲಿ ಅಕ್ರಮ ನಡೆಯಿತು ಎಂದೂ ವರದಿಯಾಗಿದೆ. ಈ ಒಪ್ಪಂದವನ್ನು ವಿರೋಧಿಸಿದ ಅಮೆರಿಕದ ಪತ್ರಿಕೆಗಳ ಸಂಖ್ಯೆ ತೀರಾ ಕಡಿಮೆ. ರಷ್ಯಾಗೆ ಅಮೆರಿಕ ಪಾವತಿ ಮಾಡಬೇಕಿದ್ದ ಹಣದಲ್ಲಿ ಅಮೆರಿಕದ ಕೆಲ ರಾಜಕಾರಣಿಗಳು ಮತ್ತು ವರದಿಗಾರರು ಲಂಚ ಪಡೆದಿದ್ದರು ಎಂದು ಆರೋಪಿಸಲಾಗಿದೆ. 

ಅಲಸ್ಕಾ ಮಾರಾಟ ಕುರಿತು ಕೆಲ ರಷ್ಯನ್ನರ ಪಶ್ಚಾತಾಪ‌

1959ರಲ್ಲಿ ಅಲಸ್ಕಾವು ಅಮೆರಿಕದ 49ನೇ ರಾಜ್ಯವಾಗಿ ದೇಶವನ್ನು ಸೇರಿತು. ಆದರೆ ಚಿನ್ನ, ಮರಮಟ್ಟುಗಳು ಹಾಗೂ ಪೆಟ್ರೋಲಿಯಂ ನಿಕ್ಷೇಪ ಹೊಂದಿರುವ ಅಲಸ್ಕಾ ಕಳೆದುಕೊಂಡಿದ್ದಕ್ಕೆ ರಷ್ಯಾದ ಕೆಲವರು ಈಗಲೂ ಪಶ್ಚಾತಾಪ ಪಡುತ್ತಾರೆ. ಅಮೆರಿಕಕ್ಕೆ ಇದೊಂದು ಅಗ್ಗದ ಲಾಭ ಎಂದು ಅವರು ಭಾವಿಸಿದ್ದಾರೆ.

ಸೋವಿಯತ್ ಒಕ್ಕೂಟದ ಕಾಲದಲ್ಲಿ ಈ ಒಪ್ಪಂದವನ್ನು ಅವಮಾನ ಎಂದೇ ಭಾವಿಸಲಾಗುತ್ತಿತ್ತು. ರಷ್ಯಾದ ಹಿಡಿತವನ್ನು ಮರುಸ್ಥಾಪಿಸುವ ಮಾತುಗಳು ಪುಟಿನ್ ಕಾಲದಲ್ಲಿ ಕೇಳಿಬಂದವು. ಅಲೆಸ್ಕಾ ಮರಳಿ ಪಡೆಯುವ ಮಾತುಗಳನ್ನು ಅವರು 2014ರಲ್ಲಿ ಪುನರುಚ್ಚರಿಸಿದ್ದರು. 2022ರಲ್ಲಿ ಉಕ್ರೇನ್ ಮೇಲೆ ದಾಳಿ ನಡಸಿದ ರಷ್ಯಾ, ‘ಅಲಸ್ಕಾ ನಮ್ಮದು’ ಎಂದಿತ್ತು. ಕೆಲ ರಾಜಕೀಯ ಮುಖಂಡರು ಹಾಗೂ ಮಾಧ್ಯಮಗಳೂ ಇದಕ್ಕೆ ವ್ಯಾಪಕ ಪ್ರಚಾರ ನೀಡಿದರು. 

ಈ ನಿಟ್ಟಿನಲ್ಲಿ ಟ್ರಂಪ್ ಮತ್ತು ಪುಟಿನ್‌ ನಡುವೆ ಅಲಸ್ಕಾದಲ್ಲಿ ಮಾತುಕತೆ ನಡೆದಿರುವುದು ಆರಂಭಿಕ ಗೆಲುವು ಎಂದು ರಷ್ಯಾದ ಕೆಲ ಬಲಪಂಥೀಯ ರಾಷ್ಟ್ರೀಯವಾದಿಗಳು ಬಣ್ಣಿಸುತ್ತಿದ್ದಾರೆ ಎಂದು ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.