ADVERTISEMENT

World Hindi Day: 1918ರಲ್ಲೇ ದಕ್ಷಿಣದಲ್ಲಿ ಹಿಂದಿ ಪ್ರಚಾರ ಆರಂಭಿಸಿದ್ದ ಗಾಂಧೀಜಿ

ಏಜೆನ್ಸೀಸ್
Published 10 ಜನವರಿ 2026, 7:14 IST
Last Updated 10 ಜನವರಿ 2026, 7:14 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಹಿಂದಿಯನ್ನು ಜಾಗತಿಕ ಭಾಷೆಯಾಗಿ ಉತ್ತೇಜಿಸುವ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅದರ ಮಹತ್ವವನ್ನು ಗುರುತಿಸುವ ಸಲುವಾಗಿ ಪ್ರತಿ ವರ್ಷ ಜನವರಿ 10ರಂದು ವಿಶ್ವ ಹಿಂದಿ ದಿನವನ್ನು ಆಚರಿಸಲಾಗುತ್ತದೆ. 

ದೇಶದಾದ್ಯಂತ ಹಿಂದಿ ಸಂವಹನದ ಭಾಷೆಯಾಗಬೇಕು ಎನ್ನುವ ಉದ್ದೇಶದಿಂದ ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ ಮಹಾತ್ಮ ಗಾಂಧೀಜಿಯವರು 1918ರಲ್ಲಿ ಚೆನ್ನೈನಲ್ಲಿ (ಮದ್ರಾಸ್) ‘ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ’ ಸ್ಥಾಪಿಸಿದ್ದರು.

ADVERTISEMENT

ಅಂತರರಾಷ್ಟ್ರೀಯ ಮಟ್ಟದಲ್ಲಿ ಹಿಂದಿಯನ್ನು ಉತ್ತೇಜಿಸುವ ಮೊದಲು ದೇಶದಾದ್ಯಂತ ಹಿಂದಿ ಕಲಿಕೆಯ ಬಗ್ಗೆ ಪ್ರೋತ್ಸಾಹ ನೀಡುವುದು ಇದರ ಪ್ರಮುಖ ಉದ್ದೇಶವಾಗಿತ್ತು. ಹೀಗಾಗಿ ದಕ್ಷಿಣದ ನಾಲ್ಕು ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ (ತೆಲಂಗಾಣ ಸೇರಿದಂತೆ) ಮತ್ತು ಕೇರಳದಲ್ಲಿ ಹಿಂದಿ ಭಾಷೆಯನ್ನು ಪ್ರಚುರಪಡಿಸುವ ಉದ್ದೇಶದಿಂದ ‘ಹಿಂದಿ ಪ್ರಚಾರ ಸಭಾ’ ಹುಟ್ಟಿಕೊಂಡಿತ್ತು. ಈಗಲೂ ರಾಜ್ಯದ ಧಾರವಾಡದಲ್ಲಿ ‘ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ’ದ ಕೇಂದ್ರವಿದೆ.

ಸ್ವಾತಂತ್ರ್ಯಾ ನಂತರ 1964ರಲ್ಲಿ ಭಾರತ ಸರ್ಕಾರ ಇದನ್ನು ರಾಷ್ಟ್ರೀಯ ಮಹತ್ವದ ಸಂಸ್ಥೆ ಎಂದೂ ಘೋಷಿಸಿತು. ತದನಂತರದ ದಿನಗಳಲ್ಲಿ ಸಂಸ್ಥೆಯು ಪ್ರಾಥಮಿಕದಿಂದ ಹಿಡಿದು ಎಂ.ಎ, ಪಿಎಚ್.ಡಿ ವರೆಗಿನ ವೈದ್ಯಾರ್ಥಿಗಳಿಗೆ ಹಿಂದಿ ಭಾಷೆಯಲ್ಲೇ ವಿವಿಧ ಪರೀಕ್ಷೆಗಳನ್ನು ನಡೆಸಲು ಆರಂಭಿಸಿತು.

