ADVERTISEMENT

Explainer | ಬರಲಿದೆ ‘ಪಿಎಂ ಪ್ರಣಾಮ್’ ಯೋಜನೆ: ಏನಿದು, ಯಾಕಾಗಿ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಸೆಪ್ಟೆಂಬರ್ 2022, 10:28 IST
Last Updated 20 ಸೆಪ್ಟೆಂಬರ್ 2022, 10:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೃಷಿ ಚಟುವಟಿಕೆಗಳಲ್ಲಿ ರಾಸಾಯನಿಕ ರಸಗೊಬ್ಬರಗಳ ಬದಲಿಗೆ ಪರ್ಯಾಯ ಪೋಷಕಾಂಶಗಳ ಬಳಕೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಹೊಸ ಯೋಜನೆಯೊಂದನ್ನು ರೂಪಿಸಲು ಮುಂದಾಗಿದೆ. ಈ ಯೋಜನೆಯ ಹೆಸರೇ ‘ಪ್ರಧಾನ ಮಂತ್ರಿ ಪ್ರೊಮೋಷನ್ ಆಫ್ ಅಲ್ಟರ್ನೇಟ್ ನ್ಯೂಟ್ರಿಯೆಂಟ್ಸ್ ಫಾರ್ ಅಗ್ರಿಕಲ್ಚರ್ ಮ್ಯಾನೇಜ್‌ಮೆಂಟ್ ಅಥವಾ ಪಿಎಂ ಪ್ರಣಾಮ್’ (ಕೃಷಿ ನಿರ್ವಹಣೆಯಲ್ಲಿ ಪರ್ಯಾಯ ಪೋಷಕಾಂಶಗಳ ಬಳಕೆಗೆ ಉತ್ತೇಜನ).

ಏನಿದು ಪಿಎಂ ಪ್ರಣಾಮ್ ಯೋಜನೆ?

ನಿರ್ದಿಷ್ಟ ವರ್ಷದಲ್ಲಿ ಕಡಿಮೆ ಪ್ರಮಾಣದ ರಾಸಾಯನಿಕ ರಸಗೊಬ್ಬರವನ್ನು ಬಳಸುವ ರಾಜ್ಯಗಳನ್ನು ಪ್ರೋತ್ಸಾಹಿಸುವ ಯೋಜನೆಯೇ ‘ಪಿಎಂ ಪ್ರಣಾಮ್’. ಇದನ್ನು ರಾಜ್ಯವು ಕಳೆದ ಮೂರು ವರ್ಷಗಳಲ್ಲಿ ಬಳಸಿದ ರಸಗೊಬ್ಬರಗಳ ಸರಾಸರಿ ಲೆಕ್ಕಾಚಾರದ ಮೂಲಕ ಅಳೆಯಲಾಗುತ್ತದೆ.

ADVERTISEMENT

ಹೀಗೆ ಮಾಡುವ ಮೂಲಕ ರಾಸಾಯನಿಕ ರಸಗೊಬ್ಬರಗಳ ಸಬ್ಸಿಡಿ ಹೊರೆಯನ್ನು ತಗ್ಗಿಸುವುದೂ ಯೋಜನೆಯ ಉದ್ದೇಶವಾಗಿದೆ. 2022–2023ನೇ ಸಾಲಿನಲ್ಲಿ ರಾಸಾಯನಿಕ ರಸಗೊಬ್ಬರಗಳ ಸಬ್ಸಿಡಿ ₹ 2.25 ಲಕ್ಷ ಕೋಟಿಗೆ ಹೆಚ್ಚಾಗಲಿದೆ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಅಂದಾಜಿಸಿದೆ. ಇದು ಕಳೆದ ಸಾಲಿನ ₹ 1.62 ಲಕ್ಷ ಕೋಟಿಗಿಂತ ಶೇ 39ರಷ್ಟು ಹೆಚ್ಚು ಎಂದು ವರದಿ ಉಲ್ಲೇಖಿಸಿದೆ.