ಹಿಂದಿ ಪ್ರಚಾರ ಸಭೆಯ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಿಂದಿ ಪ್ರಚಾರ ಆರಂಭವಾಯಿತು. ಸರ್ಕಾರ, ವಿವಿಧ ಸಂಸ್ಥೆಗಳಿಂದ ವಿದೇಶಗಳಲ್ಲಿ ಹಿಂದಿ ಭಾಷೆ ಪರಿಚಯಿಸಲು ವಿವಿಧ ರೀತಿಯ ಕಾರ್ಯಕ್ರಮಗಳು ಆಯೋಜನೆಗೊಂಡವು. ಅಮೆರಿಕ, ಮಾರೀಷಸ್‌ಗಳಲ್ಲಿ ವಿಶ್ವ ಹಿಂದಿ ಸಮ್ಮೇಳನಗಳು ನಡೆದವು. ಈಗಲೂ ಹಲವೆಡೆ ಹಿಂದಿ ಸಮ್ಮೇಳನಗಳು ನಡೆಯುತ್ತವೆ.

ಹಿಂದಿ ಪ್ರಸರಣಕ್ಕಾಗಿ ಅಮೆರಿಕ, ಪಿಜಿ, ಮಾರಿಷಸ್‌ ರಾಷ್ಟ್ರಗಳಲ್ಲಿ ವಿಶ್ವ ಹಿಂದಿ ಸಚಿವಾಲಯವನ್ನು ಸ್ಥಾಪಿಸಲಾಗಿದೆ. ವಿಶ್ವದಲ್ಲಿ ಅತಿ ಹೆಚ್ಚು ಮಾತನಾಡಲ್ಪಡುವ ಭಾಷೆಗಳಲ್ಲಿ ಹಿಂದಿಯು 3ನೇ ಸ್ಥಾನದಲ್ಲಿದೆ. ಜಗತ್ತಿನಾದ್ಯಂತ ಸುಮಾರು 60.2 ಕೋಟಿ ಜನರು ಹಿಂದಿ ಮಾತನಾಡಬಲ್ಲರು ಎಂದು ಎಥ್ನೋಲಾಗ್ (Ethnologue) ವರದಿ ತಿಳಿಸಿದೆ.

ಪಿಜಿಯಲ್ಲಿ ಹಿಂದಿಯು ಅಧಿಕೃತ ಭಾಷೆಯ ಸ್ಥಾನ ಪಡೆದುಕೊಂಡಿದೆ. ಅಲ್ಲದೆ ಅಮೆರಿಕ, ಬ್ರಿಟನ್, ಜರ್ಮನಿ, ಜೀನಾ, ಜಪಾನ್ ಸೇರಿದಂತೆ ವಿವಿಧ ದೇಶಗಳ 176 ವಿಶ್ವವಿದ್ಯಾಲಯಗಳಲ್ಲಿ ಹಿಂದಿಯನ್ನು ಒಂದು ಭಾಷಾ ವಿಷಯವಾಗಿ ಕಲಿಸಲಾಗುತ್ತಿದೆ. ಇವು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಭಾಷೆಗೆ ಸಿಗುತ್ತಿರುವ ಗೌರವವಾಗಿದೆ.

ಕನ್ನಡ, ತಮಿಳು, ತೆಲುಗು, ಮಲಯಾಳ, ಒರಿಯಾದಂತೆಯೇ ಹಿಂದಿಯೂ ಭಾರತದ ಅಧಿಕೃತ ಭಾಷೆಗಳಲ್ಲೊಂದು. ಆದರೆ ಹಿಂದಿಯನ್ನು ಭಾರತದ ಅಧಿಕೃತ ಭಾಷೆಯನ್ನಾಗಿ ಮಾಡಲು ಸರ್ಕಾರ ಪ್ರಯತ್ನ ನಡೆಸುತ್ತಲೇ ಇದೆ ಎಂಬ ಆರೋಪ ಬಲವಾಗಿದೆ.

ಬಾಲಿವುಡ್ ಪ್ರಭಾವ

ಹಿಂದಿ ವಿದೇಶಗಳಲ್ಲೂ ಪಸರಿಸಲು ಬಾಲಿವುಡ್‌ ಸಿನಿಮಾಗಳೂ ಪ್ರಮುಖ ಕಾರಣವಾಗಿದೆ. ವಿದೇಶಗಳಲ್ಲೂ ಹಿಂದಿ ಭಾಷೆಯ ಸಿನಿಮಾಗಳು ಯಶಸ್ವಿ ಪ್ರದರ್ಶನ ಕಾಣುತ್ತಿರುವುದೇ ಇದಕ್ಕೆ ಸಾಕ್ಷಿ.

ದೇಶದಲ್ಲೇ ಹಿಂದಿ ಹೇರಿಕೆ ವಿವಾದ

ಈ ಹಿಂದೆ ಹಿಂದಿ ಇಡೀ ದೇಶದ ಭಾಷೆ ಆಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವು ನೀಡಿದ್ದ ಹೇಳಿಕೆ ಹಾಗೂ 2019ರ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರವು ‘ರಾಷ್ಟ್ರೀಯ ಶಿಕ್ಷಣ ನೀತಿ-2019’ರ ಕರಡು ಪ್ರತಿಯನ್ನು ಪ್ರಕಟಿಸಿದಾಗ, ಹಿಂದಿಯೇತರ ರಾಜ್ಯಗಳ ವಿದ್ಯಾರ್ಥಿಗಳಿಗೆ ಹಿಂದಿ ಕಲಿಕೆ ಕಡ್ಡಾಯ ಮಾಡುವ ತ್ರಿಭಾಷಾ ಸೂತ್ರವನ್ನು ಅದರಲ್ಲಿ ಅಳವಡಿಸಲಾಗಿತ್ತು. ಆದರೆ, ಈ ಕರಡು ಪ್ರತಿಗೆ ಹಿಂದಿಯೇತರ ರಾಜ್ಯಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮೂರೇ ದಿನಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಹಿಂದಿ ಕಡ್ಡಾಯ ನಿಯಮವನ್ನು ರದ್ದುಪಡಿಸಿತ್ತು. 

ಹಿಂದಿ ಮಾತೃಭಾಷೆಯಾಗಿರುವ ರಾಜ್ಯಗಳಲ್ಲಿ ಅದನ್ನು ಆಡಳಿತ ಭಾಷೆ ಮಾಡಿರುವಂತೆಯೇ ಹಿಂದಿಯೇತರ ರಾಜ್ಯಗಳಲ್ಲಿ ಅಲ್ಲಿನ ಭಾಷೆಗಳಲ್ಲೇ ಆಡಳಿತ ನಡೆಯಬೇಕು. ಕೇಂದ್ರ ಸರ್ಕಾರದ ಅಧೀನದ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಕೇಂದ್ರದ ನೇಮಕಾತಿ ಪರೀಕ್ಷೆಗಳಲ್ಲಿ ರಾಜ್ಯಭಾಷೆಗಳಿಗೆ ಅವಕಾಶ ಇರಬೇಕು. ಭಾಷೆಗೂ ದೇಶದ ಏಕತೆಗೂ ನಂಟು ಕಲ್ಪಿಸುವುದು ಅರ್ಥಹೀನ. ಒಂದು ಭಾಷೆಗೆ ಕಿರೀಟ ತೊಡಿಸುವುದು, ಮತ್ತೊಂದು ಭಾಷೆಯನ್ನು ಕಡೆಗಣಿಸುವುದು ಸರಿಯಲ್ಲ. ಹಲವು ಭಾಷೆಗಳು ಮತ್ತು ಸಂಸ್ಕೃತಿಗಳ ಸಂಗಮವಾಗಿರುವ ನಮ್ಮ ದೇಶವು ವೈವಿಧ್ಯದಲ್ಲೇ ಏಕತೆಯನ್ನು ರೂಪಿಸಿಕೊಂಡಿದೆ. ಭಾರತದ ಸೊಗಸು ಇರುವುದೇ ಈ ವೈವಿಧ್ಯದಲ್ಲಿ ಎನ್ನುವ ಮಾತುಗಳೂ ಸದ್ದು ಮಾಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.