ಯಾಕಾಗಿ ಯೋಜನೆ?

ದೇಶದ ಪ್ರಮುಖ ನಾಲ್ಕು ರಸಗೊಬ್ಬರಗಳಾದ ಯೂರಿಯ, ಡಿಎಪಿ (ಡಿ ಅಮೋನಿಯಂ ಪಾಸ್ಫೇಟ್), ಎಂಒಪಿ (ಮ್ಯೂರಿಯೇಟ್ ಆಫ್ ಪೊಟ್ಯಾಷ್) ಎನ್‌ಪಿಕೆಎಸ್ (ನೈಟ್ರೋಜನ್, ಪಾಸ್ಫರಸ್, ಪೊಟೇಶಿಯಂ ಮತ್ತು ಸಲ್ಫರ್) ಒಟ್ಟು ಅವಶ್ಯಕತೆ 2017–18 ಮತ್ತು 2021–22ರ ನಡುವಣ ಅವಧಿಯಲ್ಲಿ ಶೇ 21ರಷ್ಟು ಹೆಚ್ಚಾಗಿದೆ. ಇದು ರಾಸಾಯನಿಕ ರಸಗೊಬ್ಬರಗಳ ಮೇಲಿನ ಸಬ್ಸಿಡಿ ಹೆಚ್ಚಿಸುವಂತೆ ಮಾಡಿದೆ.

2021–22ರ ಕೇಂದ್ರ ಬಜೆಟ್‌ನಲ್ಲಿ ರಸಗೊಬ್ಬರ ಸಬ್ಸಿಡಿಗಾಗಿ ₹ 79,530 ಕೋಟಿ ನಿಗದಿಪಡಿಸಲಾಗಿತ್ತು. ಕೊನೆಯಲ್ಲಿ ಸಬ್ಸಿಡಿ ಮೊತ್ತ ₹ 1.62 ಲಕ್ಷ ಕೋಟಿ ತಲುಪಿತ್ತು.

ಈ ಟ್ರೆಂಡ್ ಅನ್ನು ಗಮನದಲ್ಲಿಟ್ಟುಕೊಂಡು ‘ಪಿಎಂ ಪ್ರಣಾಮ್’ ಯೋಜನೆ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಈ ಮೂಲಕ ಬೊಕ್ಕಸಕ್ಕೆ ಆಗುವ ಹೊರೆಯನ್ನು ತಪ್ಪಿಸುವುದು ಸರ್ಕಾರದ ಉದ್ದೇಶ.

ಯೋಜನೆ ಜಾರಿ ಯಾವಾಗ?

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಯೋಜನೆಗೆ ಸಂಬಂಧಿಸಿದ ವಿಚಾರಗಳನ್ನು ರಾಜ್ಯ ಸರ್ಕಾರಗಳ ಅಧಿಕಾರಿಗಳ ಜತೆ ಹಂಚಿಕೊಂಡಿದೆ. ಸೆಪ್ಟೆಂಬರ್ 7ರಂದು ನಡೆದ ರಾಷ್ಟ್ರೀಯ ಕೃಷಿ ಸಮ್ಮೇಳನದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿತ್ತು.

ಪ್ರಸ್ತಾವಿತ ಯೋಜನೆಗೆ ಸಂಬಂಧಿಸಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಅಭಿಪ್ರಾಯಗಳನ್ನು ಕೋರಿದೆ. ಅಂತರ ಸಚಿವಾಲಯ ಮಾತುಕತೆಗಳು ಮತ್ತು ವಿವಿಧ ಇಲಾಖೆಗಳ ಅಭಿಪ್ರಾಯಗಳನ್ನು ಪರಿಗಣಿಸಿ ನಂತರ ಯೋಜನೆಯ ಕರಡು ಪ್ರತಿ ಸಿದ್ಧಪಡಿಸುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.